- ನಳಿನಿ ಕೋಲಾರ. ಯುವ ರೈತ ಹೋರಾಟಗಾರ್ತಿ.
ಅನಾದಿ ಕಾಲದಿಂದಲು ಇಂದಿನ ಕಾಲದವರೆಗೂ ಕಂದಾಯ ಇಲಾಖೆಯು ರೈತನ ಜುಟ್ಟನ್ನು ಬಿಗಿಯಾಗಿ ಹಿಡಿದು ಕುಳಿತಿದೆ ಎಂದರೆ ತಪ್ಪಾಗಲಾರದು. ಈ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಖಂಡಿಸಿ ಹತಾಶರಾಗಿ ಏನು ಮಾಡಲಾಗದ ಅಸಹಾಯಕರಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನಾವು ನೋಡಬಹುದು. ರಾಮನಗರದ ರೈತನೊಬ್ಬ ಕಂದಾಯ ಇಲಾಖೆಯಿಂದ ತನ್ನ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗದೆ ಬೇಸತ್ತು, 7-3-2013 ರಂದು ತಾಲ್ಲೂಕು ಕಛೇರಿಯ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಘಟನೆ ನಡೆದು 7 ವರ್ಷಗಳ ಕಳೆದರೂ ಕಂದಾಯ ಇಲಾಖೆಯ ಪರಿಸ್ಥಿತಿಯಲ್ಲಿ ಏನಾದರೂ ಬದಲಾವಣೆ ಬಂದಿದೆಯೇ? ಇಲ್ಲ ಇನ್ನು ಲೋಪಗಳು ಹೆಚ್ಚಾಗುತ್ತಲೇ ಇವೆ.
ಇದು ಕೇವಲ ಒಬ್ಬ ಗಂಗಯ್ಯನ ವಿಷಯ ಮಾತ್ರವಲ್ಲ. ಅವರ ಹಾಗೆ ಸುಮಾರಷ್ಟು ರೈತರು ಈ ವ್ಯವಸ್ಥೆಯನ್ನು ಸರಿಪಡಿಸಲು ಪ್ರಾಣತ್ಯಾಗ ಮಾಡಿದ್ದಾರೆ. ಆದರೂ ಈ ಸಮಾಜವನ್ನು ಸರಿಪಡಿಸಲು ಆಗಿಲ್ಲ. ಪ್ರಾಣತ್ಯಾಗಕ್ಕೆ ಬೆದರದ ಪಂಚೇಂದ್ರಿಯಗಳಿಲ್ಲದ ದಪ್ಪ ಚರ್ಮದ ಈ ವ್ಯವಸ್ಥೆ ಮತ್ತೆ ಯಾವ ತ್ಯಾಗದಿಂದ ಸರಿಪಡಿಸಲು ಸಾಧ್ಯ?
ಸರ್ಕಾರದ ಕಾನೂನು ಮತ್ತು ಕಂದಾಯ ಇಲಾಖೆಯ ನಡುವೆ ರೈತರು ದಿನದಿಂದ ದಿನಕ್ಕೆ ನಲುಗುತ್ತಿದ್ದಾರೆ. ಉದಾಹರಣೆಗೆ ಭೂರಹಿತರಿಗೆ ಭೂಮಿಸಿಗಲೆಂದು ಜಾರಿಮಾಡಿದ ನಮೂನೆ 53,57 ವರ್ಷಗಳೇ ಕಳೆದರೂ ಇದುವರೆಗೂ ಕಾರ್ಯಗತವಾಗಿಲ್ಲ. ಅರ್ಜಿ ಸಲ್ಲಿಸಿದ ನಂತರ ರೈತರು ಕಛೇರಿಯಿಂದ ಕಛೇರಿಗೆ ಅಲೆದು ಅಲೆದು ಅವನ ಚಪ್ಪಲಿ ಸವೆಯುತ್ತದೆಯೇ ಹೊರೆತು ಕೆಲಸ ಮಾತ್ರ ಆಗಿರುವುದಿಲ್ಲ. ಇದಕ್ಕಾಗಿ ಸಂಬಂದಪಟ್ಟ ಆಧಿಕಾರಿಗಳನ್ನು ಕೇಳಿದರೆ ನಮಗೆ ಯಾವುದೇ ಆದೇಶ ಬಂದಿಲ್ಲ ಅಥವಾ ಶಾಸಕರಿಂದ ಲೆಟರ್ ಬೇಕು ಎಂಬಂತೆ ಇನ್ನಿತರ ಸಬೂಬುಗಳನ್ನು ಹೇಳುತ್ತಾರೆ. ಈ ಹಿಂದೆ ನಮೂನೆ 50ರಲ್ಲಿ ಜಮೀನು ಮಂಜೂರಾಗಿರುವ ರೈತರು ಸಾಗುವಳಿ ಚೀಟಿ ಪಡೆಯಲು ಇನ್ನಿಲ್ಲದ ಕಷ್ಟ ಎದುರಿಸುತ್ತಿದ್ದಾರೆ.
ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆ ಇವೆರಡೂ ರೈತರಿಗೆ ಎರಡು ಜೊಡೆತ್ತುಗಳಿದ್ದ ಹಾಗೆ. ಆದರೆ ಒಬ್ಬ ರೈತ ತನ್ನ ಜಮೀನನ್ನು ಸರ್ವೆ ಮಾಡಿಸಬೇಕಾದರೆ ಸರ್ಕಾರಿ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿದ ನಂತರ ಕನಿಷ್ಠ 6 ತಿಂಗಳಿನಿಂದ ಒಂದು ವರ್ಷವಾದರೂ ಕಾಯಬೇಕಾಗುತ್ತದೆ. ಜೊತೆಗೆ ಸಣ್ಣ ಪುಟ್ಟ ತೊಂದರೆಗಳೇನಾದರೂ ಇದ್ದು ತಿದ್ದುಪಡಿಗಳಿದ್ದರೆ ಆ ರೈತನ ಕಥೆ ಮುಗಿದೇ ಹೋಯಿತು. ಸುಮಾರು 2-3 ವರ್ಷಗಳಾದರೂ ಸರ್ವೆ ಇಲಾಖೆಯಿಂದ ಕಂದಾಯ ಇಲಾಖೆಗೆ ಅಲೆದು ಅಲೆದು ಸುಸ್ತಾಗಿ ಕೈಬಿಟ್ಟ ಪ್ರಕರಣಗಳಿಗೆ ಲೆಕ್ಕವಿಲ್ಲ. ಇನ್ನೂ ಬಡ ರೈತನ ಪಾಡಂತೂ ಕೇಳುವುದೇ ಬೇಡ. ಈ ರೈತರ ಜಮೀನು ಸರ್ವೆ ಮಾಡಿಸುವುದು ಕನಸಾಗಿಯೇ ಉಳಿದಿರುತ್ತದೆ.
ಭೂಗಳ್ಳರ ಮನೆ ಬಾಗಿಲಿಗೆ ಸೇವೆ
ಇಂದು ಅಧಿಕಾರಿಗಳು, ಉಳ್ಳವರು, ಜನಪ್ರತಿನಿಧಿಗಳು, ಅವರ ಹಿಂಬಾಲಕರು ಮತ್ತು ಭೂಗಳ್ಳರ ದಾಖಲೆಗಳು ಅಕ್ರಮವಾಗಿದ್ದರೂ ಸಹ ರಾತ್ರೊ ರಾತ್ರಿ ಸಿದ್ದವಾಗುತ್ತವೆ. ಅವರಿಗೆ ಯಾವುದೇ ಕಾನೂನು ನಿಯಮಗಳು ಅಡ್ಡಿಯಾಗುವುದಿಲ್ಲ. ಇದು ಇಂದಿನ ಕಂದಾಯ ಮತ್ತು ಸರ್ವೆ ಇಲಾಖೆಯ ಪರಿಸ್ಥಿತಿ. ಇನ್ನೂ ಮುಂದುವರೆದು ನೋಡುವುದಾದರೆ ಸರ್ಕಾರದಿಂದ ಬರುವ ಪರಿಹಾರಗಳು ಬಂದರೆ ಅದನ್ನು ರೈತನ ಖಾತೆಗೆ ಜಮಾ ಮಾಡಲು ಇಲಾಖೆಯಲ್ಲಿ ರೈತರ ಮಾಹಿತಿಯೇ ಇರುವುದಿಲ್ಲ. 1947 ಕ್ಕಿಂತ ಹಿಂದಿನಿಂದಲೂ ರೈತರಾಗಿದ್ದರೂ ಸಹ ರೈತರ ಮಾಹಿತಿ ಮಾತ್ರ ಕಂದಾಯ ಇಲಾಖೆಯಲ್ಲಿರುವುದಿಲ್ಲ. ಬೆಳೆ ದರ್ಶಕ್ ಆಪ್‌ನಲ್ಲಿ ಪ್ರತಿ ರೈತನ ವಿವರ, ಬೆಳೆ, ಸರ್ವೆ ನಂಬರ್ ಸಮೇತ Upload ಮಾಡುವುದು ಕಡ್ಡಾಯ. ಆದರೆ ಅಧಿಕಾರಿಗಳು ಸ್ಥಳಪರಿಶೀಲನೆ ಮಾಡಿ ನಿಖರ ದಾಖಲೆಳನ್ನು ನೀಡುವುದರ ಬದಲು ಮನಬಂದಂತೆ ಮಾಹಿತಿಗಳನ್ನು Upload ಮಾಡಿರುತ್ತಾರೆ.

ಸರ್ಕಾರ ಯಾವುದಾದರೂ ಯೋಜನೆ ಜಾರಿ ಮಾಡಿದರೆ ಆಗ ಇಲಾಖೆ ರೈತರಿಂದ ಅರ್ಜಿ ಕರೆಯುತ್ತದೆ. ಕೊರೊನಾ ಸಂದರ್ಭದಲ್ಲಿಯೂ ಹೂಬೆಳೆ, ತರಕಾರಿಗಳಿಗೆ ಪರಿಹಾರ ಘೋಷಣೆ ಮಾಡಿದಾಗ ನಮ್ಮ ಕಣ್ಣು ಮುಂದೆಯೇ ರೈತರು ಅರ್ಜಿ ಫಾರಂ ಹಿಡಿದು ಕಛೇರಿ ಮುಂದೆ ದಿನಗಟ್ಟಲೆ ನಿಂತು ಕಾದಿರುವುದನ್ನು ನೊಡಿದ್ದೇವೆ. ಇದಕ್ಕೆಲ್ಲಾ ಕಾರಣ ಕಂದಾಯ ಇಲಾಖೆ ಸಮರ್ಪಕ ಬೆಳೆ ಸಮೀಕ್ಷೆ ಮಾಡದೇ ಇರುವುದು. ಇದರಿಂದ ಕಟ್ಟಕಡೆಯ ರೈತನಿಗೆ ಪರಿಹಾರ ಸಿಗುವುದಿಲ್ಲ.
ಹಿಂದಿನ ಕಂದಾಯ ಇಲಾಖೆಗೂ ಈಗಿನ ಕಂದಾಯ ಇಲಾಖೆಗೂ ಬಹಳ ವ್ಯತ್ಯಾಸ ಕಂಡುಬರುತ್ತದೆ. ಹೇಗೆಂದರೆ ಹಿಂದಿನ ನಮ್ಮ ತಾತಂದಿರ ಕಾಲದಲ್ಲಿ ಅಧಿಕಾರಿಗಳು ಸ್ವಲ್ಪ ಮಟ್ಟಿಗಾದರೂ ರೈತರ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಈಗಿನ ಕಂದಾಯ ಇಲಾಖೆ ಶ್ರೀಮಂತರು, ಉಳ್ಳವರ ಪರವಾಗಿ ಮಾತ್ರ ಕೆಲಸ ಮಾಡುತ್ತಿದೆ. ಬಡ ರೈತರು ಪ್ರತಿದಿನವೂ ಕಛೇರಿಗಳಿಗೆ ಅಲೆದು ಅಲೆದು ಸುಸ್ತಾದರೂ ಅವರ ಮಕ್ಕಳ ಕಾಲಕ್ಕೂ ಸಹ ಕೆಲಸವಾಗಿರುವುದಿಲ್ಲ.
ರಾಜ್ಯದ ಯಾವುದೇ ತಾಲ್ಲೂಕು ಕಛೇರಿ ಬಾಗಿಲಿಗೆ ಹೋಗಿ ನಿಂತರೆ ಸಾಕು, ಹಲವು ತರಹದ ಕತೆಗಳು ಕಣ್ಣಿಗೆ ರಾಚುತ್ತವೆ. ಹಕ್ಕು ಪತ್ರಕ್ಕಾಗಿ, ಸಾಗುವಳಿ ಚೀಟಗಾಗಿ, ಖಾತೆ ಬದಲಾವಣೆಗಾಗಿ ಅಂಗಲಾಚುತ್ತಿರುವವರು, ಅಲ್ಲದೆ ಪಹಣಿಯಲ್ಲಿ ಬೆಳೆ ನಮೂದಾತಿಯಿಲ್ಲದೆ ಒದ್ದಾಡುತ್ತಿರುವ ನೂರಾರು ರೈತರನ್ನು ನಾವು ನೋಡಬಹುದು.

ಹೌದು ಪಹಣಿಯಲ್ಲಿ ಬೆಳೆಯಿಲ್ಲ ಎಂಬುದು ರೈತನ ಪಾಲಿನ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಹರಸಹಾಸ ಪಡಬೇಕಾಗಿದೆ.
ಕಂದಾಯ ಇಲಾಖೆಯಂತೆ ಈಗಿನ ಸರ್ಕಾರಗಳು ಸಹ ದಪ್ಪ ಚರ್ಮದವು. ಕಂದಾಯ ಇಲಾಖೆಯ ತಪ್ಪುಗಳನ್ನು ಪತ್ರಿಕೆಗಳ ಮುಖಾಂತರ ಸರ್ಕಾರದ ಗಮನಕ್ಕೆ ತಂದರೆ ಸಂಬಂಧಪಟ್ಟ ಸರ್ಕಾರಗಳು ನಮಗೂ ಅದಕ್ಕೂ ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ ವರ್ತಿಸುತ್ತಿವೆ.
ಹಳ್ಳಿಯ ಗ್ರಾಮ ಸಹಾಯಕರಿಂದ ಹಿಡಿದು ಜಿಲ್ಲಾಧಿಕಾರಿಗಳನ್ನು ಕಾಣಲು ದಲ್ಲಾಳಿಗಳ ಮೂಲಕ ಹೋದರೆ ಮಾತ್ರ ಕಾಣಬಹುದು ಪರಿಸ್ಥಿತಿ ಇಂದು ಎಲ್ಲಾ ಜಿಲ್ಲೆಗಳಲ್ಲಿ ನಿರ್ಮಾಣವಾಗಿದೆ. ಪ್ರತಿ ಕೆಲಸಕ್ಕೂ ಮಧ್ಯವರ್ತಿಗಳ ಕಾಟವಿದೆ. ಕೆಲವು ಕಛೇರಿಗಳಂತೂ ದಲ್ಲಾಳಿಗಳೇ ಅಧಿಕಾರಿಗಳಾಗಿರುತ್ತಾರೆ. ಅಧಿಕಾರಿ ಸಹಿ ಮಾಡುವುದು ಬಿಟ್ಟರೆ ಉಳಿದ ಎಲ್ಲವನ್ನು ದಲ್ಲಾಳಿಗಳೇ ಮಾಡುತ್ತಿದ್ದಾರೆ. ದಲ್ಲಾಳಿಗಳು ಹೇಳಿದ ಹಾಗೆ ಅಧಿಕಾರಿಗಳು ಕೇಳುವ ಪರಿಸ್ಥಿತಿ ಇದೆ. ಇವರ ಕಮಿಷನ್ ಕೊಡಲಾಗದೆ ರೈತರು ಕಂಗಾಲಾಗಿದ್ದಾರೆ.
ಈಗ ಕಂದಾಯ ಇಲಾಖೆಯ ಈ ಸರ್ವಾಧಿಕಾರವನ್ನು ಕೊನೆಗಾಣಿಸಬೇಕಾಗಿದೆ. ಇದಕ್ಕಾಗಿ ರೈತರು ಒಗ್ಗಟ್ಟಾಗಬೇಕಿದೆ. ಇಲ್ಲದಿದ್ದಲ್ಲಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಖಚಿತ. ಸರ್ಕಾರಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ದೊಡ್ಡ ಹೋರಾಟದ ಅನಿವಾರ್ಯತೆ ಇದೆ.
ಇದನ್ನೂ ಓದಿ: ಹೊಂಬಾಳೆ-1: ದೇಶದ ಅನ್ನದ ಬಟ್ಟಲನ್ನೇ ಮಾರಲು ಹೊರಟರೆ ಕೊನೆಗೆ ಏನು ಉಳಿದೀತು?



ರೈತನನ್ನ ಮಾತಿಗಷ್ಟೆ ದೇಶದ ಬೆನ್ನೆಲುಬು ಎನ್ನುತ್ತಾರೆ ಅದರೆ ಅವನ ಎಲುಬುಗಳನ್ನೆ ಮುರಿದು ಹಾಕುತ್ತಿದ್ದಾರೆ