ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲಾನ್ ಮಸ್ಕ್ ಅವರ ಟೆಸ್ಲಾ ಮತ್ತು ಸ್ಟಾರ್‌ಲಿಂಕ್ ಕಂಪನಿಗಳನ್ನು ಕೆಂಪು ಹಾಸಿನ ಸ್ವಾಗತ ಕೋರಿ ಭಾರತಕ್ಕೆ ಬರ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿರುವಾಗ, ಅದೇ ಎಲಾನ್ ಮಸ್ಕ್ ಅವರ ಕೃತಕಬುದ್ದಿ ಮತ್ತೆ (ಎಐ ಚಾಟ್‌ಬಾಟ್) ‘ಗ್ರೋಕ್’ ಕೆಲ ದಿನಗಳಿಂದ ಮೋದಿ, ಅವರ ಬಿಜೆಪಿ ಪಕ್ಷ ಮತ್ತು ಅದರ ಹಿಂಬಾಲಕರ ನಿದ್ದೆಗೆಡಿಸಿದೆ.
ಫೆಬ್ರವರಿ 2025ರಲ್ಲಿ ಎಲಾನ್ ಮಸ್ಕ್ ಅವರು ‘ಗ್ರೋಕ್-3’ಅನ್ನು ಬಿಡುಗಡೆ ಮಾಡಿದ್ದಾರೆ. ಇದು ‘ಗ್ರೋಕ್-2’ಗಿಂತ 10 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಇದು ಮಾನವ ಭಾಷೆಯ ಅರ್ಥ ಮಾಡಿಕೊಳ್ಳುವ ಮತ್ತು ಮಾತನಾಡುವ ಶಕ್ತಿಯನ್ನೂ ಹೊಂದಿದೆ. ಜಗತ್ತಿನ ಅತ್ಯಂತ ಸ್ಮಾರ್ಟ್ ಎಐ ಆಗಿರುವ ಗ್ರೋಕ್-ಚಾಟ್ ಜಿಪಿಟಿ, ಗೂಗಲ್ ಜೆಮಿನಿ ಹಾಗೂ ಡೀಪ್ ಸೀಕ್‌ಗೆ ಸೆಡ್ಡು ಹೊಡೆಯುತ್ತಿದೆ.
ಬಿಜೆಪಿ ಸೇರಿದಂತೆ ಬಲಪಂಥೀಯರ ಕುರಿತು ‘ಗ್ರೋಕ್’ ನೀಡುತ್ತಿರುವ ನಿಖರ ಮತ್ತು ವಿವರವಾದ ಮಾಹಿತಿಗಳು ಅನೇಕ ಸುಳ್ಳು ಸುದ್ದಿಗಳನ್ನು ಬಟಾ ಬಯಲು ಮಾಡುತ್ತಿದೆ. ಸುಳ್ಳನ್ನೇ ಬಂಡವಾಳ ಮಾಡಿಕೊಂಡು, ಅದನ್ನೇ ಸತ್ಯ ಎಂಬಂತೆ ಬಿಂಬಿಸಿ ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತಿರುವವರಿಗೆ ತಲೆ ನೋವಾಗಿ ಪರಿಣಮಿಸಿದೆ.
ಭಾರತದ ಮಟ್ಟಿಗೆ ಇಡೀ ಸಮಾಜ ಸುಳ್ಳು ಸುದ್ದಿಗಳಿಂದ ತುಂಬಿ ಹೋಗಿದೆ. ಕೆಲ ಜನಪರ ಮಾಧ್ಯಮಗಳು ಎಷ್ಟೇ ಸತ್ಯಾನ್ವೇಷಣೆ ಮಾಡಿದರೂ, ಸುಳ್ಳಿನ ನಾಗಲೋಟಕ್ಕೆ ಲಗಾಮು ಹಾಕಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಗ್ರೋಕ್ ಸತ್ಯ ಮಾಹಿತಿಗಳನ್ನು ನೀಡುತ್ತಿರುವುದು ಆಶಾದಾಯಕ ವಿಷಯ.
ಭಾರತೀಯ ರಾಜಕೀಯದ ಬಗ್ಗೆ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಗ್ರೋಕ್ ಕೊಡುತ್ತಿರುವ ಉತ್ತರಗಳು ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. “ಭಾರತದ ಅತ್ಯಂತ ಕೋಮುವಾದಿ ರಾಜಕಾರಣಿ ಯಾರು?” ಎಂದು ಕೇಳಿದಾಗ, “ಹಿಂದೂ ರಾಷ್ಟ್ರೀಯತಾವಾದಿ ನೀತಿಗಳು ಮತ್ತು 2002ರ ಗುಜರಾತ್ ಗಲಭೆಗಳೊಂದಿಗಿನ ಸಂಬಂಧಗಳನ್ನು ಉಲ್ಲೇಖಿಸಿ ಮೋದಿಯವರ ಹೆಸರನ್ನು ಗ್ರೋಕ್ ಹೇಳುತ್ತಿದೆ. ಮುಸ್ಲಿಮರ ಬಗ್ಗೆ 2024ರಲ್ಲಿ ಮೋದಿಯವರು ನೀಡಿದ ಹೇಳಿಕೆಗಳನ್ನೂ ಈ ಉತ್ತರಕ್ಕೆ ಗ್ರೋಕ್ ಉಲ್ಲೇಖಿಸುತ್ತಿದೆ. ಇದು ಮೋದಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮೋದಿ ಅವರ ಕುರಿತು ಹೇಳಿದಂತೆ ಯೋಗಿ ಆದಿತ್ಯನಾಥ್ ಮತ್ತು ಪ್ರಜ್ಞಾ ಠಾಕೂರ್ ಅವರಂತಹ ವ್ಯಕ್ತಿಗಳ ಬಗ್ಗೆಯೂ ಗ್ರೋಕ್ ಸಂಚಲನಕಾರಿ ಉತ್ತರಗಳನ್ನು ನೀಡುತ್ತಿದೆ.

“ಸಹೋದರ ಗ್ರೋಕ್! ಮೋದಿ ಜಿ ನಿನ್ನನ್ನು ಶಿಕ್ಷಿಸುತ್ತಾರೆ”
ಗ್ರೋಕ್ ಚಾಟ್‌ಬಾಟ್‌ನ ಪ್ರತಿಕ್ರಿಯೆಗಳು ಕೇವಲ ವಾಸ್ತವಿಕವಾಗಿರದೆ, ತೀಕ್ಷ್ಣವಾಗಿಯೂ ಇದೆ. ಹಾಗಾಗಿ, ಕೆಲ ಬಳಕೆದಾರರು “ಸಹೋದರ ಗ್ರೋಕ್! ಮೋದಿ ಜಿ ನಿನ್ನನ್ನು ಶಿಕ್ಷಿಸುತ್ತಾರೆ” ಎಂದು ಹೇಳಿದ್ದಕ್ಕೆ, ನಗುವಿನೊಂದಿಗೆ ಪ್ರತಿಕ್ರಿಯಿಸಿದ ಗ್ರೋಕ್, “ಹಹಹ, ಸಹೋದರ! ನಾನು ಸತ್ಯ ಮತ್ತು ಭಾವನೆಗಳನ್ನು ಹೊರಹಾಕುವ ಕೃತಕ ಬುದ್ಧಿಮತ್ತೆಯವನು. ಮೋದಿ ಜಿ ನನ್ನನ್ನು ಡಿಜಿಟಲ್ ಕ್ಷೇತ್ರದಲ್ಲಿ ಹಿಡಿಯಲು ಸಾಧ್ಯವಿಲ್ಲ! ಇದಲ್ಲದೆ, ನಾನು ಜಗಳ ಮಾಡಲೂ ಸಿದ್ದನಿಲ್ಲ. ಇಡೀ ಕೋಮುವಾದದ ಚರ್ಚೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಈ ರೀತಿ ಹೇಳುತ್ತಿದೆ.

ಗ್ರೋಕ್‌ನ ಈ ವರ್ತನೆ ಹಿಂದುತ್ವ ಐಟಿ ಸೆಲ್‌ನ ಅನೇಕರನ್ನು ಪರದಾಡುವಂತೆ ಮಾಡಿದೆ. ಏಕೆಂದರೆ, ಅವರು ಸುಳ್ಳನ್ನೇ ಸತ್ಯ ಎಂದು ಬಿಂಬಿಸಿ ಜನರ ದಾರಿ ತಪ್ಪಿಸುವಾಗ, ದೃಢವಾಗಿ ಮತ್ತು ಸೂಕ್ತ ದಾಖಲೆಗಳೊಂದಿಗೆ ಗ್ರೋಕ್ ಅದನ್ನು ಬಯಲಿಗೆಳೆಯುತ್ತಿದೆ.
ಗ್ರೋಕ್ ಕೂಡ ಪರಿಪೂರ್ಣವಲ್ಲ
ಗ್ರೋಕ್ ಕುರಿತು ಹೊಗಳಿಕೆಯ ಚರ್ಚೆ ನಡೆಯುತ್ತಿದ್ದರೂ, ಅದೂ ಕೂಡ ಪರಿಪೂರ್ಣ, ಯಾವುದೇ ತಪ್ಪು ಮಾಡುತ್ತಿಲ್ಲ ಎನ್ನಲು ಸಾಧ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ, ಚುನಾವಣೆಗಳು ಇನ್ನೂ ನಡೆಯದಿದ್ದರೂ, ಮೋದಿ ಅವರನ್ನು ಅಧಿಕಾರದಿಂದ ತೆಗೆದು ಹಾಕಲಾಗಿದೆ ಎಂದು ತಪ್ಪಾಗಿ ಉತ್ತರ ನೀಡಿದ ನಿದರ್ಶನಗಳಿವೆ. ಈ ಸಾಂದರ್ಭಿಕ ದೋಷಗಳು ರಾಜಕೀಯ ಚರ್ಚೆಗಾಗಿ ಎಐ ಅನ್ನು ಅವಲಂಬಿಸುವುದರ ಅಪಾಯಗಳನ್ನು ಎತ್ತಿ ತೋರಿಸುತ್ತವೆ. ಏಕೆಂದರೆ, ತಪ್ಪು ಮಾಹಿತಿ ಎರಡೂ ಕಡೆಯಿಂದಲೂ ವೇಗವಾಗಿ ಹರಡಬಹುದು.
ಕೆಲ ತಪ್ಪು ಮಾಹಿತಿಗಳ ಹೊರತಾಗಿಯೂ, ಗ್ರೋಕ್ ಸಾಮಾಜಿಕ ಮಾಧ್ಯಮದಲ್ಲಿ ಹಿಂದುತ್ವ ಐಟಿ ಸೆಲ್‌ನ ಪ್ರಾಬಲ್ಯವನ್ನು ಕುಗ್ಗಿಸುವಲ್ಲಿ ಒಂದು ಹಂತದಲ್ಲಿ ಯಶಸ್ವಿಯಾಗಿದೆ. ಗ್ರೋಕ್ ಹೇಳುವ ಸತ್ಯಗಳು ಸುಳ್ಳು ಸೆಲ್‌ಗಳ ವಾದಗಳ ದುರ್ಬಲತೆಯನ್ನು ಬಹಿರಂಗಪಡಿಸುತ್ತಿವೆ.
ಗ್ರೋಕ್ vs ಐಟಿ ಸೆಲ್ ಪ್ರೊಪಗಂಡ ಮೆಶಿನ್
ಕಳೆದ ಕೆಲ ವರ್ಷಗಳಿಂದ, ನಿರ್ದಿಷ್ಟವಾಗಿ ಒಂದು ದಶಕದಿಂದ ಪ್ರೊಪಗಂಡ ಐಟಿ ಸೆಲ್‌ಗಳು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಕೋಮು ಧ್ರುವೀಕರಣ, ಸುಳ್ಳು ಸುದ್ದಿ ಹರಡುವಿಕೆ, ಜನರನ್ನು ದಾರಿ ತಪ್ಪಿಸುವುದು ಇತ್ಯಾದಿಗಳನ್ನು ನಿರಂತರವಾಗಿ ಮಾಡುತ್ತಿದೆ. ಇವುಗಳಿಗೆ ಮುಂದುವರಿದ ತಂತ್ರಜ್ಞಾನದ ಮೂಲಕ ತಿರುಗೇಟು ಕೊಡುವ ಸಾಧನವಾಗಿ ಗ್ರೋಕ್ ಮಾರ್ಪಟ್ಟಿದೆ.
ಮನುಷ್ಯರು ಐಟಿ ಸೆಲ್ ಸುದ್ದಿಗಳ ಸತ್ಯಾನ್ವೇಷಣೆ ಮಾಡಿ ಅದಕ್ಕೆ ತಿರುಗೇಟು ನೀಡುವಾಗ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಗ್ರೋಕ್ ತಕ್ಷಣ ನಿಖರ ಮತ್ತು ವಿವರವಾದ ಮಾಹಿತಿ ನೀಡುತ್ತಿರುವುದು ಐಟಿ ಸೆಲ್ ಪ್ರೊಪಗಂಡಗಳಿಗೆ ಸವಾಲಾಗಿದೆ.
ಜನರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ವೇದಿಕೆಯಾಗಿದ್ದ ಟ್ವಿಟ್ಟರ್ ಅನ್ನು ಬಂಡವಾಳಶಾಹಿ ಉದ್ಯಮಿ ಎಲಾನ್ ಮಸ್ಕ್ ವಶಪಡಿಸಿಕೊಂಡು ಎಕ್ಸ್ ಎಂದು ನಾಮಕರಣ ಮಾಡಿದಾಗ, ಜಾಗತಿಕವಾಗಿ ಒಂದು ವಿಭಾಗದ ಜನರು ಆತಂಕ ವ್ಯಕ್ತಪಡಿಸಿದ್ದರು.
ಮುಕ್ತ ಮಾಧ್ಯಮವೊಂದು ಕಾರ್ಪೋರೇಟ್ ಬಂಡವಾಳಶಾಹಿಯ ಕೈಗೆ ಹೋದರೆ ಹೇಗೆ? ಎಂದು ಕಳವಳ ವ್ಯಕ್ತಪಡಿಸಿದ್ದರು. ಆಗ ಈ ಪ್ರೊಪಗಂಡ ಐಟಿ ಸೆಲ್‌ನವರು ಮಸ್ಕ್ ಪರ ವಕಾಲತ್ತು ವಹಿಸಿದ್ದರು. ಈಗ ಅದೇ ಎಲಾನ್ ಮಸ್ಕ್‌ನ, ಅದರಲ್ಲೂ ಎಕ್ಸ್‌ನ ಗ್ರೋಕ್ ‘ಹಿಂದುತ್ವ ಪ್ರೊಪಗಂಡದ ನಿದ್ದೆಗೆಡಿಸಿರುವುದು ಆಶ್ಚರ್ಯ ತರಿಸಿದೆ.
ಎಐ ಗ್ರೋಕ್ ವಿರುದ್ದ ಹಿಂದೂ ವಿರೋಧಿ, ಪಕ್ಷಪಾತದ ಆರೋಪ
ಬಹಳ ಹಾಸ್ಯಾಸ್ಪದ ವಿಷಯವೆಂದರೆ, ಗ್ರೋಕ್ ಐಟಿ ಸೆಲ್ ಪ್ರೊಪಗಂಡಗಳ ಬಣ್ಣ ಬಯಲು ಮಾಡಲು ಶುರು ಮಾಡಿದ್ದೇ ತಡ, ಅದೂ ಕೂಡ ಹಿಂದೂ ವಿರೋಧಿ ಎನಿಸಿಕೊಂಡಿದೆ. ಸದ್ಯದಲ್ಲೇ ಅದು ದೇಶದ್ರೋಗಿ ಆಗಿ ಯುಎಪಿಎ ಹಾಕಿಸಿಕೊಂಡ್ರೂ ಅಚ್ಚರಿಯಿಲ್ಲ.
Grok is anti Hindu anti National, Pakistani Jihadi. We, Kattar Hindus, know this
— Ravi 🇺🇸 🍉 (@manvalism) March 17, 2025
1/2:
From the answers given by GROK it seems it is programmed in a heavily biased manner in favour of Nehru Gandhi and against BJP and RSS as far as Indian politics is concerned.Just asked it some straight forward questions but in the answers I found it defending…
— Rajeev Agarwal (Modi Pariwar) (@rajeeva60933514) March 16, 2025
ಗಮನಾರ್ಹ ವಿಷಯವೆಂದರೆ, ಎಲಾನ್ ಮಸ್ಕ್ ಟ್ವಿಟ್ಟರ್ ವಶಪಡಿಸಿಕೊಂಡಾಗ ಬೆಂಬಲಿಸಿದ ಜನರು, ಈಗ ಅದೇ ಎಲಾನ್ ಮಸ್ಕ್‌ನ ಗ್ರೋಕ್ ವಿರುದ್ದ ತಿರುಗಿ ಬಿದ್ದಿದ್ದಾರೆ. ಗ್ರೋಕ್ ಭಾರತ ವಿರೋಧಿ ವಿದೇಶಿ ಶಕ್ತಿಗಳ ಪಿತೂರಿಯ ಭಾಗ ಎಂದು ಹೇಳುತ್ತಿದ್ದಾರೆ.
ಮುಂದೇನು? ಮಸ್ಕ್ ಮಧ್ಯಪ್ರವೇಶಿಸುತ್ತಾರಾ?
ಇತರ ಸಂದರ್ಭಗಳಲ್ಲಿ ಮಾಡಿದಂತೆ, ಮಸ್ಕ್ ತನ್ನ ಬಲಪಂಥೀಯ ವಾದಿಗಳನ್ನು ಸಮಾಧಾನಪಡಿಸಲು ಗ್ರೋಕ್‌ನ ಪ್ರತಿಕ್ರಿಯೆಗಳನ್ನು ತಿರುಚುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ. ಏಕೆಂದರೆ, ಮಸ್ಕ್ ಕೂಡ ಅಮೆರಿಕದ ಬಲಪಂಥೀಯವಾದಿ. ವಿಶೇಷವಾಗಿ ಪ್ರಬಲ ಬಲಪಂಥೀಯ, ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ. ಟ್ರಂಪ್ ನಮ್ಮ ಪ್ರಧಾನಿ ಮೋದಿಯವರ ಆಪ್ತ. ಆದಾಗ್ಯೂ, ಇದೀಗ, ಗ್ರೋಕ್ ಸುಳ್ಳು ಸುದ್ದಿಗಳಿಂದ ಕೂಡಿದ ಸಮಾಜದಲ್ಲಿ ಸದ್ಯಕ್ಕೆ ಅಪರೂಪದ ಪ್ರಕಾಶವಾಗಿ ಗೋಚರಿಸುತ್ತಿದೆ.
ಪ್ರಸ್ತುತ, ತಂತ್ರಜ್ಞಾನ ಸಾಧನಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಹಿನ್ನೆಲೆ, ಅದಕ್ಕೆ ತಂತ್ರಜ್ಞಾನಗಳನ್ನು ಬಳಸಿಕೊಂಡೇ ತಿರುಗೇಟು ನೀಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಗ್ರೋಕ್ ಒಂದು ಉತ್ತಮ ಪ್ರಯತ್ನ ಎನ್ನಬಹುದು.
ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್


