HomeUncategorizedಅರುಣಾಚಲ ಪ್ರದೇಶದಲ್ಲಿ ಮತ್ತೊಂದು ಗ್ರಾಮ ನಿರ್ಮಿಸಿರುವ ಚೀನಾ!

ಅರುಣಾಚಲ ಪ್ರದೇಶದಲ್ಲಿ ಮತ್ತೊಂದು ಗ್ರಾಮ ನಿರ್ಮಿಸಿರುವ ಚೀನಾ!

- Advertisement -
- Advertisement -

ಅರುಣಾಚಲ ಪ್ರದೇಶದಲ್ಲಿ ಚೀನಾವು ತನ್ನ ಎರಡನೇ ಗ್ರಾಮವನ್ನು ನಿರ್ಮಿಸಿರುವುದು ಹೊಸ ಉಪಗ್ರಹ ಚಿತ್ರಗಳ ಮೂಲಕ ತಿಳಿದು ಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಈ ಗ್ರಾಮದಲ್ಲಿ ಕನಿಷ್ಠ 60 ಕಟ್ಟಡಗಳನ್ನು ಚೀನಾ ನಿರ್ಮಿಸಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

2019 ರಲ್ಲಿ ತೆಗೆಯಲಾದ ಉಪಗ್ರಹ ಚಿತ್ರಗಳಲ್ಲಿ ಈ ಹೊಸ ಗ್ರಾಮ ಇರಲಿಲ್ಲ. ಆದರೆ ಒಂದು ವರ್ಷದ ನಂತರ ತೆಗೆಯಲಾದ ಉಪಗ್ರಹದ ಚಿತ್ರದಲ್ಲಿ ಇದನ್ನು ಕಾಣಬಹುದಾಗಿದೆ. ಈ ಹೊಸ ಗ್ರಾಮವು ಚೀನಾ ಈ ಹಿಂದೆ ಅರುಣಾಚಲ ಪ್ರದೇಶದಲ್ಲಿ ನಿರ್ಮಿಸಿದ್ದ ಗ್ರಾಮಕ್ಕಿಂತ 93 ಕಿಮೀ ದೂರದಲ್ಲಿದೆ. ಚೀನಾ ಭಾರತದ ಭೂಭಾಗದೊಳಗೆ ಒಂದು ದೊಡ್ಡ ಗ್ರಾಮವನ್ನೇ ನಿರ್ಮಿಸಿದೆ ಎಂದು ಕಳೆದ ಜನವರಿಯಲ್ಲಿ ವರದಿಯಾಗಿತ್ತು. ಈ ವರದಿಯನ್ನು ಕೆಲವು ದಿನಗಳ ಹಿಂದೆ ಅಮೆರಿಕಾ ಭದ್ರತಾ ಆಯೋಗ ಕೂಡಾ ದೃಢಪಡಿಸಿತ್ತು.

ಚೀನಾ ನಿರ್ಮಿಸಿರುವ ಎರಡನೇ ಗ್ರಾಮವು ಭಾರತದೊಳಗೆ ‘ವಾಸ್ತವ ನಿಂಯಂತ್ರಣ ರೇಖೆ’ (LAC) ಮತ್ತು ಅಂತರಾಷ್ಟ್ರೀಯ ಗಡಿರೇಖೆಯ ನಡುವಿನ ಪ್ರದೇಶದ ಸುಮಾರು 6 ಕಿಲೋಮೀಟರ್ ದೂರದಲ್ಲಿದೆ. ಈ ಪ್ರದೇಶವನ್ನು ಭಾರತವು ಹಿಂದಿನಿಂದಲೂ ತನ್ನ ಸ್ವಂತ ಪ್ರದೇಶವೆಂದು ಹೇಳಿಕೊಂಡಿದೆ. ಈ ಚಿತ್ರಗಳು ಯಾವ ಪ್ರದೇಶದಲ್ಲಿವೆ ಎಂದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ‘ಮಿಸ್ಟರ್‌ 56 ಚೀನಾಗೆ ಹೆದರುತ್ತಿದ್ದಾರೆ’ – ಪ್ರಧಾನಿ ಮೋದಿ ವಿರುದ್ದ ರಾಹುಲ್ ಗಾಂಧಿ

ಪ್ರಸ್ತುತ ಸ್ಥಳವು ಚೀನಾದ ಭೂಪ್ರದೇಶದ ವಾಸ್ತವ ನಿಯಂತ್ರಣ ರೇಖೆಯ ಉತ್ತರದಲ್ಲಿದೆ ಎಂದು ಭಾರತೀಯ ಸೇನೆ ಹೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಆದರೆ ಸೇನೆಯ ಈ ಹೇಳಿಕೆಯು ಭಾರತೀಯ ಭೂಪ್ರದೇಶದಲ್ಲಿ ಗ್ರಾಮವನ್ನು ನಿರ್ಮಿಸುವ ಬಗ್ಗೆ ನಿರಾಕರಿಸುತ್ತಿಲ್ಲ ಎಂದು ಎನ್‌ಡಿಟಿವಿ ಹೇಳಿದ್ದು, ಗ್ರಾಮವು ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶದೊಳಗೆ ಇದೆ ಎಂದು ವರದಿ ತಿಳಿಸಿದೆ.

ಚೀನಾ ನಿರ್ಮಿಸಿರುವ ಹೊಸ ಗ್ರಾಮವು, ವಿಶ್ವದ ಎರಡು ಪ್ರಮುಖ ಉಪಗ್ರಹ ಚಿತ್ರಣ ಪೂರೈಕೆದಾರರಾದ ಮ್ಯಾಕ್ಸರ್ ಟೆಕ್ನಾಲಜೀಸ್ ಮತ್ತು ಪ್ಲಾನೆಟ್ ಲ್ಯಾಬ್‌ಗಳ ಚಿತ್ರಗಳ ಮೂಲಕ ದೃಢೀಕರಿಸಲಾಗಿದೆ. ಅರುಣಾಚಲ ಪ್ರದೇಶದ ಶಿ-ಯೋಮಿ ಜಿಲ್ಲೆಯ ಈ ಚಿತ್ರಗಳು ಕೇವಲ ಡಜನ್‌ಗಟ್ಟಲೆ ಕಟ್ಟಡಗಳನ್ನು ಮಾತ್ರ ತೋರಿಸುವುದಲ್ಲದೆ, ಛಾವಣಿಯ ಮೇಲ್ಭಾಗದಲ್ಲಿ ಚಿತ್ರಿಸಲಾಗಿರುವ ಚೀನಾದ ಧ್ವಜವನ್ನು ಹೊಂದಿರುವ ರಚನೆಯನ್ನೂ ತೋರಿಸುತ್ತದೆ. ಈ ಚಿತ್ರವು ಸ್ಪಷ್ಟವಾಗಿ ಕಾಣುತ್ತಿದ್ದು, ದೈತ್ಯ ಧ್ವಜವು ಈ ಪ್ರದೇಶವು ಚೀನಾಗೆ ಸೇರಿದ್ದು ಎಂದು ಪ್ರತಿಪಾದಿಸುವಂತಿದೆ.

ಭಾರತ ಸರ್ಕಾರದ ಆನ್‌ಲೈನ್ ನಕ್ಷೆ ಸೇವೆಯಾದ ಭಾರತ್‌ಮ್ಯಾಪ್ಸ್‌ನಲ್ಲಿ ಹೊಸ ಗ್ರಾಮದ ನಿಖರವಾದ ಸ್ಥಳವನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಭಾರತದ ಡಿಜಿಟಲ್ ನಕ್ಷೆ, ಭಾರತದ ಸರ್ವೇಯರ್ ಜನರಲ್‌ನಿಂದ ಈ ಸ್ಥಳವು ಭಾರತದೊಳಗೆ ಇದೆ ಎಂದು ಖಚಿತಪಡಿಸುತ್ತದೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆ: ಪಾಕಿಸ್ತಾನದ ಹಾದಿಯಲ್ಲಿ ಚೀನಾ!“ಭಾರತೀಯ ಸಮೀಕ್ಷೆಯ ಅಧಿಕೃತ ವೆಬ್‌ಸೈಟ್‌ನಿಂದ ಪಡೆದ GIS [ಭೌಗೋಳಿಕ ಮಾಹಿತಿ ವ್ಯವಸ್ಥೆ] ದತ್ತಾಂಶವನ್ನು ಆಧರಿಸಿ, ಈ ಹಳ್ಳಿಯ ಸ್ಥಳವು ನಿಜವಾಗಿಯೂ ಭಾರತೀಯ ಪ್ರಾದೇಶಿಕ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತದೆ” ಎಂದು ಮಾಹಿತಿಯನ್ನು ಒದಗಿಸುವ ಯುರೋಪ್ ಮೂಲದ ಫೋರ್ಸ್ ಅನಾಲಿಸಿಸ್‌ನ ಮುಖ್ಯ ಮಿಲಿಟರಿ ವಿಶ್ಲೇಷಕ ಸಿಮ್ ಟಾಕ್ ಹೇಳಿದ್ದಾರೆ ಎಂದು ಎನ್‌ಡಿಟಿವಿ ಹೇಳಿದೆ.

ಭಾರತೀಯ ತಜ್ಞರು ಇದನ್ನು ಖಚಿತಪಡಿಸಿದ್ದು, “ಭಾರತ್‌ಮ್ಯಾಪ್‌ನಲ್ಲಿ ಈ ಪ್ರದೇಶವು ಅಂತರರಾಷ್ಟ್ರೀಯ ಗಡಿಯಿಂದ 7 ಕಿಲೋಮೀಟರ್‌ಗಳ ಒಳಗೆ ಇದೆ ಎಂದು ತೋರಿಸುತ್ತದೆ. ಭಾರತದ ಸರ್ವೇ ಜನರಲ್ ವ್ಯಾಖ್ಯಾನಿಸಿದಂತೆ, ಅವರ ಅಧಿಕಾರ ವ್ಯಾಪ್ತಿಯಲ್ಲಿ ಭಾರತದ ಗಡಿಗಳನ್ನು ಎಲ್ಲಾ ಅಧಿಕೃತ ನಕ್ಷೆಗಳಲ್ಲಿ ಚಿತ್ರಿಸಲಾಗಿದೆ” ಎಂದು ಉಪಗ್ರಹ-ಇಮೇಜಿಂಗ್ ತಂತ್ರಜ್ಞಾನದಲ್ಲಿ ದಶಕಗಳ ಅನುಭವ ಹೊಂದಿರುವ ಅರೂಪ್ ದಾಸ್‌ಗುಪ್ತ ಹೇಳಿದ್ದಾರೆ.

ಇಷ್ಟೇ ಅಲ್ಲದೆ ಈ ಗ್ರಾಮದ ಛಾಯಾಚಿತ್ರವನ್ನು ಈ ವರ್ಷದ ಜುಲೈನಲ್ಲಿ ಚೀನಾದ ಸರ್ಕಾರಿ ಪತ್ರಿಕಾ ಸಂಸ್ಥೆಯಾದ ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ಪ್ರಕಟಿಸಿದೆ. ಚೀನಾದ ಅಧ್ಯಕ್ಷ ಕ್ಸಿ ಕ್ಸಿನ್‌ಪಿಂಗ್ ಅವರು ಅದೇ ಪ್ರದೇಶಕ್ಕೆ ಭೇಟಿ ನೀಡಿ ಅರುಣಾಚಲದ ಗಡಿಯಲ್ಲಿ ಹೊಸ, ಆಯಕಟ್ಟಿನ ಪ್ರಮುಖ ರೈಲು ಮಾರ್ಗವನ್ನು ಪರಿಶೀಲಿಸಿದ್ದರು. ಹೊಸದಾಗಿ ನಿರ್ಮಿಸಲಾದ ಚೈನೀಸ್ ಗ್ರಾಮವು ವಿಮಾನ ನಿಲ್ದಾಣದ ದಕ್ಷಿಣಕ್ಕೆ ಸುಮಾರು 33 ಕಿಲೋಮೀಟರ್ ದೂರದಲ್ಲಿದೆ.

“ಭಾರತದ ಹಿಮಾಲಯದ ಗಡಿಭಾಗವನ್ನು ಚೀನಾ ಹೇಗೆ ಕಚ್ಚಿ ತಿನ್ನುತ್ತಿದೆ ಎಂಬುದನ್ನು ಹೊಸ ಗ್ರಾಮ ತೋರಿಸುತ್ತದೆ. ಹೊಳೆಯುತ್ತಿರುವ ಹೊಸ ಹಳ್ಳಿಯ ಚಿತ್ರಗಳು ಚೀನಾದ ಕೃತಕ ಸ್ವಭಾವವನ್ನು ಸ್ಪಷ್ಟವಾಗಿ ತೋರಿಸುತ್ತವೆ. ಸಾಂಪ್ರದಾಯಿಕವಾಗಿ ಯಾರೂ ಚೈನೀಸ್ ಮಾತನಾಡದ ಪ್ರದೇಶದಲ್ಲಿ ನೆಲೆಗೊಂಡಿರುವ ಹಳ್ಳಿಗೆ ಚೀನಾವು ಚೀನೀ ಹೆಸರನ್ನು ಸಹ ಇಟ್ಟಿದೆ” ಎಂದು ಭಾರತ-ಚೀನಾದ ಪ್ರಮುಖ ಕಾರ್ಯತಂತ್ರದ ವಿಶ್ಲೇಷಕರಲ್ಲಿ ಒಬ್ಬರಾದ ಬ್ರಹ್ಮ ಚೆಲ್ಲಾನೆ ಹೇಳಿದ್ದಾರೆ.

ಇದನ್ನೂ ಓದಿ: ಚೀನಾವು ಅರುಣಾಚಲ ಪ್ರದೇಶದಲ್ಲಿ ಗ್ರಾಮ ನಿರ್ಮಿಸಿರುವುದನ್ನು ಉಲ್ಲೇಖಿಸಿದ US ರಕ್ಷಣಾ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...