ಬಿಜೆಪಿ ದೇಶದಲ್ಲಿ ಅತಿ ಹೆಚ್ಚು ಠೇವಣಿ ಅಂದರೆ 6,061 ಕೋಟಿ ರೂ. ಚುನಾವಣಾ ಬಾಂಡ್ ಮೂಲಕ ಪಡೆದಿದ್ದು, ಇದರಲ್ಲಿ ಶೇ.12ರಷ್ಟು ಅಂದರೆ 745 ಕೋಟಿ ರೂ.ಹೈದರಾಬಾದ್ ಮೂಲದ ಕಂಪೆನಿಗಳಿಂದ ದೇಣಿಗೆಯನ್ನು ಪಡೆದಿದೆ ಎನ್ನುವುದು ಇದೀಗ ಬಹಿರಂಗವಾಗಿದೆ.
2017-2018 ಮತ್ತು 2023-2024ರ ನಡುವೆ ಹೈದರಾಬಾದ್‌ನಲ್ಲಿ ಖರೀದಿಸಿದ ಸುಮಾರು 745 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ನಿಧಿಯನ್ನು ಬಿಜೆಪಿ ಖಾತೆಗೆ ಜಮಾ ಮಾಡಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗದ ಡೇಟಾ ತೋರಿಸುತ್ತದೆ.
ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್, ರಿತ್ವಿಕ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್, ಗ್ರೀನ್ಕೋ ಅನಂತಪುರ ವಿಂಡ್ ಪವರ್ ಪ್ರೈವೇಟ್ ಲಿಮಿಟೆಡ್ ಮತ್ತು ದಿವ್ಯೇಶ್ ಪವರ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಹಲವಾರು ಸಂಸ್ಥೆಗಳು ಹೈದರಾಬಾದ್‌ನ ಎಸ್‌ಬಿಐ ಬ್ರಾಂಚ್‌ನಿಂದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.
ಹೈದರಾಬಾದ್‌ನ ಮೇಘಾ ಇಂಜಿನಿಯರಿಂಗ್ (ಎಂಇಐಎಲ್) ಮಾತ್ರ ತಲಾ 1 ಕೋಟಿ ಮೌಲ್ಯದ 140 ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ, ಅವುಗಳಲ್ಲಿ ಹೆಚ್ಚಿನ ಹಣ ಬಿಜೆಪಿಗೆ ರವಾನೆಯಾಗಿದೆ. ಹೆಸರು ಸೂಚಿಸದ ಸಂಸ್ಥೆಯು ಬಿಜೆಪಿಗೆ ಅತ್ಯಧಿಕ ಮೊತ್ತದ ಸುಮಾರು 585 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ, ನಂತರ 195 ಕೋಟಿ ರೂಪಾಯಿಗಳನ್ನು ಬಿಆರ್‌ಎಸ್‌ಗೆ ಮತ್ತು 85 ಕೋಟಿ ರೂಪಾಯಿಗಳನ್ನು ಡಿಎಂಕೆಗೆ ನೀಡಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಅಕ್ಟೋಬರ್ 2020ರಲ್ಲಿ ರೂ 20 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಅದೇ ವರ್ಷದ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಏಷ್ಯಾದ ಅತಿ ಉದ್ದದ ರಸ್ತೆ ಸುರಂಗ ಯೋಜನೆಯನ್ನು ನಿರ್ಮಿಸುವ ಯೋಜನೆಯನ್ನು ಕಂಪನಿಯು ಪಡೆದುಕೊಂಡಿದೆ.
ಹೈದರಾಬಾದ್‌ನಿಂದ ಎರಡನೇ ಮತ್ತು ಮೂರನೇ ಅತ್ಯಧಿಕ ಮೊತ್ತವು ಕ್ರಮವಾಗಿ 50 ಕೋಟಿ ರೂ. ಮತ್ತು 49 ಕೋಟಿ ರೂಗಳಾಗಿದ್ದು, ಕ್ರಮವಾಗಿ ನವೆಂಬರ್ 10, 2022 ಮತ್ತು ಡಿಸೆಂಬರ್ 12, 2022ರಂದು ಬಿಜೆಪಿಗೆ ವರ್ಗಾವಣೆಯಾಗಿದೆ.
ಹೈದರಾಬಾದ್‌ನ ಇತರ ಚುನಾವಣಾ ಬಾಂಡ್ ದೇಣಿಗೆದಾರರಲ್ಲಿ ಈ ಹಿಂದೆ ಚುನಾವಣಾ ಬಾಂಡ್ ದೇಣಿಗೆ ನೀಡಲು ನಿರಾಕರಿಸಿದ್ದ ಯಶೋಧ ಆಸ್ಪತ್ರೆ ಸೇರಿದೆ. ಯಶೋಧ ಆಸ್ಪತ್ರೆ ಒಟ್ಟು 162 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ದೇಣಿಗೆ ನೀಡಿದೆ. ಬಿಆರ್‌ಎಸ್‌ಗೆ 94 ಕೋಟಿ, ಕಾಂಗ್ರೆಸ್‌ಗೆ 64 ಕೋಟಿ, ಬಿಜೆಪಿಗೆ 2 ಕೋಟಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ 1 ಕೋಟಿ ರೂಪಾಯಿ ನೀಡಲಾಗಿದೆ ಎಂದು ಇತ್ತೀಚಿನ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಆಸ್ಪತ್ರೆ ಡಿಸೆಂಬರ್ 2020 ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಪಟ್ಟಿತ್ತು ಎನ್ನಲಾಗಿದೆ.
ಮೊದಲ ಪಟ್ಟಿ ಬಿಡುಗಡೆಯಾದ ನಂತರ, ಹೈದರಾಬಾದ್‌ನ ಯಶೋದಾ ಆಸ್ಪತ್ರೆ ದೇಣಿಗೆ ನೀಡಿರುವುದನ್ನು ನಿರಾಕರಿಸಿದೆ ಮತ್ತು ಗಾಜಿಯಾಬಾದ್‌ನ ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿರಬಹುದು ಎಂದು ಹೇಳಿತ್ತು. ಆದರೆ ಗಾಜಿಯಾಬಾದ್‌ನ ಯಶೋಧ ಆಸ್ಪತ್ರೆ ಕೂಡ ದೇಣಿಗೆ ನೀಡಿರುವುದನ್ನು ತಳ್ಳಿಹಾಕಿದೆ.
ಇದನ್ನು ಓದಿ: ಚುನಾವಣಾ ಬಾಂಡ್ ಖರೀದಿಸಿದ್ದ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ಆರೋಪಿ


