ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ‘ಗೌರಿ ದಿನ’ ಕಾರ್ಯಕ್ರಮದಲ್ಲಿ, ಹಿರಿಯ ಸುಪ್ರೀಂ ಕೋರ್ಟ್ ವಕೀಲರಾದ ಸಂಜಯ್ ಹೆಗ್ಡೆ ಅವರು, ‘ಅಪಾಯದ ಸುಳಿಯಲ್ಲಿ ಭಾರತದ ಪ್ರಜಾತಂತ್ರ: ಚುನಾವಣಾ ಪ್ರಕ್ರಿಯೆಯ ಆಯುಧೀಕರಣ’ ಎಂಬ ವಿಷಯದ ಕುರಿತು ನಡೆದ ಸಂವಾದದಲ್ಲಿ ದೇಶದ ಪ್ರಜಾಪ್ರಭುತ್ವದ ಭವಿಷ್ಯದ ಕುರಿತು ಕಳವಳ ವ್ಯಕ್ತಪಡಿಸಿದರು.
ಪ್ರಜಾತಂತ್ರವು ಅಪಾಯದಲ್ಲಿರುವ ಈ ಸಂದರ್ಭದಲ್ಲಿ, ನಾವು ಭಾರತೀಯ ಪ್ರಜೆಗಳಾಗಿ ನ್ಯಾಯಸಮ್ಮತ ಮತ್ತು ಮುಕ್ತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ನಮ್ಮ ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಕಾಪಾಡಬೇಕು ಎಂದು ಅವರು ಕರೆ ನೀಡಿದರು.
ಕಳೆದ ಒಂದು ದಶಕದಿಂದ ನಿರ್ದಿಷ್ಟ ಧರ್ಮದ ಜನರನ್ನು ದೇಶದ ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಹೆಗ್ಡೆ ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ವಿವಾದಾತ್ಮಕ ಸಿಎಎ ಕಾಯ್ದೆ ಮತ್ತು ಚುನಾವಣಾ ಆಯೋಗದ ‘ಎಸ್‌ಐಆರ್’ (Special Intensive Revision) ಯೋಜನೆ ಇದಕ್ಕೆ ಸ್ಪಷ್ಟ ಉದಾಹರಣೆಗಳು. ಈ ಯೋಜನೆಗಳು ಉದ್ದೇಶಪೂರ್ವಕವಾಗಿ ಮುಸ್ಲಿಂ ಸಮುದಾಯವನ್ನು ಪ್ರತ್ಯೇಕಿಸುವ ಒಂದು ಕುತಂತ್ರ ಎಂದು ಅವರು ಆರೋಪಿಸಿದರು.

ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗ ಜಾರಿಗೊಳಿಸಿರುವ ಎಸ್‌ಐಆರ್ ಯೋಜನೆಯು ಒಂದು ನಿರ್ದಿಷ್ಟ ಪಕ್ಷಕ್ಕೆ ಮತ ಚಲಾಯಿಸದವರನ್ನು, ಅದರಲ್ಲೂ ವಿಶೇಷವಾಗಿ ಮುಸ್ಲಿಮರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ದುರುದ್ದೇಶವನ್ನು ಹೊಂದಿದೆ ಎಂದು ಅವರು ವಿವರಿಸಿದರು.
ಆರಂಭದಲ್ಲಿ, ಗುರುತಿನ ದೃಢೀಕರಣಕ್ಕಾಗಿ ಪ್ರಮುಖ ದಾಖಲೆಯಾದ ಆಧಾರ್ ಅನ್ನು ಆಯೋಗ ಮಾನ್ಯ ಮಾಡಲು ಹಿಂಜರಿಯಿತು. ಆದರೆ, ಸುಪ್ರೀಂ ಕೋರ್ಟ್‌ನ ತೀವ್ರ ಆಕ್ಷೇಪದ ನಂತರವೇ ಆಧಾರ್ ಅನ್ನು ಮಾನ್ಯತೆ ಎಂದು ಪರಿಗಣಿಸಲು ಒಪ್ಪಿಕೊಂಡಿತು. ಸ್ವಾತಂತ್ರ್ಯಾನಂತರ, ಮೌಲಾನಾ ಆಜಾದ್, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಜವಾಹರಲಾಲ್ ನೆಹರು ಅವರಂತಹ ದೂರದರ್ಶಿ ನಾಯಕರು ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಹಕ್ಕುಗಳನ್ನು ಖಚಿತಪಡಿಸಿದ್ದರು. ಆದರೆ, ಪ್ರಸ್ತುತ ಆಡಳಿತಾರೂಢ ಸರ್ಕಾರವು ಧರ್ಮ ಆಧಾರಿತ ವಿಭಜಕ ನೀತಿಗಳನ್ನು ಅನುಸರಿಸಿ, ಮುಸ್ಲಿಂ ಸಮುದಾಯವನ್ನು ಕಡೆಗಣಿಸುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೆಗ್ಡೆ ತೀವ್ರವಾಗಿ ಟೀಕಿಸಿದರು.
ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಸರ್ಕಾರವು ಭಾರತದಿಂದ ವಲಸೆ ಹೋಗಿದ್ದವರು ಮರಳಿ ಬಂದು ಇಲ್ಲಿ ನೆಲೆಸಲು ಅವಕಾಶ ನೀಡಿತ್ತು. ಅಸ್ಸಾಂನ ಸಾಂಸ್ಕೃತಿಕ ಪರಂಪರೆಯು ಬಾಂಗ್ಲಾದೇಶದಿಂದ ಬಂದ ವಲಸಿಗರ ಕೊಡುಗೆಯಿಂದಲೂ ಸಮೃದ್ಧಗೊಂಡಿದೆ. ಆದರೆ, ಪ್ರಸ್ತುತ ಸರ್ಕಾರವು ಬಾಂಗ್ಲಾ ಮುಸ್ಲಿಮರು ಭಾರತೀಯರಲ್ಲ ಎಂದು ಸುಳ್ಳು ಪ್ರಚಾರದ ಮೂಲಕ ಸಾರ್ವಜನಿಕರಲ್ಲಿ ದ್ವೇಷದ ಭಾವನೆ ಕೆರಳಿಸುತ್ತಿದೆ ಎಂದು ಅವರು ದೂರಿದರು.
ನಾಗರಿಕತ್ವ ಎಂದರೆ ಕೇವಲ ಹಕ್ಕುಗಳನ್ನು ಹೊಂದುವುದು ಮಾತ್ರವಲ್ಲ, ಅದು ರಾಷ್ಟ್ರದ ಗುರುತಿನ ಮಾನ್ಯತೆಯೂ ಹೌದು. ವಿಭಜನೆಯ ಸಂದರ್ಭದಲ್ಲಿ ಭಾರತದಲ್ಲಿ ಉಳಿಯಲು ನಿರ್ಧರಿಸಿದವರು ನಿಸ್ಸಂದೇಹವಾಗಿ ಭಾರತೀಯರು ಎಂಬುದು ಒಂದು ದೊಡ್ಡ ಮಾನ್ಯತೆಯಾಗಿದೆ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ, ದಾಖಲೆಗಳಿದ್ದರೂ ಕೂಡ ಮುಸ್ಲಿಮರನ್ನು ಅವರ ಧರ್ಮದ ಕಾರಣಕ್ಕಾಗಿ ದೇಶದಿಂದ ಹೊರಹಾಕುವ ಅಪಾಯಕಾರಿ ಪ್ರವೃತ್ತಿ ಆರಂಭವಾಗಿದೆ. ಅಸ್ಸಾಂನಂತಹ ರಾಜ್ಯಗಳಲ್ಲಿ ಈ ವ್ಯವಸ್ಥಿತ ಪ್ರಕ್ರಿಯೆ ನಡೆಯುತ್ತಿದೆ. ದೇಶದಲ್ಲಿ ವಾಸಿಸಲು ಎಲ್ಲ ಹಕ್ಕುಗಳಿದ್ದರೂ, ಕೇವಲ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರನ್ನು ಹೊರಹಾಕಲು ಯತ್ನಿಸಲಾಗುತ್ತಿದೆ ಎಂದು ಸಂಜಯ್ ಹೆಗ್ಡೆ ಅವರು ಬಿಜೆಪಿ ಸರ್ಕಾರದ ಕೋಮುವಾದಿ ನೀತಿಗಳನ್ನು ವಿವರವಾಗಿ ವಿಮರ್ಶಿಸಿದರು.
ಕಾರ್ಯಕ್ರಮದಲ್ಲಿ ಟೀಸ್ತಾ ಸೆಟಲ್ವಾಡ್, ದಿನೇಶ್ ಅಮೀನ ಮಟ್ಟು, ಕೆ.ಎಲ್.ಅಶೋಕ್, ಕವಿತಾ ಲಂಕೇಶ್ ಮುಂತಾದವರು ಉಪಸ್ಥಿತರಿದ್ದರು.


