‘ಶುದ್ಧ ಕನ್ನಡ’ ವಿವಾದ: ಪೋಸ್ಟರ್‌ ಡಿಲೀಟ್ ಮಾಡಿದ ಕನ್ನಡ-ಸಂಸ್ಕೃತಿ ಇಲಾಖೆ | Naanu Gauri

ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸೃತಿ ಇಲಾಖೆಯು ‘ಕನ್ನಡಕ್ಕಾಗಿ ನಾವು’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ‘ಮಾತಾಡ್ ಮಾತಾಡ್ ಕನ್ನಡ’ ಅಭಿಯಾನ ಅಕ್ಟೋಬರ್‌ 24ರಿಂದ 30ರ ವರೆಗೆ ನಡೆಯಲಿದೆ. ಇವುಗಳ ಹಲವು ರೀತಿಯ ಪೋಸ್ಟರ್‌ ಅನ್ನು ಇಲಾಖೆಯು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಅಪ್ಲೋಡ್ ಮಾಡಿತ್ತು.

ಈ ಅಭಿಯಾನದ ಅಂಗವಾಗಿ ‘ಶುದ್ಧ ಕನ್ನಡ ಮಾತನಾಡುವ ಸ್ಪರ್ಧೆ’ ಎಂಬ ಸ್ಪರ್ಧೆಯೊಂದು ರಾಜ್ಯ ಸರ್ಕಾರ ಆಯೋಜಿಸಿತ್ತು. ಈ ಸ್ಪರ್ಧೆಯು ವಿವಾದ ಸೃಷ್ಟಿಸಿದ್ದು, ‘ಶುದ್ಧ ಕನ್ನಡ’ ಅಂದರೆ ಯಾವುದು ಎಂಬ ಪ್ರಶ್ನೆಯನ್ನು ಎತ್ತಲಾಗಿತ್ತು. ಹಲವು ಮಾದರಿಯ ಕನ್ನಡ ಆಡು ಭಾಷೆ ಇರುವ ರಾಜ್ಯದಲ್ಲಿ ಶುದ್ದ ಯಾವುದು? ಅಶುದ್ಧ ಯಾವುದು? ಇದನ್ನು ಯಾವ ಮಾನದಂಡದಲ್ಲಿ ತೀರ್ಮಾನಿಸುತ್ತಾರೆ? ಎಂಬಂತಹ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲಾಗಿತ್ತು.

ಇದನ್ನೂ ಓದಿ: ‘ಶುದ್ಧ ಕನ್ನಡ’ ವಿವಾದ: ಕನ್ನಡ-ಸಂಸ್ಕೃತಿ ಇಲಾಖೆಗೆ ಸಾಹಿತಿಗಳ ತರಾಟೆ

ಈ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಕನ್ನಡ ಸಾಹಿತಿಗಳು ಹಾಗೂ ವಿಧ್ವಾಂಸರು ಕೂಡಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲಾ ವಿವಾದಗಳ ಹಿನ್ನಲೆಯಲ್ಲಿ ಇದೀಗ ಇಲಾಖೆಯು ‘ವಿವಾದಾತ್ಮಕ ಪೋಸ್ಟರ್‌’ ಅನ್ನು ಡಿಲೀಟ್ ಮಾಡಿದೆ.

ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ!

ರಾಜ್ಯೋತ್ಸವದ ಒಂದು ವಾರಗಳ ಕಾಲ ಕನ್ನಡಮಯ ವಾತಾವರಣ ಸೃಷ್ಟಿಸಲು ಹಲವು ಕಾರ್ಯಕ್ರಮಗಳನ್ನು ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಕನ್ನಡದಲ್ಲೇ ಮಾತನಾಡುವುದು, ಕನ್ನಡದಲ್ಲೇ ವ್ಯವಹರಿಸುವುದು, ಕನ್ನಡೇತರರಿಗೆ ಕನ್ನಡ ಕಲಿಸುವುದು ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಜನರಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಮನವಿ ಮಾಡಿದ್ದರು.

ಆದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದ್ದ ‘ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ’ಯ ಪೋಸ್ಟರ್‌ ಒಂದು ವಿವಾದವನ್ನು ಉಂಟುಮಾಡಿತ್ತು. ಅದರಲ್ಲಿ ಸಚಿವ ಸುನೀಲ್‌ ಕುಮಾರ್ ಭಾವಚಿತ್ರ, ಸರ್ಕಾರದ ಲೋಗೋವನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ‘ಶುದ್ಧ ಕನ್ನಡ’ | ಪೋಸ್ಟರ್‌ ಪರಿಶೀಲಿಸುವೆ: ಕನ್ನಡ-ಸಂಸ್ಕೃತಿ ಇಲಾಖೆ ನಿರ್ದೇಶಕ

ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದ ವಿಧ್ವಾಂಸರುಗಳು, ಭಾಷೆಯಲ್ಲಿ ಶುದ್ಧ, ಅಶುದ್ಧ ಎಂಬುದು ಇಲ್ಲ. ಕನ್ನಡದೊಂದಿಗೆ ಬೆರೆತಿರುವ ಇತರ ಭಾಷೆಗಳ ಪದಗಳನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ ಎಂದು ನಾನುಗೌರಿ.ಕಾಂ ಜೊತೆ ಮಾತನಾಡುತ್ತಾ ಹೇಳಿದ್ದರು.

ನಂತರ ಪೋಸ್ಟರ್‌ ಬಗ್ಗೆ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎಸ್‌.ರಂಗಪ್ಪ, “ಶುದ್ಧ, ಅಶುದ್ಧ ಎನ್ನಲು ಸಾಧ್ಯವಿಲ್ಲ. ಕನ್ನಡ ಪದಗಳು ಯಾವುದೂ ಅಶುದ್ಧವಲ್ಲ. ಪೋಸ್ಟರ್‌ಅನ್ನು ಪರಿಶೀಲಿಸಲಾಗುವುದು” ಎಂದು ಹೇಳಿದ್ದರು.

ಇದೀಗ ಇಲಾಖೆಯು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಅಪ್ಲೋಡ್ ಮಾಡಿದ್ದ ಪೋಸ್ಟರ್‌ ಅನ್ನು ಡಿಲೀಟ್ ಮಾಡಿ ವಿವಾದಕ್ಕೆ ಅಂತ್ಯ ಹಾಡಿದೆ.

‘ಶುದ್ಧ ಕನ್ನಡ’ ಮಾತನಾಡುವ ಸ್ಪರ್ಧೆಯ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ, ಕನ್ನಡ ಪುಸ್ತಕ ಪ್ರಾಧಿಕಾರಿ ಮಾಜಿ ಅಧ್ಯಕ್ಷರು, ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್‌, ಭಾಷಾತಜ್ಞ ಡಾ.ರಂಗನಾಥ್‌ ಕಂಟನಕುಂಟೆ ಸೇರಿದಂತೆ ಹಲವಾರು ಸಾಹಿತಿಗಳು, ವಿಧ್ವಾಂಸರು ಕಿಡಿ ಕಾರಿದ್ದರು.

ಇದನ್ನೂ ಓದಿ: ಬೆಂಗಳೂರು: ರಸ್ತೆ ಗುಂಡಿಗಳಿಗೆ ಹೂವು, ರಂಗೋಲಿ ಹಾಕಿ ಪ್ರತಿಭಟನೆ ಮಾಡಿದ ಎಎಪಿ

LEAVE A REPLY

Please enter your comment!
Please enter your name here