ಅಫ್ಘಾನಿಸ್ತಾನದ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆ: ಪಾಕಿಸ್ತಾನದ ಹಾದಿಯಲ್ಲಿ ಚೀನಾ! | Naanu gauri

ಅಫ್ಘಾನಿಸ್ಥಾನದಲ್ಲಿ ನಡೆದಿರುವ ಬೆಳವಣಿಗೆಯ ಬಗ್ಗೆ ನವೆಂಬರ್ 10 ರಂದು ಪ್ರಾದೇಶಿಕ ಭದ್ರತಾ ಸಂವಾದವನ್ನು ಆಯೋಜಿಸಲು ಭಾರತ ಸಜ್ಜಾಗಿದೆ. ದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ​​(ಎನ್‌ಎಸ್‌ಎ) ಮಟ್ಟದ ಸಭೆ ನಡೆಯಲಿದ್ದು, ಸಭೆಯಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಪಾಕಿಸ್ತಾನ ಕಳೆದ ವಾರವೆ ನಿರಾಕರಿಸಿತ್ತು. ಇದೀಗ ಚೀನಾ ಕೂಡಾ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದೆ. ಸಭೆಯು ದೇಶದ ಎನ್‌ಎಸ್‌ಎ ಮುಖ್ಯಸ್ಥ ಅಜಿತ್ ದೋವಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ವೇಳಾಪಟ್ಟಿ ಸಮಸ್ಯೆಗಳನ್ನು ಉಲ್ಲೇಖಿಸಿರುವ ಚೀನಾ, ದೆಹಲಿ ಪ್ರಾದೇಶಿಕ ಭದ್ರತಾ ಸಂವಾದದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಸಭೆಗೆ ಹಾಜರಾಗಲು ನಿರಾಕರಿಸಿದ್ದರೂ, ದ್ವಿಪಕ್ಷೀಯ ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂಪರ್ಕ ಮತ್ತು ಚರ್ಚೆಗಳನ್ನು ಕಾಪಾಡಿಕೊಳ್ಳಲು ಮುಕ್ತವಾಗಿದ್ದೇವೆ ಎಂದು ಚೀನಾ ತಿಳಿಸಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಬಗ್ಗೆ NSA ಮಟ್ಟದ ಸಭೆ ನಡೆಸಲಿರುವ ಭಾರತ!

ದೇಶದ ಎರಡು ಪ್ರಮುಖ ನೆರೆ ದೇಶಗಳು ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದರೂ, ರಷ್ಯಾ, ಇರಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ತುರ್ಕಮೆನಿಸ್ತಾನ್, ಕಝಾಕಿಸ್ತಾನ್ ಮತ್ತು ಕಿರ್ಗಿಸ್ತಾನ್ ದೇಶಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನ ಪಡಿಸಿರುವುದರಿಂದ ಉದ್ಭವಿಸುವ ಸವಾಲುಗಳನ್ನು ಎದುರಿಸಲು ‘ಪ್ರಾದೇಶಿಕ ಭದ್ರತಾ ಸಂರಚನೆ’ ಯನ್ನು ವಿಕಸನಗೊಳಿಸುವ ಬಗ್ಗೆ ಸಭೆಯು ಪರಿಶೀಲಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಮುಖ್ಯವಾಗಿ ಗಡಿಯೊಳಗೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆ, ತೀವ್ರವಾದ, ಮೂಲಭೂತವಾದ, ಗಡಿಯಾಚೆಗಿನ ಸಂಚಾರ, ಮಾದಕವಸ್ತು ಉತ್ಪಾದನೆ ಮತ್ತು ಕಳ್ಳಸಾಗಣೆ, ಅಮೇರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಬಿಟ್ಟುಹೋದ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ಸಂಭಾವ್ಯ ಬಳಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ.

ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ, ರಿಯರ್ ಅಡ್ಮಿರಲ್ ಅಲಿ ಶಮ್ಖಾನಿ (ಇರಾನ್), ನಿಕೊಲಾಯ್ ಪಿ ಪಟ್ರುಶೆವ್ (ರಷ್ಯಾ), ಕರೀಮ್ ಮಾಸ್ಸಿಮೊವ್ (ಕಝಾಕಿಸ್ತಾನ್), ಮರಾಟ್ ಮುಕಾನೋವಿಚ್ ಇಮಾನ್ಕುಲೋವ್ (ಕಿರ್ಗಿಸ್ತಾನ್), ನಸ್ರುಲ್ಲೊ ರಹ್ಮತ್ಜೋನ್ ಮಹ್ಮುದ್ಜೋದಾ (ತಾಜಿಕಿಸ್ತಾನ್), ಛರಿಮಿರತ್‌ ಕಕಾಲ್ಯೀವ್ವಿಚ್‌ ಅಮಾವೊವ್‌(ತುರ್ಕಮೇನಿಸ್ತಾನ್) ಮತ್ತು ವಿಕ್ಟರ್‌ ಕಖ್ಮುದೋಮ್‌(ಉಜ್ಬೇಕಿಸ್ತಾನ್‌) ಮುಂತಾದ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ​​(ಎನ್‌ಎಸ್‌ಎ) ಭಾಗವಹಿಸಲಿದ್ದಾರೆ.

ಉನ್ನತ ಭದ್ರತಾ ಅಧಿಕಾರಿಗಳು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಂಟಿಯಾಗಿ ಭೇಟಿ ಮಾಡುವ ನಿರೀಕ್ಷೆಯಿದೆ. ಭೇಟಿ ನೀಡುವ ಕೆಲವು ಪ್ರತಿನಿಧಿಗಳು ಅಮೃತಸರ ಮತ್ತು ಆಗ್ರಾಕ್ಕೆ ಭೇಟಿ ನೀಡುತ್ತಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಮೈತ್ರಿಗಳು: ಇಲ್ಲಿಂದ ಮುಂದೇನು?

LEAVE A REPLY

Please enter your comment!
Please enter your name here