Homeನ್ಯಾಯ ಪಥನ್ಯಾಯಮೂರ್ತಿ ಬೊಬ್ಡೆ ಅವಧಿಯಲ್ಲಿ ಸಂವಿಧಾನವನ್ನು ಕಾಯುವ ತನ್ನ ಪಾತ್ರವನ್ನುಸುಪ್ರೀಂ ಯಶಸ್ವಿಯಾಗಿ ನಿರ್ವಹಿಸಿತೇ?

ನ್ಯಾಯಮೂರ್ತಿ ಬೊಬ್ಡೆ ಅವಧಿಯಲ್ಲಿ ಸಂವಿಧಾನವನ್ನು ಕಾಯುವ ತನ್ನ ಪಾತ್ರವನ್ನುಸುಪ್ರೀಂ ಯಶಸ್ವಿಯಾಗಿ ನಿರ್ವಹಿಸಿತೇ?

- Advertisement -
- Advertisement -

ಭಾರತದ ಸುಪ್ರೀಂಕೋರ್ಟಿನ 47ನೇ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರ ಅಧಿಕಾರಾವಧಿಯು ಹದಿನೇಳು ಪ್ರಕ್ಷುಬ್ಧ ತಿಂಗಳುಗಳನ್ನು ವ್ಯಾಪಿಸಿತ್ತು. ಈ ಅವಧಿಯಲ್ಲಿ ದೇಶವು ತೀವ್ರ ಕೋವಿಡ್ ಬಿಕ್ಕಟ್ಟನಿಂದ ಬಳಲುತ್ತಿತ್ತು ಮತ್ತು ದೇಶಾದ್ಯಂತ ತಮ್ಮ ಅಭಿವ್ಯಕ್ತಿ ಮತ್ತು ಭಾಷಣ ಮಾಡುವ ಹಕ್ಕನ್ನು ಚಲಾಯಿಸಿದ ಸಾವಿರಾರು ಜನರನ್ನು ವಿವೇಚನಾರಹಿತವಾಗಿ ನಿರಾಕಾರಣವಾಗಿ ಬಂಧನಕ್ಕೆ ಒಳಪಡಿಸಲಾಯಿತು. ಈ ಬಿಕ್ಕಟ್ಟಿನ ಸಮಯದಲ್ಲಿ, ಕಾರ್ಯಾಂಗವು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಪೂರೈಸಲು ಕಾರ್ಯನಿರ್ವಹಿಸುವಂತೆ ಮಾಡಲು ಮತ್ತು ಕಾರ್ಯಾಂಗದ ಕ್ರಮಗಳು ಸಂವಿಧಾನದ ಮಿತಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸುಪ್ರೀಂಕೋರ್ಟ್ ಮೊರೆ ಹೋಗಲಾಯಿತು.

ಬೊಬ್ಡೆ ಅವರ ಅಡಿಯಲ್ಲಿ ನ್ಯಾಯಾಲಯ ಹೇಗೆ ಕಾರ್ಯ ನಿರ್ವಹಿಸಿತು?

ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ ಲೋಕೂರ್ ಅವರು ಹೇಳಿದಂತೆ, ತೀವ್ರ ಕಠಿಣ ಮತ್ತು ಯೋಜಿತವಲ್ಲದ ಲಾಕ್‌ಡೌನ್‌ನಿಂದ ಹುಟ್ಟಿದ ಹಿಂದೆಂದೂ ಕಂಡಿರದ ವಲಸೆ ಬಿಕ್ಕಟ್ಟಿಗೆ ಸಮಯೋಚಿತವಾಗಿ ಪ್ರತಿಕ್ರಿಯಿಸಲಾಗದ ಅಸಮರ್ಥತೆಗಾಗಿ ನ್ಯಾಯಾಲಯಕ್ಕೆ ’ಎಫ್ ಗ್ರೇಡ್ ನೀಡಬೇಕು ಎಂದಿದ್ದರು. ನ್ಯಾಯಮೂರ್ತಿ ಗೋಪಾಲ್ ಗೌಡ ಅವರು ವಲಸೆ ಬಿಕ್ಕಟ್ಟಿನ ಬಗ್ಗೆ ಸರ್ಕಾರದ ಪ್ರತಿಕ್ರಿಯೆಯನ್ನು ’ಸರ್ವೋಚ್ಚ ವೈಫಲ್ಯದ ಉದಾಹರಣೆ ಮತ್ತು ಏನೂ ಕ್ರಮ ಕೈಗೊಳ್ಳದ ನ್ಯಾಯಾಲಯದ ನಡೆಯನ್ನು ತುರ್ತು ಪರಿಸ್ಥಿತಿಯ ಸಮಯದಲ್ಲಿ ಸುಪ್ರೀಂಕೋರ್ಟ್‌ನ ವೈಫಲ್ಯಕ್ಕೆ ಹೋಲಿಸಿದ್ದಾರೆ.

ಸಾಂವಿಧಾನಿಕ ಚೌಕಟ್ಟಿಗೆ ಮೂಲಭೂತವಾಗಿ ಸವಾಲೆಸೆದ ಕಾರ್ಯಾಂಗದ ಕ್ರಮಗಳಿಗೆ ಬಂದಾಗ, ಅದು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡದ ಸಾಂವಿಧಾನಿಕ ಭರವಸೆಯನ್ನು ಚೂರುಚೂರು ಮಾಡಿದ ಸಿಎಎ ಆಗಿರಬಹುದು, ಅಥವಾ ಅದು ಒಕ್ಕೂಟ ತತ್ವವನ್ನು ತುಳಿದುಹಾಕಿದ 370ನೇ ವಿಧಿಯ ಏಕಪಕ್ಷೀಯ ರದ್ದುಗೊಳಿಸುವಿಕೆಯಿರಬಹುದು, ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯವು ಮೌನವನ್ನು ಆಯ್ಕೆ ಮಾಡಿಕೊಂಡಿತು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಮುಖ್ಯ ನ್ಯಾಯಮೂರ್ತಿಯಾಗಿದ್ದ ಬೊಬ್ಡೆ ನೇತೃತ್ವದ ಸುಪ್ರೀಂಕೋರ್ಟ್‌ನ ಪ್ರಮುಖ ಸಮಸ್ಯೆ ಎಂದರೆ, ಸಂವಿಧಾನದ ಮೇಲೆಯೇ ಸವಾರಿ ಮಾಡುವ ಕಾರ್ಯಾಂಗದ ಕ್ರಮಗಳನ್ನು ಪ್ರಶ್ನಿಸಲು ಹೆದರಬೇಕಿಲ್ಲದ ಸುಪ್ರೀಂಕೋರ್ಟ್ ಸಾಂವಿಧಾನಿಕ ನ್ಯಾಯಾಲಯದ ಪಾತ್ರವನ್ನು ನಿರ್ವಹಿಸಲು ಸಂಪೂರ್ಣವಾಗಿ ನಿರಾಕರಿಸಿದ್ದು. ಕಾರ್ಯಾಂಗದ ದುರಹಂಕಾರದ ವಿರುದ್ಧ ನಾಗರಿಕರ ಪರವಾಗಿ ನಿಲ್ಲಲು ಹೆದರದ ದೇಶದ ಸ್ವತಂತ್ರ ಅಂಗವಾಗಿ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಘನತೆ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರ ಅಧಿಕಾರಾವಧಿಯಲ್ಲಿ ತೀವ್ರವಾಗಿ ಕುಬ್ಜಗೊಂಡಿತು. ಸಾಂವಿಧಾನಿಕ ತಜ್ಞ ಗೌತಮ್ ಭಾಟಿಯಾ ಅವರು ಈ ಕುರಿತು ತೀವ್ರ ವಿಮರ್ಶೆ ಮಾಡುತ್ತ, ಬೊಬ್ಡೆ ಅವರ ಅಧಿಕಾರಾವಧಿಯನ್ನು ’ಸಿಂಹಾಸನದ ಕೆಳಗಿರುವ ಇಲಿ, ಅದು ಕೆಲವೊಮ್ಮೆ ಕೀರಲು ಧ್ವನಿಯಲ್ಲಿ ಶಬ್ದ ಮಾಡುತ್ತದೆ ಮತ್ತು ರಾಜನಿಗಿಂತಲೂ ಮುಂಚೆ ಬರುವ ಯಾರೊಬ್ಬನ ಕಾಲ್ಬೆರಳುಗಳನ್ನು ಕಚ್ಚಲು ಕೆಲವೊಮ್ಮೆ ಮುಂದಾಗುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರೇಖಾ ಶರ್ಮಾ ಅವರು, ನ್ಯಾಯಮೂರ್ತಿ ಬೊಬ್ಡೆ ಅವರು ’ಕಾಲದ ಮರಳಿನ ಮೇಲೆ ಹೆಜ್ಜೆ ಗುರುತುಗಳು ಮೂಡದಂತೆ ನಿರ್ಗಮಿಸಿದ್ದಾರೆ’ ಎಂದು ಹೇಳಿದ್ದಾರೆ.

24.04.2021 ರಂದು ಮುಖ್ಯ ನ್ಯಾಯಮೂರ್ತಿ ರಮಣ ಅವರು ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ’ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದುವುದಾಗಿ’ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಮಣ ಅವರು ಸರ್ಕಾರದ ಇತರ ಎರಡು ಶಾಖೆಗಳು ಸಂವಿಧಾನದ ದಿಕ್ಸೂಚಿಯೊಳಗೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದಾರೆ.

ಹತ್ರಾಸ್ ಪ್ರಕರಣದಲ್ಲಿ ಜಾಮೀನಿನ ಬಗ್ಗೆ ವರದಿ ಮಾಡಲು ಪ್ರಯತ್ನಿಸಿದ ಧೈರ್ಯದ ಕೆಲಸಕ್ಕಾಗಿ ಸಿದ್ದಿಕಿ ಕಪ್ಪನ್ ಅವರನ್ನು ಬಂಧಿಸಿದ ಮತ್ತು ಹಿಂಸಿಸಿದಂತಹ ಪ್ರಕರಣಗಳು ಮತ್ತು ಕಾರ್ಯಾಂಗದ ಇತರ ಅತಿರೇಕದ ಉಲ್ಲಂಘನೆಗಳ ಬಗ್ಗೆ ನ್ಯಾಯಾಂಗ ಗಮನ ಹರಿಸಿ, ತಮ್ಮ ಹೃದಯ ಸಂವಿಧಾನಕ್ಕಾಗಿ ಮಿಡಿಯುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ತೋರಿಸಬೇಕಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಹದಿನಾರು ಆರೋಪಿಗಳ ವಿರುದ್ಧದ ಸಾಕ್ಷ್ಯವನ್ನು, ಆರೋಪಿಗಳಲ್ಲಿ ಒಬ್ಬರಾದ ರೋನಾ ವಿಲ್ಸನ್ ಅವರ ಕಂಪ್ಯೂಟರ್‌ಗೆ ಅಕ್ರಮವಾಗಿ ಸೇರಿಸಲಾಗಿದೆ ಎಂಬ ಇತ್ತೀಚಿನ ತನಿಖಾ ವರದಿಗಳನ್ನು ಈ ಪ್ರಕರಣವನ್ನು ಆಲಿಸುತ್ತಿರುವ ನ್ಯಾಯಪೀಠ ಗಮನಿಸುವಂತೆ ’ಮಾಸ್ಟರ್ ಆಫ್ ದಿ ರೋಸ್ಟರ್’ ಆಗಿರುವ ಮುಖ್ಯ ನ್ಯಾಯಮೂರ್ತಿಗಳು ಖಚಿತಪಡಿಸಬೇಕು. ಸಾವಿರಾರು ಆರೋಪಿಗಳು ಜಾಮೀನು ಇಲ್ಲದೆ ಮತ್ತು ವಿಚಾರಣೆಯ ನಿರೀಕ್ಷೆಯಿಲ್ಲದೆ ಯುಎಪಿಎ ಅಡಿಯಲ್ಲಿ ಬಂಧಿಸಲ್ಪಟ್ಟಿರುವ ತೀವ್ರ ಅನ್ಯಾಯದ ಸನ್ನಿವೇಶಕ್ಕೆ ಭೀಮಾ ಕೋರೆಗಾಂವ್ ಪ್ರಕರಣವು ಸಾಂಕೇತಿಕವಾಗಿದೆ.

ಯೂನಿಯನ್ ಆಫ್ ಇಂಡಿಯಾ ವರ್ಸಸ್ ಕೆ.ಎ. ನಜೀಬ್ ಪ್ರಕರಣದಲ್ಲಿ ಮೂವರು ನ್ಯಾಯಾಧೀಶರ ನ್ಯಾಯಪೀಠವು (ಇದರಲ್ಲಿ ನ್ಯಾಯಮೂರ್ತಿ ರಮಣ ಕೂಡ ಇದ್ದರು) ಯುಎಪಿಎ ಅಡಿಯಲ್ಲಿ ಗಂಭೀರವಾದ ಆರೋಪ/ಅಪರಾಧಗಳನ್ನು ದಾಖಲಿಸಿದ್ದರು ಸಹ, ’ಸಮಂಜಸವಾದ ಸಮಯದೊಳಗೆ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲದಿದ್ದರೆ ಮತ್ತು ಅದಕ್ಕೆ ನೀಡಲಾಗುವ ಶಿಕ್ಷೆಯ ಅವಧಿಯ ಬಹುಭಾಗವನ್ನು ಈಗಾಗಲೇ ಜೈಲುವಾಸದಲ್ಲಿ ಕಳೆದಿದ್ದರೆ’ ಜಾಮೀನು ನೀಡಬಹುದು ಎಂದು ತೀರ್ಪು ನೀಡಿತ್ತು. ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಬರೆದಿರುವ ಈ ತೀರ್ಪಿನಲ್ಲಿ, (ನ್ಯಾಯಮೂರ್ತಿ ರಮಣ ಅವರು ನ್ಯಾಯಪೀಠದಲ್ಲಿದ್ದರು), ಕೇವಲ ಅಭಿವ್ಯಕ್ತಿ ಸಾತಂತ್ರ್ಯದಡಿ ಮಾತನಾಡಿದ್ದಕ್ಕೆ ವಿಚಾರಣೆಯಿಲ್ಲದೆ, ಅಸಂವಿಧಾನಿಕ ಬಂಧನಗಳನ್ನು ಮಾಡುವ ಕಾರ್ಯಾಂಗದ ನೀತಿಯನ್ನು ನ್ಯಾಯಾಲಯವು ಪರಾಮರ್ಶಿಸಲಿದೆ ಎಂದದ್ದು ಭರವಸೆಯ ಹೊಳಪನ್ನು ಮೂಡಿಸಿತ್ತು ಮತ್ತು ಹೊಸ ನ್ಯಾಯದಾನ ವ್ಯವಸ್ಥೆಯನ್ನು ಉಚ್ಚರಿಸಲು ಪ್ರಾರಂಭವಾಗಿತ್ತು. ಮತ್ತು ಈಗ ಮುಖ್ಯ ನ್ಯಾಯಮೂರ್ತಿ ರಮಣ ಅವರ ಪ್ರಮಾಣವಚನದ ಪ್ರಕಾರ, ’ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆ’ಯನ್ನು ಒಳಗೊಳ್ಳುವುದಕ್ಕೆ ಪ್ರಾರಂಭವಾಗಿದೆ.

ಅಂತೆಯೇ, ಸುಪ್ರೀಂಕೋರ್ಟ್ ಗಂಭೀರ ಸಾಂವಿಧಾನಿಕ ಪ್ರಾಮುಖ್ಯತೆಯ ಇತರ ವಿಷಯಗಳ (ಅದು ಸಿಎಎ, ಆರ್ಟಿಕಲ್ 370 ಅಥವಾ ಹಲವಾರು ಬಾಕಿ ಉಳಿದಿರುವ ಹೇಬಿಯಸ್ ಕಾರ್ಪಸ್ ಅರ್ಜಿಗಳು ಮತ್ತು ಜಾಮೀನು ಅರ್ಜಿಗಳು ಆಗಿರಬಹುದು) ವಿಚಾರಣೆ ನಡೆಸುವ ಮೂಲಕ ಮತ್ತು ಕಾರ್ಯಾಂಗದ ಬೆದರಿಕೆಗಳ ಮತ್ತು ಬೆಣ್ಣೆಸವರುವುದರ ವಿರುದ್ಧ ’ಸಂವಿಧಾನದ ರಕ್ಷಕ’ ಪಾತ್ರವನ್ನು ಗಟ್ಟಿಯಾಗಿ ಪ್ರತಿಪಾದಿಸುವುದಕ್ಕೆ ಸುಪ್ರೀಂಕೋರ್ಟ್ ಮತ್ತೆ ಪ್ರಾರಂಭಿಸುತ್ತದೆ ಎಂದು ಆಶಿಸೋಣ.

ಭಾರತದ ಪ್ರಜೆಗಳಾಗಿ ನಮ್ಮಲ್ಲಿ ಉಳಿದಿರುವುದು ಭರವಸೆಯೊಂದೇ. ಕಾಶ್ಮೀರದಲ್ಲಿ ಅಂತರ್ಜಾಲ ಮತ್ತು ಸಂಪರ್ಕಗಳನ್ನು ಸ್ಥಗಿತಗೊಳಿಸಿದ ಪ್ರಕರಣದ ತೀರ್ಪನ್ನು ಅಂದಿನ ನ್ಯಾಯಮೂರ್ತಿ ರಮಣ ಅವರೇ ಬರೆದಿದ್ದರು ಎಂಬುದನ್ನು ಮರೆಯುವಂತಿಲ್ಲ. ’ರಾಷ್ಟ್ರೀಯ ಭದ್ರತೆ’ ಹೆಸರಲ್ಲಿ ಇಡೀ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಅಂತರ್ಜಾಲವನ್ನು ಸ್ಥಗಿತಗೊಳಿಸಿದ್ದು ಒಂದು ’ಅಸಮಾನ’ ಪ್ರತಿಕ್ರಿಯೆಯಾಗಿತ್ತು ಎಂದು ಆ ತೀರ್ಪು ಹೇಳಿದರೂ ಯಾವುದೇ ಪರಿಹಾರವನ್ನು ನೀಡಲಿಲ್ಲ. ನ್ಯಾಯಾಲಯವು ಅಂತರ್ಜಾಲ ಅಮಾನತು ಆದೇಶಗಳನ್ನು ಪರಿಶೀಲಿಸುವ ಕಾರ್ಯವನ್ನು ಸರ್ಕಾರಿ ಅಧಿಕಾರಿಗಳಿಗೆ ಹೊರಗುತ್ತಿಗೆ ನೀಡಿತು. ಆ ಮೂಲಕ ಸಂವಿಧಾನದ ಮಿತಿಯಲ್ಲಿ ಕಾರ್ಯಾಂಗದ ಕಾರ್ಯಗಳು ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನ್ಯಾಯಾಲಯ ತ್ಯಜಿಸಿತ್ತು.

ಅದೇನೇ ಇದ್ದರೂ, 48ನೇ ಮುಖ್ಯ ನ್ಯಾಯಮೂರ್ತಿಗಳಲ್ಲಿ ನಾವು ಹೊಂದಿರುವ ಆಶಯವೆಂದರೆ, ಅವರು ’ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದುವುದು’ ಎಂಬ ತಮ್ಮ ಪ್ರಮಾಣವಚನಕ್ಕೆ ಬದ್ಧರಾಗಿರುತ್ತಾರೆ ಎಂಬುದು. ಮುಖ್ಯ ನ್ಯಾಯಮೂರ್ತಿ ರಮಣ ಅವರಿಂದ ಇದಕ್ಕಿಂತ ಹೆಚ್ಚಿನದೇನನ್ನೂ ಅಥವಾ ಕಡಿಮೆಯದ್ದೇನನ್ನೂ ನಾವು ನಿರೀಕ್ಷೆ ಮಾಡುತ್ತಿಲ್ಲ.

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪರ್ಯಾಯ ಕಾನೂನು ವೇದಿಕೆ (ಎಎಲ್‌ಎಫ್‌ನ) ಸ್ಥಾಪಕ ಸದಸ್ಯರು
(ಕನ್ನಡಕ್ಕೆ: ಪಿ.ಕೆ. ಮಲ್ಲನಗೌಡರ್)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...