ಮೈಸೂರಿನ ರಾಜೀವನಗರ 2ನೇ ಹಂತದಲ್ಲಿ ಕನ್ನಡಪ್ರೇಮಿ ಸೈಯದ್ ಇಸಾಕ್ ಅವರು ನಿರ್ಮಿಸಿದ್ದ ಗ್ರಂಥಾಲಯ ಸುಟ್ಟು ಹೋಗಿ ಆರು ತಿಂಗಳಾಯಿತು. ಕುಡುಕನೊಬ್ಬನ ಅತಾಚುರ್ಯದಿಂದ ಬೀಡಿ ಬೆಂಕಿ ತಾಕಿ ಕಳೆದ ಏಪ್ರಿಲ್‌ನಲ್ಲಿ ಗ್ರಂಥಾಲಯ ಭಸ್ಮವಾದ ಬಳಿಕ, ಸೈಯದ್ ಅವರಿಗೆ ನೆರವಿನ ಮಹಾಪೂರದ ಭರವಸೆಯೇ ಹರಿದುಬಂದಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಸೈಯದ್ ಅವರ ಕನ್ನಡ ಪ್ರೇಮವನ್ನು ಕೊಂಡಾಡಲಾಯಿತು. ಪತ್ರಿಕೆಗಳು ವರದಿಗಳನ್ನು ಪ್ರಕಟಿಸಿದವು. ಸ್ಥಳಕ್ಕೆ ಶಾಸಕರು, ಸಂಸದರು, ಅಧಿಕಾರಿಗಳು ಭೇಟಿ ನೀಡಿದರು. ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಂಟಿಯಾಗಿ ಪತ್ರಿಕಾ ಪ್ರಕಟಣೆ ನೀಡಿ ಗ್ರಂಥಾಲಯ ನಿರ್ಮಿಸುವುದಾಗಿ ಹೇಳಿದ್ದವು. ಮಿಸ್ಬಾ ಪತೇನ್ ಎಂಬವರು ಫಂಡ್ ರೈಸಿಂಗ್ ಮಾಡಿದ್ದರು. ಆದರೆ ಸರ್ಕಾರ ಗ್ರಂಥಾಲಯ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಸುಮಾರು 29 ಲಕ್ಷ ರೂ.ಗಳನ್ನು ದಾನಿಗಳಿಗೆ ಮಿಸ್ಬಾ ಹಿಂತಿರಿಸಿದ್ದರು.
ಶಾಸಕ ಜಮೀರ್ ಅಹಮದ್ ಅವರು ಎರಡು ಲಕ್ಷ ರೂ., ಸಂಸದ ಪ್ರತಾಪ ಸಿಂಹ ಅವರು ಐವತ್ತು ಸಾವಿರ ರೂ., ಸಚಿವ ಎಸ್.ಟಿ.ಸೋಮಶೇಖರ್ ಇಪ್ಪತ್ತೈದು ಸಾವಿರ ರೂ. ನೀಡಿದ್ದರು. ಬೋರ ಎಂಬ ಸಂಸ್ಥೆಗೆ ಸೇರಿದ ನಿವೇಶನದಲ್ಲಿ ಸೈಯದ್ ಅವರು 2011ರಿಂದ ಗ್ರಂಥಾಲಯ ನಡೆಸುತ್ತಿದ್ದರು. ಹೀಗಾಗಿ ಬೋರ ಸಂಸ್ಥೆಯಿಂದ ಜಾಗವನ್ನು ಬಿಡಿಸಿಕೊಂಡು, ಗ್ರಂಥಾಲಯಕ್ಕೆ ಜಾಗವನ್ನು ಬಿಡಿಸಿಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ನಿವೇಶನವೇನೋ ಮಂಜೂರಾಗಿದೆ. ಆದರೆ ಗ್ರಂಥಾಲಯ ನಿರ್ಮಾಣ ಕಾರ್ಯ ಮಾತ್ರ ಚಾಲನೆ ಪಡೆದಿಲ್ಲ.
ಇದನ್ನೂ ಓದಿರಿ: ‘ಶುದ್ಧ ಕನ್ನಡ’ ವಿವಾದ: ಕನ್ನಡ-ಸಂಸ್ಕೃತಿ ಇಲಾಖೆಗೆ ಸಾಹಿತಿಗಳ ತರಾಟೆ

ಈ ಕುರಿತು ನಾನುಗೌರಿ.ಕಾಂನೊಂದಿಗೆ ಸೈಯದ್ ಇಸಾಕ್ ವಿಡಿಯೋ ಹಾಗೂ ಆಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡರು.
“ಗ್ರಂಥಾಲಯ ನಿರ್ಮಾಣ ವಿಳಂಬವಾಗುತ್ತಿದೆ. ಜಾಗವೇನೋ ಮಂಜೂರಾಗಿದೆ. ಆದರೆ, ಸರ್ಕಾರ ಗ್ರಂಥಾಲಯ ನಿರ್ಮಿಸದಿದ್ದರೆ ದಾನಿಗಳು ನೀಡಿರುವ ಒಂದಿಷ್ಟು ಹಣವಿದ್ದು, ಅದರಲ್ಲೇ ಮೊದಲಿನಂತೆ ಗುಡಿಸಲು ನಿರ್ಮಿಸಿ, ದಾನಿಗಳಿಂದ ಬಂದಿರುವ ಸಾವಿರಾರು ಪುಸ್ತಕಗಳನ್ನು ಗ್ರಂಥಾಲಯಕ್ಕೆ ಇರಿಸುತ್ತೇನೆ. ಮೈಸೂರಿನ ರಾಜೀವನಗರ ಭಾಗದಲ್ಲಿ ಕನ್ನಡ ಓದುವವರು ಕಡಿಮೆ ಇದ್ದಾರೆ. ಉರ್ದು ಬಳಕೆ ಹೆಚ್ಚಿದೆ. ಇಂತಹ ಜಾಗದಲ್ಲಿ ಕನ್ನಡ ಗ್ರಂಥಾಲಯ ಅಗತ್ಯವಿದೆ” ಎನ್ನುತ್ತಾರೆ ಸೈಯದ್.
“ಆಗಸ್ಟ್ 12ಕ್ಕೆ ಗುದ್ದಲಿಪೂಜೆ ಆಗುತ್ತದೆ ಎಂದು ಹೇಳಿ ಕೈಕೊಟ್ಟಿದ್ದಾರೆ. ಬರೀ ಆಶ್ವಾಸನೆ ನೀಡಿದ್ದಷ್ಟೇ. ಗ್ರಂಥಾಲಯವನ್ನು ಜನರು ಮರೆಯಬಾರದು ಎಂದು ಒಂದಿಷ್ಟು ಪುಸ್ತಕಗಳನ್ನು ಇಲ್ಲಿಯೇ ಇಟ್ಟು, ಪತ್ರಿಕೆಗಳನ್ನು ಹಾಕಿಸುತ್ತಾ ಜನರ ಓದುವ ಹವ್ಯಾಸವನ್ನು ಹೆಚ್ಚಿಸಲು ಯತ್ನಿಸುತ್ತಿದ್ದೇನೆ. ಗ್ರಂಥಾಲಯವಿದ್ದಾಗ ಕೆಲವರು ಬಂದು ಓದುವ ಅಭಿರುಚಿ ಬೆಳೆಸಿಕೊಂಡಿದ್ದರು. ಆದರೆ ಈಗ ಅದೂ ಇಲ್ಲವಾಗುತ್ತಿದೆ” ಎನ್ನುತ್ತಾರೆ ಸೈಯದ್.

ಗ್ರಂಥಾಲಯ ಇಲಾಖೆಗೆ ಹಣ ನೀಡಿದ್ದೇವೆ: ಪಾಲಿಕೆ ಆಯುಕ್ತ
ಸೈಯದ್ ಅವರಿಗೆ ಗ್ರಂಥಾಲಯ ನಿರ್ಮಿಸುವ ಭರವಸೆ ನೀಡಿ ವಿಳಂಬ ಮಾಡುತ್ತಿರುವುದು ಏತಕ್ಕೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ಸಂಪರ್ಕಿಸಿದಾಗ, “ಪ್ರತ್ಯೇಕವಾಗಿ ನಾವು ಲೈಬ್ರರಿ ಸೆಸ್ ಸಂಗ್ರಹಿಸುತ್ತೇವೆ. ಅದನ್ನು ಗ್ರಂಥಾಲಯ ಇಲಾಖೆಗೆ ನೀಡಿದ್ದೇವೆ. ಅವರು ಪ್ರಕ್ರಿಯೆ ನಡೆಸುತ್ತಿದ್ದಾರೆ. ಭೂಮಿಯನ್ನು ಮಂಜೂರು ಮಾಡಲಾಗಿದೆ. ಕಟ್ಟಡ ನಿರ್ಮಾಣವು ಗ್ರಂಥಾಲಯ ಇಲಾಖೆಯಿಂದ ಆಗಬೇಕು. ಕೊಡಬೇಕಾದ ಹಣವನ್ನು ಗ್ರಂಥಾಲಯ ಇಲಾಖೆಗೆ ನಾವು ನೀಡಿದ್ದೇವೆ” ಎಂದರು.

***
20 ಕೋಟಿ ರೂ. ಸೆಸ್ ಬಾಕಿ ಇದೆ: ಗ್ರಂಥಾಲಯ ಇಲಾಖೆ
ಗ್ರಂಥಾಲಯ ನಿರ್ಮಾಣಕ್ಕೆ ಪಾಲಿಕೆಯಿಂದ ನೀಡಬೇಕಾದ ಹಣವನ್ನೆಲ್ಲ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತರು ಹೇಳಿದರೆ ಮೈಸೂರು ಗ್ರಂಥಾಲಯ ಉಪನಿರ್ದೇಶಕ ಬಿ.ಮಂಜುನಾಥ್ ಅವರು ಹೇಳುವುದು ಬೇರೆ.
“ಈ ಹಿಂದೆ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಅವರು ಗ್ರಂಥಾಲಯ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದರು. ನಮ್ಮ ಇಲಾಖೆಯಲ್ಲಿ ಕಟ್ಟಡ ನಿರ್ಮಾಣಕ್ಕಾಗುವಷ್ಟು ಹಣವಿಲ್ಲ. ನಿತ್ಯದ ಖರ್ಚು ವೆಚ್ಚಕ್ಕೆ ಹಣ ಸಾಕಾಗುತ್ತಿಲ್ಲ. ಪಾಲಿಕೆಯಿಂದ 20 ಕೋಟಿ ರೂ. ಸೆಸ್ ಬಾಕಿ ಇದೆ. ಈಗ ಪ್ರಸ್ತುತವಾಗಿ ಬರಬೇಕಾಗಿರುವ ಸೆಸ್ ಬರುತ್ತಿದೆ. ಆದರೆ ನಿತ್ಯದ ಖರ್ಚು ವೆಚ್ಚಕ್ಕೇ ಆ ಹಣ ಹೋಗುತ್ತಿದೆ. ಮೈಸೂರು ನಗರದ ಪೀಪಲ್ಸ್ ಪಾರ್ಕ್‌ನಲ್ಲಿ ಐದೂವರೆ ಕೋಟಿ ರೂ.ಗಳಲ್ಲಿ ನಿರ್ಮಾಣವಾಗಿರುವ ಗ್ರಂಥಾಲಯ ಅಭಿವೃದ್ಧಿ ಕಾರ್ಯಗಳಿಗೆ ಇನ್ನೂ ಮೂರರಿಂದ ನಾಲ್ಕು ಕೋಟಿ ರೂ. ಬೇಕಾಗಿದೆ. ನಮ್ಮ ಬಳಿ ಅಷ್ಟು ಹಣವಿಲ್ಲ” ಎನ್ನುತ್ತಾರೆ ಗ್ರಂಥಾಲಯ ಉಪನಿರ್ದೇಶಕ ಬಿ.ಮಂಜುನಾಥ್.

“ಸುಮಾರು 35 ಲಕ್ಷ ರೂ.ಗಳಲ್ಲಿ ಸೈಯದ್ ಅವರ ಗ್ರಂಥಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರದಿಂದ ಯೋಜನೆ ಸಿದ್ಧಪಡಿಸಲಾಗಿದೆ. ಮುಡಾದವರು ನಿವೇಶನ ನೀಡಿದ್ದಾರೆ. ಸಿಎ ನಿವೇಶನ ಆಗಿರುವುದರಿಂದ ಹಣ ಕಟ್ಟಬೇಕು ಎಂದು ಲೆಟರ್ ಕೊಟ್ಟಿದ್ದಾರೆ. ಆದರೆ ನಂತರದಲ್ಲಿ ನಡೆದ ಸಭೆಯಲ್ಲಿ ಹಣ ಕಟ್ಟುವುದೇನೂ ಬೇಡವೆಂದು ಮುಡಾ ಆಯುಕ್ತರು ಭರವಸೆ ನೀಡಿದ್ದಾರೆ. ಪಾಲಿಕೆ ಮತ್ತು ಗ್ರಂಥಾಲಯ ಇಲಾಖೆಯಿಂದ ಕಟ್ಟಡ ನಿರ್ಮಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಯೋಜಿತ 35 ಲಕ್ಷ ರೂ.ಗಳಲ್ಲಿ 20 ಲಕ್ಷ ರೂ.ಗಳನ್ನಾದರೂ ಪಾಲಿಕೆ ನೀಡಿದರೆ ಗ್ರಂಥಾಲಯ ಕಟ್ಟಡ ನಿರ್ಮಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಪತ್ರವನ್ನೂ ಬರೆದಿದ್ದೇನೆ” ಎನ್ನುತ್ತಾರೆ ಅವರು.
“ಕೇಂದ್ರ ಸರ್ಕಾರದ ಅಡಿಯಲ್ಲಿ ರಾಜ್‌ರಾಮ್ ಲೈಬ್ರರಿ ಫೌಂಡೇಷನ್ ಇದೆ. ಅಲ್ಲಿಗೂ ಪತ್ರ ಬರೆದಿದ್ದೇನೆ. ಆದರೆ ಅಲ್ಲೆಲ್ಲ ಶರತ್ತುಗಳು ಹೆಚ್ಚಿವೆ. ಖಾಸಗಿಯವರಿಗೆ ಗ್ರಂಥಾಲಯ ಅಭಿವೃದ್ಧಿಗೆ ಹಣ ನೀಡಬೇಕೆಂದರೆ ಖಾಸಗಿ ವ್ಯಕ್ತಿಯು ಕನಿಷ್ಠ 20 ವರ್ಷಗಳಿಂದ ಗ್ರಂಥಾಲಯ ನಡೆಸಿರಬೇಕೆಂಬ ಶರತ್ತು ಇದೆ. ಹಾಗಿದ್ದಾಗ ಮಾತ್ರ 15 ಲಕ್ಷ ರೂ.ಗಳವರೆಗೂ ಅನುದಾನ ನೀಡುತ್ತಾರೆ. ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ 20 ವರ್ಷ ಆಗಿಲ್ಲ. ಜೊತೆಗೆ ಯಾವುದೇ ಕಾಗದ ಪತ್ರಗಳೂ ಇಲ್ಲ. ಹೀಗಾಗಿ ಆ ಅನುದಾನ ಸಿಗುವುದಿಲ್ಲ. ರಾಜ್ಯ ಸರ್ಕಾರಕ್ಕೂ ಪತ್ರ ಬರೆದಿದ್ದೇನೆ. ಖಾಸಗಿಯವರು ಸಹಕಾರ ನೀಡಿದರೆ ಕಟ್ಟಡ ಕಾಮಗಾರಿ ಆರಂಭಿಸಬಹುದು. ಗ್ರಂಥಾಲಯ ಇಲಾಖೆಯಿಂದ ಪಿಠೋಪಕರಣ, ಪುಸ್ತಕಗಳನ್ನು ನೀಡಲಾಗುವುದು. ಪುಸ್ತಕಗಳನ್ನು ಈಗಾಗಲೇ ತೆಗೆದಿರಿಸಲಾಗಿದೆ. ಕಟ್ಟಡವೊಂದು ಆಗಬೇಕಿದೆ. ಜನಪ್ರತಿನಿಧಿಗಳ್ಯಾರಾದರೂ ಸಹಕಾರ ನೀಡಿದರೆ ಇಲಾಖೆಯಿಂದ ಒಂದಿಷ್ಟು ಹಣ ನೀಡಬಹುದು” ಎನ್ನುತ್ತಾರೆ ಮಂಜುನಾಥ್.
ಪಾಲಿಕೆ ಮತ್ತು ಗ್ರಂಥಾಲಯ ಇಲಾಖೆಯ ಹಗ್ಗ ಜಗ್ಗಾಟದಲ್ಲಿ ಗ್ರಂಥಾಲಯ ನಿರ್ಮಾಣ ವಿಳಂಬವಾಗುತ್ತಿರುವುದು ಮಾತ್ರ ನಿಜ. ಈ ವೇಳೆಗೆ ಸೈಯದ್ ಇಸಾಕ್ ಅವರ ಕನ್ನಡ ಗ್ರಂಥಾಲಯ ನಿರ್ಮಾಣವಾಗಿದ್ದರೆ ಈ ಭಾರಿಯ ಕನ್ನಡ ರಾಜ್ಯೋತ್ಸವ ಸೈಯದ್ ಅವರಿಗೆ ಬಹಳ ಖುಷಿ ನೀಡುತ್ತಿತ್ತು.
ಇದನ್ನೂ ಓದಿರಿ: ‘ಶುದ್ಧ ಕನ್ನಡ’ ವಿವಾದ: ಪೋಸ್ಟರ್ ಡಿಲೀಟ್ ಮಾಡಿದ ಕನ್ನಡ-ಸಂಸ್ಕೃತಿ ಇಲಾಖೆ


