ನೂರಾರು ವರ್ಷಗಳ ಕಾರ್ಮಿಕರ ಹೋರಾಟ ಮತ್ತು ಬಲಿದಾನಗಳಿಂದ ಜಾರಿಗೊಂಡಿದ್ದ ಕಾರ್ಮಿಕ ಕಾನೂನುಗಳನ್ನು ಹಂತಹಂತವಾಗಿ ಸಡಲಿಸಿ 4 ಕೋಡ್‌ಗಳಲ್ಲಿ ವಿಭಾಗಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕರನ್ನು ಜೀತ ಪದ್ಧತಿಗೆ ದೂಡುತ್ತಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತಿರುವ ಪಕ್ಷದ್ದೇ ರಾಜ್ಯ ಸರ್ಕಾರವೀಗ ಕಾರ್ಖಾನೆಗಳ ಕಾಯಿದೆ 1948ರ ಕಾರ್ಮಿಕರ ಕೆಲಸದ ಅವಧಿಗೆ ಸಂಬಂಧಿಸಿದಂತೆ ತಿದ್ದುಪಡಿಯನ್ನು ತಂದು ಕೆಲಸದ ಗಂಟೆಗಳನ್ನು ದಿನಕ್ಕೆ 8ರಿಂದ 12ಕ್ಕೆ ಹೆಚ್ಚಿಸಿದೆ. ಈ ತಿದ್ದುಪಡಿಯು ನೂರಕ್ಕೆ ನೂರು ಪ್ರತಿಶತ ಕಾರ್ಮಿಕರ ವಿರೋಧಿ ಮತ್ತು ಮಾಲೀಕರ ಪರವಾದ ತಿದ್ದುಪಡಿಯಾಗಿದೆ.
8 ಗಂಟೆಯ ಕೆಲಸದ ಅವಧಿಯನ್ನು ನಿಗದಿ ಮಾಡಿರುವುದರ ಹಿಂದೆ ಒಂದು ತಾತ್ವಿಕ ಹಿನ್ನೆಲೆಯಿದೆ. ಕಾರ್ಮಿಕರ ಸರ್ವತೋಮುಖ ವಿಕಾಸಕ್ಕೆ ಅನುವಾಗುವಂತೆ ದಿನದ 24 ಗಂಟೆಗಳನ್ನು 3 ಭಾಗಗಳನ್ನಾಗಿ ವಿಂಗಡಿಸಿ 8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ, 8 ಗಂಟೆ ವೈಯಕ್ತಿಕ ಕೆಲಸ ಎಂದು ವೈಜ್ಞಾನಿಕವಾಗಿ ವಿಭಾಗಿಸಲಾಗಿತ್ತು. ಸರ್ಕಾರ ಜಾರಿಗೆ ತಂದಿರುವ ಈ ತಿದ್ದುಪಡಿಯು ಈ ಮೂಲ ತತ್ವವನ್ನೇ ನಿರಾಕರಿಸಿ, ಕಾರ್ಮಿಕರ ಪರಿಸ್ಥಿತಿಯನ್ನು 125 ವರ್ಷದ ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದೆ.
ಈ ತಿದ್ದುಪಡಿಯಿಂದ ಉದ್ಯೋಗಾವಕಾಶಗಳು ಹೆಚ್ಚಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಕೆಲಸದ ಗಂಟೆಗಳನ್ನು ಹೆಚ್ಚಿಸಿದಲ್ಲಿ ಉದ್ಯೋಗಾವಕಾಶ ಕಡಿಮೆಯಾಗುತ್ತದೆಯೇ ಹೊರತು ಹೆಚ್ಚಾಗುವುದಿಲ್ಲ.
ಈ ಹಿಂದೆ ಇದ್ದ 8 ಗಂಟೆಯ ಕೆಲಸದ ಅವಧಿಯನ್ನು 12 ಗಂಟೆಗಳವರೆಗೂ ವಿಸ್ತರಿಸಲಾಗಿದೆ ಮತ್ತು ಇದು ವಾರಕ್ಕೆ 48 ಗಂಟೆಯನ್ನು ಮೀರಬಾರದು ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ತೆಗೆದು, ತಿಂಗಳಿಗೆ 192 ಗಂಟೆಗಳನ್ನು ಮೀರದಂತೆ ದಿನಕ್ಕೆ ಎಷ್ಟು ಹೊತ್ತು ಬೇಕಾದರೂ ಕೆಲಸ ಮಾಡಿಸಿಕೊಳ್ಳಬಹುದು ಎಂದು ತಿದ್ದುಪಡಿ ತರಲು ಈ ಸರ್ಕಾರಗಳು ಹಿಂಜರಿಯುವುದಿಲ್ಲ.
ತಿದ್ದುಪಡಿಯಲ್ಲಿ ಕೆಲಸದ ಅವಧಿಯು 12 ಗಂಟೆ ಎಂದು ಸ್ಪಷ್ಟವಾಗಿ ನಮೂದಾಗಿದೆ. ಊಟ ಹಾಗೂ ವಿರಾಮದ ಒಂದು ಗಂಟೆ ಅದರಲ್ಲಿ ಸೇರುವುದಿಲ್ಲ. ಹೀಗಾಗಿ ಒಟ್ಟಾರೆ ಕೆಲಸದ ಸಮಯವು ಈಗಿರುವ 9 ಗಂಟೆಯ (8+1) ಬದಲಿಗೆ 13 (12+1) ಗಂಟೆಗಳಾಗುತ್ತವೆ.
ಈ ತಿದ್ದುಪಡಿಯಿಂದ ಕಾರ್ಮಿಕರ ಮೇಲಾಗುವ ಪರಿಣಾಮಗಳು
- ಯಾವುದೇ ಕಾರ್ಮಿಕರು ಸತತವಾಗಿ 12 ಗಂಟೆಗಳಷ್ಟು ಕಾಲ ತಮ್ಮ ಶ್ರಮಶಕ್ತಿಯನ್ನು ನೀಡಲು ಸಾಧ್ಯವೇ? ಅದರಲ್ಲೂ ಮಹಿಳಾ ಕಾರ್ಮಿಕರೇ ಹೆಚ್ಚು ದುಡಿಯುವ ಕಾರ್ಖಾನೆಗಳಲ್ಲಿ ಸತತವಾಗಿ ನಿಂತು ಅಥವಾ ಕುಳಿತು (ಅವರ ಕೆಲಸಕ್ಕೆ ಅನುಗುಣವಾಗಿ) 12 ಗಂಟೆಗಳ ಕಾಲ ಯಂತ್ರಗಳೊಂದಿಗೆ ದುಡಿಯಲು ಸಾಧ್ಯವೇ?
- 12 ಗಂಟೆಗಳವರೆಗೆ ಸತತವಾಗಿ ನಿಂತು ಅಥವಾ ಕುಳಿತು ಕೆಲಸ ಮಾಡಲು ಗರ್ಭಿಣಿಯರಿಗೆ ಸಾಧ್ಯವೇ?
- ಮುಟ್ಟಿನ ದಿನಗಳಲ್ಲಿ ತೊಂದರೆ ಅನುಭವಿಸುವ ಮಹಿಳಾ ಕಾರ್ಮಿಕರು 12 ಗಂಟೆಗಳ ಕಾಲ ನಿಂತು ಅಥವಾ ಕುಳಿತು ದುಡಿಯಲು ಸಾಧ್ಯವೇ?
- ಹೆರಿಗೆಯ ನಂತರ ರಜೆ ಮುಗಿಸಿ ಕೆಲಸಕ್ಕೆ ಬಂದ ಎಳೆಯ ಮಕ್ಕಳನ್ನು 12 ಗಂಟೆಗಳ ಕಾಲ ಅವರ ತಾಯಂದಿರಿಂದ ದೂರ ಮಾಡಲು ಸಾಧ್ಯವೇ? ಎಲ್ಲ ಕಾರ್ಖಾನೆಗಳಲ್ಲಿ ಬಾಲವಾಡಿಗಳು ಇರುವುದಿಲ್ಲ. ಬಾಲವಾಡಿ ಇರುವ ಕಾರ್ಖಾನೆಗಳಲ್ಲಿಯೂ ಸಹ ಮಕ್ಕಳನ್ನು ತಾಯಿಯಿಂದ 12 ಗಂಟೆಗಳ ಕಾಲ ಬೇರ್ಪಡಿಸುವುದು ಎಷ್ಟು ಸರಿ? ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಮಕ್ಕಳ ತಾಯಂದಿರೂ ನಿಗದಿತ ಪ್ರೊಡಕ್ಷನ್ ನೀಡಲೇಬೇಕಾದ್ದರಿಂದ ಬಾಲವಾಡಿಯಲ್ಲಿ ಬಿಟ್ಟ ತಮ್ಮ ಮಕ್ಕಳನ್ನು ಸರಿಯಾಗಿ ಗಮನಿಸಲು ಆಗದೆ ಆಡಳಿತವರ್ಗದ ನಿರ್ಲಕ್ಷ್ಯದಿಂದ ಮಕ್ಕಳು ಮೃತಪಟ್ಟ ಘಟನೆಗಳು ನಡೆದಿದೆ.
ಇದನ್ನೂ ಓದಿ: ಬೆಂಗಳೂರು: ಪ್ರತಿಭಟನಾ ನಿರತ ಅಂಗನವಾಡಿ ಕಾರ್ಯಕರ್ತೆಯರನ್ನು ಬಂಧಿಸಿ ದೌರ್ಜನ್ಯ ಎಸಗಿದ ಬಿಜೆಪಿ ಸರ್ಕಾರ
- 12 ಗಂಟೆಗಳ ಕೆಲಸ, ಕೆಲಸಕ್ಕೆ ಹೋಗಿಬರಲು ತೆಗೆದುಕೊಳ್ಳುವ ಸಮಯ ಎಲ್ಲವನ್ನೂ ಲೆಕ್ಕ ಹಾಕಿದರೆ ಸುಮಾರು 14ರಿಂದ 15 ಗಂಟೆಗಳಾಗುತ್ತವೆ. ಕುಟುಂಬದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲದ ಸಂದರ್ಭದಲ್ಲಿ ಅಷ್ಟೂ ಹೊತ್ತು ಆ ಕುಟುಂಬದಲ್ಲಿನ ಚಿಕ್ಕ ಮಕ್ಕಳ ಗತಿಯೇನು? ಅವರ ಸುರಕ್ಷತೆಯ ಕ್ರಮವೇನು? ಆ ಮಹಿಳಾ ಕಾರ್ಮಿಕರ ಕೌಟುಂಬಿಕ ಸಾಮರಸ್ಯ ಹದಗೆಡುತ್ತದೆ. ಇದರಿಂದ ಉಂಟಾಗುವ ಸಾಮಾಜಿಕ ಪರಿಣಾಮಗಳನ್ನು ಊಹಿಸಲಸಾಧ್ಯವಾಗಿವೆ. ಉದಾಹರಣೆಗೆ ಮಹಿಳಾ ಕಾರ್ಮಿಕರೊಬ್ಬರ ಇಬ್ಬರು ಪುಟ್ಟ ಮಕ್ಕಳು ಶನಿವಾರ ಅರ್ಧ ದಿನದ ಶಾಲೆ ಮುಗಿಸಿ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಹೊರಗೆ ಆಟವಾಡುವಾಗ ಹೇರೋಹಳ್ಳಿಯ ಕೆರೆಗೆ ಬಿದ್ದು ಸಾವನ್ನಪ್ಪಿದ್ದರು. 8 ಗಂಟೆಯ ಕೆಲಸದ ಅವಧಿಯಲ್ಲಿಯೇ ಈ ಪರಿಸ್ಥಿತಿ ಇದ್ದಾಗ ಅದನ್ನು 12 ಗಂಟೆಗೆ ವಿಸ್ತರಿಸಿದರೆ ಏನಾಗಬಹುದು?
- ಮಾಲೀಕರು ಕೆಲಸದ ಗಂಟೆಗಳನ್ನು ದೈನಂದಿನ ಆಧಾರದಲ್ಲಿ ನಿರ್ಧರಿಸುವುದರಿಂದ ಕಾರ್ಮಿಕರಿಗೆ ತಾವು ಕಾರ್ಖಾನೆಗೆ ಹೋಗುವ ಹಾಗೂ ವಾಪಸ್ ಬರುವ ಸಮಯದ ಮೇಲೆ ನಿಯಂತ್ರಣವೇ ಇಲ್ಲದಂತಾಗುತ್ತದೆ. ಈ ಅನಿಶ್ಚಿತತೆಯಿಂದ ಕಾರ್ಮಿಕರ ದೈನಂದಿನ ಎಲ್ಲ ಕಾರ್ಯಕ್ರಮಗಳೂ ಸಹ ಏರುಪೇರಾಗುತ್ತದೆ. ಅವರ ಊಟ, ತಿಂಡಿ, ಮನೆ ಕೆಲಸ, ಮಕ್ಕಳ ನಿರ್ವಹಣೆ ಈ ಎಲ್ಲ ವೈಯಕ್ತಿಕ ಚಟುವಟಿಕೆಗಳೂ ಅಸ್ತವ್ಯಸ್ತವಾಗಿ ಮಹಿಳಾ ಕಾರ್ಮಿಕರು ಅತ್ಯಂತ ಸಂಕಷ್ಟಕ್ಕೊಳಗಾಗುತ್ತಾರೆ. ಒಟ್ಟಾರೆ ಈ ತಿದ್ದುಪಡಿಯು ಮಹಿಳಾ ಕಾರ್ಮಿಕರನ್ನು ಉದ್ಯೋಗ ಕ್ಷೇತ್ರದಿಂದ ದೂರವಿಟ್ಟು ಅವರ ಪಾತ್ರವನ್ನು ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸುತ್ತದೆ. ಅವರ ಆರ್ಥಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ.

- ಈಗಾಗಲೇ ಈ ಮಹಿಳಾ ಕಾರ್ಮಿಕರು ಕೆಲಸದ ಸ್ಥಳದಲ್ಲಿ ಪ್ರೊಡಕ್ಷನ್ ಒತ್ತಡದ ಕಾರಣಕ್ಕೆ ಪ್ರತಿದಿನ ಸುಮಾರು ಅರ್ಧ ಗಂಟೆಯಾದರೂ ಹೆಚ್ಚು ದುಡಿಯುತ್ತಿದ್ದರು. ಈಗ ಅದನ್ನು ಈ ಕಾನೂನು ತಿದ್ದುಪಡಿಯು ಅಧಿಕೃತಗೊಳಿಸಿದೆ. ಜೊತೆಗೆ ಕೆಲಸ ಹೆಚ್ಚಿದ್ದಾಗ ಕಾರ್ಮಿಕರು ಹೆಚ್ಚುವರಿ ಕೆಲಸ (ಓಟಿ) ಮಾಡಿ ಗಳಿಸುತ್ತಿದ್ದ ಓಟಿ ವೇತನಕ್ಕೂ ಈ ತಿದ್ದುಪಡಿಯು ಹೊಡೆತ ನೀಡಿದೆ.
- ವಾರಕ್ಕೆ 48 ಗಂಟೆ ಮೀರಿದ ಅವಧಿಯ ಕೆಲಸವನ್ನು ಓಟಿ ಎಂದು ಪರಿಗಣಿಸಬೇಕೆಂದು ಕಾನೂನು ಹೇಳಿದರೂ, ದೈನಂದಿನ ಆಧಾರದಲ್ಲಿ ಕೆಲಸ ನಿಗದಿ ಮಾಡುವುದರಿಂದ ಮಾಲೀಕರು ಕೆಲಸವಿದ್ದಾಗ ಕೆಲಸ ಮಾಡಿಸಿ, ಇಲ್ಲದಿದ್ದಾಗ ಕಾರ್ಮಿಕರನ್ನು ಮನೆಗೆ ಕಳಿಸಲು ಈ ತಿದ್ದುಪಡಿಯು ಅವಕಾಶ ಮಾಡಿಕೊಡುತ್ತದೆ.
- ಒಟ್ಟೂ ದಿನದ ದುಡಿಮೆಯ ಗಂಟೆಯಲ್ಲಿ ಪ್ರತಿ 5 ಗಂಟೆಗೊಮ್ಮ ವಿರಾಮ ಎಂಬುದನ್ನು ತಿದ್ದುಪಡಿಯಲ್ಲಿ 6 ಗಂಟೆಗೊಮ್ಮೆ ಎಂದು ಬದಲಿಸಲಾಗಿದೆ. ಇದರಿಂದ ಮಹಿಳಾ ಕಾರ್ಮಿಕರ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮವುಂಟಾಗುತ್ತದೆ. ಉದಾಹರಣೆಗೆ ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಬಂದ ಮಹಿಳಾ ಕಾರ್ಮಿಕರೊಬ್ಬರು ಯಾವುದೇ ವಿರಾಮವಿಲ್ಲದೆ ಮಧ್ಯಾಹ್ನ 2 ಗಂಟೆಯವರೆಗೂ ಸತತವಾಗಿ ಕೆಲಸ ಮಾಡಬೇಕಾಗುತ್ತದೆ. ಯಾವುದೇ ಕಾರ್ಮಿಕರಿಂದಲೂ ಇದು ಅಸಾಧ್ಯವಾದ ಮಾತು. ಆದರೆ ಕಾನೂನು ಇದನ್ನು ಮಾನ್ಯಮಾಡುವುದರಿಂದ ಕೆಲಸದ ಸ್ಥಳದಲ್ಲಿ ಆಕೆಯನ್ನು ಶೋಷಿಸುವುದು ಆಡಳಿತವರ್ಗಕ್ಕೆ ಇನ್ನೂ ಸುಲಭವಾಗುತ್ತದೆ.
- 3 ತಿಂಗಳ ಅವಧಿಗೆ ಇದ್ದ ಒಟಿ ಅವಧಿಯ ಮಿತಿಯನ್ನೂ 75ರಿಂದ 144 ಗಂಟೆಗಳಿಗೆ ಏರಿಸಲಾಗಿದೆ. ಅಂದರೆ 1 ತಿಂಗಳಿಗೆ ಮಾಲೀಕರು ಕಾರ್ಮಿಕರಿಂದ 48 ಗಂಟೆಗಳವರೆಗೂ ಓಟಿ ಮಾಡಿಸಬಹುದು. ಇದರಿಂದ ಈಗಾಗಲೇ ಅನಿಶ್ಚಿತ ಕೆಲಸದ ಅವಧಿಯಿಂದ ತೊಂದರೆಗೊಳಗಾದ ಕಾರ್ಮಿಕರನ್ನು ಶೋಷಿಸಲು ಮತ್ತೊಂದು ಅವಕಾಶವನ್ನು ಮಾಲೀಕರಿಗೆ ನೀಡಿದಂತಾಗುತ್ತದೆ.
ಇದನ್ನೂ ಓದಿ: ಬೊಮ್ಮಾಯಿ ಘೋಷಿಸಿದ 775 ಕೋಟಿ ರೂ ಅನುದಾನ: ಫ್ರೀಡಂ ಪಾರ್ಕ್‌ನಲ್ಲಿ ನಿಲ್ಲದ ಹೋರಾಟ
ತಿದ್ದುಪಡಿಯಲ್ಲಿ ಕಾರ್ಮಿಕರ ಒಪ್ಪಿಗೆ ಪಡೆದು 12 ಗಂಟೆಗಳವರೆಗೂ ಕೆಲಸ ಮಾಡಿಸಬಹುದು ಎಂದು ಹೇಳಲಾಗಿದೆ. ಆದರೆ ಈ ಒಪ್ಪಿಗೆ ಕಾರ್ಮಿಕ ಸಂಘಟನೆಯ ಒಪ್ಪಿಗೆಯೋ ಅಥವಾ ವ್ಯಕ್ತಿಗತ ಒಪ್ಪಿಗೆಯೋ? ಇದು ಸ್ಪಷ್ಟವಾಗಿಲ್ಲ. ಒಂದುವೇಳೆ ಪ್ರತಿಯೊಬ್ಬ ಕಾರ್ಮಿಕರ ಒಪ್ಪಿಗೆ ಇದೆ ಎಂದಾದಲ್ಲಿ ಅದನ್ನು ಪಡೆದುಕೊಳ್ಳಲು ಮಾಲೀಕಕರಿಗೆ ಯಾವುದೇ ಕಷ್ಟವಿಲ್ಲ. ಅದರಲ್ಲೂ ಕಾರ್ಮಿಕರ ಸಂಘಟನೆಗೇ ಅವಕಾಶ ನೀಡದ, ಮಹಿಳಾ ಕಾರ್ಮಿಕರೇ ಹೆಚ್ಚು ದುಡಿಯುತ್ತಿರುವ ಗಾರ್ಮೆಂಟ್ಸ್ ಕಂಪನಿಗಳಲ್ಲಿ ಈ ’ಒಪ್ಪಿಗೆ’ ಎನ್ನುವ ಪದಕ್ಕೆ ಯಾವುದೇ ಅರ್ಥವಿಲ್ಲ. ಒಟ್ಟಿನಲ್ಲಿ ಕಾರ್ಖಾನೆಗಳ ಮಾಲೀಕರು ಕಾರ್ಮಿಕರನ್ನು ಅದರಲ್ಲೂ ಮಹಿಳಾ ಕಾರ್ಮಿಕರನ್ನು ತಮಗಿಷ್ಟ ಬಂದಂತೆ ಶೋಷಿಸಲು ಅನುಕೂಲ ಮಾಡಿಕೊಟ್ಟು ಅದಕ್ಕಾಗಿ ಅವರ ಕೈಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಈ ಕಾನೂನು ತಿದ್ದುಪಡಿಯು ನೀಡುತ್ತದೆ. ಜೊತೆಗೆ ಕಾರ್ಮಿಕರ ಸಾಮಾಜಿಕ ಆರ್ಥಿಕ ಮತ್ತು ಮಾನಸಿಕ ಸ್ಥಿತಿಗತಿಯ ಮೇಲೆ ಈ ತಿದ್ದುಪಡಿಯು ಪರಿಣಾಮ ಬೀರಿ ಅನಾರೋಗ್ಯಕರ ಸಮಾಜದ ನಿರ್ಮಾಣಕ್ಕೆ ಎಡೆ ಮಾಡಿಕೊಡುತ್ತದೆ.
ಕಾರ್ಮಿಕರ ಕೆಲಸದ ಗಂಟೆಗಳನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು 2011ರಲ್ಲಿಯೇ ತರಲಾಗಿತ್ತು. ಆಗ ಗಾರ್ಮೆಂಟ್ಸ್ ಕಾರ್ಮಿಕರ ನೇತೃತ್ವದಲ್ಲಿ ಎಂಜಿ ರಸ್ತೆಯ ಮಹಾತ್ಮಾ ಗಾಂಧೀ ಪ್ರತಿಮೆಯ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಸರಿಯಾಗಿ ಒಂದು ದಶಕದ ನಂತರ ಈ ತಿದ್ದುಪಡಿಯನ್ನು ಸರ್ಕಾರವು ಜಾರಿಗೊಳಿಸಿದೆ.
ನಮ್ಮ ಪಕ್ಕದ ನೆರೆ ರಾಷ್ಟ್ರಗಳಾದ ಬಾಂಗ್ಲಾದೇಶ, ಶ್ರೀಲಂಕಾಗಳಲ್ಲಿ ದುಡಿಯುವ ಗಂಟೆಗಳು ದಿನಕ್ಕೆ 9 ಗಂಟೆಗೆ ಸೀಮಿತವಾಗಿದೆ. ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ವಾರಕ್ಕೆ 32ರಿಂದ 40 ಗಂಟೆಗಳ ಕೆಲಸದ ಅವಧಿ ನಿಗದಿಪಡಿಸಲಾಗಿದೆ. ಆದರೆ ರೈತರು, ಕಾರ್ಮಿಕರೇ ಪ್ರಮುಖವಾಗಿ ಮುನ್ನಡೆಸುತ್ತಿರುವ ನಮ್ಮ ದೇಶದ ಹಲವಾರು ರಾಜ್ಯಗಳಲ್ಲಿ ದುಡಿಮೆಯ ಗಂಟೆಗಳನ್ನು ಹೆಚ್ಚಿಸಿ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಲಾಗುತ್ತಿದೆ.
ರಾಜ್ಯದ ಆರ್ಥಿಕತೆಯನ್ನು ಉಳಿಸಿ ಬೆಳೆಸುತ್ತಿರುವ ಕಾರ್ಮಿಕರ ವಿರುದ್ಧವಾಗಿ ಈ ಕಾನೂನು ತಂದು ಸರ್ಕಾರಗಳು ಅದೇನು ಸಾಧಿಸುತ್ತಿದೆಯೋ ಗೊತ್ತಿಲ್ಲ. ಈ ಕಾರ್ಮಿಕ ವಿರೋಧಿ ತಿದ್ದುಪಡಿಯನ್ನು ಈ ಕೂಡಲೇ ಹಿಂಪಡೆಯಬೇಕು.
ಪ್ರತಿಭಾ ಆರ್, ಜಯರಾಂ ಕೆ ಆರ್
ಗಾರ್ಮೆಂಟ್ಸ್ ಮತ್ತು ಟೆಕ್ಸ್‌ಟೈಲ್ ಕಾರ್ಮಿಕರ ಸಂಘಟನೆಯಲ್ಲಿ (GATWU) ಸಕ್ರಿಯರಾಗಿದ್ದಾರೆ.


