“ಹಾಸನ ಸಂಸದ ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದಬ್ಬಾಳಿಕೆಯನ್ನು ಖಂಡಿಸಿ, ಸಂತ್ರಸ್ತೆಯರಿಗೆ ಧೈರ್ಯ ತುಂಬಲು ನಾವಿಲ್ಲಿದ್ದೇವೆ. ರೇವಣ್ಣ ಕುಟುಂಬವು ರಾಜಕೀಯ, ಹಣ ಬಲದಿಂದ ನಡೆಸುವ ಅವ್ಯವಹಾರಗಳಿಗೆ, ದರ್ಪಕ್ಕೆ ಇನ್ನು ಉಳಿಗಾಲವಿಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ‘ಬಲತ್ಕಾರಿಗಳ ಬಚಾವು’ ಮಾಡುವ ಸರ್ಕಾರವಾಗಿದೆ. ಆ ಸರ್ಕಾರವನ್ನು ಜೂನ್ 4ರ ನಂತರ ಕೆಳಗಿಸಬೇಕು” ಎಂದು ಮಹಿಳಾ ಹೋರಾಟಗಾರ್ತಿ ಸುಭಾಷಿಣಿ ಅಲಿ ಹೇಳಿದ್ದಾರೆ.
ಹಾಸನದಲ್ಲಿ ಪ್ರಜ್ವಲ್ ರೇವಣ್ಣನ ಬಂಧನಕ್ಕೆ ಆಗ್ರಹಿಸಿ ನಡೆಯುತ್ತಿರುವ ‘ಹೋರಾಟದ ನಡಿಗೆ, ಹಾಸನದ ಕಡೆಗೆ..’ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, “ಶತಮಾನಗಳಿಂದಲೂ ಮಹಿಳಾ ಸಂಘಟನೆ ಸಂಘರ್ಷ ಮಾಡುತ್ತಿದೆ. ಸಂವಿಧಾನ ಜಾರಿಯಾದ ನಂತರವೂ ದೇಶದ ನಾನಾ ಭಾಗಗಳಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಭಾರತದಲ್ಲಿ ಸಾವಂತವಾದ, ಪುರಷವಾದ ಬೇರೂರಿದೆ. ಜೊತೆಗೆ, ಬಂಡವಾಳ ಮತ್ತು ಮತೀಯವಾದವೂ ಸೇರಿಕೊಂಡಿದೆ. ಇವುಗಳನ್ನು ಒಡೆಯದಿದ್ದರೆ, ನಮಗಾರಿಗೂ ಉಳಿವಿಲ್ಲ” ಎಂದರು.
“ಪ್ರಜ್ವಲ್ ರೇವಣ್ಣ ಮತ್ತು ಆತನ ತಂದೆ ರೇವಣ್ಣನನ್ನು ಬಂಧಿಸಿ, ಜೈಲಿಗಟ್ಟಬೇಕು. ಅವರಿಗೆ ಓನ್ಲೀ ಜೈಲ್, ನೋ ಬೇಲ್’ (ಜೈಲು ಮಾತ್ರ, ಜಾಮೀನು ಇಲ್ಲ) ಆಗಬೇಕು. ಇದೇ ನಮ್ಮ ಪ್ರಮುಖ ಒತ್ತಾಯ. ರೇವಣ್ಣ ಕುಟುಂಬ ತನಿಖೆಯಲ್ಲಿ ತಮ್ಮ ಪ್ರಭಾವವನ್ನು ಬಳಸಬಹುದು. ಕರ್ನಾಟಕ ಸರ್ಕಾರಕ್ಕೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ. ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು. ಅವರನ್ನು ಜೈಲಿಗಟ್ಟಬೇಕು” ಎಂದು ಒತ್ತಾಯಿಸಿದರು.
“ಸಂತ್ರಸ್ತ ಮಹಿಳೆಯರೊಂದಿಗೆ ನಾವಿದ್ದೇವೆ. ಅವರೊಂದಿಗೆ ಕೊನೆವರೆಗೂ ಹೋರಾಡುತ್ತೇವೆ. ಅವರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಯುತ್ತದೆ. ಸಂತ್ರಸ್ತೆಯರು ಎದೆಗುಂದಬೇಕಿಲ್ಲ” ಎಂದು ಬಲಿಪಶುಗಳಿಗೆ ಧೈರ್ಯ ತುಂಬುವ ಮಾತನಾಡಿದರು.
“ಸರ್ಕಾರಿ ಅಧಿಕಾರಿಗಳು, ಕಾರ್ಯಕರ್ತರು ಅಸಹಾಯಕ ಹೆಣ್ನುಮಕ್ಕಳು ಸಣ್ಣ ಪುಟ್ಟ ಸಹಾಯ ಕೇಳಲು ಬಂದಾಗ ಅವರ ಮೇಲೆ ರೇವಣ್ಣ ಮತ್ತು ಆತನ ಪುತ್ರ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು. ಪರಿಹಾರ ನೀಡಬೇಕು. ಆಪ್ತ ಸಮಾಲೋಚನೆ ಒದಗಿಸಬೇಕು” ಎಂದು ಆಗ್ರಹಿಸಿದರು.
ಪಾಳೆಗಾರಿಕೆ ನಡೆಸುತ್ತಿರುವ ರೇವಣ್ಣ ಕುಟುಂಬದ ಅವನತಿಯಾಗಬೇಕು:
ದೇಶದಲ್ಲಿ ಮೂರು ಉತ್ಕೃಷ್ಟ ಸತ್ಯಾಗ್ರಹಗಳು ನಡೆದಿವೆ. ಒಂದು, ಅಂಬೇಡ್ಕರ್ ನೇತೃತ್ವದ ಮಹಾರ್ ಸತ್ಯಾಗ್ರಹ. ಎರಡು, ದಂಡಿ ಉಪ್ಪಿನ ಸತ್ಯಾಗ್ರಹ. ಎರಡನೆಯದು, 2020-21ರ ರೈತ ಹೋರಾಟ. ಇವು ದೇಶ ಕಂಡ ಐತಿಹಾಸಿಕ ಹೋರಾಟಗಳು. ರೈತರು ಒಂದು ವರ್ಷಗಳ ನಿರಂತರ ಹೋರಾಟ ಮಾಡಿ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿದರು. ಇವತ್ತು, ಹಾಸನದಲ್ಲಿ ನಡೆದಿರುವ ಈ ಲೈಂಗಿಕ ಹಗರಣದ ವಿರುದ್ಧದ ಹೋರಾಟವು ಅಂತಹ ಐತಿಹಾಸಿಕವಾಗಿ ಮುನ್ನಡೆಯಬೇಕು ಎಂದು ಹಿರಿಯ ಹೋರಾಟಗಾರ ಎಸ್.ಆರ್ ಹಿರೇಮಠ್ ಹೇಳಿದರು.

ಹಾಸನದಲ್ಲಿ ನಡೆದ ‘ಹೋರಾಟದ ನಡಿಗೆ, ಹಾಸನ ಕಡೆಗೆ’ ಬೃಹತ್ ಹೋರಾಟದಲ್ಲಿ ಅವರು ಮಾತನಾಡಿದರು. “ಹಾಸನವನ್ನು ತಮ್ಮ ‘ತಮ್ಮ ರಿಪಬ್ಲಿಕ್’ ಮಾಡಿಕೊಂಡು, ಪಾಳೆಗಾರಿಕೆ ನಡೆಸುತ್ತಿರುವ ರೇವಣ್ಣ ಕುಟುಂಬದ ಅವನತಿಯಾಗಬೇಕು. ಪಾಳೆಗಾರಿಕೆಯನ್ನು ಕೊನೆಗಾಣಿಸಲು ವ್ಯವಸ್ಥಿತ ಹೋರಾಟ ನಡೆಬೇಕು. ಬಳ್ಳಾರಿಯ ಪಾಳೆಗಾರಿಕೆಯನ್ನು ಮುರಿದಂತೆ, ಹಾಸನದಲ್ಲಿರುವ ಪಾಳೆಗಾರಿಕೆಯನ್ನು ಮುಗಿಸಬೇಕು” ಎಂದರು.
“ಅತ್ಯಾಚಾರ, ಅನ್ಯಾಯ ಮಾಡಿದವರ ವಿರುದ್ಧ ಸಂತ್ರಸ್ತ ಮಹಿಳೆಯರು ಮುಂದೆ ಬಂದು ಹೋರಾಟ ನಡೆಸಬೇಕು. ತಮ್ಮ ಮೇಲಾದ ದೌರ್ಜನ್ಯಗಳ ವಿರುದ್ಧ ಗಟ್ಟಿಯಾಗಿ ಮಾತನಾಡಬೇಕು. ಸರ್ಕಾರ ನಡೆಸುತ್ತಿರುವವರು ಹಾಸನಕ್ಕೆ ಬರಬೇಕು. ಸಂತ್ರಸ್ತೆಯರಿಗೆ ಧೈರ್ಯ ತುಂಬಬೇಕು. ನ್ಯಾಯ ಕೊಡಿಸುವ ಭರವಸೆ ನೀಡಬೇಕು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಪ್ರಜ್ವಲ್ ವಿರುದ್ಧ 400 ಎಫ್ಐಆರ್ ದಾಖಲಿಸಬೇಕು:
ಪ್ರಜ್ವಲ್ ರೇವಣ್ಣ ಅವರನ್ನು ಭಯೋತ್ಪಾದಕನಾಗಿ ಹೆಸರಿಸಬೇಕು. 400 ಮಂದಿ ಸಂತ್ರಸ್ತೆಯರಿದ್ದಾರೆ ಎಂದು ಹೇಳಲಾಗಿದೆ. ಪ್ರಜ್ವಲ್ ವಿರುದ್ಧ 400 ಎಫ್ಐಆರ್‌ಗಳನ್ನು ದಾಖಲಿಸಬೇಕು. ಕಾನೂನು ಕ್ರಮ ಕೈಗೊಳ್ಳಬೇಕು. ಸಪ್ರತಿ ಸಂತ್ರಸ್ತೆಯರಿಗೆ ₹1 ಕೋಟಿ ಪರಿಹಾರ ನೀಡಬೇಕು. ರೇವಣ್ಣನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಹೈಕೋರ್ಟಿನಲ್ಲಿ ಜಾಮೀನನ್ನು ಪ್ರಶ್ನಿಸಿಲ್ಲ. ಪ್ರಜ್ವಲ್‌ನನ್ನೂ ಇದೇ ರೀತಿ ಜಾಮೀನಿನ ಮೇಲೆ ಬಿಟ್ಟುಬಿಡುವ ಸಾಧ್ಯತೆ ಇದೆ. ಹೀಗಾಗಿ, ನಾವು ಬೃಹತ್ ಹೋರಾಟ ನಡೆಸಬೇಕು ಎಂದು ಹಿರಿಯ ವಕೀಲ ಎಸ್ ಬಾಲನ್ ಹೇಳಿದ್ದಾರೆ.

ಸರ್ಕಾರಗಳು ರೇವಣ್ಣ ಮತ್ತು ಆತನ ಪುತ್ರ ಪ್ರಜ್ವಲ್ ರೇವಣ್ಣನನ್ನು ರಕ್ಷಿಸುತ್ತಿರುವ ಸಾಧ್ಯತೆಗಳಿವೆ. ಪ್ರಜ್ವಲ್ ಸೈಕೋ ಪಾತ್ ಇದ್ದಂತಿದ್ದಾನೆ. ಆತನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ; ‘ಹೋರಾಟದ ನಡಿಗೆ, ಹಾಸನದ ಕಡೆಗೆ..’; ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಆರಂಭ


