Homeಮುಖಪುಟಭಾರತದ ಸಂಸ್ಕೃತಿಯೆಂದರೆ ಕೇವಲ ವೈದಿಕ ಸಂಸ್ಕೃತಿಯೇ?: ಭಾರತೀಯ ಸಂಸ್ಕೃತಿ ಅಧ್ಯಯನದ ಹಿಂದಿನ ಹುನ್ನಾರಗಳು

ಭಾರತದ ಸಂಸ್ಕೃತಿಯೆಂದರೆ ಕೇವಲ ವೈದಿಕ ಸಂಸ್ಕೃತಿಯೇ?: ಭಾರತೀಯ ಸಂಸ್ಕೃತಿ ಅಧ್ಯಯನದ ಹಿಂದಿನ ಹುನ್ನಾರಗಳು

ಈ ಭವ್ಯ ಪರಂಪರೆಯಲ್ಲಿ ಹೇಲು ಹೊರಲು ಒಂದು ಜಾತಿಯನ್ನು ಅಥವಾ ಸಮುದಾಯವನ್ನು ಸೃಷ್ಟಿಸಲಾಗಿತ್ತು ಎಂದು ಇವರು ಬರೆಯಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಹಾಗಾಗಿಯೇ ನಾನು ಹೇಳುತ್ತಿರುವುದು ಇದು ಪಾರ್ಶ್ವಿಕ (ವೈದಿಕ) ಚರಿತ್ರೆ ಎಂದು- ಪುರುಷೋತ್ತಮ ಬಿಳಿಮಲೆ

- Advertisement -
- Advertisement -

ಭಾರತೀಯ ಸಂಸ್ಕೃತಿಯ ಮೇಲೆ ಹಿಂದೆಂದಿಗಿಂತಲೂ ಇಂದು ತೀವ್ರವಾದ ಆಕ್ರಮಣ ನಡೆಯುತ್ತಿದೆ. ಇದು ಬೇರೆ ಯಾರೋ ವಿದೇಶೀಯರಿಂದಲೋ ಅಥವಾ ವಿದೇಶಿ ಸಂಸ್ಕೃತಿಯಿಂದಲೋ ನಡೆಯುತ್ತಿಲ್ಲ. ಬದಲಾಗಿ, ಒಂದು ದೇಶ, ಒಂದು ಭಾಷೆ ಎಂದು ಹೇಳುತ್ತಿರುವ ಭಾರತದಲ್ಲಿನ ಮೂಲಭೂತವಾದದ ಕೆಟ್ಟ ಮನಸ್ಥಿತಿಗಳಿಂದ ಇಂದು ಭಾರತದ ಬಹು ಸಂಸ್ಕೃತಿಯ ಮೇಲೆ ತೀರಾ ಅಪಾಯಕಾರಿ ಆಕ್ರಮಣ ನಡೆಯುತ್ತಿದೆ.

ಶ್ರೇಷ್ಠತೆಯ ವ್ಯಸನವುಳ್ಳ ರಾಜಕಾರಣಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಾನು ನಂಬಿದ ಸಿದ್ಧಾಂತ, ತಾನು ಅನುಸರಿಸುತ್ತಿರುವ ಮತ, ಸಂಸ್ಕೃತಿಯೇ ಉನ್ನತವಾದದ್ದು ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ. ಆ ಮೂಲಕ ಸ್ಥಳೀಯ ಸಂಸ್ಕೃತಿಯ ಅಸ್ಮಿತೆಯನ್ನು ಇಲ್ಲವಾಗಿಸಲು ಪ್ರಯತ್ನಿಸುತ್ತಾರೆ. ಇಂದು ಭಾರತದಲ್ಲಿ ನಡೆಯುತ್ತಿರುವುದೂ ಇದೇ.

ಇದನ್ನೂ ಓದಿ: ಸ್ವಾತಂತ್ರ ಬಂತು ಸ್ವಾಯತ್ತತೆ ಹೋಯ್ತು : ಇದು ಕನ್ನಡಿಗರ ಕೂಗು

ಭಾರತದ ಸಂಸ್ಕೃತಿಯ ಹುಟ್ಟು ಮತ್ತು ವಿಕಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಲು ಕೇಂದ್ರ ಸಂಸ್ಕೃತಿ ಸಚಿವಾಲಯವು 16 ಜನರ ತಂಡವೊಂದನ್ನು ರಚಿಸಿದೆ. ವಿಪರ್ಯಾಸವೆಂದರೆ ಈ ಸಮಿತಿಯಲ್ಲಿ ದಕ್ಷಿಣ ಭಾರತದ ಸಂಸ್ಕೃತಿಯ ಬಗ್ಗೆ ಜ್ಞಾನವಿರುವ, ಅಧ್ಯಯನ ಮಾಡಿರುವ ಪರಿಣಿತರಾಗಲೀ, ವಿದ್ವಾಂಸರಾಗಲೀ ಅಥವಾ ತಳ ಸಮುದಾಯದ ಪ್ರತಿನಿಧಿಗಳಾಗಲೀ ಯಾರೂ ಇಲ್ಲ. ಎಲ್ಲರೂ ಉತ್ತರ ಭಾರತದವರೇ ಆಗಿದ್ದು, ಉನ್ನತ ಎಂದು ಹೇಳಿಕೊಳ್ಳುವ ಜಾತಿಯವರೇ ಆಗಿದ್ದಾರೆ. ಇಂತವರಿಂದ ಸಮಗ್ರ ದೃಷ್ಟಿಕೋನದ ಅಧ್ಯಯನ ನಡೆಯಲು ಹೇಗೆ ಸಾಧ್ಯ. ಅಥವಾ ಇಂತಹ ಅಧ್ಯಯನದ ಫಲಿತಾಂಶಗಳು ಏನನ್ನು ಧ್ವನಿಸಬಹುದು?

ಹಿಂದುತ್ವವನ್ನು ಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುತ್ತಿರುವವರು ಹೇಳುವ ಸಂಸ್ಕೃತಿ ಕೇವಲ ವೈದಿಕ ಅಥವಾ ಬ್ರಾಹ್ಮಣರ ಸಂಸ್ಕೃತಿ ಮಾತ್ರವೇ ಆಗಿದೆ. ಇದರಲ್ಲಿ ಭಾರತದ ಸ್ಥಳೀಯ ಸಂಸ್ಕೃತಿಯಾಗಲೀ, ಮೌಖಿಕ ಪರಂಪರೆಯಾಗಲೀ ಇರುವುದಿಲ್ಲ. ಭಾರತದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಸಮುದಾಯಗಳಿದ್ದು, 19 ಸಾವಿರಕ್ಕೂ ಹೆಚ್ಚು ಭಾಷೆಗಳಿವೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಸಂಸ್ಕೃತಿ ಮತ್ತು ಇತಿಹಾಸವಿದೆ. ಇವುಗಳನ್ನೆಲ್ಲಾ ಉದ್ದೇಶಪೂರ್ವಕವಾಗಿ ಕಡೆಗಣಿಸಿ ವೈದಿಕ ಪರಂಪರೆ ಮತ್ತು ಸಂಸ್ಕೃತ ಭಾಷೆಯನ್ನು ಭಾರತದ ಏಕಮಾತ್ರ ಉನ್ನತ ಸಂಸ್ಕೃತಿ ಎಂದು ಬಿಂಬಿಸಲು ಹೊರಟಿರುವ ಆರ್‌ಎಸ್‌ಎಸ್ ಪ್ರಣೀತ ಬಿಜೆಪಿ ಸರ್ಕಾರದ ಕುತಂತ್ರ ಇದಾಗಿದೆ.

ಇದನ್ನೂ ಓದಿ: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್‌ ಹೆಸರು: ಕನ್ನಡಿಗರನ್ನು ಬಂಧಿಸಿ ನಾಮಕರಣಕ್ಕೆ ಮುಂದಾದ ಸರ್ಕಾರ

ಯಾವುದೇ ಸರ್ಕಾರವಾದರೂ ಸಮಗ್ರತೆಯ ಪರಿದೃಷ್ಟಿಯನ್ನಿಟ್ಟುಕೊಂಡು ಕೆಲಸ ಮಾಡಬೇಕು. ಆದರೆ ಇದುವರೆಗೂ ನಮ್ಮ ದೇಶವನ್ನಾಳಿರುವ ಬಹುತೇಕ ಸರ್ಕಾರಗಳು ಉತ್ತರ ಭಾರತದ ಸಂಸ್ಕೃತಿಯೇ ಶ್ರೇಷ್ಠ ಎಂಬ ಭಾವನೆಯನ್ನಿಟ್ಟುಕೊಂಡೇ ಆಡಳಿತ ನಡೆಸಿವೆ. ಇಲ್ಲದಿದ್ದರೆ, ಭಾರತದ ಬಹುತೇಕ ಜನರಿಗೆ ಪರಿಚಿತವಿರುವ ರಾಮಾಯಣ ಮತ್ತು ಮಹಾಭಾರತದ ರಾಮ, ಕೃಷ್ಣರಂತೆ, ಕನ್ನಡದ ಸೊಗಡಿನ ಜನಪದ ಮಹಾಕಾವ್ಯಗಳ ನಾಯಕರಾದ ಮಹದೇಶ್ವರ, ಮಂಟೆಸ್ವಾಮಿ, ಜುಂಜಪ್ಪ ಮುಂತಾದವರ ಪರಿಚಯವೂ ಭಾರತದ ಎಲ್ಲರಿಗೂ ಇರಬೇಕಿತ್ತು. ಆದರೆ ಇಂದು ಕರ್ನಾಟಕವನ್ನು ಬಿಟ್ಟು ಉಳಿದ ಕಡೆ ಈ ಜನಪದರ ಬಗ್ಗೆ ಯಾರಿಗೂ ತಿಳಿದಿಲ್ಲ. ಇನ್ನು, ಉತ್ತರ ಭಾರತದವರಿಗಂತೂ ಇವರ ಹೆಸರಿನ ಪರಿಚಯವೂ ಇಲ್ಲ. ಆದರೆ ದಕ್ಷಿಣ ಭಾರತೀಯರಿಗೆ ಮಾತ್ರ ಉತ್ತರದ ರಾಮ ಕೃಷ್ಣರಿಂದ ಹಿಡಿದು ಕಬೀರರ ತನಕ ಎಲ್ಲರ ಪರಿಚಯವೂ ಇದೆ. ನಾವು ಓದುವ ಪಠ್ಯದಲ್ಲಿ ಉತ್ತರ ಭಾರತದ ನಾಯಕರ, ಸಂಸ್ಕೃತಿಯ ವಿವರಣೆಯಿರುತ್ತದೆ. ಆದರೆ, ಉತ್ತರ ಭಾರತದ ಮಕ್ಕಳು ಓದುವ ಪಠ್ಯದಲ್ಲಿ ದಕ್ಷಿಣ ಭಾರತೀಯರ ಸಂಸ್ಕೃತಿ ಮತ್ತು ನಾಯಕರ ಪರಿಚಯವಾದರೂ ಸಿಗುವುದೇ? ನಮ್ಮ ಪ್ರಶ್ನೆ ಇರುವುದು, ಅವರ ಬಗ್ಗೆ ಓದುತ್ತಿರುವುದಕ್ಕಲ್ಲ. ಆದರೆ ಅದು ಮಾತ್ರ ಸಾರ್ವತ್ರಿಕವಾಗಿರಬೇಕು ಎನ್ನುವುದರಲ್ಲಿ. ನಾವು ಅವರ ಬಗ್ಗೆ ಓದುವಂತೆ, ಅವರು ನಮ್ಮ ಬಗ್ಗೆ ಯಾಕೆ ಓದುವುದಿಲ್ಲ? ಇದು ಇಂದು ನಾವೆಲ್ಲರೂ ಕೇಳಬೇಕಾದ ಪ್ರಶ್ನೆ.

ಇತ್ತೀಚೆಗೆ, ಹಿಂದಿ ಹೇರಿಕೆ ಮತ್ತು ಕರ್ನಾಟಕದಲ್ಲಿನ ಸ್ಥಳಗಳಿಗೆ ಉತ್ತರ ಭಾರತದ ನಾಯಕರ ಹೆಸರಿಡುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಈಗ ಈ ಅಧ್ಯಯನ ಮಾಡಿ, ಸರ್ಕಾರದಿಂದಲೇ ಅಧಿಕೃತವಾಗಿ ಕೇವಲ ಉತ್ತರ ಭಾರತದ ಸಂಸ್ಕೃತಿ ಮತ್ತು ಇತಿಹಾಸ ಮಾತ್ರ ಭಾರತದ್ದು ಎಂದು ಸಾಬೀತುಪಡಿಸಲು ಹೊರಟಿದೆ. ಈ ಮೂಲಕ ಉಳಿದ ಸ್ಥಳೀಯತೆಯ ಅಸ್ಮಿತೆಯನ್ನು ನಾಶಮಾಡಲು ಮುಂದಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಉತ್ತರ ಭಾರತೀಯರ ಹೆಸರುಗಳ ವಿಜೃಂಭಣೆ: ಹೀಗಾದರೆ ಕನ್ನಡದ ಅಸ್ಮಿತೆಯ ಕತೆಯೇನು?

ಭಾರತೀಯ ಸಂಸ್ಕೃತಿ ಎಂದರೆ ಕೇವಲ ಒಂದು ಸಮುದಾಯದ, ಒಂದು ಜಾತಿಯ, ಒಂದು ಮತಕ್ಕೆ ಸೀಮಿತವಲ್ಲ. ಭಾರತ ಎಂದರೆ ವಿವಿಧತೆ, ಭಾರತ ಎಂದರೆ ಬಹು ಸಂಸ್ಕೃತಿ. ಆದರೆ ಇಂದಿನ ಆಳುವ ಸರ್ಕಾರ ಎಲ್ಲವನ್ನೂ ಏಕತೆಯೊಳಗೆ ಬಂಧಿಸುವ ಪ್ರಯತ್ನವನ್ನು ಮಾಡುತ್ತಿದೆ. ಇದರ ಮುಂದುವರಿದ ಭಾಗವೇ ಈ ಅಧ್ಯಯನ ಸಮಿತಿ.

ಇದರ ವಿರುದ್ಧ ಈಗಾಗಲೇ ದೇಶದಾದ್ಯಂತ ಸುಮಾರು 32 ಸಂಸದರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು, ಈ ಸಮಿತಿಯ ಸದಸ್ಯರನ್ನು ಪರಿಷ್ಕೃತಗೊಳಿಸಿ, ಸಮಗ್ರ ಅಧ್ಯಯನ ನಡೆಯಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇದರ ವಿರುದ್ಧ ದನಿಯೆತ್ತಿದ್ದರು. ನಿನ್ನೆ ತಮಿಳುನಾಡಿನಲ್ಲಿಯೂ ಇದರ ವಿರುದ್ಧ ಹಲವರು ಮಾತನಾಡಿ, ದ್ರಾವಿಡರಿಲ್ಲದೇ ಭಾರತೀಯ ಸಂಸ್ಕೃತಿಯೇ ಇಲ್ಲ ಎಂದಿದ್ದಾರೆ.

ಈ ಸಮಿತಿಯಲ್ಲಿ, “ಕೆ.ಎನ್. ದೀಕ್ಷಿತ್ (ಭಾರತೀಯ ಪುರಾತತ್ವ ಸೊಸೈಟಿಯ ಅಧ್ಯಕ್ಷರು), ಆರ್.ಎಸ್. ಬಿಶ್ತ್ (ಭಾರತದ ಪುರಾತತ್ವ ಸಮೀಕ್ಷೆಯ ಮಾಜಿ ಜಂಟಿ ಮಹಾನಿರ್ದೇಶಕ), ಬಿ.ಆರ್. ಮಣಿ (ದೆಹಲಿಯ ನ್ಯಾಷನಲ್ ಮ್ಯೂಸಿಯಂನ ಮಾಜಿ ಮಹಾನಿರ್ದೇಶಕರು), ಸಂತೋಷ್ ಶುಕ್ಲಾ (ಸಂಸ್ಕೃತ ಅಧ್ಯಯನದ ವಿಶೇಷ ಕೇಂದ್ರ, ಜೆಎನ್‌ಯು), ಪಿ.ಎನ್. ಶಾಸ್ತ್ರಿ (ರಾಷ್ಟ್ರೀಯ ಸಂಸ್ಕೃತ ಸಂಸ್ಥೆಯ ಉಪಕುಲಪತಿ), ಎಂ.ಆರ್.ಶರ್ಮಾ (ಸಾಂಗ್‌ಮಾರ್ಗ್ ವಿಶ್ವ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷರು) ಮತ್ತು ರಮೇಶ್ ಕುಮಾರ್ ಪಾಂಡೆ (ಉಪಕುಲಪತಿ, ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ), ಪ್ರೊ.ಮಖ್ಖನ್ ಲಾಲ್ (ವಿವೇಕಾನಂದ ಇಂಟರ್‌ನ್ಯಾಷನಲ್ ಫೌಂಡೇಶನ್), ಡಾ.ಜಿ.ಎನ್.ಶ್ರೀವಾಸ್ತವ (ಜಿಯಾಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ), ನ್ಯಾ.ಮುಕುಂದನ್ ಶರ್ಮಾ, ಆರ್.ಸಿ.ಶರ್ಮಾ, ಪ್ರೊ.ಕೆ.ಕೆ.ಮಿಶ್ರಾ, ಡಾ.ಬಲರಾಂ ಶುಕ್ಲಾ, ಪ್ರೊ.ಆಜಾದ್ ಕೌಶಿಕ್, ಎಂ.ಆರ್.ಶರ್ಮಾ” ಇದ್ದಾರೆ.

ಇದನ್ನೂ ಓದಿ: ಭಾರತದ ಸಂಸ್ಕೃತಿ ಅಧ್ಯಯನ ಸಮಿತಿಯಲ್ಲಿ ದಕ್ಷಿಣ ಭಾರತೀಯರಾರೂ ಇಲ್ಲ: ಎಚ್.ಡಿ.ಕುಮಾರಸ್ವಾಮಿ

ಇದರ ಕುರಿತು, ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಮಾಜಿ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ನಾನುಗೌರಿ.ಕಾಂ ಗೆ ಪ್ರತಿಕ್ರಿಯಿಸಿ, “ಬಲಪಂಥೀಯ ಸರ್ಕಾರ ತನಗೆ ಬೇಕಾದ ಚರಿತ್ರೆಯನ್ನ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಮಾಡಿರುವ ಒಂದು ಪ್ರಯತ್ನ ಇದು. ಇದಕ್ಕೂ ಮತ್ತು ಹೊಸ ಶಿಕ್ಷಣ ನೀತಿಗೂ ಸಂಬಂಧವಿದೆ. ಹೊಸ ಶಿಕ್ಷಣ ನೀತಿಯಲ್ಲಿ, ‘ಭಾರತೀಯ ಸಂಪ್ರದಾಯ’ ಎಂಬ ವಿಷಯ ಬರುತ್ತದೆ. ಈಗ ನಾವು ಭಾರತೀಯ ಸಂಸ್ಕೃತಿ ಎಂದು ಹೇಳುತ್ತಿರುವುದು, ವಸಾಹತು ಆಡಳಿತಗಾರರು ನಿರ್ಮಿಸಿಕೊಟ್ಟ ಒಂದು ಪಾರ್ಶ್ವಿಕ (ವೈದಿಕ) ಚರಿತ್ರೆ. ಈ ಸಮಿತಿಯಲ್ಲಿರುವವರಿಗೆ ಭಾರತದ ಶೇಕಡ 90ರಷ್ಟು ಜನ ಉಳಿಸಿಕೊಂಡುಬಂದಿರುವ ಜಾನಪದ ಪರಂಪರೆಯ ಬಗ್ಗೆ ತಿಳುವಳಿಕೆ ಇಲ್ಲ. ಜೊತೆಗೆ ಜಾನಪದ ಪರಂಪರೆಯನ್ನು ಭಾರತದ ಸಂಸ್ಕೃತಿಯ ಭಾಗ ಎಂದು ಇದುವರೆಗೂ ಪರಿಗಣಿಸಿಲ್ಲ. ಪರಿಗಣಿಸುವುದೂ ಇಲ್ಲ. ಹಾಗಾಗಿ ಇವರ ಸಂಸ್ಕೃತಿ ರಚನೆಯ ಮೂಲ ಸಂಸ್ಕೃತವೇ ಆಗಿದೆ. ಆ ಸಂಸ್ಕೃತದ ಮೂಲಕ ಕಟ್ಟುವ ಚರಿತ್ರೆ, ಭಾರತದ ಸಮಗ್ರ ಚರಿತ್ರೆಯ ಒಂದು ಭಾಗ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಅದುವೇ ಭಾರತೀಯ ಚರಿತ್ರೆಯಲ್ಲ” ಎಂದು ಹೇಳಿದರು.

“ಈ ಸಂಸ್ಕೃತ ವೈದಿಕ ಪರಂಪರೆಗೆ ಪೂರಕವಾಗಿ, ಅದಕ್ಕಿಂತ ವಿಭಿನ್ನವಾಗಿ ಅಥವಾ ವಿರುದ್ಧವಾಗಿ ಒಂದು ಜಾನಪದ ಪರಂಪರೆ ಹಿಂದುಳಿದ ಸಮುದಾಯಗಳಲ್ಲಿದೆ. ಈ ಹಿಂದುಳಿದ ಸಮುದಾಯಗಳು ಆಚರಿಸಿಕೊಂಡುಬರುತ್ತಿರುವ ಸಂಸ್ಕೃತಿಯನ್ನು ಭಾರತದ ಅಧಿಕಾರಿಶಾಹಿಗಳು ವಸಾಹತುಶಾಹಿ ಕಾಲದಿಂದ ಇಲ್ಲಿಯವರೆಗೂ ಸಂಸ್ಕೃತಿಯ ವ್ಯಾಖ್ಯಾನದ ಭಾಗವಾಗಿ ಸ್ವೀಕರಿಸಲೇ ಇಲ್ಲ. ಹಾಗಾಗಿ ಇವರು ಕಟ್ಟುವ ಚರಿತ್ರೆ ಬ್ರಾಹ್ಮಣ ಕೇಂದ್ರಿತವಾದ ಅಥವಾ ಸಂಸ್ಕೃತ ಕೇಂದ್ರಿತವಾದ ಚರಿತ್ರೆಯಾಗಿರುತ್ತದೆ. ಆದರೆ ಈ ಚರಿತ್ರೆ ಈಗಾಗಲೇ ನಮ್ಮಲ್ಲಿದೆ. ಅದನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ಮತ್ತು ಗಟ್ಟಿಪಡಿಸಿಕೊಳ್ಳಲು ಈ ಪ್ರಯತ್ನ ನಡೆಯುತ್ತಿದೆ” ಎಂದು ವಿವರಿಸಿದರು.

ಇದನ್ನೂ ಓದಿ: 6ನೇ ತರಗತಿ ‘ವೇದ ಕಾಲದ ಸಂಸ್ಕೃತಿ’ ಪಾಠ ಮಾಡದಂತೆ ಶಿಕ್ಷಣ ಸಚಿವರ ಆದೇಶ: ಅಂಥದ್ದೇನಿದೆ ಪಾಠದಲ್ಲಿ?

“ಇವರು ಬರೆಯುವ ಚರಿತ್ರೆ ಏನು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ನಮ್ಮದು ಭವ್ಯ ಪರಂಪರೆ. ಋಷಿಮುನಿಗಳ ಮಹತ್ವ, ವೇದಗಳ ಮಹತ್ವ, ಪುರಾಣಗಳು, ಮಹಾಕಾವ್ಯಗಳು ಮುಂತಾದ ವಿಷಯಗಳ ಕುರಿತಂತೆ ಈ ಚರಿತ್ರೆಯಲ್ಲಿ ಬರೆಯಲಾಗುತ್ತದೆ. ಆದರೆ ಈ ಭವ್ಯ ಪರಂಪರೆಯಲ್ಲಿ ಹೇಲು ಹೊರಲು ಒಂದು ಜಾತಿಯನ್ನು ಅಥವಾ ಸಮುದಾಯವನ್ನು ಸೃಷ್ಟಿಸಲಾಗಿತ್ತು ಎಂದು ಇವರು ಬರೆಯಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಹಾಗಾಗಿಯೇ ನಾನು ಹೇಳುತ್ತಿರುವುದು ಇದು ಪಾರ್ಶ್ವಿಕ ಚರಿತ್ರೆ ಎಂದು. ಇವರು ಬರೆಯುವ ಚರಿತ್ರೆ, ಹೊಸ ಶಿಕ್ಷಣ ನೀತಿಯಲ್ಲಿದೆ. ಬಿಜೆಪಿ ಸರ್ಕಾರದಲ್ಲಿದೆ. ಇವರು ರಚಿಸಿರುವ ಸಮಿತಿಯಲ್ಲಿದೆ. ಇದು ದೊಡ್ಡ ಹುನ್ನಾರ. ಇನ್ನೊಂದು ದೊಡ್ಡ ಅಪಾಯವೆಂದರೆ, ನಮ್ಮ ಭವ್ಯ ಪರಂಪರೆ ಮುಸಲ್ಮಾನರು ಬಂದ ನಂತರ ಹಾಳಾಯಿತು. ಅಲ್ಲಿಯವರೆಗೂ ಸರಿಯಿತ್ತು ಎಂದು ಬರೆಯಬಹುದು. ಹಾಗಾಗಿ ಆರ್‌ಎಸ್‌ಎಸ್ ಪ್ರಣೀತ ಸರ್ಕಾರ ತನ್ನ ಅಜೆಂಡಾವನ್ನು ಅಧಿಕೃತಗೊಳಿಸಿಕೊಳ್ಳುವುದಕ್ಕೆ ಈ ಚರಿತ್ರೆಯನ್ನು ಬರೆಯಿಸಿ, ಉಜ್ವಲವಾದ ಬ್ರಾಮಕ ಇತಿಹಾಸವೇ ಶ್ರೇಷ್ಠವೆಂದು ಬಿಂಬಿಸುವ ಹುನ್ನಾರವಿದು” ಎಂದು ಹೇಳಿದರು.

“ಈ ಸಮಿತಿಯಲ್ಲಿರುವವರು ಬಹುತೇಕರು ಆರ್ಕಿಯಾಲಜಿಯ ವಿದ್ವಾಂಸರೇ ಆಗಿದ್ದಾರೆ. ಇವರು ಕಟ್ಟಡಗಳನ್ನು ನೋಡಿ ಇತಿಹಾಸ ಬರೆಯುತ್ತಾರೆ. ಈ ಕಟ್ಟಡಗಳನ್ನು ಕಟ್ಟಿದವರು ಆಳುವವರೇ ಆದ್ದರಿಂದ, ಅವರ ಇತಿಹಾಸವನ್ನೇ ಬರೆಯುತ್ತಾರೆ. ಆದರೆ ಇದರಲ್ಲಿ ಸಾಮಾನ್ಯ ಜನರ, ತಳಸಮುದಾಯದವರ ಇತಿಹಾಸ ಮರೆಯಾಗುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: ಟೋನಿ ಜೋಸೆಫ್ `Early Indians’: ಮೊದಲ ಭಾರತೀಯರು ನಾವು ಬಂದದ್ದು ಹೇಗೆ?

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾದ ಟಿ.ಎಸ್.ನಾಗಾಭರಣ ಮಾತನಾಡಿ, “ಈ ಸಮಿತಿಯಲ್ಲಿ ದಕ್ಷಿಣ ಭಾರತದ ವಿದ್ವಾಂಸರೇ ಇಲ್ಲದಿರುವುದು, ದೆಹಲಿಯಲ್ಲಿ ಕುಳಿತಿರುವವರ ಅಜ್ಞಾನಕ್ಕೆ ಸಾಕ್ಷಿಯಾಗಿದೆ. ಇಲ್ಲಿರುವ ಉತ್ತರ ಭಾರದ ವಿದ್ವಾಂಸರು ಇಡೀ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸಲು ಹೇಗೆ ಸಾಧ್ಯ. ಭಾರತದ ಸಂಸ್ಕೃತಿಯ ಸಮಗ್ರ ಅಧ್ಯಯನ ಎಂದರೆ ಎಲ್ಲಾ ಸಂಸ್ಕೃತಿಗಳ ಅಥವಾ ಕನಿಷ್ಟ ಪಕ್ಷ ರಾಜ್ಯಗಳ ಪ್ರತಿನಿಧಿಗಳಿರಬೇಕು. ಆದರೆ ಇಲ್ಲಿ ಅದಕ್ಕೆ ಅವಕಾಶವಿಲ್ಲವಾದ್ದರಿಂದ ಇದು ಏಕಮುಖ ಅಧ್ಯಯನವಾಗುತ್ತದೆ. ಹಾಗಾಗಿ ಈ ಸಮಿತಿಯನ್ನು ಪರಿಷ್ಕೃತಗೊಳಿಸಿ, ಸಮಗ್ರ ಅಧ್ಯಯನ ನಡೆಯಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಖಂಡಿತವಾಗಿಯೂ ಇದಕ್ಕೆ ನಮ್ಮ ವಿರೋಧವಿದೆ” ಎಂದು ಹೇಳಿದರು.

ಬಹುಜನ ವಿದ್ಯಾರ್ಥಿ ಸಂಘದ ಮುಖಂಡರಾದ ಡಾ.ಶಿವಕುಮಾರ್ ಮಾತನಾಡಿ, “ಭಾರತೀಯ ಸಂಸ್ಕೃತಿಯ ವಾರಸುದಾರರು, ಭಾರತದಲ್ಲಿರುವ ಶೇಕಡ 90ಕ್ಕೂ ಹೆಚ್ಚಿರುವ ಜನಪದರು. ಭಾರತದ ನಿಜವಾದ ಸಂಸ್ಕೃತಿ ಇರುವುದು ಜನಪದರಲ್ಲಿ. ಸಂಸ್ಕೃತಿ ಎಂದರೆ ನಮ್ಮ ಭಾಷೆ, ಊಟ, ಉಡುಗೆ-ತೊಡುಗೆ, ಆಚಾರ-ವಿಚಾರ ಮುಂತಾದವುಗಳೇ ಆಗಿವೆ. ಹಾಗಾಗಿ ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಸಮಿತಿಯಲ್ಲಿ ಈ ಜನಪದರ ಪ್ರತಿಪಾದಕರು ಇರಬೇಕು. ಆದರೆ ಈ ಸಮಿತಿಯನ್ನು ನೋಡಿದರೆ ವೇದಶಾಸ್ತ್ರ ವಕ್ತಾರರೇ ಹೆಚ್ಚಿರುವಂತಿದೆ. ಕೇವಲ 3-4% ನಷ್ಟಿರುವ ಜನರು ಸೇರಿಕೊಂಡು ಇಡೀ ಭಾರತದ ಸಂಸ್ಕೃತಿಯನ್ನು ಅಧ್ಯಯನ ಮಾಡುವುದು ಪರಿಪೂರ್ಣ ಎನಿಸಲಾರದು. ಜೊತೆಗೆ ಇದು ಪಕ್ಷಪಾತ ಮತ್ತು ಪೂರ್ವಗ್ರಹಪೀಡಿತವಾದ ಅಧ್ಯಯನವಾಗುತ್ತದೆ. ನಾವು ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ಸಮಿತಿಯಲ್ಲಿ ದಕ್ಷಿಣ ಭಾರತದವರಾರೂ ಇಲ್ಲ ಎನ್ನುವುದು ಆಘಾತಕಾರಿ ಸಂಗತಿಯಾಗಿದ್ದು, ಭಾರತೀಯ ಸಂಸ್ಕೃತಿಗೆ ದಕ್ಷಿಣ ಭಾರತದ ಕೊಡುಗೆ ತುಂಬಾ ಇದೆ. ಹಾಗೆಯೇ ಮಹತ್ವದ್ದೂ ಆಗಿದೆ. ಹಾಗಾಗಿ ಕೇಂದ್ರ ಸರ್ಕಾರದ ಈ ಧೋರಣೆಯ ವಿರುದ್ಧ ಪ್ರತಿಭಟನೆ ಕೈಗೊಳ್ಳಲು ನಮ್ಮ ಸಂಘಟನೆಯ ವತಿಯಿಂದ ಈಗಾಗಲೇ ಚರ್ಚೆಗಳು ನಡೆಯುತ್ತಿದೆ” ಎಂದು ಹೇಳಿದರು


ಇದನ್ನೂ ಓದಿ: ಅಂಬೇಡ್ಕರ್ ಕಟ್ಟಿಕೊಟ್ಟ ಭಾರತೀಯ ಭ್ರಾತೃತ್ವವನ್ನು ಮೈಗೂಡಿಸಿಕೊಳ್ಳದ 47ರ ನಂತರದ ಭಾರತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...