ನಮ್ಮ ತೋಟದ ಸಾಲಿಗೆ ನೀವೂ ಬನ್ನಿ…: ಭಾಗ-10
ಕೆಲವು ಗಿಡಗಳಿಗೆ ಅದೇನು ಶಕ್ತಿಯೋ ಕಾಣೆ. ಕತ್ತರಿಸಿದರೆ ಹೊಸ ಜೀವ ಪಡೆದು ಚಿಗುರುತ್ತವೆ. ಚಿಗುರು ಕಡ್ಡಿಗಳ ಈ ಈ ಜಾತಿಗೆ ಸೇರಿದ್ದು ಈ ಗ್ಲಿರಿಸೀಡಿಯಾ. ಇದನ್ನು ನಮ್ಮ ಜನ ಗೊಬ್ಬರದ ಗಿಡ ಎಂದೇ ಕರೆಯುವುದು ರೂಢಿ. ನಮ್ಮ ತೋಟದಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ಇದರ ಸೊಪ್ಪು ಅಪಾರ ಸಾರಜನದ ನೊರೆ ಹಾಲಿನಿಂದ ಕೂಡಿದೆ. ನೆಲಕ್ಕೂ ಸಾರಜನಕ ಸ್ಥೀರಿಕರಿಸುತ್ತದೆ.
ನನಗೆ ಈ ಗ್ಲಿರಿಸೀಡಿಯಾದ ಹುಚ್ಚು ಹತ್ತಿದ ಆ ವರ್ಷ ನಾನು ಮಾಡಿದ್ದು ಹೀಗೆ. ಕೇವಲ ಒಂದು ಅಡಿ ಆಳದ ಟ್ರೆಂಚ್ ತೆಗೆದು ಅದರೊಳಗೆ ಕಸಕಡ್ಡಿ ತುಂಬಿ ನೀರು ಬಿಟ್ಟು ಮುಚ್ಚಿ ಒಂದು ತಿಂಗಳು ಬಿಟ್ಟು ಆ ಟ್ರೆಂಚ್‌ಗೆ ಅಡಿಗೊಂದರಂತೆ ಎರಡು ಅಡಿ ಉದ್ದದ ಈ ಗ್ಲಿರಿಸಿಡಿಯಾ ಕಡ್ಡಿಗಳನ್ನು ಊರಿದೆ. ಒಂದೂ ಹುಸಿಹೋಗದಂತೆ ಹಸಿರು ದೀಪದಂತೆ ಹೊತ್ತಿಕೊಂಡವು. ಹದಿನೈದು ವರ್ಷವಾಯಿತು ಇನ್ನೂ ಉರಿಯುತ್ತಲೇ ಇವೆ. ಘನವಾದ ಸೊಪ್ಪು ಕೊಡುತ್ತಲೇ ಇವೆ.
ನೀವೇನಾದರೂ ಒಂದೆರಡು ವರ್ಷಗಳ ನಂತರ ಇವುಗಳನ್ನು ಕತ್ತರಿಸಿ ಒಪ್ಪವಾಗಿ ಇಟ್ಟುಕೊಳ್ಳದಿದ್ದರೆ, ನೀವು ನಿಯಂತ್ರಿಸಲಾಗದಂತೆ ಕೊಬ್ಬಿ ಬೆಳೆಯುತ್ತವೆ. ಇವಕ್ಕೆ ಗೊಬ್ಬರ ಗೋಡು ಏನೂ ಬೇಡ, ಕಾರಣ ಇವೇ ಗೊಬ್ಬರದ ಗಿಡಗಳು. ಬಿಸಿಲುಂಡು ವಾತಾವರಣದ ಗಾಳಿಯಲ್ಲಿನ ಅಪಾರ ಸಾರಜನಕವನ್ನು ಹಸಿರು ಎಲೆಗಳಾಗಿಸುವ ಶಕ್ತಿ ಇವಕ್ಕಿದೆ. ಗ್ಲಿರಿಸೀಡಿಯಾವನ್ನು ಕತ್ತರಿಸುವುದು ಅಷ್ಟು ಕಷ್ಟವಲ್ಲ, ಮುಳ್ಳಿಲ್ಲ , ತೀರಾ ಒರಟಲ್ಲ, ಅಲರ್ಜಿಯಿಲ್ಲ. ವರ್ಷಕ್ಕೆ ಎರಡು ಬಾರಿ ಕತ್ತಿರಿಸುತ್ತಿದ್ದರೆ ಒಳ್ಳೆಯ ಸೊಪ್ಪು ಸಿಗುತ್ತದೆ, ನಿಯಂತ್ರಣದಲ್ಲೂ ಇರುತ್ತದೆ. ಸೊಪ್ಪು ಹಸಿಯಾಗಿದ್ದಾಗಲೇ ಮಣ್ಣಿಗೆ ಸೇರಿಸುವುದು, ಗದ್ದೆಗೆ ತುಳಿಯುವುದು ಸಾಧ್ಯವಾದರೆ ತುಂಬಾ ಉಪಯುಕ್ತ. ಒಣಗಿದರೆ ಹೆಚ್ಚು ನಷ್ಟ.

ಈ ಸೊಪ್ಪನ್ನು ಸ್ವಲ್ಪ ಬಾಡಿಸಿ ದನಕರುಗಳಿಗೆ ಮೇವಾಗಿಯೂ ಬಳಸಬಹುದು. ಪೂರ್ಣ ಹಸಿಯ ಸೊಪ್ಪನ್ನು ಅದರ ಕಟು ವಾಸನೆಯ ಕಾರಣ ಕೆಲವು ದನಕರುಗಳು ತಿನ್ನಲು ನಿರಾಕರಿಸುವ ಸಾಧ್ಯತೆ ಇರುತ್ತದೆ. ಆಡುಕುರಿಗಳು ಮಾತ್ರ ಯಾವ ಭಿನ್ನಭೇದವೂ ಇಲ್ಲದೆ ಈ ಸೊಪ್ಪನ್ನು ಮೆಲ್ಲುತ್ತವೆ. ಚೆನ್ನಾಗಿ ಕೊಬ್ಬುತ್ತವೆ. ಬುದ್ದಿವಂತ ರೈತರು ಈ ಹಸಿ ಸೊಪ್ಪನ್ನು ಇತರ ಮೇವಿನೊಂದಿಗೆ ಬೆರೆಸಿ ಹಾಲು ಕೊಡುವ ರಾಸುಗಳು ತಿನ್ನುವಂತೆ ಮಾಡಿ ಹೆಚ್ಚು ಹಾಲು ಹಿಂಡಿ ಲಾಭ ಮಾಡಿಕೊಂಡವರಿದ್ದಾರೆ.
ಸಾವಯವ ಕೃಷಿ ಚಳುವಳಿಯ ಆರಂಭಿಕ ಸಂದರ್ಭದಲ್ಲಿ ಇದರ ಜನಪ್ರಿಯತೆ ಹೆಚ್ಚಾದಾಗ ಕೆಲವರು “ಇದು ನೆಲದ ಒರವು ತಿನ್ನುತ್ತದೆ” ಎಂಬ ತಕರಾರು ತೆಗೆದದ್ದು ಉಂಟು. ಆದರೆ ಇದರ ಬಗೆಗೆ ತಿಳಿಯುತ್ತಾ ಹೋದಂತೆ, ಇದು ನೆಲದ ಒರವು ತಿನ್ನುವುದಕ್ಕೆ ಬದಲಾಗಿ ನೆಲಕ್ಕೆ ಹೆಚ್ಚು ಒರವನ್ನು ಒದಗಿಸುತ್ತದೆ ಎಂಬುದು ರೈತರ ಅರಿವಿಗೆ ಬಂತು. ಆಗ ಬಹುತೇಕ ಸಾವಯವ ತೋಟಗಳಲ್ಲಿ ಇದು ಬೇಲಿಯಲ್ಲಷ್ಟೇ ಅಲ್ಲ ತೋಟದ ಬದುಗಳಲ್ಲೂ ಸ್ಥಾನ ಪಡೆಯಿತು.
ಈಗಲೂ ಕೆಲವು ರೈತರು ಇದರ ಸಹವಾಸ ಕಷ್ಟ ಎನ್ನುತ್ತಾರೆ. ಇದಕ್ಕೆ ಕಾರಣವಿದೆ. ಈ ಗ್ಲಿರಿಸೀಡಿಯಾವನ್ನು ಹೆಮ್ಮರವಾಗಲು ಬಿಡಬಾರದು. ಬಿಟ್ಟರೆ ಕೆಟ್ಟೆವು ಎಂದೇ ಅರ್ಥ. ಏಕೆಂದರೆ ಅದು ಸೂರ್ಯ ಸ್ನೇಹಿ ಗಿಡ, ಸೂರ್ಯನತ್ತಲೇ ಅದರ ಚಿತ್ತ. ಅದನ್ನು ಬುಡಕ್ಕೆ ಕತ್ತರಿಸುತ್ತಲೇ ಇರಬೇಕಾಗುತ್ತದೆ. ಕತ್ತರಿಸಿದಷ್ಟೂ ನಮಗೆ ಲಾಭವಾಗುತ್ತಲೇ ಇರುತ್ತದೆ. ಕುರಿಗೊಬ್ಬರ, ಕೋಳಿಗೊಬ್ಬರಕ್ಕೆ ಸಿಕ್ಕಾಪಟ್ಟೆ ದುಡ್ಡು ಸುರಿಯುವವರು ಏನು ಬೇಕಾದರೂ ಹೇಳುತ್ತಾರೆ. ನಿಜವಾದ ಕೃಷಿಕರು ತಮ್ಮ ಪರವಾಗಿ ಹಗಲು ರಾತ್ರಿ ದುಡಿಯುವ ಗಿಡಮರಗಳನ್ನು, ಹುಲ್ಲು ಸೊಪ್ಪು ತಿಂದು ಹಾಲು ಮತ್ತು ಗೊಬ್ಬರ ಕೊಡುವ ದನಕರು, ಕುರಿ ಆಡುಗಳನ್ನು ನೆಚ್ಚಲೇಬೇಕಾಗುತ್ತದೆ.

ಕೃಷ್ಣಮೂರ್ತಿ ಬಿಳಿಗೆರೆ
(ಹುಳಿಯಾರು ಬಿಎಂಎಸ್ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)
ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ…


