ವ್ಯಕ್ತಿಯು ತನ್ನ ಸುಖಸಂತೋಷಗಳಿಗೆ ಸಂಘವನ್ನು ಸಾಧನವನ್ನಾಗಿ ಬಳಸಿಕೊಳ್ಳುವುದು ಸಾಧಾರಣ ನಿಯಮ. ಆದರೆ ಸಂಘ ಒಮ್ಮೆ ಮೈದಳೆದು ನಿಂತಿತೆಂದರೆ ವ್ಯಕ್ತಿಯ ಸ್ವಾತಂತ್ರ ಮೊಟಕಾಗಿಬಿಡುತ್ತದೆ. ವ್ಯಕ್ತಿಗಾಗಿ ಸಂಘವೋ, ಸಂಘಕ್ಕಾಗಿ ವ್ಯಕ್ತಿಯೋ ಹೇಳುವುದು ಕಷ್ಟವಾಗುತ್ತದೆ. ವ್ಯಕ್ತಿಗಿಂತ ಮಿಗಿಲಾದ, ಬೇರೆಯಾದ, ತನ್ನದೇ ಆದ ಇರವನ್ನು ಪಡೆದುಕೊಳ್ಳಲು ಸಂಘ ಹೆಣಗಾಡುತ್ತದೆ; ಹೀಗೆಂದು ಎಸ್ ಕೆ ರಾಮಚಂದ್ರ ರಾವ್ ತಮ್ಮ ಮೂರ್ತಿಶಿಲ್ಪದ ಪುಸ್ತಕದಲ್ಲಿ ವಿಚಾರ ಮಾಡುತ್ತಾರೆ. ಶಿಲ್ಪಗಳ ನೆಲೆ ಹಿನ್ನೆಲೆಗಳನ್ನು ಗುರುತಿಸುವ ಮತ್ತು ಚರ್ಚೆ ಮಾಡುವ ಕಾರಣದಿಂದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿರುವ ಎಲ್ಲಾ ವಿಷಯಗಳನ್ನೂ ಈ ಪುಸ್ತಕ ಅವಲೋಕಿಸುತ್ತದೆ.
ದೇವಾನುದೇವತೆಗಳ ಮೂರ್ತಿಗಳು ಮೂರ್ತೀಭವಿಸಿದ ಹಿನ್ನೆಲೆಗಳನ್ನು ಗಮನಿಸುತ್ತಾ ದೇವರುಗಳ ಹುಟ್ಟು, ಬೆಳವಣಿಗೆ, ಅವುಗಳ ಸಾಂಸ್ಕೃತಿಕ ರಾಜಕಾರಣ, ಸಂಘರ್ಷ ಮತ್ತು ಈ ಹೊತ್ತಿಗೆ ಅವುಗಳ ಪ್ರತಿಮೆಗಳು ನಿರ್ದಿಷ್ಟ ರೂಪಕ್ಕೆ ಬಂದು ನಿಂತಿರುವುದರ ಅಧ್ಯಯನ ಈ ಕೃತಿಯ ಮುಖ್ಯ ಉದ್ದೇಶ.
ವ್ಯಕ್ತಿ ಮತ್ತು ಸಮಾಜ: ಈ ಎರಡರ ನಡುವಿನ ಸಂಘರ್ಷಕ್ಕೆ ಕಾರಣ ಮಾತ್ರ ವಿಚಿತ್ರ ಮತ್ತು ವಿಸ್ಮಯ. ಆದರೆ ಈ ಸಂಘದ ಕೈ ಬಲಪಡಿಸುವ ಅಗತ್ಯ ವ್ಯಕ್ತಿಗಿದೆ. ಆದರೆ ಇದು ಅವನನ್ನೇ ಬಂಧಿಸುತ್ತದೆ. ನುಂಗುವುದಕ್ಕೂ ಆಗದ, ಉಗಳುವುದಕ್ಕೂ ಆಗದಂತೆ ತಾನೇ ಸಮಾಜದ ಬಲೆಯಲ್ಲಿ ಬಂಧಿತನಾಗುತ್ತಾನೆ. ಈ ಬಲೆಯ ಹರವಿನಲ್ಲಿ ನಮ್ಮ ಎಲ್ಲಾ ವ್ಯವಹಾರಗಳೂ ನಡೆಯಬೇಕು. ಅದಕ್ಕಾಗಿ ಅವನು ಸಂಕೇತಗಳನ್ನು ಸೃಷ್ಟಿಸಬೇಕು. ಸಂಕೇತಗಳನ್ನು ಸೃಷ್ಟಿ ಮಾಡುವ, ಕಲಿಯುವ, ಕಲಿಸುವ ಮತ್ತು ಅದರಲ್ಲಿ ವ್ಯವಹರಿಸುವ ಕೌಶಲ್ಯ ಮಾನವನಿಗೆ ನಿಸರ್ಗದತ್ತವಾಗಿಯೇ ಬಂದಿದೆ. ಅವನ ಬುದ್ಧಿಶಕ್ತಿ ಮತ್ತು ಭಾವನಾ ಪ್ರೌಢಿಮೆಯು ಈ ಕೌಶಲ್ಯಕ್ಕೆ ಮೂಲ ಸಾಮಗ್ರಿಗಳು. ಭಾಷೆ, ಮದುವೆ, ನಾಣ್ಯ, ವಿದ್ಯಾಭ್ಯಾಸ, ನ್ಯಾಯ, ಧರ್ಮ, ಸರಕಾರ, ವಿಜ್ಞಾನ, ಸಾಹಿತ್ಯ ಎಲ್ಲವೂ ಸಂಕೇತದ ಬಲೆಯ ವಿವರಗಳೇ ಎನ್ನುವ ರಾವ್ ಸಂಪ್ರದಾಯಗಳ ಬಗ್ಗೆಯೂ ವಿಶ್ಲೇಷಿಸುತ್ತಾರೆ.
ಹೊಸ ಉಪಾಯ ಹುಡುಕದ ಸೋಮಾರಿಗೆ ಸಂಪ್ರದಾಯಗಳು ಬೇಕಾಗುತ್ತವೆ. ಸಿದ್ಧವಾದ, ಜನರು ಬಳಸಿ ಉಪಯೋಗಕಂಡ ಉಪಾಯಗಳನ್ನು ಮಾತ್ರ ಅನುಸರಿಸುವ ಈ ಮಂದಿಯು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಕೆಲಸ ಮಾಡುತ್ತಾರೆ. ಅವು ಒಂದು ರೀತಿ ಸೋಶಿಯಲ್ ಕಂಟ್ರೋಲ್ ಅಥವಾ ಸಾಮಾಜಿಕ ಅಂಕೆಯಾಗಿಯೂ ಕೆಲಸ ಮಾಡುತ್ತವೆ. ಈ ಸಾಮಾಜಿಕ ಅಂಕೆಯಿಂದ ಪ್ರಾರಂಭಿಸುವ ರಾವ್ ಕುಲದೈವ (ಟೊಟಮ್) ಮತ್ತು ವಿಧಿ ನಿಷೇಧ (ಟಾಬು)ಗಳ ಕಡೆಗೆ ಹೊರಳಿ ಬುಡಕಟ್ಟುಗಳು, ಜನಾಂಗಗಳು ತಮ್ಮ ತಮ್ಮ ಸಂಕೇತಗಳನ್ನು ತಮ್ಮ ಸಂಘದ ಶಕ್ತಿಯನ್ನಾಗಿಸಿಕೊಂಡು ವ್ಯಕ್ತಿಗಳನ್ನು ನಿಗ್ರಹಿಸುವ, ಸಮುದಾಯಗಳನ್ನು ರಕ್ಷಿಸುವ ಕೆಲಸಗಳನ್ನು ಮಾಡುವ ಅಗತ್ಯತೆಯನ್ನು ಗುರುತಿಸುತ್ತಾರೆ.
ಸ್ವಾರಸ್ಯಕರವಾದ ಸಂಪ್ರದಾಯಗಳನ್ನು ಗುರುತಿಸುವ ರಾವ್ ವಿಶ್ವದ ತುಂಬಾ ಅಪರೂಪವಾದ ಬುಡಕಟ್ಟುಗಳ ವಿಧಿಗಳನ್ನು ದಾಖಲಿಸುತ್ತಾರೆ. ಬೋರ್ನಿಯೋ ಮತ್ತು ಮೆಲನೀಶಯದ ಬುಡಕಟ್ಟುಗಳಲ್ಲಿ ಹುಟ್ಟಿದ ಮಗುವಿಗೆ ಹೆಸರಿಡಬೇಕಾದರೆ ಮಗುವಿಗೆ ಯಾವ ಹೆಸರಿಡುತ್ತಾರೋ ಆ ಹೆಸರಿನ ವ್ಯಕ್ತಿಯನ್ನು ಕೊಂದು, ತಲೆ ಕಡಿದು, ಅವನ ಬುರುಡೆಯಲ್ಲಿರುವ ಮಿದುಳನ್ನು ಅಡುಗೆ ಮಾಡಿ ತಂದೆ ತಿಂದ ಮೇಲೆಯೇ ಮಗುವಿಗೆ ಹೆಸರಿಡುತ್ತಿದ್ದುದು. ನಂತರ ಬರಿದಾದ ಬುರುಡೆಯನ್ನು ಪವಿತ್ರವೆಂದು ತಮ್ಮ ಮನೆಯಲ್ಲಿ ಜತನ ಮಾಡುತ್ತಿದ್ದರು.
ಹವಾಯ್ ದ್ವೀಪದ ಸಮರದೇವತೆ, ಆಫ್ರಿಕಾಖಂಡದ ಧಾನ್ಯದೇವತೆ, ಈಜಿಪ್ಟ್ ದೇಶದ ಬೇಸ್ ಎಂಬ ಯಕ್ಷ, ಸಿರಿಯಾದ ಎಲ್ ದೇವತೆಗಳನ್ನೆಲ್ಲಾ ಉಲ್ಲೇಖಿಸುವ ರಾವ್ ಭಾರತದ ಪ್ರಚಲಿತ ದೇವರುಗಳ ಪ್ರತಿಮೆಗಳ ಕಡೆಗೆ ಹೊರಳುತ್ತಾರೆ.
ಬರಿಯ ಶ್ರದ್ಧಾಭಕ್ತಿಯ ಸಾಂಪ್ರದಾಯಿಕ ಭಾವುಕತೆಯಲ್ಲಿ ಬಂಧಿತರಾಗಿರುವವರಿಗೆ ಈ ಪುಸ್ತಕದಲ್ಲಿ ಚರ್ಚಿಸಿರುವ ದೇವತೆಗಳ ಪ್ರತಿಮೆಗಳ ವಿಕಾಸವನ್ನು ಅರಿತರೇ ಎಷ್ಟೋ ಭ್ರಮೆಗಳು ಹರಿಯುವ ಸಾಧ್ಯತೆ ಇದೆ. ಗಣಪತಿಯ ಹುಟ್ಟು ಅವನ ಆದಿ ಪೂಜಿತನೆಂಬ ಕಲ್ಪನೆಯನ್ನು ಒಡೆದು ಹಾಕಿದರೆ, ಶಿವನ ಸ್ವಾರಸ್ಯ ಅರಣ್ಯಕರ ಅವಲೋಕನವನ್ನು ಮಾಡಲಾಗಿದೆ. ಇನ್ನು ವಿಷ್ಣುವಿನ ವಿಶಿಷ್ಟ ಭಾಗವತಪಂಥದ ಹಂತಗಳನ್ನು ವಿವೇಚಿಸಲಾಗಿದೆ. ಗ್ರಾಮದೇವತೆಗಳು ಹೇಗೆ ಹುಟ್ಟಿದರು, ಅವರು ಸರ್ವಶಕ್ತಿಗಳೆಂತು ಆದರು ಎಂಬುದು ಕೂಡಾ ಇವರ ಅಧ್ಯಯನದಿಂದ ತಪ್ಪಿಸಿಕೊಳ್ಳುವುದಿಲ್ಲ. ಸುಬ್ರಹ್ಮಣ್ಯ ಅಥವಾ ಸ್ಕಂದ, ಶಾಸ್ತ ಅಥವಾ ಅಯ್ಯಪ್ಪ, ಮಲ್ಲಾರಿ – ಖಂಡೋಬರAತಹ ಪಾರ್ಶ್ವ ದೇವತೆಗಳು ಸ್ವಯಂಪ್ರಧಾನ ದೇವತೆಗಳಾಗುವ ಬಗೆ, ಕಳಿಯಾಟ್ಟದ ತೆಯ್ಯಕೋಲಗಳು, ತುಳುನಾಡಿನ ದೈವಗಳು, ಕೃಷ್ಣನ ಕಲ್ಪನೆ; ಇವುಗಳ ಚಾರಿತ್ರಿಕ ಅಧ್ಯಯನವೂ ಇಲ್ಲಿದೆ. ವಿವಿಧ ಕಾಲಘಟ್ಟಗಳಲ್ಲಿ ಆದಂತಹ ಸಾಂಸ್ಕೃತಿಕ ಪಲ್ಲಟಗಳಿಗೆ ಅಷ್ಟು ಕಾರಣಗಳನ್ನು ರಾವ್ ಹೇಳದಿದ್ದರೂ, ಪ್ರತಿಮೆಗಳು ತಮ್ಮ ರೂಪಗಳನ್ನು ಬದಲಾಯಿಸಿಕೊಳ್ಳುತ್ತಾ ಬಂದ ಬಗೆಗಳನ್ನು ವಿವರಿಸುತ್ತಾ ಹೋಗುತ್ತಾರೆ. ಇದು ಬಹಳ ಮಹತ್ವದ್ದಾಗಿದೆ.
ಈ ಕಾಲಕ್ಕೆ ಇಂತಹ ವಿಷಯಗಳು ಸಾಮಾನ್ಯ ತಿಳಿವಳಿಕೆಗಳಾಗಿದ್ದು ಯಾವುದೋ ಅಧ್ಯಯನ ಸಂಪನ್ಮೂಲವಾಗುವಂತಹ ಹೊತ್ತಿಗೆಯಲ್ಲಿ ಮಾತ್ರವೇ ಇರಬೇಕಾದ ವಿಷಯಗಳಾಗಬಾರದಿತ್ತು. ಏಕೆಂದರೆ, ಕಾಲಪ್ರವಾಹದಲ್ಲಿ ಹೊಸಹೊಸ ಸವಾಲುಗಳು, ಸಮಸ್ಯೆಗಳು ಮತ್ತು ಸಂಘರ್ಷಗಳನ್ನು ಎದುರಿಸುತ್ತಿರುತ್ತೇವೆ. ಅವುಗಳನ್ನು ಎದುರಿಸುವ ಕೌಶಲ್ಯ ಮತ್ತು ಶಕ್ತಿ ಸಾಂಪ್ರದಾಯಿಕ ಮನಸ್ಥಿತಿಗಳಿಗೆ ಸಾಧ್ಯವಾಗದೇ, ತಾವು ಗೊಂದಲಕ್ಕೀಡಾಗುವುದು ಮಾತ್ರವಲ್ಲದೇ ತಾವು ಸದಸ್ಯರಾಗಿರುವ ಸಾಮಾಜಿಕ ಸಂಘದಲ್ಲಿಯೂ ಕೂಡ ಗೊಂದಲವನ್ನುಂಟುಮಾಡುತ್ತಾರೆ. ಇವು ಬಹಳ ಆತಂಕದ ಸಂಗತಿಗಳು. ವೈಜ್ಞಾನಿಕ ಆವಿಷ್ಕಾರಗಳು ಮತ್ತು ಸಂಶೋಧನೆಗಳು ಮುಂದುವರೆದಂತೆ ಹಳೆಯ ಪರಿಕರಗಳನ್ನು ಹಿಂದಕ್ಕೆ, ವಸ್ತುಸಂಗ್ರಹಾಲಯದ ದಾಖಲೆಗೆ ಸರಿಸಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆಗಳನ್ನು ಬಳಸುವಂತೆ ಸಂಶೋಧಕರು ಮತ್ತು ವಿಚಾರವಂತರಿಗೆ ಸಾಧ್ಯವಾಗದಿರುವುದೇಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಏನಲ್ಲ.
ದೇಶದ ಸಂಸ್ಕೃತಿಯನ್ನು ಧರ್ಮ ಮತ್ತು ಕಲೆಗಳ ದೃಷ್ಟಿಯಿಂದ ಅಧ್ಯಯನ ಮಾಡುವ ಕಾರ್ಯಫಲವು ಜನಸಾಮಾನ್ಯರಿಗೆ ಮುಟ್ಟಿದ್ದರೆ ಸಮಾಜದ ಮನೋಧರ್ಮವು ಎಂದಿಗೋ ಮೌಢ್ಯದಿಂದ ಬಿಡುಗಡೆಯಾಗಿರುತ್ತಿತ್ತು.
ಸಾಂಪ್ರದಾಯಿಕ ಧೋರಣೆಯ ಸೋಮಾರಿಗಳು ಈ ಮೂರ್ತಿಶಿಲ್ಪದ ಕೃತಿಯನ್ನು ಒಮ್ಮೆ ಅಧ್ಯಯನ ಮಾಡಬೇಕು. ಧರ್ಮ, ದರ್ಶನ, ಮನೋವಿಜ್ಞಾನ, ಸಮಾಜಶಾಸ್ತ್ರ ಮಾನವಶಾಸ್ತ್ರ, ಪ್ರಾಕ್ತನ-ಪ್ರಾಚ್ಯ ಸಂಶೋಧನೆಗಳ ವಿವರಗಳೆಲ್ಲವೂ ಇದರಲ್ಲಿದೆ.
ಈ ಪುಸ್ತಕದ ಅಧ್ಯಯನ ವ್ಯಾಪ್ತಿ ದೊಡ್ಡದು. ಇದರಲ್ಲಿ ಅಡಕವಾಗಿರುವ ಸಂಗತಿಗಳು ಮೂಲಭೂತವಾದವು.
ಸಂಶೋಧನೆ, ವಿಮರ್ಶೆ, ಪರಿಶೀಲನೆ- ಇವು ಕೂಡಿಬಂದಿರುವ ಕೃತಿ ಮೂರ್ತಿಶಿಲ್ಪ ಎಂದು ಎಚ್ ನರಸಿಂಹಯ್ಯ ತಮ್ಮ ಮುನ್ನುಡಿಯಲ್ಲಿ ಉಲ್ಲೇಖಿಸಿರುವುದು ವಿಶೇಷ.
- ಯೋಗೇಶ್ ಮಾಸ್ಟರ್, ರಂಗಭೂಮಿ ಕಲಾವಿದರು, ಬರಹಗಾರರು.
ಇದನ್ನೂ ಓದಿ: ಶಾಸ್ತ್ರೀಯ – 2: ವೀರ ಗತಕಾಲದ ನೋವಿನ ಕಥನ ಸಾರುವ ವೀರಗಲ್ಲುಗಳು


