ಫೆಬ್ರವರಿ 24ಕ್ಕೆ ಗುಜರಾತ್‌ಗೆ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊತೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಅಂದು ಹೌಡಿ ಟ್ರಂಪ್ ಕಾರ್ಯಕ್ರಮ ನಡೆಯಲಿದೆ. ಹಾಗಾಗಿ ಅದರ ಸುತ್ತ ಇರುವ ಸ್ಲಂಗಳನ್ನು ಮರೆಮಾಚಿ, ಸೌಂದರ್ಯಗೊಳಿಸುವಿಕೆಯ ಭಾಗವಾಗಿ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಗಾಂಧಿನಗರಕ್ಕೆ ಹೋಗುವ ಅರ್ಧ ಕಿಲೋಮೀಟರ್ ನಷ್ಟು ಉದ್ದದ ಹಾಗೂ ಆರರಿಂದ ಏಳು ಅಡಿ ಎತ್ತರದ ಗೋಡೆಯನ್ನು ಅಹಮದಾಬಾದ್ ಸ್ಥಳೀಯ ಸಂಸ್ಥೆ ನಿರ್ಮಿಸುತ್ತಿದೆ.
ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್, ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದಿರಾ ಸೇತುವೆಗೆ ಸಂಪರ್ಕಿಸುವ ರಸ್ತೆಯ ಉದ್ದಕ್ಕೂ ಈ ಗೋಡೆಯನ್ನು ಸುಂದರೀಕರಣದ ಹೆಸರಲ್ಲಿ ನಿರ್ಮಿಸುತ್ತಿದೆ. ಆದರೆ ಇದು ಟ್ರಂಪ್ ಬರುತ್ತಿರುವ ಹಿನ್ನೆಲೆಯಲ್ಲಿ ಕೊಳೆಗೇರಿ ಪ್ರದೇಶವನ್ನು ಮರೆಮಾಚಲು ಮಾಡುತ್ತಿರುವ ಕೆಲಸ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಇಲ್ಲಿ ಫೆಬ್ರವರಿ 24 ರಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆಯುವ ಸಾಧ್ಯತೆಯಿದೆ.
“ಕೊಳೆಗೇರಿ ಪ್ರದೇಶದಲ್ಲಿ 600 ಮೀಟರ್ ವಿಸ್ತಾರದಲ್ಲಿ 6-7 ಅಡಿ ಎತ್ತರದ ಗೋಡೆಯನ್ನು ನಿರ್ಮಿಸಲಾಗುತ್ತಿದೆ. ಇದರ ನಂತರ ಪ್ಲಾಂಟೇಶನ್ ಡ್ರೈವ್ ನಡೆಯಲಿದೆ” ಎಂದು ಹೆಸರು ಹೇಳಲು ಇಚ್ಚಿಸದ ಎಎಂಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ತನ್ನ ವರದಿಯಲ್ಲಿ ತಿಳೀಸಿದೆ.
2017 ರಲ್ಲಿ ನಡೆದ 12 ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಅವರ ಪತ್ನಿ ಅಕಿ ಅಬೆ ಅವರ ಎರಡು ದಿನಗಳ ಗುಜರಾತ್ ಪ್ರವಾಸದ ಸಂದರ್ಭದಲ್ಲಿ ಕೂಡಾ ಇದೇ ರೀತಿಯ ಸುಂದರೀಕರಣವನ್ನು ಮಾಡಲಾಗಿತ್ತು.
ನರೆಂದ್ರ ಮೋದಿಯವರು 2013-14ರ ಅವಧಿಯಲ್ಲಿ ದೇಶಾದ್ಯಂತ ಗುಜರಾತ್ ಮಾಡೆಲ್ ಕುರಿತು ಮಾತನಾಡಿದ್ದರು. ಮಾಧ್ಯಮಗಳು ಸಹ ಅದನ್ನು ಪ್ರಸಾರ ಮಾಡಿದ್ದವು. ಆದರೆ ಆನಂತರ ಅದರ ಬಗ್ಗೆ ಸುದ್ದಿಯೇ ಇಲ್ಲವಾಯಿತು. ಈಗ ಸ್ಲಂಗಳನ್ನು ಮರೆಮಾಚುತ್ತಿರುವುದು ಸಹ ತಮ್ಮ ಸುಳ್ಳುಗಳನ್ನು ಮುಚ್ಚಿಕೊಳ್ಳಲ್ಲಿಕ್ಕೆ ಆಗಿದೆ ಎಂಬ ಆರೋಪ ಕೇಳಿಬಂದಿದೆ.


