ಹರಿಯಾಣದ ಬಿಜೆಪಿ ಸರ್ಕಾರವು ನುಹ್ ಜಿಲ್ಲೆಯಲ್ಲಿನ ವಲಸೆ ಕಾರ್ಮಿಕರ ಕಟ್ಟಡ ಹಾಗೂ ಗುಡಿಸಲುಗಳನ್ನು ನೆಲಸಮ ಮಾಡುವ ಕಾರ್ಯಾಚರಣೆ ನಡೆಸುತ್ತಿದ್ದು, ಈ ಕಾರ್ಯಾಚರಣೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೋಮವಾರ ತಡೆ ನೀಡಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಗುರುವಾರದಿಂದ ನಾಲ್ಕು ದಿನಗಳ ಕಾಲ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಅಕ್ರಮ ಮನೆಗಳು ಮತ್ತು ಅಂಗಡಿಗಳನ್ನು ನೆಲಸಮಗೊಳಿಸುತ್ತಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಮುಸ್ಲಿಂ ವಲಸೆ ಕಾರ್ಮಿಕರಿಗೆ ಸೇರಿದವುಗಳಾಗಿವೆ.
ಕಳೆದ ವಾರ ನುಹ್‌ನಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ವಿರುದ್ಧದ ಕ್ರಮವಾಗಿ ಈ ಕಾರ್ಯಾಚರಣೆ ನಡೆಸಲಾಯಿತು. ನುಹ್ ಮತ್ತು ನೆರೆಯ ಗುರುಗ್ರಾಮ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಹೋಮ್ ಗಾರ್ಡ್‌ಗಳು, ಮಸೀದಿಯ ಇಮಾಮ್ ಮತ್ತು ಬಜರಂಗದಳದ ಸದಸ್ಯ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ.
ಸೋಮವಾರ, ನ್ಯಾಯಮೂರ್ತಿ ಜಿಎಸ್ ಸಂಧವಾಲಿಯಾ ಮತ್ತು ನ್ಯಾಯಮೂರ್ತಿ ಹರ್‌ಪ್ರೀತ್ ಕೌರ್ ಜೀವನ್ ಅವರ ವಿಭಾಗೀಯ ಪೀಠವು, ಈ ವಿಷಯವನ್ನು ಕೈಗೆತ್ತಿಕೊಂಡಿತು. ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಮನೋಹರ್ ಲಾಲ್ ಖಟ್ಟರ್ ಸರ್ಕಾರಕ್ಕೆ ನ್ಯಾಯಮೂರ್ತಿಗಳು ನೋಟಿಸ್ ಜಾರಿ ಮಾಡಿದ್ದಾರೆ. ವಿವರವಾದ ಆದೇಶವನ್ನು ಇನ್ನೂ ನೀಡಲಾಗಿಲ್ಲ, ಮತ್ತು ನ್ಯಾಯಾಲಯವು ಪ್ರಕರಣವನ್ನು ಒಂದು ದಿನದ ನಂತರ ಮತ್ತೆ ಕೈಗೆತ್ತಿಕೊಳ್ಳಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜುಲೈ 31 ರಂದು, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯ ಮೆರವಣಿಗೆಯಲ್ಲಿ ಮೊದಲು ಕೋಮು ಘರ್ಷಣೆಗಳು ಭುಗಿಲೆದ್ದವು. ಆನಂತರ ಅದು ತ್ವರಿತವಾಗಿ ಜಿಲ್ಲೆಯಾದ್ಯಂತ ಹರಡಿತು.
ಗುರುಗ್ರಾಮ್‌ನಲ್ಲಿ ಹಿಂದೂ ಗುಂಪುಗಳು ಅತಿರೇಕಕ್ಕೆ ಹೋದವು. ಸೆಕ್ಟರ್ 57 ರಲ್ಲಿ ಮಸೀದಿಯನ್ನು ಸುಟ್ಟುಹಾಕಿದರು. ಅದರ ಉಪ ಇಮಾನನ್ನು ಕೊಂದರು ಮತ್ತು ಮರುದಿನ ಸೆಕ್ಟರ್ 70ರಲ್ಲಿ ಮುಸ್ಲಿಂ ವಲಸೆ ಕಾರ್ಮಿಕರ ಅಂಗಡಿಗಳು ಮತ್ತು ಗುಡಿಸಲುಗಳಿಗೆ ಬೆಂಕಿ ಹಚ್ಚಿದರು.
ಗುರುವಾರ, ಹರಿಯಾಣ ಸರ್ಕಾರವು ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿದ ಆರೋಪದ ಮೇಲೆ ಜಿಲ್ಲೆಯ ಟೌರು ಪಟ್ಟಣದಲ್ಲಿ 250ಕ್ಕೂ ಹೆಚ್ಚು ಮುಸ್ಲಿಂ ವಲಸೆ ಕಾರ್ಮಿಕರ ಗುಡಿಸಲುಗಳನ್ನು ನೆಲಸಮಗೊಳಿಸಿದೆ. ಶುಕ್ರವಾರ ಇದೇ ಆಧಾರದ ಮೇಲೆ ಹಲವಾರು ಮನೆಗಳು ಮತ್ತು ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ.
ಶನಿವಾರ, ನಲ್ಹಾರ್‌ನ ಶಹೀದ್ ಹಸನ್ ಖಾನ್ ಮೇವಾಟಿ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿ ಸುಮಾರು ಒಂದು ಡಜನ್ ಅಂಗಡಿಗಳನ್ನು, ಹೆಚ್ಚಾಗಿ ಔಷಧಾಲಯಗಳನ್ನು ಧ್ವಂಸಗೊಳಿಸಲಾಯಿತು. ಭಾನುವಾರ, ನುಹ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪದ ಮೇಲೆ ಹೋಟೆಲ್‌ನ್ನು ಬುಲ್ಡೋಜರ್‌ನಿಂದ ನೆಲಸಮಗೊಳಿಸಲಾಯಿತು.
ಇದನ್ನೂ ಓದಿ: ಹರಿಯಾಣ: ಪ್ರಚೋದನಕಾರಿ ವಿಡಿಯೋ ಶೇರ್ ಮಾಡುತ್ತಿರುವ ಬಲಪಂಥೀಯ ಮಾಧ್ಯಮಗಳಿಗೆ ಡಿಜಿಪಿ ಎಚ್ಚರಿಕೆ


