ವಾಣಿಜ್ಯ ನಗರಿ ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಿಡಿದುಕೊಂಡಿದ್ದ ಬಾಕ್ಸ್ ಬ್ಲಾಸ್ಟ್ ಆಗಿ, ಆತಂಕ ಮೂಡಿಸಿದೆ. ರೈಲ್ವೇ ನಿಲ್ದಾಣದ ಒಳಗೆ ಬಂದಿದ್ದ ವ್ಯಕ್ತಿ ಕೈಯಲ್ಲಿ ಬಾಕ್ಸ್ ಹಿಡಿದುಕೊಂಡಿದ್ದ. ಬಾಕ್ಸ್ ಏಕಾಏಕಿ ಸ್ಫೋಟಗೊಂಡಿದ್ದು, ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಕಿಮ್ಸ್ ಗೆ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ವ್ಯಕ್ತಿಯನ್ನು ಹುಸೇನ್ ಸಾಬ್ ನಾಯಕವಾಲೆ (22) ಎಂದು ಗುರುತಿಸಲಾಗಿದ್ದು, ಆಂಧ್ರಪ್ರದೇಶ ಮೂಲದವರು ಎಂದು ತಿಳಿದು ಬಂದಿದೆ. ಬಾಕ್ಸ್ ಬ್ಲಾಸ್ಟ್ ಆಗುತ್ತಿದ್ದಂತೆ ಸ್ಥಳಕ್ಕೆ ಆರ್ ಪಿಎಫ್ ಹಾಗೂ ಪೊಲೀಸ್ ಅಧಿಕಾರಿಗಳು ದೌಡಾಯಿಸಿದರು. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು, ಶ್ವಾನದಳದೊಂದಿಗೆ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಪೊಲೀಸ್ ಆಯುಕ್ತ ಆರ್ .ದಿಲೀಪ್, ಇಬ್ಬರು ಡಿಸಿಪಿಗಳು ಹಾಗೂ ರೈಲ್ವೇ ಅಧಿಕಾರಿಗಳು ಭೇಟಿ ನೀಡಿ, ಮಾಹಿತಿ ಕಲೆ ಹಾಕಿದರು. ಕೈಯಲ್ಲಿದ್ದ ಬಾಕ್ಸ್ ಸ್ಪೋಟಗೊಂಡ ಪರಿಣಾಮ ವ್ಯಕ್ತಿಯ ಕೈ ರಕ್ತಸಿಕ್ತವಾಗಿತ್ತು. ಗಾಯಾಳುವನ್ನು ಮೊದಲು ರೈಲ್ವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಕಿಮ್ಸ್ ಗೆ ದಾಖಲಿಸಲಾಗಿದೆ. ಬಾಕ್ಸ್ ನಲ್ಲಿ ಏನಿತ್ತು..? ವ್ಯಕ್ತಿ ಎಲ್ಲಿಗೆ ಹೊರಟಿದ್ದ ಎಂಬ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.


