Homeಮುಖಪುಟಏನಾದರೂ ತೀರ್ಮಾನಕ್ಕೆ ಬರುವ ಮುಂಚೆ ಕಾಶ್ಮೀರದ ಚರಿತ್ರೆಯನ್ನೊಮ್ಮೆ ಅರಿಯೋಣ..

ಏನಾದರೂ ತೀರ್ಮಾನಕ್ಕೆ ಬರುವ ಮುಂಚೆ ಕಾಶ್ಮೀರದ ಚರಿತ್ರೆಯನ್ನೊಮ್ಮೆ ಅರಿಯೋಣ..

ಕಾಶ್ಮೀರದ ಸಮಸ್ಯೆಯನ್ನು ಹಿಂದೂ-ಮುಸ್ಲಿಂ ಸಂಘರ್ಷವನ್ನಾಗಿ ನೋಡುವುದರಲ್ಲಿಯೇ ತಪ್ಪಿದೆ. ಆದರೆ ಹೀಗೆ ಅದನ್ನ ಬಿಂಬಿಸುವುದರಲ್ಲಿ ಭಾರತ ಮಾತ್ರ ಪಾಕಿಸ್ತಾನದ ಸರ್ಕಾರಗಳಿಗೆ ಮತ್ತು ಮೂಲಭೂತವಾದಿಗಳಿಗೆ ಹೆಚ್ಚು ಲಾಭವಿದೆ. ಹೀಗಾಗಿ ಈ ಸಮಸ್ಯೆಯನ್ನು ಜೀವಂತವಾಗಿಡುವುದರಲ್ಲೇ ಕಳೆದ 70 ವರ್ಷಗಳು ವ್ಯಯವಾಗಿವೆ.

- Advertisement -
- Advertisement -

ಅಂತೂ ಕಲಂ 370 ಮತ್ತು 35(ಎ) ತೆಗೆದುಹಾಕುವುದರ ಮೂಲಕ ಸಂಘಪರಿವಾರ ತನ್ನ 70 ವರ್ಷ ಮೀರಿದ ಅಜೆಂಡಾವನ್ನ ಜಾರಿಗೊಳಿಸಿದೆ. ಕಾಶ್ಮೀರದ ವಿಶೇಷ ಸ್ಥಾನಮಾನವನ್ನ ತೆಗೆದುಹಾಕಿ ಅದನ್ನು ಭಾರತದ ಕೇಂದ್ರೀಯ ಪ್ರದೇಶವನ್ನಾಗಿ ಘೋಷಿಸುವುದರ ಮೂಲಕ ಕಾಶ್ಮೀರವನ್ನು ಭಾರತಕ್ಕೆ ವಿಲೀನಗೊಳಿಸುವ ಪ್ರಕ್ರಿಯೆ ಪೂರ್ತಿಯಾಗಿದೆ ಎಂದು ಎಲ್ಲೆಡೆ ಸಂಭ್ರಮ ವ್ಯಕ್ತವಾಗುತ್ತಿದೆ. ಇವೆಲ್ಲಾ ಕಾನೂನಾತ್ಮಕ ಬದಲಾವಣೆ ಇಲ್ಲದೆಯೂ ಕಾಶ್ಮೀರದ ಬಗ್ಗೆ ಮಾತನಾಡುವುದನ್ನೇ ಭಾರತ ವಿರೋಧಿ-ಅರ್ಥಾತ್ ಹಿಂದೂ ವಿರೋಧಿ ಎಂದು ಪರಿಗಣಿಸಲಾಗುತ್ತಿತ್ತು. ಈಗ ಈ ಪ್ರಚಾರಕ್ಕೆ ಅಧಿಕೃತತೆ ಪ್ರಾಪ್ತವಾಗಿದೆ.

ಈಗಾಗಲೇ ಕಗ್ಗಂಟಾಗಿರುವ ಕಾಶ್ಮೀರದ ಸಮಸ್ಯೆಯನ್ನು ಪರ-ವಿರೋಧ ಎಂಬ ಸರಳ ಬೈನರೀಕರಣದ ಮೂಲಕ ವಿವರಿಸಲಾಗುವುದಿಲ್ಲವಾದರೂ ಒಂದು ಫ್ಯಾಸಿಸ್ಟ್ ಸರ್ಕಾರಕ್ಕೆ ಅಂಥ ಸರಳೀಕರಣಗಳೇ ಹೆಚ್ಚು ಪ್ರಯೋಜನಕಾರಿ. ಹೇಗೂ ಕೇಂದ್ರ ಈಗಾಗಲೇ ಕರಾಳ ಶಾಸನವಾದ ಯುಎಪಿಎಗೆ ಬದಲಾವಣೆ ತಂದು ಭಯೋತ್ಪಾದನಾ ಸಂಘಟನೆಗಳ ಜತೆಗೆ ಭಯೋತ್ಪಾದಕ ವ್ಯಕ್ತಿಗಳಿಗೂ ಅನ್ವಯವಾಗುವಂತೆ ತಿದ್ದುಪಡಿ ತಂದಿದೆ. ಇನ್ನೇನು? ತನ್ನ ಧೋರಣೆಗಳನ್ನ ವಿರೋಧಿಸುವವರನ್ನು ಈಗ ಅಧಿಕೃತವಾಗಿಯೇ ಬಾಯಿಮುಚ್ಚಿಸಬಹುದು. ಇನ್ನು ಕಾಶ್ಮೀರ ಮತ್ತು ಅವರ ‘ವಿಮೋಚನಾ’ ಹೋರಾಟದ ಬಗ್ಗೆ ಮಾತನಾಡಲಿಕ್ಕೆ ಉಂಟೇ? ಅವರೆಲ್ಲರಿಗೂ ಈಗ ‘ಸರ್ಕಾರಿ’ ಲಿಂಚಿಂಗ್ ಕಾದಿದೆ! ಏಕೆಂದರೆ ಕಾಶ್ಮೀರಿಗರ ಹೋರಾಟದ ಜೊತೆಗೆ, ಪಾಕಿಸ್ತಾನದಿಂದ ಪ್ರಾಯೋಜಿತವಾದ ಭಯೋತ್ಪಾದನೆಯು ತಳಕು ಹಾಕಿಕೊಂಡು ಬಹಳ ಕಾಲವಾಗಿದೆ.

ಕಾಶ್ಮೀರದ ಸಮಸ್ಯೆಯನ್ನು ಹಿಂದೂ-ಮುಸ್ಲಿಂ ಸಂಘರ್ಷವನ್ನಾಗಿ ನೋಡುವುದರಲ್ಲಿಯೇ ತಪ್ಪಿದೆ. ಆದರೆ ಹೀಗೆ ಅದನ್ನ ಬಿಂಬಿಸುವುದರಲ್ಲಿ ಭಾರತ ಮಾತ್ರ ಪಾಕಿಸ್ತಾನದ ಸರ್ಕಾರಗಳಿಗೆ ಮತ್ತು ಮೂಲಭೂತವಾದಿಗಳಿಗೆ ಹೆಚ್ಚು ಲಾಭವಿದೆ. ಹೀಗಾಗಿ ಈ ಸಮಸ್ಯೆಯನ್ನು ಜೀವಂತವಾಗಿಡುವುದರಲ್ಲೇ ಕಳೆದ 70 ವರ್ಷಗಳು ವ್ಯಯವಾಗಿವೆ. ಧಾರ್ಮಿಕ ಮೂಲಭೂತವಾದಕ್ಕೆ ರಾಷ್ಟ್ರೀಯತೆಯ ಪ್ರಶ್ನೆಯೂ ಸೇರಿಕೊಳ್ಳುವುದರಿಂದ ಕಾಶ್ಮೀರದ ಬಗ್ಗೆ ಬೇರೆ ರೀತಿಯಲ್ಲಿ ಯೋಚನೆ ಮಾಡುವುದಕ್ಕೂ ಬಹಿರಂಗವಾಗಿ ಚರ್ಚೆ ಮಾಡುವುದಕ್ಕೂ ಆಗದ ವಾತಾವರಣ ಸೃಷ್ಟಿಯಾಗಿದೆ. ಇದರ ಮೊದಲ ಆಹುತಿ ಎಂದರೆ ಕಾಶ್ಮೀರದ ಚರಿತ್ರೆ. ಅಲ್ಲಿಯ ಜನರ ಹೋರಾಟದ ಪರಂಪರೆ ಮಾತ್ರ ಅಲ್ಲಿಗೇ ವಿಶಿಷ್ಟವಾದ ಸೂಫಿ ತತ್ವದಿಂದ ಪ್ರೇರಿತವಾದ ಕಾಶ್ಮೀರಿಯತ್ ಎನ್ನುವ ಸಂವಿಧಾನ. ಭಾರತದ ಬಹುಸಂಖ್ಯಾತರಿಗೆ ಇದು ಗೊತ್ತಿಲ್ಲ; ಗೊತ್ತಿಲ್ಲವಾದ್ದರಿಂದ ಬೇಕಿಲ್ಲ ಎಂಬ ಧೋರಣೆ ಮನೆಮಾಡಿದೆ.

ಕಾಶ್ಮೀರಿಯತ್ ಎನ್ನುವುದು ಕಾಶ್ಮೀರಿಗಳ ಸಾಂಸ್ಕೃತಿಕ ಅನನ್ಯತೆಯ ಪ್ರತೀಕ. ಇದು ಆ ಪ್ರದೇಶದ ಋಷಿಗಳು ಪ್ರಚಾರ ಮಾಡಿದ ಕಾಶ್ಮೀರಿ ಇಸ್ಲಾಂ ಧರ್ಮ, ಸೂಫಿಗಳ ಪ್ರಭಾವದಿಂದ ಮೂಡಿಬಂದದ್ದು. ಸಿಲ್ಸಿಲಾ ಎ ರುಷಿಯಾ ಎನ್ನುವ ಈ ಸಂಪ್ರದಾಯದ ಮುಖ್ಯ ಹೆಸರು ಷೇಕ್ ನೂರುದ್ದೀನ್ (1379-1442). ಆತನನ್ನು ಅಲ್ಲಿನ ಹಿಂದೂಗಳು ನೂರುದ್ದೀನ್ ಋಷಿ ಅಥವಾ ನಂದ ಋಷಿ ಎಂದು ಆರಾಧಿಸುತ್ತಾರೆ. ಇಸ್ಲಾಂ ಧರ್ಮದ ಪ್ರವೇಶಕ್ಕೂ ಹಿಂದೆ ಕಾಶ್ಮೀರದಲ್ಲಿ ಶೈವ ಹಾಗೂ ಮಹಾಯಾನ ಬೌದ್ಧ ಧರ್ಮಗಳು ಪ್ರಬಲವಾಗಿದ್ದವು. ಇವೆರಡೂ ಧರ್ಮಗಳ ಅನೇಕ ನಂಬಿಕೆ ಮತ್ತು ಸಂಪ್ರದಾಯವನ್ನ ಸೂಫಿಗಳೂ ಮುಂದುವರೆಸಿದರು. ಅದು ಪ್ರಚಲಿತಗೊಳಿಸಿದ ಭಕ್ತಿಮಾರ್ಗ ಮತ್ತು ಮಾನವೀಯತೆಗಳ ಕಾರಣಕ್ಕೆ ಬಹಳ ಜನಪ್ರಿಯವಾಯಿತು.

ನಂತರ ಬಂದ ಸನಾತನ ಇಸ್ಲಾಂ ಗುರುಗಳು ಇದನ್ನ ಸಮರ್ಥಿಸಲಿಲ್ಲವಾದರೂ ಅವುಗಳ ಪ್ರಭಾವ ಕಡಿಮೆಯಾಗಲಿಲ್ಲ. ಅಲ್ಲದೆ ಈ ನಂದ ಋಷಿಯ ಸಂಪ್ರದಾಯದಲ್ಲಿನ ಇನ್ನೊಂದು ವಿಶೇಷತೆ ಎಂದರೆ, ಇಸ್ಲಾಂ ಸಂಪ್ರದಾಯದಲ್ಲಿ ಸಾಮಾನ್ಯವಾಗಿ ಕಾಣದಿರುವ ಮಹಿಳಾ ಸಂತರು-ಸಾಧಕಿಯರು ಕ್ರಿಯಾಶೀಲವಾಗಿ ಇದ್ದದ್ದು. ಬೇಹಾತ್ ಬೀಬಿ, ದೌತಾ ಬೀಬಿ ಸಲಾಬೀಬಿ ಮುಂತಾದವರ ಜತೆ ಸಂಘೂಬೀಬಿ, ಗಂಗಾಬೀಬಿಯಂಥಾ ಮಹಿಳಾ ಸಾಧ್ವಿಗಳು ಧರ್ಮ ಪ್ರಚಾರದಲ್ಲಿ ಮತ್ತು ಸಮಾಜ ಸುಧಾರಣೆಯಲ್ಲಿ ತೊಡಗಿಕೊಂಡಿದ್ದರು. ಇದರಲ್ಲಿ ಪ್ರಮುಖ ಹೆಸರು ಲಾಲ್‍ದೇಟ್ ಅಥವಾ ಲಲ್ಲಾಮಾಜಿ. ಈಗಲೂ ಈಕೆ ಕಾಶ್ಮೀರಿಗಳಿಗೆ ಪವಿತ್ರಳು. ಕಾಶ್ಮೀರದ ಬಗ್ಗೆ ಆಳವಾಗಿ ತಿಳಿದಿದ್ದ, ಅಪಾರ ಕಾಳಜಿ ಇದ್ದ ಮಾನವ ಹಕ್ಕು ಹೋರಾಟಗಾರ ಶ್ರೀ ಬಾಲಗೋಪಾಲ್ ಪ್ರಕಾರ ಕಾಶ್ಮೀರದ ದರ್ಗಾಗಳಲ್ಲಿನ ಧಾರ್ಮಿಕ ಆಚರಣೆಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯಗಳೆರಡಕ್ಕೂ ಸ್ಥಾನವಿದೆ. ಸಂತರ ಭೌತಿಕ ಚಿಹ್ನೆಗಳನ್ನು ಕಾಪಾಡುವುದು, ಧರ್ಮಗ್ರಂಥಗಳನ್ನು ಹಾಡುವುದು, ಕೈಮುಗಿದು ಪ್ರಾರ್ಥಿಸುವುದು ಇವೆಲ್ಲವೂ ಇಸ್ಲಾಂ ಪೂರ್ವ ಆಚರಣೆಗಳಾಗಿದ್ದು, ಅವು ಇಲ್ಲಿನ ಸಂಸ್ಕೃತಿಯ ಭಾಗವಾಗಿದೆಯೆಂದು ಚರಿತ್ರೆಯಿಂದ ಸೃಷ್ಟವಾಗುತ್ತದೆ.

ಸೂಫಿ ಧರ್ಮಕ್ಕೂ ಮುಂಚೆ, ಕಾಶ್ಮೀರ ಕಣಿವೆಯನ್ನು ವಿವಿಧ ಸಂಸ್ಥಾನಗಳು ಆಳುತ್ತಿದ್ದವು. ಇದರ ಇಡೀ ಇತಿಹಾಸವನ್ನು ಕೆಲವೊಮ್ಮೆ ಚರಿತ್ರೆ, ಕೆಲವೊಮ್ಮೆ ಮಿಥಿಕಗಳನ್ನು ಮಿಶ್ರಣಮಾಡಿ, ಕಟ್ಟಿಕೊಡುವ ಗ್ರಂಥ ಕಲ್ಹಣನ ‘ರಾಜತರಂಗಿಣಿ’. ಬೌದ್ಧಪಂಥದ ಅನುಯಾಯಿಯಾಗಿದ್ದ ಕುಷಾಣರು ಮೊದಲುಗೊಂಡು, ನಂತರ ಮಾಳವ, ನಾಗ, ಇಸ್ಲಾಂ ಸಂಸ್ಥಾನಗಳಿಂದ ಆಳಿಸಿಕೊಂಡು ಕಡೆಗೆ ಕಲ್ಹಣನ ಸಮಕಾಲೀನನಾಗಿದ್ದ ರಾಜ ಜಯಸಿಂಹನವರೆಗೆ (1129-49) ಈ ಪುಸ್ತಕದ ಕಥನ ಸಾಗುತ್ತದೆ. ನಂತರ ಕಾಶ್ಮೀರ ಮೊಘಲರ ಆಳ್ವಿಕೆಗೆ ಒಳಪಡುತ್ತದೆ.

ಕಲ್ಹಣನ ರಾಜತರಂಗಿಣಿಯನ್ನೇ ಒಂದು ಆಧಾರವಾಗಿ ಭಾವಿಸಿಕೊಂಡು ಹಿಂದೂ ಸಂಸ್ಥಾನವಾಗಿದ್ದ ಕಾಶ್ಮೀರವನ್ನ ಮುಸ್ಲಿಮರು ವಶಪಡಿಸಿಕೊಂಡಿದ್ದನ್ನೇ ತಮ್ಮ ವಾದಕ್ಕೆ ಬಳಸಿಕೊಳ್ಳುವ ಹಿಂದುತ್ವ ವಕ್ತಾರರು ಈಗ ಅದಕ್ಕೆ ಮುಕ್ತಿ ಸಿಗುವ ಕಾಲ ಬಂದಿದೆ ಎಂದು ವಾದಿಸಬಹುದು. ಆದರೆ ಇದು ಇತಿಹಾಸವನ್ನು ತನ್ನ ಸದ್ಯದ ಅಗತ್ಯಕ್ಕೆ ತಕ್ಕಂತೆ ಓದಿಕೊಳ್ಳುವ, ಪುನರುತ್ಥಾನದ ಮಾದರಿಯ ವ್ಯಾಖ್ಯಾನ ಆಗುತ್ತದೆ. ಆದರೆ ಕಾಶ್ಮೀರಿಗಳು ತಮ್ಮ ಮೇಲೆ ಪರರ ಅಧಿಕಾರ ಅಕ್ಬರನ ಕಾಲದಿಂದಲೇ (1586) ಪ್ರಾರಂಭವಾಯಿತು ಎಂದು ಭಾವಿಸುತ್ತಾರೆ. ಮೊಘಲರಿಂದ ಆಫ್ಘನ್‍ರ ಕೈಗೆ, ನಂತರ ಸಿಖ್ಖರಿಗೆ ಅವರಿಂದ ಡೋಗ್ರಾ ವಂಶಸ್ಥರಿಗೆ ತಮ್ಮ ನಾಡು ಹಸ್ತಾಂತರ ಆಯಿತು ಎಂಬುದೇ ಅವರ ಭಾವನೆ. ಹೀಗಾಗಿ ಭಾರತದ ಉಳಿದೆಡೆ ಬ್ರಿಟಿಷರ ವಿರುದ್ಧ ಹೋರಾಟ ನಡೆಯುತ್ತಿದ್ದಾಗ, ಕಾಶ್ಮೀರಿಗಳು ಡೊಗ್ರಾ ರಾಜನ ವಿರುದ್ಧ ಹೋರಾಡುತ್ತಿದ್ದರು. ಕಡೆಗೂ ವಿಲೀನದ ಪ್ರಶ್ನೆ ಬಂದಾಗ ಅಲ್ಲಿನ ಜನರಿಗೆ ಆಯ್ಕೆ ಮಾಡುವ ಸ್ವಾತಂತ್ರ್ಯ ಇರಲಿಲ್ಲ. ಅತ್ತ ಭಾರತಕ್ಕೂ, ಇತ್ತ ಪಾಕಿಸ್ತಾನಕ್ಕೂ ಸೇರದೆ ಸ್ವತಂತ್ರವಾಗಿರಬೇಕೆನ್ನುವುದು ಅಲ್ಲಿನ ಜನರ ಬಯಕೆಯಾಗಿತ್ತು.

ಸ್ವಾತಂತ್ರ್ಯದ ದಿನಗಳು ಹತ್ತಿರವಾಗುತ್ತಿದ್ದಂತೆ ಅಲ್ಲಿನ ಮುಸ್ಲಿಮರ ರಾಜಕೀಯ ಸಂಘಟನೆಯಾಗಿದ್ದ ಷೇಕ್ ಅಬ್ಲುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರನ್ಸ್, ಮುಸ್ಲಿಂ ಲೀಗ್ ಪಕ್ಷವನ್ನು ವಿರೋಧಿಸಿತು. ಪಾಕಿಸ್ತಾನದ ಜತೆ ವಿಲೀನವಾದರೆ ತಮ್ಮ ಅಸ್ಮಿತೆ ನಾಶವಾಗುತ್ತದೆ ಎನ್ನುವುದರಿಂದ ಕಾನ್ಫರೆನ್ಸ್ ಅಲ್ಲಿಗೆ ಹೋಗಲು ಸಿದ್ಧವಿರಲಿಲ್ಲ. ಮೊದಲು ಸ್ವಾತಂತ್ರ್ಯ. ನಂತರ ವಿಲೀನದ ಪ್ರಶ್ನೆ ಎಂದು 1947ರ ಅಕ್ಟೋಬರ್ 2ರಂದು ಘೋಷಿಸಿದ್ದರು. ಹಿಂದೂವಾದ ಹರಿಸಿಂಗ್ ಮೊದಲಿಗೆ ಪಾಕಿಸ್ತಾನದ ಭಾಗವಾಗಿರಲು ಸಿದ್ಧನಿದ್ದ. ಆಗ ತನ್ನ ರಾಜ್ಯದ ರಾಜನಾಗಿ ಮುಂದುವರೆಯಬಹುದು. ಆದರೆ ಭಾರತದಲ್ಲಿ ವಿಲೀನವಾದರೆ ತನ್ನ ಸ್ಥಾನಕ್ಕೆ ಚ್ಯುತಿಯಾಗುತ್ತದೆ ಎನ್ನುವ ಚಿಂತನೆ ಅವನದ್ದು. ಇದು ಇತಿಹಾಸದ ವ್ಯಂಗ್ಯವಾಗಿ ಇಂದು ನಮಗೆ ಕಾಣಬಹುದಾದರೂ ಇದು ನಿಜ. ಆದರೆ ಹರಿಸಿಂಗ್ ವಿರುದ್ಧ 1947ರಲ್ಲಿ ಪೂಂಜ್ ಪ್ರಾಂತ್ಯದಲ್ಲಿ ಒಂದು ದಂಗೆ ಆಯಿತು. ಈ ದಾಳಿಗೆ ಪಾಕಿಸ್ತಾನದ ಕುಮ್ಮಕ್ಕು ಇತ್ತು. ಇದರಿಂದ ತಾನು ಭಾರತದ ಜತ ವಿಲೀನವಾಗಬೇಕಾದ ಒತ್ತಡ ಹರಿಸಿಂಗ್ ಮೇಲೆ ಬಂದದ್ದರಿಂದ ಆತ ಅನಿವಾರ್ಯವಾಗಿ ಭಾರತದ ಜತೆ 1947ರ ಅಕ್ಟೋಬರ್ 20ರಂದು ವಿಲೀನದ ಒಪ್ಪಂದಕ್ಕೆ ಸಹಿ ಹಾಕಿದ.

ಇದರ ಬಗ್ಗೆ ಬರೆಯುತ್ತಾ ಬಾಲಗೋಪಾಲ್ ಹೇಳುವುದು ಇದು:
“ಒಪ್ಪಂದದ ಪ್ರಕಾರ ಭಾರತ ಸರ್ಕಾರಕ್ಕೆ ರಕ್ಷಣೆ, ವಿದೇಶಿ ವ್ಯವಹಾರಗಳು ಹಾಗೂ ಸಮಾಚಾರ ಇವುಗಳಿಗೆ ಸಂಬಂಧಪಟ್ಟಂತೆ ಮಾತ್ರ ಕಾಶ್ಮೀರದ ಮೇಲೆ ಅಧಿಕಾರ ಪ್ರಾಪ್ತವಾಯಿತು. ವಿಲೀನದ ಬಗೆಗಿನ ಪ್ರಕಟಣೆಯನ್ನು ಒಪ್ಪಿಕೊಳ್ಳುತ್ತಾ ರಾಜ್ಯದಲ್ಲಿ ಶಾಂತಿ ನೆಲೆಯೂರಿ, ಈ ವಿಲೀನಕ್ಕೆ ಜನರು ಒಪ್ಪಿಗೆಯನ್ನು ಸೂಚಿಸಿದ ನಂತರ ವಿಲೀನ ಪೂರ್ಣವಾಗುತ್ತದೆ ಎಂದು (ಹರಿಸಿಂಗ್) ಪ್ರಕಟಿಸಿದ. ಆದರೆ ಇದುವರೆಗೂ ಜನರ ಅಭಿಪ್ರಾಯವನ್ನಾಗಲೀ, ಒಪ್ಪಿಗೆಯನ್ನಾಗಲೀ ತೆಗೆದುಕೊಳ್ಳುವ ಪ್ರಯತ್ನವನ್ನು ಭಾರತ ಸರ್ಕಾರ ಮಾಡಿಲ್ಲ. ಯಾವುದೇ ರಾಜ್ಯ ಒಂದು ರಾಷ್ಟ್ರದ ಭಾಗವಾಗುವುದಕ್ಕೆ ಅಲ್ಲಿನ ಜನರ ಒಪ್ಪಿಗೆ ಮುಖ್ಯವೆಂಬ ಪ್ರಜಾತಾಂತ್ರಿಕ ಮೌಲ್ಯವನ್ನು ಯಾಕೆ ಕೈ ಬಿಡಲಾಗಿದೆ ಎಂಬುದು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ.”

ವಿಲೀನದ ಒಪ್ಪಂದದ ನಂತರ ಪಾಕಿಸ್ತಾನದ ದಾಳಿಕೋರರನ್ನು ಭಾರತದ ಸೈನ್ಯ ಹಿಮ್ಮೆಟ್ಟಿಸಿತು. ಆಗ ಅದಕ್ಕೆ ಸಹಕಾರ ನೀಡಿದ್ದು ಕಣಿವೆಯ ಜನ. ಹರಿಸಿಂಗ್ ಅಲ್ಲಿಂದ ಪಲಾಯನ ಮಾಡಿದ, ಆಗ ಅಧಿಕಾರ ನ್ಯಾಷನಲ್ ಕಾನ್ಫರೆನ್ಸ್ ಬಳಿ ಇತ್ತು.

ಆ ಪಕ್ಷ ಆಗ ಕಣಿವೆಯ ಎಲ್ಲ ಧರ್ಮದವರನ್ನೂ ಅವರ ಆಸ್ತಿಪಾಸ್ತಿಗಳನ್ನೂ ಕಾಪಾಡಿತು. ಆಗ ಜನಾಭಿಪ್ರಾಯ ಭಾರತದ ಪರವಾಗಿಯೇ ಇತ್ತು. ಆಗಲೇ ಜನಾಭಿಪ್ರಾಯವನ್ನು ಸಂಗ್ರಹಿಸಿದ್ದರೆ ಇಂದು ಕಾಶ್ಮೀರದ ಚರಿತ್ರೆ ಬಹುಶಃ ಬೇರೆಯದಾಗಿರುತ್ತಿತ್ತು. ನಂತರ ನಡೆದ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಕಾಶ್ಮೀರ ಇಬ್ಭಾಗವಾಯಿತು. ಒಂದು ಭಾಗವನ್ನು ಭಾರತ ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ ಎಂದು ಕರೆದರೆ, ಮತ್ತೊಂದು ಭಾಗವನ್ನು ಪಾಕಿಸ್ತಾನ ‘ಭಾರತ ಆಕ್ರಮಿತ ಕಾಶ್ಮೀರ’ ಎಂದು ಇಂದಿಗೂ ಕರೆಯುತ್ತಿವೆ. ಹಾಗೆ ನೋಡಿದರೆ ನಮ್ಮ ಭೂಪಟದಲ್ಲಿ ಮುಕ್ಕಾಗದ ಅಕಮಡ ಕಾಶ್ಮೀರವನ್ನೇ ನಾವು ‘ಅಧಿಕೃತ’ವಾಗಿ ತೋರಿಸುತ್ತಿದ್ದೇವೆಯಾದರೂ ವಾಸ್ತವದಲ್ಲಿ ಹಾಗಿಲ್ಲ.

ಎರಡೂ ದೇಶಗಳು ಯುದ್ಧವನ್ನು ನಿಲ್ಲಿಸಿ, ಶಾಂತಿ ನೆಲೆಯಾಗುವಂತೆ ವಿಶ್ವಸಂಸ್ಥೆ ಒಂದು ಆಯೋಗವನ್ನು ರಚಿಸಿತು. ಅದರಂತೆ 1948 ಏಪ್ರಿಲ್ 21ರಂದು ಜನಮತ ಸಂಗ್ರಹ (ಪ್ಲೆಬಿಸೈಟ್) ಮಾಡುವ ವಿಚಾರವನ್ನು ವಿಶ್ವಸಂಸ್ಥೆ ಕೈಗೆತ್ತಿಕೊಂಡಿತು. ಜಮ್ಮು ಕಾಶ್ಮೀರದ ಜನರು ಸ್ವಯಂ ನಿರ್ಧಾರದ ನಿರ್ಣಯಕ್ಕೆ ಬರಲು ಒಪ್ಪಿದುದಕ್ಕೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿತು.

ಆದರೆ ಇಂದಿನವರೆಗೂ ಆ ಪ್ಲೆಬಿಸೈಟ್ ನಡೆದಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಸೈನ್ಯವನ್ನು ಮುಂದುವರೆಸಬೇಕೇ ಇಲ್ಲವೇ ಎಂಬ ವಿಷಯ ಮುಖ್ಯವಾಗಿ, ಪ್ರಶ್ನೆ ಜಟಿಲವಾಯಿತು. ಸ್ವಯಂ ನಿರ್ಣಯದ ಹಕ್ಕು (ಇದು ವಿಶ್ವಸಂಸ್ಥೆಯ ಒಡಂಬಡಿಕೆಯಾಗಿದ್ದು, ಅದಕ್ಕೆ ಭಾರತ ಸಹಿ ಮಾಡಿದೆ) ಹೀಗೆ ಎರಡು ದೇಶಗಳ ನಡುವಿನ ಸಮಸ್ಯೆಯಾಗಿ ಮಾರ್ಪಟ್ಟಿದ್ದರಿಂದ ಅದು ಬಗೆಹರಿಯದ ಕಗ್ಗಂಟಾಗಿ ಮುಂದುವರೆಯಿತು. ಎರಡೂ ರಾಷ್ಟ್ರಗಳ ಸಂಘರ್ಷಕ್ಕೆ ಕಾಶ್ಮೀರ ವೇದಿಕೆ ಆಯಿತು.

ನಂತರ 1989ರವರೆಗೂ ಹೆಚ್ಚು ಕಡಿಮೆ ಶಾಂತಿಯುತವಾಗಿಯೇ ನಡೆಯುತ್ತಿದ್ದ ಸ್ವಯಂ ನಿರ್ಣಯದ ಬೇಡಿಕೆ ನಂತರ ಸಶಸ್ತ್ರ ಹೋರಾಟವಾಗಿ ಪರಿವರ್ತನೆಗೊಂಡಿತು. ಯಾವಾಗ ಮಿಲಿಟೆಂಟ್ ಹೋರಾಟ ಪ್ರಾರಂಭವಾಯಿತೋ ಅಲ್ಲಿಂದ ಭಾರತ ಅದನ್ನ ಬಗ್ಗು ಬಡಿಯಲು ಮುಂದಾಯಿತು. ಸ್ವಯಂ ನಿರ್ಣಯದ ರಾಜಕೀಯ ಪ್ರಶ್ನೆ ಹಿಂದಕ್ಕೆ ಸರಿದು ಕಾನೂನು ಸುವ್ಯವಸ್ಥೆಯ ವಿಚಾರ ಮಾತ್ರ ಮುಂದಕ್ಕೆ ಬಂತು. ಪಾಕಿಸ್ತಾನವು ಕದಡಿದ ನೀರಿನಲ್ಲಿ ಮೀನು ಹಿಡಿಯುವ ಕೆಲಸ ಹೆಚ್ಚಿಸಿತು. ಪಾಕಿಸ್ತಾನದ ರಾಜಕಾರಣಿಗಳಿಗೆ ಕಾಶ್ಮೀರವು ಕುದಿಯುವ ಕುಲುಮೆಯಾದಷ್ಟೂ ಅನುಕೂಲ. ಮಿಲಿಟೆನ್ಸಿ ಹೆಚ್ಚಾಗಿ ಅಲ್ಲಿನ ಪಂಡಿತರನ್ನು ಕೊಲೆಮಾಡಲಾಯಿತು. ಅವರು ಶತಮಾನಗಳಿಂದ ಬದುಕಿದ್ದ ತಮ್ಮ ನೆಲೆ ಕಳೆದುಕೊಂಡು ನಿರಾಶ್ರಿತರಾಗಬೇಕಾಯಿತು.

ಇದು ಕಾಶ್ಮೀರ ಹೋರಾಟ ಹಿಂದೂ-ಮುಸ್ಲಿಂ ಹೋರಾಟವೆಂದು ಕರೆಸಿಕೊಳ್ಳಲು ಪ್ರಮುಖ ಕಾರಣವಾಯಿತು. ಮುಂದಿನ ವರ್ಷಗಳಲ್ಲಿ ಕಣಿವೆಯಲ್ಲಿ ಹೇರಳವಾಗಿ ನೆತ್ತರು ಹರಿಯಿತು. ಇದರಲ್ಲಿ ಭಾರತದ ಸೇನೆ ಮತ್ತು ಕಾಶ್ಮೀರಿ ತೀವ್ರಗಾಮಿಗಳಲ್ಲದೆ, ಹುರಿಯತ್ ಕಾನ್ಫರೆನ್ಸ್‍ನ ಮುಂದಾಳುಗಳೂ ಹತ್ಯೆಗೀಡಾದರು. ಅವರಲ್ಲೇ ಒಡಕು ಉಂಟಾಗಿದ್ದರಿಂದ ನಾಯಕತ್ವದ ಪ್ರಶ್ನೆ ಜಟಿಲವಾಯಿತು. ಇದರಲ್ಲಿ ಕಟ್ಟರ್ ಮೂಲಭೂತವಾದಿಯಾದ ಗಿಲಾನಿ ಅವರಿಂದ ಹಿಡಿದು ಸುಧಾರಣಾವಾದಿಯಾದ ಅಬ್ದುಲ್‍ಗನಿ ಲೋನ್ ಅಂಥವರೂ ಇದ್ದರು. ಅಲ್ಲಿನ ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ಕಂಡು ಬರಲು ತೆರಳಿದ್ದ ಮಾನವ ಹಕ್ಕುಗಳ ತಂಡದ ಜತೆ ಮಾತನಾಡುತ್ತಾ, ಗಿಲಾನಿಯಂಥಾ ಇಸ್ಲಾಂ ಮೂಲಭೂತವಾದಿ ಕೂಡ ‘ಸ್ವಾತಂತ್ರ್ಯ ಬಂದಮೇಲೆ ನಾವು ಸ್ವತಂತ್ರವಾಗಿ ಇರಲು ಬಯಸುತ್ತೇವೆ ವಿನಃ ಪಾಕಿಸ್ತಾನಕ್ಕೆ ಹೋಗುವುದಿಲ್ಲ’ ಎಂದಿದ್ದರು. ಇದರ ಸತ್ಯಾಸತ್ಯತೆ ಏನೇ ಇರಲಿ, ಈ ಮಾತು ಅಲ್ಲಿನ ಜನರ ಪ್ರಧಾನ ಆಶೋತ್ತರವನ್ನು ಪ್ರತಿನಿಧಿಸುತ್ತಿತ್ತು. ಪಾಕಿಸ್ತಾನದ ಪರ ಇರುವವರೂ ಪಾಕಿಸ್ತಾನಕ್ಕೆ ಸೇರಬೇಕು ಎನ್ನುವ ಆಶಯವನ್ನಿಟ್ಟುಕೊಂಡು ಅಲ್ಲಿನ ‘ಆಜಾದಿ ಚಳುವಳಿ’ಯನ್ನು ನಡೆಸುವುದಕ್ಕೆ ಆಗುವುದಿಲ್ಲ ಎಂಬ ಸೂಚನೆ ಇದು.

ಆದರೆ ಹುರಿಯತ್ ಮುಖಂಡರ ಬಗ್ಗೆ ಕಾಶ್ಮೀರದ ಸಾಮಾನ್ಯ ಜನತೆಗೆ ತೀವ್ರ ಅಸಮಾಧಾನವಿದೆ. ಅವರ ಐಷಾರಾಮೀ ಜೀವನದ ಬಗ್ಗೆ ಸಿಟ್ಟಿದೆ. ಆದರೂ ವಿದ್ಯಾವಂತ ಯುವಕರನೇಕರು ಒಳ್ಳೆಯ ಕೆಲಸಗಳನ್ನು ಬಿಟ್ಟು ಬಂದು ಹೋರಾಟಕ್ಕೆ ಸೇರಿಕೊಳ್ಳುತ್ತಿದ್ದಾರೆ. ಸೇನೆಯಿಂದ ಅಥವಾ ಉಗ್ರಗಾಮಿಗಳಿಂದ ಹತರಾದ ಮಕ್ಕಳ ತಂದೆತಾಯಿಯರನ್ನು, ಅಣ್ಣ-ತಮ್ಮಂದಿರನ್ನು ನಾವು ಮಾತನಾಡಿಸಿದ್ದೇವೆ. ಮನೆಯ ಒಬ್ಬನನ್ನು ಕಳೆದುಕೊಂಡು ದುಃಖದಲ್ಲಿದ್ದಾಗಲೂ ಅವರು ಆಜಾದಿಯ ಬಗ್ಗೆ ಮಾತನಾಡುತ್ತಾರೆ. ದೊಡ್ಡವರನ್ನು ಬಿಡಿ ಶಾಲೆಗೆ ಹೋಗುವ ಪೋರ-ಪೋರಿಯರೂ ಇದನ್ನೇ ಉಚ್ಚರಿಸುತ್ತಾರೆ. ಈಗ ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಕಾಶ್ಮೀರ ವಿಲೀನ ಸಂಪೂರ್ಣಗೊಂಡಿದೆ ಅಥವಾ ಒಂದು ನಿರ್ದಿಷ್ಟ ಹಂತಕ್ಕೆ ಮುಟ್ಟಿದೆ ಎಂದು ಅಂದುಕೊಳ್ಳುವವರು ಹೆಚ್ಚಾಗಿದ್ದಾರೆ. ಅನೇಕ ಕಾಂಗ್ರೆಸ್ಸಿಗರಿಗೇ ಹೀಗನಿಸಿದೆ. ಅಲ್ಲದೆ ಇದರಿಂದ ಕಣಿವೆಯಲ್ಲಿ ಶಾಂತಿ ಏರ್ಪಟ್ಟು ಅಭಿವೃದ್ದಿ ವಂಚಿತರಾಗಿದ್ದವರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯುತ್ತವೆ ಎಂದು ಹೇಳಲಾಗುತ್ತಿದೆ. ಇದರಿಂದ ಅಲ್ಲಿನ ಮಹಿಳೆಯರು ಮತ್ತು ದಲಿತರಿಗೆ ಹೆಚ್ಚಿನ ಅವಕಾಶಗಳು ಉಂಟಾಗುತ್ತದೆ ಎಂದೂ ಹೇಳಲಾಗಿದೆ.

ಸರ್ಕಾರದ ಈ ಕ್ರಮದಿಂದ ಕಾಶ್ಮಿರದಲ್ಲಿ ಮುಕ್ತ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟು, ಸ್ವದೇಶಿ ಮತ್ತು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವುದರಿಂದ ಅಲ್ಲಿನ ಹೋರಾಟದ ಹುರುಪು ಕಡಿಮೆಯಾಗಿ, ಅಲ್ಲಿನ ಜನ ಅದರಲ್ಲೂ ಯುವಕ ಯುವತಿಯರು ಉದ್ಯೋಗಸ್ಥರಾಗಿ ‘ಮಾಮೂಲು’ ಜೀವನವನ್ನು ಸಾಗಿಸುವುದರ ಮೂಲಕ ಮುಖ್ಯಧಾರೆಯೊಡನೆ ವಿಲೀನವಾಗುತ್ತಾರೆ ಎಂಬ ಆಶಯವಿದೆ.
ದಶಕಗಳ ಹೋರಾಟದಿಂದ ದಣಿದ ಜನಸಮುದಾಯದಲ್ಲಿ ಮಹತ್ವಾಕಾಂಕ್ಷೆಯ ವರ್ಗ ಹೆಚ್ಚಾಗಿದ್ದು ಅದು ಈ ಕ್ರಮವನ್ನು ಕ್ರಮೇಣ ಸ್ವಾಗತಿಸುತ್ತದೆ ಎನ್ನುವ ನಂಬಿಕೆ ಇದರ ಹಿಂದೆ ಇದೆ. ಆದರೆ ಕೇಂದ್ರ ಸರ್ಕಾರದ ಈ ಕ್ರಮದ ನ್ಯಾಯಬದ್ದತೆ ಏನೇ ಇರಲಿ, ಈ ನಿರ್ಧಾರವನ್ನು ಅವರ ಮೇಲೆ ಹೇರಲಾಗಿದೆ ಮತ್ತು ಅವರ ಆಶೋತ್ತರಗಳನ್ನು ಕಡೆಗಣಿಸಲಾಗಿದೆ ಎಂಬುದಂತೂ ನಿಜ.

ಹಿರಿಯ ವಕೀಲ ಹರೀಶ್ ಸಾಳ್ವೆ ಇದು ಆಶಯವಾಗಿ ಸರಿ ಇರಬಹುದಾದರೂ ಪ್ರಾಕ್ಟಿಕಲ್ ಆಗಿ ಸಾಧ್ಯವಾಗದ ವಿಷಯವಾದ್ದರಿಂದ ಸರ್ಕಾರದ ಮುಂದೆ ಬೇರೆ ಆಯ್ಕೆಗಳಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು ಏನೇ ಇರಲಿ ಕಣಿವೆ ತುಂಬಾ ಸೇನೆಯನ್ನು ಕಳುಹಿಸಿ ಪ್ರತಿಯೊಬ್ಬನ ಮೇಲೂ ಕಟ್ಟೆಚ್ಚರ ಇರುವಂಥ ದುಸ್ಥಿತಿ ಈ ಅಪ್ರಜಾಸತ್ತಾತ್ಮಕ ನಿರ್ಧಾರದಿಂದ ಉಂಟಾಗಿದೆ. ಅಲ್ಲಿ ಮತ್ತೆ ಜನ ಉಸಿರು ಬಿಡದಂತೆ ಮಾಡಿ ಅದರ ಮೇಲೆ ‘ಅಭಿವೃದ್ಧಿ’ಯನ್ನು ಹೇರುವುದರ ಮೂಲಕ ಮಾತ್ರ ಏನಾದರೂ ಬದಲಾವಣೆ ಸಂಭವಿಸಲು ಸಾಧ್ಯ. ಅಲ್ಲಿಯ ಜನಸಂಖ್ಯಾ ಸ್ವರೂಪವನ್ನು ಬದಲಾಯಿಸುವ ಹುನ್ನಾರವೂ ಇರಬಹುದು.

ಇದಾವುದೂ ಅಂದುಕೊಂಡಂತೆ ಆಗದಿದ್ದರೆ ಅಲ್ಲಿ ಮತ್ತಷ್ಟು ಹಿಂಸಾಚಾರ ಮತ್ತು ಅಸಮಾಧಾನ ಹೆಚ್ಚುವುದಂತೂ ನಿಚ್ಚಳ. ಭಾರತದ ಅಖಂಡತ್ವ ಸಾಧಿಸಲು ಇನ್ನೆಷ್ಟು ಜನ ಬಲಿಯಾಗಬೇಕೋ, ಅದು ಮುಸ್ಲಿಮರಾಗಿದ್ದರೆ ನಮ್ಮ ರಾಷ್ಟ್ರೀಯತೆ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಭಾವಿಸುವವರಿಗೆ, ಅದಕ್ಕಿಂತ ಇನ್ನೇನು ಬೇಕು?
ಏನಾದರೂ ಇರಲಿ, ಕಾಶ್ಮೀರದಲ್ಲಿ ಶಾಂತಿ ನೆಲೆಸಲಿ. ದ್ವೇಷಕ್ಕಿಂತಲೂ ಮಾನವೀಯತೆಯು ದೊಡ್ಡದು ಎಂದು ಎಲ್ಲರಿಗೂ ಅನಿಸಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...