ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿ ಸಿಕ್ಕಿಬಿದ್ದವರನ್ನು ಕೊರೊನಾ ವೈರಸ್ ಆರೈಕೆ ಕೇಂದ್ರಗಳಲ್ಲಿ ಸಮುದಾಯ ಸೇವೆ ಮಾಡಲು ಕಡ್ಡಾಯಗೊಳಿಸುವಂತೆ ಗುಜರಾತ್ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಮಾಸ್ಕ್ ಧರಿಸದೆ ಓಡಾಡುವವರ ದಂಡದ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ. ಮಾಸ್ಕ್ ಧರಿಸದ್ದಕ್ಕೆ ದಂಡ ಕಟ್ಟುವುದರ ಜೊತೆಗೆ ಸಮುದಾಯ ಸೇವೆಯನ್ನೂ ಸಲ್ಲಿಸಬೇಕು.
ಕೊರೊನಾ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯು 5 ರಿಂದ 15 ದಿನಗಳವರೆಗೆ, ದಿನಕ್ಕೆ 4 ರಿಂದ 6 ಗಂಟೆಗಳ ಕಾಲ ಸಮುದಾಯ ಸೇವೆ ಮಾಡಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಜೆ.ಬಿ.ಪಾರ್ಡಿವಾಲಾ ಅವರ ನ್ಯಾಯಪೀಠ ಹೇಳಿದೆ.
ಜೊತೆಗೆ, “ನಿಯಮ ಉಲ್ಲಂಘಿಸಿದವರಿಗೆ ನೀಡಲಾಗುವ ಕೆಲಸಗಳು, ವೈದ್ಯಕೀಯೇತರ ಸ್ಪರೂಪದ್ದಾಗಿರಬೇಕು. ಸ್ವಚ್ಛತಾ ಕಾರ್ಯ, ಮನೆಗೆಲಸ, ಅಡುಗೆ ಮಾಡುವುದು ಮತ್ತು ಬಡಿಸಲು ಸಹಾಯ ಮಾಡುವುದು, ದಾಖಲೆ ತಯಾರಿಕೆ, ದತ್ತಾಂಶ ಸಂಗ್ರಹಣೆ ಇತ್ಯಾದಿಗಳನ್ನು ನೀಡಬೇಕು” ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಕೃಷಿ ಕಾಯ್ದೆ ರದ್ದುಗೊಳಿಸದಿದ್ದರೆ ಎನ್‌ಡಿಎ ತೊರೆಯುತ್ತೇವೆ: ಅಮಿತ್ ಶಾಗೆ ಪತ್ರ ಬರೆದ ಬಿಜೆಪಿಯ ಮತ್ತೊಂದು
ಕೊರೊನಾ ಸಂಬಂಧಿತ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸುವುದನ್ನು ಮುಂದುವರಿಸಲಾಗುವುದು ಎಂದಿರುವ ನ್ಯಾಯಪೀಠ, ಸಮುದಾಯ ಕೇಂದ್ರಗಳಲ್ಲಿ ಸೇವೆಯನ್ನು ಶಿಕ್ಷೆಯಾಗಿ ವಿಧಿಸುವ ನೀತಿಯನ್ನು ತರಲು ಗುಜರಾತ್ ಸರ್ಕಾರಕ್ಕೆ ಆದೇಶಿಸಿದೆ.
ಪ್ರಸ್ತಾವನೆಯನ್ನು ಕಾರ್ಯಗತಗೊಳಿಸಲು ಸರ್ಕಾರ ಬಯಸಿದೆ ಆದರೆ ಅದನ್ನು ಜಾರಿಗೊಳಿಸುವುದು ಒಂದು ಸವಾಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.
ದೇಶದಲ್ಲಿ ಗುಜರಾತ್ ಅತಿಹೆಚ್ಚು ಕೊರೊನಾ ಪೀಡಿತ ರಾಜ್ಯಗಳಲ್ಲಿ ಒಂದಾಗಿದೆ. ಇದು ಈವರೆಗೆ 2 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಕಳೆದ ತಿಂಗಳು ಸೋಂಕು ಹೆಚ್ಚಳದ ಮಧ್ಯೆ, ಗುಜರಾತ್ ಅಹಮದಾಬಾದ್‌ನಲ್ಲಿ ರಾತ್ರಿ ಕರ್ಫ್ಯೂ ಹಾಕಲಾಗಿತ್ತು. ರಾಜ್‌ಕೋಟ್, ಸೂರತ್ ಮತ್ತು ವಡೋದರಾದಲ್ಲೂ ಇದೇ ರೀತಿಯ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
ನಿನ್ನೆಯಷ್ಟೇ ’ಇಡೀ ದೇಶಕ್ಕೆ ಲಸಿಕೆ ಹಾಕುವ ಬಗ್ಗೆ ಸರ್ಕಾರ ಎಂದಿಗೂ ಮಾತನಾಡಲಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. ಆದರೆ ನವೆಂಬರ್ 24 ರಂದು ರಾಜ್ಯಗಳನ್ನುದ್ದೇಶಿಸಿ ಮಾತನಾಡಿದ ದೇಶದ ಪ್ರಧಾನಿ, ದೇಶದ ಪ್ರತಿಯೊಬ್ಬ ಪ್ರಜೆಗೆ ವ್ಯಾಕ್ಸೀನ್ ತಲುಪಲಿದೆ. ಅದಕ್ಕಾಗಿ ಎಲ್ಲಾ ವ್ಯವಸ್ಥೆ ನಡೆದಿದೆ ಎಂದು ಭರವಸೆ ನೀಡಿದ್ದರು.


