Homeಕರ್ನಾಟಕಧಾರವಾಡ: ಶೆಟ್ಟರ್ ಸೇಡು! ಜೋಶಿಗೆ ಕೇಡು?

ಧಾರವಾಡ: ಶೆಟ್ಟರ್ ಸೇಡು! ಜೋಶಿಗೆ ಕೇಡು?

- Advertisement -
- Advertisement -

ಕಿತ್ತೂರು ಕರ್ನಾಟಕದ ಲಿಂಗಾಯತ ಏಕಸ್ವಾಮ್ಯದ ರಾಜಕಾರಣವೀಗ ಬಂಡುಕೋರ ಸಂಘ ಪರಿವಾರಿಗ, ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ನಡೆ-ನುಡಿಯ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಬೆಳವಲ ನಾಡಿನ ಪ್ರಬಲ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರಾಗಿ ಅವತರಿಸಿರುವ ಜಗದೀಶ್ ಶೆಟ್ಟರ್ ದಿಢೀರನೆ “ಜನ್ಮಜನ್ಮಾಂತರ”ದ ಸಂಘ ಸಹವಾಸ ಕಡಿದುಕೊಂಡು, ಭಿನ್ನ ಧೋರಣೆಯ ಕಾಂಗ್ರೆಸ್ ಸೇರಿದ ನಂತರ ಕಿತ್ತೂರು ಕರ್ನಾಟಕದ ಲಿಂಗಾಯತ ಏಕಸ್ವಾಮ್ಯದ ರಾಜಕಾರಣದ ದಿಕ್ಕು-ದೆಸೆ, ಸೂತ್ರ-ಸಮೀಕರಣಕ್ಕೆ ಬದಲಾಗಿ ತೀವ್ರ ತುರುಸಿನ ಕುತೂಹಲಕರ ಆಯಾಮ ಪಡೆದುಕೊಂಡುಬಿಟ್ಟಿದೆ. ಆರೆಸ್ಸೆಸ್‌ನೊಂದಿಗಿನ ಸುದೀರ್ಘ ಕೌಟುಂಬಿಕ ನಂಟು ಮತ್ತು ಸತತ ಆರು ಬಾರಿ ಹುಬ್ಬಳ್ಳಿ ಕ್ಷೇತ್ರದಿಂದ ಬಿಜೆಪಿ ಶಾಸಕನಾಗಿದ್ದ ಹಿರಿಮೆಯ ಸೌಮ್ಯ ಸ್ವಭಾವದ ಶೆಟ್ಟರ್ ಸೆಡ್ಡುಹೊಡೆದು ಕಾಂಗ್ರೆಸ್ ಸೇರಬಹುದೆಂದು ಯಾರೂ ಕನಸು-ಮನಸ್ಸಿನಲ್ಲೂ ಊಹಿಸಿರಲಿಲ್ಲ. ಯಾವಾಗ ಕೇಸರಿ ಟಿಕೆಟ್ ನಿರಾಕರಿಸಲಾಯಿತೋ ಆಗ ತಿರುಗಿಬಿದ್ದ ಶೆಟ್ಟರ್, ಲಿಂಗಾಯತರನ್ನು ಬಿಜೆಪಿಯಲ್ಲಿನ ಬ್ರಾಹ್ಮಣಶಾಹಿ ಮೂಲೆಗುಂಪು ಮಾಡುವ ಷಡ್ಯಂತ್ರ ಹೆಣೆದಿದೆ ಎಂಬರ್ಥದ ಸಂದೇಶ ಬಿತ್ತರಿಸಿದ್ದರು; ಅಸ್ತಿತ್ವ ಉಳಿಸಿಕೊಳ್ಳಲು ಶೆಟ್ಟರ್ ರಾಜಕೀಯ ಜೀವನದುದ್ದಕ್ಕೂ ವಿರೋಧಿಸುತ್ತಾ ಬಂದಿದ್ದ ಕಾಂಗ್ರೆಸಿಗೆ ಕಾಲಿಡಬೇಕಾಗಿಬಂತು.

ಇದು ಚುನಾವಣೆಯ ಸಂದರ್ಭದ ಹಠಾತ್ ಪಕ್ಷಾಂತರ-ನಿಷ್ಠಾಂತರದ ಪಲ್ಲಟದಂತೆ ಮೇಲ್ನೋಟಕ್ಕೆ ಅನಿಸಿದರೂ ಈ ಬಂಡಾಯದ ಹಿಂದೆ ಕಿತ್ತೂರು ಕರ್ನಾಟಕ ಬಿಜೆಪಿಯೊಳಗಿನ ಲಿಂಗಾಯತ-ಬ್ರಾಹ್ಮಣ ಬಡಿದಾಟದ ಪರಿಣಾಮಗಳು ಅಡಗಿವೆ ಎನ್ನಲಾಗುತ್ತಿದೆ. ಧಾರವಾಡ ಜಿಲ್ಲೆಯ ಬಿಜೆಪಿ ಮೇಲೆ ಪಾರಮ್ಯ ಸಾಧಿಸಲು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಹೆಣೆದ ತಂತ್ರಗಾರಿಕೆಯೇ ಶೆಟ್ಟರ್ ಬಿಜೆಪಿ ಬಿಡವಂತಾಗಲು ಪ್ರಮುಖ ಕಾರಣವೆಂಬುದೀಗ ಬಹಿರಂಗ ರಹಸ್ಯ; ಕೇಶವ ಕೃಪಾದ ಕೃಪಾಕಟಾಕ್ಷ ಹೊಂದಿದ್ದ ಶೆಟ್ಟರ್ ಮಾತಿಗೆ ಅವಿಭಜಿತ ಧಾರವಾಡ ಜಿಲ್ಲೆಯ ಬಿಜೆಪಿಯ ಅಧಿಕಾರ ರಾಜಕಾರಣದಲ್ಲಿ ಒಂದು ತೂಕವಿತ್ತು. ಮುಖ್ಯಮಂತ್ರಿಯಂಥ ಆಯಕಟ್ಟಿನ ಪೀಠವೇರಿ ಇಳಿದಿದ್ದ ಶೆಟ್ಟರ್ ವಿಧಾನಸಭೆ-ವಿಧಾನ ಪರಿಷತ್‌ನಿಂದ ತಾಪಂ-ಗ್ರಾಪಂವರೆಗಿನ ಉಮೇದುವಾರರ ಕೇಸರಿ ಟಿಕೆಟ್ ಹಂಚಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತ ಬಂದಿದ್ದರು; ಜಿಲ್ಲೆಯಿಂದ ಯಾರನ್ನು ಮಂತ್ರಿ ಮಾಡಬೇಕು, ಯಾರಿಗೆ ಮಂತ್ರಿ ಮಾಡಬಾರದೆಂಬ ನೀತಿ-ನಿರ್ಧಾರದಲ್ಲೂ ಶೆಟ್ಟರ್ ಅಭಿಪ್ರಾಯಕ್ಕೆ ಮಹತ್ವವಿರುತ್ತಿತ್ತು. ಧಾರವಾಡದಂಥ ಬಹುಸಂಖ್ಯಾತ ಲಿಂಗಾಯತರ ಸಾಮ್ರಾಜ್ಯದಲ್ಲಿ ತೀರಾ ಅಲ್ಪಸಂಖ್ಯಾತ ಬ್ರಾಹ್ಮಣ ಜಾತಿಯ ಪ್ರಹ್ಲಾದ್ ಜೋಶಿ ಎಂಪಿಯಾಗುವುದಕ್ಕೂ ಲಿಂಗಾಯತರಲ್ಲಿ ವರ್ಚಸ್ವಿಯಾಗಿದ್ದ ಶೆಟ್ಟರ್ ಸಹಕಾರ ಪ್ರಮುಖವಾಗಿರುತ್ತಿತ್ತು.

ಬಿ.ಎಲ್.ಸಂತೋಷ್

ಯಾವಾಗ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಕೇಂದ್ರದಲ್ಲಿ ಎರಡನೇ ಬಾರಿ ಮಂತ್ರಿಯಾಗಿ ಮೋದಿ-ಶಾ ಅಕ್ಕಪಕ್ಕ ಮಿಂಚುವ ಮಹತ್ವ ಪಡೆದುಕೊಂಡರೋ ಆಗ ಶುರವಾಯ್ತು ಧಾರವಾಡದ ಕೇಸರಿ ಪಾಳೆಯದಲ್ಲಿ ಮುಸುಕಿನ ಗುದ್ದಾಟ! ಅಂಕಿತಕ್ಕೆ ಸಿಗದ ಸೀನಿಯರ್ ಲಿಂಗಾಯತ ನೇತಾರ ಶೆಟ್ಟರ್‌ರನ್ನು ನಗಣ್ಯವಾಗಿಸಿ ಅದೇ ಸಮುದಾಯದ ಆಜ್ಞಾನುಧಾರಿ ಜೂನಿಯರ್‌ಗಳನ್ನು ಮುಂಚೂಣಿಗೆ ತಂದು ಲಿಂಗಾಯತ ಓಟ್ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಯೋಜನೆ ಜೋಶಿ ಹಾಕಿಕೊಂಡಿದ್ದರು; ಜತೆಗೆ ಆಕ್ರಮಣಶೀಲರಲ್ಲದ ಶೆಟ್ಟರ್‌ಗೆ ಅಸೆಂಬ್ಲಿ ಟಿಕೆಟು ಸಿಗದಂತೆ ಮಾಡಿ ಕಡ್ಡಾಯ ನಿವೃತ್ತಿಗೊಳಿಸಿದರೆ ಹೈಕಮಾಂಡ್ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಾರೆ; ತನ್ಮೂಲಕ ತನ್ನೆಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆಂಬುದು ಜೋಶಿ ಲೆಕ್ಕಾಚಾರವಾಗಿತ್ತೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಕೇಂದ್ರ ಸರ್ಕಾರ ಸಚಿವ ಜೋಶಿಯ ಸ್ಕೆಚ್‌ಗೆ ಸ್ವಜಾತಿ ಬಂಧು-ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಒತ್ತಾಸೆಯಾಗಿ ನಿಂತಿದ್ದರೆನ್ನಲಾಗುತ್ತಿದೆ. ಆದರೆ ಜೋಶಿ-ಸಂತೋಷ್ ಬ್ರಾಹ್ಮಣ ಪರಿವಾರದ ಪ್ಲಾನ್ ಬೂಮರಾಂಗ್ ಆಯಿತು; ಶೆಟ್ಟರ್ ಸಿಡಿದರಷ್ಟೇ ಅಲ್ಲ, ಎದುರುಪಡೆ (ಕಾಂಗ್ರೆಸ್) ಸೇರಿ ಬಿಜೆಪಿ ಬಿಡಾರದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿಬಿಟ್ಟರು!

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಶೆಟ್ಟರ್ ಇಡೀ ಕಿತ್ತೂರು ಕರ್ನಾಟಕದಲ್ಲಿ ಪ್ರಚಾರಕ್ಕೆ ಪ್ರಮುಖ ವಿಷಯ ಮಾಡಿಕೊಂಡಿದ್ದೇ- ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ತನಗೆ ಅನ್ಯಾಯ ಮಾಡಿದರು; ಜೋಶಿ ಲಿಂಗಾಯತ ದ್ವೇಷಿ; ಹಾಗಾಗಿ ತಾನು ಕಾಂಗ್ರೆಸ್ ಸೇರಿ ಲಿಂಗಾಯತರ ಸ್ವಾಭಿಮಾನ ಪ್ರದರ್ಶಿಸಬೇಕಾಯಿತು- ಎಂಬುದಾಗಿತ್ತು. ಜೋಶಿ-ಸಂತೋಷ್ ಜೋಡಿಗೂ ತಮಗೆ ತಿರುಗಿಬಿದ್ದಿರುವ ಶೆಟ್ಟರ್‌ರನ್ನು ಸೋಲಿಸುವುದು ಪ್ರತಿಷ್ಠೆಯ ಸವಾಲಾಗಿಹೋಯಿತು. ಶೆಟ್ಟರ್‌ರನ್ನು ಮಣಿಸುವ ಹಠಕ್ಕೆಬಿದ್ದ ಜೋಶಿ ತನ್ನೆಲ್ಲ ಶಕ್ತಿ-ಸಾಮರ್ಥ್ಯವನ್ನು ಹುಬ್ಬಳ್ಳಿ ಸೆಂಟ್ರಲ್‌ನಲ್ಲಿ ಕೇಂದ್ರೀಕರಿಸಿದರು. ಆರೆಸ್ಸೆಸ್‌ನ ಶಕ್ತಿಕೇಂದ್ರ ನಾಗಪುರದಿಂದ ಸಾವಿರಾರು ಕಟ್ಟರ್ ಸಂಘಿಗಳನ್ನು ಕರೆಸಿ ಶೆಟ್ಟರ ಸೋಲಿಸುವ ಕಾರ್ಯಾಚರಣೆಗೆ ಇಳಿಸಿದರು. ಕೇಸರಿ ಕಾಸನ್ನು ಕ್ಷೇತ್ರದಲ್ಲಿ ಯಥೇಚ್ಛವಾಗಿ ಹರಿಸಲಾಯಿತು. 1990ರ ದಶಕದಲ್ಲಿ ಭುಗಿಲೆದ್ದಿದ್ದ ಹುಬ್ಬಳ್ಳಿ ಈದ್ಗಾ ಮೈದಾನ ವಿವಾದದ ಬಳಿಕ ಹುಬ್ಬಳ್ಳಿಯಲ್ಲಿ ನೆಲೆಯಾಗಿರುವ ಕಟ್ಟರ್ ವಿಭಜಕ ರಾಜಕಾರಣದ ಪ್ರಚಾರ ಎದುರಿಸಲಾಗಲಿಲ್ಲ; ಸುದೀರ್ಘ ಕಾಲದಿಂದ ಧರ್ಮಕಾರಣಕ್ಕೆ ಒಗ್ಗಿಕೊಂಡಿದ್ದ ಶೆಟ್ಟರ್‌ಗೆ ಹಿಂದುತ್ವಕ್ಕೆ ಪ್ರತಿ ರಣತಂತ್ರ ಹೂಡುವ ಚಾಕಚಕ್ಯತೆಯೂ ಇಲ್ಲದಾಗಿತ್ತು. ಹಾಗಾಗಿ ಶೆಟ್ಟರ್ 34,289ದಷ್ಟು ಮತಗಳ ದೊಡ್ಡ ಅಂತರದಲ್ಲಿ ಸೋಲುವಂತಾಯಿತು.

ಲಿಂಗಾಯತ ವಲಯದಲ್ಲಿ ಶೆಟ್ಟರ್ ಬಗ್ಗೆ ಸಿಂಪತಿ ಮತ್ತು ಜೋಶಿ ಮೇಲೆ ಸಿಟ್ಟೇನೋ ಸೃಷ್ಟಿಯಾಗಿತ್ತು. ಲಿಂಗಾಯತರ ಮತಗಳನ್ನು ಶೆಟ್ಟರ್ ದೊಡ್ಡ ಪ್ರಮಾಣದಲ್ಲಿ ಪಡೆಯಲು ಯಶಸ್ವಿಯೂ ಆದರು. ಆದರೆ ಮಂಗಳೂರು, ಶಿವಮೊಗ್ಗೆಯಂತೆ ಹಿಂದುತ್ವದ ಅಖಾಡವಾಗಿರುವ ಕಾಸ್ಮೋಪಾಲಿಟನ್ ನಗರವಾಗದ ಹುಬ್ಬಳ್ಳಿಯಲ್ಲಿ ಲಿಂಗಾಯತರಿಗಿಂತ ಹೆಚ್ಚು ಇಸ್ಲಾಮೋಫೋಬಿಯಾಗೆ ಬಲಿಯಾಗರುವ ಮತದಾರರಿದ್ದಾರೆ. ಈ ಅದೃಶ್ಯ ಮತಬ್ಯಾಂಕ್ ಜೋಶಿಯ ಬ್ರಾಹ್ಮಣ ತಂಡದ ಮೂಗುಳಿಸಿತು. ಆದರೆ ಲಿಂಗಾಯತರು ನಿರ್ಣಾಯಕರಾಗಿರುವ ಕಿತ್ತೂರು ಕರ್ನಾಟಕದ ಹಲವು ಅಸೆಂಬ್ಲಿ ಕ್ಷೇತ್ರಗಳಲ್ಲಿ “ಶೆಟ್ಟರ್ ಇಫೆಕ್ಟ್” ಇತ್ತು. ಶೆಟ್ಟರ್ ಹಿಮ್ಮೆಟ್ಟಿಸುವ ಏಕೈಕ ಗುರಿಯಿಂದ ಹುಬ್ಬಳ್ಳಿ ಸೆಂಟ್ರಲ್‌ನಲ್ಲಷ್ಟೇ ಗಮನ ಕೇಂದ್ರೀಕರಿಸಿದ್ದ ಜೋಶಿ ಮುಂದಾಳತ್ವದ ಬಿಜೆಪಿ, ಕಿತ್ತೂರು ಕರ್ನಾಟಕದಲ್ಲಿ ಮಕಾಡೆ ಮುಗ್ಗರಿಸಿತು ಎಂಬ ಚರ್ಚೆ ಇಂದಿಗೂ ನಡೆಯುತ್ತಿದೆ. ಈ ಶೆಟ್ಟರ್ ಪರಿಣಾಮ ಎದುರಾಗಿರುವ ಲೋಕಸಭಾ ಚುನಾವಣೆಯಲ್ಲಿ ಪುನರಾವರ್ತನೆಯಾಗುವ ಅತಂಕವೀಗ ಬಿಜೆಪಿಯನ್ನು ಕಬ್ಜಾ ಮಾಡಿಕೊಂಡಿರುವ ಜೋಶಿ-ಸಂತೋಷ್ ಪರಿವಾರದ ನಿದ್ದೆಗೆಡಿಸುತ್ತಿದೆ ಎನ್ನಲಾಗುತ್ತಿದೆ.

ಶಂಕರ ಪಾಟೀಲ್ ಮುನೇನಕೊಪ್ಪ

ಹಠ ಹಿಡಿದು ತನ್ನನ್ನು ಮಣಿಸಿದ ಜೋಶಿಯನ್ನು ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಹಣಿಯುವ ಮೂಲಕ ಸೇಡು ತೀರಿಸಿಕೊಳ್ಳುವ ಯೋಜನಾಬದ್ಧ ಕಾರ್ಯಾಚರಣೆಯನ್ನು ಶೆಟ್ಟರ್ ಶುರುಹಚ್ಚಿಕೊಂಡಿದ್ದಾರೆ ಎಂಬ ಮಾತಗಳು ಧಾರವಾಡದ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಲಿಂಗಾಯತ “ಅಸ್ಮಿತೆ” ಮುಂದಿಟ್ಟುಕೊಂಡು ಕಿತ್ತೂರು ಕರ್ನಾಟಕದಲ್ಲಿ ಶೆಟ್ಟರ್ ತಿರುಗಾಟ ನಡೆಸಿದ್ದಾರೆ. ಲಿಂಗಾಯತರ ಸಣ್ಣ-ಪುಟ್ಟ ಸಭೆಗಳಲ್ಲೂ ಭಾಗವಹಿಸುತ್ತ ಸ್ವಸಮುದಾಯವನ್ನು ಕಾಂಗ್ರೆಸ್ ಕಡೆ ವಾಲಿಸುತ್ತಿದ್ದಾರೆ; ಲಿಂಗಾಯತರ ಅಖಂಡ ಬೆಂಬಲದಿಂದ ಸತತ ನಾಲ್ಕು ಬಾರಿ ಸಂಸದನಾಗಿದ್ದರೂ ಲಿಂಗಾಯತರನ್ನೇ ಜೋಶಿಗೆ ಕಡೆಗಣಿಸುತ್ತಿದ್ದಾರೆಂದು ಶೆಟ್ಟರ ಮನಮುಟ್ಟುವಂತೆ ಜನರಿಗೆ ವಿವರಿಸುತ್ತಿದ್ದಾರೆನ್ನಲಾಗಿದೆ. ತಾವೇ ಬಿಜೆಪಿಯಲ್ಲಿ ಬೆಳೆಸಿ ಎಮ್ಮೆಲ್ಲೆ, ಮಿನಿಸ್ಟರ್ ಮಾಡಿದವರನ್ನು ಕಾಂಗ್ರೆಸ್‌ಗೆ ತರಲು ಪ್ರಯತ್ನಿಸುತ್ತಿರುವ ಶೆಟ್ಟರ್ ಕಿತ್ತೂರು ಕರ್ನಾಟಕದ ಅಸಮಾಧಾನಿತರ ಸಂಪರ್ಕವನ್ನು ನಿರಂತರವಾಗಿ ಸಾಧಿಸುತ್ತಿದ್ದಾರೆ. ಬಿಜೆಪಿಯಲ್ಲಿರಲಾಗದೆ ಚಡಪಡಿಸುತ್ತಿರುವ ಲಿಂಗಾಯತ ಮುಖಂಡರು ದಿನಕ್ಕೊಬ್ಬರಂತೆ ತಮ್ಮ ನಡೆ ಕಾಂಗ್ರೆಸ್ ಕಡೆ ಎಂಬುದನ್ನು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟವರೆಲ್ಲರ ಸಿಟ್ಟೂ ಪ್ರಹ್ಲಾದ್ ಜೋಶಿ ಮೇಲೆಯೇ..

ಈಚೆಗೆ ಮಾಜಿ ಮಂತ್ರಿ ನವಲಗುಂದದ ಶಂಕರ ಪಾಟೀಲ್ ಮುನೇನಕೊಪ್ಪ ಪತ್ರಿಕಾಗೋಷ್ಠಿ ಕರೆದು- ಬಿಜೆಪಿ ಒಡೆದ ಮನೆಯಾಗಿದೆ; ಜೋಶಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಲು ವಿಫಲರಾಗಿದ್ದಾರೆ. ಶೆಟ್ಟರ್‌ರಂಥ ಹಿರಿಯರನ್ನು ಹೊರಹೋಗುವಂತೆ ಮಾಡಲಾಯಿತು; ನನಗೂ ಪಾರ್ಟಿಯಲ್ಲಿ ಸಮಾಧಾನವಿಲ್ಲ; ಜನವರಿವರೆಗೆ ಕಾದು ನೋಡುತ್ತೇನೆ. ಪರಿಸ್ಥಿತಿ ಸರಿಯಾಗದಿದ್ದರೆ ನನ್ನ ದಾರಿ ನನಗೆ ಎಂದು ಗುಟುರು ಹಾಕಿದ್ದಾರೆ. ಮುನೇನಕೊಪ್ಪರನ್ನು ಜೋಶಿ ವಿರೋಧದ ನಡುವೆಯೂ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗುವಂತೆ ನೋಡಿಕೊಂಡಿದ್ದು ಶೆಟ್ಟರ್. ಜೋಶಿ ಯಡಿಯೂರಪ್ಪ ವಿರೋಧಿ ಬಣದಲ್ಲಿದ್ದ, ಒಂದು ಹಂತದಲ್ಲಿ ಯಡಿಯೂರಪ್ಪರನ್ನು ಬದಲಿಸಿ ತಾನೇ ಮುಖ್ಯಮಂತ್ರಿಯಾಗಲು ಪ್ರಯತ್ನ ಪಟ್ಟಿದ್ದ ಹುಬ್ಬಳ್ಳಿ-ಧಾರವಾಡ ಪಶ್ಚಿಮದ ಶಾಸಕ ಅರವಿಂದ್ ಬೆಲ್ಲದ್ ಪರ ಲಾಬಿ ಮಾಡಿದ್ದರು. ಜೋಶಿ ಕಿರುಕುಳ ತಾಳಲಾಗದೆ ಶಂಕರ್ ಪಾಟೀಲ್ ಗುರು ಶೆಟ್ಟರ್ ಗೂಡು ಸೇರಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಸುದ್ದಿಗಳು ಹಾರಾಡುತ್ತಿದೆ.

ಇದನ್ನೂ ಓದಿ: ಹಣ ಪಡೆದು MLA ಟಿಕೆಟ್ ಕೊಟ್ಟಿರುವ ಬಗ್ಗೆ ಬಿಜೆಪಿ ಉತ್ತರಿಸಬೇಕು: ಜಗದೀಶ್ ಶೆಟ್ಟರ್

ಮತ್ತೊಂದೆಡೆ ಕುಂದಗೋಳದ ಮಾಜಿ ಶಾಸಕ- ಯಡಿಯೂರಪ್ಪರ ಬೀಗ ಎಸ್.ಐ.ಚಿಕ್ಕನಗೌಡರ್ ತನಗೆ ಕೇಸರಿ ಟಿಕೆಟ್ ತಪ್ಪಲು ಜೋಶಿ ಕಾರಸ್ಥಾನವೇ ಕಾರಣವೆಂದು ಕೆಂಡಕಾರುತ್ತಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಸೇರಲು ಪ್ರಯತ್ನಿಸಿದ್ದ ಚಿಕ್ಕನಗೌಡ್ರ ಸಾಧ್ಯವಾಗದಿದ್ದಾಗ ಪಕ್ಷೇತರನಾಗಿ ಕಣಕ್ಕಿಳಿದಿದ್ದರು. ಈಗ ಶೆಟ್ಟರ್ ಮೂಲಕ ಕಾಂಗ್ರೆಸ್ ದೀಕ್ಷೆ ಪಡೆಯಲು ಚಿಕ್ಕನಗೌಡ್ರ ತಯಾರಾಗಿದ್ದಾರೆ ಎನ್ನಲಾಗಿದೆ. ಈ ವರದಿ ಸಿದ್ಧವಾಗುತ್ತಿರವ ವೇಳೆಗೆ ಜಗದೀಶ್ ಶೆಟ್ಟರ್ ಸಹೋದರ, ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಪ್ರದೀಪ್ ಶೆಟ್ಟರ್, ಬಿಜೆಪಿಯಲ್ಲಿ ಲಿಂಗಾಯತರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ; ಬಕೆಟ್ ಹಿಡಿಯುವವರಿಗೆ ಮನ್ನಣೆ ಕೊಡಲಾಗುತ್ತಿದೆ; ಮಾಜಿ ಮಂತ್ರಿಗಳಾದ ಸೋಮಣ್ಣ, ಮಾಧುಸ್ವಾಮಿ, ಮುನೇನಕೊಪ್ಪ, ರೇಣುಕಾಚಾರ್ಯ ಮತ್ತು ಮಾಜಿ ಶಾಸಕ ಚಿಕ್ಕನಗೌಡರಂಥ ಲಿಂಗಾಯತ ಮುಂದಾಳುಗಳು ಪಕ್ಷದಿಂದ ವಿಮುಖರಾಗುತ್ತಿದ್ದಾರೆ; ನನ್ನನ್ನೂ ಪಾರ್ಟಿಯಲ್ಲಿ ಕಡೆಗಣಿಸಲಾಗುತ್ತಿದೆ; ಇದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಅಣ್ಣ ಕಾಂಗ್ರೆಸ್ ಸೇರಿದರೂ ಬಿಜೆಪಿಯಲ್ಲೇ ಉಳಿದುಕೊಂಡಿದ್ದ ಪ್ರದೀಪ್ ಶೆಟ್ಟರ್‌ರ ಅಸಹನೆಯ ಮಾತುಗಳು ಲಿಂಗಾಯತ ಕೇಂದ್ರಿತ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಕಂಪನಗಳನ್ನೆಬ್ಬಿಸಿಬಿಟ್ಟಿದೆ!

ಈ ರಾಜಕೀಯ ಸ್ಥಿತ್ಯಂತರವನ್ನು ಸೂಕ್ಷ್ಮವಾಗಿ ಗಮನಿಸಿದರೆ ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಹೈಕಮಾಂಡ್ ಹೀನಾಯವಾಗಿ ನಡೆಸಿಕೊಂಡದ್ದು ಮತ್ತು ಅದಕ್ಕೂ ಮೊದಲಿನ ರಾಜಕಾರಣದಿಂದ, ಮೊದಲಿಗೆ ಜನತಾ ಪರಿವಾರ ಆನಂತರ ಬಿಜೆಪಿಯತ್ತ ವಲಸೆ ಹೋಗಿದ್ದ ಲಿಂಗಾಯತ ಸಮೂಹ, ಶೆಟ್ಟರ್‌ಗೆ ಬಿಜೆಪಿಯ ಬ್ರಾಹ್ಮಣ ಯಜಮಾನರು ಅವಮಾನಿಸಿ ಹೊರಹೋಗುವಂತೆ ಮಾಡಿದ ಬಳಿಕ ಕಾಂಗ್ರೆಸ್‌ನತ್ತ ಮರುವಲಸೆ ಹೊರಟಿರುವುದು ಸ್ಪಷ್ಟವಾಗುತ್ತದೆ. ಕಿತ್ತೂರು ಕರ್ನಾಟಕದ ಬಂಡಾಯಗಾರ ಬಿಜೆಪಿಗರನ್ನು ಕಾಂಗ್ರೆಸ್‌ಗೆ ಕರೆತರುವ ಹೊಣೆಗಾರಿಕೆಯನ್ನು ಶೆಟ್ಟರ್‌ಗೆ ಕೆಪಿಸಿಸಿ ಅದ್ಯಕ್ಷ ಡಿಕೆಶಿ ವಹಿಸಿದ್ದಾರೆನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಸೇರಿ ಉತ್ತರ ಕನ್ನಡದ ಪಾರ್ಲಿಮೆಂಟ್ ಹುರಿಯಾಳಾಗುವ ಆಸೆಯಲ್ಲಿರುವ ಯಲ್ಲಾಪುರದ ಎಮ್ಮೆಲ್ಲೆ ಶಿವರಾಮ್ ಹೆಬ್ಬಾರ್ ಕೂಡ ಶೆಟ್ಟರ್‌ರನ್ನೇ ನೆಚ್ಚಿಕೊಂಡಿದ್ದಾರೆ. ಶೆಟ್ಟರ್ ಅವರದ್ದು ಈಗ ಒಂದೇ ಗುರಿ. ಲೋಕಸಭಾ ಚುನಾವಣೆ ಘೋಷಣೆಯೊಳಗೆ ಕಿತ್ತೂರು ಕರ್ನಾಟಕ ಭಾಗದ ಬಿಜೆಪಿಯಲ್ಲಿರುವ ಪ್ರಮುಖ ಲಿಂಗಾಯತ ಹಿರಿ-ಮರಿ ಲೀಡರ್‌ಗಳನ್ನು ಕಾಂಗ್ರೆಸ್ ಬುಟ್ಟಿಗೆಹಾಕಿ ಜೋಶಿ ಬಳಗದ ನೈತಿಕ ಸ್ಥೈರ್ಯವನ್ನು ಉಡುಗಿಸುವುದು; ತನ್ಮೂಲಕ ಜೋಶಿಯನ್ನು ಮಾಜಿ ಸಂಸದನಾಗಿಸಿ ಕಾಂಗ್ರೆಸ್‌ನಲ್ಲಿ ತಮ್ಮ ತೂಕ ಹೆಚ್ಚಿಸಿಕೊಳ್ಳುವುದು.

ಶೆಟ್ಟರ್‌ರ ಗೆರಿಲ್ಲಾ ದಾಳಿ ಒಂದು ಕಡೆಯಾದರೆ ಮತ್ತೊಂದೆಡೆಯಿಂದ ಧಾರವಾಡ ಲೋಕಸಭಾ ಕ್ಷೇತ್ರದ ಲಿಂಗಾಯತ ಮತದಾರರೂ “ಜೋಶಿ ಎರಡು ದಶಕ ಸಂಸದನಾಗಿದ್ದು ಸಾಕು” ಎಂಬ ತಾತ್ಸಾರ ತೋರಿಸಲಾರಂಭಿಸಿದ್ದಾರೆ. ವೀರಶೈವ ಲಿಂಗಾಯತ ಟ್ವಿಟರ್‌ನಲ್ಲಿ ಬಂದ ಜೋಶಿ ಬದಲಾವಣೆಗೆ ಆಗ್ರಹಿಸುವ ಪೋಸ್ಟ್‌ಗಳು ವೈರಲ್ ಆಗಿವೆ. ಬಿಜೆಪಿ ಜೋಶಿಗೆ ಮತ್ತೆ ಅವಕಾಶ ಕೊಡಕೂಡದು; ಕೊಟ್ಟರೆ ಸೋಲಿಸಬೇಕು ಎಂಬ ತೀರ್ಮಾನಕ್ಕೆ ಇಷ್ಟು ದಿನ ಕಣ್ಮುಚ್ಚಿ ಗೆಲ್ಲಿಸಿದ ಲಿಂಗಾಯತರು ಬಂದಂತಿದೆ. ಪಂಚಮಸಾಲಿ ಪಂಗಡದವರೊಬ್ಬರನ್ನು ಆಖಾಡಕ್ಕಿಳಿಸಿ ಉಳಿದೆಲ್ಲ ಲಿಂಗಾಯತ ಉಪ-ಪಂಗಡದವರನ್ನು ಒಗ್ಗೂಡಿಸಿಕೊಂಡರೆ ಜೋಶಿಯನ್ನು ಸುಲಭವಾಗಿ ಮನೆಗೆ ಕಳಿಸಬಹುದೆಂಬ ಸ್ಟ್ರಾಟಜಿ ರೆಬೆಲ್ ಲಿಂಗಾಯತ ಲೀಡರ್‌ಗಳು ಹೆಣೆದಿದ್ದಾರೆ.

ಶಿವಲೀಲಾ ಕುಲಕರ್ಣಿ

ಶೆಟ್ಟರ್ ಅಸೆಂಬ್ಲಿ ಚನಾವಣೆಯಲ್ಲಿ ಸೋಲುತ್ತಿದ್ದಂತೆಯೇ ಅವರೇ ಕಾಂಗ್ರೆಸ್‌ನ ಲೋಕಸಭಾ ಆಖಾಡದ ಡಾರ್ಕ್‌ಹಾರ್ಸ್ ಎಂಬ ಚರ್ಚೆಗಳು ಸುಮಾರು ಸಮಯ ನಡೆದಿತ್ತು. ಯಾವಾಗ ಕಾಂಗ್ರೆಸ್ ಶೆಟ್ಟರ್‌ರನ್ನು ವಿಧಾನ ಪರಿಷತ್ ಸದಸ್ಯನಾಗಿ ಮಾಡಿತೋ ಆಗ ಜಿಲ್ಲಾ ಉಸ್ತುವಾರಿ ಮಂತ್ರಿ ಸಂತೋಷ್ ಲಾಡ್ ಎಂಪಿ ಅಭ್ಯರ್ಥಿಯಾಗುತ್ತಾರೆಂಬ ಸುದ್ದಿಗಳು ಎದ್ದವು. ಅದರೆ ಮರಾಠ ಸಮುದಾಯದ ಲಾಡ್ ಹೆಸರು ಗಂಭೀರವಾಗಿ ಪರಿಗಣನೆ ಆಗಲಿಲ್ಲ.

ಇದರ ಬೆನ್ನಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಪ್ರಬಲ ಪಂಚಮಸಾಲಿ ಪಂಗಡದ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪರನ್ನು ಕಾಂಗ್ರೆಸ್‌ಗೆ ಕರೆತಂದು ಜೋಶಿ ಎದುರು ನಿಲ್ಲಿಸಿದರೆ ಏನಾಗಬಹುದೆಂಬ ಲೆಕ್ಕಾಚಾರ ಶೆಟ್ಟರ್ ಮಾಡುತ್ತಿದ್ದಾರೆ ಎಂಬ ಮಾತುಗಳು ಧಾರವಾಡದ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿವೆ. ಆದರೆ ಈಚೆಗಷ್ಟೇ ಮುನೇನಕೊಪ್ಪ ತಾನು ಜನವರಿವರೆಗೆ ರಾಜಕಾರಣದಿಂದ ದೂರವಿರುತ್ತೇನೆಂದು ಹೇಳಿದರು. ಆನಂತರ ಕಾಂಗ್ರೆಸ್‌ನಲ್ಲಿ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಮಡದಿ ಶಿವಲೀಲಾ ಕುಲಕರ್ಣಿ ಎಂಪಿ ಅಭ್ಯರ್ಥಿ ಆಗುವ ಸಾಧ್ಯಾಸಾಧ್ಯತೆಯ ಚರ್ಚೆಗಳು ಶುರುವಾಗಿದೆ. ಜಿಪಂ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ್ ಕೊಲೆ ಕೇಸಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶಿಸದಂತೆ ನ್ಯಾಯಾಲಯ ತಾಕೀತು ಮಾಡಿದೆ. ಕ್ಷೇತ್ರದ ಹೊರಗಿದ್ದುಕೊಂಡೇ ಸ್ಪರ್ಧೆಗಿಳಿದಿದ್ದ ವಿನಯ್ ಕುಲಕರ್ಣಿಯನ್ನು ಅವರ ಮಡದಿ ಶಿವಲೀಲಾ 17 ಸಾವಿರ ಮತದಂತರದಿಂದ ಗೆಲ್ಲಿಸಿಕೊಂಡು ಬಂದಿದ್ದರು. ಪತಿಯ ಅನುಪಸ್ಥಿತಿಯಲ್ಲಿ ಜನಾನುರಾಗಿ ರಾಜಕಾರಣಿಯಾಗಿ ಆವಿರ್ಭವಿಸಿರುವ ಶಿವಲೀಲಾ ಜಿಲ್ಲೆಯಲ್ಲಿ ಪರಿಚಿತರಾಗಿದ್ದಾರೆ.

ಈ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಕ್ಕನ ಅಳಿಯ ರಜತ್ ಉಳ್ಳಾಗಡ್ಡಿಮಠ್ ತನಗೆ ಸಂಸದ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಕೊಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ದುಂಬಾಲು ಬಿದ್ದಿದ್ದಾರೆಂಬ ಮಾತಗಳು ಕೇಳಿಬರಲಾರಂಭಿಸಿದೆ. ಕಳೆದ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಿಂದ ಕಾಂಗ್ರೆಸ್ ಕ್ಯಾಂಡಿಡೇಟಾಗುವ ಸಕಲ ಸಿದ್ಧತೆ ಮಾಡಿಕೊಂಡಿದ್ದ ರಜತ್ ಕೊನೆ ಕ್ಷಣದಲ್ಲಾದ ರಾಜಕೀಯ ಪಲ್ಲಟದಲ್ಲಿ ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್‌ಗೆ ಕ್ಷೇತ್ರ ಬಿಟ್ಟುಕೊಡಬೇಕಾಗಿ ಬಂದಿತ್ತು. ಈ “ತ್ಯಾಗ”ಕ್ಕೆ ಈಗ ರಜತ್ ಉಳ್ಳಾಗಡ್ಡಿಮಠ್ ಎಂಪಿ ಟಿಕೆಟ್ ಪ್ರತಿಫಲವಾಗಿ ಅಪೇಕ್ಷಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿರುವವರಿಗಿಂತ ಶಾಸಕ ವಿನಯ್ ಕುಲಕರ್ಣಿಯೇ ಬಿಜೆಪಿಯ ಜೋಶಿಗೆ ಪ್ರಬಲ ಎದುರಾಳಿ ಆಗಬಲ್ಲರೆಂದು ಧಾರವಾಡ ಪಿಚ್‌ನ ಜಾತಿ-ಧರ್ಮದ ಸೂತ್ರ-ಸಮೀಕರಣ ಬಲ್ಲ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಹಿಂದಿನೆರಡು ಚನಾವಣೆಯಲ್ಲಿ ಜೋಶಿಗೆ ಪ್ರಬಲ ಪೈಪೋಟಿ ಕೊಟ್ಟಿದ್ದ ವಿನಯ್ ಕುಲಕರ್ಣಿ ಕ್ಷೇತ್ರದಲ್ಲಿ ಗಣನೀಯವಾಗಿರುವ ಪಂಚಮಸಾಲಿ ಪಂಗಡದವರು. ಧಾರವಾಡ ಪಾರ್ಲಿಮೆಂಟ್ ರಣರಂಗದ ನಾಡಿಮಿಡಿತ ಗೊತ್ತಿರುವ ಕುಲಕರ್ಣಿ ಜೋಶಿ ವಿರುದ್ಧ ಹವಾ ಸೃಷ್ಟಿಸಬಲ್ಲರು; ಆದರೆ ಕ್ಷೇತ್ರದ ಹೊರಗುಳಿದೇ ಧಾರವಾಡದಲ್ಲಿ ಗೆದ್ದಂತೆ ಲೋಕಸಭೆ ಚುನಾವಣೆಯಲ್ಲಿ ಜಯಿಸುವುದು ಕಷ್ಟ. ಕುಲಕರ್ಣಿ ಕ್ಷೇತ್ರದಲ್ಲೇ ನಿಂತು ಕಾದಾಡಿದರೆ ಜೋಶಿ ಹಿಮ್ಮೆಟ್ಟಿಸುವ ಸಾಧ್ಯತೆಯಿದೆ; ಮುಂದೆಂದೂ ಕುಲಕರ್ಣಿ ಸವಾಲಾಗಬಾರದೆಂದೇ ವಿರೋಧಿಗಳು ಯೋಗೀಶಗೌಡ ಮರ್ಡರ್ ಕೇಸನ್ನು ಸಿಬಿಐಗೆ ವಹಿಸುವಂತೆ ನೋಡಿಕೊಂಡು ಫಿಕ್ಸ್ ಮಾಡಿದ್ದಾರೆಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ಕಾಂಗ್ರೆಸ್ ಪಾಳೆಯದಿಂದ ಬರುತ್ತಿರುವ ಸುದ್ದಿಗಳ ಪ್ರಕಾರ ಅಂತಿಮವಾಗಿ ಜಗದೀಶ್ ಶೆಟ್ಟರ್ ಅವರೆ ಬಿಜೆಪಿಯ ಪ್ರಹ್ಲಾದ್ ಜೋಶಿಗೆ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದೆ. ಈಗ ಉತ್ತರ ಕರ್ನಾಟಕದ ಲಿಂಗಾಯತರ ಅಚ್ಚುಮೆಚ್ಚಿನ ನೇತಾರನಾಗಿ ರೂಪುಗೊಳ್ಳುತ್ತಿರುವ ಶೆಟ್ಟರ್ ಚುನಾವಣಾ ಸಮರ ಸನ್ನಿಹಿತವಾದಾಗ ಆಖಾಡದ ಹದ ಮತ್ತು ಲಿಂಗಾಯತರ ಮೂಡ್ ನೋಡಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಲಿಂಗಾಯತರೇ ನಿರ್ಣಾಯಕರಾಗಿರುವ ಧಾರವಾಡ ಸಂಸದೀಯ ಕ್ಷೇತ್ರದಲ್ಲಿ ದಿನಗಳೆದಂತೆ ಪರಿಸ್ಥಿತಿ ಪ್ರತಿಕೂಲವಾಗುತ್ತಿರುವುದು ಸಹಜವಾಗೆ ಸಚಿವ ಪ್ರಹ್ಲಾದ್ ಜೋಶಿಯನ್ನು ಚಿಂತೇಗೀಡುಮಾಡಿದೆ. ತಾನು ಲಿಂಗಾಯತ ವಿರೋಧಿ ಎಂಬ ವಾತಾವರಣ ಸೃಷ್ಟಿಯಗುತ್ತಿರುವುದರಿಂದ ಜೋಶಿಗೆ ಧಾರವಾಡದಲ್ಲಿ ಹೋರಾಡುವುದು ಸುಲಭವಲ್ಲ ಅನ್ನಿಸಿದೆ ಎನ್ನಲಾಗಿದೆ. ಹಾಗಾಗಿ ಬ್ರಾಹ್ಮಣರು ದೊಡ್ಡ ಸಂಖ್ಯೆಯಲ್ಲಿರುವ ಪಕ್ಕದ ಉತ್ತರ ಕನ್ನಡಕ್ಕೆ ವಲಸೆ ಹೋಗುವ ಯೋಚನೆ ಜೋಶಿ ತಲೆಯಲ್ಲಿದೆಯಂತೆ. ಮರಾಠ ಪ್ರಾಬಲ್ಯದ ಬೆಳಗಾವಿ ಜಿಲ್ಲೆಯ ಖಾನಾಪುರ ಉ.ಕನ್ನಡ ಕಾನ್ಸ್‌ಟ್ಯುಟಿಯೆನ್ಸಿಯಲ್ಲಿರುವುದರಿಂದ ಅನುಕೂಲಕರವೆಂಬ ಅನಿಸಿಕೆ ಜೋಶಿ ಮತ್ತವರ ಆರೆಸ್ಸೆಸ್ ಬಳಗದ್ದೆನ್ನಲಾಗುತ್ತಿದೆ. ಇಂಥ ದೂರಾಲೋಚನೆಯಿಂದಲೆ ಉತ್ತರ ಕನ್ನಡದ ಸ್ವಜಾತಿ, ಸ್ವಪಕ್ಷದ ಸಂಸದ ಅನಂತಕುಮಾರ್ ಹೆಗಡೆಯನ್ನು ಜೋಶಿ-ಸಂತೋಷ್ ಸೇರಿ ಮೂಲೆಗುಂಪು ಮಾಡಿದ್ದಾರೆಂಬ ಅಭಿಪ್ರಾಯವಿದೆ. ಒಟ್ಟಿನಲ್ಲಿ ಬರಲಿರುವ ಚುನಾವಣೆ ಉತ್ತರ ಕರ್ನಾಟಕದ ಬಿಜೆಪಿಯಲ್ಲಿ ಏಕಮೇವಾದ್ವಿತೀಯನಾಗಿ ಮೆರೆಯುತ್ತಿರುವ ಪ್ರಹ್ಲಾದ್ ಜೋಶಿಯವರ ಹಣೆಬರಹ ನಿರ್ಧರಿಸಲಿರುವುದಂತೂ ಖರೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...