ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಕೆಪಿಆರ್‌ಎಸ್ ಜಿಲ್ಲಾ ಸಮಿತಿ ಆಗ್ರಹಿಸಿದೆ.
“ಕಲ್ಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟೆಮನೆ ವೃತ್ತದಲ್ಲಿ ಗ್ರಂಥಾಲಯವಿತ್ತು. ಈ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಸಾರ್ವಜನಿಕರ ಉಪಯೋಗಕ್ಕಾಗಿ ಇದನ್ನು ದುರಸ್ತಿಗೊಳಿಸಿ, ಕಟ್ಟಡವನ್ನು ಉನ್ನತೀಕರಿಸಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಅನುಗುಣವಾಗಿ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಅಭಿವೃದ್ಧಿಗೊಳಿಸಲು ವಾಸುದೇವ ರವರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಪಂಚಾಯತಿ ಆಸ್ತಿ ಕಬಳಿಸುವ ದುರುದ್ದೇಶ ಹೊಂದಿದ್ದ, ಇದೇ ಸರ್ವೆ ನಂಬರ್ ಗೆ ಹೊಂದಿಕೊಂಡು ಇರುವ ಬಹು ಕೋಟಿ ಬೆಲೆ ಬಾಳುವ ಸುಮಾರು 11 ಎಕರೆ ಸರ್ಕಾರಿ ಭೂಮಿ ಕಬಳಿಸುವ ದುರುದ್ದೇಶದಿಂದ ಆಶೋಕ ನೇತೃತ್ವದ ಸುಮಾರು ಎಂಟು ಜನರಷ್ಟು ಇದ್ದ ಗೂಂಡಾಗಳು, ದಿನಾಂಕ 08-04-26 ರಂದು ಸಂಜೆ 6-30 ರ ಸಮಯದಲ್ಲಿ ಗ್ರಂಥಾಲಯ ದುರಸ್ತಿ ಕಾರ್ಯ ಮೇಲ್ವಿಚಾರಣೆ ನಡೆಸುತ್ತಿದ್ದ ವಾಸುದೇವ ರವರ ಮೇಲೆ ಹಲ್ಲೆ ನಡೆಸಿ ಗ್ರಂಥಾಲಯ ದುರಸ್ತಿ ಕಾರ್ಯ ನಿಲ್ಲಿಸುವಂತೆ ಜೀವ ಬೆದರಿಕೆ ಹಾಕಿದ್ದಾರೆ. ಸ್ಥಳೀಯ ಜನರ ಸಕಾಲಿಕ ಮಧ್ಯಪ್ರವೇಶದಿಂದ ವಾಸುದೇವರವರ ಪ್ರಾಣ ಉಳಿದಿದೆ” ಎಂದು ” ಎಂದು ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆ ನುಗ್ಗೇಹಳ್ಳಿ ಪಿಎಸ್ ಐ ರವರಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಭೇಟಿ ನೀಡದೇ ಹಾಗೂ ದೂರು ದಾಖಲಿಸಿಕೊಳ್ಳಲು ಅನಗತ್ಯ ವಿಳಂಬ ಮಾಡುವ ಮೂಲಕ ದೌರ್ಜನ್ಯ ನಡೆಸಿದ ಗೂಂಡಾಗಳ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಇಂತಹ ಗಂಭೀರ ಸ್ವರೂಪದ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆದಾಗಲೂ ದೂರು ತೆಗೆದುಕೊಳ್ಳಲು ನಿರಾಕರಿಸಿದ ಕುರಿತು ಇಲಾಖೆ ವಿಚಾರಣೆ ನಡೆಸಬೇಕು, ಕೂಡಲೇ ಎಲ್ಲಾ ಗೂಂಡಾಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಗೃಹ ಸಚಿವರನ್ನು ಹಾಗೂ ರಾಜ್ಯ ಸರ್ಕಾರವನ್ನು ಕರ್ನಾಟಕ ಪ್ರಾಂತ ರೈತ ಸಂಘ ಹಾಸನ ಜಿಲ್ಲಾ ಸಮಿತಿ ಆಗ್ರಹಿಸಿದೆ.


