ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗುರುಗ್ರಾಮ್ ಸೆಕ್ಟರ್ 57ರಲ್ಲಿ ಆದಿತ್ಯವಾರ ಹಿಂದೂ ಮಹಾಪಂಚಾಯತ್ ಹೆಸರಿನಲ್ಲಿ ನೂರಾರು ಮಂದಿ ಸೇರಿದ್ದು, ಮುಸ್ಲಿಮರಿಗೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರವನ್ನು ಘೋಷಿಸಿದ್ದಾರೆ. ಕಳೆದ ವಾರ ಕೋಮುಗಲಭೆಯ ಸಂದರ್ಭದಲ್ಲಿ ಹಿಂದುತ್ವದ ಗುಂಪೊಂದು ಮಸೀದಿಯ ಮೇಲೆ ದಾಳಿ ನಡೆಸಿ ಉಪ ಇಮಾಮ್‌ರನ್ನು ಹತ್ಯೆಗೈದ ಪ್ರದೇಶದಲ್ಲೇ ಈ ಬೆಳವಣಿಗೆ ನಡೆದಿದೆ.
ಅಂಜುಮನ್ ಮಸೀದಿ ಬಳಿಯಲ್ಲಿ ಇರುವ ಟಿಗ್ರಾ ಹಳ್ಳಿಯಲ್ಲಿ ಮಹಾಪಂಚಾಯತ್ ನಡೆದಿದೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಮಸೀದಿಯ ಮೇಲೆ ದಾಳಿ ಪ್ರಕರಣದ ಆರೋಪಿತರು ಅಮಾಯಕರು ಎಂದು ಸಭೆಯಲ್ಲಿ ಸೇರಿದವರು ಹೇಳಿದ್ದಾರೆ. ಆರೋಪಿಗಳ ಹೆಸರನ್ನು 8 ದಿನಗಳ ಒಳಗೆ ಪ್ರಕರಣದಿಂದ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಪ್ರತಿಭಟನೆ ಮಾಡುವ(ಚಕ್ಕಾ ಜಾಮ್) ಬೆದರಿಕೆಯನ್ನು ಹಾಕಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿ ಬಂಧಿತರ ಬಗ್ಗೆ ಸಾಕ್ಷಿ ಕೊಡಬೇಕು. ಮಸೀದಿ ಬಳಿ ವಾಸಿಸುವ ಕುಟುಂಬವನ್ನು ಟಾರ್ಗೆಟ್ ಮಾಡಲಾಗಿದೆ ಮತ್ತು ದೌರ್ಜನ್ಯ ಮಾಡಲಾಗುತ್ತಿದೆ. ಇದನ್ನು ನಾವು ಮರುಕಳಿಸಲು ಬಿಡುವುದಿಲ್ಲ ಎಂದು ವಜೀರಾಬಾದ್ ಸೆಕ್ಟರ್ 57ರ ಸರಪಂಚ್ ಸುಬೇ ಸಿಂಗ್ ಬೊಹ್ರಾ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಗುರುಗ್ರಾಮ್‌ನಲ್ಲಿ ನೂರಾರು ಮುಸ್ಲಿಂ ಸಮುದಾಯದ ಜನರು ಬಡಗಿಗಳು, ಕ್ಷೌರಿಕರು, ತರಕಾರಿ ಮಾರಾಟಗಾರರು, ಮೆಕ್ಯಾನಿಕ್‌ಗಳು ಮತ್ತು ಕ್ಯಾಬ್ ಡ್ರೈವರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ನಾವು ಯಾವಾಗಲೂ ಅವರನ್ನು ಬೆಂಬಲಿಸುತ್ತೇವೆ. ಆದರೆ ಈಗ ಅವರು ನಗರದ ಅಶಾಂತಿಗೆ ಕಾರಣವಾಗಿದ್ದು, ಅವರನ್ನು ನಾವು ಬೆಂಬಲಿಸುವುದಿಲ್ಲ. ಇನ್ನು ಮುಸ್ಲಿಮರನ್ನು ನಗರದಲ್ಲಿ ಕೆಲಸ ಮಾಡಲು ಬಿಡಬಾರದು. ಅಪಾರ್ಟ್‌ಮೆಂಟ್ ಅಥವಾ ಕೊಳೆಗೇರಿಗಳನ್ನು ಬಾಡಿಗೆಗೆ ನೀಡದಂತೆ ನಾವು ನಗರದ ಜನರಿಗೆ ಮನವಿ ಮಾಡುತ್ತೇವೆ ಎಂದು ಬಜರಂಗದಳದ ಸದಸ್ಯ ಕುಲಭೂಷಣ್ ಭಾರದ್ವಾಜ್ ಹೇಳಿದ್ದಾರೆ.
ಗುರುಗ್ರಾಮ್ ನ ಹಿರಿಯ ಪೊಲೀಸ್ ಅಧಿಕಾರಿ ವಿಕಾಶ್ ಕೌಶಿಕ್ ಅವರು ನಿನ್ನೆ ಎಎನ್ ಐ ಜೊತೆ ಮಾತನಾಡಿ, ಕ್ರಾಯಕ್ರಮ ಶಾಂತಿಯಿಂದ ನಡೆಯಲಿದೆ ಎಂದು ಸಂಘಟಕರು ಪೊಲೀಸರಿಗೆ ತಿಳಿಸಿದ್ದಾರೆ.ಕಳೆದ ಎರಡು ಮೂರು ದಿನಗಳಿಂದ ಗುರುಗ್ರಾಮ ಶಾಂತಿಯುತವಾಗಿದೆ. ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಇಂದಿನ ಪಂಚಾಯತ್ ಶಾಂತಿಯುತವಾಗಿ ನಡೆಯುತ್ತದೆ ಎಂದು ನಾವು ಭಾವಿಸುತ್ತೇವೆ. ನಾವು ಎಲ್ಲರೊಂದಿಗೆ ಮಾತುಕತೆ ನಡೆಸಿದ್ದೇವೆ. ಪಂಚಾಯತ್ ಶಾಂತಿಯುತವಾಗಿ ನಡೆಯುತ್ತದೆ ಎಂದು ಅವರು ನಮಗೆ ಭರವಸೆ ನೀಡಿದ್ದಾರೆ ಪಂಚಾಯತ್ 9 ಗಂಟೆಗೆ ಪ್ರಾರಂಭವಾಗುತ್ತದೆ. ಸುಮಾರು 500-1,000 ಜನರು ಬರುವ ನಿರೀಕ್ಷೆಯಿದೆ ಎಂದು ಹೇಳಿದ್ದರು.ಆದರೆ, ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪೊಲೀಸರು ಏಕೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸುತ್ತಿಲ್ಲ ಎಂದು ಅವರು ಹೇಳಲಿಲ್ಲ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಭಾನುವಾರ ಈ ಬಹಿಷ್ಕಾರದ ಕರೆಯನ್ನು ಖಂಡಿಸಿದೆ. ಪಕ್ಷದ ನಾಲ್ವರು ಸದಸ್ಯರ ನಿಯೋಗ ಭಾನುವಾರ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದೆ.
ಹರ್ಯಾಣ ಜಿಲ್ಲೆಯ ರೇವಾರಿ ಬ್ಲಾಕ್ ದಹಿನಾದಿಂದ ಜೈನಾಬಾದ್ ಪಂಚಾಯತ್ ಸರಪಂಚ ಭಾವನಾ ಯಾದವ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ,ಬಿಜೆಪಿ ಆಡಳಿತದಲ್ಲಿ ವ್ಯವಸ್ಥಿತವಾಗಿ ಬೆಳೆಸಲಾಗುತ್ತಿರುವ ಅಲ್ಪಸಂಖ್ಯಾತರ ವಿರುದ್ಧ ಸಂಘಟಿತ ತಾರತಮ್ಯದ ಕಹಿ ವಾಸ್ತವವನ್ನು ಈ ಬೆಳವಣಿಗೆ ಬಹಿರಂಗಪಡಿಸುತ್ತದೆ ಎಂದು ಹೇಳಿದ್ದಾರೆ.
ಪತ್ರದಲ್ಲಿ ಆಘಾತಕಾರಿ ವಿಚಾರ ಉಲ್ಲೇಖಿಸಲಾಗಿದೆ. ಪಂಚಾಯತ್ ಪ್ರದೇಶದಲ್ಲಿ ಮುಸ್ಲಿಮರು ಅಥವಾ ದುಷ್ಕರ್ಮಿಗಳು ಯಾವುದೇ ವ್ಯಾಪಾರ ಚಟುವಟಿಕೆಯನ್ನು ಮಾಡಲು ಅನುಮತಿಸುವುದಿಲ್ಲ ಎಂಬ ನಿರ್ಧಾರವನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸುತ್ತದೆ. ಇದರಲ್ಲಿ ಮುಸ್ಲಿಮರನ್ನು ಕಳ್ಳರು ಮತ್ತು ದನ-ಕಳ್ಳರಿಗೆ ಸಮನಾಗಿರುತ್ತದೆ ಎಂದು ಹೇಳಲಾಗಿದೆ ಎನ್ನಲಾಗಿದೆ.
ಗ್ರಾಮದಲ್ಲಿ ಶಾಂತಿಯನ್ನು ಖಾತ್ರಿಪಡಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ, ಗ್ರಾಮದಲ್ಲಿ ಮುಸ್ಲಿಮರ ಉಪಸ್ಥಿತಿಯು ಕೋಮುಗಲಭೆಗೆ ಏಕೈಕ ಕಾರಣವಾಗಿದೆ ಎಂದು ಬಿಂಬಿಸಲಾಗಿದೆ.


