ಹೈದ್ರಾಬಾದ್: ಇಲ್ಲಿನ ಸಿಕಂದರಾಬಾದ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ತನ್ನ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯ ಹೆಂಡತಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಬಳಿಕ ಗಂಡ-ಹೆಂಡತಿಗೆ ಗನ್ ತೋರಿಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
“ಮರೇಡಪಲ್ಲಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ವರ ರಾವ್ ನನ್ನ ಮನೆಗೆ ನುಗ್ಗಿ ನನ್ನ ಮೇಲೆ ಅತ್ಯಾಚಾರ ಎಸಗಿ, ಪತಿಯ ಮೇಲೆ ಹಲ್ಲೆ ನಡೆಸಿ ರಿವಾಲ್ವರ್‌ನಿಂದ ಬೆದರಿಸಿ ಜುಲೈ 7 ಮತ್ತು 8ರ ಮಧ್ಯರಾತ್ರಿ ನಮ್ಮನ್ನು ಅಪಹರಿಸಿದ್ದನು” ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅತ್ಯಾಚಾರ ಮತ್ತು ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ತನ್ನ ವಿರುದ್ಧ ಪ್ರಕರಣ ದಾಖಲಿಸಿದಾಗಿನಿಂದ ತಲೆಮರೆಸಿಕೊಂಡಿದ್ದಾನೆ. ನಾಗೇಶ್ವರ ರಾವ್‌ನನ್ನು ಬಂಧಿಸಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಇನ್ಸ್‌ಪೆಕ್ಟರ್ ನಾಗೇಶ್ವರ್ ರಾವ್, 2018ರಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದರು. ನಂತರ ಆತನನ್ನ ತನ್ನ ತೋಟದ ಮನೆಯಲ್ಲಿ ಮಾಸಿಕ ಸಂಬಳದ ಕೂಲಿಯನ್ನಾಗಿ ನೇಮಿಸಿಕೊಂಡಿದ್ದರು ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘‘ನನ್ನ ಗಂಡ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಇನ್‌ಸ್ಪೆಕ್ಟರ್ ನಾಗೇಶ್ವರ್ ರಾವ್ ನನ್ನ ಗಂಡನಿಗೆ ತಿಳಿಯದಂತೆ ನನ್ನನ್ನು ಬಲವಂತವಾಗಿ ಕೃಷಿ ಜಮೀನಿಗೆ ಎಳೆದುಕೊಂಡು ಬಂದನು” ಎಂದು ಸಂತ್ರಸ್ತ ಮಹಿಳೆ ಜುಲೈ 8 ರಂದು ವನಸ್ಥಲಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಮಹಿಳೆ ತನ್ನ ಗಂಡನಿಗೆ ಘಟನೆಯ ಕುರಿತು ವಿವರಿಸಿದಾಗ, ಆಕೆಯ ಪತಿ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿ ನನ್ನ ಕುಟುಂಬಕ್ಕೆ ತೊಂದರೆ ನೀಡದಂತೆ ಕೇಳಿಕೊಂಡಿದ್ದಾನೆ. ಇದು ಮುಂದುವರಿದರೆ ನಿಮ್ಮ ಹೆಂಡತಿಗೆ ವಿಷಯ ತಿಳಿಸುತ್ತೇನೆ ಎಂದು ದಂಪತಿ ಹೇಳಿದ್ದಾರೆ. ಆ ಸಮಯದಲ್ಲಿ, ಇನ್ಸ್‌ಪೆಕ್ಟರ್ ನಾಗೇಶ್ವರ ರಾವ್ ಕ್ಷಮೆಯಾಚಿಸಿದ್ದನು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಇಷ್ಟಾದ ಮೇಲೆ ಒಬ್ಬ ಇನ್‌ಸ್ಪೆಕ್ಟರ್, ಒಬ್ಬ ಸಬ್ ಇನ್‌ಸ್ಪೆಕ್ಟರ್ ಮತ್ತು ಕೆಲವು ಕಾನ್‌ಸ್ಟೆಬಲ್‌ಗಳು ನಮ್ಮ ಮನೆಗೆ ಬಂದು ನನ್ನ ಪತಿಯನ್ನು ಟಾಸ್ಕ್ ಫೋರ್ಸ್ ಕಚೇರಿಗೆ ಕರೆದೊಯ್ದರು. ಪೊಲೀಸರು ನನ್ನ ಪತಿಗೆ ಥಳಿಸಿ, ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದರು. ಪೊಲೀಸರು ನನ್ನ ಗಂಡನ ಕೈಯಲ್ಲಿ ಗಾಂಜಾ ಪೊಟ್ಟಣಗಳನ್ನು ಇಟ್ಟು ಫೋಟೋ ಮತ್ತು ವಿಡಿಯೊಗಳನ್ನು ಮಾಡಿಕೊಂಡರು. ಏನಾದರೂ ಇನ್ಸ್‌ಸ್ಪೆಕ್ಟರ್ ಪತ್ನಿಗೆ ವಿಷಯ ತಿಳಿಸಿದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ನಮ್ಮಿಬ್ಬರನ್ನು ಹೆದರಿಸಿದ್ದಾರೆ” ಎಂದು ಮಹಿಳೆ ಆರೋಪಿಸಿದ್ದಾರೆ.
ಜುಲೈ 7 ರಂದು ರಾತ್ರಿ 9.30 ಗಂಟೆಗೆ ಇನ್ಸ್‌ಪೆಕ್ಟರ್ ನಾಗೇಶ್ವರ್ ರಾವ್ ವನಸ್ಥಲಿಪುರಂನಲ್ಲಿರುವ ತನ್ನ ಮನೆಗೆ ಅತಿಕ್ರಮವಾಗಿ ನುಗ್ಗಿ ಥಳಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಗಂಡ ಮನೆಗೆ ಬಂದು ಬಾಗಿಲು ತೆರೆದು ಇನ್ಸ್‌ಪೆಕ್ಟರ್‌ಗೆ ಕೋಲಿನಿಂದ ಹೊಡೆಯಲು ಪ್ರಾರಂಭಿಸಿದರು. ನಂತರ ಇನ್‌ಸ್ಪೆಕ್ಟರ್ ನಾಗೇಶ್ವರ್ ನಮ್ಮಿಬ್ಬರಿಗೂ ರಿವಾಲ್ವರ್ ತೋರಿಸಿ ಬೆದರಿಸಿದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿರಿ: ಉತ್ತರ ಪ್ರದೇಶ: ಅಪ್ರಾಪ್ತ ತಂಗಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲು ಸಹಾಯ ಮಾಡಿದ ಅಕ್ಕ
ಹೈದರಾಬಾದ್ ಬಿಟ್ಟು ಹೋಗದಿದ್ದರೆ ನೀವಿಬ್ಬರು ‘ವೇಶ್ಯಾಗೃಹ’ ನಡೆಸುತ್ತಿದ್ದಿರಿ ಎಂದು ಸುಳ್ಳು ಪ್ರಕರಣ ದಾಖಲಿಸುವುದಾಗಿ ಇನ್ಸ್‌ಪೆಕ್ಟರ್ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಗಂಡ ಹೆಂಡತಿಯನ್ನು ವಾಹನದಲ್ಲಿ ಕೂರಿಸಿಕೊಂಡು ಇಬ್ರಾಹಿಂಪಟ್ಟಣದತ್ತ ಕರೆದೊಯ್ಯಲಾಗುತ್ತಿತ್ತು. ಜುಲೈ 8ರ ಮುಂಜಾನೆ ಕಾರು ಅಪಘಾತಕ್ಕೀಡಾಯಿತು, ಆಗ ದಂಪತಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ, ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವನಸ್ಥಲಿಪುರಂ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಯ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಅತಿಕ್ರಮಣ, ಕೊಲೆಯತ್ನ, ಅಪಹರಣ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.


