Homeಮುಖಪುಟರಾಮ ಮಂದಿರದ ಹೆಸರಿನಲ್ಲಿ "ಧನವರ್ಷ"

ರಾಮ ಮಂದಿರದ ಹೆಸರಿನಲ್ಲಿ “ಧನವರ್ಷ”

- Advertisement -
- Advertisement -

ಆಗಸ್ಟ್ 5, 2020ರಂದು ಮಧ್ಯಾಹ್ನ 12.44ರ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದರು. ಹಿಂದೆ ನಿಂತಿದ್ದ ಹದಿನಾರನೇ ಶತಮಾನದ ಬಾಬ್ರಿ ಮಸೀದಿಯ ಪಕ್ಕದಲ್ಲೇ ಇದ್ದ ಅಯೋಧ್ಯೆಯ ಅತ್ಯಂತ ದೊಡ್ಡ ದೇವಾಲಯವಾಗಿದ್ದ ಮಣಿರಾಮ್ ದಾಸ್ ಕೀ ಛಾವಣಿಯ ಪ್ರಧಾನ ಅರ್ಚಕ- ಮಹಾಂತ- ನೃತ್ಯ ಗೋಪಾಲದಾಸ್ ಅವರು 40 ಕಿ.ಗ್ರಾಂ ತೂಗುವ ಬೆಳ್ಳಿಯ ಇಟ್ಟಿಗೆಯನ್ನು ದಾನ ಮಾಡಿದ್ದರು. 2003ರಿಂದ ನೃತ್ಯ ಗೋಪಾಲದಾಸ್-1992ರಲ್ಲಿ ಬಾಬ್ರಿ ಮಸೀದಿಯನ್ನು ನೆಲಸಮ ಮಾಡಿದ ಬಳಿಕ ಅದರ ಜಾಗದಲ್ಲಿ ರಾಮಮಂದಿರ ಕಟ್ಟಲು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ರಚಿಸಿದ್ದ ಟ್ರಸ್ಟ್ ಆಗಿರುವ ರಾಮ ಜನ್ಮಭೂಮಿ ನ್ಯಾಸ್‌ನ ಅಧ್ಯಕ್ಷರಾಗಿದ್ದುಕೊಂಡು ಬಂದಿದ್ದರು.

ನಂತರ ವಿವಾದಿತ ಸ್ಥಳದ ಕುರಿತ ಕಾನೂನು ಖಟ್ಲೆಯಲ್ಲಿ ಬಾಲರಾಮನ ಸ್ವರೂಪನಾದ ರಾಮ ಲಲ್ಲಾ ವಿರಾಜಮಾನನ “ಹತ್ತಿರದ ಗೆಳೆಯರು” ಎಂದು ಈ ಖಟ್ಲೆಯ ದೂರುದಾರರಲ್ಲಿ ಒಬ್ಬರಾದ ವಿಎಚ್‌ಪಿ ಸದಸ್ಯರು- ಮಂದಿರವನ್ನು ಕಟ್ಟುವ ಹೊಣೆಯನ್ನು ಈ ನ್ಯಾಸಕ್ಕೆ ವಹಿಸಬೇಕೆಂದು ಕೋರಿದ್ದರು. ಆದರೆ, ರಾಮ ಲಲ್ಲಾನ ಪರವಾಗಿ ತೀರ್ಪು ನೀಡಿದಾಗ ಸುಪ್ರೀಂ ಕೋರ್ಟ್, ನವೆಂಬರ್ 9, 2019ರಂದು ಮೂರು ತಿಂಗಳುಗಳ ಒಳಗಾಗಿ ಹೊಸ ಟ್ರಸ್ಟ್ ಒಂದನ್ನು ಸ್ಥಾಪಿಸಬೇಕೆಂದು ಮೋದಿ ಸರಕಾರಕ್ಕೆ ಆದೇಶ ನೀಡಿತು.

ಫೆಬ್ರವರಿ 5, 2020ರಂದು ಸರಕಾರವು ರಾಮಜನ್ಮಭೂಮಿ ತೀರ್ಥ ಕ್ಷೇತ್ರ (ಆರ್‌ಜೆಟಿಕೆ) ಎಂಬ ಹೆಸರಿನಲ್ಲಿ ಒಂದು ಟ್ರಸ್ಟ್ ಸ್ಥಾಪಿಸಿತು. ಆರಂಭದಲ್ಲಿ ನೃತ್ಯ ಗೋಪಾಲದಾಸ್ ಅವರನ್ನು ಆರ್‌ಜೆಟಿಕೆಯಿಂದ ಹೊರಗಿಡಲಾಗಿತ್ತು. ಆದರೆ, ಅವರು ಇದಕ್ಕೆ ಪ್ರತಿಯಾಗಿ ಇನ್ನೊಂದು ಖಟ್ಲೆ ಹೂಡುವುದಾಗಿ ಬೆದರಿಕೆ ಹಾಕಿದ ಮೇಲೆ, ಫೆಬ್ರವರಿ 19ರಂದು ನಡೆದ ಮೊದಲ ಸಭೆಯಲ್ಲಿ ಅವರನ್ನು ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ನೃತ್ಯ ಗೋಪಾಲರು ದಾನ ಮಾಡಿದ್ದ, ಆ ಕಾಲದಲ್ಲಿ 26 ಲಕ್ಷ ರೂಪಾಯಿ ಬೆಲೆ ಬಾಳುತ್ತಿದ್ದ ಬೆಳ್ಳಿಯ ಇಟ್ಟಿಗೆ ಕೇವಲ ಒಂದು ಪ್ರದರ್ಶನ ಪರಿಕರ ಮಾತ್ರವೇ ಆಗಿತ್ತು. ಮೋದಿ ಅದನ್ನು ನೆಲದಲ್ಲಿ ಇರಿಸಿದ ಬಳಿಕ ಅದನ್ನು ತೆಗೆದು ಆರ್‌ಜೆಟಿಕೆಯ ಬ್ಯಾಂಕ್ ಲಾಕರ್‌ಗೆ ವರ್ಗಾಯಿಸಿ, ಟ್ರಸ್ಟ್‌ನ ಬೆಳೆಯುತ್ತಿರುವ ಸಂಪತ್ತಿಗೆ ಸೇರಿಸಲಾಯಿತು. ಮೋದಿ ಸರಕಾರವು ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲು ಫೆಬ್ರವರಿ 5ರಂದು ಒಂದು ರೂಪಾಯಿಯ ಸಾಂಕೇತಿಕ ದೇಣಿಗೆ ನೀಡಿತ್ತು. ತಾನು ನಗದು, ವಸ್ತು ಅಥವಾ ಆಸ್ತಿಯ ರೂಪದಲ್ಲಿ ಯಾವುದೇ ಷರತ್ತಿಲ್ಲದೆ ದೇಣಿಗೆ ಸ್ವೀಕರಿಸುವುದಾಗಿ ಆರ್‌ಜೆಟಿಕೆ ಆ ಸಮಯದಲ್ಲಿ ಘೋಷಿಸಿತ್ತು. ಆಗಸ್ಟ್ ಹೊತ್ತಿಗೆ ಅದು ಬ್ಯಾಂಕಿನಲ್ಲಿ 42 ಕೋಟಿ ರೂ.ಗಳನ್ನು ಹೊಂದಿತ್ತು. ಮಾರ್ಚ್ 2023ರ ಹೊತ್ತಿಗೆ ಅದು 3,500 ಕೋಟಿ ರೂ.ಗಳನ್ನು ದೇಶದಾದ್ಯಂತದಿಂದ ಸಂಗ್ರಹಿಸಿತ್ತು. ಅದರಲ್ಲಿ 900 ಕೋಟಿ ರೂ.ಗಳನ್ನು ದೇವಾಲಯ ಸಂಕೀರ್ಣಕ್ಕಾಗಿ ಬಳಕೆ ಮಾಡಿತು.

ಅಕ್ಟೋಬರ್ ತಿಂಗಳಲ್ಲಿ ಟ್ರಸ್ಟಿಗೆ ’ವಿದೇಶಿ ದೇಣಿಗೆಗಳು (ನೋಂದಣಿ) ಕಾಯಿದೆ’ಯ (ಎಫ್‌ಸಿಆರ್‌ಎ) ಪ್ರಕಾರ ಹೊರದೇಶಗಳಿಂದ ಹೆಚ್ಚುವರಿ ದೇಣಿಗೆ ಸಂಗ್ರಹಿಸಲು ಅನುಮತಿ ಸಿಕ್ಕಿತು. ಮೋದಿಯ ಭಾರತದಲ್ಲಿ ಇಂತಹ ಪರವಾನಗಿಯು ತೀರಾ ಆಪರೂಪದ ಸರಕು. ತಾನು ದೇಶದಾದ್ಯಂತ 2019 ಮತ್ತು 2021ರ ನಡುವೆ ಮೇಲೆ ಹೇಳಿದ ಎಫ್‌ಸಿಆರ್‌ಎ ಪ್ರಕಾರ ದೇಣಿಗೆ ಪಡೆಯುವ ಸುಮಾರು 2,000 ಎನ್‌ಜಿಓಗಳ ಪರವಾನಗಿಯನ್ನು ರದ್ದು ಮಾಡಿರುವುದಾಗಿ ಗೃಹ ಸಚಿವಾಲಯವು ಡಿಸೆಂಬರ್ 2022ರಲ್ಲಿ ಲೋಕಸಭೆಗೆ ತಿಳಿಸಿತ್ತು. ಉಳಿದ ಎನ್‌ಜಿಓಗಳಿಗೆ ವ್ಯತಿರಿಕ್ತವಾಗಿ, ಆರ್‌ಜೆಟಿಕೆ ಹೇಗೆ ಹಣ ಸಂಗ್ರಹ ಮಾಡಿದೆ ಮತ್ತು ಖರ್ಚು ಮಾಡಿದೆ ಎಂಬ ಬಗ್ಗೆ ಸರಕಾರದಿಂದ ಯಾವುದೇ ಪರಿಶೀಲನೆಯನ್ನು ಎದುರಿಸಿಲ್ಲ. ಅದು ನಡೆಸಿದ ವ್ಯವಹಾರಗಳ ಕುರಿತು ಮಾಡಿದ ಅಧ್ಯಯನವು, ಕೆಲವು ದೇಣಿಗೆಗಳನ್ನು ಭಾರತೀಯ ಜನತಾ ಪಕ್ಷಕ್ಕೆ ಸಂಬಂಧಿಸಿದ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ಸಂಪತ್ತಿನ ಸುರಿಮಳೆಗೆ ನೆರವಾಗುವ ರೀತಿಯಲ್ಲಿ ಬಳಸಲಾಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ.

ಆರ್‌ಜೆಕೆಟಿ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಭೂಮಿಪೂಜೆ ಕಾರ್ಯಕ್ರಮವನ್ನು ಏಳು ಸಾವಿರ ವರ್ಷಗಳ ಹಿಂದೆ ರಾಮ ಹುಟ್ಟಿದನೆಂದು ನಂಬಲಾದ ನಿರ್ದಿಷ್ಟ ದಿನದಂದೇ ಆರಂಭಿಸುವುದಾಗಿ ಹೇಳಲಾಗಿತ್ತು. ದಿನವು ಬಹಳ ಮಂಗಳಕರವಾಗಿದೆ ಎಂದು ಹೇಳಲಾಗಿತ್ತಾದರೂ, ಯಾವುದೇ ಕಾರಣಗಳನ್ನು ನೀಡಲಾಗಿರಲಿಲ್ಲ. ಆದರೆ ಅದಕ್ಕೆ ರಾಜಕೀಯ ಮಹತ್ವವಂತೂ ಖಂಡಿತವಾಗಿಯೂ ಇತ್ತು. ಸರಿಯಾಗಿ ಒಂದು ವರ್ಷದ ಮೊದಲು ಅದೇ ದಿನದಂದು, ಅಂದರೆ ಆಗಸ್ಟ್ 5, 2019ರಂದು ಮೋದಿ ಸರಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿ, ಭಾರತದ ಏಕೈಕ ಮುಸ್ಲಿಂ ಬಾಹುಳ್ಯದ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಒಡೆದು ಕೆಳದರ್ಜೆಗೆ ಇಳಿಸಿತ್ತು. 2019ರಲ್ಲಿ ಮೋದಿ ಹೆಚ್ಚಿನ ಬಹುಮತದಿಂದ ಅಧಿಕಾರಕ್ಕೆ ಮರಳಿದ ಧೈರ್ಯದಿಂದ ಬಿಜೆಪಿಯು ಈ ರದ್ದತಿಯಂತೆಯೇ ರಾಮಮಂದಿರದ ನಿರ್ಮಾಣವನ್ನು ಆದಷ್ಟು ಬೇಗನೇ ಈಡೇರಿಸುವುದಾಗಿ ಭರವಸೆ ನೀಡಿತ್ತು.

ಅದು ಮಂಗಳಕರ ದಿನ ಆಗಿದ್ದಿರಲೂಬಹುದು. ಆದರೆ, ಕಾರ್ಯಕ್ರಮ ನಡೆಸಿದ ಸಮಯ ಮಾತ್ರ ಕೋವಿಡ್-19ರ ನಂತರ ಹೇರಲಾಗಿದ್ದ ಹಿಂದೆಂದೂ ಕಾಣದ ದೇಶವ್ಯಾಪಿ ಲಾಕ್‌ಡೌನ್ ಹೇರಿದ್ದ ಸರಕಾರದ ನಿಯಮಗಳಿಗೆ ವಿರುದ್ಧವಾಗಿತ್ತು. ಅದು ಕ್ರಮೇಣ ನಿಯಮಗಳನ್ನು ಸಡಿಲಿಸುತ್ತಾ ಬಂದಿತ್ತಾದರೂ, ಜುಲೈ 29ರಂದು ಹೊರಡಿಸಲಾದ “ಅನ್‌ಲಾಕ್ 3” ನಿಯಮಗಳು ಧಾರ್ಮಿಕ ಸಮಾವೇಶಗಳನ್ನು ಮತ್ತು ದೊಡ್ಡ ಸಭೆಗಳನ್ನು ನಿಷೇಧಿಸಿದ್ದವು. ಆ ಸಮಯದಲ್ಲಿ 69 ವರ್ಷ ಪ್ರಾಯವಾಗಿದ್ದ ಮೋದಿ, ತನ್ನ ಸರಕಾರವು “65 ವರ್ಷ ಮೇಲ್ಪಟ್ಟ ಎಲ್ಲರೂ ಅತ್ಯಗತ್ಯ ಮತ್ತು ಆರೋಗ್ಯ ಉದ್ದೇಶಗಳಿಗೆ ಹೊರತಾಗಿ ಮನೆಯಲ್ಲೇ ಉಳಿಯಬೇಕು” ಎಂದು ಸಲಹೆ ಮಾಡಿರುವುದಾಗಿ ಹೇಳಿದ್ದರು. ಎರಡು ದಿನಗಳ ಮೊದಲಷ್ಟೇ ಗೃಹಸಚಿವ ಅಮಿತ್ ಶಾಗೆ ಕೊರೊನಾ ವೈರಸ್ ತಗುಲಿಸಿಕೊಂಡಿರುವುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಜುಲೈ 29ರಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಅವರು ಭಾಗವಹಿಸಿದ್ದರು ಮತ್ತು ಅದರಲ್ಲಿ ಮೋದಿಯೂ ಇದ್ದರು. ಹೀಗಿದ್ದರೂ ಕಾರ್ಯಕ್ರಮ ಮುಂದೂಡಲು ಸರಕಾರ ನಿರಾಕರಿಸಿತ್ತು. ಆ ದಿನ ಸುಮಾರು ಇನ್ನೂರರಷ್ಟು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಅದೇ ದಿನ 857 ಮಂದಿ ಕೋವಿಡ್‌ಗೆ ಬಲಿಯಾಗಿದ್ದರು ಮತ್ತು 52,509 ಮಂದಿ ಹೊಸದಾಗಿ ಸೋಂಕು ತಗುಲಿಸಿಕೊಂಡಿದ್ದರು. ಅದು 50,000ಕ್ಕೂ ಹೆಚ್ಚು ಮಂದಿ ಸೋಂಕು ತಗುಲಿಸಿಕೊಂಡ ಸತತ ಏಳನೇ ದಿನವಾಗಿತ್ತು.

ಗ್ರಹಿಕೆ ನಿರ್ವಹಣೆಯ ಗೀಳು ಹತ್ತಿಸಿಕೊಂಡ ಒಂದು ಸರಕಾರಕ್ಕೆ ಕಾರ್ಯಕ್ರಮ ಮುಂದೂಡುವುದು ಗಂಟಲಲ್ಲಿ ಇಳಿಯದ ವಿಷಯವಾಗಿತ್ತು. ಕೊನೆಗೂ ಬಿಜೆಪಿಯನ್ನು ರಾಷ್ಟ್ರೀಯ ಪ್ರಾಮುಖ್ಯತೆಗೆ ಏರಿಸಿದ್ದು, 1984ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳು ಇದ್ದಲ್ಲಿಂದ 1989ರಲ್ಲಿ 85 ಸ್ಥಾನಗಳಿಗೆ ಬರುವಂತೆ ಮಾಡಿದ್ದು, ಎರಡು ವರ್ಷಗಳ ನಂತರ ಕಲ್ಯಾಣ್‌ಸಿಂಗ್ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಸರಕಾರ ರಚಿಸುವಂತೆ ಮಾಡಿದ್ದು ರಾಮ ಜನ್ಮಭೂಮಿ ಅಭಿಯಾನವೇ ಅಲ್ಲವೆ?

ಮೋದಿಗೆ ತಾನೇ ಸ್ವಂತ ರಾಷ್ಟ್ರಮಟ್ಟಕ್ಕೆ ಏರುವಂತೆ ಮಾಡಿ ಹಿಂದೂ ಹೃದಯ ಸಾಮ್ರಾಟ ಎನಿಸಿಕೊಳ್ಳುವಂತೆ ಮಾಡಿದ್ದು ಇದೆ ಅಭಿಯಾನವಲ್ಲವೆ? ಬಿಜೆಪಿಯ ಮಾಜಿ ಅಧ್ಯಕ್ಷ ಎಲ್.ಕೆ. ಆಡ್ವಾಣಿ 1990ರಲ್ಲಿ ಸೋಮನಾಥದಿಂದ ಅಯೋಧ್ಯೆಯ ತನಕ ಮಾಡಿದ ರಥಯಾತ್ರೆಯ ಜೊತೆಗೆ ಅರಂಭವಾದ ತನ್ನ ಸ್ವಂತ ರಾಜಕೀಯ ಯಾತ್ರೆಯ ಚರಮ ಬಿಂದು ರಾಮಮಂದಿರ ನಿರ್ಮಾಣವಲ್ಲವೆ? ಆ ಯಾತ್ರೆಯು, ನಲವತ್ತು ಸಾವಿರ ಸ್ವಯಂಸೇವಕರು ಮಸೀದಿಯನ್ನು ನೆಲಸಮ ಮಾಡುವ ಪ್ರಯತ್ನದಲ್ಲಿ ಕೊನೆಗೊಂಡಿತ್ತು. ಆ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದರು. ಪೊಲೀಸರು ಗೋಲಿಬಾರ್ ಮಾಡಿದುದರಿಂದ ಉತ್ತರ ಪ್ರದೇಶ ಸರಕಾರದ ಪ್ರಕಾರ 16 ಮಂದಿ ಸತ್ತಿದ್ದು. (ಬಿಜೆಪಿ ಸತ್ತವರ ಸಂಖ್ಯೆ ಐವತ್ತಕ್ಕೂ ಹೆಚ್ಚು ಎಂದು ಹೇಳಿಕೊಂಡಿತ್ತು). ಆ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರ ಕಾರ್ಯದರ್ಶಿಯಾಗಿದ್ದವರು ನೃಪೇಂದ್ರ ಮಿಶ್ರಾ. ಅವರೇ ಈಗ ಐದು ವರ್ಷಗಳ ಕಾಲ ಮೋದಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಬಳಿಕ ಈಗ ಆರ್‌ಜೆಟಿಕೆಯ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ.

1991ರ ಬಳಿಕ ಮೋದಿ ಅಯೋಧ್ಯೆಗೆ ಕಾಲಿಟ್ಟದ್ದು ಭೂಮಿ ಪೂಜನದ ದಿನವೇ ಎನ್ನಲಾಗುತ್ತದೆ. ಆಗ ಅವರು ಮುರಳಿ ಮನೋಹರ ಜೋಷಿಯ ಜೊತೆ ಬಾಬ್ರಿ ಮಸೀದಿಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಆ ಕ್ಷಣದ ಚಿತ್ರ ತೆಗೆದಿದ್ದ ಛಾಯಾಗ್ರಾಹಕನ ಪ್ರಕಾರ, ತಾನಿನ್ನು ಅಲ್ಲಿಗೆ ಕಾಲಿಡುವುದು ರಾಮಮಂದಿರದ ನಿರ್ಮಾಣ ಆರಂಭವಾದ ನಂತರವೇ ಎಂದು ಮೋದಿ ಹೇಳಿದ್ದರು. 1990ರ ಗೋಲಿಬಾರ್‌ನಲ್ಲಿ ಮೃತರಾದ ಹಲವಾರು ಸ್ವಯಂಸೇವಕರ ಸಂಬಂಧಿಕರಿಗೆ ಸಮಾರಂಭಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ, ಆಡ್ವಾಣಿ ಮತ್ತು ಜೋಷಿಗೆ ವಯಸ್ಸು ಮತ್ತು ಕೋವಿಡ್ ಕಾರಣ ನೀಡಿ ಸಮಾರಂಭದಿಂದ ದೂರ ಉಳಿಯುವಂತೆ ಮತ್ತು ವಿಡಿಯೋ ಲಿಂಕ್ ಮೂಲಕ ಭಾಗವಹಿಸುವಂತೆ ಆರ್‌ಜೆಟಿಕೆ ಹೇಳಿತ್ತು. ಕಲ್ಯಾಣ್ ಸಿಂಗ್ ಅವರು ಅಯೋಧ್ಯೆಗೆ ಪ್ರಯಾಣ ಮಾಡಿದ್ದರು. ಆದರೆ ಅವರಿಗೆ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನ ನೀಡಲಿಲ್ಲ. ರಾಮ ಜನ್ಮಭೂಮಿ ಅಭಿಯಾನದಲ್ಲಿ ಸಕ್ರಿಯರಾಗಿದ್ದ ಇನ್ನೊಬ್ಬರು ಬಿಜೆಪಿ ನಾಯಕಿ ಉಮಾಭಾರತಿ ಕೂಡಾ ಅಯೋಧ್ಯೆಗೆ ಹೋಗಿದ್ದರು. ಆದರೆ, ಕೊರೊನಾ ವೈರಸ್ ಸೋಂಕು ತಗುಲಬಾರದೆಂದು ತಾನು ಸಮಾರಂಭದಲ್ಲಿ ಭಾಗವಹಿಸದಿರಲು ನಿರ್ಧರಿಸಿರುವುದಾಗಿ ಟ್ವೀಟ್ ಮಾಡಿದ್ದರು. ಒಂದು ತಿಂಗಳ ನಂತರ ಸಾಂಕ್ರಾಮಿಕ ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ಪಾಸಿಟಿವ್ ಬಂತು.

ಮಂದಿರ ಬೇಕೆಂದು ದಶಕಗಳಿಂದ ವಾದಿಸುತ್ತಾ ಬಂದಿದ್ದ ಮತ್ತು ಬಾಬ್ರಿ ಮಸೀದಿ ನೆಲಸಮ ಪ್ರಕರಣದಲ್ಲಿ ಅವರ ಪಾತ್ರಕ್ಕಾಗಿ ಕೇಸು ಎದುರಿಸುತ್ತಿದ್ದ ಹಿಂದುತ್ವದ ಬೆಂಕಿಯುಗುಳು ನಾಯಕರೆಲ್ಲರ ಅನುಪಸ್ಥಿತಿಯಲ್ಲಿ ಮೋದಿ ಒಬ್ಬರೇ ಒಂಟಿಯಾಗಿ, ಅವರೆಲ್ಲರ ಹೋರಾಟವನ್ನು ಅಂತಿಮವಾಗಿ ಫಲಪ್ರದಗೊಳಿಸಿದ ನಾಯಕನೆಂಬಂತೆ ನಿಲ್ಲಲು ಸಾಧ್ಯವಾಯಿತು. ಇದು ಒಂದು “ಪಟ್ಟಾಭಿಷೇಕ” ಎಂದು ಪತ್ರಕರ್ತ ಸಾಯಿಸುರೇಶ್ ಶಿವಸ್ವಾಮಿ ಆ ಸಮಯದಲ್ಲಿ ಬರೆದಿದ್ದರು.

ಏನೂ ಇಲ್ಲದ ಸಮಯದಿಂದ ಬಿಜೆಪಿಯನ್ನು ಕಟ್ಟಲು ಶ್ರಮಿಸಿದವರನ್ನೆಲ್ಲಾ ಮೈದಾನದಿಂದ ಹೊರಗಟ್ಟಲಾಗಿದೆ. ಮಂದಿರ ಚಳವಳಿಯ ವಿಷಯದಲ್ಲೂ ಇದೇ ಆಗಿದೆ. ಮುಂಚೂಣಿಯಲ್ಲಿ ಇದ್ದವರೆಲ್ಲಾ ಒಂದೋ ನಿವೃತ್ತರಾಗಿದ್ದಾರೆ ಇಲ್ಲವೇ ನಿವೃತ್ತಿಯ ಹಾದಿಯಲ್ಲಿದ್ದಾರೆ. ಅವರೆಲ್ಲರ ಹೆಗಲ ಮೇಲೆ ನಿಂತು ಒಬ್ಬನೇ ವ್ಯಕ್ತಿ ನಿರ್ಣಾಯಕವಾದ ಸಾಮೂಹಿಕ ಹಿಂದೂ ಬೆಂಬಲ ಪಡೆಯುವ ದಾರಿಯಲ್ಲಿ ಮುನ್ನುಗ್ಗುವ ತಂತ್ರವನ್ನು ಕಂಡುಕೊಂಡಿದ್ದಾರೆ. ಎಲ್ಲಾ ಮಾನದಂಡಗಳಿಂದಲೂ 2024ರ ವರ್ಷ 2014 ಆಥವಾ 2019ರಂತೆ ಇರುವುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಮಂದಿರವು ಸಿದ್ಧವಾಗುತ್ತದೆ. ತನ್ನನ್ನು ಪಾರುಗಾಣಿಸಲು ಮೋದಿ- ರಾಮನಲ್ಲಿ ಹೊಸ ಮಿತ್ರನನ್ನು ಕಂಡುಕೊಳ್ಳಲಿದ್ದಾರೆ.

ಆರ್‌ಜೆಕೆಟಿಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಬನ್ಸಾಲ್ ಭೂಮಿಪೂಜೆಯು “ಸ್ವಾತಂತ್ರ್ಯ ದಿನದಷ್ಟೇ ಐತಿಹಾಸಿಕ ದಿನ” ಎಂದು ಘೋಷಿಸಿದ್ದಾರೆ. ಬ್ರಿಟಿಷ್ ವಸಾಹತುಶಾಹಿಯನ್ನು ಮುಸ್ಲಿಂ ಆಡಳಿತದೊಂದಿಗೆ ಸಮೀಕರಿಸುವ ಮೋದಿ ಸರಕಾರದ ಅನೈತಿಹಾಸಿಕ ವಾಕ್ಚಾತುರ್ಯ ಅನುಸರಿಸಿರುವ ಬನ್ಸಾಲ್, ಬಾಬ್ರಿ ಮಸೀದಿಯು ಭಾರತದ ದಾಸ್ಯದ ಸಂಕೇತವಾಗಿದ್ದು, ಅದನ್ನು ನ್ಯಾಯಾಲಯದ ಸಮ್ಮತಿಯೊಂದಿಗೆ ನಿರ್ಮೂಲನ ಮಾಡಲಾಗಿದೆ ಎಂದು ಹೇಳಿದ್ದಾರೆ. ಸಮಾರಂಭದ ಎರಡು ದಿನಗಳ ನಂತರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಮಂದಿರವು ಭೂಕಂಪ ಇತ್ಯಾದಿ ನೈಸರ್ಗಿಕ ಪ್ರಕೋಪಗಳನ್ನು ತಾಳಿಕೊಂಡು ಸಾವಿರ ವರ್ಷಗಳ ಕಾಲ ಬಾಳಲಿದೆ ಎಂದು ಹೇಳಿದ್ದಾರೆ.

ಬನ್ಸಾಲ್ ವಿಎಚ್‌ಪಿಯ ಉಪಾಧ್ಯಕ್ಷ ಕೂಡಾ ಹೌದು. ಆಡ್ವಾಣಿ, ಜೋಷಿ, ಕಲ್ಯಾಣ್ ಸಿಂಗ್, ಉಮಾಭಾರತಿ ಮತ್ತು ನೃತ್ಯ ಗೋಪಾಲರಂತೆ ಬಾಬ್ರಿ ಮಸೀದಿ ನೆಲಸಮ ಪ್ರಕರಣದಲ್ಲಿ ತಮ್ಮ ಪಾತ್ರಕ್ಕಾಗಿ 1993ರಲ್ಲಿ ಸಿಬಿಐ ತನಿಖೆಯಲ್ಲಿ ಆರೋಪಕ್ಕೆ ಗುರಿಯಾದ 48 ಮಂದಿಯಲ್ಲಿ ಸೇರಿದವರು. ಮಂದಿರ ನಿರ್ಮಾಣದ ಪರವಾಗಿ ತೀರ್ಪು ನೀಡಿದುದರ ಹೊರತಾಗಿಯೂ ಸುಪ್ರೀಂಕೋರ್ಟ್ ಬಾಬ್ರಿ ಧ್ವಂಸ ಕೃತ್ಯವನ್ನು “ಸಾರ್ವಜನಿಕ ಆರಾಧನಾ ಸ್ಥಳ ಒಂದನ್ನು ನಾಶಪಡಿಸುವ ಒಂದು ಯೋಜಿತ ಕೃತ್ಯ” ಮತ್ತು “ಕಾನೂನಿನ ಆಡಳಿತದ ಒಂದು ಕುಖ್ಯಾತ ಉಲ್ಲಂಘನೆ” ಎಂದೇ ಕರೆದಿತ್ತು. ಡಿಸೆಂಬರ್ 6, 1992ರಂದು ಅಯೋಧ್ಯೆಯಲ್ಲಿ ಸೇರಿದ್ದ ಹಿಂದೂ ಜನಸಂದಣಿಗೆ ಪ್ರಚೋದನಕಾರಿ ಭಾಷಣ ಮಾಡಿದ ಸಂಘಪರಿವಾರದ ಆರೋಪಿಗಳಲ್ಲಿ ಈತ ಕೂಡಾ ಒಬ್ಬ.

ಹತ್ತು ದಿನಗಳ ನಂತರ ಗೃಹ ಸಚಿವಾಲಯವು ನೇಮಕ ಮಾಡಿದ್ದ ಲಿಬರನ್ ತನಿಖಾ ಆಯೋಗವು ಈಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಗುರು ಅವೈದ್ಯನಾಥ ಸೇರಿದಂತೆ, ಹೆಸರಿಸಿದ್ದ ಹಲವಾರು ನಾಯಕರಲ್ಲಿ ಬನ್ಸಾಲ್ ಕೂಡಾ ಒಬ್ಬರು. ಅವೈದ್ಯನಾಥ್ ಮೊದಲಿನಿಂದಲೇ ಮಸೀದಿಯನ್ನು ನೆಲಸಮ ಮಾಡಲು ರಹಸ್ಯವಾಗಿ ಸಂಚು ನಡೆಸಿದ್ದರು ಎಂದು ಆಯೋಗವು ಹೇಳಿತ್ತು.

2014ರ “ಕೋಬ್ರಾಪೋಸ್ಟ್”ನ ಒಂದು ತನಿಖೆಯಲ್ಲಿ ವಿಹಿಂಪದ ಯುವ ವಿಭಾಗವಾದ ಭಜರಂಗದಳ ಸದಸ್ಯರಿಂದ ಕೂಡಿದ ಗುಪ್ತ ತಂಡ ಲಕ್ಷ್ಮಣ ಸೇನೆಯ ರೂವಾರಿಗಳಲ್ಲಿ ಈತನೂ ಒಬ್ಬ ಎಂದು ಹೇಳಲಾಗಿತ್ತು. ಸೇರಿರುವ ಜನಜಂಗುಳಿಯ ಲಾಭ ಪಡೆದು ಮಸೀದಿ ನೆಲಸಮದ ನಾಯಕತ್ವ ವಹಿಸಲು ಈ ಗುಂಪಿಗೆ ಗುಪ್ತ ತರಬೇತಿ ನೀಡಲಾಗಿತ್ತು ಎಂದೂ ವರದಿಯಲ್ಲಿ ಹೇಳಲಾಗಿತ್ತು. ಇಂತಹ ತರಬೇತಿ ನಡೆದಿರುವುದನ್ನು ಬನ್ಸಾಲ್ ನಿರಾಕರಿಸಿದ್ದಾರೆ. ಭೂಮಿ ಪೂಜೆ ನಡೆದ ಎರಡು ತಿಂಗಳುಗಳ ಬಳಿಕ, ಸೆಪ್ಟೆಂಬರ್ 30, 2020ರಲ್ಲಿ ವಿಶೇಷ ನ್ಯಾಯಾಲಯವು ಬನ್ಸಾಲ್ ಸೇರಿದಂತೆ ಬದುಕಿ ಉಳಿದ ಈ ಪ್ರಕರಣದ ಎಲ್ಲಾ 32 ಆರೋಪಿಗಳನ್ನು ದೋಷಮುಕ್ತಗೊಳಿಸಿ, ನೆಲಸಮವು ಒಂದು ಯೋಜಿತವಲ್ಲದ ಕೃತ್ಯವಲ್ಲ ಎಂದು ಸಾಬೀತುಮಾಡುವಲ್ಲಿ ಸಿಬಿಐ ವಿಫಲವಾಗಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿತ್ತು.

ಆ ಹೊತ್ತಿಗಾಗಲೇ ಬನ್ಸಾಲ್ ಆರ್‌ಜೆಟಿಕೆಯ ಸಾರ್ವಜನಿಕ ಮುಖವಾಗಿದ್ದರು. ಅವರೇ ಭೂಮಿಪೂಜೆಯ ಕುರಿತ ಎಲ್ಲಾ ಘೋಷಣೆಗಳನ್ನು ಮಾಡುತ್ತಿದ್ದುದು ಮತ್ತು ಖಜಾಂಚಿ ಗೋವಿಂದ ದೇವಗಿರಿ ಮತ್ತು ಆರೆಸ್ಸೆಸ್ ಸಂಬಂಧ ಹೊಂದಿರುವ ಅಯೋಧ್ಯೆ ಮೂಲದ ಹೋಮಿಯೋಪತಿ ವೈದ್ಯ ಅನಿಲ್ ಮಿಶ್ರಾ ಸೇರಿದಂತೆ ಮೂವರು ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದರು. ಇವರು ಆರ್‌ಜೆಟಿಕೆಯ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳಿಗೆ ಜಂಟಿ ಸಹಿ ಹಾಕುವ ಅಧಿಕಾರ ಪಡೆದಿದ್ದರು. ದೇವಾಲಯ ಸಂಕೀರ್ಣಕ್ಕಾಗಿ ಅಯೋಧ್ಯೆಯಲ್ಲಿ ಹೆಚ್ಚುವರಿ ಜಮೀನು ಪಡೆಯುವ ಟ್ರಸ್ಟಿನ ಪ್ರಯತ್ನಗಳ ನಾಯಕತ್ವವನ್ನೂ ಇವರೇ ವಹಿಸಿದ್ದರು. ಈ ಪ್ರಕ್ರಿಯೆಯಲ್ಲಿಯೇ ರಾಮನ ಹೆಸರಿನಲ್ಲಿ ಲಾಭಬಡುಕತನದ ಆರೋಪ ಕೇಳಿಬಂದಿತ್ತು.

ನೃತ್ಯ ಗೋಪಾಲದಾಸ್

ಜನವರಿ 7, 1993ರಲ್ಲಿ ನರಸಿಂಹ ರಾವ್ ಸರಕಾರ ಅಯೋಧ್ಯೆಯಲ್ಲಿ ನಿರ್ದಿಷ್ಟ ಪ್ರದೇಶದ ಸ್ವಾಧೀನ ಸುಗ್ರೀವಾಜ್ಞೆ (Acquisition of Certain Area at Ayodhya Ordinance) ತಂದಿತು. ಇದರ ಅಡಿಯಲ್ಲಿ ವಿವಾದಿತ ಸ್ಥಳವನ್ನು ಸ್ವಾಧೀನಪಡಿಸಿಕೊಂಡು, ಅದರ ಸುತ್ತಲಿನ ಹೆಚ್ಚುವರಿ ಭೂಮಿಯನ್ನು ಖರೀದಿಸಿ, ಕಾಲಕ್ರಮೇಣ ಅಲ್ಲಿ ಒಂದು ರಾಮಮಂದಿರ, ಒಂದು ಮಸೀದಿ, ಯಾತ್ರಿಕರಿಗೆ ಸೌಕರ್ಯಗಳು, ಒಂದು ಗ್ರಂಥಾಲಯ ಮತ್ತೊಂದು ವಸ್ತು ಸಂಗ್ರಹಾಲಯ ಕಟ್ಟುವ ಉದ್ದೇಶವಿತ್ತು. ಬಿಜೆಪಿ ಇದನ್ನು ವಿರೋಧಿಸಿತು ಮತ್ತು ಆ ಕಾಲದಲ್ಲಿ ಬಿಜೆಪಿಯ ಉಪಾಧ್ಯಕ್ಷರಾಗಿದ್ದ ಎಸ್.ಎಸ್. ಭಂಡಾರಿ ಅದನ್ನು “ಪಕ್ಷಪಾತಿ, ಕ್ಷುಲ್ಲಕ ಮತ್ತು ದಾರಿತಪ್ಪಿಸುವಂತದ್ದು” ಎಂದು ಕರೆದರು. ಅಖಿಲ ಭಾರತ ಮುಸಲ್ಮಾನ ವೈಯಕ್ತಿಕ ಕಾನೂನು ಮಂಡಳಿ, ಮಸೀದಿಗೆ ಮೀಸಲಾದ ಜಮೀನನ್ನು ಶೆರಿಯಾ ಪ್ರಕಾರ ಮಾರಬಾರದು, ದಾನ ಮಾಡಬಾರದು ಅಥವಾ ಯಾವುದೇ ರೀತಿಯಲ್ಲಿ ಪ್ರತ್ಯೇಕಗೊಳಿಸಬಾರದು ಎಂಬ ನೆಲೆಯಲ್ಲಿ ಅದನ್ನು “ಇಸ್ಲಾಮೇತರ” ಎಂದು ಕರೆದು ವಿರೋಧಿಸಿತು. ಹೀಗಿದ್ದರೂ, ಸರಕಾರವು 67.7 ಎಕರೆ ಅಥವಾ 27.4 ಹೆಕ್ಟೇರ್ ಜಮೀನನ್ನು ಅಯೋಧ್ಯೆಯ ಕೋಟ್ ರಾಮಚಂದ್ರ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡಿತು. ಜಮೀನಿನ ಹಿಂದಿನ ಮಾಲಕರಿಗೆ ಜಮೀನು ಮತ್ತು ಇತರ ಆಸ್ತಿಗಳಿಗಾಗಿ, ಜಿಲ್ಲಾಡಳಿತವು ನಿಗದಿಪಡಿಸಿದಂತೆ ಮಾರುಕಟ್ಟೆ ದರವನ್ನು ನೀಡಲಾಯಿತು.

ಮೋದಿ ಸರಕಾರವು ಆರ್‌ಜೆಟಿಕೆಯನ್ನು ಸ್ಥಾಪಿಸುವಾಗ ಈ ಜಮೀನನ್ನು ಟ್ರಸ್ಟಿಗೆ ವರ್ಗಾಯಿಸಿತು. ಆದರೆ, ನವೆಂಬರ್ 11, 2020ರಲ್ಲಿ ನಡೆದ ಸಭೆಯಲ್ಲಿ- ಹಿಂದೂ ನಿರ್ಮಾಣ ತತ್ವದ ಪ್ರಕಾರ “ವಾಸ್ತು ಸರಿಪಡಿಸಲು”, ಪ್ರತಿದಿನವೂ ಭೇಟಿ ನೀಡಲು ಬರಬಹುದಾದ ಸಾವಿರಾರು ಭಕ್ತರಿಗೆ ಅವಕಾಶ ಕಲ್ಪಿಸಲು ಮತ್ತು ಅದರ ಆವರಣವು ಆಯತಾಕಾರದಲ್ಲಿ ಇರುವಂತೆ ನೋಡಿಕೊಳ್ಳಲು ಟಸ್ಟ್ ಈಶಾನ್ಯ ಭಾಗದಲ್ಲಿ ಹೆಚ್ಚುವರಿ ಜಮೀನನ್ನು ಆದಷ್ಟು ಬೇಗನೇ ಖರೀದಿಸಬೇಕು ಎಂಬ ಮಿಶ್ರಾರ ಪ್ರಸ್ತಾಪವನ್ನು ಅಂಗೀಕರಿಸಿತು. ಈ ಜಮೀನಿನಲ್ಲಿ ಫಕೀರೇ ರಾಮ್, ಕೌಶಲ್ಯಾ ಭವನ್ ಮತ್ತು ಕೈಕೇಯಿ ಕೋಪ್ ಭವನ್ ಸೇರಿದಂತೆ ಹಲವು ದೇವಾಲಯಗಳಿದ್ದವು. ಯಾವುದೇ ಪುರಾತತ್ವ ಪುರಾವೆಗಳಿಲ್ಲದೆ ಬಾಬ್ರಿ ಮಸೀದಿ ಇದ್ದ ಸ್ಥಳದಲ್ಲೇ ರಾಮ ಹುಟ್ಟಿದ್ದ ಎಂದು ರಾಮ ಜನ್ಮಭೂಮಿ ಅಭಿಯಾನವು ಒತ್ತಾಯಿಸುತ್ತಾ ಬಂದು ಬೇರಾವುದೇ ಜಾಗದಲ್ಲಿ ದೇವಾಲಯ ನಿರ್ಮಾಣವನ್ನು ನಿರಾಕರಿಸುತ್ತಾ ಬಂದಿತ್ತಾದರೂ, ತನ್ನ ಯೋಜನೆಗೆ ಅಡ್ಡಿಯಾಗುವ ಯಾವುದೇ ದೇವಾಲಯವನ್ನು ನೆಲಸಮ ಮಾಡಿ ಅದನ್ನು ಬೇರೆ ಕಡೆ ಸ್ಥಳಾಂತರಿಸಲು ಆರ್‌ಜೆಟಿಕೆ ಸಿದ್ಧವಿತ್ತು. ಬಾಬ್ರಿ ಮಸೀದಿ ವಿವಾದದಿಂದ ಜಮೀನಿನ ಸ್ವಾಧೀನಕ್ಕಾಗಿ, ಟ್ರಸ್ಟ್ ತನ್ನದೇ ವಾದಗಳನ್ನು ತಿರುವುಮುರುವು ಮಾಡಿದ ಪ್ರಕರಣ ಇದೊಂದೇ ಅಗಿರಲಿಲ್ಲ.

ಮಂದಿರ ಸಂಕೀರ್ಣ ವಿಸ್ತರಿಸುವುದಕ್ಕಾಗಿ ಮತ್ತು ಸ್ಥಳಾಂತರಗೊಂಡವರಿಗೆ ಬದಲಿ ಜಮೀನು ನೀಡುವುದಕ್ಕಾಗಿ ಮುಂದಿನ ಕೆಲವು ತಿಂಗಳುಗಳಲ್ಲಿ ಟ್ರಸ್ಟ್ 71 ಎಕರೆ ಅಂದರೆ 28.7 ಹೆಕ್ಟೇರ್ ಹೆಚ್ಚುವರಿ ಜಮೀನು ಖರೀದಿಸಿತು. ಈ ಖರೀದಿ ಹುಚ್ಚಾಟದ ಮುಂಚೂಣಿಯಲ್ಲಿ ಇದ್ದವರೆಂದರೆ ಬನ್ಸಾಲ್ ಮತ್ತು ಮಿಶ್ರಾ. 2024ರ ಸಾರ್ವತ್ರಿಕ ಚುನಾವಣೆಗೆ ಮೊದಲೇ ಮಂದಿರ ಪೂರ್ಣಗೊಳಿಸಬೇಕು ಎಂಬ ಮೋದಿ ಸರಕಾರದ ತರಾತುರಿಯ ಹಿನ್ನೆಲೆಯಲ್ಲಿ ಈ ಭೂಸ್ವಾಧೀನದ ಕೆಲಸ ಬೇಗಬೇಗನೇ ನಡೆಯಿತು. ಕಾನೂನು ಪ್ರಕ್ರಿಯೆಗಳನ್ನು ಮತ್ತು ಹೆಚ್ಚಾಗಿ ಜಮೀನಿನ ವಿವಾದಾಸ್ಪದ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೆಯೇ ಇದು ನಡೆಯಿತು.

ಜಮೀನು ಹೊಂದಿರುವವರನ್ನು ಬೆದರಿಸಿಯೋ, ಆಮಿಷ ತೋರಿಸಿ ಹೊರಗೋಡಿಸಲು, ಮುನ್ಸಿಪಲ್ ಮತ್ತು ಜಿಲ್ಲಾ ಅಧಿಕಾರಿವರ್ಗ ಈ ಪ್ರಕ್ರಿಯೆಗಳಲ್ಲಿ ನೆರವಾದರೆ, ಖರೀದಿಗಳನ್ನು ಪಶ್ನಿಸಲಾದಾಗಲೆಲ್ಲಾ ಕಂದಾಯ ನ್ಯಾಯಾಲಯಗಳು ತಪ್ಪದೇ ಟ್ರಸ್ಟ್ ಪರ ವಹಿಸಿಕೊಂಡವು. “ಅಣ್ಣಾ, ಉತ್ತರ ಪ್ರದೇಶದಲ್ಲಿ ನ್ಯಾಯಾಲಯಗಳು ನಿರ್ಧಾರ ಮಾಡುವುದಿಲ್ಲ” ಎಂದು ಫಕೀರೇ ರಾಮ್‌ಮಂದಿರದ ಸ್ವಾಧೀನ ವಿರೋಧಿಸಿ ದೂರು ಸಲ್ಲಿಸಿದ ಶಿವಸೇನಾ ನಾಯಕ ಸಂತೋಷ್ ದುಬೆ ನನಗೆ ಹೇಳಿದರು. “ಎಲ್ಲಾ ನಿರ್ಧಾರಗಳನ್ನು ಸರಕಾರ ತೆಗೆದುಕೊಳ್ಳುತ್ತದೆ. ಟೋಕ್ ದೋ, ಗೋಲಿ ಮಾರ್ ದೋ, ಬುಲ್ಡೋಜರ್ ಚಲಾ ದೋ, ಕೋರ್ಟ್ ಕ್ಯಾ ಹೈ- ಹೊಡೆದು ಹಾಕಿ, ಗುಂಡು ಹಾರಿಸಿ, ಬುಲ್ಡೋಜರ್ ನಡೆಸಿ, ಕೋರ್ಟ್ ಏನು?”

ಈ ಪ್ರಕ್ರಿಯೆಯು ಹಲವಾರು ಸ್ಥಳೀಯ ಗಣ್ಯರಿಗೆ- ಅವರಲ್ಲಿ ಬಹುತೇಕ ಎಲ್ಲರೂ ಬ್ರಾಹ್ಮಣರು- ಕೋಟಿಗಟ್ಟಲೆ ರೂ. ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ನಾನು ಕೋಟ್ ರಾಮಚಂದ್ರ ಮತ್ತು ಅದಕ್ಕೆ ಹತ್ತಿರವಿರುವ ಬಾಘ್ ಬಿಜೈಸಿ ನೆರೆಹೊರೆಯಲ್ಲಿ ಆರ್‌ಜೆಟಿಕೆ ಒಳಗೊಂಡಿರುವ ಹಲವಾರು ಜಮೀನು ವ್ಯವಹಾರಗಳನ್ನು ವಿಶ್ಲೇಷಣೆ ಮಾಡಿದೆ ಮತ್ತು ಅವುಗಳಲ್ಲಿ ಸಮಾನವಾದ ಅಂಶ ಒಂದನ್ನು ಕಂಡುಕೊಂಡೆ. ಜಮೀನನ್ನು ಅದರ ಮಾಲಕರಿಂದ ನೇರವಾಗಿ ಕೊಳ್ಳುವ ಬದಲು ಟಸ್ಟ್ ಹಲವಾರು ಮಧ್ಯವರ್ತಿಗಳ ಜೊತೆಗೆ ವ್ಯವಹಾರ ನಡೆಸಿದೆ ಮತ್ತು ಇವರಲ್ಲಿ ಅನೇಕರು ಅಯೋಧ್ಯೆಯ ಆಗಿನ ಮೇಯರ್ ರಿಷಿಕೇಷ್ ಉಪಾಧ್ಯಾಯರ ಜೊತೆಗೆ ಸಂಪರ್ಕ ಇರುವವರು. ಇವರೆಲ್ಲರೂ ಮೊದಲಿಗೆ ಮಾರುಕಟ್ಟೆ ಬೆಲೆಯಲ್ಲಿ ಜಮೀನು ಕೊಳ್ಳುತ್ತಾರೆ ಮತ್ತು ಮಿತಿಮೀರಿದ ಹೆಚ್ಚು ಬೆಲೆಗೆ ತಕ್ಷಣವೇ ಆರ್‌ಜೆಟಿಕೆಗೆ ಮಾರುತ್ತಾರೆ.

ಮಧ್ಯವರ್ತಿಗಳು ಇದನ್ನು ಮಾಡಲು ಸಾಧ್ಯವಾದುದು ಹೇಗೆಂದರೆ, ಹಲವಾರು ಪ್ರಕರಣಗಳಲ್ಲಿ ಮಾರಲು ಜಮೀನು ಮೂಲ ಮಾಲಕರದ್ದಾಗಿರಲೇ ಇಲ್ಲ. ಅದು ಒಂದೋ ಸರಕಾರದ್ದೋ ಇಲ್ಲವೇ ವಕ್ಫ್ ಭೂಮಿಯೋ ಆಗಿತ್ತು ಅಥವಾ ವಿವಾದದಲ್ಲಿತ್ತು. ಜಮೀನಿನ ಸ್ಪಷ್ಟ ಒಡೆತನ ಪಡೆಯುವ ಸಲುವಾಗಿ ದೇಣಿಗೆಗಳಿಂದ ಸಂಗ್ರಹವಾದ ಭಾರೀ ಪ್ರಮಾಣದ ನಿಧಿಯಿಂದ ಈ ಮಧ್ಯವರ್ತಿಗಳಿಗೆ ಅತೀ ಹೆಚ್ಚಿನ ಬೆಲೆ ನೀಡಿ ಜಮೀನು ಖರೀದಿಸಲು ಆರ್‌ಜೆಟಿಕೆ ಸಿದ್ಧವಾಗಿತ್ತು ಎಂಬುದು ಸ್ಪಷ್ಟ. ಏಕೆಂದರೆ, ಜಮೀನಿನಲ್ಲಿ ಇರುವವರ ಜೊತೆಗೆ ವ್ಯವಹರಿಸುವುದು ಅಥವಾ ಸರಕಾರದಿಂದ ಗುತ್ತಿಗೆ ಪಡೆಯುವುದಕ್ಕಿಂತ ಇದು ಒಳ್ಳೆಯದಾಗಿತ್ತು. ಗುತ್ತಿಗೆಗೆ ಪಡೆದರೆ ಅದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತಿತ್ತು ಮತ್ತು ಮುಂದೆ ಜಮೀನಿನ ಬಳಕೆ ಅಥವಾ ವಿಲೇವಾರಿಗೆ ಹಲವಾರು ಷರತ್ತುಗಳನ್ನು ವಿಧಿಸಲಾಗುತ್ತಿತ್ತು. ಟ್ರಸ್ಟ್ ತಾನು ಸಂಗ್ರಹಿಸಿದ ಹಣವನ್ನು ಹೇಗೆ ಬಳಸಿತು ಎಂಬ ಬಗ್ಗೆ ಯಾವುದೇ ಕಣ್ಗಾವಲು ಇಲ್ಲ, ಏಕೆಂದರೆ ಈ ಕುರಿತು ಮಾಹಿತಿ ಪಡೆಯುವ ಯಾವುದೇ ಪ್ರಯತ್ನವನ್ನು ಸರಕಾರ ಮತ್ತು ನ್ಯಾಯಾಲಯಗಳು ನಿಯಮಿತವಾಗಿ ಬದಿಗೆ ಸರಿಸಿವೆ.

ತಾನು ರಾಮಮಂದಿರ ಕಟ್ಟುವುದಕ್ಕಷ್ಟೇ ಸೀಮಿತವಾದ ಒಂದು ರಾಜಕೀಯರಹಿತ ಖಾಸಗಿ ಸಂಸ್ಥೆ ಎಂದು ಆರ್‌ಜೆಟಿಕೆ ಹೇಳಿಕೊಳ್ಳುತ್ತದೆ ಮತ್ತು ಇದು ಅದನ್ನು ಮಾಹಿತಿ ಹಕ್ಕಿನ ಪ್ರಕಾರ ಯಾವುದೇ ಮಾಹಿತಿ ನೀಡದೇ ಇರುವ ಒಂದು ಸ್ಥಾನದಲ್ಲಿ ಇರಿಸುತ್ತದಾದರೂ, ಅದನ್ನು ಅಯೋಧ್ಯೆಯಲ್ಲಿ ಸರಕಾರದ ಒಂದು ವಿಸ್ತರಿತ ಅಂಗ ಎಂಬಂತೆಯೇ ಕಾಣಲಾಗುತ್ತಿದೆ. ನಾನು ಈ ಬರಹಕ್ಕೆ ಸಂಬಂಧಿಸಿದಂತೆ ಎರಡು ಡಜನ್‌ಗೂ ಹೆಚ್ಚು ಸ್ಥಳೀಯ ವಕೀಲರು, ಕಂದಾಯ ಅಧಿಕಾರಿಗಳು ಮತ್ತು ನಿವಾಸಿಗಳನ್ನು ಮಾತನಾಡಿಸಿದೆ. ಟ್ರಸ್ಟಿನ ವಿವಿಧ ಭೂಸ್ವಾಧೀನ ಪ್ರಯತ್ನಗಳ ವಿರುದ್ಧ ಹೋರಾಡಿದವರಿಗೆಲ್ಲಾ ಇದ್ದ ಒಂದು ಸಮಾನ ಹಿಂಜರಿಕೆಯ ಮಾತು ಎಂದರೆ, “ಸರಕಾರದ ವಿರುದ್ಧ ಹೋರಾಡಲು ಯಾರಿಗೆ ಸಾಧ್ಯ” ಎಂಬುದು.

ಜನವರಿ 22, 2024ರಲ್ಲಿ ಮೋದಿ ರಾಮ ಮಂದಿರದ ಉದ್ಘಾಟನೆ ಮಾಡಲು ಮರಳಿ ಬರುತ್ತಾರೆ. ಇದು ಬನ್ಸಾಲ್ ಆಗಸ್ಟ್ 15, 1947ರಷ್ಟೇ ಮಹತ್ವದ್ದು ಎಂದು ಬಣ್ಣಿಸಿರುವ ಘಟನೆ. ಈ ಸಲ ಕೋವಿಡ್-19ರ ಯಾವುದೇ ನಿಯಂತ್ರಣ ಇಲ್ಲದೆ ಇರುವುದರಿಂದ ಹತ್ತು ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸುವುದಕ್ಕೆ ಸಿದ್ಧತೆ ಮಾಡಲಾಗಿದೆ. ಧಾರ್ಮಿಕ ನಾಯಕರು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ನ್ಯಾಯಾಧೀಶರು, ವಕೀಲರು, ವಿಜ್ಞಾನಿಗಳು, ಲೇಖಕರು, ನಟರು, ಕ್ರಿಕೆಟಿಗರು ಮತ್ತು ವಿಜ್ಞಾನಿಗಳಿಗೆ ಆಹ್ವಾನವನ್ನು ಕಳಿಸಲಾಗಿದೆ. ಆಡ್ವಾಣಿ ಮತ್ತು ಜೋಷಿಗೂ ಈ ಬಾರಿ ಆಹ್ವಾನ ನೀಡಲಾಗಿದೆಯಾದರೂ, ಆವರಿಬ್ಬರೂ ಮುದುಕರಾಗಿರುವುದರಿಂದ ಕಡು ಚಳಿಗಾಲವನ್ನು ಎದುರಿಸಲು ಕಷ್ಟವಾಗುವುದರಿಂದ ಅವರು ಬರುವುದು ಬೇಡ ಎಂದು ಬನ್ಸಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಘಟನೆಯು ಮೋದಿಯ ಮರು ಚುವಾವಣೆಯ ಪ್ರಚಾರದ ಉದ್ಘಾಟನೆಯಾಗಿದೆ ಮತ್ತು ನಿರುದ್ಯೋಗ ಮತ್ತು ಜಾತಿ ಜನಗಣತಿ ಬೇಡಿಕೆಯೇ ಮುಂತಾದ ವಿಷಯಗಳನ್ನು ಹಿನ್ನೆಲೆಗೆ ತಳ್ಳಬಲ್ಲ ಏಕೈಕ ಮುಖ್ಯ ಸಾಧನೆಯಾಗಿದೆ. ಇದನ್ನು ದೇಶ ಸಂಭ್ರಮಿಸಲು ಸಿದ್ಧವಾಗುತ್ತಿರುವಂತೆಯೇ ಇಂತಹ ಬೃಹತ್ ದೇವಾಲಯ ಕಟ್ಟುವುದನ್ನು ಸಾಧ್ಯಮಾಡಿದ ಭೂಕಬಳಿಕೆಯ ಜೊತೆಗೆ ಇವುಗಳನ್ನು ಕುರಿತು ನೆನಪು ಮಾಡಿಕೊಳ್ಳುವುದು ಅತ್ಯಗತ್ಯ: ಐದು ಶತಮಾನಗಳಿಗೂ ಹಳೆಯ ಮಸೀದಿಯನ್ನು ಹಿಂಸಾತ್ಮಕವಾಗಿ ವಶಪಡಿಸಿಕೊಂಡದ್ದು, ರಾಜಕೀಯ ಲಾಭಗಳು, ಸಾವಿರಾರು ಜನ ಸಾವು ಉಂಟುಮಾಡಿದ ಹಿಂಸಾಚಾರಕ್ಕೆ ಕಾರಣವಾದದ್ದು, ರಾಮನ ಭಕ್ತರ ಸಹಾಯಧನದಿಂದ, ಆರ್ಥಿಕ ಲಾಭಕ್ಕಾಗಿ ನಡೆದ ಸಣ್ಣ ಕಬಳಿಕೆಗಳು.

ಎಲ್.ಕೆ. ಆಡ್ವಾಣಿ

ಮಾರ್ಚ್ 16, 2021ರಂದು “ಶ್ರೀ ಠಾಕೂರ್ ಸೀತಾ ವಲ್ಲಭ್ ಮತ್ತು ಇನ್ನೊಬ್ಬರು ವರ್ಸಸ್ ರಘುವರ ಶರಣ್ ಮತ್ತು ಇತರರು” ಎಂಬ ಹೆಸರಿನ ಸಿವಿಲ್ ಪ್ರಕರಣ ಒಂದು ಫೈಜಾಬಾದಿನ ನ್ಯಾಯಾಲಯದಲ್ಲಿ ದಾಖಲಾಯಿತು. ರಾಮಲಲ್ಲಾನ ಪ್ರಕರಣದಂತೆಯೇ ಕೋಟ್ ರಾಮಚಂದ್ರ ಎಂಬ ಗ್ರಾಮದ ಫಕೀರೇ ರಾಮ್‌ಮಂದಿರದಲ್ಲಿ ಸ್ಥಾಪಿಸಲಾದ ಸೀತಾ ಮತ್ತು ವಲ್ಲಭರಂತ ದೇವರುಗಳನ್ನು ಭಾರತೀಯ ಕಾನೂನಿನ ಅಡಿಯಲ್ಲಿ ಸ್ವಂತ ಜಮೀನು ಹೊಂದಿರುವ ಕಾನೂನು ವ್ಯಾಪ್ತಿಗೆ ಒಳಪಡುವ, ಗುತ್ತಿಗೆಗಳಿಗೆ ಸಹಿಹಾಕಬಲ್ಲ, ಇಹಲೋಕದ ಜನರ ಮೇಲೆ ಪರಿಹಾರ ಕೋರಿ ದಾವೆ ಹೂಡಬಲ್ಲ ವ್ಯಕ್ತಿಗಳೋ ಎಂಬಂತೆ ಪರಿಗಣಿಸಲಾಯಿತು.

ಸೀತಾ ಮತ್ತು ವಲ್ಲಭರು ದೊಡ್ಡ ಜಮೀನ್ದಾರರು. ಫಕೀರೇ ರಾಮ್ ದೇವಾಲಯದ ಹೊರತಾಗಿ ಅವರು ಮೂನ್ನೂರು ಕಿ.ಮೀ.ಗೂ ಹೆಚ್ಚು ದೂರದಲ್ಲಿ ಜಲೌನ್ ಜಿಲ್ಲೆಯಲ್ಲಿ ಇನ್ನೂ ನಾಲ್ಕು ದೇವಾಲಯಗಳನ್ನು ಮತ್ತು 65.97 ಹೆಕ್ಟೇರ್ ಕೃಷಿ ಭೂಮಿ ಹೊಂದಿದ್ದಾರೆ. ಇದು ಉತ್ತರಪ್ರದೇಶ ಭೂಮಿತಿ ಅನುಷ್ಟಾನ ಕಾಯ್ದೆ (Uttar Pradesh Imposition of Ceiling on Land Holdings Act, 1960) ಅಡಿಯಲ್ಲಿ ಒಂದು ಕುಟುಂಬವು ಹೊಂದಲು ಅವಕಾಶವಿರುವ ಜಮೀನಿಗಿಂತ ಐದು ಪಟ್ಟು ಹೆಚ್ಚು. ಈ ಜಮೀನ್ದಾರ ದೇವರುಗಳು ಈ ನಿಯಂತ್ರಣಗಳಿಂದ ತಪ್ಪಿಸಿಕೊಳ್ಳಲು ಶಕ್ತರಾಗಿದ್ದಾರೆ ಏಕೆಂದರೆ, ಈ ಕಾನೂನು ಧಾರ್ಮಿಕ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ. ಆದರೆ, ಇದೇ ದೇವರು ದಂಪತಿ ತಮ್ಮ ದೇವಸ್ಥಾನದಿಂದ ತಕ್ಷಣ ಹೊರಹೋಗಬೇಕಾದ ಅಪಾಯಕ್ಕೆ ಒಳಗಾದುದು ಏಕೆಂದರೆ, ಆರ್‌ಜೆಟಿಕೆ ತನ್ನ ದೇವಾಲಯ ಸಂಕೀರ್ಣದ ವಿಸ್ತರಣೆಗಾಗಿ ಇವರ ದೇವಾಲಯವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಯಿತು.

ರಾಮನ ಕಲ್ಪಿತ ಜನ್ಮಸ್ಥಾನಕ್ಕೆ ಹತ್ತಿರವಾಗಿರುವುದರಿಂದ ಫಕೀರೇ ರಾಮ್ ದೇವಾಲಯಕ್ಕೆ ಶತಮಾನಗಳಿಂದ ಯಾತ್ರಿಕರು ಬರುತ್ತಿದ್ದಾರೆ. ಈ ದೇವಾಲಯವನ್ನು ಟ್ರಸ್ಟಿಗೆ ಮಾರುವುದರ ವಿರುದ್ಧ ಪ್ರತ್ಯೇಕ ದಾವೆ ಹೂಡಿರುವ ಇಲ್ಲಿನ ಒಬ್ಬರು ಅರ್ಚಕರಾದ ಸಂತೋಷ್ ದುಬೆ ನನಗೆ ಹೇಳಿದ್ದೆಂದರೆ, ಇದನ್ನು ಹನ್ನೆರಡನೇ ಶತಮಾನದಲ್ಲಿ ಕಟ್ಟಲಾಗಿದೆ ಮತ್ತು ಇದು ಕೈಕೇಯಿಯು ರಾಮ ಸೀತೆ, ಲಕ್ಷ್ಮಣರಿಗೆ 14 ವರ್ಷಗಳ ವನವಾಸದ ವೇಳೆ ಧರಿಸಬೇಕಾದ ಬಟ್ಟೆಗಳನ್ನು ಕೊಟ್ಟ ಸ್ಥಳ ಎಂದು ನಂಬಲಾಗಿದೆ ಎಂದು.

ಸಿವಿಲ್ ಪ್ರಕರಣವೊಂದರ ದೂರುದಾರರಲ್ಲೊಬ್ಬರನ್ನು ಪ್ರತಿನಿಧಿಸುತ್ತಿರುವ ವಿಶ್ವನಾಥ ತ್ರಿಪಾಠಿ ಅವರು ನನಗೆ ಹೇಳಿದ ಪ್ರಕಾರ, 1993ರಲ್ಲಿ ಸುಗ್ರೀವಾಜ್ಞೆ ಮೂಲಕ ಜಮೀನನ್ನು ಸ್ವಾಧೀನಪಡಿಸಿಕೊಂಡಾಗ ಗುರುತಿಗಾಗಿ ಹಾಕಲಾಗಿದ್ದ ತಡೆಬೇಲಿಯಿಂದ ಈ ದೇವಾಲಯವು ಹೊರಗಿತ್ತು. ಆದರೆ, ಭದ್ರತಾ ಪಡೆಗಳು ಕಾವಲಿಗಿದ್ದ “ಕೆಂಪು ವಲಯ”ದ ಒಳಗಿತ್ತು. ಆ ಕಾಲದಲ್ಲಿ ಮಹಾಂತರಾಗಿದ್ದ ಯುಗುಲ್ ಕಿಶೋರ್ ಶರಣ್ ಅವರು ದೇವಾಲಯದ ಭಾಗವೊಂದನ್ನು ವಿವಾದಿತ ಜಮೀನಿನ ಕಾವಲಿಗಾಗಿ ನಿಯೋಜಿಸಲಾಗಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಗಳಿಗೆ ವಾಸಕ್ಕಾಗಿ ಬಾಡಿಗೆಗೆ ಕೊಟ್ಟಿದ್ದರು.

ಯುಗುಲ್ ಕಿಶೋರ್ 2018ರಲ್ಲಿ ಮರಣಹೊಂದಿದರು. ಸಿವಿಲ್ ಪ್ರಕರಣದ ಸಾರಾಂಶವು ಯುಗುಲ್ ಕಿಶೋರ್ ಅವರ ಮರಣಾನಂತರ ಸೀತಾ ಮತ್ತು ವಲ್ಲಭರ ಇಹಲೋಕದ ಹಿತಾಸಕ್ತಿಗಳನ್ನು ಯಾರು ಪ್ರತಿನಿಧಿಸುತ್ತಾರೆ ಎಂಬ ಕುರಿತಾಗಿತ್ತು. ಅಯೋಧ್ಯೆಯಲ್ಲಿ ಸಾಮಾನ್ಯವಾಗಿ ದೇವಾಲಯಗಳು ಗಮನಾರ್ಹ ಆಸ್ತಿಗಳನ್ನು ಹೊಂದಿವೆ. ಅವುಗಳ ಮಹಾಂತರು ಅದನ್ನು ನೇರಾನೇರವಾಗಿ ಮಾರುವುದು ತೀರಾ ಅಪರೂಪವಾದರೂ, ವಾಣಿಜ್ಯ ಉದ್ದೇಶಗಳಿಗೆ ಈ ಜಮೀನನ್ನು ಗುತ್ತಿಗೆಗೆ ನೀಡಿ ಐಹಿಕ ಲಾಭ ಪಡೆಯುವುದು ಈ ಮಹಾಂತರೇ. ಹಿಂದಿನ ಮಹಾಂತರು ಸತ್ತಾಗ ತಾನೇ ಮುಂದಿನ ಮಹಾಂತ ಆಗಬೇಕು ಎಂಬ ವಿಷಯದ ಕುರಿತು ಶಿಷ್ಯರಲ್ಲಿ ಉಗ್ರವಾದ ಪೈಪೋಟಿ ಹೆಚ್ಚಾಗಿ ಇರುತ್ತದೆ ಮತ್ತು ಇದೇ ಕಾರಣದಿಂದ ಹಲವಾರು ಅರ್ಚಕರನ್ನು ಕೊಲೆ ಮಾಡಲಾಗಿದೆ.

ಫಕೀರೇ ರಾಮ್ ದೇವಾಲಯದ ವಾರಸುದಾರರ ವಿವಾದದಲ್ಲಿ ಆರ್‌ಜೆಟಿಕೆ ಪ್ರಮುಖ ಪಾತ್ರ ವಹಿಸಿದೆ. ಅದು ವಿವಾದವು ಇತ್ಯರ್ಥವಾಗುವತನಕ ಕಾಯುವುದರ ಬದಲಿಗೆ ಒಂದು ಪಕ್ಷವನ್ನು ಆಯ್ಕೆ ಮಾಡಿ, ಅದಕ್ಕೇ ಅಂಟಿಕೊಂಡಿದೆ ಮತ್ತು ತನ್ನ ಆಯ್ಕೆಯ ಪ್ರತಿನಿಧಿಯನ್ನು ನ್ಯಾಯಾಲಯದಲ್ಲಿ ಸಮರ್ಥಿಸುತ್ತಾ ಬಂದಿದೆ. ಅದರ ಆದ್ಯತೆ ಏನಾಗಿತ್ತೆಂದರೆ, ಆದಷ್ಟುಬೇಗ ಈ ದೇವಾಲಯವನ್ನು ವಶಪಡಿಸಿಕೊಳ್ಳುವದು. ಅದು ಯಥಾಸ್ಥಿತಿಯನ್ನು ಬದಲಾಯಿಸುವುದಕ್ಕೆ ಇದ್ದ ತಡೆಯಾಜ್ಞೆ ಒಂದನ್ನು ತನ್ನ ಅನುಕೂಲಕ್ಕಾಗಿ ಬಳಸಿಕೊಂಡಿತು.

ಈ ಸಿವಿಲ್ ದಾವೆ ಹೂಡಿದ ಕೃಪಾ ಶಂಕರ್ ಶರಣ್ ಎಂಬವರು, ತಾನು ಯುಗುಲ್ ಕಿಶೋರ್ ಅವರ ಶಿಷ್ಯನಾಗಿದ್ದು, ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಆರ್‌ಜೆಟಿಕೆಯು ಜಲೌನ್ ದೇವಾಲಯಗಳ ಮಾಜಿ ನಿರ್ವಾಹಕ ರಘುವರ ಶರಣ್ ಅವರ ಪರ ವಹಿಸಿದ್ದು, ಅವರು ಕೂಡಾ ತಾನೇ ಹೊಸ ಮಹಾಂತ ಎಂದು ಹೇಳಿಕೊಳ್ಳುತ್ತಿದ್ದಾರೆ.

ಆ ದೇವಸ್ಥಾನ ನಿಂತಿದ್ದ 1,295 ಚದರ ಮೀಟರ್ ಜಾಗದ ಬದಲಾಗಿ ಸುಮಾರು ನಾಲ್ನೂರು ಮೀಟರ್ ದೂರದಲ್ಲಿ ಅಷ್ಟೇ ಜಮೀನನ್ನು ಸೀತಾ ಮತ್ತು ವಲ್ಲಭನಿಗೆ ನೀಡುವ ಪ್ರಸ್ತಾವವನ್ನು ಟ್ರಸ್ಟ್ ಕೊಟ್ಟಿತು. ಉಳಿದ ಫಕೀರ್ ರಾಮ್ ದೇವಾಲಯದ 1,405 ಚದುರ ಮೀಟರ್ ಜಾಗವನ್ನು ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಹೆಚ್ಚಿನ ದರದಲ್ಲಿ, ಅಂದರೆ 3.71 ಕೋಟಿ ರೂ.ಗಳಿಗೆ ಕೊಳ್ಳಲಾಗುವುದು ಎಂಬ ಪ್ರಸ್ತಾಪವೂ ಇತ್ತು. ಇದೊಂದು ಆಕರ್ಷಕವಾದ ರಿಯಲ್ ಎಸ್ಟೇಟ್ ವ್ಯವಹಾರವಾಗಿತ್ತು. ಆದರೆ, ರಘುವರ ಎಂಬವರಿಗೆ ಈ ಜಮೀನನ್ನು ಮಾರಾಟ ಮಾಡುವ ಹಕ್ಕಿದೆಯೇ ಎಂಬ ಬಗ್ಗೆ ವಿವಾದವಿತ್ತು. ಅಕ್ಟೋಬರ್ 2018ರಲ್ಲಿ ದೇವಾಲಯದ ಪೋಷಕರಲ್ಲಿ ಒಬ್ಬರಾದ ರಾಮ್ ಕಿಶೋರ್ ಸಿಂಗ್ ಎಂಬವರು ಫಕೀರೆ ರಾಮ್ ದೇವಾಲಯದ ಆಸ್ತಿಗಳ ವರ್ಗಾವಣೆಯನ್ನು ಸರಕಾರಿ ದಾಖಲೆಗಳಲ್ಲಿ ಯುಗುಲ್ ಕಿಶೋರ್ ಹೆಸರಿಗೆ ಬದಲಾಗಿ ತನ್ನ ಹೆಸರಿಗೆ ಪಾಲುಪಟ್ಟಿ ಮಾಡಿಕೊಳ್ಳುವ ರಘುವರ ಅವರ ಪ್ರಯತ್ನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ತನ್ನ ದೂರಿನಲ್ಲಿ ಕೃಪಾಶಂಕರ್ ಆವರು- ರಘುವರ ಅವರ ಮೇಲೆ- ಆರ್‌ಜೆಟಿಕೆ ಜೊತೆಗೆ ಶಾಮೀಲಾಗಿ ಆಸ್ತಿ ಕಬಳಿಸುವ ಸಲುವಾಗಿ ಅಯೋಧ್ಯೆ ದೇವಾಲಯಗಳಿಂದ ದುರ್ಬಲ ಮತ್ತು ಬಡ ಮಹಾಂತರನ್ನು ಹೊರಗೆತಳ್ಳುವ ಭೂಮಾಫಿಯಾ ಜೊತೆ ಶಾಮೀಲಾಗಿರುವ ಆರೋಪ ಹೊರಿಸಿದ್ದರು. ಯುಗುಲ್ ಕಿಶೋರ್ ಅವರು ಮಾರ್ಚ್ 31, 2014ರಲ್ಲಿ ರಘುವರ ಅವರನ್ನಲ್ಲ; ಬದಲಾಗಿ ತನ್ನನ್ನು ಉತ್ತರಾಧಿಕಾರಿಯಾಗಿ ಹೆಸರಿಸಿದ್ದರು ಮತ್ತು ಅಂದಿನಿಂದ ತಾನು ದೇವಾಲಯದ ಪೂಜೆ ಮಾಡುತ್ತಾ, ಅದರ ಆಸ್ತಿಗಳನ್ನು ನಿರ್ವಹಿಸುತ್ತಿರುವುರಾಗಿ ಹೇಳಿಕೊಂಡಿದ್ದರು. ಹಿಂದಿನ ಮಹಾಂತರ ಆರೋಗ್ಯ ಹದಗೆಟ್ಟಾಗ ತಾನು ಅವರ ಜೊತೆಗೆ ಆಸ್ಪತ್ರೆಗೆ ಹೋಗಿರುವ ಮತ್ತು ಅವರ ಜೀವವಿಮೆಯಲ್ಲಿ ತನ್ನನ್ನು ನಾಮಾಂಕಿತ ಮಾಡಿರುವ ಕುರಿತ ಪುರಾವೆ ಮತ್ತು ದಾಖಲೆಗಳನ್ನು ಸಲ್ಲಿಸಿದ್ದರು. ಅವರೇ ಯುಗುಲ್ ಕಿಶೋರ್ ಅವರ ಮರಣೋತ್ತರ ಪರೀಕ್ಷೆಗೆ ಸಹಿ ಹಾಕಿದ್ದರು. ದೇವಾಲಯಕ್ಕೆ ಬಂದುಹೋಗುವವರ ಕುರಿತು ಸಿಆರ್‌ಪಿಎಫ್ ಇರಿಸಿದ್ದ ದಾಖಲೆಗಳಲ್ಲಿ ಅವರ ಸಹಿಯೇ ಇದ್ದು, ಅವರು ನಿಯಮಿತವಾಗಿ ಫಕೀರೇ ರಾಮ್ ದೇವಾಲಯಕ್ಕೆ ಬರುತ್ತಿದ್ದರು ಎಂಬುದನ್ನು ಸೂಚಿಸುತ್ತದೆ. ಈ ದಾಖಲೆಗೆ ರಘುವರ ಅವರು ಯಾವತ್ತೂ ಸಹಿ ಮಾಡಿರಲಿಲ್ಲ. ಜೊತೆಗೆ ಕೃಪಾಶಂಕರ್ ಅವರು ಒಂದು ಮಹಜರ್‌ನಾಮಾ ಸಲ್ಲಿಸಿದ್ದು ಅದರಲ್ಲಿ ಹಲವಾರು ಸ್ಥಳೀಯ ಅರ್ಚಕರು ಕೃಪಾಶಂಕರ್ ಅವರೇ ದೇವಾಲಯದ ಉತ್ತರಾಧಿಕಾರಿ ಎಂದು ದೃಢೀಕರಿಸಿದ್ದಾರೆ. ಈ ಮಹಜರ್‌ನಾಮಾವನ್ನು ಮಾರ್ಚ್ 6, 2021ರಂದು ತಯಾರಿಸಲಾಗಿದ್ದು, ಮೂರು ದಿನಗಳ ನಂತರ ಅದನ್ನು ನೋಂದಾಯಿಸಲಾಗಿದೆ.

ರಘುವರ ಅವರಿಗೆ ಈ ಮಹಜರ್‌ನಾಮಾದ ಕುರಿತು ಗೊತ್ತಾದ ನಂತರ ಅವರು ಮಾರ್ಚ್ 10ರಂದು ದೇವಾಲಯಕ್ಕೆ ಬಂದು, ಅದರ ಲೆಕ್ಕಪತ್ರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಕೃಪಾಶಂಕರ್ ಇದಕ್ಕೆ ಆಕ್ಷೇಪಿಸಿದಾಗ ರಘುವರ ಅವರು ಹಲ್ಲೆಗೆ ಮುಂದಾದರು ಮತ್ತು ಆಗ ಅಲ್ಲಿ ಹಾಜರಿದ್ದ ಸಿಆರ್‌ಪಿಎಫ್ ಸಿಬ್ಬಂದಿ ಹೊಡೆದಾಟ ನಿಲ್ಲಿಸಿದರು ಎಂದು ಆರೋಪಿಸಲಾಗಿದೆ. ರಘುವರ ಆಗ ಸ್ಥಳದಿಂದ ಪರಾರಿಯಾದರು, ಹೋಗುವಾಗ ಯುಗುಲ್ ಕಿಶೋರ್ ಅವರಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಕೊಂಡೊಯ್ದರು ಮತ್ತು ತನ್ನನ್ನು ಹೊರಗೆ ಹಾಕಿ ದೇವಾಲಯವನ್ನು ವಶಕ್ಕೆ ತೆಗೆದುಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ಕೃಪಾಶಂಕರ್ ಅವರ ದೂರಿನಲ್ಲಿ ಹೇಳಲಾಗಿದೆ. ಮರುದಿನ ಪ್ರತಿವಾದಿಗಳಾದ ರಘುವರ, ಆರ್‌ಜೆಟಿಕೆ ಸದಸ್ಯರು ಮತ್ತು ಕೆಲವು ಅರ್ಚಕರು ನ್ಯಾಯಾಲಯದ ಹೊರಗೆ ವಿಷಯ ಇತ್ಯರ್ಥ ಮಾಡುವಂತೆ ಸಲಹೆ ಮಾಡಿದರೆಂದೂ, ತಾನದಕ್ಕೆ ಒಪ್ಪಲಿಲ್ಲ ಎಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಕೃಪಾಶಂಕರ್ ಅವರು ತನ್ನ ದಾವೆಯನ್ನು ಸಲ್ಲಿಸಿದ ಮೇಲೆ ಮಾರ್ಚ್ 16ರಂದು ನ್ಯಾಯಾಧೀಶರು ಒಂದು ತಾತ್ಕಾಲಿಕ ತಡೆಯಾಜ್ಞೆ ನೀಡಿ, ವಿಚಾರಣೆ ಆರಂಭವಾಗುವವರೆಗೆ ಫಕೀರೇ ರಾಮ್ ದೇವಾಲಯದಲ್ಲಿ ಯಥಾಸ್ಥಿತಿಗೆ ಯಾವುದೇ ಬದಲಾವಣೆ ಮಾಡಬಾರದೆಂದು ಆದೇಶಿಸಿದರು. ಆದರೆ ಹತ್ತು ದಿನಗಳ ನಂತರ ಅಯೋಧ್ಯೆಯ ಜಿಲ್ಲಾಧಿಕಾರಿ- ಅವರಿಗೇ 2019ರಲ್ಲಿ ರಾಮ್ ಕಿಶೋರ್ ಅವರ ಆಕ್ಷೇಪಗಳನ್ನು ಸಲ್ಲಿಸಲಾಗಿತ್ತು- ರಘುವರ ಅವರ ಹೆಸರಿಗೆ ಪಾಲುಪಟ್ಟಿ ಮಾಡಿಕೊಟ್ಟರು. ಜಿಲ್ಲಾಧಿಕಾರಿಯವರು ಬೇರೆಯೇ ಒಂದು ಗುಂಪಿನ ಅರ್ಚಕರು ಅನುಮೋದನೆ ನೀಡಿದ್ದ ಒಂದು ಮಹಜರುನಾಮೆಯ ಆಧಾರದಲ್ಲಿ ತಾನೇ ಹೊಸ ಮಹಾಂತ ಎಂಬ ರಘುವರ ಅವರ ದಾವೆಯನ್ನು ಎತ್ತಿಹಿಡಿದರು. ಈ ಮಹಜರುನಾಮೆಯನ್ನು ಏಪ್ರಿಲ್ 2018ರಲ್ಲಿ ಯುಗುಲ್ ಕಿಶೋರ್ ಅವರ ಮರಣದ ಎರಡು ತಿಂಗಳುಗಳ ನಂತರ ನೋಂದಾಯಿಸಲಾಯಿತು. ಇಂತಹ ಮಹಜರುನಾಮೆಗಳಿಗೆ ಕಾನೂನಿನ ತೂಕ ಇದೆಯಾದರೂ, ಅವುಗಳಿಗೆ ಸಹಿ ಹಾಕುವ ಅರ್ಚಕರು ಸಂಬಂಧಿತ ದೇವಾಲಯಕ್ಕೆ ಸೇರಿದವರಾಗಬೇಕೆಂದು ನಿಯಮ ಇಲ್ಲವಾದ್ದರಿಂದ, ಮಹಾಂತ ಪದದ ಅಭ್ಯರ್ಥಿಗಳು ಸುಲಭದಲ್ಲಿ ತಮ್ಮ ಗೆಳೆಯರು ಅವುಗಳಿಗೆ ಸಹಿಹಾಕುವಂತೆ ಮಾಡಲು ಸಾಧ್ಯವಿದೆ. ರಾಮ್ ಕಿಶೋರ್ ಸಿಂಗ್ ಪರವಾಗಿ ವಾದಿಸಲು ಅಂದು ಯಾರೂ ಹಾಜರಾಗಲೇ ಇಲ್ಲ.

ಉಮಾಭಾರತಿ

ಮರುದಿನವೇ ರಘುವರ ಅವರು ಫಕೀರೇ ರಾಮ್ ದೇವಾಲಯದ ಜಮೀನನ್ನು ಆರ್‌ಜೆಟಿಕೆಗೆ ಹಿಂದೆ ಅವರು ಮಾಡಿಕೊಂಡಿದ್ದ ಷರತ್ತುಗಳಿಗೆ ಅನುಗುಣವಾಗಿ ಮಾರಿದರು. ಬಯಿನಾಮಗಳಿಗೆ ಅಂದರೆ ವಿಕ್ರಯ ಪತ್ರಗಳಿಗೆ ಸಹಿಹಾಕುವ ಮೊದಲು ರಘುವರ ಅವರು ಜಮೀನಿನ ವಿಷಯದಲ್ಲಿ ಯಾವುದೇ ವಿವಾದ ಇಲ್ಲವೆಂದು ಉಪನೋಂದಣಾಧಿಕಾರಿಯ ಕಚೇರಿಯಲ್ಲಿ ಪ್ರಮಾಣಪತ್ರ ಸಲ್ಲಿಸಿದ್ದರು. ಆರ್‌ಜೆಟಿಕೆ ಪರವಾಗಿ ಬನ್ಸಾಲ್- ತಾನು ಎಲ್ಲಾ ಅಗತ್ಯ ವಿಚಾರಣೆಗಳನ್ನು ನಡೆಸಿರುವುದಾಗಿಯೂ, ಜಮೀನಿನ ಮೇಲೆ ರಘುವರ ಅವರ ಹಕ್ಕಿನ ಕುರಿತು ತನಗೆ ತೃಪ್ತಿ ಇದೆಯೆಂದೂ ಪ್ರಮಾಣ ಮಾಡಿದ್ದರು.

ಸಿವಿಲ್ ನ್ಯಾಯಾಲಯದ ತಡೆಯಾಜ್ಞೆ ಇರುವಾಗಲೂ ಜಿಲ್ಲಾ ಅಧಿಕಾರಿಗಳು ಪಾಲುಪಟ್ಟಿಯನ್ನು ಇತ್ಯರ್ಥ ಮಾಡಿ ಮುಗಿಸುವುದು “ತೀರಾ ಅಸಾಧಾರಣ” ಮತ್ತು ಜಿಲ್ಲಾಧಿಕಾರಿಯು ಆಕೆಯ ತೀರ್ಪಿನಲ್ಲಿ ತಡೆಯಾಜ್ಞೆ ಕುರಿತ ಉಲ್ಲೇಖವನ್ನು ಕೂಡಾ ಮಾಡಲಿಲ್ಲ ಎಂದು ಕೃಪಾಶಂಕರ್ ಪರ ವಕೀಲರಾದ ವಿಶ್ವನಾಥ್ ನನಗೆ ತಿಳಿಸಿದರು. ಬನ್ಸಾಲ್ ಮತ್ತು ಅವರ “ಸ್ಥಳೀಯ ಏಜೆಂಟರು” ತಡೆಯಾಜ್ಞೆಯ ಹೊರತಾಗಿಯೂ ಜಮೀನು ವ್ಯವಹಾರವನ್ನು ಮುಗಿಸಿಬಿಡುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದ್ದರು ಎಂದು ಕೃಪಾಶಂಕರ್ ತನ್ನ ದೂರಿನಲ್ಲಿ ಹೇಳಿದ್ದಾರೆ. ಪಾಲುಪಟ್ಟಿಗೆ ಅವಕಾಶ ನೀಡಿದ ಆದೇಶ ಸ್ಪಷ್ಟವಾಗಿ ಕಾನೂನುಬಾಹಿರವಾಗಿದ್ದು, ಸ್ಥಳೀಯ ವಕೀಲರ ಸಂಘವು ಜಿಲ್ಲಾಧಿಕಾರಿಯ ನ್ಯಾಯಾಲಯಕ್ಕೇ ಬಹಿಷ್ಕಾರ ಹಾಕಿತ್ತೆಂದೂ ಅವರು ದೂರಿನಲ್ಲಿ ಹೇಳಿದ್ದಾರೆ. ಕಂದಾಯ ಅಧಿಕಾರಿಗಳು ರಾಜಕೀಯ ಪ್ರಭಾವದಲ್ಲಿ ಕೆಲಸ ಮಾಡುತ್ತಿದ್ದರೇ ಎಂದು ನಾನು ವಿಶ್ವನಾಥ್ ಅವರಲ್ಲಿ ಕೇಳಿದಾಗ, “ಎಲ್ಲರೂ ಒತ್ತಡದಲ್ಲಿದ್ದಾರೆ” ಎಂದು ಅವರು ಹೇಳಿದರು.

ಬಯಿನಾಮ ಅಂದರೆ ವಿಕ್ರಯಪತ್ರದಲ್ಲಿ ಅವರ ಸಾಕ್ಷಿಗಳಾಗಿ ರಾಜ್ ಕುಮಾರ್ ದಾಸ್ ಮತ್ತು ರಾಮ್ ನರೇಶ್ ದಾಸ್ ಎಂಬವರನ್ನು ಹೆಸರಿಸಲಾಗಿದೆ. ರಾಜ್ ಕುಮಾರ್ ಅಯೋಧ್ಯೆಯ ಜಾನಕಿ ಘಾಟ್‌ನ ರಾಮ ವಲ್ಲಭ ಕುಂಜ್ ದೇವಾಲಯದ ಮ್ಯಾನೇಜರ್ ಆಗಿದ್ದು, 2014ರ ಚುನಾವಣೆಗೆ ಮೊದಲು ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಬೇಕು ಎಂಬ ಸಾಮೂಹಿಕ ಅಭಿಯಾನ ನಡೆಸಲು ನೆರವಾಗಿದ್ದರು. ಅವರು ಹೆಚ್ಚಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಜೊತೆಗೆ ಕಂಡುಬರುತ್ತಾರೆ. ಆರ್‌ಜೆಟಿಕೆ ಒಳಗೊಂಡಿರುವ ಸುಮಾರು ಒಂದು ಡಜನ್‌ನಷ್ಟು ಬಯಿನಾಮ ಅಂದರೆ, ವಿಕ್ರಯ ಪತ್ರಗಳಲ್ಲಿ ಅವರ ಹೆಸರು ಕಂಡುಬರುತ್ತದೆ. ನಾನು ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದಾಗ ತಾನು ಫಕೀರೇ ರಾಮ್ ದೇವಾಲಯದ ವ್ಯವಹಾರದ ಹೊರತು ಬೇರಾವುದೇ ವ್ಯವಹಾದಲ್ಲಿ ಶಾಮೀಲಾಗಿಲ್ಲ ಎಂದು ಹೇಳಿದರಲ್ಲದೆ, ನಾನು ಭೂಮಾಫಿಯಾ ಕುರಿತು ಕೃಪಾಶಂಕರ್ ಅವರ ಆರೋಪದ ಬಗ್ಗೆ ಕೇಳಿದಾಗ ಸಂಪರ್ಕ ಕಡಿತಗೊಳಿಸಿದರು.

ಇದೇ ಹೊತ್ತಿಗೆ ರಾಮ್ ನರೇಶ್ ಅವರು ಫಕೀರೇ ರಾಮ್ ದೇವಾಲಯದ ಬೀದಿಯಾಚೆಗಿರುವ ವೇದ್‌ಮಂದಿರ್ ದೇವಾಲಯದ ಅರ್ಚಕರು. ಇವರು ರಘುವರ ಅವರ ಮಹಜರುನಾಮಕ್ಕೆ ಸಹಿ ಹಾಕಿದವರಲ್ಲಿ ಒಬ್ಬರು ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಅವರ ಪರವಾಗಿ ಸಾಕ್ಷ್ಯ ನುಡಿದವರು. ತನಗೆ ರಘುವರ ಅವರು 1976ರಿಂದ ಪರಿಚಯವೆಂದೂ ಅವರು ಯುಗುಲ್ ಕಿಶೋರ್ ಅವರ ಜೊತೆ ವರ್ಷಗಳ ಹಿಂದೆಯೇ ವಿರಸ ಹೊಂದಿದ್ದರು ಮತ್ತು ಚಿತ್ರಕೂಟದ ಆಶ್ರಮ ಒಂದರಲ್ಲಿ ವಾಸಿಸಲು ಆರಂಭಿಸಿದ್ದರು ಎಂದು ಅವರು ನನಗೆ ತಿಳಿಸಿದರು. ಯುಗುಲ್ ಕಿಶೋರ್ ಅವರು ಮರಣ ಹೊಂದಿದಾಗ ಹತ್ತಿರದ ರಂಗಮಹಲ್ ದೇವಾಲಯದ ಮಹಾಂತ ರಾಮ್ ಶರಣ್ ದಾಸ್ ಅವರು ಒಂದೋ ಮಹಾಂತನಾಗಿ ಅಧಿಕಾರ ಸ್ವೀಕರಿಸಬೇಕು ಇಲ್ಲವೇ ದೇವಾಲಯವನ್ನು ತನಗೆ ಬಿಟ್ಟುಕೊಡಬೇಕು ಎಂದು ರಘುವರರನ್ನು ಕೇಳಿಕೊಂಡಿದ್ದರು ಎಂದೂ ಅವರು ತಿಳಿಸಿದರು. ರಾಮ ಶರಣ್ ದಾಸ್ ಅವರು 2019 ಮತ್ತು 2022ರ ನಡುವೆ ರಾಜ್ಯದಲ್ಲಿ ಪಕ್ಷಾಧ್ಯಕ್ಷರಾಗಿದ್ದ ಸ್ವತಂತ್ರ ದೇವ್ ಸಿಂಗ್ ಅವರೂ ಸೇರಿದಂತೆ ಹಲವಾರು ಬಿಜೆಪಿ ನಾಯಕರಿಗೆ ಪರಿಚಿತರು ಮತ್ತು 2023ರ ಮುನಿಸಿಪಲ್ ಚುನಾವಣೆಗಳಲ್ಲಿ ಬಿಜೆಪಿಯ ಮೇಯರ್ ಅಭ್ಯರ್ಥಿ ಗಿರೀಶ್ ತ್ರಿಪಾಠಿ ಪರ ಪ್ರಚಾರ ಮಾಡಿದವರು.

ಕೃಪಾಶಂಕರ್ ಒಬ್ಬ ನೆರೆಹೊರೆಯ ಕ್ಷೌರಿಕನಾಗಿದ್ದು, ಯುಗುಲ್ ಕಿಶೋರ್ ಅವರ ಕೂದಲು ಕತ್ತರಿಸುತ್ತಾ ತನ್ನ ತಾಯಿ ಮತ್ತು ಸಹೋದರಿಯ ಜೊತೆಗೆ ದೇವಾಲಯದಲ್ಲಿ ವಾಸವಾಗಿದ್ದವರು ಎಂದು ರಾಮ್ ನರೇಶ್ ಒತ್ತಿ ಹೇಳುತ್ತಾರೆ. “ಆತ ಗಾಂಜಾ ಸೇದುತ್ತಿದ್ದ ಒಬ್ಬ ಗತಿಹೀನನಾಗಿದ್ದು, ಆತನಿರುವಾಗ ಯಾರೂ ಅಲ್ಲಿಗೆ ಹೋಗುತ್ತಿರಲಿಲ್ಲ” ಎಂದು ಸೇರಿಸಿದ ರಾಮ್ ನರೇಶ್, ಆತನ ಹೆಸರಿನಲ್ಲಿ ಯುಗುಲ್ ಕಿಶೋರ್ ಒಂದು ನಿಶ್ಚಿತ ಠೇವಣಿ ತೆಗೆದು, ಆತನ ಸಹೋದರಿಗೆ ಮದುವೆ ಮಾಡಿಸಿದ್ದರು ಎಂದು ಹೇಳಿದರು. ರಾಮ್ ನರೇಶ್ ಪ್ರಕಾರ, ರಘುವರ ಅವರನ್ನು ಮಹಾಂತ ಮಾಡಿದಾಗ, “ನೀನು ನಿನಗಾಗುವುದನ್ನೆಲ್ಲಾ ಪಡೆದುಕೊಂಡಿದ್ದಿ. ಈಗ ಒಬ್ಬ ಸಾಧು ದೇವಾಲಯವನ್ನು ವಹಿಸಿಕೊಂಡಿದ್ದಾರೆ ನೀನು ಜಾಗಬಿಟ್ಟು ಹೋಗು ಎಂದು ಕೃಪಾಶಂಕರ್‌ಗೆ ಹೇಳಲಾಯಿತು” ಎನ್ನುತ್ತಾರೆ ರಾಮ್ ನರೇಶ್. ಆದರೆ ದೇವಾಲಯದ ಜಮೀನು ಮಾರಾಟದ ಹಣ ಸಿಗುವ ಹಾಗೆ ಕೇಸುಹಾಕಲು ಕೃಪಾಶಂಕರ್‌ಗೆ ಯಾರೋ ಹೇಳಿಕೊಟ್ಟಿದ್ದಾರೆ ಎಂದು ಅವರು ಊಹಿಸಿ ಹೇಳಿದರು.

ಕೃಪಾಶಂಕರ್ ಅವರ ದೂರಿಗೆ ಪ್ರತಿಯಾಗಿ ರಘುವರ ಮತ್ತು ಬನ್ಸಾಲ್ ಅವರಿಬ್ಬರೂ ಇಂಥದ್ದೇ ಆರೋಪಗಳನ್ನು ಮಾಡಿ, ಅವರನ್ನು ಒಬ್ಬ ವಂಚಕ, ಹೊರಗಿನವನು ಎಂದು ಕರೆದಿದ್ದಾರಲ್ಲದೆ, ಆತನಿಗೆ ದೇವಾಲಯದ ಆಡಳಿತ ಅಥವಾ ಆಚರಣೆಗಳಲ್ಲಿ ಯಾವುದೇ ಸ್ಥಾನ ಇಲ್ಲ ಎಂದು ಹೇಳಿದ್ದಾರೆ. “ತನ್ನನ್ನು ಯುಗುಲ್ ಕಿಶೋರ್ ಅವರ ಉತ್ತರಾಧಿಕಾರಿಯಾಗಿ ಹೆಸರಿಸುವ 2014ರ ದಾಖಲೆ ಮತ್ತು ತನ್ನ ಉತ್ತರಾಧಿಕಾರವನ್ನು ಅನುಮೋದಿಸುವ ಮಹಜರುನಾಮೆಯನ್ನು ಕೃಪಾಶಂಕರ್ ಫೋರ್ಜರಿ ಮಾಡಿದ್ದಾರೆ” ಎಂದು ರಘುವರ ಆರೋಪಿಸಿದರು.

“ಅವರ ಕ್ರಯಪತ್ರವನ್ನು ಕೇವಲ ನೋಟರಿ ಮಾಡಿಸಲಾಗಿದೆ. ಇಷ್ಟು ದೊಡ್ಡ ಆಸ್ತಿಗೆ ಅದು ಸಾಕಾಗದು. ಅದನ್ನು ನೋಂದಾವಣೆ ಮಾಡಿಸಬೇಕು. ಅವರು ಮಹಜರುನಾಮೆಯು ಕಾಗದದ ಮೇಲೆ ಆಡಿದ ಇನ್ನೊಂದು ನಾಟಕ ಇದು. ಮಹಾಂತರು 2018ರಲ್ಲಿ ಮೃತಪಟ್ಟರು. ಅವರು ಮಹಜರುನಾಮೆ ಮಾಡಿಸಿದ್ದು, 2021ರಲ್ಲಿ. ಮಹಾಂತ ಹುದ್ದೆಗೆ ದಾವೆ ಹಾಕಲು ಅವರಿಗೆ ಮೂರು ವರ್ಷಗಳು ಏಕೆ ಬೇಕಾದವು?” ಎಂದು ಹೇಳಿದ ಅವರು, ಕೃಪಾ ಶಂಕರ್ ಅವರ ಮಹಜರುನಾಮೆಗೆ ಚಿಕ್ಕಪುಟ್ಟ ಅರ್ಚಕರು ಮಾತ್ರವೇ ಸಹಿ ಹಾಕಿದ್ದರೆ, ತನ್ನ ಮಹಜರುನಾಮೆಗೆ ಹನುಮಾನ್ ಗರಿ ಮತ್ತು ಮಣಿರಾಮ್ ದಾಸ್ ಕೀ ಛಾವಣಿಯಂತಹ ಅಯೋಧ್ಯೆಯ ಪ್ರಮುಖ ದೇವಾಲಯಗಳ ಅರ್ಚಕರು ಸಹಿ ಹಾಕಿದ್ದಾರೆ ಎಂದರು. ಕೋರ್ಟಿಗೆ ನೀಡಿದ ಉತ್ತರದಲ್ಲಿ ಅವರು, ಯುಗುಲ್ ಕಿಶೋರ್ ಅವರ ಜೀವವಿಮೆಯ ನಾಮಕರಣ ಕೃಪಾಶಂಕರ್ ಹೆಸರಿನಲ್ಲಿ ಆದುದು ಹೇಗೆ ಎಂಬ ಬಗ್ಗೆ ತನಿಖೆ ಮಾಡಿಸುವುದಾಗಿ ಅವರು ಹೇಳಿದ್ದಾರೆ. ತಾನು ಯಾವುದೇ ದಾಖಲೆಯನ್ನು ವಶಕ್ಕೆ ತೆಗೆದುಕೊಂಡುದನ್ನು ಅಥವಾ ನಾಶಪಡಿಸಿದುದನ್ನು ಇಲ್ಲವೇ ಕೃಪಾ ಶಂಕರ್ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಅವರು ನಿರಾಕರಿಸಿದರು.

ಸಂಪ್ರದಾಯದ ಪ್ರಕಾರ ಕೇವಲ ಬೈರಾಗಿ ಬ್ರಾಹ್ಮಣರು ಮಾತ್ರವೇ ಫಕೀರೇ ರಾಮನ ಮಹಾಂತರಾಗಿದ್ದಾರೆ ಮತ್ತು ಅವರು ಮಾತ್ರ ಆಗಬಹುದು ಎಂದು ರಘುವರ ಹೇಳಿದರು. ಉತ್ತರ ಪ್ರದೇಶದಲ್ಲಿ ಓಬಿಸಿ ಆಗಿರುವ ಕ್ಷೌರಿಕ ಜಾತಿಗೆ ಸೇರಿದ ಕೃಪಾ ಶಂಕರ್ ಮಹಾಂತ ಹುದ್ದೆಗೆ ಅನರ್ಹರು ಎಂದವರು ವಾದಿಸಿದರು. ದೇವಾಲಯಗಳಲ್ಲಿ ಮಹಾಂತ ಹುದ್ದೆಯನ್ನು ಬ್ರಾಹ್ಮಣರಿಗೆ ಮೀಸಲಿಡುವದು ಅಸಾಮಾನ್ಯ ಅಲ್ಲವಾದರೂ ಫಕೀರೇ ರಾಮ್‌ನಲ್ಲಿ ಅಂತಹ ನಿಯಮವೇನಿಲ್ಲ ಎಂದು ವಿಶ್ವನಾಥ್ ಅವರು ನನಗೆ ತಿಳಿಸಿದರು. “ಒಂದುವೇಳೆ ಬೇರೆ ಜಾತಿಯವರು ಅರ್ಚಕರಾಗುವುದನ್ನು ನಾವು ಒಪ್ಪಿದರೂ, ಅವರು ತಮ್ಮ ವೃತ್ತಿಯನ್ನು ತ್ಯಜಿಸಬೇಕು. ಆದರೆ ಕೃಪಾಶಂಕರ್ ತಮ್ಮ ವೃತ್ತಿಯನ್ನು ಮುಂದುವರಿಸಿದ್ದಾರೆ. ಅವರು ಕೂದಲು ಕತ್ತರಿಸುವ ವಿಡಿಯೋ ನನ್ನಲ್ಲಿದೆ” ಎಂದು ರಘುವರ ಹೇಳಿದರು.

ಆರ್‌ಜೆಟಿಕೆ ಪರವಾಗಿ ಪ್ರತಿಕ್ರಿಯೆ ನೀಡಿದ ಬನ್ಸಾಲ್, ತಮಗೆ ಜಮೀನಿನ ವ್ಯಾಪಾರ ಮಾಡುವಾಗ ನ್ಯಾಯಾಲಯದ ತಡೆಯಾಜ್ಞೆ ಕುರಿತು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಕಾನೂನಿನ ಕುರಿತು ಅಗೌರವ ತೋರುವ ದಾಟಿಯಲ್ಲಿ ಅವರು ಹೇಳಿದ್ದೆಂದರೆ, “ಕೇವಲ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ ಎಂಬ ಕಾರಣಕ್ಕೆ ಕ್ರಯಪತ್ರವನ್ನು ರದ್ದುಗೊಳಿಸಲು ಸಾಧ್ಯವಿಲ್ಲ” ಎಂದು ತಾವು ಯಾವುದೇ ಕಾನೂನುಬಾಹಿರ ವ್ಯವಹಾರ ಮಾಡಿರುವುದನ್ನು ಅವರು ನಿರಾಕರಿಸಿದರು.

ಬಾಬ್ರಿ ಮಸೀದಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟಿನ ಪ್ರಕರಣದಲ್ಲಿ ಹಿಂದೂವಾದಿಗಳು ಮಸೀದಿ ಇದ್ದ ಸ್ಥಳದಲ್ಲಿ ರಾಮಮಂದಿರ ನಿರ್ಮಿಸುವುದರಿಂದ ಮುಸ್ಲಿಮರ ಭಾವನೆಗೆ ನೋವಾಗದು, ಯಾಕೆಂದರೆ, ಅವರು ಬಹಳ ಹಿಂದೆಯೇ ಅಲ್ಲಿ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ವಾದಿಸಿದ್ದರು. ಸುಪ್ರೀಂ ಕೋರ್ಟ್ ಇದನ್ನು ತಿರಸ್ಕರಿಸಿತ್ತಾದರೂ, 1949ರಿಂದ ಅಲ್ಲಿ ನಮಾಜು ನಡೆಯುತ್ತಿರಲಿಲ್ಲ ಎಂಬುದನ್ನು ಗುರುತಿಸಿತ್ತು. ಬನ್ಸಾಲ್ ಇದೇ ರೀತಿಯ ವಾದವನ್ನು ಫಕೀರೇ ರಾಮ್ ಬಗ್ಗೆ ಮಾಡಿದರು. ಸಿಆರ್‌ಪಿಎಫ್ ಕಾವಲು ಇದ್ದುದರಿಂದ 1993ರಿಂದ ಭಕ್ತರಿಗೆ ಆ ದೇವಾಲಯಕ್ಕೆ ಹೋಗಲು ಮತ್ತು ನಿರಂತರವಾಗಿ ಪೂಜೆ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು. ಯುಗುಲ್ ಕಿಶೋರ್ ಅವರು ತಾನು ಮರಣ ಹೊಂದುವುದಕ್ಕೆ ಹದಿನೈದು ವರ್ಷಗಳಿಗೆ ಮೊದಲೇ ಗರ್ಭಗುಡಿಗೆ ಬೀಗಹಾಕಿದ್ದರು, ಕೃಪಾ ಶಂಕರ್ ಅವರು ಅಲ್ಲಿ ನಿರಂತರವಾಗಿ ಪೂಜೆ ನಡೆಸಲಾಗುತ್ತಿತ್ತು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದರು. (ಮಾರಾಟ ಪ್ರಶ್ನಿಸಿದ ದಾವೆಯಲ್ಲಿ ಸಂತೋಷ್ ದುಬೆ ಎಂಬವರು ತಾನು 1993ರಿಂದ ಅಲ್ಲಿ ಪೂಜೆ ಮಾಡುತ್ತಿರುವುದಾಗಿ ಪ್ರಮಾಣೀಕರಿಸಿದ್ದಾರೆ.) ರಘುವರ ಅವರು ಮಹಾಂತ ಆದಮೇಲೆ ಗರ್ಭಗುಡಿಯ ಬಾಗಿಲು ತೆರೆದು ಪೂಜೆ ನಡೆಸಲು ಪ್ರಯತ್ನ ಮಾಡಿದ್ದರೂ, ನಂತರ ಕೈಬಿಟ್ಟಿದ್ದರು ಎಂದು ಬನ್ಸಾಲ್ ಹೇಳಿದರು.

ಮುರುಳಿ ಮನೋಹರ ಜೋಶಿ

ಫಕೀರೇ ರಾಮ್‌ನ ಮಹಾಂತರಿಗೆ ಕ್ರಯಪತ್ರಕ್ಕೆ ಸಹಿ ಹಾಕಲು ಮತ್ತು ಭವಿಷ್ಯದ ಪರಿಸ್ಥಿತಿಯನ್ನು ನೋಡಿಕೊಂಡು ದೇವಾಲಯದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಂಪೂರ್ಣ ಅಧಿಕಾರವಿದೆ ಎಂದು ಬನ್ಸಾಲ್ ವಾದಿಸಿದರು. ಇದನ್ನು ರಘುವರ ಅವರ ಜಮೀನು ಪಾಲುಪಟ್ಟಿಯನ್ನು ಈ ಹಿಂದೆ ಪ್ರಶ್ನಿಸಿದ್ದ ದೇವಾಲಯದ ಪ್ರಾಯೋಜಕ ರಾಮ್ ಕಿಶೋರ್ ಸಿಂಗ್ ವಿರೋಧಿಸಿದರು. ಕೃಪಾ ಶಂಕರ್ ಅವರ ಅರ್ಜಿಗೆ ಪ್ರತಿಕ್ರಿಯೆ ನೀಡುತ್ತಾ ಅವರು, ದೇವಾಲಯದ ಪ್ರಾಯೋಜಕರು ತಮ್ಮ ಅನುಮತಿಯಿಲ್ಲದೇ ದೇವರ ಆಸ್ತಿಯನ್ನು ಪರಭಾರೆ ಮಾಡುವುದಿಲ್ಲ ಎಂಬ ಷರತ್ತಿನಲ್ಲಿ ರಘುವರ ಅವರನ್ನು ಮಹಾಂತರನ್ನಾಗಿ ನೇಮಿಸಲಾಗಿತ್ತು ಎಂದು ಹೇಳಿದ್ದರು. ಕೃಪಾಶಂಕರ್ ಒಬ್ಬ ವಂಚಕ ಎಂಬ ರಘುವರ ಅವರ ವಾದವನ್ನು ಸಿಂಗ್ ಒಪ್ಪಿದರೂ, ರಘುವರ ಜಮೀನಿಗೆ ಬದಲಾಗಿ ಪಡೆದ ಹಣವನ್ನು ಮುಟ್ಟುಗೋಲು ಹಾಕುವಂತೆ ನ್ಯಾಯಾಲಯವನ್ನು ಕೋರಿದ್ದರು.

ವಾದಗಳನ್ನು ಆಲಿಸಿದ ನ್ಯಾಯಾಧೀಶರು ಆಗಸ್ಟ್ 25, 2022ರಂದು ಕೃಪಾಶಂಕರ್ ಅವರು “ಮೇಲ್ನೋಟಕ್ಕೆ ಪ್ರಕರಣವನ್ನು ಸಾಬೀತುಪಡಿಸಿದ್ದಾರೆ” ಎಂದು ತೀರ್ಪು ನೀಡಿದ್ದರು. ನಿಜವಾದ ಮಹಾಂತ ಯಾರು, ಅವರಿಗೆ ದೇವಾಲಯದ ಆಸ್ತಿಯನ್ನು ಪರಭಾರೆ ಮಾಡುವ ಹಕ್ಕಿದೆಯೇ ಎಂಬದು ಮುಕ್ತ ಪ್ರಶ್ನೆಗಳಾಗಿದ್ದು, ವಿಚಾರಣೆಯಲ್ಲಿಯೇ ತೀರ್ಮಾನವಾಗಬೇಕಿದೆ ಎಂದು ಅವರು ಹೇಳಿದ್ದಾರೆ. ಇದಕ್ಕಿಂತಲೂ ಹೆಚ್ಚಾಗಿ, ತನ್ನ ತಡೆಯಾಜ್ಞೆ ಇದ್ದರೂ ಮಾರಾಟ ಮುಂದುವರಿಸಿದ ಪ್ರತಿವಾದಿಗಳು “ದುರುದ್ದೇಶ” ಹೊಂದಿರುವುದನ್ನು ತೋರಿಸುತ್ತವೆ ಎಂದಿರುವ ನ್ಯಾಯಾಧೀಶರು, ತನ್ನ ತಡೆಯಾಜ್ಞೆಯನ್ನು ಪ್ರಕರಣ ಇತ್ಯರ್ಥ ಆಗುವವರೆಗೆ ವಿಸ್ತರಿಸಿದ್ದಾರೆ.

ರಘುವರ ಅವರು ಜಿಲ್ಲಾ ನ್ಯಾಯಾಲಯದಲ್ಲಿ ನೀಡಿರುವ ತಡೆಯಾಜ್ಞೆಯನ್ನು ಪ್ರಶ್ನಿಸಿ, ಸಾಕ್ಷ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸದೇ ತಡೆಯಾಜ್ಞೆ ನೀಡಲಾಗಿದೆ ಎಂದು ವಾದಿಸಿದ್ದಾರೆ. ಈ ಮನವಿಯನ್ನು ಆರ್‌ಜೆಟಿಕೆ ಬೆಂಬಲಿಸಿ, ತಡೆಯಾಜ್ಞೆಯಿಂದ ರಾಮಮಂದಿರ ಪೂರ್ಣಗೊಳಿಸುವುದಕ್ಕೆ ಅಡ್ಡಿಯಾಗುವ ಮೂಲಕ ಟ್ರಸ್ಟಿಗೆ ಸರಿಪಡಿಸಲಾಗದ ಹಾನಿ ಉಂಟಾಗಿದೆ ಎಂದು ವಾದಿಸಿದೆ. ಜೊತೆಗೆ ಅದು ರಘುವರ ಅವರ ವಾದವನ್ನು ಬೆಂಬಲಿಸುವ ಒಂದು ಗಮನಾರ್ಹವಾದ ಸಾಕ್ಷ್ಯವನ್ನು ಮುಂದಿಟ್ಟಿದೆ. 2008ರಲ್ಲಿ ದೇವಾಲಯದ ಬಾಡಿಗೆ ಹೆಚ್ಚಿಸುವಂತೆ ಇಲ್ಲವೇ ತೆರವು ಮಾಡುವಂತೆ ಯುಗುಲ್ ಕಿಶೋರ್ ಅವರು ಸಿಆರ್‌ಪಿಎಫ್ ಮೇಲೆ ಕೇಸು ದಾಖಲಿಸಿದ್ದರು. ತಾನು ಹಿಂದಿನ ಮಹಾಂತರ ಪರವಾಗಿ ನ್ಯಾಯಾಲಯದಲ್ಲಿ ವ್ಯವಹರಿಸಿದ್ದುದಾಗಿ ಕೃಪಾಶಂಕರ್ ಹೇಳಿಕೊಂಡಿದ್ದಾರೆ. ಆದರೆ, ಯುಗುಲ್ ಕಿಶೋರ್ ಅವರ ಮರಣಾನಂತರ ದೂರುದಾರಾಗಿ ಮುಂದುವರಿದವರು ರಘುವರರೇ ಹೊರತು ಕೃಪಾಶಂಕರ್ ಅಲ್ಲ ಎಂದು ಆರ್‌ಜೆಟಿಕೆ ವಾದಿಸಿದೆ.

ಫೆಬ್ರವರಿ 6, 2023ರಂದು ಜಿಲ್ಲಾ ನ್ಯಾಯಾಲಯವು ಪ್ರತಿವಾದಿಗಳ ಪರವಾಗಿ ತೀರ್ಪು ನೀಡಿ ತಡೆಯಾಜ್ಞೆಯನ್ನು ತೆರವು ಮಾಡಿತು. ಅದೇ ರಾತ್ರಿ ಆರ್‌ಜೆಟಿಕೆಯು ಸೀತಾ ಮತ್ತು ವಲ್ಲಭರ ಪ್ರತಿಮೆಗಳನ್ನು ತೆರವು ಮಾಡಿ ಫಕೀರೇ ರಾಮ್ ದೇವಾಲಯವನ್ನು ನೆಲಸಮ ಮಾಡುವ ಮೂಲಕ ಒಂದುವೇಳೆ ವಾರಸುದಾರ ವಿವಾದ ಮುಂದುವರಿದರೂ ದೇವಾಲಯ ಇಲ್ಲವಾಗುವುದನ್ನು ಖಾತರಿಪಡಿಸಿತು. ಕೃಪಾ ಶಂಕರ್ ಅವರು ಏಪ್ರಿಲ್‌ನಲ್ಲಿ ಅಲಹಾಬಾದ್ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ, ಇನ್ನೂ ಅದು ವಿಚಾರಣೆಗೆ ಬಂದಿಲ್ಲ. ಇದಕ್ಕೆ ಕಾರಣವೆಂದರೆ, ಕೃಪಾಶಂಕರ್ ಅವರ ವಕೀಲರು ಸಿದ್ಧತೆಗಾಗಿ ಹೆಚ್ಚಿನ ಸಮಯ ಕೇಳುತ್ತಾಬಂದಿರುವುದು ಎಂದು ರಘುವರ ನನಗೆ ತಿಳಿಸಿದರು.

ಸಂತೋಷ್ ದುಬೆ ಅವರು ಈ ಜಮೀನು ಮಾರಾಟದ ವಿರುದ್ಧ ಜುಲೈ 14, 2021ರಲ್ಲಿ ದೂರು ಸಲ್ಲಿಸಿದ್ದರೂ ಅದು ಇನ್ನೂ ವಿಚಾರಣೆಗೆ ಬಂದಿಲ್ಲ. ಫಕೀರೇ ರಾಮ್ ದೇವಾಲಯದ ನೆಲಸಮದ ಬಳಿಕ ಅವರು ಈ ಪ್ರಕರಣದಲ್ಲಿ ಏನಾದರೂ ಸಕಾರಾತ್ಮಕ ಫಲಿತಾಂಶ ಹೊರಬರುವುದರ ಕುರಿತು ನಿರಾಶಾವಾದ ಹೊಂದಿದ್ದಾರೆ. ತಾನು ಬಾಬ್ರಿ ಮಸೀದಿ ನೆಲಸಮದಲ್ಲಿ ಭಾಗವಹಿಸಿದ್ದು, 1990ರ ಪೊಲೀಸ್ ಗೋಲಿಬಾರಿನಲ್ಲಿ ತನಗೆ ಗುಂಡುಬಿದ್ದಿತ್ತು ಎಂದು ದುಬೆ ನನಗೆ ತಿಳಿಸಿದರು. “ನಾನು ನಿಮಗೆ ಇನ್ನೊಂದು ವಿಷಯ ಹೇಳುತ್ತೇನೆ. ನಾವು ರಾಮನ ಜನ್ಮಸ್ಥಾನಕ್ಕಾಗಿ ಹೋರಾಡಿದೆವು. ದೇವರನ್ನು ಸ್ಥಳಾಂತರಿಸಬಹುದಾದರೆ ನಾವು ಮಸೀದಿಯನ್ನು ಯಾಕೆ ನೆಲಸಮ ಮಾಡಬೇಕಿತ್ತು? ದೇವರು ಇರುವಲ್ಲೇ ಮಂದಿರ ಕಟ್ಟುತ್ತಾರೆ ಎಂದೇ ನಾವೆಲ್ಲರೂ ಭಾವಿಸಿದ್ದೆವು” ಎಂದು ಅವರು ಹೇಳಿದರು. ಆರ್‌ಜೆಟಿಕೆಯು ಕನಿಷ್ಟ ಒಂದು ಡಜನ್ ಪ್ರಮುಖ ದೇವಾಲಯಗಳನ್ನು ನೆಲಸಮ ಮಾಡಿರುವುದಾಗಿ ಅವರು ಹೇಳಿದರು. “ಅವರಿಗೆ ಏನು ಮಾಡಬೇಕೋ ಅದನ್ನೇ ಅವರು ಮಾಡುತ್ತಾರೆ. ಇದು ಬಾಬರ್ ಮತ್ತು ಔರಂಗಜೇಬ್ ಹೊಂದಿದ್ದ ಧೋರಣೆಯೇ” ಎಂದು ಅವರು ದೂರಿದರು.

ಆರ್‌ಜೆಕೆಟಿ ಜೊತೆಗೆ ರಘುವರ ಮಾಡಿರುವ ಒಪ್ಪಂದದ ಪ್ರಕಾರ ಸೀತಾ ಮತ್ತು ವಲ್ಲಭರಿಗೆ ಕೋಟ್ ರಾಮಚಂದ್ರದಲ್ಲಿ ನ್ಯಾಯಾಲಯದ ಸಿವಿಲ್ ವ್ಯಾಜ್ಯದ ದಾಖಲೆಗಳ ಪ್ರಕಾರ ಅಷ್ಟೇ ಜಮೀನು, ಅಂದರೆ ಪ್ಲಾಟ್ 131ರಲ್ಲಿ 255 ಚದರ ಮೀಟರ್ ಮತ್ತು ಪ್ಲಾಟ್ 138ರಲ್ಲಿ 1040 ಚದರ ಮೀಟರ್ ಜಮೀನು ಸಿಗಲಿದೆ. ಇದನ್ನು ಫಕೀರೇ ರಾಮ್ ದೇವಾಲಯದ ಮಾರಾಟಕ್ಕೆ ಸ್ವಲ್ಪವೇ ಮುನ್ನ ಟ್ರಸ್ಟ್ ಅವುಗಳ ಮಾರಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಸ್ವಾಧೀನಕ್ಕೆ ಪಡೆದಿತ್ತು. ಆರ್‌ಜೆಟಿಕೆಯು 2017ರಿಂದ 2023ರ ತನಕ ಅಯೋಧ್ಯೆಯ ಮೇಯರ್ ಆಗಿದ್ದ ರಿಶಿಕೇಶ್ ಉಪಾಧ್ಯಾಯರ ಸಂಬಂಧ ಹೊಂದಿರುವ ಮಧ್ಯವರ್ತಿಗಳ ಮೂಲಕ ಇದನ್ನು ಮಾಡಿತ್ತು. ಮಧ್ಯವರ್ತಿಗಳು ಈ ಜಮೀನಿನ ತುಂಡುಗಳನ್ನು ಅವುಗಳ ಮಾಲಕರಿಗೆ ನೀವು ಜಮೀನು ಮಾರದಿದ್ದರೆ ತೆರವು ಮಾಡಲಾಗುವುದೆಂದು ಹೇಳುವ ಮೂಲಕ ಅಗ್ಗದ ಬೆಲೆಯಲ್ಲಿ ಮೊದಲೇ ಖರೀದಿಸಿದ್ದರು. ನಂತರ ಅವರು ಅವುಗಳನ್ನು ತಕ್ಷಣವೇ ಹೆಚ್ಚಿನ ಬೆಲೆಯಲ್ಲಿ ಟ್ರಸ್ಟಿಗೆ ಮಾರುವುದರ ಮೂಲಕ ಭಾರೀ ಲಾಭ ಮಾಡಿಕೊಂಡರು.

ಪ್ಲಾಟ್ 131 ಮಿನ್‌ಜುಮ್ಲಾ ಜಮೀನು ಎಂದರೆ, ತಾತ್ವಿಕವಾಗಿ ಹಲವಾರು ಹಿಡುವಳಿದಾರರಿಗೆ ಹಂಚಲಾದ ಅವಿಭಜಿತ ಜಮೀನು ಆಗಿತ್ತು. ಮಾರ್ಚ್ 15, 2021ರಲ್ಲಿ ಬಸ್ತಿ ಜಿಲ್ಲೆಯ ನಿವಾಸಿ ಅನಿಲ್ ಪಾಠಕ್ ಎಂಬವರು 255 ಚದರಮೀಟರ್ ಜಾಗವನ್ನು ವಿಷ್ಣುಕುಮಾರ್ ಎಂಬವರಿಗೆ 10 ಲಕ್ಷ, ಎಂದರೆ ಮಾರುಕಟ್ಟೆ ಬೆಲೆಯಾದ 10.2 ಲಕ್ಷ ರೂ.ಗಳಿಗಿಂತ ಸ್ವಲ್ಪವೇ ಕಡಿಮೆ ಬೆಲೆಗೆ ಮಾರಾಟ ಮಾಡಿದರು. ಆ ಹೊತ್ತಿನಲ್ಲಿ ಆರ್‌ಜೆಟಿಕೆಯು ದುಬಾರಿ ಬೆಲೆಯಲ್ಲಿ ಜಮೀನು ಖರೀದಿಸುತ್ತಿರುವ ವಿಷಯವನ್ನು ಎತ್ತಿದ್ದ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಹೇಳುವ ಪ್ರಕಾರ ವಿಷ್ಣು- ರಿಶಿಕೇಶರ ಅಕೌಂಟೆಂಟ್ ಆಗಿದ್ದರು. ಈ ವ್ಯವಹಾರದ ಸಾಕ್ಷಿಗಳಲ್ಲಿ ಒಬ್ಬರೆಂದರೆ ಮೇಯರ್ ಅಳಿಯ ನಾರಾಯಣ ಉಪಾಧ್ಯಾಯ.

ಮೂರು ದಿನಗಳ ನಂತರ ಅನಿಲ್‌ನ ತಮ್ಮ- ಕಳವು, ವಂಚನೆ, ಫೋರ್ಜರಿ ಇತ್ಯಾದಿ ಹಲವಾರು ಪ್ರಕರಣಗಳಲ್ಲಿ ಉತ್ತರ ಪ್ರದೇಶ ಪೊಲೀಸರಿಂದ ತಲೆತಪ್ಪಿಸಿಕೊಂಡಿದ್ದ ಹರೀಶ್ ಪಾಠಕ್- ಇನ್ನೊಂದು 255 ಚದರ ಮೀಟರ್ ಜಮೀನನ್ನು 60 ಲಕ್ಷ ರೂ.ಗಳಿಗೆ ಆರ್‌ಜೆಟಿಕೆಗೆ ಮಾರಿದ. ಅನಿಲ್‌ನ ಭಾಗದಂತೆಯೇ ಈ ಭಾಗದ ಮಾರುಕಟ್ಟೆ ಬೆಲೆ 10.2ಲಕ್ಷ ರೂ. ಆಗಿತ್ತು. ಈ ವ್ಯವಹಾರದ ಸಾಕ್ಷಿಗಳೆಂದರೆ, ರಿಶಿಕೇಶ್ ಮತ್ತು ಆರ್‌ಜೆಟಿಕೆ ಟ್ರಸ್ಟಿ ಅನಿಲ್ ಮಿಶ್ರಾ.

ಇದೇ ಹೊತ್ತಿಗೆ ಪ್ಲಾಟ್ 138ರ 1,040 ಚದರ ಮೀಟರ್ ಜಾಗವನ್ನು ಆರ್‌ಜೆಟಿಕೆಯು ಅಯೋಧ್ಯೆಯ ರುಡೌಲಿ ತೆಹಶೀಲಿನ ಜಗದೀಶ್ ಪ್ರಸಾದ್ ಎಂಬವರಿಂದ ಮಾರುಕಟ್ಟೆ ಬೆಲೆಯಾದ 41.6 ಲಕ್ಷ ರೂ.ಗಳಿಗೆ ಬದಲಾಗಿ ಎರಡು ಕೋಟಿ ರೂ.ಗಳಿಗೆ ಖರೀದಿಸಿತು. ಈ ವ್ಯವಹಾರದ ಸಾಕ್ಷಿಗಳೆಂದರೆ ಮಿಶ್ರಾ ಮತ್ತು ಇಂದ್ರ ಪ್ರತಾಪ್ ತಿವಾರಿ. ತಿವಾರಿ ಆ ಹೊತ್ತಿಗೆ ಗೋಷಾಯ್‌ಗಂಜ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದರು. “ಫೈಜಾಬಾದಿನ ದಬಾಂಗ್” ಎಂದು ಪರಿಚಿತನಾದ ಈತ ಹಲವಾರು ಪ್ರಕರಣಗಳ ಆರೋಪಿ ಮತ್ತು ಅಕ್ಟೋಬರ್ 2021ರಲ್ಲಿ ಐದು ವರ್ಷಗಳ ಶಿಕ್ಷೆಗೆ ಗುರಿಯಾಗಿ ಶಾಸಕ ಸ್ಥಾನ ಕಳೆದುಕೊಂಡಾತ. 1990ರಲ್ಲಿ ಕಾಲೇಜು ಪರೀಕ್ಷೆಯಲ್ಲಿ ಫೇಲಾಗಿ ನಕಲಿ ಅಂಕಪಟ್ಟಿ ಬಳಸಿದ ಪ್ರಕರಣದಲ್ಲಿ ಈ ಶಿಕ್ಷೆ ಆಗಿತ್ತು. ಇವುಗಳಲ್ಲಿ ಜಮೀನಿನ ಯಾವ ಭಾಗವನ್ನು ಸೀತಾ ಮತ್ತು ವಲ್ಲಭರಿಗೆ ನೀಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಉತ್ತರಪ್ರದೇಶದ ಮುದ್ರಾಂಕ ನೋಂದಣಿ ಪ್ರಾಧಿಕಾರದ ವೆಬ್ಸೈಟ್ ಪ್ರಕಾರ ಪ್ಲಾಟ್ 138ರ 1,295 ಚದರ ಮೀಟರ್ ಜಮೀನನ್ನು ಆರ್‌ಜೆಟಿಕೆ ಮಾರ್ಚ್ 27, 2021ರಂದು ವರ್ಗಾಯಿಸಿತ್ತು. ಆದರೆ ಪ್ರಸಾದ್ ಅವರಿಂದ ಟ್ರಸ್ಟ್ ಖರೀದಿಸಿದ್ದದ್ದು ಕೇವಲ 1,040 ಚದರ ಮೀಟರ್ ಮಾತ್ರ. ಇದರಿಂದ ಉಳಿದ 255 ಚದರ ಮೀಟರ್ ಜಮೀನಿನ ಲೆಕ್ಕ ಸಿಗುವುದಿಲ್ಲ. ಇದು ಪ್ಲಾಟ್ 131ರ ಭಾಗ ಎಂದು ಊಹಿಸಬಹುದು. ವಿಷ್ಣು ಕುಮಾರ್- ಅನಿಲ್ ಪಾಠಕ್‌ರಿಂದ ಖರೀದಿಸಿದ 255 ಚದರಮೀಟರ್ ಜಮೀನನ್ನು ಸೀತಾ ಮತ್ತು ವಲ್ಲಭರಿಗೆ 30 ಲಕ್ಷ ರೂ. ಗಳಿಗೆ ಮಾರಿದ್ದಾರೆ. ತನಗೆ ನೀಡಲಾದ ಜಮೀನಿಗೆ ರಸ್ತೆ ಸಂಪರ್ಕ ಇಲ್ಲದೇ ಇರುವುದರಿಂದ ತಾನು ಈ ಹೆಚ್ಚುವರಿ ಜಮೀನು ಖರೀದಿಸಿರುವುದಾಗಿ ರಘುವರ ನನಗೆ ತಿಳಿಸಿದರು.

ಪಾಲುಪಟ್ಟಿ ಅಥವಾ ಮ್ಯುಟೇಶನ್ ದಾಖಲೆಗಳು ಈ ಇಡೀ ಚಿತ್ರವನ್ನು ಇನ್ನಷ್ಟು ಕದಡುತ್ತವೆ. ಜನವರಿ 28, 2023ರಂದು ರಘುವರ ಅವರು ಪ್ಲಾಟ್ 131ರಲ್ಲಿ 255 ಚದರ ಮೀಟರ್‌ಗೆ ಬದಲಾಗಿ 340 ಚದರ ಮೀಟರ್ ಜಮೀನಿನ ಮ್ಯುಟೇಶನ್‌ಗಾಗಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಎರಡು ತಿಂಗಳುಗಳ ನಂತರ “ಅರ್ಜಿದಾರರ ಗೈರುಹಾಜರಿ ಮತ್ತು ಸಾಕ್ಷ್ಯಾಧಾರಗಳ ಕೊರತೆ”ಯಿಂದಾಗಿ ತಹಶೀಲ್ದಾರರು ಈ ಅರ್ಜಿಯನ್ನು ತಿರಸ್ಕರಿಸಿದ್ದರು. ಈ ಪ್ರಕರಣದ ಕೊನೆಯ ವಿಚಾರಣೆ ಫೆಬ್ರವರಿ 17ರಂದು ನಡೆದಿತ್ತು.

ಮ್ಯುಟೇಶನ್ ದಾಖಲೆಗಳ ವಿಸ್ತೀರ್ಣ ನೋಡಿದಲ್ಲಿ ಸೀತಾ ಮತ್ತು ವಲ್ಲಭರಿಗೆ ಪ್ಲಾಟ್ 131ರ ಬೇರೆಯೇ ಭಾಗವನ್ನು ನೀಡಿದಂತಿದೆ. ಅದನ್ನು ಕೂಡಾ ಆರ್‌ಜೆಟಿಕೆ ಸ್ವಾಧೀನಪಡಿಸಿಕೊಂಡಿತ್ತು. ಮೇ 24, 2021ರಂದು ಟ್ರಸ್ಟ್ ಪ್ಲಾಟ್ 131ರ 340 ಚದರ ಮೀಟರ್ ಜಮೀನು ಸೇರಿದಂತೆ 2,020 ಚದರ ಮೀಟರ್ ಜಮೀನನ್ನು ಚೌಭುರ್ಜಿ ದೇವಾಲಯದ ಮಹಾಂತ ಬ್ರಿಜ್ ಮೋಹನ ದಾಸ್ ಎಂಬವರಿಂದ 5.6 ಕೋಟಿ ರೂ. ಗಳಿಗೆ ಖರೀದಿಸಿತ್ತು. ಈ ಜಮೀನಿನ ಮಾರುಕಟ್ಟೆ ಬೆಲೆ ಇದ್ದದ್ದು ಕೇವಲ 92.5 ಲಕ್ಷ ರೂ.ಗಳು ಮಾತ್ರ. ಈ ವ್ಯವಹಾರದ ಸಾಕ್ಷಿಗಳೆಂದರೆ ಅನಿಲ್ ಮಿಶ್ರಾ ಮತ್ತು ರಾಜ್ ಕುಮಾರ್ ದಾಸ್.

2013ರಲ್ಲಿ “ಓಪನ್” ಪತ್ರಿಕೆ ಪ್ರಕಟಿಸಿದ ಲೇಖನ ಒಂದರಪ್ರಕಾರ, ಬ್ರಿಜ್ ಮೋಹನ್ ದಾಸ್ ವಿಎಚ್‌ಪಿಯ ಅಯೋಧ್ಯೆಯ ಅಧ್ಯಕ್ಷರಾಗಿದ್ದವರು. ಅವರ ಫೇಸ್ಬುಕ್ ಪ್ರೊಫೈಲ್‌ನಲ್ಲಿ ಹಲವಾರು ಸ್ಥಳೀಯ ಬಿಜೆಪಿ ನಾಯಕರ ಜೊತೆಯಲ್ಲಿ ಅವರ ಫೋಟೋಗಳಿವೆ. ರಾಮ ಶರಣ್ ದಾಸ್ ಅವರಂತೆ ಈತ ಕೂಡಾ ರಿಶಿಕೇಶ್ ಉಪಾಧ್ಯಾಯರ ನಂತರ ಗಿರೀಶ್ ತ್ರಿಪಾಠಿ ಮೇಯರ್ ಆಗುವಂತೆ ಪ್ರಚಾರ ನಡೆಸಿದ್ದರು. ಈತ ಹಲವಾರು ಹಿಂದುತ್ವದ ಪಾಪ್ ವಿಡಿಯೋಗಳಲ್ಲಿ ಭಾಗವಹಿಸಿದ್ದು ಅವುಗಳಲ್ಲಿ ಇಸ್ಲಾಮೋಫೋಬಿಕ್ ಹಾಡುಗಳಿವೆ. ಈತ ಆರ್‌ಜೆಟಿಕೆಗೆ ಮಾರಿದ ಜಮೀನು ಅವರ ಗುರು ರಾಮ್ ಅಸರೇ ದಾಸ್ ಅವರಿಗೆ ಸೇರಿದ್ದಾಗಿದೆ. ಬ್ರಿಜ್ ಮೋಹನ್ ತನ್ನನ್ನು ಕೊಂದು ಚೌಭುರ್ಜಿ ದೇವಾಲಯದ ಆಸ್ತಿಯನ್ನು ಕಬಳಿಸಲು ಯತ್ನಿಸಿರುವುದಾಗಿ ರಾಮ್ ಅಸರೆ 2013ರಲ್ಲಿ “ಓಪನ್”ಗೆ  ತಿಳಿಸಿದ್ದರು. ತನ್ನ ಹತ್ಯೆ ಯತ್ನದ ಬಳಿಕ ತಾನು ದೇವಾಲಯ ಬಿಟ್ಟು ಓಡಿರುವುದಾಗಿಯೂ, ನಂತರ ದೇವಾಲಯ ಬ್ರಿಜ್ ಮೋಹನ್ ನಿಯಂತ್ರಣದಲ್ಲಿ ಇದ್ದುದಾಗಿಯೂ ಅವರು ಹೇಳಿದ್ದರು. ಬ್ರಿಜ್ ಮೋಹನ್ ಈ ಹತ್ಯೆ ಯತ್ನವನ್ನು ನಿರಾಕರಿಸಿ, ರಾಮ್ ಅಸರೇ ಅವರು ದೇವಾಲಯದ ಜಮೀನನ್ನು ಭೂಮಾಫಿಯಾ ಒಂದಕ್ಕೆ ಮಾರಲು ಯತ್ನಿಸಿದ್ದನ್ನು ತಾನು ವಿರೋಧಿಸಿದ್ದಕ್ಕಾಗಿ ಸುಳ್ಳು ಆರೋಪಗಳನ್ನು ಮಾಡಿರುವುದಾಗಿ ಹೇಳಿದ್ದಾರೆ.

ಈ ಜಮೀನನ್ನು 2018ರಲ್ಲಿ ರಾಮ್ ಅಸರೇ ಅವರ ಮರಣದ ಬಳಿಕ ಅಧಿಕೃತವಾಗಿ ಬ್ರಿಜ್ ಮೋಹನ್ ಅವರಿಗೆ ವರ್ಗಾಯಿಸಲಾಗಿತ್ತು. ಫ್ಲಾಟ್ 131ರಲ್ಲಿನ 340 ಚದರ ಮೀಟರ್‌ಗಳಿಗೆ ಹೊರತಾಗಿ ಪ್ಲಾಟ್ 90ರ 540 ಚದರ ಮೀಟರ್, ಪ್ಲಾಟ್ 132ರ 340 ಚದರ ಮೀಟರ್, ಪ್ಲಾಟ್ 134ರ 100 ಚದರ ಮೀಟರ್ ಮತ್ತು ಪ್ಲಾಟ್ 135ರ 860 ಚದರ ಮೀಟರ್ ಜಮೀನು ಸೇರಿದೆ. ಇದರಲ್ಲಿ ಮುಖ್ಯವಾಗಿ ಪ್ಲಾಟ್ 135 ರಿಶಿಕೇಶ್ ಜೊತೆಗೆ ಸಂಬಂಧ ಹೊಂದಿರುವ ಮಧ್ಯವರ್ತಿಗಳಿಗೆ ಆರ್‌ಜೆಟಿಕೆ ಜೊತೆಗಿನ ವ್ಯವಹಾರಗಳಲ್ಲಿ ಚೆನ್ನಾಗಿ ಹಣ ಕರೆದುಕೊಳ್ಳುವ ಹಸುವಾಗಿದೆ.

ಫ್ಲಾಟ್ 135 ಸರಕಾರಿ ಜಮೀನಾಗಿದ್ದು, ಅದನ್ನು ಬ್ರಿಜ್ ಮೋಹನ್ ಮತ್ತು ಧನುಷಾದ್ರಿಜೀ ಭಗವಾನ್ ವಿರಾಜಮಾನಜೀ ದೇವಾಲಯದ ಮಹಾಂತ ದೇವೇಂದ್ರ ಪ್ರಸಾದ್ ವಶಕ್ಕೆ ತೆಗೆದುಕೊಂಡಿದ್ದರು. ಅದನ್ನು ಅವರು ತನ್ನ ಗುರು ವಿಶ್ವನಾಥ ಪ್ರಸಾದರಿಂದ ಬಳುವಳಿಯಾಗಿ ಪಡೆದಿದ್ದರು. ಈ ಜಮೀನು ತಮ್ಮದೇ ಎಂದು ಬ್ರಿಜ್ ಮೋಹನ್ ಮತ್ತು ದೇವೇಂದ್ರ ಅವರು ಹೇಳಿಕೊಂಡಿದ್ದರೂ “ನ್ಯೂಸ್ ಲಾಂಡ್ರಿ” ವೆಬ್ ಪತ್ರಿಕೆ ರಾಜ್ಯ ಭೂದಾಖಲೆಗಳ ಇಲಾಖೆಯ ದಾಖಲೆಗಳನ್ನು ಆಧರಿಸಿ ಮಾಡಿದ ವರದಿಯ ಪ್ರಕಾರ ವಿಶ್ವನಾಥ್ ಅವರು ಆ ಸರಕಾರಿ ಭೂಮಿಯನ್ನು ಅನುಭವಿಸಿಕೊಂಡು ಬರುತ್ತಿದ್ದರೇ ಹೊರತು ಅವರಿಗೆ ಅದನ್ನು ಮಾರುವ ಹಕ್ಕು ಇಲ್ಲ. ಹೀಗಿದ್ದರೂ, ಫೆಬ್ರವರಿ 22, 2021ರಂದು ದೇವೇಂದ್ರ 370 ಚದರ ಮೀಟರ್ ಜಮೀನನ್ನು ಜಗದೀಶ್ ಪ್ರಸಾದ್ ಅವರಿಗೂ, 89 ಚದರ ಮೀಟರ್ ಜಮೀನನ್ನು ದೀಪ್ ನಾರಾಯಣ್ ಉಪಾಧ್ಯಾಯ ಎಂಬವರಿಗೂ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಿದ್ದರು.

ನಂತರ ತಾನು ರಿಶಿಕೇಶ್ ಅವರ ಒತ್ತಾಯದ ಮೇರೆಗೆ ಜಮೀನನ್ನು ಮಾರಿರುವುದಾಗಿ ದೇವೇಂದ್ರ “ಆಜ್ ತಕ್” ಸುದ್ದಿ ವಾಹಿನಿಗೆ ತಿಳಿಸಿದ್ದರು. “ಜಮೀನು ಟ್ರಸ್ಟಿಗೆ ಹೋಗುವುದೆಂದು ನನಗೆ ಹೇಳಲಾಯಿತು. ಜಮೀನು ಸರಕಾರದ್ದಾಗಿರುವುದರಿಂದ ಯಾವ ಬೆಲೆಯೂ ನನ್ನ ಮಟ್ಟಿಗೆ ಒಳ್ಳೆಯ ಬೆಲೆ ಎಂದು ನಾನು ಭಾವಿಸಿದ. ನಾನದನ್ನು 30 ಲಕ್ಷ ರೂ.ಗಳಿಗೆ ಮಾರಿದೆ” ಎಂದವರು ಹೇಳಿದರು. ದೇವೇಂದ್ರ ಅವರ ಶಿಷ್ಯರಲ್ಲಿ ಒಬ್ಬರಾದ ಕೃಪಾಳು ರಾಮ ಭೂಷಣ ದಾಸ್ ನನಗೆ ಹೇಳಿದ ಪ್ರಕಾರ, “ಜಮೀನಿನ ಮೇಲೆ ಹಲವರು ಹಕ್ಕು ಸ್ಥಾಪನೆ ಮಾಡಿ ಅದು ವಿವಾದಾಸ್ಪದವಾಗಿರುವುದರಿಂದ ಆರ್‌ಜೆಟಿಕೆ ನೇರವಾಗಿ ಜಮೀನು ಖರೀದಿಸುವುದಿಲ್ಲ; ಮೊದಲು ನಮ್ಮ ಹೆಸರಿಗೆ ಮಾಡಿ ಎಲ್ಲಾ ಸರಿಪಡಿಸಿದ ಮೇಲೆ ಟ್ರಸ್ಟ್ ಖರೀದಿಸುತ್ತದೆ ಎಂದು ಉಪಾಧ್ಯಾಯರು ನಮಗೆ ಹೇಳಿದರು” ಎಂದರು.

ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರು ಅದು ಸರಕಾರಿ ಜಮೀನಾದುದರಿಂದ ಅದನ್ನು ತೆರವು ಮಾಡಬೇಕೆಂದು ನನಗೆ ಹೇಳಿದರು. ಅದನ್ನು ನೂರಾರು ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರೂ ಕೇಳದೆ ಅದನ್ನು ವಶಕ್ಕೆ ತೆಗೆದುಕೊಂಡು ಟ್ರಸ್ಟಿಗೆ ನೀಡುವುದಾಗಿ ಹೇಳಿದರು ಎಂದು ಬ್ರಿಜ್ ಮೋಹನ್ ಅವರು ನಂತರ “ಆಜ್‌ತಕ್”ಗೆ ತಿಳಿಸಿದರು. ವಾಸ್ತವದಲ್ಲಿ ಜಿಲ್ಲಾಡಳಿತವು ಎಂದೂ ಆದನ್ನು ವಶಕ್ಕೆ ತೆಗೆದುಕೊಳ್ಳಲೇ ಇಲ್ಲ. ಬದಲಾಗಿ ಮಾರ್ಚ್ 27ರಂದು ಜಗದೀಶ್ ಪ್ರಸಾದ್ ಅವರು 370 ಚದರ ಮೀಟರ್ ಜಮೀನನ್ನು 50 ಲಕ್ಷ ರೂ.ಗಳಿಗೆ, ಅಂದರೆ ತಾನು ನೀಡಿದ್ದಕ್ಕಿಂತ ಐದು ಪಟ್ಟು ಹೆಚ್ಚು ಬೆಲೆಗೆ ರಘುವರ ಅವರಿಗೆ ಮಾರಿದರು. ರಘುವರ ಶಾಮೀಲಾಗಿರುವ ಇತರ ವ್ಯವಹಾರಗಳಿಗೆ ವ್ಯತಿರಿಕ್ತವಾಗಿ ಈ ಜಮೀನನ್ನು ಸೀತಾ ಮತ್ತು ವಲ್ಲಭರ ಹೆಸರಿಗೆ ಮಾಡದೆ, ಅವರ ಸ್ವಂತ ಹೆಸರಿಗೆ ವರ್ಗಾಯಿಸಲಾಯಿತು. ಈ ವ್ಯವಹಾರಕ್ಕೆ ಸಾಕ್ಷಿಯಾಗಿದ್ದವರು ಫಕೀರೇ ರಾಮ್ ಮಾರಾಟದಲ್ಲೂ ಸಾಕ್ಷಿಗಳಾಗಿದ್ದ ಅದೇ ಜನರು- ರಾಜ್ ಕುಮಾರ್ ದಾಸ್ ಮತ್ತು ರಾಮ್ ನರೇಶ್ ದಾಸ್.

ಮೇ 11ರಂದು ದೀಪ್ ನಾರಾಯಣ್ ತಾನು 20 ಲಕ್ಷ ರೂ.ಗಳಿಗೆ ಖರೀದಿಸಿದ್ದ 890 ಚದರ ಮೀಟರ್ ಜಮೀನನ್ನು ಆರ್‌ಜೆಕೆಟಿಗೆ 2.5ಕೋಟಿ ರೂ.ಗಳಿಗೆ ಮಾರಿದರು. ಇದನ್ನು ತಕ್ಷಣವೇ ಕೌಶಲ್ಯ ಭವನದಲ್ಲಿ ಅರ್ಚಕರಾಗಿದ್ದ ಸಹೋದರರಾದ ಕೌಶಲ್ಯ ಕಿಶೋರ್ ತ್ರಿಪಾಠಿ ಮತ್ತು ಯಶೋಧಾ ನಂದನ ತ್ರಿಪಾಠಿ ಅವರಿಗೆ ವರ್ಗಾಯಿಸಲಾಯಿತು. ಇದಕ್ಕೆ ಬದಲಾಗಿ ಅವರು ತಮ್ಮ ದೇವಾಲಯವಿದ್ದ 650.55 ಚದರ ಮೀಟರ್ ಜಮೀನನ್ನು ಮಾರುಕಟ್ಟೆ ಬೆಲೆಯಾದ 1.61 ಕೋಟಿ ರೂ.ಗಳಿಗೆ ಬದಲಾಗಿ ನಾಲ್ಕು ಕೋಟಿ ರೂ.ಗಳಿಗೆ ಟ್ರಸ್ಟಿಗೆ ಮಾರಿದರು. ಈ ಎಲ್ಲಾ ವ್ಯವಹಾರಗಳಲ್ಲಿ ಸಾಕ್ಷಿಯಾಗಿದ್ದವರು ಅನಿಲ್ ಮಿಶ್ರಾ ಮತ್ತು ರಾಜ್ ಕುಮಾರ್. ಇದನ್ನು ರಾಜ್ ಕುಮಾರ್ ನಿರಾಕರಿಸಿದರೆ, ಮಿಶ್ರಾ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. “ಚಂಪತ್ ರಾಯ್ ಅವರಲ್ಲಿ ಕೇಳಿ, ಅವರೇ ಉತ್ತರಿಸುತ್ತಾರೆ” ಎಂದಷ್ಟೇ ಹೇಳಿದರು. ಬನ್ಸಾಲ್ ನನ್ನ ಕರೆಗಳಿಗೆ ಪ್ರತಿಕ್ರಿಯಿಸಲ್ಲ ಮತ್ತು ನಾನು ಅವರಿಗೆ ಕಳುಹಿಸಿದ ಪ್ರಶ್ನಾವಳಿಗೆ ಉತ್ತರಿಸಲಿಲ್ಲ.

ಎರಡು ದಿನಗಳಿಗೆ ಮೊದಲು ಅವರು ದೇವೇಂದ್ರ ಅವರಿಂದ 890 ಚದರ ಮೀಟರ್ ಜಮೀನನ್ನು ಕೊಂಡಿದ್ದರು. ದೀಪ್ ನಾರಾಯಣ್ ಅವರು 676.85 ಚದರ ಮೀಟರ್ ಜಮೀನನ್ನು ಪ್ಲಾಟ್ 36ರಲ್ಲಿ ಒಂದು ಕೋಟಿ ರೂ. ಬೆಲೆಯಲ್ಲಿ ಆರ್‌ಜೆಟಿಕೆಗೆ ಮಾರಿದ್ದರು. ಜಮೀನಿನ ಮಾರುಕಟ್ಟೆ ಬೆಲೆಯು 27.08 ಲಕ್ಷ ರೂ. ಆಗಿತ್ತು. ಈ ವ್ಯವಹಾರದ ಸಾಕ್ಷಿಗಳೆಂದರೆ ಅನಿಲ್ ಮಿಶ್ರಾ ಮತ್ತು ಇಂದ್ರ ಪ್ರತಾಪ್ ತಿವಾರಿ. ದೀಪ್ ನಾರಾಯಣ್ ಅವರಿಗೆ ಅವರ ಅಜ್ಜಿ ಸಾವಿತ್ರಿ ದೇವಿಯವರು ಆ ಜಾಗವನ್ನು ಮೇ 15, 2020ರಲ್ಲಿ ನೀಡಿದ್ದರು. ಆ ಹೊತ್ತಿನಲ್ಲಿ ಆರ್‌ಜೆಟಿಕೆಯು ಹೆಚ್ಚುವರಿ ಜಮೀನನ್ನು ಖರೀದಿಸುವ ಪ್ರಕ್ರಿಯೆಯನ್ನು ಆರಂಭಿಸಿತ್ತು. ಸಾವಿತ್ರಿ ದೇವಿಯವರು ಮೇ 6, 2021ರಂದು ನಿಧನ ಹೊಂದಿದರು. ಮೂರು ತಿಂಗಳುಗಳ ನಂತರ ಅಂದರೆ, ಆಗಸ್ಟ್ 19ರಂದು ತಹಶೀಲ್ದಾರರು ಜಮೀನನ್ನು ಸಾವಿತ್ರಿ ದೇವಿಯವರಿಂದ ದೀಪ್ ನಾರಾಯಣ್ ಅವರಿಗೆ, ನಂತರ ದೀಪ್ ನಾರಾಯಣ್ ಅವರಿಂದ ಟ್ರಸ್ಟಿಗೆ ಮ್ಯುಟೇಶನ್ ಮಾಡಿ, ಅಂದರೆ ವಿಂಗಡಿಸಿ ಕೊಟ್ಟರು. ಇದರ ಅರ್ಥವೆಂದರೆ, ದೀಪ್ ನಾರಾಯಣ್ ಜಮೀನನ್ನು ವರ್ಗಾಯಿಸುವ ಹಕ್ಕನ್ನು ಪಡೆಯುವ ಮೊದಲೇ ಅದನ್ನು ಮಾರಿದ್ದು; ಇದು ಉತ್ತರ ಪ್ರದೇಶ ಭೂ ಕಂದಾಯ ನಿಯಮ 2006ರ ಉಲ್ಲಂಘನೆಯಾಗುತ್ತದೆ. ವಿಶ್ವನಾಥ್ ಸಹಿತ ಹಲವು ವಕೀಲರು ನನಗೆ ತಿಳಿಸಿದಂತೆ ಏಕಕಾಲಕ್ಕೆ ಬಹುವಿಂಗಡಣೆ ಅಂದರೆ ಮ್ಯುಟೇಶನ್ ಮಾಡುವಂತಿಲ್ಲ.

ಮಾರ್ಚ್ 3, 2023ರಂದು ಆರ್‌ಜೆಟಿಕೆಯು ಈ ಜಮೀನನ್ನು ಕೈಕೇಯಿ ಕೋಪ್ ಭವನ್‌ನ ಮಹಾಂತ ಬಜರಂಗ ದಾಸ್ ಅವರಿಗೆ ವರ್ಗಾಯಿಸಿತು. ಅದು ನೆಲಸಮಗೊಳಿಸಲಾದ ಇನ್ನೊಂದು ದೇವಾಲಯ. ಬಜರಂಗ ದಾಸ್ ಅವರು ದೇವಾಲಯ ಇದ್ದ 1,410 ಚದರ ಮೀಟರ್ ಜಮೀನನ್ನು ಟ್ರಸ್ಟಿಗೆ ಏಳು ಕೋಟಿ ರೂ.ಗಳಿಗೆ ಮಾರಿದ್ದರು. ದೇವಾಲಯವನ್ನು ಮತ್ತೆ ಕಟ್ಟಲಾಗುವ ಪ್ಲಾಟ್ 36ರ ಜಮೀನಿಗೆ ಹೆಚ್ಚುವರಿಯಾಗಿ ಅವರಿಗೆ ಮೂರು ಕಿ.ಮೀ. ದೂರದ ಬಾಗ್ ಬಿಜೈಸಿಯಲ್ಲಿ ಪ್ಲಾಟ್ 246ರಲ್ಲಿ 1,150 ಚದರಮೀಟರ್ ಜಮೀನು ಸಿಕ್ಕಿದೆ. ತ್ರಿಪಾಠಿ ಸಹೋದರರಿಗೂ ಇಂತದ್ದೇ ಕೊಡುಗೆಯನ್ನು ನೀಡಲಾಗಿದೆ. ಕೌಶಲ್ಯ ಭವನದ ಪುನರ್‌ನಿರ್ಮಾಣಕ್ಕಾಗಿ ಪ್ಲಾಟ್ 135ರಲ್ಲಿ ನೀಡಲಾದ 890 ಚದರಮೀಟರ್ ಜಮೀನಿಗೆ ಹೆಚ್ಚುವರಿಯಾಗಿ ಬಾಗ್ ಬಿಜೈಸಿಯ ಪ್ಲಾಟ್ 242ರಲ್ಲಿ 33.4 ಲಕ್ಷ ರೂ. ಬೆಲೆಬಾಳುವ 695.678 ಚದರ ಮೀಟರ್ ಜಮೀನನ್ನು ಉಚಿತವಾಗಿ ನೀಡಲಾಗಿದೆ. ಬಜರಂಗ್ ಮತ್ತು ತ್ರಿಪಾಠಿಗಳು ತಮ್ಮ ಬಾಗ್ ಬಿಜೈಸಿಯ ಜಮೀನಿನಲ್ಲಿ ಏನು ಮಾಡಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಾನು ಕಳೆದ ಅಕ್ಟೋಬರ್ ತಿಂಗಳಲ್ಲಿ ಅಲ್ಲಿಗೆ ಭೇಟಿ ನೀಡಿದಾಗ ಅಲ್ಲಿ ನಿರ್ಮಾಣ ಕಾರ್ಯ ನಡೆದಿತ್ತಾದರೂ, ಯಾರು ಏನನ್ನು ಕಟ್ಟುತ್ತಿದ್ದಾರೆ ಎಂದು ಹೇಳಲು ನನಗೆ ಸಾಧ್ಯವಾಗಲಿಲ್ಲ.

ಈ ಜಮೀನುಗಳೆಲ್ಲವೂ ಹಿಂದೆ ಒಂದು ಮುಸ್ಲಿಂ ಕುಟುಂಬಕ್ಕೆ ಸೇರಿದ್ದ 2.334 ಹೆಕ್ಟೇರ್ ಜಮೀನಿನ ಭಾಗಗಳಾಗಿವೆ. ಆದು ತಲೆತಲಾಂತರಗಳಿಂದ ವಕ್ಫ್ ಭೂಮಿಯಾಗಿದ್ದು, ಅದನ್ನು ಇಸ್ಲಾಮಿಕ್ ಕಾನೂನಿನಪ್ರಕಾರ ಜನಸೇವಾ ಕಾರ್ಯಗಳಿಗೆ ಮಾತ್ರವೇ ಬಳಸಬಹುದು. ಒಂದು ಹಂತದಲ್ಲಿ ಕುಟುಂಬದ ಒಂದು ಕವಲು ಬಾಗ್ ಬಿಜೈಸಿಯ ಈ ಜಮೀನನ್ನು ಸ್ವಂತಕ್ಕೆ ಮಾಡಿಕೊಳ್ಳಲು ಪ್ರಯತ್ನಿಸಿತ್ತು. ಈ ಕುರಿತ ವಿವಾದವು ಒಂದು ದಶಕ ಕಳೆದರೂ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಹಾಗೆಯೇ ಉಳಿದಿದೆ. ಕಾನೂನು ಖಟ್ಲೆಯ ನಡುವೆಯೇ ಈ ಜಮೀನನ್ನು ಮಧ್ಯವರ್ತಿಗಳ ಮೂಲಕ ಆರ್‌ಜೆಟಿಕೆಗೆ ಮಾರಲಾಗಿದೆ. ಒಮ್ಮೆ ಟ್ರಸ್ಟ್ ಭಾಗಿಯಾದ ಕೂಡಲೇ ಜಿಲ್ಲಾಡಳಿತವು ಎಲ್ಲಾ ಆಕ್ಷೇಪಣೆಗಳನ್ನು ಬದಿಗೆ ಸರಿಸಿ ಮಾರಾಟ ಮುಂದುವರಿಯಲು ಅವಕಾಶ ಮಾಡಿಕೊಟ್ಟಿತು.

ಇಪ್ಪತ್ತನೇ ಶತಮಾನದ ಆರಂಭದಲ್ಲಿ ಹಾಜಿ ಫಕೀರ್ ಮೊಹಮ್ಮದ್ ಅವರು ಫೈಜಾಬಾದಿನಲ್ಲಿ ಗಮನಾರ್ಹವಾದ ಜಮೀನ್ದಾರರಾಗಿದ್ದರು. ಅವರು ಮತ್ತು ಅವರ ಪತ್ನಿ ಭಕ್ತಾವರ್ ಬೀಬಿ ಅವರಿಗೆ ಮಕ್ಕಳಿರಲಿಲ್ಲ. ಅವರು ತಾವು ಬದುಕಿರುವಾಗಲೇ ತಮ್ಮ ಜಮೀನನ್ನು ತಮ್ಮ ಸಂಬಂಧಿಕರ ನಡುವೆ ಹಂಚಿಕೊಡಲು ನಿರ್ಧರಿಸಿದರು. ಆದರೆ, ಮೇ 1924ರಲ್ಲಿ ತಮ್ಮ ಸಂಬಂಧಿಗಳಲ್ಲಿ ಕೆಲವರು ಆಸ್ತಿಯನ್ನು ದುರುಪಯೋಗ ಮಾಡಬಹುದು ಎಂಬ ಭಯದಿಂದ ಅವರು ತಮ್ಮ ಜಮೀನಿನ ನಿರ್ವಹಣೆಗೆ ವಕ್ಫ್ ಹಾಜಿ ಫಕೀರ್ ಮೊಹಮ್ಮದ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈ ಡಬ್ಲ್ಯುಎಚ್‌ಎಫ್‌ಎಂ ಟ್ರಸ್ಟನ್ನು “ಅಲ್ಲಾಲ್ ಔಲಾದ್” ಎಂದು ವರ್ಗೀಕರಿಸಲಾಗಿದ್ದು, ಈ ಜಮೀನನ್ನು ಸ್ಥಾಪಕರ ವಂಶಜರಿಗೆ ನೆರವಾಗಲು ಮಾತ್ರವೇ ಬಳಸಬಹುದು. ಅಂತಿಮವಾಗಿ ಜಮೀನನ್ನು ಧಾರ್ಮಿಕ ಮತ್ತು ಜನಸೇವೆಯ ಕೆಲಸಗಳಿಗೆ ಮಾತ್ರ ಬಳಸಬೇಕು. ಫಕೀರ್ ಮೊಹಮ್ಮದ್ ಅವರು ಈ ವಕ್ಫ್‌ನ ಮೊದಲ ಮುತವಲ್ಲಿ ಅಂದರೆ ಸಂರಕ್ಷಕರಾಗಿದ್ದು, ಈ ಹುದ್ದೆ ಕೇವಲ ರಕ್ತ ಸಂಬಂಧಿಗಳಿಗಷ್ಟೇ ಹೋಗುತ್ತದೆ.

ಫಕೀರ್ ಮೊಹಮ್ಮದ್ ಅವರ ಮರಣಾನಂತರ ಆವರ ಸೋದರ ಸಂಬಂಧಿಗಳಲ್ಲಿ ಒಬ್ಬರಾದ ಹಾಜಿ ರಂಜಾನ್ ಅವರು ಮುತವಲ್ಲಿಯಾಗಿ ಅಧಿಕಾರ ಪಡೆದರು. ರಂಜಾನ್ ಅವರ ನಂತರ ಅವರ ಪುತ್ರ ಹಾಜಿ ಮೊಹಮ್ಮದ್ ಫೈಕ್, ಅವರ ನಂತರ, ಅವರ ಅಳಿಯ ಮಹಮೂದ್ ಆಲಂ ಅಧಿಕಾರ ಸ್ವೀಕರಿಸಿದರು. 2009ರಲ್ಲಿ ಮಹಮೂದ್ ಅವರ ನಂತರ ಮುತವಲ್ಲಿಯಾಗಿ ಅಧಿಕಾರಕ್ಕೆ ಬಂದ ಮೊಹಮ್ಮದ್ ಅಸ್ಲಾಂ ಅವರು ಏನೋ ಅಸಾಧಾರಣವಾದುದನ್ನು ಗಮನಿಸಿದರು. ಮಹಮೂದ್ ಅವರು ಡಬ್ಲ್ಯುಎಚ್‌ಎಫ್‌ಎಂ ಆಸ್ತಿಯಲ್ಲಿ ಸ್ವಲ್ಪ ಭಾಗವನ್ನು- ಬಾಗ್ ಬಿಜೈಸಿಯಲ್ಲಿ 2.334 ಹೆಕ್ಟೇರ್ ಜಮೀನನ್ನು- ತಾನು 1991ರಲ್ಲಿ ಮರಣ ಹೊಂದಿದಾಗ ತನ್ನ ನಾಲ್ವರು ಮಕ್ಕಳಿಗೆ ವರ್ಗಾಯಿಸಿದ್ದು ಎಂಬ ಆರೋಪ. ಅಸ್ಲಾಂ ತಹಶೀಲ್ದಾರರ ನ್ಯಾಯಾಲಯದಲ್ಲಿ ಈ ವರ್ಗಾವಣೆಯನ್ನು ರದ್ದು ಮಾಡಬೇಕೆಂದು ಕೋರಿ ಫಿರ್ಯಾದಿ ದಾಖಲಿಸಿದರು. ವಿಷಯವು ಇತ್ಯರ್ಥವಾಗುವ ತನಕ ಈ ಜಮೀನಿನ ವಿಷಯದಲ್ಲಿ ಯಾವುದೇ ವ್ಯವಹಾರ ನಡೆಸದಂತೆ ನಿಷೇಧಿಸಿ ತಹಶೀಲ್ದಾರರು ಆದೇಶ ಹೊರಡಿಸಿದರು.

ಮಹಮೂದ್ ಅವರ ಮಕ್ಕಳಾದ ಮಹಫೂಝ್, ಜಾವೇದ್, ನೂರ್ ಮತ್ತು ಫಿರೋಜ್ ಈ ಜಮೀನಿಗೂ ಡಬ್ಲ್ಯುಎಚ್‌ಎಫ್‌ಎಂಗೂ ಸಂಬಂಧವಿಲ್ಲವೆಂದೂ, ಅದನ್ನು ಫೈಕ್ ಅವರು ತನ್ನ ವೈಯಕ್ತಿಕ ನೆಲೆಯಲ್ಲಿ ಅದನ್ನು ಮಹಮೂದ್ ಅವರಿಗೆ ವರ್ಗಾಯಿಸಿದ್ದರು ಎಂದು ವಾದಿಸಿದರು. ಈ ಜಮೀನು ಡಬ್ಲ್ಯುಎಚ್‌ಎಫ್‌ಎಂಗೆ ಸೇರಿದ್ದು ಎಂದು ಸೂಚಿಸುವ ಯಾವುದೇ ಕಂದಾಯ ದಾಖಲೆ ಇಲ್ಲ ಎಂಬ ನೆಲೆಯಲ್ಲಿ ಫೆಬ್ರವರಿ 2016ರಲ್ಲಿ ತಹಶೀಲ್ದಾರರು ಅವರ ಪರವಾಗಿ ತೀರ್ಪು ನೀಡಿದರು. ಫೈಕ್ ಅವರು ಈ ಜಮೀನನ್ನು ಮಹಮೂದ್ ಅವರಿಗೆ ನೀಡಿದ್ದಾರೆ ಎಂದು ಸಾಬೀತುಪಡಿಸುವ ಯಾವುದೇ ದಾಖಲೆಯನ್ನು ಆಲಂ ಸಹೋದರರು ಸಲ್ಲಿಸದೇ ಇದ್ದರೂ- ಅಸ್ಲಾಂ ಅವರು ಸಲ್ಲಿಸಿದ, ಡಬ್ಲ್ಯುಎಚ್‌ಎಫ್‌ಎಂ ಸ್ಥಾಪನೆಗೆ ಕಾರಣವಾದ ಫಕೀರ್ ಮೊಹಮ್ಮದ್ ಅವರ ವಕ್ಫ್‌ನಾಮಾವನ್ನು- ಅದು ತೊಂಬತ್ತು ವರ್ಷ ಹಳೆಯ ದಾಖಲೆಯ ಫೋಟೊಕಾಪಿ ಎಂಬ ನೆಲೆಯಲ್ಲಿ- ಪರಿಗಣಿಸಲು ತಹಶೀಲ್ದಾರರು ನಿರಾಕರಿಸಿದರು.

ಆ ಹೊತ್ತಿನಲ್ಲಿ ಅಸ್ಲಾಂ ಅವರೂ ಮರಣ ಹೊಂದಿದ್ದರು ಮತ್ತು ಅವರ ಜಾಗದಲ್ಲಿ 2012ರಲ್ಲಿ ನೂರ್ ಆಲಂ ಅವರು ಮುತವಲ್ಲಿಯಾಗಿದ್ದರು. ಅಸ್ಲಾಂ ಅವರ ಪುತ್ರ ಮೊಹಮ್ಮದ್ ನಯೀಂ ಅವರು ತಹಶೀಲ್ದಾರರ ನಿರ್ಧಾರದ ವಿರುದ್ಧ ಹೆಚ್ಚುವರಿ ಕಮೀಷನರರ ಮುಂದೆ ಮೇಲ್ಮನವಿ ಸಲ್ಲಿಸಿದರು. ಸೆಪ್ಟೆಂಬರ್ 2017ರಲ್ಲಿ ಹೆಚ್ಚುವರಿ ಕಮೀಷನರರು, ತಾನು ಈ ಮೇಲ್ಮನವಿಯನ್ನು ಪರಿಶೀಲಿಸುವ ತನಕ ಜಮೀನಿನ ವಿಷಯದಲ್ಲಿ ಯಥಾಸ್ಥಿತಿ ಕಾಪಾಡಬೇಕೆಂದು ಹೇಳಿ ಆದೇಶ ಹೊರಡಿಸಿದರು. ಹೀಗಿದ್ದರೂ, ಎರಡು ತಿಂಗಳುಗಳ ನಂತರ ಆಲಂ ಸಹೋದರರು ಪ್ಲಾಟ್ 131ರಲ್ಲಿ ತಮ್ಮ ಪಾಲನ್ನು ಟ್ರಸ್ಟಿಗೆ ಮಾರಿದ್ದ ತಲೆತಪ್ಪಿಸಿಕೊಂಡ ಆರೋಪಿ ಹರೀಶ್ ಪಾಠಕ್ ಮತ್ತು ಆತನ ಪತ್ನಿ ಕುಸುಮ್ ಎಂಬವರಿಗೆ ಮಾರುಕಟ್ಟೆ ಬೆಲೆಯಾದ 2.15 ಕೋಟಿ ರೂ.ಗಳಿಗೆ ಸ್ವಲ್ಪ ಕಡಿಮೆಯಲ್ಲಿ, ಎಂದರೆ ಎರಡು ಕೋಟಿ ರೂ.ಗಳಿಗೆ ಮಾರಾಟ ಮಾಡಿದರು.

ಮಾರ್ಚ್ 2018ರಲ್ಲಿ ಕಾನೂನು ಕಾರ್ಯದರ್ಶಿಯ ಆದೇಶದಂತೆ ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಸ್ಥಳೀಯ ಸರ್ಕಲ್ ಇನ್ಸ್‌ಪೆಕ್ಟ್ಟರ್, ಬಾಗ್ ಬಿಜೈಸಿಯ ಈ ಜಮೀನು ನಿಜವಾಗಿಯೂ ಎಂಡೋಮೆಂಟಿನ ಭಾಗ ಎಂದು ವರದಿ ಸಲ್ಲಿಸಿದರು. ಕಾನೂನು ಕಾರ್ಯದರ್ಶಿಯವರು ಈ ವರದಿಯನ್ನು ವಕ್ಫ್ ಬೋರ್ಡಿನ ಅಧ್ಯಕ್ಷರಿಗೆ ಕಳುಹಿಸಿ ಈ ಜಮೀನನ್ನು ಡಬ್ಲ್ಯುಎಚ್‌ಎಫ್‌ಎಂ ಹೆಸರಿಗೆ ನೋಂದಾಯಿಸದೆ ಆಲಂಗಳ ಹೆಸರಿಗೆ ಏಕೆ ನೋಂದಾಯಿಸಲಾಗಿದೆ ಎಂದು ಸ್ಪಷ್ಟೀಕರಣ ಕೇಳಿದರು. ಹೀಗಿದ್ದರೂ ಹೆಚ್ಚುವರಿ ಕಮೀಷನರರು ಮಾರ್ಚ್ 2020ರಲ್ಲಿ ನಯೀಂ ಮೇಲ್ಮನವಿಯನ್ನು ವಜಾ ಮಾಡಿದರು. ನಯೀಂ ಅವರು ಮುತವಲ್ಲಿ ಅಲ್ಲದಿರುವುದರಿಂದ ಅವರಿಗೆ ಪ್ರಶ್ನಿಸುವ ಅಧಿಕಾರವಿಲ್ಲ ಎಂದು ಹೆಚ್ಚುವರಿ ಕಮೀಷನರರು ತೀರ್ಮಾನ ಮಾಡಿದರು. ಏನಿದ್ದರೂ ತಹಶೀಲ್ದಾರರ ಆದೇಶವನ್ನು ಪ್ರಶ್ನಿಸುವಂತಿಲ್ಲ, ಏಕೆಂದರೆ ಅದು ಒಂದು ಆಡಳಿತಾತ್ಮಕ ಆದೇಶವಾಗಿತ್ತು. ಅವರು ಸರ್ಕಲ್ ಇನ್‌ಸ್ಪೆಕ್ಟರ್ ವರದಿಯ ಉಲ್ಲೇಖವನ್ನೇ ಮಾಡಲಿಲ್ಲ. ಮೂರು ತಿಂಗಳುಗಳ ನಂತರ ವಕ್ಫ್ ಬೋರ್ಡ್ ಈ ವರದಿಗೆ ತದ್ವಿರುದ್ಧವಾಗಿ ಆದೇಶ ಹೊರಡಿಸಿತು. ಜಮೀನು ಡಬ್ಲ್ಯುಎಚ್‌ಎಫ್‌ಎಂಗೆ ಸೇರಿದೆ ಎಂದು ಸ್ಥಾಪಿಸುವ ಯಾವುದೂ ತನ್ನ ದಾಖಲೆಯಲ್ಲಿ ಇಲ್ಲ ಎಂದು ಅದು ಹೇಳಿತು.

ಹೆಚ್ಚುವರಿ ಕಮೀಷನರರ ಆದೇಶದ ಬೆನ್ನಲ್ಲೇ ನಯೀಂ ಅವರ ಮಾವ ಮೊಹಮ್ಮದ್ ಅಯೂಬ್ ಅವರು- ಜಮೀನನ್ನು ಪಾಠಕ್‌ಗಳಿಗೆ ಮಾರಾಟ ಮಾಡಿರುವುದನ್ನು ಪ್ರಶ್ನಿಸಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಈ ಪ್ರಕರಣ ಇನ್ನೂ ಬಾಕಿ ಇದೆ. ಇದೇ ಹೊತ್ತಿಗೆ ಪಾಠಕ್‌ಗಳು ಜಮೀನನ್ನು ತಮ್ಮ ಹೆಸರಿಗೆ ಮ್ಯುಟೇಶನ್ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದರು. ಆದರೆ ನೈಬ್ (ಉಪ) ತಹಶೀಲ್ದಾರ್ ಹೃದಯ್ ರಾಮ್ ತಿವಾರಿ ಯಾವುದೇ ನಿರ್ಧಾರ ಮಾಡದೆ ಕುಳಿತಿದ್ದರು. ಪಾಠಕ್‌ಗಳು ಈ ಪ್ರಕರಣವನ್ನು ಬೇರೆ ಅಧಿಕಾರಿಗೆ ವರ್ಗಾಯಿಸುವಂತೆ ಕೋರಿ 2018ರಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಫಿರ್ಯಾದಿ ನೀಡಿದ್ದರು. ಆದರೆ ಮ್ಯಾಜಿಸ್ಟ್ರೇಟರು ಮಧ್ಯ ಪ್ರವೇಶ ಮಾಡಲು ನಿರಾಕರಿಸಿದರು. ಸೆಪ್ಟೆಂಬರ್ 17. 2019ರಲ್ಲಿ ಪಾಠಕ್‌ಗಳು ಎರಡು ಕೋಟಿ ರೂ.ಗಳಿಗೆ ಜಾಗವನ್ನು ಮಾರಾಟ ಮಾಡಲು ಇತರ ಒಂಭತ್ತು ಮಂದಿಯ ಜೊತೆಗೆ ಒಪ್ಪಂದ ಮಾಡಿಕೊಂಡರು.

ಇದು ಇನ್ನಷ್ಟು ಉಲ್ಬಣಗೊಳ್ಳುವ ಸಮಯದಲ್ಲಿಯೇ ಆರ್‌ಜೆಟಿಕೆಯ ಪ್ರವೇಶವಾಯಿತು. ಮಾರ್ಚ್ 18, 2021ರಲ್ಲಿ ಪಾಠಕ್‌ಗಳು ಹಿಂದಿನ ಒಪ್ಪಂದಗಳನ್ನು ರದ್ದು ಮಾಡಿ 1.037 ಹೆಕ್ಟೇರ್ ಜಮೀನನ್ನು ಮಾರುಕಟ್ಟೆ ಬೆಲೆಯಾದ 4.98 ಕೋಟಿ ರೂ.ಗಳಿಗೆ ಬದಲಾಗಿ ಎಂಟು ಕೋಟಿ ರೂ.ಗಳಿಗೆ ಟ್ರಸ್ಟಿಗೆ ಮಾರಿದರು. ಅವರು 1.208 ಹೆಕ್ಟೇರ್ ಜಮೀನನ್ನು ಬ್ರಿಜ್ ಮೋಹನ್ ದಾಸ್ ಅವರ ಹತ್ತಿರದ ಗೆಳೆಯ ಮತ್ತು ಆಸ್ತಿ ವ್ಯವಹಾರಸ್ಥ ಸುಲ್ತಾನ್ ಅನ್ಸಾರಿಗೆ ಮಾರಿದರು. ಈತನ ತಂದೆ ಹಿಂದೆ ಪಾಠಕ್‌ಗಳು ಮತ್ತು ರವಿ ಮೋಹನ್ ತಿವಾರಿಯ ಜೊತೆ ವ್ಯಾಪಾರದಲ್ಲಿ ಪಾಲುದಾರರಾಗಿ ಇದ್ದವರು. ಸಂಜಯ್ ಸಿಂಗ್ ಅವರ ಪ್ರಕಾರ ತಿವಾರಿ ಸಿತ್ಲಾ ಪಾಠಕ್‌ರ ಬಾವನಾಗಿದ್ದು, ಅವರ ಮಗಳ ಮದುವೆ ರಿಶಿಕೇಶ್ ಉಪಾಧ್ಯಾಯರ ಮಗನ ಜೊತೆ ನಡೆದಿದೆ. ಈ ಜಮೀನನ್ನು 2017ರಲ್ಲಿ ಇಡೀ ಜಮೀನಿಗೆ ನೀಡಿದ್ದ ಎರಡು ಕೋಟಿ ರೂ.ಗಳ ಬೆಲೆಯಲ್ಲಿ ಮೂರು ಪಟ್ಟು ಕಡಿಮೆಗೆ ಮಾರಲಾಯಿತು. ಆಗ ಈ ಜಮೀನಿನ ಬೆಲೆ 5.8 ಕೋಟಿ ರೂ.ಗಳಿಗೆ ಏರಿತ್ತು. ಅನ್ಸಾರಿ ಮತ್ತು ತಿವಾರಿ ಸೇರಿ 18.5 ಕೋಟಿ ರೂ.ಗಳ ಭಾರೀ ಬೆಲೆಗೆ ಆರ್‌ಜೆಟಿಕೆಗೆ ಮಾರಿದರು. ಪಾಠಕ್‌ಗಳು 42.72 ಲಕ್ಷ ರೂ. ಬೆಲೆಬಾಳುವ ಉಳಿದ 890 ಚದರ ಮೀಟರ್ ಜಮೀನನ್ನು ಹಿಂದೆ ಒಪ್ಪಂದ ಮಾಡಿಕೊಂಡಿದ್ದ ಒಂಬತ್ತು ಮಂದಿಯಲ್ಲಿ ಒಬ್ಬರಾದ ರವೀಂದ್ರ ಕುಮಾರ್ ಎಂಬವರಿಗೆ ದಾನವಾಗಿ ಕೊಟ್ಟರು. ಈ ಎಲ್ಲಾ ವ್ಯವಹಾರಗಳಲ್ಲಿ ಸಾಕ್ಷಿಯಾಗಿದ್ದವರು ರಿಶಿಕೇಶ್ ಮತ್ತು ಅನಿಲ್ ಮಿಶ್ರಾ. ಏಪ್ರಿಲ್ 19ರಂದು ಸಹಾಯಕ ತಹಶೀಲ್ದಾರ ಹೃದಯ ರಾಮ್ ಕೊನೆಗೆ ಮಾರಾಟ ಮಾಡಿದ ಒಂದು ತಿಂಗಳ ಬಳಿಕ ಜಮೀನಿನ ಮಾಲೀಕತ್ವವನ್ನು ಪಾಠಕ್‌ಗಳಿಗೆ ವರ್ಗಾಯಿಸಿದರು. ಅದನ್ನು ಅವರು ಸರ್ಕಲ್ ಇನ್‌ಸ್ಪೆಕ್ಟರ್ ವರದಿಯ ಉಲ್ಲೇಖವನ್ನೇ ಮಾಡದೆ ವಕ್ಫ್ ಬೋರ್ಡಿನ ವರದಿಯ ಅನುಸಾರ ಮಾಡಿದ್ದರು.

ನಯೀಂ ಮತ್ತು 2017ರಲ್ಲಿ ಭೂಮಿಯ ಉಸ್ತುವಾರಿ ನೋಡಿಕೊಳ್ಳಲು ಆಯ್ಕೆಯಾಗಿದ್ದ ಅವರ ಸೋದರ ಸಂಬಂಧಿ ವಹೀದ್ ಅಹ್ಮದ್ ಜಮೀನಿನ ಮಾರಾಟವು ಹೆಚ್ಚುವರಿ ಕಮೀಷನರರ ತಡೆಯಾಜ್ಞೆಯನ್ನು ಉಲ್ಲಂಘಿಸಿದೆ ಎಂದು ವಾದಿಸಿದ್ದರು. “ಜಮೀನಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶವನ್ನು ಹೊರಡಿಸಲಾಗಿತ್ತಾದರೂ ಖಾತೆದಾರರಿಗೆ ಜಮೀನು ಮಾರದಂತೆ ಕೊಳ್ಳದಂತೆ ನಿಷೇಧಿಸಿರಲಿಲ್ಲ” ಎಂದು ಹೃದಯ್ ರಾಮ್ ಪ್ರತಿಕ್ರಿಯಿಸಿದರು. ಈ ಕೊಳ್ಳುವುದು ಮತ್ತು ಮಾರುವುದನ್ನು ನಿಷೇಧಿಸುವುದೇ ನಿಜವಾಗಿಯೂ ಯಥಾಸ್ಥಿತಿ ಕಾಪಾಡುವುದರ ಅರ್ಥ ಎಂದು ಹಲವು ವಕೀಲರು ನನಗೆ ತಿಳಿಸಿದರು.

ಒಂದುವೇಳೆ ಜಮೀನು ಡಬ್ಲ್ಯುಎಚ್‌ಎಫ್‌ಎಂಗೆ ಸೇರಿದ್ದು ಅಲ್ಲವೇ ಆಗಿದ್ದರೂ, ಮಹಮೂದ್ ಅವರು ಫೈಕ್ ಅವರ ಕಾನೂನುಬದ್ಧ ವಾರಸುದಾರರು ಎಂದು ಒಪ್ಪಿಕೊಳ್ಳಲು ಯಾವುದೇ ಕಾರಣಗಳಿಲ್ಲ ಎಂಬ ನೆಲೆಯಲ್ಲಿ ನಯೀಂ ಮತ್ತು ವಹೀದ್ ವಾದಿಸಿದ್ದರು. ಏನಿದ್ದರೂ ಫೈಕ್ ಅವರಿಗೆ ಇಬ್ಬರು ಸಹೋದರರು ಇದ್ದಿದ್ದು, ಅವರಿಗೆ ಆಸ್ತಿಯ ಮೇಲೆ ಮೊದಲ ಹಕ್ಕಿತ್ತು. ವಾರಸುದಾರಿಕೆಯ ಸರಣಿಯನ್ನು ನಿರ್ಧರಿಸಲು ತೀರಾ ತಡವಾಗಿದೆ ಎಂದು ತೀರ್ಪು ನೀಡಿದ ಹೃದಯ್ ರಾಮ್, “ಸಮಕಾಲೀನ ನಿಯಮಗಳ ಪ್ರಕಾರ” ಮಹಮೂದ್ ಅವರೇ ಫೈಕ್ ಅವರ ನಿಜವಾದ ಉತ್ತರಾಧಿಕಾರಿಯಾಗಿರುವ ಸಾಧ್ಯತೆ ಇದೆ ಎಂಬ ಊಹೆಯನ್ನು ಮಾಡಿದರು.

ಫೆಬ್ರವರಿ 2020ರಲ್ಲಿ ಹೃದಯ್ ರಾಮ್ ಅವರು ತನ್ನನ್ನು ಭಡ್ತಿಯಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ದೂರು ಅರ್ಜಿಯನ್ನು ಸಲ್ಲಿಸಿದ್ದರು. ಅದನ್ನು ರಾಜ್ಯದ ಕಂದಾಯ ಮಂಡಳಿಯ ಕಾರ್ಯದರ್ಶಿಯವರು ವಜಾ ಮಾಡಿದ್ದರು. ಎರಡು ತಿಂಗಳ ನಂತರ ಅವರ ಪ್ರಶ್ನಾರ್ಹ ತೀರ್ಪಿನ ನಂತರ ಅವರಿಗೆ ತಹಶೀಲ್ದಾರ್ ಹುದ್ದೆಗೆ ಭಡ್ತಿ ನೀಡಲಾಯಿತು. ಇದಾದ ತಕ್ಷಣವೇ ಆರ್‌ಜೆಟಿಕೆಯು ಬಾಗ್ ಬಿಜೈಸಿಯ ಜಮೀನಿನ ಭಾಗಗಳನ್ನು, ನಗರದ ಬೇರೆ ಕಡೆಗಳಲ್ಲಿ ತಾವು ಹಿಂದೆ ವ್ಯವಹಾರ ಮಾಡಿದ್ದ ಬಜರಂಗ ದಾಸ್ ಮತ್ತು ತ್ರಿಪಾಠಿಗಳಂತಹ ಅರ್ಚಕರಿಗೆ ದಾನ ಮಾಡಲು ಆರಂಭಿಸಿತು. ಹಾಗಿದ್ದರೂ, ಆದು ತನ್ನ ಹೆಸರಿನಲ್ಲಿ ಆ ಜಾಗದ ಮ್ಯುಟೇಶನ್ ಪಡೆಯಲು ಸಾಧ್ಯವಾದದ್ದು ಡಿಸೆಂಬರ್ 14, 2022ರಂದೇ.

ಕೋಟ್ ರಾಮಚಂದ್ರದಲ್ಲಿನ ಪ್ಲಾಟ್ 36ರಂತೆಯೇ ತಹಶೀಲ್ದಾರ್ ರಾಜ್ ಕುಮಾರ್ ಪಾಂಡೆ ಹಲವು ಮ್ಯುಟೇಷನ್‌ಗಳು ಅಥವಾ ಪಾಲುಪಟ್ಟಿಗಳು ಒಂದೇ ಸಲಕ್ಕೆ ನಡೆಯಲು ಅವಕಾಶ ಮಾಡಿಕೊಟ್ಟರು; ಪಾಠಕ್‌ಗಳಿಂದ ಸುಲ್ತಾನ್ ಅನ್ಸಾರಿ ಮತ್ತು ರವಿ ಮೋಹನ್ ತಿವಾರಿಗೆ ಮತ್ತು ಅವರಿಂದ ಆರ್‌ಜೆಕೆಟಿಗೆ. ವಹೀದ್‌ರ ಸಹೋದರ ಫರೀದ್ ಆಹ್ಮದ್ ಅವರು ಈ ಕುರಿತು ಆಕ್ಷೇಪಿಸಿದ್ದರು ಮತ್ತು ಮ್ಯುಟೇಶನ್ ಅಥವಾ ಪಾಲುಪಟ್ಟಿ ಮುಗಿಯುವ ಮೊದಲು ಜಮೀನನ್ನು ಮರುಮಾರಾಟ ಮಾಡಬಾರದೆಂದು ಅವರು ವಾದಿಸಿದ್ದರು. ಪಾಠಕ್‌ಗಳು ನೇರವಾಗಿ ಜಮೀನನ್ನು ಮಾರಿದ್ದ ಪ್ರಕರಣದಲ್ಲಿ ವ್ಯವಹರಿಸುವಾಗ ಆಕ್ಷೇಪವನ್ನು ಅಸಿಂಧು ಎಂದು ಕರೆದ ಪಾಂಡೆ, ಅದೇ ಜಮೀನಿನ ವ್ಯವಹಾರದಲ್ಲಿ ಮಧ್ಯವರ್ತಿಗಳು ಶಾಮೀಲಾಗಿ ಇದ್ದಾಗ ಅದನ್ನು ಕಡೆಗಣಿಸಿದರು. ಆಲಂ ಮತ್ತು ಪಾಠಕ್‌ಗಳ ನಡುವಿನ ವ್ಯವಹಾರದ ವಿರುದ್ಧ ಮೂರು ತಿಂಗಳುಗಳ ಹಿಂದೆ ತನಗಿಂತ ಮೇಲಿನ ದರ್ಜೆಯಲ್ಲಿ ಇದ್ದ ಸ್ಥಾನೀಯ ಮ್ಯಾಜಿಸ್ಟ್ರೇಟ್ ನೀಡಿದ್ದ ತಡೆಯಾಜ್ಞೆಯನ್ನೂ ಪಾಂಡೆ ಕಡೆಗಣಿಸಿದ್ದರು. ಆರು ತಿಂಳುಗಳ ಬಳಿಕ ಪಾಂಡೆಗೆ ಉಪ ಜಿಲ್ಲಾಧಿಕಾರಿಯಾಗಿ ಭಡ್ತಿ ನೀಡಲಾಯಿತು.

ಈಗ ನಲ್ವತ್ತರ ಹರೆಯದಲ್ಲಿರುವ ವಹೀದ್ ಬಾಬ್ರಿ ಮಸೀದಿಯನ್ನು ನೆಲಸಮ ಮಾಡಿದಾಗ ಹದಿಹರೆಯದವರಾಗಿದ್ದರು. ಅವರ ಕುಟುಂಬ ಮಸೀದಿಯಿಂದ ಹರದಾರಿ ದೂರದಲ್ಲೇ ವಾಸವಾಗಿತ್ತು. ಮಸೀದಿ ನೆಲಸಮವಾದ ನಂತರ ಹಿಂದೂ ಗುಂಪುಗಳು ಈ ನೆರೆಹೊರೆಯ ಮನೆಮನೆಗೆ ಹೋಗಿ ಮುಸ್ಲಿಮರನ್ನು ಕೊಲ್ಲಲು ಮತ್ತು ಅವರ ಮನೆಗಳಿಗೆ ಬೆಂಕಿ ಹಚ್ಚಲು ತೊಡಗಿದ್ದವು. “ಒಬ್ಬ ವ್ಯಕ್ತಿಯ ಕೈಯಲ್ಲಿ ಪೊಲೀಸ್ ಬಿಗಿಲು (ಸೀಟಿ) ಒಂದು ಇತ್ತು. ಒಂದು ಸುಳಿವು ಸಿಕ್ಕಿದ ಕೂಡಲೇ ಗುಂಪು ಹಿಂಸಾಚಾರದಲ್ಲಿ ತೊಡಗುತ್ತಿತ್ತು ಮತ್ತು ಇನ್ನೊಂದು ಸುಳಿವಿಗೆ ಅವರೆಲ್ಲರೂ ಮಾಯವಾಗುತ್ತಿದ್ದರು” ಎಂದವರು ನೆನಪಿಸಿಕೊಳ್ಳುತ್ತಾರೆ. ಅವರ ಇಬ್ಬರು ಮಾವಂದಿರು, ಒಬ್ಬ ಸೋದರ ಸಂಬಂಧಿ ಮತ್ತೊಬ್ಬ ಅಳಿಯ ವಹೀದ್ ಅವರ ಮನೆಯ ಮುಂದೆಯೇ ಕೊಲೆಯಾದರು. ಅವರ ಹಿರಿಯರ ಮನೆ ಪೊಲೀಸ್ ಠಾಣೆಯ ಪಕ್ಕದಲ್ಲೇ ಇತ್ತು. ವಹೀದ್ ಮತ್ತು ಅವರ ಕುಟುಂಬದವರನ್ನು ಪೊಲೀಸ್ ಅಧಿಕಾರಿಯೊಬ್ಬರು ಅಡಗಿಸಿ ಇಟ್ಟಿದ್ದರಿಂದ ಬದುಕಿ ಉಳಿದರು.

ರಾಮ ಜನ್ಮಭೂಮಿಯೆಂದು ಹೇಳುವ ವಾರಸುದಾರರು ಅವರ ಕುಟುಂಬವನ್ನು ಮೂರು ದಶಕಗಳ ಹಿಂದೆ ಹರಿದುಹಂಚಿದ್ದರು. ಈಗ ಅವರ ಹಿರಿಯರ ಆಸ್ತಿಯನ್ನೂ ಕಿತ್ತುಕೊಂಡಿದ್ದಾರೆ. ಸಿವಿಲ್ ವಕೀಲರಾಗಿರುವ ವಹೀದ್ ನ್ಯಾಯಾಲಯಗಳಲ್ಲಿ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. “ನನಗೆ ಸಿವಿಲ್ ನ್ಯಾಯಾಲಯಗಳಿಂದ ಯಾವ ಆಶಾವಾದವೂ ಇಲ್ಲ. ಇಪ್ಪತ್ತೈದು ಶೇಕಡಾ ನಿರೀಕ್ಷೆ ಇದೆ ಎಂದು ಹೇಳೋಣ. ಆದರೆ ಹೋಲಿಕೆಯಲ್ಲಿ ಮೇಲಿನ ನ್ಯಾಯಾಲಯಗಳು ಹೆಚ್ಚು ನ್ಯಾಯಸಮ್ಮತವಾಗಿವೆ” ಎಂದು ಅವರು ನನಗೆ ಹೇಳಿದರು- “ಆದರೆ, ಇಲ್ಲಿನ ನ್ಯಾಯಾಲಯಗಳು ನ್ಯಾಯವನ್ನು ತಿರಸ್ಕರಿಸಿದರೆ ಮಾತ್ರವೇ ನಾನು ಮೇಲಿನ ನ್ಯಾಯಾಲಯಕ್ಕೆ ಹೋಗಲು ಸಾಧ್ಯ. ಆದರೆ ನನ್ನ ಫಿರ್ಯಾದಿಯು ಒಂದು ವರ್ಷದಿಂದ ಇನ್ನೂ ಹಾಗೆಯೇ ಬಾಕಿ ಉಳಿದಿದೆ.” ಜಿಲ್ಲಾ ನ್ಯಾಯಾಲಯದಲ್ಲಿ ಅವರ ಜೊತೆಗೆ ಕೆಲಸದ ಸ್ಥಳವನ್ನು ಹಂಚಿಕೊಳ್ಳುವ ವಕೀಲರ ಸಣ್ಣ ಗುಂಪೊಂದು ಅವರ ಸಮಸ್ಯೆಯ ಬಗ್ಗೆ ಸಹಾನುಭೂತಿ ಹೊಂದಿದ್ದರು. “ಇಲ್ಲಿ ಬಿಜೆಪಿ ಸರಕಾರ ಇರುವತನಕ ಯಾವುದೇ ಆಶಾವಾದ ಇಲ್ಲ” ಎಂದು ಅವರಲ್ಲಿ ಒಬ್ಬರು ನನಗೆ ಹೇಳಿದರು. ಆದರೆ ಈ ಭೂಮಿ ಹಸ್ತಾಂತರಗಳ ಕುರಿತು ಮುಂದೊಂದು ದಿನ ತಿರುವುಮುರುವು ಆಗುತ್ತದೆ ಎಂಬ ಬಗ್ಗೆ ಅವರು ಆಶಾವಾದ ಹೊಂದಿದ್ದರು. “ಒಂದು ದಶಕ, ಎರಡು ದಶಕ, ಮೂರು ದಶಕಗಳೇ ಕಳೆಯಬಹುದು. ಆದರೆ, ಮುಂದೆ ಒಂದುದಿನ ಈ ವಿಕ್ರಯಪತ್ರಗಳು ತಿರುವುಮುರುವಾಗಲಿವೆ. ಇಲ್ಲಿ ನಡೆಸಲಾಗಿರುವ ಕಾನೂನುಬಾಹಿರ ಕೆಲಸಗಳು ಅಗಾಧ” ಎಂದು ಅವರಲ್ಲೊಬ್ಬರು ನನಗೆ ಹೇಳಿದರು.

ಒಂದು ರಸ್ತೆ ಅಪಘಾತದಲ್ಲಿ ಸಿಲುಕಿಕೊಂಡ ಮೇಲೆ ಜುಲೈ 2022ರಿಂದ ಹಾಸಿಗೆ ಹಿಡಿದಿರುವ ನಯೀಂ ಯಾವುದೇ ಆಶಾವಾದ ಹೊಂದಿಲ್ಲ. “ನಾವು ಮುಂದೆ ಮುಂದೆ ಹೋಗುತ್ತಾ ಇರಲು ನಮಗೆ ತಾಕತ್ತಿಲ್ಲ. ನಾವು ಹೋದಲ್ಲೆಲ್ಲಾ ನಮ್ಮ ವಿರುದ್ಧವೇ ತೀರ್ಪುಗಳು ಬರುತ್ತಿವೆ. ನಮ್ಮ ವಿರುದ್ಧ ಎಂತಹ ದೊಡ್ಡ ಮೋಸ ನಡೆಸಲಾಗಿದೆ ಎಂದು ನಾನು ನಿಮಗೆ ಹೇಳಬಹುದು. ಆದರೆ, ಹೊಣೆಗಾರಿಕೆ ವಕ್ಫ್ ಮಂಡಳಿಯ ಬಾಗಿಲಲ್ಲಿ ಬಂದು ನಿಲ್ಲುತ್ತದೆ. ಅವರು ಈ ಆಸ್ತಿಯನ್ನು ರಕ್ಷಿಸುವವರಾಗಬೇಕಿತ್ತು; ಈ ವಕ್ಫ್ ಟ್ರಸ್ಟನ್ನು ರಕ್ಷಿಸಲು ಅವರೇ ಓಡಾಡಬೇಕಿತ್ತು. ಆದರೆ, ಇದೊಂದು ವಕ್ಫ್ ಎಂದು ಅವರೇ ಒಪ್ಪಿಕೊಳ್ಳುತ್ತಿಲ್ಲ. ನಾವೇನು ಮಾಡಲು ಸಾಧ್ಯ?” ಎಂದು ಅವರು ನನ್ನಲ್ಲಿ ಹೇಳಿದರು.

ಅಕ್ಟೋಬರ್ 2021ರಲ್ಲಿ ಪ್ರತಿಪಕ್ಷ ನಾಯಕರು ಆರ್‌ಜೆಟಿಕೆಯ ಜಮೀನು ಅವ್ಯವಹಾರಗಳ ಕುರಿತು ಧ್ವನಿ ಎತ್ತಲು ಆರಂಭಿಸಿದ ಕೆಲವು ತಿಂಗಳುಗಳ ನಂತರ, ತನ್ನ ಲೆಕ್ಕಪತ್ರ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡುವಂತೆ ಟ್ರಸ್ಟ್ ಟಾಟಾ ಕನ್ಸಲ್ಟೆನ್ಸಿ ಸರ್ವಿಸನ್ನು (ಟಿಸಿಎಸ್) ಕೇಳಿಕೊಂಡಿತು. ಆದರೆ, ಆಗೊಮ್ಮೆ, ಈಗೊಮ್ಮೆ ಬನ್ಸಾಲ್, ಆರ್‌ಜೆಟಿಕೆಯು ಎಷ್ಟು ಹಣ ಸಂಗ್ರಹಿಸಿದೆ ಎಂದು ಮಾಧ್ಯಮಗಳಲ್ಲಿ ಹೇಳಿರುವುದನ್ನು ಬಿಟ್ಟರೆ, ಟ್ರಸ್ಟಿನ ಹಣಕಾಸು ವ್ಯವಹಾರಗಳ ಕುರಿತು ಯಾವುದೇ ಲೆಕ್ಕ ಸಿಗುವುದಿಲ್ಲ. ಉದಾಹರಣೆಗೆ ದೇವಾಲಯ ಸಂಕೀರ್ಣ ನಿರ್ಮಿಸುತ್ತಿರುವ ಟಾಟಾ ಕನ್‌ಸ್ಟ್ರಕ್ಷನ್ ಇಂಜಿನಿಯರ್ಸ್ ಮತ್ತು ಲಾರ್ಸನ್ ಎಂಡ್ ಟೂಬ್ರೋ ಎಂಬ ಎರಡು ನಿರ್ಮಾಣ ಸಂಸ್ಥೆಗಳಿಗೆ ಟ್ರಸ್ಟ್ ಎಷ್ಟು ಹಣ ಪಾವತಿ ಮಾಡುತ್ತಿದೆಯೆಂದು ಈ ತನಕ ಯಾರಿಗೂ ಗೊತ್ತಾಗಿಲ್ಲ. ಟ್ರಸ್ಟನ್ನು ಯಾವ ನಿಯಮಾವಳಿಗಳ ಮೂಲಕ ಸರಕಾರ ರೂಪಿಸಿದೆ ಎಂಬ ಮಾಹಿತಿ ಸಾರ್ವಜನಿಕರಿಗೆ ಲಭ್ಯವಿಲ್ಲ. ಟ್ರಸ್ಟಿನ ಸದಸ್ಯರನ್ನು ಯಾವ ಮಾನದಂಡದ ಮೇಲೆ ಆರಿಸಲಾಗಿದೆ ಅಥವಾ ಅವರಲ್ಲಿ ಪ್ರತಿಯೊಬ್ಬರೂ ಏನೇನು ಮಾಡುತ್ತಿದ್ದಾರೆ ಎಂಬುದೂ ಯಾರಿಗೂ ಗೊತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಹಲವು ಕಾರ್ಯಕರ್ತರು- ಆರೆಸ್ಸೆಸ್ ಸದಸ್ಯರೂ ಸೇರಿದಂತೆ ಮಾಹಿತಿ ಹಕ್ಕು ಕಾಯಿದೆಯ ಪ್ರಕಾರ ಮನವಿ ಮಾಡುತ್ತಲೇ ಇದ್ದಾರೆ. ಆದರೆ, ಪ್ರತಿಯೊಂದು ಸಲವೂ ಸರಕಾರ ಆರ್‌ಜೆಟಿಕೆಯನ್ನು ಪರಿಶೀಲನೆಯಿಂದ ರಕ್ಷಿಸುತ್ತಲೇ ಇದೆ.

ಫೆಬ್ರವರಿ 2021ರಂದು ಕೈಲಾಶ್ ಚಂದ್ರ ಮೂಂದ್ರಾ ಟ್ರಸ್ಟಿಗೆ ನೀಡಲಾಗಿರುವ ತೆರಿಗೆ ವಿನಾಯಿತಿಗಳ ಬಗ್ಗೆ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಅರ್ಜಿ ಹಾಕಿದರು. ಅರವತ್ತರ ಹರೆಯದಲ್ಲಿರುವ ಮೂಂದ್ರಾ ಒಬ್ಬರು ಚಾರ್ಟರ್ಡ್ ಅಕೌಂಟೆಂಟ್ ಮತ್ತು ರಾಮಜನ್ಮಭೂಮಿ ಅಭಿಯಾನದಲ್ಲಿ ಸಕ್ರಿಯರಾಗಿದ್ದ ಮಾಜಿ ಆರೆಸ್ಸೆಸ್ ಕಾರ್ಯಕರ್ತರೂ ಹೌದು. ಮೇ 2020ರಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಆರ್‌ಜೆಟಿಕೆಯನ್ನು, “ಐತಿಹಾಸಿಕ ಮಹತ್ವದ ಸ್ಥಳ ಮತ್ತು ಪ್ರಸಿದ್ಧವಾದ ಪೂಜಾಸ್ಥಳ” ಎಂದು ಘೋಷಿಸಿತ್ತು. ಆದಾಯ ತೆರಿಗೆ ಕಾಯಿದೆಯ ವಿಧಿ 80ಜಿ (2)(ಬಿ) ಪ್ರಕಾರ, “ಇಂತಹ ಮಂದಿರ, ಮಸೀದಿ, ಗುರುದ್ವಾರ, ಚರ್ಚ್ ಅಥವಾ ಇತರ ಸ್ಥಳಗಳನ್ನು ರಾಜ್ಯ ಅಥವ ರಾಜ್ಯಗಳಲ್ಲಿ ಪ್ರಖ್ಯಾತವಾದ ಐತಿಹಾಸಿಕ, ಪುರಾತತ್ವ ಮಹತ್ವ ಅಥವಾ ಕಲಾತ್ಮಕ ಮಹತ್ವದ ಸ್ಥಳ ಎಂದು ಗೆಜೆಟ್ ಪ್ರಕಟಣೆಯ ಮೂಲಕ ಘೋಷಿಸಲಾದ ಪೂಜಾಸ್ಥಳಗಳ ನವೀಕರಣಕ್ಕೆ ನೀಡಲಾಗುವ ದೇಣಿಗೆಗಳಿಗೆ” ತೆರಿಗೆ ವಿನಾಯಿತಿ ಇದೆ ಎಂದು ಇದೆ. ಇಂತಹ ವಿನಾಯಿತಿಗೆ ಪಾತ್ರವಾಗಲು ಅಂತಹ ಪೂಜಾಸ್ಥಳವು ಅದೇ ಕಾಯಿದೆಯ ವಿಧಿ12ಎ ಅನ್ವಯ ತನ್ನನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಅದಕ್ಕಾಗಿ ನಿಯಮಿತವಾಗಿ ಆಡಿಟ್ ವರದಿಗಳನ್ನು ಸಲ್ಲಿಸಬೇಕಾಗುತ್ತದೆ. ಈ ವಿಧಿಯ ಅಡಿಯಲ್ಲಿ ಆರ್‌ಜೆಟಿಕೆ ಸಲ್ಲಿಸಿರುವ ಎಲ್ಲಾ ದಾಖಲೆಗಳನ್ನು ಮೂಂದ್ರಾ ಕೇಳಿದ್ದರು. ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ)ಯು, ಈ ಟ್ರಸ್ಟ್ ಒಂದು ಸ್ವಾಯತ್ತ ಸಂಸ್ಥೆ, ಆದುದರಿಂದ ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಯಿಂದ ಹೊರಗಿದೆ ಎಂಬ ನೆಲೆಯಲ್ಲಿ ಮಾಹಿತಿ ನಿರಾಕರಿಸಿತು. ಅವರು ಮೇಲ್ಮನವಿ ಸಲ್ಲಿಸಿದಾಗ, “ಆರ್‌ಜೆಕೆಟಿಯು ಒಂದು ಸರಕಾರೇತರ ಸಂಘಟನೆ ಎಂದು ಹೇಳಬಹುದಾಗಿದ್ದು, ಅದು ಯಾವುದೇ ರೀತಿಯಲ್ಲಿ ಸರಕಾರದ ಹಣಕಾಸಿನ ಮೇಲೆ ಅವಲಂಬಿಸಿರುವುದಿಲ್ಲವಾದುದರಿಂದ ಅದು ಆರ್‌ಟಿಐ ಕಾಯಿದೆಯ ಅಡಿಯಲ್ಲಿ ಒಂದು ಸಾರ್ವಜನಿಕ ಪ್ರಾಧಿಕಾರದ ವ್ಯಾಪ್ತಿಗೆ ಬರುವುದಿಲ್ಲ” ಎಂದು ಅದು ಉತ್ತರಿಸಿತು.

ಮೂಂದ್ರಾ ಅವರಿಗೆ ಇದರ ಕುರಿತು ಒಂದು ಸರಳ ವಾದವಿತ್ತು. ಆರ್‌ಜೆಟಿಕೆಯು 3,400 ಕೋಟಿ ರೂ.ಗಳಷ್ಟು ಹಣವನ್ನು ಸಂಗ್ರಹಿಸಿದೆ. ಮತ್ತು ಕನಿಷ್ಪ ಶೇಕಡಾವಾರು ದರವನ್ನು ಲೆಕ್ಕ ಹಾಕಿದರೂ ಸರಕಾರಕ್ಕೆ 340 ಕೋಟಿ ರೂ.ಗಳನ್ನು ಪಾವತಿಸಬೇಕಾಗಿತ್ತು. ಆದುದರಿಂದ ಸಿಬಿಡಿಟಿಯು ಟ್ರಸ್ಟಿಗೆ ತೆರಿಗೆ ವಿನಾಯಿತಿ ನೀಡಿದೆ. ಇಲ್ಲವಾದಲ್ಲಿ ಅದು ಅಷ್ಟೊಂದು ಹಣವನ್ನು ಸಂಗ್ರಹಿಸಲು ಸಾಧ್ಯವಿರಲಿಲ್ಲ ಎಂದು ಅವರು ಮೇಲ್ಮನವಿ ಪ್ರಾಧಿಕಾರಕ್ಕೆ ಹೇಳಿದರು. “ದೇವಾಲಯಗಳ ದುರಸ್ತಿಗೆ ಮತ್ತು ನವೀಕರಣಕ್ಕೆ ಮಾತ್ರವೇ ವಿನಾಯಿತಿ ನೀಡುವ ನಿಯಮವಿದೆ” ಎಂದು ಅವರು ನನಗೆ ಹೇಳಿದರು; “ರಾಮ ಮಂದಿರದಲ್ಲಿ ದುರಸ್ತಿ, ನವೀಕರಣ ಎಲ್ಲಿದೆ? ಅದು ಸಂಪೂರ್ಣವಾಗಿ ಹೊಸ ನಿರ್ಮಾಣ. ಹೊಸ ನಿರ್ಮಾಣಕ್ಕೆ ತೆರಿಗೆ ವಿನಾಯಿತಿ ನೀಡಲು ಹೇಗೆ ಸಾಧ್ಯ?” ಎಂದು ಹೇಳಿ ಮೂಂದ್ರಾ ಅವರು ನನಗೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೀಡಿದ್ದ ಐದು ಲಕ್ಷ ರೂ. ದೇಣಿಗೆಯ ರಶೀದಿ ತೋರಿಸಿದರು. ಅದರಲ್ಲಿ “ರಾಮಜನ್ಮಭೂಮಿ ದೇವಾಲಯದ ನವೀಕರಣಕ್ಕೆ ಹಣ ನೀಡಲಾಗಿದೆ” ಎಂದು ಸ್ಪಷ್ಟವಾಗಿ ಬರೆಯಲಾಗಿತ್ತು.

ಕೇಂದ್ರ ಮಾಹಿತಿ ಆಯೋಗವು ಆರ್‌ಜೆಟಿಕೆಯು ಸಾರ್ವಜನಿಕ ಪ್ರಾಧಿಕಾರವಲ್ಲ ಎಂಬ ಸಿಡಿಬಿಟಿಯ ವಾದವನ್ನು ತಿರಸ್ಕರಿಸಿ, ಮೂಂದ್ರಾ ಮಂಡಳಿಗೆ ಪ್ರಶ್ನೆ ಕೇಳುತ್ತಿದ್ದಾರೆಯೇ ಹೊರತು ಟ್ರಸ್ಟಿಗೆ ಅಲ್ಲ ಎಂದು ವಾದಿಸಿತು. ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವೈಯಕ್ತಿಕತೆಗೆ ಭಂಗವಾಗುತ್ತದೆ ಎಂಬ ವಾದವನ್ನೂ ತಳ್ಳಿಹಾಕಿದ ಅದು, ಒಂದು ಟ್ರಸ್ಟ್ ವೈಯಕ್ತಿಕ ಮಾಹಿತಿಯನ್ನು ಹೊಂದಿರುವಂತಿಲ್ಲ ಎಂದು ಹೇಳಿತು.

ಜನವರಿ 2023ರಲ್ಲಿ ಸಿಬಿಟಿಡಿ ದಿಲ್ಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತು ಮತ್ತು ಕೇಂದ್ರ ಮಾಹಿತಿ ಆಯೋಗದ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಇದೇ ತಡೆಯಾಜ್ಞೆಯನ್ನು ಕೇಂದ್ರ ಸರಕಾರವು ಇಂತದ್ದೇ ನೆಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗಕಾಲದಲ್ಲಿ ಸ್ಥಾಪಿಸಿದ್ದ ಪಿಎಂ ಕೇರ್ಸ್ ನಿಧಿಯ ಕುರಿತೂ ಮಾಹಿತಿ ಒದಗಿಸಲು ಒಂದು ಪೂರ್ವಾನ್ವಯದ ನೆಪವಾಗಿ ಬಳಸಿತು.

ಜೂನ್ 2020ರಲ್ಲಿ ರಾಮನ ವಂಶಜ ಎಂದು ಹೇಳಿಕೊಂಡ ಸುಶೀಲ್ ರಾಘವ್ ಎಂಬ ವ್ಯಕ್ತಿಯು ಆರ್‌ಜೆಟಿಕೆಯ ಗುರಿಗಳು ಮತ್ತು ಉದ್ದೇಶಗಳ ಕುರಿತು ಗೃಹ ಸಚಿವಾಲಯದಲ್ಲಿ ಮಾಹಿತಿ ಕೇಳಿದರು. ಅದರ ಸದಸ್ಯರ ಆಯ್ಕೆ ಪ್ರಕ್ರಿಯೆ, ಸದಸ್ಯರ ಮೇಲೆ ಇರುವ ಕ್ರಿಮಿನಲ್ ಪ್ರಕರಣಗಳು, ಸದಸ್ಯತ್ವಕ್ಕಾಗಿ ತನ್ನದೇ ಅರ್ಜಿಯ ಈಗಿನ ಸ್ಥಾನಮಾನ ಇತ್ಯಾದಿಗಳ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯ ಪ್ರಕಾರ ಮಾಹಿತಿ ಕೇಳಿದರು. ರಾಘವ್ ಅವರು- ಗೃಹ ಸಚಿವಾಲಯವು ಟ್ರಸ್ಟಿನ ಕುರಿತು ಅಧಿಸೂಚನೆ ನೀಡಿದ್ದುದರಿಂದ ಅದಕ್ಕೇ ತನ್ನ ಕೋರಿಕೆ ಸಲ್ಲಿಸಿದ್ದರು. ಆದರೆ, ಆರ್‌ಜೆಟಿಕೆ ಸುಪ್ರೀಂಕೋರ್ಟಿನ ಆದೇಶದ ಅನ್ವಯ ರಚಿಸಲಾದ ಒಂದು ಸಂಘವಾಗಿದೆ ಮತ್ತು ಅದೊಂದು ಸ್ವಾಯತ್ತ ಸಂಸ್ಥೆಯಾಗಿದೆ ಎಂದು ಪ್ರತಿಕ್ರಿಯಿಸಿತು. ಸರಕಾರವು ಈ ಟ್ರಸ್ಟನ್ನು ಸ್ಥಾಪಿಸಿದ್ದ ಯೋಜನೆಯು “ಟಾಪ್ ಸೀಕ್ರೆಟ್” ಅಂದರೆ ಅತೀ ಗುಪ್ತ ಎಂದು ವರ್ಗೀಕರಿಸಲಾಗಿದೆ ಎಂದು ಅವರ ಮನವಿಗೆ ಗೃಹ ಸಚಿವಾಲಯವು ಉತ್ತರ ನೀಡಿತ್ತು. ಕೇಂದ್ರ ಮಾಹಿತಿ ಆಯೋಗವು ಈ ಆಕ್ಷೇಪಗಳನ್ನು ಬದಿಗೆ ಸರಿಸಿತಾದರೂ, ಗೃಹ ಸಚಿವಾಲಯವು ಅದನ್ನು ಪುನರುಚ್ಛರಿಸಿತು. ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಹಕ್ಕು ಆಯೋಗದ ನಿಂದನೆ ಮಾಡಿದುದರ ವಿರುದ್ಧ ಯಾವುದೇ ವಿಧಿ ಇಲ್ಲ. ಇದನ್ನು ಪ್ರಶ್ನಿಸಲು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ಯಾವ ಸಂಪನ್ಮೂಲವೂ ತನ್ನ ಬಳಿ ಇಲ್ಲ ಎಂದು ರಾಘವ ನನಗೆ ತಿಳಿಸಿದರು.

ಒಬ್ಬ ಆರ್‌ಟಿಐ ಕಾರ್ಯಕರ್ತರಾಗಿರುವ ನೀರಜ್ ಶರ್ಮಾ, ಕೇಂದ್ರ ಮಾಹಿತಿ ಹಕ್ಕು ಆಯೋಗವು, ನಾನು ಕೇಳಿದ ಮಾಹಿತಿ ನೀಡಿ ಎಂದು ಸಾರ್ವಜನಿಕರ ಸೇವಕರಾದ ಅಧಿಕಾರಿಗಳಿಗೆ ಹೇಳುವ ಬದಲು, ಅರ್ಜಿ ಹಾಕಿದವರಿಗೆ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿ ಎಂದು ಮಾತ್ರ ಹೇಳುತ್ತದೆ ಎಂದು ನನಗೆ ತಿಳಿಸಿದರು. “ಪ್ರತಿಕ್ರಿಯೆ ಎಂದರೆ ಯಾವುದೇ ಹೇಳಿಕೆ ಎಂದು ಅರ್ಥವಾಗುತ್ತದೆ. ಸಿಐಸಿ ಆದೇಶದ ನಂತರವೂ ಒಂದು ಸಾರ್ವಜನಿಕ ಪ್ರಾಧಿಕಾರವು ನಿರಾಕರಣೆಗೆ ಅದೇ, ಅಂದರೆ ಹಿಂದಿನ ಕಾರಣವನ್ನೇ ನೀಡುತ್ತದೆ ಎಂದಾದರೆ, ಅದನ್ನೂ ಒಂದು ಪ್ರತಿಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ಮತ್ತು ನೀವದರ ವಿರುದ್ಧ ಏನೂ ಮಾಡುವಂತಿಲ್ಲ”. ಜನವರಿ 2021ರಲ್ಲಿ ಶರ್ಮಾ ರಾಮಜನ್ಮಭೂಮಿ ಟ್ರಸ್ಟಿನ ಸಾರ್ವಜನಿಕ ಮಾಹಿತಿ ಅಧಿಕಾರಿ ಯಾರೆಂದು ಕೇಳಿದರು. ಅದೊಂದು ಸ್ವಾಯತ್ತ ಸಂಸ್ಥೆ ಎಂಬ ನೆವಕ್ಕೆ ಪ್ರತಿಕ್ರಿಯೆಯಾಗಿ, ಅವರು- ಇದೊಂದು ಸಾರ್ವಜನಿಕ ಅಧಿಸೂಚನೆಯ ಪ್ರಕಾರ ಸ್ಥಾಪಿಸಲಾಗಿರುವ ಸಂಸ್ಥೆಯಾಗಿರುವುದರಿಂದ ಅದನ್ನು ಸಾರ್ವಜನಿಕ ಪ್ರಾಧಿಕಾರ ಎಂದೇ ಪರಿಗಣಿಸಬೇಕು ಎಂದು ವಾದಿಸಿದರು. ಮಾಹಿತಿ ಹಕ್ಕು ಪ್ರಾಧಿಕಾರವು ಅವರ ವಾದವನ್ನು ಎತ್ತಿ ಹಿಡಿಯಿತು. ಆದರೆ, ತನಗೆ ರಾಘವರಂತೆ ಅದೇ ಮೊಂಡು ಹಠಮಾರಿತನವನ್ನು ಎದುರಿಸಬೇಕಾಗಿ ಬಂತು ಎಂದು ಶರ್ಮಾ ನನಗೆ ಹೇಳಿದರು. “ಆರ್‌ಟಿಐ ಕಾನೂನು ತಂದದ್ದೇ ನಿರ್ದಿಷ್ಟವಾಗಿ ನಾವು ಬರೇ ಮಾಹಿತಿಗಳಿಗಾಗಿ ನ್ಯಾಯಾಲಯಗಳಲ್ಲಿ ಹೊರಳಾಡಬಾರದು ಎಂಬ ಕಾರಣಕ್ಕಾಗಿ” ಎಂದು ಅವರು ಹೇಳಿದರು.

ಮೋದಿ ಸರಕಾರವು ಇಷ್ಟೆಲ್ಲಾ ವರ್ಷಗಳಲ್ಲಿ ಹೇಗೆ ಕಾರ್ಯಾಚರಿಸಿದೆ ಎಂದು ನೋಡಿದರೆ, ಆರ್‌ಜೆಟಿಕೆಯ ವ್ಯವಹಾರಗಳ ಸುತ್ತಲೂ ಇರುವ ಅಪಾರದರ್ಶಕತೆಯು ಅಚ್ಚರಿಯ ವಿಷಯವೇನಲ್ಲ. ಸಣ್ಣ ಪ್ರಮಾಣದಲ್ಲಿಯೇ ಆದರೂ ಅಯೋಧ್ಯೆಯಲ್ಲಿ ನಡೆದ ಭೂ ವ್ಯವಹಾರಗಳು ನಾನು 2018ರಲ್ಲಿ ವರದಿ ಮಾಡಿದ್ದಂತೆ ರಾಫೇಲ್ ವ್ಯವಹಾರಕ್ಕಿಂತ ಭಿನ್ನವೇನಲ್ಲ. ಆರ್‌ಜೆಟಿಕೆಯು ಜಮೀನಿಗೆ ಹೆಚ್ಚುವರಿ ಪಾವತಿ ಮಾಡಿದೆ ಮತ್ತು ಮಾಮೂಲಿಯಾದ ಭೂಸ್ವಾಧೀನ ಪ್ರಕ್ರಿಯೆಗಳನ್ನು ಬುಡಮೇಲು ಮಾಡಿದೆ. ಮಧ್ಯವರ್ತಿಗಳಿಗೆ ಹಣ ಬಾಚಲು ಅವಕಾಶ ಮಾಡಿಕೊಟ್ಟಿದೆ. ಪಾರದರ್ಶಕತೆ ಬಯಸುವ ಎಲ್ಲಾ ಪ್ರಯತ್ನಗಳಿಗೆ ಸರಕಾರ ಅಡ್ಡಿ ಮಾಡಿರುವಂತೆಯೇ ಅದನ್ನು ಉತ್ತರದಾಯಿ ಮಾಡಬೇಕಾದ ಸಂಸ್ಥೆಗಳೇ ಪ್ರಶ್ನಾರ್ಹ ಪರಿಸ್ಥಿತಿಗಳಲ್ಲಿ ಅದಕ್ಕೆ ಸ್ವಚ್ಛತೆಯ ಪ್ರಮಾಣಪತ್ರ ನೀಡಿವೆ. ಈ ಭ್ರಷ್ಟಾಚಾರವನ್ನು ರಾಮನ ಹೆಸರಿನಲ್ಲಿ ಮಾಡಲಾಯಿತು ಎಂಬುದು ಹಿಂದೂ ಬಲಪಂಥದ ಆಷಾಢಭೂತಿತನವನ್ನು ಬಯಲು ಮಾಡಿರುವುದರಲ್ಲಿಯೂ ಆಶ್ಚರ್ಯವಿಲ್ಲ. ಏಕೆಂದರೆ, ಧರ್ಮವು ಭಾರತದಲ್ಲಿ ಹೇಗೆ ಒಂದು ಆಕರ್ಷಕ ಉದ್ಯಮವಾಗಿದೆ ಮತ್ತು ಧರ್ಮನಿಷ್ಠೆಯ ಸೋಗಿನಲ್ಲಿ ಮೋದಿಯವರ ರಾಜಕೀಯ ಬಂಡವಾಳ ಎಷ್ಟೊಂದು ಸಂಚಯಗೊಂಡಿದೆ ಎಂಬುದನ್ನು ನೋಡಬಹುದು. ರಾಮಮಂದಿರದ ಉದ್ಘಾಟನೆಯ ಸಂಭ್ರಮದಲ್ಲಿ ಜಮೀನನ್ನು ಸ್ವಾಧೀನಪಡಿಸಿಕೊಂಡ ಪ್ರಕ್ರಿಯೆಯು ಬೇಗನೇ ಮರೆತುಹೋಗಬಹುದು. ಆದರೆ, ಅವು ಮೋದಿಯವರ ನವ ಭಾರತದಲ್ಲಿ ಪ್ರಗತಿಯೆಂಬುದು ಹೇಗೆ ಕಾಣುತ್ತದೆ ಎಂಬ ಕುರಿತು ಒಂದು ಬೋಧಪ್ರದ ಅಧ್ಯಾಯವಾಗಲಿದೆ.

ಸಾಗರ್
(ಕ್ಯಾರವಾನ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾರೆ)
(ಕೃಪೆ): ಕ್ಯಾರವಾನ್ ಪತ್ರಿಕೆ

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...