ಐದು ವರ್ಷದ ಬಾಲಕಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದ ವ್ಯಕ್ತಿಯನ್ನು ಪೊಲೀಸ್ ‘ಎನ್‌ಕೌಂಟರ್’ನಲ್ಲಿ ಹುಬ್ಬಳ್ಳಿಯಲ್ಲಿ ಭಾನುವಾರ ಮೃತರಾಗಿದ್ದಾರೆ. ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಪೊಲೀಸರು ‘ಎನ್‌ಕೌಂಟರ್’ ಮಾಡಿದ್ದಾಗಿ ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಹುಬ್ಬಳ್ಳಿ ಬಾಲಕಿ ಅಪಹರಣ
ಕೊಲೆ ಆರೋಪಿಯನ್ನು ಬಿಹಾರದ ಪಾಟ್ನಾ ಮೂಲದ ವಲಸೆ ಕಾರ್ಮಿಕ ರಿತೇಶ್ ಕುಮಾರ್ ಎಂದು ಗುರುತಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಪೊಲೀಸರ ಮೇಲೆ ಕಲ್ಲು ತೂರಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಕೊಲೆ ಆರೋಪಿಯ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಹೇಳಿದ್ದಾರೆ.
ಆರೋಪಿಯನ್ನು ಬಂಧಿಸಲು ಪ್ರಯತ್ನ ನಡೆಸಲು ಪೊಲೀಸರು ಆತನ ಕಾಲಿಗೆ ಮತ್ತು ನಂತರ ಬೆನ್ನಿಗೆ ಗುಂಡು ಹಾರಿಸಿದ್ದಾಗಿ ಪೊಲೀಸರು ಹೇಳಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆರೋಪಿಯನ್ನು ಕೆಎಂಸಿ-ಆರ್‌ಐಗೆ ಕರೆತರಲಾಯಿತು ಎಂದು ತಿಳಿಸಿದ್ದಾರೆ.
ಅದಾಗ್ಯೂ, ತೀವ್ರ ರಕ್ತಸ್ರಾವದಿಂದ ಆರೋಪಿ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆಯಲ್ಲಿ ಮಹಿಳಾ ಪಿಎಸ್‌ಐ ಸೇರಿದಂತೆ ಮೂವರು ಪೊಲೀಸರಿಗೆ ಗಾಯಗಳಾಗಿದ್ದು, ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಐದು ವರ್ಷದ ಬಾಲಕಿಯೊಬ್ಬರು ತನ್ನ ತಾಯಿ ಮನೆ ಮುಂದೆ ಆಟವಾಡುತ್ತಿದ್ದಾಗ ಆರೋಪಿ ಅವರನ್ನು ಅಪಹರಿಸಿದ್ದರು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ಬಾಲಕಿಯನ್ನು ನಂತರ ಹತ್ತಿರದ ಶೆಡ್‌ಗೆ ಕರೆದೊಯ್ದ ಆರೋಪಿ ಅವರ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದರು.
ಈ ವೇಳೆ ಜೋರಾಗಿ ಕೂಗಿದ್ದ ಬಾಲಕಿಯ ಶಬ್ಧ ಕೇಳಿ ಸ್ಥಳೀಯರು ಅನುಮಾನಗೊಂಡು ಅವರನ್ನು ರಕ್ಷಿಸಲು ಶೆಡ್‌ಗೆ ಧಾವಿಸಿದ್ದರು. ಆದರೆ, ಸ್ಥಳದಿಂದ ಓಡಿಹೋಗುವ ಮೊದಲು ಆರೋಪಿ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಸ್ಥಳೀಯರು ಅವನನ್ನು ಸ್ವಲ್ಪ ದೂರದವರೆಗೆ ಬೆನ್ನಟ್ಟಿದ್ದರೂ, ಆರೋಪಿ ತಪ್ಪಿಸಿಕೊಂಡಿದ್ದ. ಅದಾಗ್ಯೂ, ಕೆಲವೇ ನಿಮಿಷಗಳಲ್ಲಿ ಮತ್ತೊಂದು ಗುಂಪು ರಿತೇಶ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಈ ಮಧ್ಯೆ, ಬಾಲಕಿಯನ್ನು ಕೆಎಂಸಿ-ಆರ್‌ಐಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಸುದ್ದಿ ಹರಡುತ್ತಿದ್ದಂತೆ, ಅಶೋಕ್ ನಗರ, ವಿಶ್ವೇಶ್ವರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ಆರೋಪಿಯನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಅಥವಾ ಆತನನ್ನು ಎನ್ಕೌಂಟರ್ ಮಾಡುವಂತೆ ಒತ್ತಾಯಿಸಿ ದಿನವಿಡೀ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಪೊಲೀಸ್ ಉನ್ನತ ಅಧಿಕಾರಿಗಳು ಪದೇ ಪದೇ ಮನವಿ ಮಾಡಿದರೂ ಯಾವುದೇ ಫಲಿತಾಂಶ ಸಿಕ್ಕಿರಲಿಲ್ಲ ಮತ್ತು ಸಮಯ ಕಳೆದಂತೆ ಪ್ರತಿಭಟನೆ ತೀವ್ರಗೊಳ್ಳಲು ಪ್ರಾರಂಭವಾಯಿತು. ಸಂಜೆ 6:00 ರ ಸುಮಾರಿಗೆ, ಕೆಎಂಸಿ-ಆರ್‌ಐ ಪ್ರವೇಶ ದ್ವಾರದ ಮುಂದೆ ಜಮಾಯಿಸಿದ ಜನರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಹುಬ್ಬಳ್ಳಿ-ಧಾರವಾಡ ರಸ್ತೆಯನ್ನು ತಡೆದಿದ್ದರು. ಈ ವೇಳೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಅವರು ಟೈರ್‌ಗಳನ್ನು ಸಹ ಸುಟ್ಟು ಹಾಕಿದ್ದಾರೆ ಎಂದು ವರದಿಯಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್, ಆರೋಪಿ ರಿತೇಶ್ ಕುಮಾರ್ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಹುಬ್ಬಳ್ಳಿ ಬಾಲಕಿ ಅಪಹರಣ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅಂಬೇಡ್ಕರ್ ಜನ್ಮದಿನ ವಿಶೇಷ: ಅಂಬೇಡ್ಕರ್ ಪರಿಭಾವಿಸಿದ ಭಾರತ V/s ವರ್ತಮಾನ ಭಾರತ
ಅಂಬೇಡ್ಕರ್ ಜನ್ಮದಿನ ವಿಶೇಷ: ಅಂಬೇಡ್ಕರ್ ಪರಿಭಾವಿಸಿದ ಭಾರತ V/s ವರ್ತಮಾನ ಭಾರತ

