ಬಿಟ್ ಕಾಯಿನ್ ಹ್ಯಾಕಿಂಗ್ ಆರೋಪಿ ಶ್ರೀಕೃಷ್ಣನನ್ನು ಬಳಸಿಕೊಂಡು ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಅಕ್ರಮ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಗೃಹ ಸಚಿವ ಅರಗ ಜ್ಞಾನೇಂದ್ರ ಒಬ್ಬ ಹುಚ್ಚ. ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಬೇಕಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಡಿ.ಕೆ. ಶಿವಕುಮಾರ್, “ಗೃಹ ಸಚಿವ ಅರಗ ಜ್ಞಾನೇಂದ್ರ ಒಬ್ಬ ಹುಚ್ಚ. ಹೀಗಾಗಿ ಏನೇನೋ ಮಾತಾಡುತ್ತಿದ್ದಾರೆ. ಅವರಿಗೆ ತುರ್ತು ಚಿಕಿತ್ಸೆ ಅಗತ್ಯವಿದೆ. ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಬೇಕಿದೆ” ಎಂದು ಟೀಕಿಸಿದ್ದಾರೆ.
ಆರೋಪಿ ಶ್ರೀಕೃಷ್ಣನನ್ನು ಬಳಸಿಕೊಂಡು ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಅಕ್ರಮ ಎಸಗಿರುವ ಬಗ್ಗೆ ಕಾಂಗ್ರೆಸ್ ನಾಯಕರು ತಮಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದೂರು ಬಂದರೆ ತನಿಖೆ ನಡೆಸುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದರು.
“ಹಗರಣದ ಬಗ್ಗೆ ಪ್ರಧಾನಿ ಅವರಿಗೆ ಲಿಖಿತ ದೂರು ಹೋಗಿದೆ. ಇದು ಅಧಿಕೃತ ಪತ್ರ. ಅದರಲ್ಲಿ ಸಿಎಂ ಕುಟುಂಬದ ಸದಸ್ಯರು, ಹಲವು ಮಂತ್ರಿಗಳು, ಬಿಜೆಪಿ ರಾಜ್ಯಾಧ್ಯಕ್ಷರು, ಸಂಸತ್ ಸದಸ್ಯರು ಸೇರಿದಂತೆ ಹಲವರ ಹೆಸರುಗಳು ಇವೆ. ಅವರು ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ಗೃಹ ಸಚಿವರು ಮೊದಲು ಈ ದೂರಿನ ಬಗ್ಗೆ ಸುಮೊಟೋ ಕೇಸು ದಾಖಲಿಸಿ, ತನಿಖೆ ಮಾಡಿಸಲಿ. ಆಮೇಲೆ ಯೂತ್ ಕಾಂಗ್ರೆಸ್ ಬಗ್ಗೆ ಮಾತಾಡಲಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಟ್ ಕಾಯಿನ್ ವರ್ಗಾವಣೆ, ಕ್ರಿಪ್ಟೋ ವೆಬ್‌ಸೈಟ್ ಹ್ಯಾಕಿಂಗ್: ಆರೋಪಗಳಿಗೆ ಪೊಲೀಸ್ ಇಲಾಖೆ ಸ್ಪಷ್ಟನೆ
ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆದಾಗ ಆರೋಪಿ ಜೈಲಿನಲ್ಲಿದ್ದ ಬಗ್ಗೆ ಪ್ರಸ್ತಾಪಿಸಿರುವ ಮಾಧ್ಯಮದವರಿಗೆ, ’ಅದಕ್ಕೆ ನಾನು ಹೇಳಿದ್ದು ಹೋಮ್ ಮಿನಿಸ್ಟರ್ ಒಬ್ಬ ಹುಚ್ಚ ಎಂದು. ಅವರಿಗೆ ಸಾಮಾನ್ಯ ಜ್ಞಾನವೇ ಇಲ್ಲ. ನಾನು ಏನು ಮಾತನಾಡುತ್ತಿದ್ದೇನೆ ಎಂಬುದರ ಪರಿವೆಯೇ ಇಲ್ಲ. ಹೀಗಾಗಿ ಅವರನ್ನು ಮೊದಲು ನಿಮ್ಹಾನ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕಿದೆ’ ಎಂದಿದ್ದಾರೆ.
“ಆರೋಪಿ ಶ್ರೀಕೃಷ್ಣನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಎಂದು ಕೋರ್ಟ್ ಸ್ಪಷ್ಟ ಆದೇಶ ನೀಡಿದ್ದರೂ ಅದನ್ನು ಮಾಡಿಲ್ಲ. ಕೋವಿಡ್ ನೆಪವೊಡ್ಡಿ ಬೇರೆ ಕಡೆ ಪರೀಕ್ಷೆ ಮಾಡಲಾಗಿದೆ. ಕೋರ್ಟ್ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಯಾಕಾಗಿ ಬೇರೆ ಕಡೆ ಪರೀಕ್ಷೆ ಮಾಡಿಸಿದರು..? ಯಾರು ಇದಕ್ಕೆ ಜವಾಬ್ದಾರರು..? ಯಾವ ಮಂತ್ರಿಗಳು ಜವಾಬ್ದಾರರು..? ಯಾರೆಲ್ಲ ಇದಕ್ಕೆ ಹೊಣೆಗಾರರು ಎಂಬುದು ಹೊರಬರಬೇಕಲ್ಲವೇ..? ಆದರೆ ಅಪ್ರಬುದ್ಧ, ಜ್ಞಾನವೇ ಇಲ್ಲದ ಗೃಹ ಸಚಿವರು ಶಾಲಾ ಬಾಲಕನಂತೆ ಮಾತನಾಡುತ್ತಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಕಾಂಗ್ರೆಸ್ ಬಿಜೆಪಿಯಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದೆ- ಸಿ.ಸಿ ಪಾಟೀಲ್