ಆರ್ಯನ್‌ ಖಾನ್‌ಗೆ ಡ್ರಗ್ಸ್ ಪೂರೈಕೆ ಆರೋಪ ನಿರಾಕರಿಸಿದ ನಟಿ ಅನನ್ಯ ಪಾಂಡೆ: ವರದಿ
PC: ANI

ಮುಂಬೈ ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಇಂದು ಬಾಲಿವುಡ್ ಯುವನಟಿ ಅನನ್ಯ ಪಾಂಡೆಯವರನ್ನು ವಿಚಾರಣೆ ನಡೆಸಿದೆ. ಡ್ರಗ್ಸ್ ಪೂರೈಕೆ ಅಥವಾ ಡ್ರಗ್ಸ್ ಬಳಸಿದ ಆರೋಪವನ್ನು ನಟಿ ನಿರಾಕರಿಸಿದ್ದಾರೆ.

ಪ್ರಕರಣದಲ್ಲಿ ಬಂಧೀಸಲಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಫೋನಿನಲ್ಲಿ ಪತ್ತೆಯಾದ ವಾಟ್ಸಾಪ್ ಚಾಟ್‌ಗಳ ಆಧಾರದ ಮೇಲೆ ನಟಿಯನ್ನು ವಿಚಾರಣೆಗೆ ಕರೆಸಿಕೊಳ್ಳಲಾಗಿದೆ. ಗುರುವಾರ ಸಂಜೆಯೂ ವಿಚಾರಣೆ ನಡೆಸಿದ್ದ ಎನ್‌ಸಿಬಿ, ಇಂದು ಮತ್ತೆ ವಿಚಾರಣೆಗೆ ಕರೆಸಿತ್ತು.

ಅಕ್ಟೋಬರ್‌ 8 ರಿಂದ ಜೈಲಿನಲ್ಲಿರುವ ಆರ್ಯನ್ ಖಾನ್ ಅವರ ವಾಟ್ಸಾಪ್‌ ಚಾಟ್‌ಗಳನ್ನು ಇಟ್ಟುಕೊಂಡು ನಟಿಯನ್ನು ಪ್ರಶ್ನೆ ಮಾಡಲಾಗಿದೆ ಎಂದು ವರದಿಯಾಗಿದೆ. ಚಾಟ್‌ಗಳಲ್ಲಿ ಆರ್ಯನ್ ಖಾನ್‌ಗೆ ಗಾಂಜಾ ಪೂರೈಸಲು ಸಹಾಯ ಮಾಡಿರುವುದು ಸೂಚಿಸುತ್ತದೆ ಎಂದು ಎನ್‌ಸಿಬಿ ಮೂಲಗಳು ಹೇಳಿವೆ.

“2018-19ರಲ್ಲಿ ಆರ್ಯನ್ ಖಾನ್‌ಗೆ ಡ್ರಗ್ ಡೀಲರ್‌ಗಳ ಮೊಬೈಲ್ ಸಂಖ್ಯೆಯನ್ನು ಒದಗಿಸುವ ಮೂಲಕ ಮೂರು ಬಾರಿ ಡ್ರಗ್ಸ್ ಪೂರೈಸಲು ನಟಿ ಸಹಾಯ ಮಾಡಿದ್ದಾರೆ ಎಂಬುದು ಆರ್ಯನ್ ಅವರ ಮೊಬೈಲ್ ಫೋನ್‌ನ ಚಾಟ್‌ಗಳು ತಿಳಿಸಿವೆ” ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: NCB ಅಧಿಕಾರಿ ಸಮೀರ್ ವಾಂಖೆಡೆ ಚಿತ್ರೋದ್ಯಮವನ್ನು ಸುಲಿಗೆ ಮಾಡುತ್ತಿದ್ದಾರೆ: ನವಾಬ್ ಮಲಿಕ್

ಚಾಟ್‌ನಲ್ಲಿ ಅನನ್ಯ ಪಾಂಡೆ ಹೆಸರು ಉಲ್ಲೇಖಗೊಂಡಿದ್ದು, ಒಮ್ಮೆ ಜನಪ್ರಿಯ ಗೆಟ್ ಟುಗೆದರ್ ಸೇರಿದಂತೆ ಒಟ್ಟು ಮೂರು ಬಾರಿ ಗಾಂಜಾ ಪೂರೈಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

“ಚಾಟ್ ಸಂಭಾಷಣೆಯಲ್ಲಿ ನಟಿ ಡ್ರಗ್ಸ್ ಪೂರೈಕೆ ಸಂಬಂಧಿತ ಮಾತುಕತೆಗಳನ್ನು ನಿರಾಕರಿಸಿದ್ದಾರೆ. ತಾನು ಎಂದಿಗೂ ಡ್ರಗ್ಸ್ ಸೇವಿಸಿಲ್ಲ, ಸರಬರಾಜು ಮಾಡಿಲ್ಲ ಎಂದು NCB ಅಧಿಕಾರಿಗಳಿಗೆ ಹೇಳಿದ್ದಾರೆ” ಎಂದು ಮೂಲಗಳು ತಿಳಿಸಿವೆ.

“ನಟಿಯ ಎರಡೂ ಫೋನ್‌ಗಳನ್ನು ನಾವು ವಶಪಡಿಸಿಕೊಂಡಿದ್ದೇವೆ, ಅದರಲ್ಲಿ ಹಳೆಯ ಹ್ಯಾಂಡ್‌ಸೆಟ್ ಮತ್ತು ಕೆಲವು ತಿಂಗಳ ಹಿಂದೆ ಅವರು ಖರೀದಿಸಿದ ಹೊಸ ಫೋನ್ ಕೂಡ ಸೇರಿದೆ” ಎಂದು ಎನ್‌ಸಿಬಿ ಮೂಲಗಳು ಎಎನ್‌ಐಗೆ ತಿಳಿಸಿವೆ.

ಮುಂಬೈ ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ 22 ವರ್ಷದ ಬಾಲಿವುಡ್ ನಟಿ ಅನನ್ಯ ಪಾಂಡೆಯವರ ಮುಂಬೈನ  ಬಾಂದ್ರಾದಲ್ಲಿರುವ ಮನೆಯ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಗುರುವಾರ ದಾಳಿ ನಡೆಸಿತ್ತು. ದಾಳಿಯಲ್ಲಿ ನಟಿಯ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಎನ್‌ಸಿಬಿ ವಶಪಡಿಸಿಕೊಂಡಿದೆ.

ಅನನ್ಯ ಪಾಂಡೆ ಮತ್ತು ಆರ್ಯನ್ ಖಾನ್  ಕಾಮನ್ ಫ್ರೆಂಡ್ಸ್ ಸರ್ಕಲ್‌ ಹೊಂದಿದ್ದಾರೆ. ಅನನ್ಯ ಮತ್ತು ಆರ್ಯನ್ ಸಹೋದರಿ ಸುಹಾನಾ ಉತ್ತಮ ಸ್ನೇಹಿತರಾಗಿದ್ದಾರೆ. ಅನನ್ಯ ಪಾಂಡೆ 2019 ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಈಕೆ  ಬಾಲಿವುಡ್ ನಟ ಚಂಕಿ ಪಾಂಡೆ ಮತ್ತು ಭಾವನಾ ಪಾಂಡೆ ಅವರ ಪುತ್ರಿ.

ಈ ತಿಂಗಳ ಆರಂಭದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್‌ ಮಗ ಆರ್ಯನ್ ಖಾನ್ ಮತ್ತು ಇತರರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಬಂಧಿಸಿದೆ.


ಇದನ್ನೂ ಓದಿ: ಡ್ರಗ್ಸ್ ಕೇಸ್: ನಟಿ ಅನನ್ಯ ಪಾಂಡೆಯ ಲ್ಯಾಪ್‌ಟಾಪ್, ಮೊಬೈಲ್ ಎನ್‌ಸಿಬಿ ವಶಕ್ಕೆ

LEAVE A REPLY

Please enter your comment!
Please enter your name here