ಗಣಿ ದುಡ್ಡಿನಲ್ಲಿ ಪ್ರಜಾಪ್ರಭುತ್ವದ ರಕ್ತಹೀರುವ ತಿಗಣೆಗಳು ಬಳ್ಳಾರಿಯಲ್ಲಿ ಮೇಲೆದ್ದ ಮೇಲೆ ಅದು ರಾಜ್ಯದ ಗಮನ ಸೆಳೆಯುವ ಜಿಲ್ಲೆಯಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮಧ್ಯೆ ಮರಕೋತಿ ಆಟವಾಡುತ್ತಿರುವ ಆನಂದ್ ಸಿಂಗ್ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಆರಿಸಿ ಬಂದು ರಾಜೀನಾಮೆ ಕೊಟ್ಟು ಅನರ್ಹ ಶಾಸಕನಾಗಿ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಬೇಕು, ಅನುದಾನ ಹೆಚ್ಚು ಮಾಡಬೇಕು ಮತ್ತು ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ನೀಡಬಾರದು ಎನ್ನುವ ಕಾರಣಗಳನ್ನು ರಾಜೀನಾಮೆ ಕೊಟ್ಟಾಗ ಹೇಳಿದ್ದರು. ಅದು ಸ್ವಂತ ಮಾನ ಉಳಿಸಿಕೊಳ್ಳುವುದರ ಜೊತೆಗೆ, ಮುಂದಿನ ಉಪಚುನಾವಣೆಯ ಮೇಲೆ ಕಣ್ಣಿಟ್ಟೇ ಆಡಿದ ಮಾತಾಗಿತ್ತು. ಆದರೆ ಈ ಚುನಾವಣೆಯಲ್ಲಿ ಅವೆಲ್ಲಾ ಮೂಲೆಗೆ ಸರಿದಿವೆ.
ಕಾಂಗ್ರೆಸ್ ಪಕ್ಷದಿಂದ ಸಂಡೂರಿನ ರಾಜಮನೆತನದ ವಿ.ವೈ.ಘೋರ್ಫಡೆ ಕಣದಲ್ಲಿದ್ದು, ಜೆಡಿಎಸ್‍ನಿಂದ ಎನ್.ಎಂ.ನಬಿ ಕಣದಲ್ಲಿದ್ದಾರೆ. ಬಿಜೆಪಿಯಿಂದ ಬಂಡಾಯವೆದ್ದಿರುವ ಕವಿರಾಜ ಅರಸ್ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‍ಗೆ ಗೆಲ್ಲುವ ಅವಕಾಶಗಳಿದ್ದರೂ ಸಹ ಪಕ್ಷದ ಪರವಾಗಿ ಕೆಲಸಮಾಡುವ ನಾಯಕರ ಕೊರತೆಯೇ ಎದ್ದು ಕಾಣುತ್ತಿದೆ. ಆದರೆ ಜೆಡಿಎಸ್ ಹೆಚ್ಚು ಕೆಲಸ ಮಾಡುತ್ತಿದೆಯಾದರೂ ಮತಗಳನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ ಎನ್ನಲಾಗಿದೆ. ಎನ್.ಎಂ.ನಬಿಯವರು ಎಂ.ಪಿ.ಪ್ರಕಾಶ್ ಅವರ ಜೊತೆಗೆ ಸಚಿವರಾಗಿದ್ದಂತಹ ಹಿರಿಯರು. ಆಗಿನಿಂದಲೂ ಜೆಡಿಎಸ್‍ನಲ್ಲೇ ಇದ್ದವರು. ಇವರಿಗೆ ಇಲ್ಲಿ ಈಗ ಟಿಕೆಟ್ ದೊರೆತಿದೆ.
ಕಳೆದ ಬಾರಿ ಕಾಂಗ್ರೆಸ್‍ನಿಂದ ಬಂಡಾಯವೆದ್ದು, ಜೆಡಿಎಸ್‍ನಿಂದ ಕಣಕ್ಕಿಳಿದು 3835 ಮತಗಳ ಅಂತರದಿಂದ ಸೋತಿದ್ದಂತಹ ದೀಪಕ್ ಸಿಂಗ್ ಈ ಬಾರಿ ಕಾಂಗ್ರೆಸ್‍ನ ವಿ.ವೈ.ಘೋರ್ಪಡೆಯ ಪರವಾಗಿ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ. ಆನಂದ್ ಸಿಂಗ್ ಮತಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಬಾರಿ ಸಫಲವಾಗುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳಲಾಗುತ್ತಿದೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಂತೆ ಕಂಡರು ಸಹ ಕಾಂಗ್ರೆಸ್ ಮತ್ತು ಬಿಜೆಪಿಗೆ ಜಿದ್ದಾಜಿದ್ದಿ ಇರಲಿದೆ. ಬೇಕೆಂದಾಗ ರಾಜೀನಾಮೆ ನೀಡಿ ಉಪ ಚುನಾವಣೆ ನಡೆಸುವ ಮೂಲಕ ಜನರ ತೆರಿಗೆ ಹಣವನ್ನು ಪೋಲುಮಾಡುವ ರಾಜೀನಾಮೆ ಶೂರರನ್ನು ಸೋಲಿಸಬೇಕು ಎಂಬ ಮನಸ್ಸನ್ನು ವಿಜಯನಗರ ಕ್ಷೇತ್ರದ ಜನತೆ ಮಾಡಿದ ಹಾಗೆ ಕಾಣಿಸುತ್ತಿಲ್ಲ. ಹಾಗಾಗಿ ಕೊನೆಕ್ಷಣದ ಅಚ್ಚರಿ ನಡೆಯದ ಹೊರತು ಆನಂದ್‍ಸಿಂಗ್‍ಗೆ ಗೆಲ್ಲುವ ಎಲ್ಲಾ ಸಾಧ್ಯತೆಗಳು ಇವೆ.


