ಹುಣಸೂರಿನಲ್ಲಿ ಅನರ್ಹ ಶಾಸಕ ಎಚ್.ವಿಶ್ವನಾಥ್ ಇಲ್ಲ ಇಲ್ಲ ಎನ್ನುತ್ತಲೇ ಬಿಜೆಪಿಗೆ ಹಾರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಸಹ ಬಲಿಷ್ಠ ಅಭ್ಯರ್ಥಿ ಮಂಜುನಾಥ್‌ರನ್ನು ಕಣಕ್ಕಿಳಿಸಿದೆ. ಜೆಡಿಎಸ್ ಸೋಮಶೇಖರ್‌ರವರಿಗೆ ಟಿಕೆಟ್ ನೀಡಿದೆ.
ಎಚ್.ವಿಶ್ವನಾಥ್ ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುವ ಭರವಸೆ ನೀಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವುದರಿಂದ ತಾನೂ ಗೆದ್ದರೆ ಸಚಿವ ಸ್ಥಾನದ ಜೊತೆಗೆ ಕ್ಷೇತ್ರದ ಅಭಿವೃದ್ದಿ ಸಾಧ್ಯ ಎಂದು ಘೋಷಿಸಿದ್ದಾರೆ. ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಪಿ.ಯೋಗೀಶ್ವರ್ ಸಹ ಸದ್ಯಕ್ಕೆ ತಣ್ಣಗಾಗಿದ್ದು ವಿಶ್ವನಾಥ್ ಪರ ಮತ ಯಾಚಿಸುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕೂಡ ಸಂಸದ ವಿ.ಶ್ರೀನಿವಾಸ್ ಪ್ರಸಾದ್‌ರವರ ಋಣದ ಕಾರಣಕ್ಕಾಗಿ ವಿಶ್ವನಾಥ್ ಬೆಂಬಲಿಸಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಯಲ್ಲಾಪುರ ಉಪಸಮರದಲ್ಲಿ ದೇಶಪಾಂಡೆ ಹಠಕ್ಕೆ ಹೆದರಿದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್!
ಕಾಂಗ್ರೆಸ್‌ನ ಮಂಜುನಾಥ್ ಕಳೆದ 6 ವರ್ಷಗಳಿಂದ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಹತ್ತಿರ ಬಂದು ಮುಗ್ಗರಿಸಿದ್ದ ಇವರು ಈ ಬಾರಿ ಶತಾಯಗತಾಯ ಗೆಲ್ಲಲು ಪಣತೊಟ್ಟಿದ್ದಾರೆ.
ಇನ್ನು ಈ ಕ್ಷೇತ್ರದಲ್ಲಿ ಕುರುಬ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಹಜವಾಗಿಯೇ ಅವು ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಹಂಚಿಕೆಯಾಗಲಿವೆ. ಹಾಗಾಗಿಯೇ ಕುರುಬ ಮತಗಳು ತಮ್ಮಿಂದ ಕೈ ತಪ್ಪಿಹೋಗಬಾರದು ಎಂದು ಎಚ್.ವಿಶ್ವನಾಥ್‌ರವರು ಸಿದ್ದರಾಮಯ್ಯನವರನ್ನು ಟೀಕಿಸುವ ಬದಲು ಎರಡೆರಡು ಬಾರಿ ಹೊಗಳಿದ್ದಾರೆ.
ಇನ್ನು ಜೆಡಿಎಸ್‌ನ ಸೋಮಶೇಖರ್‌ರವರು ನೆಪಮಾತ್ರಕ್ಕೆ ಚುನಾವಣೆಗೆ ನಿಂತಿದ್ದು ಜೆಡಿಎಸ್ ಕೊನೆ ಕ್ಷಣದಲ್ಲಿ ಮೇಲಿನ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರನ್ನು ಬೆಂಬಲಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೆಡಿಎಸ್ ಯಾರಿಗೆ ಬೆಂಬಲಿಸುತ್ತದೆಯೋ ಅವರ ಗೆಲುವು ನಿಶ್ಚಿತ ಎನ್ನಲಾಗುತ್ತಿದೆ.


