ಸಮಾಜದಲ್ಲಿ ದ್ವೇಷ ಹರಡುತ್ತಿರುವ ಜಾತಿ ಆಧಾರಿತ ರಾಜಕೀಯ ಪಕ್ಷ, ಸಂಘಟನೆ ಮತ್ತು ಯೂಟ್ಯೂಬ್ ಚಾನೆಲ್ ಇತ್ಯಾದಿಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಂಬಂಧ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಶುಕ್ರವಾರ (ಜ.10) ತಮಿಳುನಾಡು ರಾಜ್ಯ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ.
ಚುನಾವಣಾ ಆಯೋಗದಲ್ಲಿ ಸರಿಯಾಗಿ ನೋಂದಣಿಯಾಗದ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸದ ಎಲ್ಲಾ ಜಾತಿ ಆಧಾರಿತ ರಾಜಕೀಯ ಪಕ್ಷಗಳು ಮತ್ತು ತಮಿಳುನಾಡು ಸಮಾಜ ನೋಂದಣಿ ಕಾಯ್ದೆಯ ಪ್ರಕಾರ ಕಾರ್ಯನಿರ್ವಹಿಸದ ಮತ್ತು ನಿಯಮಿತವಾಗಿ ತಮ್ಮ ವಾರ್ಷಿಕ ವರದಿಯನ್ನು ಸಲ್ಲಿಸದ ಎಲ್ಲಾ ಜಾತಿ ಆಧಾರಿತ ಸಂಘ, ಸಂಸ್ಥೆಗಳು ಮತ್ತು ಜಾತಿ ಆಧಾರಿತ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಬೇಕು ಎಂದು ಅರ್ಜಿದಾರ ಮಧುರೈನ ಸಿ ಸೆಲ್ವಕುಮಾರ್ ನ್ಯಾಯಾಲಯವನ್ನು ಕೋರಿದ್ದಾರೆ.
ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ರಚಿಸಲಾದ ಎಸ್‌ಸಿ/ಎಸ್‌ಟಿ ರಕ್ಷಣಾ ತಂಡವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರಕ್ಕೆ ಸೂಚನೆ ನೀಡುವಂತೆಯೂ ಅರ್ಜಿದಾರ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿಗಳಾದ ಎಂ.ಎಸ್. ರಮೇಶ್ ಮತ್ತು ಎ.ಡಿ. ಮಾರಿಯಾ ಕ್ಲೀಟ್ ಅವರನ್ನೊಳಗೊಂಡ ಪೀಠವು ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ಅವರಿಂದ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ಕೋರಿದೆ. ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿದೆ.
ರಾಜಸ್ಥಾನ| ದಲಿತ ವ್ಯಕ್ತಿಯನ್ನು ಮರಕ್ಕೆ ತಲೆಕೆಳಗಾಗಿ ಕಟ್ಟಿ ಥಳಿಸಿದ ಮೂವರ ಬಂಧನ


