Homeಮುಖಪುಟನಾಜೀ ಜರ್ಮನ್ ದಾರಿ ಹಿಡಿದಿದೆಯೇ ಹಿಂದಿ?

ನಾಜೀ ಜರ್ಮನ್ ದಾರಿ ಹಿಡಿದಿದೆಯೇ ಹಿಂದಿ?

- Advertisement -
- Advertisement -

|ಡಿ. ಉಮಾಪತಿ |

‘ಒಂದು ನಿರ್ದಿಷ್ಟ ಸಿದ್ಧಾಂತ ಮತ್ತು ಪ್ರಭುತ್ವದ ರಾಜಕೀಯ ದುರ್ಬಳಕೆಗೆ ತುತ್ತಾಗುವ ಭಾಷೆ ತೀವ್ರ ಹಾನಿಯನ್ನು ಅನುಭವಿಸುತ್ತದೆ. ಎರಡನೆಯ ವಿಶ್ವಯುದ್ಧದ ನಂತರ ಜರ್ಮನಿ ಮಾತ್ರವಲ್ಲ, ಜರ್ಮನ್ ಭಾಷೆ ಕೂಡ ಕೆಲಕಾಲ ಅನಧಿಕೃತ ಬಹಿಷ್ಕಾರ ಎದುರಿಸಬೇಕಾಯಿತು’.

ಭಾರತದ ಅಸ್ಮಿತೆಯಾಗಿ ಒಂದು ಭಾಷೆಯನ್ನು (ಹಿಂದೀ) ಹೊಂದುವುದು ಅತ್ಯಂತ ಅಗತ್ಯ ಎಂಬ ಕೇಂದ್ರ ಗೃಹಮಂತ್ರಿ ಮತ್ತು ಪ್ರಪಂಚದ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಆಡಿರುವ ಮಾತುಗಳು ಮತ್ತೊಮ್ಮೆ ವಿವಾದ ಹುಟ್ಟಿ ಹಾಕಿವೆ. ಎಂದಿನಂತೆ ದಕ್ಷಿಣ ಭಾರತ ಅತ್ಯಂತ ಮೊನಚಾಗಿ ಪ್ರತಿಭಟಿಸಿದೆ.

ದೇಶ ಭಾಷೆಗಳಲ್ಲೆಲ್ಲ ಹಿಂದಿಯೇ ಶ್ರೇಷ್ಠ ಎಂಬ ಸಂವಾದವನ್ನು ದಕ್ಷಿಣ ಭಾರತ ಬಾರಿಬಾರಿಗೆ ತಿರಸ್ಕರಿಸಿದೆ. ಆದರೂ ಉತ್ತರ ಭಾರತದ ಅಂಧ ಹಿಂದೀ ಅಭಿಮಾನ ಮತ್ತು ಆರೆಸ್ಸೆಸ್ ನ ಹಿಂದೀ-ಹಿಂದು-ಹಿಂದುಸ್ತಾನ (ಒಂದು ದೇಶ, ಒಂದು ಧರ್ಮ ಹಾಗೂ ಒಂದು ದೇಶ) ಎಂಬ ಕಾರ್ಯಸೂಚಿ ಈ ವಾದವನ್ನು ಮತ್ತೆ ಮತ್ತೆ ಬಡಿದೆಬ್ಬಿಸುತ್ತಿದೆ.

ಕೇಂದ್ರ ಸರ್ಕಾರ ಪ್ರತಿಪಾದಿಸುವ ತ್ರಿಭಾಷಾ ಸೂತ್ರವು ಹಿಂದೀ ಭಾಷಿಕ ಸೀಮೆಗಳಿಗೆ ಯಾಕೆ ಅನ್ವಯ ಆಗುತ್ತಿಲ್ಲ? ಹಿಂದೀ ಭಾಷಿಕರು ಅಳವಡಿಸಿಕೊಂಡಿರುವ ಮೂರನೆಯ ಭಾಷೆ ಯಾವುದು ಎಂಬ ಪ್ರಶ್ನೆಗಳನ್ನು ದಕ್ಷಿಣ ಭಾರತೀಯರು ತಿರುಗಿ ಕೇಳಿದರೆ ಉತ್ತರ ಭಾರತದ ಬಳಿ ಏನು ಉತ್ತರವಿದೆ?

ದೇಶದ ಹೃದಯ ಮತ್ತು ಆತ್ಮ ತಾನೇ ಎಂಬ ಉತ್ತರ ಭಾರತದ ದುರಹಂಕಾರವೂ ಹಿಂದೀ ಹೇರಿಕೆಯ ಹಿಂದೆ ಕೆಲಸ ಮಾಡಿದೆ. ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸುವುದು ಅದರ ಇರಾದೆ.

ಗಾಂಧೀ – ನೆಹರೂ ಇಬ್ಬರೂ ಒಪ್ಪಿದ್ದ ಸಂಪರ್ಕ ಭಾಷೆ ಹಿಂದುಸ್ತಾನಿ. ಹಿಂದಿ ಮತ್ತು ಉರ್ದು ಬೆರೆತ ಹಿಂದುಸ್ತಾನಿಯೇ ಸೂಕ್ತ ಎಂದು ಬಗೆದಿದ್ದರು.ದೇಶ ವಿಭಜನೆಯ ಬೆಳವಣಿಗೆ ಉರ್ದುವಿರೋಧಿ ಭಾವನೆಗೆ ಇಂಬು ದೊರೆಯಿತು. ಉರ್ದು- ಹಿಂದಿ ಮಿಶ್ರಿತ ಹಿಂದುಸ್ತಾನಿಗೆ ರಾಷ್ಟ್ರಭಾಷೆಯ ಪಟ್ಟ ಕಟ್ಟುವ ಪ್ರಯತ್ನ ಅವಸಾನ ಕಂಡಿತು. ಸಂವಿಧಾನ ರಚನಾ ಸಭೆಗಳಲ್ಲಿ ಹಿಂದುಸ್ತಾನಿ ಪರ ವಾದವು ಕಾಲಕ್ರಮೇಣ ದೇವನಾಗರಿ ಲಿಪಿಯುಳ್ಳ ಹಿಂದೀ ಪರ ತಿರುವು ಪಡೆಯಿತು. ಹಿಂದುಸ್ತಾನಿಯೇ ಬೇಡವೆಂದಿದ್ದ ದಕ್ಷಿಣ ಭಾರತೀಯರ ಪಾಲಿಗೆ ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಯಿತು ಹಿಂದೀ ಪ್ರತಿಪಾದನೆ.

ತಮಿಳುನಾಡಿನ ತೀವ್ರ ಪ್ರತಿಭಟನೆಯ ನಡುವೆ 1965ರ ಜನವರಿ 26ರಂಜದು ಹಿಂದಿಯನ್ನು ದೇಶದ ಏಕೈಕ ಆಡಳಿತ ಭಾಷೆ ಎಂದು ಸಾರಲಾಯಿತು. ಜವಾಹರಲಾಲ್ ಅವರು ನೀಡಿದ್ದ ಭರವಸೆಯಂತೆ ಹಿಂದಿಯೇತರ ಪ್ರದೇಶಗಳಲ್ಲಿ ಹಿಂದಿಗೆ ಬದಲಾಗಿ ಇಂಗ್ಲಿಷನ್ನು ಮುಂದುವರೆಸಬೇಕೆಂಬುದು ತಮಿಳುನಾಡಿನ ಬೇಡಿಕೆಯಾಗಿತ್ತು. ಹಿಂದೀ ವಿರೋಧಿ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 1969ರಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ಇಂಗ್ಲಿಷನ್ನು ಸಂಪರ್ಕ ಭಾಷೆಯಾಗಿ ಮುಂದುವರೆಸಲು ಅನುವು ಮಾಡಿಕೊಡುವ ಆಡಳಿತ ಭಾಷೆಗಳ ತಿದ್ದುಪಡಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿತು. ಇಂಗ್ಲಿಷನ್ನು ಹೆಚ್ಚುವರಿ ಆಡಳಿತ ಭಾಷೆಯನ್ನಾಗಿ ಮುಂದುವರೆಸಲಾಯಿತಾದರೂ ನಿರ್ದಿಷ್ಟ ಆಡಳಿತ ಉದ್ದೇಶಗಳಿಗೆ ಸೀಮಿತಗೊಳಿಸಲಾಯಿತು. ಆಡಳಿತಕ್ಕೆ ಸಂಬಂಧಿಸಿದ ಎಲ್ಲ ಸಂಪರ್ಕ ವ್ಯವಹಾರಗಳಿಗೂ ಅದನ್ನು ವಿಸ್ತರಿಸಲಿಲ್ಲ. ಹಿಂದೀ ಪಕ್ಷಪಾತ ಈ ತಿದ್ದುಪಡಿ ವಿಧೇಯಕದಲ್ಲೂ ಮುಂದುವರೆಯಿತು.

ತಮಿಳುನಾಡು ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿತು. ತಮಿಳು ಮತ್ತು ಇಂಗ್ಲಿಷನ್ನು ಉಳಿಸಿಕೊಂಡಿತು. ಆಣತಿಗಳು ಹಿಂದೀಯಲ್ಲಿವೆ ಎಂಬ ಕಾರಣಕ್ಕಾಗಿ ಎನ್.ಸಿ.ಸಿ.ಯನ್ನು ಕೂಡ ತಮಿಳುನಾಡು ರದ್ದು ಮಾಡಿತ್ತು. ದೇಶದ ಉಳಿದ ಭಾಗಗಳು ತ್ರಿಭಾಷಾ ಸೂತ್ರವನ್ನು ಒಪ್ಪಿದವು.

ಉತ್ತರಭಾರತದಲ್ಲಿ ಜನ ಮಾತಾಡುವ ಹಲವು ನುಡಿಗಟ್ಟುಗಳ ಸಾವಯವ ಜೀವಂತ ಸೃಜನಶೀಲ ದೇಸೀ ಹಿಂದಿ ಮತ್ತು ಉತ್ತರ ಭಾರತೀಯ ಮೇಲ್ಜಾತಿಯ ಕುಲೀನ ಸಮುದಾಯ ತನ್ನ ಯಜಮಾನಿಕೆಯ ಸ್ವಾರ್ಥ ರಾಜಕೀಯ ಕಾರ್ಯಸೂಚಿಯನ್ನು ಪಸರಿಸಲು ಸೃಷ್ಟಿಸಿದ ಪರ್ಶಿಯನ್ ನ್ನು ವಿಸರ್ಜಿಸಿದ ಸಂಸ್ಕೃತಮಯ ಬರಡು ಹಿಂದಿಯ ನಡುವಣ ವ್ಯತ್ಯಾಸಗಳನ್ನು ಖ್ಯಾತ ಹಿಂದೀ ಲೇಖಕ ಮುನ್ಷಿ ಪ್ರೇಮ್ ಚಂದ್ ಅವರ ಮೊಮ್ಮಗ ಆಲೋಕ್ ರೈ ತೆರೆದಿಟ್ಟಿದ್ದಾರೆ.

ಸಂಸ್ಕೃತ ಭೂಯಿಷ್ಠ ಹಿಂದಿಯು ಬ್ರಾಹ್ಮಣವಾದೀ ಹಿಂದೂ-ರಾಷ್ಟ್ರವಾದೀ ರಾಜಕಾರಣದ ಉತ್ಪನ್ನ ಮತ್ತು ವಾಹನ ಎರಡೂ ಆಗಿದೆ. ಹತ್ತೊಂಬತ್ತನೆಯ ಶತಮಾನದ ಕಡೆಯ ಭಾಗದಲ್ಲಿ ಹಿಂದೂ ಭಾರತ ಮತ್ತು ಹಿಂದೂ ರಾಷ್ಟ್ರವಾದವು ಒಂದನ್ನೊಂದು ಹೆಣೆದುಕೊಂಡು ಶುದ್ಧ ಹಿಂದೀ ಎಂಬ ಅತಿ ಸಂಸ್ಕೃತಭರಿತ ಭಾಷೆಯನ್ನು ಹುಟ್ಟಿ ಹಾಕಿದವು, ಅದು ಶುದ್ಧ ಹಿಂದಿಯ ಹೆಸರಿನಲ್ಲಿ ಪ್ರಾದೇಶಿಕ ಹಿಂದಿಯ ಮೇಲೆ ಹಿಂಸಾಚಾರ ನಡೆಸಿತು ಹಾಗೂ ಹೇಗೆಲ್ಲ ನಮ್ಮ ಶಿಕ್ಷಣ ವ್ಯವಸ್ಥೆಯ ತಿರುಳೇ ಆಗಿ ಪರಿಣಮಿಸಿತು ಎಂಬುದನ್ನು ರೈ ವಿವರಿಸಿದ್ದಾರೆ.

ದೇವನಾಗರಿ ಲಿಪಿಯ ಹಳೆಯ ಹೆಸರು ಬಭಾನಿ. ಬಭಾನಿ ಎಂಬುದು ಬ್ರಾಹ್ಮಣ ಲಿಪಿ. ಹಿಂದುಸ್ಥಾನಿಗೆ ಪರ್ಶಿಯನ್ ಬದಲಿಗೆ ಭಾರತದ್ದೇ ಆದ ಲಿಪಿ ಬಳಸಬೇಕೆಂಬ ಆರಂಭಿಕ ಪೈಪೋಟಿ ಜರುಗಿದ್ದು ಬಭಾನಿ ಎಂಬ ನಾಗರಿ ಮತ್ತು ಕೈಥಿಯ ನಡುವೆ. ಕೈಥಿ ಲಿಪಿ ಸೋತಿತು. ಬಭಾನಿ ಗೆದ್ದಿತು.

ಹಿಂದಿ ಭಾಷಿಕರ ಮೇಲೆ ಇಂಗ್ಲಿಷ್ ಹೇರಿಕೆಯನ್ನು ಪ್ರತಿಭಟಿಸಿ ಲೋಹಿಯಾವಾದಿ-ಸಮಾಜವಾದಿ ಚಳವಳಿಯನ್ನು ಉತ್ತರ ಭಾರತ 60ರ ದಶಕದಲ್ಲಿ ಕಂಡಿತ್ತು. ಅದೇ ಕಾಲದಲ್ಲಿ ತಮಿಳುನಾಡು ಹಿಂದೀ ಹೇರಿಕೆ ವಿರೋಧದ ಮುಂಚೂಣಿಯಲ್ಲಿತ್ತು. ಪಂಜಾಬಿನಿಂದ 1966ರಲ್ಲಿ ಬೇರೆಯಾಗಿ ಸ್ವತಂತ್ರ ರಾಜ್ಯವಾದ ಹರಿಯಾಣ ತನ್ನ ಮಾತೃಭಾಷೆ ಹಿಂದಿಯ ನಂತರ ಎರಡನೆಯ ಭಾಷೆಯಾಗಿ ಸ್ವೀಕರಿಸಿದ್ದು ದೂರ ದಕ್ಷಿಣದ ತಮಿಳನ್ನು! ಪಂಜಾಬಿ ಹೇರಿಕೆಯ ವಿರುದ್ಧ ಅಷ್ಟರಮಟ್ಟಿಗೆ ಬಂಡೆದ್ದಿತ್ತು ಹರಿಯಾಣ. 43 ವರ್ಷಗಳ ನಂತರ 2010ರಲ್ಲಿ ತಮಿಳನ್ನು ಕೈಬಿಟ್ಟು ಪುನಃ ಪಂಜಾಬಿಗೆ ಭಾಷೆಗೆ ಹಿಂದಿರುಗಿತು.

ಹಿಂದಿಯೇತರ ರಾಜ್ಯಗಳ ಶಾಲಾ ವಿದ್ಯಾರ್ಥಿಗಳಿರಲಿ, ಉತ್ತರಭಾರತದ ಹಿಂದಿ ಸೀಮೆಯ ಶಾಲಾ ವಿದ್ಯಾರ್ಥಿಗಳೇ ಈ ಸಂಸ್ಕೃತ ಭೂಯಿಷ್ಠ ಹಿಂದಿಯನ್ನು ಕಂಡರೆ ಬೆಚ್ಚಿ ಬೀಳುವ ಪರಿಸ್ಥಿತಿ ಇದೆ. ಭಾರೀ ಸಂಖ್ಯೆಯ ವಿದ್ಯಾರ್ಥಿಗಳು ಹಿಂದಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಕುಲೀನ ಹಿಂದಿಯು ಈ ವಿದ್ಯಾರ್ಥಿಗಳ ಮಾತೃಭಾಷೆಗಳನ್ನು ದರೋಡೆ ಮಾಡಿರುವುದರ ದ್ಯೋತಕವಿದು.

ಭೋಜಪುರಿ, ಮೈಥಿಲಿ, ಮಗಹಿ, ಆಂಗಿಕ, ಬುಂದೇಲಿ. ಅವಧಿ, ಗಢವಾಲಿ, ಡೋಗ್ರಿ, ರಾಜಸ್ತಾನಿ, ಮಾರವಾಡಿಗಳ ಜೊತೆಗೆ ಆದಿವಾಸಿ ಭಾರತವು ತನ್ನ ಹಲವು ನುಡಿಗಟ್ಟುಗಳನ್ನು ಮಾತಾಡುತ್ತದೆ. ಈ ಎಲ್ಲ ಭಾಷೆಗಳನ್ನು ಅಧಿಕೃತ ಹಿಂದಿಯು ಕೀಳಾಗಿ ಕಾಣುತ್ತದೆ. ಈ ನುಡಿಗಟ್ಟುಗಳೇ ತಾಯಿಭಾಷೆಗಳಾಗಿರುವ ವಿದ್ಯಾರ್ಥಿಗಳ ಪಾಲಿಗೆ ಅಧಿಕೃತ ಹಿಂದೀ ಮತ್ತೊಂದು ಇಂಗ್ಲಿಷ್ ಆಗಿ ಪರಿಣಮಿಸಿದೆ.ಎನ್ನುತ್ತಾರೆ ಆಲೋಕ್ ರೈ.

ಹೆಸರಾಂತ ಭಾಷಾಶಾಸ್ತ್ರಜ್ಞ ಗಣೇಶ ದೇವಿ ನೇತೃತ್ವದ ಭಾರತೀಯ ಜನಭಾಷಿಕ ಸಮೀಕ್ಷೆ (ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ) ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿನ ಭಾಷೆಗಳು 780. ಇವುಗಳ ಪೈಕಿ 220 ಭಾಷೆಗಳು ಕಳೆದ ಐದಾರು ದಶಕಗಳಲ್ಲಿ ನಶಿಸಿ ಹೋಗಿವೆ. ಇನ್ನೂ 150 ಭಾಷೆಗಳು ಮುಂದಿನ 50 ವರ್ಷಗಳಲ್ಲಿ ಕಣ್ಮರೆಯಾಗುವ ದಟ್ಟ ಸಾಧ್ಯತೆ ಇದೆ ಎಂದು ಈ ಸಮೀಕ್ಷೆ ಹೇಳಿದೆ. ಪ್ರತ್ಯಕ್ಷ- ಪರೋಕ್ಷ ಹಿಂದೀ ಹೇರಿಕೆಗೆ ವೆಚ್ಚವಾಗುತ್ತಿರುವ ಹಣ ಮತ್ತು ತೋರಲಾಗುತ್ತಿರುವ ಅತ್ಯುತ್ಸಾಹದ ನೂರರ ಒಂದಂಶವೂ ಈ ತಬ್ಬಲಿ ಭಾಷೆಗಳ ಕುರಿತು ವ್ಯಕ್ತವಾಗುತ್ತಿಲ್ಲ ಎಂಬುದು ಕಟುಸತ್ಯ. ತಾಯಿ ಭಾರತಿ ಬಹುಭಾಷಾ ಸರಸ್ವತಿಯೇ ವಿನಾ ಕೇವಲ ಹಿಂದೀ ಸರಸ್ವತಿ ಅಲ್ಲ ಎಂಬುದನ್ನು ಒಪ್ಪಲು ಆಳುವವರು ತಯಾರಿಲ್ಲ.

ಮೋದಿ ಭಾರತದ ಹಿಂದೀ ಭಾಷೆಯು, ಹಿಟ್ಲರನ ಕಾಲದ ಜರ್ಮನಿಯ ನಾಜೀವಾದಿ ಜರ್ಮನ್ ಭಾಷೆಯ ದಾರಿ ಹಿಡಿಯುತ್ತಿದೆ ಎಂದಿದ್ದಾರೆ ದೇಶದ ರಾಜಕೀಯ-ಸಾಮಾಜಿಕ ಕದಲಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ದಾಖಲಿಸುವ ಅಂಕಣಕಾರ ರುಚಿರ್ ಜೋಶಿ.

ಆರೆಸ್ಸೆಸ್-ಬಿಜೆಪಿ ಆರಾಧಿಸುವ ಸಂಸ್ಕೃತಭೂಯಿಷ್ಠ ಹಿಂದಿಯು, ಹಿಂದಿ-ಹಿಂದುಸ್ತಾನಿ-ಉರ್ದು ಭಾಷಿಕ ಸೀಮೆಯಲ್ಲಿ ಒಂದು ಅಲ್ಪಸಂಖ್ಯಾಕ ಭಾಷೆ.ಪಂಜಾಬಿ, ಸಿಂಧಿ, ಅವಧಿ, ಬ್ರಜ, ಭೋಜಪುರಿ, ಮೈಥಿಲಿ ಮತ್ತು ಇತರೆ ಭಾಷೆಗಳ ಕುಟುಂಬದ ಒಂದು ಭಾಷೆ ಅಷ್ಟೇ. ಇಂತಹ ಅಲ್ಪಸಂಖ್ಯಾಕ ಭಾಷೆಯು ಉಳಿದೆಲ್ಲ ಭಾಷೆಗಳ ಸವಾರಿ ಯಾಕೆ ಮಾಡಬೇಕು ಎಂಬುದು ಜೋಶಿಯವರ ಪ್ರಶ್ನೆ.

ಒಂದು ನಿರ್ದಿಷ್ಟ ಸಿದ್ಧಾಂತ ಮತ್ತು ಪ್ರಭುತ್ವದ ರಾಜಕೀಯ ದುರ್ಬಳಕೆಗೆ ತುತ್ತಾಗುವ ಭಾಷೆ ತೀವ್ರ ಹಾನಿಯನ್ನು ಅನುಭವಿಸುತ್ತದೆ. ಎರಡನೆಯ ವಿಶ್ವಯುದ್ಧದ ನಂತರ ಜರ್ಮನಿ ಮಾತ್ರವಲ್ಲ, ಜರ್ಮನ್ ಭಾಷೆ ಕೂಡ ಕೆಲಕಾಲ ಅನಧಿಕೃತ ಬಹಿಷ್ಕಾರ ಎದುರಿಸಬೇಕಾಯಿತು. ಗಯಟೆ, ರಿಲ್ಕೆ, ಕಾಫ್ಕಾ ರಂತಹವರು ಬಳಸಿದ ಸೊಬಗಿನ ಭಾಷೆ ಇಂತಹ ದುಸ್ಥಿತಿ ಎದುರಿಸಬೇಕಾಯಿತು. 1925-1945ರ ನಡುವೆ ಜರ್ಮನ್ ಭಾಷೆಯು ವರ್ಣಭೇದ ಮತ್ತು ಜನಾಂಗೀಯ ಹತ್ಯೆಯ ಕಡುದ್ವೇಷವನ್ನು ಪಸರಿಸುವ ಭಾಷೆಯಾಗಿ ಪರಿಣಮಿಸಿತ್ತು. ಅಮಾಯಕರ ಸಾಮೂಹಿಕ ನರಮೇಧವನ್ನು ಆಗು ಮಾಡುವ ಕೇಡಿನ ಮಿಲಿಟರಿ ಆಣತಿಯ ಒರಟು- ವಿಕಾರ- ಕುರೂಪದ ಭಾಷೆಯೆಂದು ಅಂತಾರಾಷ್ಟ್ರೀಯವಾಗಿ ಕರೆಸಿಕೊಂಡಿತು.

ಕೆಲವೇ ವರ್ಷಗಳಲ್ಲಿ ಇದೇ ಸ್ಥಿತಿ ಹಿಂದಿ ಭಾಷೆ ಅಥವಾ ಅದರ ಕೆಲವು ವಲಯಗಳಿಗೆ ಒದಗುವ ನೈಜ ಅಪಾಯವಿದೆ. ಸುಳ್ಳುಗಳು, ರಾಜಕೀಯ ಗುಂಪು ಹತ್ಯೆಗಳ ಭಾಷೆ, ಗಣರಾಜ್ಯವನ್ನು ವಿನಾಶದತ್ತ ದೂಡಿದ ಭಾಷೆ, ತೀವ್ರ ಪ್ರಗತಿಗಾಮಿ ಧಾರ್ಮಿಕ ಬಹುಸಂಖ್ಯಾಕ ಭಾಷೆಯೆಂದು ಹಿಂದಿಯನ್ನು ಪರಿಗಣಿಸುವ ದಿನಗಳು ದೂರವಿಲ್ಲ.ದೇಶದ ಉದ್ದಗಲಕ್ಕೆ ಹಿಂದಿ ಹೇರಿಕೆಯನ್ನು ವಿರೋಧಿಸಿದ ರೀತಿಯಲ್ಲೇ ನಂಜುಭರಿತ ಸಂಗತಿಗಳನ್ನು ಪ್ರತಿನಿಧಿಸುತ್ತಿರುವ ಒಂದು ಬಗೆಯ ಹಿಂದಿಯನ್ನು ಕೂಡ ನಾವು ಪ್ರತಿಭಟಿಸಬೇಕಿದೆ.

ಪಶ್ಚಿಮ ಪಾಕಿಸ್ತಾನವು ಬಂಗಾಳಿ ಭಾಷಿಕರ ಪೂರ್ವ ಪಾಕಿಸ್ತಾನದ ಮೇಲೆ ಬಲವಂತವಾಗಿ ಉರ್ದುವನ್ನು ರಾಷ್ಟ್ರೀಯ ಭಾಷೆ ಎಂದು ಹೇರಿತ್ತು.ತನ್ನ ತಾಯ್ನುಡಿ ಬಂಗಾಳಿಯ ಮೇಲೆ ನಡೆದಿದ್ದ ಈ ಹಲ್ಲೆಯನ್ನು ಪ್ರತಿಭಟಿಸಿ ಪೂರ್ವ ಪಾಕಿಸ್ತಾನ ಇಡಿಯಾಗಿ ಭುಗಿಲೆದ್ದಿತ್ತು. ಈ ಆಂದೋಲನ ಅಂತಿಮವಾಗಿ ಪ್ರತ್ಯೇಕ ರಾಷ್ಟ್ರೀಯತೆಯ ಆಂದೋಲನವಾಗಿ ಪರಿಣಮಿಸಿತು. ಪೂರ್ವ ಪಾಕಿಸ್ತಾನವು ಸ್ವತಂತ್ರ ಬಾಂಗ್ಲಾ ದೇಶವಾಗಿ ಉದಯಿಸಿತು. ಉತ್ತರ ಭಾರತ ಎಂಬುದು ಪಶ್ಚಿಮ ಪಾಕಿಸ್ತಾನವಲ್ಲ, ದಕ್ಷಿಣ ಭಾರತವು ಪೂರ್ವ ಪಾಕಿಸ್ತಾನವೂ ಅಲ್ಲ ಎಂಬುದು ನಿಜ. ಆದರೆ ಬಾಂಗ್ಲಾದೇಶ ಸ್ವತಂತ್ರ ದೇಶವಾಗಿ ತಲೆಯೆತ್ತಿದ ಇತಿಹಾಸವನ್ನು ಹಿಂದಿ ಹೇರಿಕೆಯ ಅತ್ಯುತ್ಸಾಹಿಗಳು ಸುಲಭವಾಗಿ ತಳ್ಳಿ ಹಾಕಬಾರದು.

ಉಪರಾಷ್ಟ್ರೀಯತೆಗಳ ವಾಸ್ತವವನ್ನು ಗೌರವಿಸುವ ವಿವೇಕ ಉದಯಿಸಿದ್ದರಿಂದಲೇ ಭಾರತವು ಭಾಷಾವಾರು ಪ್ರಾಂತ್ಯ ರಚಿಸಿದೆ.ಹಿಂದೀ ರಾಷ್ಟ್ರಭಾಷೆ ಎಂಬ ಭ್ರಮೆಯನ್ನು ಉತ್ತರಭಾರತೀಯರು ದಕ್ಷಿಣದ ಮೇಲೆ ಪ್ರತ್ಯಕ್ಷ ಪರೋಕ್ಷವಾಗಿ ಹೇರುತ್ತಲೇ ಬಂದಿದ್ದಾರೆ. ಸಂವಿಧಾನವು ಯಾವ ಭಾಷೆಗೂ ರಾಷ್ಟ್ರಭಾಷೆಯ ಸ್ಥಾನಮಾನ ನೀಡಿಲ್ಲ. ಹಿಂದೀ ಸೇರಿದಂತೆ ಸಂವಿಧಾನದ ಎಂಟನೆಯ ಷೆಡ್ಯೂಲಿನಲ್ಲಿ ಸೇರಿರುವ ಎಲ್ಲ 22 ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ. ಎಲ್ಲವೂ ಸಮಾನವೇ. ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆಯೂ ಅಲ್ಲ.ಹಿಂದೀ ಮಂದಿಯ ಭಾಷಾಂಧತೆಯೇ ಹಿಂದೀ ಪ್ರಸಾರಕ್ಕೆ ಮುಳುವಾಗಿ ಪರಿಣಮಿಸಿದೆ ಎಂಬ ಭಾವನೆ ನಿರಾಧಾರ ಅಲ್ಲ. ಹಿಂದೀ ಹೇರಿಕೆ ಕುರಿತು ರಾಹುಲ ಸಾಂಕೃತ್ಯಾಯನ, ಮುನ್ಷಿ ಪ್ರೇಮ್ ಚಂದ್ ಹಾಗೂ ರಾಮಮನೋಹರ ಲೋಹಿಯಾ ಅವರಂತಹ ಪ್ರಖರ ಉದಾರ ರಾಷ್ಟ್ರವಾದಿಗಳ ಆಲೋಚನೆ ಕೂಡ ಸೂಕ್ಷ್ಮತೆ ಸಂವೇದನಾಶೀಲತೆಯನ್ನು ಕಳೆದುಕೊಂಡಿತ್ತು ಎಂಬುದು ವಿಷಾದಭರಿತ ವಾಸ್ತವ.

ಬಹುಸಂಖ್ಯಾತರು ಆಡುವ ಭಾಷೆಯೇ ಆಡಳಿತ ಭಾಷೆ ಆಗಬೇಕು ಎಂಬ ವಾದದ ಪೊಳ್ಳುತನವನ್ನು ತಮಿಳುನಾಡಿನ ತಲೆಯಾಳು ಸಿ.ಎನ್.ಅಣ್ಣಾದುರೈ ಬಹಳ ಹಿಂದೆಯೇ ಬಯಲು ಮಾಡಿದ್ದಾರೆ. ಭಾರತದಲ್ಲಿ ನವಿಲುಗಳಿಗಿಂತ ಕಾಗೆಗಳ ಸಂಖ್ಯೆಯೇ ಅತ್ಯಧಿಕ. ಹುಲಿಗಳ ಸಂಖ್ಯೆಗಿಂತ ಎಷ್ಟೋ ಪಾಲು ಅಧಿಕ ಸಂಖ್ಯೆಯಲ್ಲಿವೆ ಇಲಿಗಳು. ಹಿಂದೀ ಭಾಷಾಂಧ ತರ್ಕವನ್ನೇ ಮುಂದೆ ಮಾಡಿದರೆ ನವಿಲುಗಳ ಬದಲಾಗಿ ಕಾಗೆಗಳು ರಾಷ್ಟ್ರೀಯ ಪಕ್ಷಿ ಆಗಬೇಕು, ಹುಲಿಯ ಬದಲಾಗಿ ಇಲಿ ರಾಷ್ಟ್ರೀಯ ಪ್ರಾಣಿ ಆಗಬೇಕು ಎಂದು ಅಣ್ಣಾದುರೈ ಲೇವಡಿ ಮಾಡಿದ್ದನ್ನು ಇನ್ನೂ ಒಮ್ಮೆ ನೆನೆಸಿಕೊಳ್ಳುವುದು ಅಪ್ರಸ್ತುತವೇನೂ ಅಲ್ಲ.

ಹೆಸರಾಂತ ಭಾಷಾಶಾಸ್ತ್ರಜ್ಞ ಗಣೇಶ ದೇವಿ ನೇತೃತ್ವದ ಭಾರತೀಯ ಜನಭಾಷಿಕ ಸಮೀಕ್ಷೆ (ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ) ನಡೆಸಿದ ಸಮೀಕ್ಷೆಯೊಂದು ಭಾರತದಲ್ಲಿ 780 ಭಾಷೆಗಳನ್ನು ದಾಖಲು ಮಾಡಿದೆ. ಕಳೆದ ಐದಾರು ದಶಕಗಳಲ್ಲಿ 220 ಭಾರತೀಯ ಭಾಷೆಗಳು ನಶಿಸಿ ಹೋಗಿವೆ. ಮುಂದಿನ 50 ವರ್ಷಗಳಲ್ಲಿ ಇನ್ನೂ 150 ಭಾಷೆಗಳು ಕಣ್ಮರೆಯಾಗುವ ದಟ್ಟ ಸಾಧ್ಯತೆ ಇದೆ ಎಂದು ಈ ಸಮೀಕ್ಷೆ ಹೇಳಿದೆ. ಪ್ರತ್ಯಕ್ಷ- ಪರೋಕ್ಷ ಹಿಂದೀ ಹೇರಿಕೆಗೆ ವೆಚ್ಚವಾಗುತ್ತಿರುವ ಹಣ ಮತ್ತು ತೋರಲಾಗುತ್ತಿರುವ ಅತ್ಯುತ್ಸಾಹದ ನೂರರ ಒಂದಂಶವೂ ಈ ತಬ್ಬಲಿ ಭಾಷೆಗಳ ಕುರಿತು ವ್ಯಕ್ತವಾಗುತ್ತಿಲ್ಲ ಎಂಬುದು ಕಟುಸತ್ಯ.

ದೇಸೀ ಭಾಷೆಗಳ ಉಳಿವಿಗೆ ಮತ್ತು ಹಿಂದಿ ಹೇರಿಕೆಯ ವಿರುದ್ಧ ಒಡಿಯಾ, ಅಸ್ಸಾಮೀಸ್, ಸಂತಾಲಿ, ಡೋಗ್ರಿ, ಭೋಜಪುರಿ, ಮಣಿಪುರಿ, ತೆಲುಗು, ತಮಿಳು, ಮಲೆಯಾಳಂ, ಮರಾಠಿ, ಗುಜರಾತಿ, ಕಾಶ್ಮೀರಿ ಮೊದಲಾದ ಭಾಷೆಗಳನ್ನು ಒಳಗೊಂಡ ರಾಷ್ಟ್ರ ಮಟ್ಟದ ವೇದಿಕೆಯೊಂದನ್ನು ನಾವೆಲ್ಲ ಕಟ್ಟಿಕೊಳ್ಳಬೇಕಾದ್ದು ಇಂದಿನ ತುರ್ತು ಅವಶ್ಯಕತೆ ಎಂಬ ಜೆ.ಎನ್.ಯು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಪುರುಷೋತ್ತಮ ಬಿಳಿಮಲೆಯವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ತಮಿಳು ನಟ ಕಮಲ್ ಹಾಸನ್ ದಿಟ್ಟವಾಗಿ ಹೇಳಿರುವಂತೆ-ವಿವಿಧತೆಯಲ್ಲಿ ಏಕತೆ ಎಂಬುದು ಭಾರತವನ್ನು ಗಣರಾಜ್ಯವಾಗಿಸಿದಾಗ ನಮಗೆ ನಾವೇ ಮಾಡಿಕೊಂಡ ವಾಗ್ದಾನ. ಈ ವಾಗ್ದಾನವನ್ನು ಯಾವುದೇ ಶಾ ಆಗಲಿ, ಸುಲ್ತಾನ ಅಥವಾ ಸಾಮ್ರಾಟನಾಗಲೀ ಮುರಿಯುವುದು ಸಾಧ್ಯವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...