Homeಅಂಕಣಗಳುಮುತ್ತು-ಸುತ್ತು: ಗಗನಚುಕ್ಕಿ, ಭರಚುಕ್ಕಿ ಜಲಪಾತ ನೋಡಿದ್ದೀರಾ?

ಮುತ್ತು-ಸುತ್ತು: ಗಗನಚುಕ್ಕಿ, ಭರಚುಕ್ಕಿ ಜಲಪಾತ ನೋಡಿದ್ದೀರಾ?

- Advertisement -
- Advertisement -

’ಜೀವನದಾಗೆ ಒಮ್ಮೆ ನೋಡಿ ಜೋಗದ ಗುಂಡಿ’ ಅಂತ ಮೂಗೂರು ಮಲ್ಲಪ್ಪನವರು ಬರೆದ ಹಾಡನ್ನು ಅಣ್ಣಾವ್ರು ಜೀವನಚೈತ್ರ ಸಿನಿಮಾದಲ್ಲಿ ಹಾಡಿದ್ದು ಕೇಳಿ ಎಷ್ಟೋ ಜನ ಜೋಗ ಜಲಪಾತ ನೋಡಿರಬಹುದು. ಇನ್ನು ಕೆಲವರಿಗೆ ಬೆಂಗಳೂರಿನಿಂದ ದೂರವಿರುವ (400 ಕಿ.ಮೀ) ಜೋಗ ಜಲಪಾತವನ್ನು ಒಂದು ದಿನದಲ್ಲಿ ನೋಡಿಬರಲು ಆಗದೇ ಇರಬಹುದು. ಜೋಗ ನೋಡಿರುವವರು ಮತ್ತು ನೋಡದೇ ಇರುವವರು ಎಲ್ಲರೂ ನೋಡಲೇಬೇಕಾದ, ಬೆಂಗಳೂರಿನಿಂದ ಒಂದು ದಿನದಲ್ಲಿ ನೋಡಿ ಬರಬಹುದಾದ ಆಕರ್ಷಕ ಪ್ರೇಕ್ಷಣೀಯ ಸ್ಥಳವೆಂದರೆ ಗಗನಚುಕ್ಕಿ, ಭರಚುಕ್ಕಿ ಜಲಪಾತ.

ಬೆಂಗಳೂರಿನಿಂದ 130 ಕಿ.ಮೀ ದೂರವಿರುವ, ಮಂಡ್ಯ ಮತ್ತು ಚಾಮರಾಜನಗರ ಗಡಿಭಾಗ ಶಿವನಸಮುದ್ರ ಎಂಬ ಊರಿನಲ್ಲಿರುವ ಈ ಎರಡು ಜಲಪಾತಗಳು ಮನಸ್ಸಿಗೆ ಮುದ ನೀಡುವುದರಲ್ಲಿ ಸಂದೇಹವೇ ಇಲ್ಲ. ಬೆಂಗಳೂರಿನಿಂದ ಕನಕಪುರ ಮಳವಳ್ಳಿ ಅಥವಾ ರಾಮನಗರ-ಮದ್ದೂರು-ಮಳವಳ್ಳಿ ಮಾರ್ಗದಲ್ಲಿ ನಾವು ಶಿವನಸಮುದ್ರ ತಲುಪಬಹುದು. ಜೂನ್‌ನಿಂದ ಜನವರಿವರೆಗಿನ ಸಮಯವು ಈ ಪ್ರವಾಸಕ್ಕೆ ಸೂಕ್ತವಾಗಿದ್ದು ದಾರಿಯುದ್ದಕ್ಕೂ ಹಸಿರು ಮರಗಳು, ಬೆಟ್ಟಗಳು ಕಣ್ಮನ ಸೆಳೆಯುತ್ತವೆ.

ಕಾವೇರಿ ಮತ್ತು ಕಬಿನಿ ನದಿಗಳು ಒಟ್ಟಾಗಿ ಹರಿಯುವಾಗ ಎರಡು ಕವಲಾಗಿ ಹೊಡೆದು ಎತ್ತರದಿಂದ ಧುಮ್ಮಿಕ್ಕುವುದೇ ಗಗನಚುಕ್ಕಿ, ಭರಚುಕ್ಕಿ ಜಲಪಾತಗಳಾಗಿವೆ. ಗಗನಚುಕ್ಕಿ ಜಲಪಾತವು ಮಂಡ್ಯ ಜಿಲ್ಲೆಯ ಮಳವಳ್ಳಿ ಜಿಲ್ಲೆಯ ವ್ಯಾಪ್ತಿಗೆ ಬಂದರೆ, ಭರಚುಕ್ಕಿಯು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಗೆ ಬರುತ್ತದೆ.

ಐತಿಹಾಸಿಕ ಮಹತ್ವ

ಈ ಎರಡು ಜಲಪಾತಗಳನ್ನು ಶಿಂಷಾ ಜಲಪಾತ ಎಂತಲೂ ಕರೆಯುತ್ತಾರೆ. ಕಾರಣವೆಂದರೆ 1902ರಲ್ಲಿ ಇಲ್ಲಿ ಶಿಂಷಾ ಜಲವಿದ್ಯುತ್ ಉತ್ಪಾದನೆಯನ್ನು ಆರಂಭಿಸಲಾಗಿತ್ತು. ಅಂದರೆ 120 ವರ್ಷದ ಹಿಂದೆಯೇ ಇಲ್ಲಿ ಜಲವಿದ್ಯುತ್ ಉತ್ಪಾದಿಸಿ ಕೋಲಾರ್ ಗೋಲ್ಡ್ ಫೀಲ್ಡ್‌ನಲ್ಲಿ (ಕೆಜಿಎಫ್ ಕೋಲಾರ) ಚಿನ್ನದ ಗಣಿಗಾರಿಕೆ ನಡೆಸಲು ಸರಬರಾಜು ಮಾಡಲಾಗುತ್ತಿತ್ತು. ಇದು ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಎಂದು ಪ್ರಸಿದ್ಧಿಯಾಗಿದೆ. ಹಾಗೆಯೇ ಶಿವನ ಸಮುದ್ರ ಊರಿನ ಪಕ್ಕ ಈ ಜಲಪಾತಗಳಿರುವುದಿಂದ ಶಿವನಸಮುದ್ರ ಜಲಪಾತ, ಬ್ಲಫ್ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತದೆ.

ಗಗನ ಚುಕ್ಕಿ

ಕಾವೇರಿ ಮತ್ತು ಕಬಿನಿ ನದಿಗಳು ಒಟ್ಟಾಗಿ ಧುಮ್ಮಿಕ್ಕುವುದೇ ಗಗನ ಚುಕ್ಕಿ ಜಲಪಾತ. ಈ ಜಲಪಾತವನ್ನು ನೋಡಲಿಕ್ಕಾಗಿಯೇ ದೂರದಿಂದ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ. ಅಲ್ಲಿ ಸರ್ಕಾರದ ಮಯೂರ ಹೋಟೆಲ್ ಸಹ ಇದ್ದು ತಂಗಲು ಬಯಸುವವರಿಗೆ ಅವಕಾಶವಿದೆ. 75 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ನೋಡಲು ಸಾಕಷ್ಟು ಪ್ರವಾಸಿಗರು ನೆರೆಯುತ್ತಾರೆ. ಅಲ್ಲದೆ ಜಲಪಾತದ ಸಮೀಪದಲ್ಲಿಯೇ ಹಜರತ್ ಮರ್ದಾನ ಎ-ಫೈಬ್ ಎಂಬ ದರ್ಗಾ ಇದ್ದು ಅಲ್ಲಿಂದ ಬಹಳ ಹತ್ತಿರದಲ್ಲಿ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು.

ಭರಚುಕ್ಕಿ

ಕಾವೇರಿ ನದಿಯ ಮತ್ತೊಂದು ಕವಲು ಭರಚುಕ್ಕಿಯಾಗಿ ಧುಮ್ಮಿಕ್ಕುತ್ತದೆ. ಐದಾರು ಕಡೆ ಹಾಲುನೊರೆಯಂತೆ ಉಕ್ಕುವ ನೀರು ದೊಡ್ಡ ಸದ್ದು ಮಾಡುತ್ತದೆ. ಪೂರ್ತಿ ತಳದವರೆಗೂ ಹೋಗಲು ಮೆಟ್ಟಿಲುಗಳಿದ್ದು, ಈ ಮುಂಚೆ ನೀರು ಬೀಳವವರೆಗೂ ಹೋಗಿ ಮೈಯೊಡ್ಡಬಹುದಿತ್ತು. ಆದರೆ ನೀರಿನ ರಭಸ ಹೆಚ್ಚಾದಂತೆ ಈಗ ಕೆಳಗಿಳಿಯಲು ಅವಕಾಶವಿಲ್ಲ. ಮೇಲಿಂದಲೇ ನೋಡಲು ವೀಕ್ಷಣಾ ಗೋಪುರಗಳಿದ್ದು ಅಲ್ಲಿಂದಲೆ ಜಲಪಾತದ ಸೌಂದರ್ಯ ಸವಿಯಬಹುದು.

ಗಗನಚುಕ್ಕಿ, ಭರಚುಕ್ಕಿ ಜಲಪಾತೋತ್ಸವ

ಈ ಜಲಪಾತಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಕರ್ನಾಟಕ ಸರ್ಕಾರವು ಇಲ್ಲಿ ಪ್ರತಿವರ್ಷ ’ಗಗನಚುಕ್ಕಿ, ಭರಚುಕ್ಕಿ ಜಲಪಾತೋತ್ಸವ’ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುತ್ತದೆ. ಖ್ಯಾತ ಚಲನಚಿತ್ರ ನಟ-ನಟಿಯರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸುತ್ತಿತ್ತು. ಆದರೆ ಕಳೆದ ವರ್ಷದ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಅದನ್ನು ಸ್ಥಗಿತಗೊಳಿಸಲಾಗಿದೆ. 2021ರ ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ಕಾರ್ಯಕ್ರಮ ನಡೆಸುವ ನಿರೀಕ್ಷೆಯಿದೆ.

ಪ್ಲಾಸ್ಟಿಕ್ ಮುಕ್ತ ವಲಯ

ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಈ ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತ ವಲಯಗಳಾಗಿ ಘೋಷಿಸಲಾಗಿದೆ. ಹಾಗಾಗಿ ರಸ್ತೆಗಳು ಮತ್ತು ಅಲ್ಲಿನ ಪ್ರವಾಸಿತಾಣಗಳು ಸುಂದರವಾಗಿಯೂ, ಸ್ವಚ್ಛವಾಗಿಯೂ ಕಂಗೊಳಿಸುತ್ತಿವೆ. ಕುಟುಂಬಸಮೇತ ಯಾವುದೇ ಕುಂದುಕೊರತೆಗಳಿಲ್ಲದೆ ಪ್ರವಾಸ ಮಾಡಬಹುದಾದ ಸ್ಥಳ ಇದಾಗಿದೆ. ಇಲ್ಲಿ ಮೀನು ಮತ್ತು ಫಾಸ್ಟ್‌ಫುಡ್ ಮಾತ್ರ ದೊರೆಯುತ್ತಿದ್ದು, ಹತ್ತಿರದಲ್ಲಿ ಹೇಳಿಕೊಳ್ಳುವ ಉತ್ತಮ ಹೋಟೆಲ್‌ಗಳಿಲ್ಲ. ಮನೆಯಿಂದಲೇ ಅಡುಗೆ ಮಾಡಿ ಒಯ್ದರೆ ಜಲಪಾತ ನೋಡುತ್ತಾ ಊಟ ಮಾಡಬಹುದು.

ದೋಣಿವಿಹಾರ

ನಾವು ಶಿವನಸಮುದ್ರ ಗ್ರಾಮ ತಲುಪುವ ಮೊದಲೇ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಬಳಿ ವಿಸ್ತಾರ ನದಿ ಕಾಣಬಹುದು. ಅಲ್ಲಿ ಮೀನುಗಾರರು ದೋಣಿ ನಡೆಸುತ್ತಾರೆ. ನೀರಿನ ಹರಿವು ಕಡಿಮೆ ಇದ್ದಾಗ ಆಸಕ್ತರು ತೆಪ್ಪದಲ್ಲಿ ವಿಹಾರ ನಡೆಸಬಹುದು. ಮಕ್ಕಳಂತೂ ಇದನ್ನು ತುಂಬಾ ಖುಷಿಪಟ್ಟು ಸಂಭ್ರಮಿಸುತ್ತಾರೆ.

ಹತ್ತಿರದ ಇತರ ಸ್ಥಳಗಳು

ಶಿವನ ಸಮುದ್ರದ ಅನತಿ ದೂರದಲ್ಲಿಯೇ ತಲಕಾಡು ಇದೆ. ಅಲ್ಲಿನ ಹೊಳೆಯಲ್ಲಿ ಈಜಾಡಬಹುದು. ಇನ್ನೂ ಮುಂದೆ ಹೋದರೆ ಸೋಮನಾಥಪುರ ದೇವಾಲಯ ನೋಡಬಹುದು. ಇನ್ನು ಬೆಂಗಳೂರಿನತ್ತ ಕನಕಪುರ ಮಾರ್ಗದಲ್ಲಿ ವಾಪಸ್ ಬರುವಾಗ ಸಂಗಮ, ತಲಕಾಡು, ಚುಂಚಿ ಫಾಲ್ಸ್, ಟಿಕೆ ಫಾಲ್ಸ್ ನೋಡಬಹುದು.

ಬಸ್ ವ್ಯವಸ್ಥೆ

ಸಮಯದ ದೃಷ್ಟಿಯಿಂದ ಸ್ವಂತ ವಾಹನದಲ್ಲಿ ಈ ಸ್ಥಳಗಳಿಗೆ ಭೇಟಿ ಕೊಟ್ಟರೆ ಒಳ್ಳೆಯದು. ಇಲ್ಲದಿದ್ದಲ್ಲಿ ಬೆಂಗಳೂರಿನಿಂದ ಮಳವಳ್ಳಿಗೆ ಬಸ್ ಹಿಡಿಯಬೇಕು ಮತ್ತು ಅಲ್ಲಿಂದ ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ಗೆ ಬಸ್ ವ್ಯವಸ್ಥೆ ಇದೆ. ಅಲ್ಲಿಂದ ಆಟೊದಲ್ಲಿ ಪ್ರಯಾಣಿಸಬೇಕು.


ಇದನ್ನೂ ಓದಿ: ಮುತ್ತು-ಸುತ್ತು: ಕುಂತಿ ಬೆಟ್ಟ ಹತ್ತಿ ನೋಡಿ, ತೊಣ್ಣೂರು ಕೆರೆಯಲ್ಲಿ ಈಜಾಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಬಿನಿ,ಕಾವೇರಿ ಹೊಳೆಗಳು ಗಗನಚುಕ್ಕಿ,ಬರಚುಕ್ಕಿ ಗಳಿಂದ ಮೊದಲು ಸುಮಾರು ೨೦ ಕಿಮೀ ದೂರದ ತಿರುಮಕೂಡಲು ನರಸಿಪುರದಿಂದ ಸೇರುತ್ತವೆ.
    ತರುವಾಯ ಒಂದಾಗಿ ಹರಿಯುವ ಹೊಳೆ ಸತ್ತೇಗಾಲದ ತರುವಾಯ ಎರಡಾಗಿ ಈ ಎರಡು ಅಬ್ಬಿಗಳುಂಟಾಗುತ್ತವೆ.

LEAVE A REPLY

Please enter your comment!
Please enter your name here

- Advertisment -