ಮಹಾನಗರ ಹೈದರಾಬಾದ್‌ನಲ್ಲಿ ಕೆರೆಗಳು ಸೇರಿದಂತೆ ಜಲಮೂಲಗಳನ್ನು ಆಕ್ರಮಿಸಿಕೊಂಡು ಕಟ್ಟಿರುವ ಕಟ್ಟಡಗಳು ಮತ್ತು ಇತರ ನಿರ್ಮಾಣಗಳ ತೆರವು ಕಾರ್ಯಾಚರಣೆ ಆಡಳಿತರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಆರ್‌ಎಸ್ ಮತ್ತು ಅದರ ಮಿತ್ರಪಕ್ಷ ಎಐಎಂಐಎಂ ಹಾಗೂ ಬಿಜೆಪಿ ನಡುವೆ ದೊಡ್ಡ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ.
ಪ್ರಸಿದ್ದ ಹುಸೈನ್ ಸಾಗರ್ ಕೆರೆ ಸೇರಿದಂತೆ ವಿವಿಧ ಜಲಮೂಲಗಳ ಸುತ್ತಮುತ್ತ ಕಟ್ಟಿರುವ ಕಟ್ಟಡಗಳ ತೆರವು ಕಾರ್ಯಾಚರಣೆಯ ಉಸ್ತುವಾರಿಯನ್ನು ತೆಲಂಗಾಣ ಸರ್ಕಾರ Hyderabad Disaster Response and Assets Monitoring and Protection Agency(HYDRA)ಗೆ ನೀಡಿದೆ. ಹಾಗಾಗಿ, ಈ ಕಾರ್ಯಾಚರಣೆಯನ್ನು ‘ಹೈಡ್ರಾ’ (HYDRA) ಕಾರ್ಯಾಚರಣೆ ಎಂದು ಕರೆಯಲಾಗುತ್ತಿದೆ.
ತೆಲಂಗಾಣ ಸರ್ಕಾರ ಇತ್ತೀಚೆಗೆ ರಚಿಸಿರುವ ‘ಹೈಡ್ರಾ’ ಐತಿಹಾಸಿಕ ಬಮ್-ರುಕ್ನ್-ಉದ್-ದೌಲಾ ಕೆರೆಯ ಸುತ್ತಮುತ್ತಲಿದ್ದ ನಟ ನಾಗಾರ್ಜುನ ಅವರ ಎನ್-ಕನ್ವೆನ್ಷನ್ ಸೆಂಟರ್, ಎಐಎಂಐಎಂ ಶಾಸಕ ಮೊಹಮ್ಮದ್ ಮುಬೀನ್ ಮತ್ತು ಎಂಎಲ್‌ಸಿ ಮಿರ್ಜಾ ರಹಮತ್ ಬೇಗ್ ಅವರ ಒಡೆತನದ ಕಟ್ಟಡಗಳು, ಇತರ ಜಲಮೂಲಗಳ ಮೇಲಿದ್ದ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಪಲ್ಲಂ ರಾಜು ಅವರ ಸಹೋದರ ಪಲ್ಲಂ ಆನಂದ್, ಕಾವೇರಿ ಸೀಡ್ಸ್ ಮಾಲೀಕ ಮತ್ತು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಾಜಿ ಸದಸ್ಯ ಜಿವಿ ಭಾಸ್ಕರ್ ರಾವ್ ಹಾಗೂ ಮಂಥನಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ ಬಿಜೆಪಿ ಮುಖಂಡ ಸುನೀಲ್ ರೆಡ್ಡಿ ಅವರ ಕಟ್ಟಡಗಳನ್ನು ನೆಲಸಮಗೊಳಿಸಿ, ಇದುವರೆಗೆ 43 ಎಕರೆ ಭೂಮಿಯನ್ನು ಮರಳಿ ಪಡೆದಿದೆ.
ಐಪಿಎಸ್ ಅಧಿಕಾರಿ ಎ.ವಿ.ರಂಗನಾಥ್ ನೇತೃತ್ವದ ಹೈಡ್ರಾ ಕಳೆದೆರಡು ವಾರಗಳಿಂದ ನಗರದ ಮತ್ತು ಸುತ್ತಮುತ್ತಲಿನ ಜಲಮೂಲಗಳ ಅತಿಕ್ರಮಣ ಭೂಮಿಯನ್ನು ಮರಳಿ ಪಡೆಯಲು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುತ್ತಿದೆ.
ರಾಜಕೀಯ ಪಕ್ಷಗಳ ಭೇದವಿಲ್ಲದೆ ಕೆರೆ, ಕೊಳ ಮತ್ತಿತರ ಜಲಮೂಲಗಳ ಒತ್ತುವರಿ ತೆರವು ಮಾಡಲಾಗುವುದು ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. ಇತ್ತೀಚೆಗೆ, ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (NRSC) ಹೈದರಾಬಾದ್‌ನಲ್ಲಿ 1979 ಮತ್ತು 2024 ರ ನಡುವೆ ಜಲಮೂಲಗಳ ವ್ಯಾಪ್ತಿಯು 61 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಬಹಿರಂಗಪಡಿಸಿತ್ತು.
ಅಸಾದುದ್ದೀನ್ ಓವೈಸಿ ವಿರೋಧ
ಹೈದರಾಬಾದ್ ಸಂಸದ ಹಾಗೂ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ನಗರದಾದ್ಯಂತ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಟೀಕಿಸಿದ್ದಾರೆ.
AIMIM chief and MP Asaduddin Owaisi has responded to the ongoing HYDRA demolition in the city questioning the state government if they would demolish government offices built on full tank level (FTL) areas. pic.twitter.com/nZsHdBvp5s
— The Siasat Daily (@TheSiasatDaily) August 25, 2024
ಅತಿಕ್ರಮಣ ಭೂಮಿಯಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಕಟ್ಟಡಗಳನ್ನೂ ಕಾಂಗ್ರೆಸ್ ಸರ್ಕಾರ ನೆಲಸಮಗೊಳಿಸುತ್ತಾ? ಎಂದು ಅವರು ಪ್ರಶ್ನಿಸಿದ್ದಾರೆ. ಹೈದರಾಬಾದ್ ಮಹಾನಗರ ಪಾಲಿಕೆ (ಜಿಹೆಚ್‌ಎಂಸಿ) ಕಟ್ಟಡವನ್ನೂ ಕೂಡ ಕೆರೆಯ ಮೇಲೆ ನಿರ್ಮಿಸಲಾಗಿದೆ. ಅದನ್ನೂ ಸರ್ಕಾರ ಕೆಡವಲಿದೆಯಾ? ಎಂದು ಓವೈಸಿ ಕೇಳಿದ್ದಾರೆ.
ಬಿಆರ್‌ಎಸ್ ಶಾಸಕ ಮಾಧವರಂ ಕೃಷ್ಣ ರಾವ್ ಅವರು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ವಾಗತಿಸಿದ್ದಾರೆ. ಆದರೆ, ಈಗ ಅತಿಕ್ರಮಿತ ಆಸ್ತಿ ಎಂದು ಪರಿಗಣಿಸಲಾಗಿರುವ ಭೂಮಿಯನ್ನು ಖರೀದಿಸಿದ ಅಥವಾ ಮನೆಗಳನ್ನು ನಿರ್ಮಿಸಿದ ವ್ಯಕ್ತಿಗಳ ಬಗ್ಗೆ ಅವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. “ಎಫ್‌ಟಿಎಲ್ ಅಥವಾ ಬಫರ್ ವಲಯದಲ್ಲಿರುವ ಹೆಚ್ಚಿನ ಆಸ್ತಿಗಳನ್ನು ಸಾಮಾನ್ಯ ಜನರು ಖರೀದಿಸಿದ್ದಾರೆ. ಈ ಜನರಿಗೆ ಬಿಲ್ಡರ್‌ಗಳಿಂದ ಪರಿಹಾರವನ್ನು ಹೈಡ್ರಾ ಕೊಡಿಸುತ್ತಾ? ಎಂದು ರಾವ್ ಪ್ರಶ್ನಿಸಿದ್ದಾರೆ.
ಅಕ್ರಮ ಎಂದು ಗೊತ್ತಿದ್ದರೂ ಜಲಮೂಲಗಳ ಮೇಲೆ ಕಟ್ಟಡಗಳನ್ನು ಕಟ್ಟಲು ಅನುಮತಿ ನೀಡಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಲಿದೆಯಾ? ಆರಂಭಿಕವಾಗಿ ಈ ಅತಿಕ್ರಮಣಗಳಿಗೆ ಮಂಜೂರಾತಿ ನೀಡಿದ ನೀರಾವರಿ, ಕಂದಾಯ, ಪುರಸಭೆ ಅಥವಾ ಹೆಚ್‌ಎಂಡಿಎ ಇಲಾಖೆಗಳ ಅಧಿಕಾರಿಗಳ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ? ಎಂದು ರಾವ್ ಕೇಳಿದ್ದಾರೆ.
ಫಾತಿಮಾ ಓವೈಸಿ ಕಾಲೇಜು ತೆರವು?
ಹೈಡ್ರಾ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಹೆಚ್ಚು ಗಮನ ಸೆಳೆದಿರುವುದು ಸಲ್ಕಾಂ ಚೆರುವು ಅಥವಾ ಸಲ್ಕಂ ಕೆರೆ ಮೇಲೆ ಇರುವ ಫಾತಿಮಾ ಓವೈಸಿ ಕಾಲೇಜು ಆಗಿದೆ. ಫಾತಿಮಾ ಎಂಬುವುದು ಎಐಎಂಐಎಂನ ಪ್ರಭಾವಿ ಶಾಸಕ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಸಹೋದರ ಅಕ್ಬರುದ್ದೀನ್ ಓವೈಸಿ ಅವರ ಮಗಳ ಹೆಸರಾಗಿದೆ. ಮಗಳ ಹೆಸರಿನಲ್ಲಿ ಅಕ್ಬರುದ್ದೀನ್ ಓವೈಸಿ ಕಾಲೇಜು ಕಟ್ಟಿದ್ದಾರೆ. ಈ ಕಾಲೇಜನ್ನು ತೆರವುಗೊಳಿಸುವ ಧೈರ್ಯ ಹೈಡ್ರಾ ಅಥವಾ ಸರ್ಕಾರ ಇದೆಯಾ? ಎಂದು ತೆಲಂಗಾಣ ಬಿಜೆಪಿ ಪ್ರಶ್ನಿಸಿದೆ.
From a possibly agricultural land in 2012 to Fatima Owaisi Women's College in 2024.
Fun fact: Fatima Owaisi is the daughter of AIMIM MLA Akbaruddin Owaisi.
Can HYDRA or Revant Government dare to take any action? pic.twitter.com/I4jG6XwoMp
— BJP Telangana (@BJP4Telangana) August 26, 2024

ಗುಂಡಿಕ್ಕಿ, ಕಾಲೇಜು ತೆರವುಗೊಳಿಸಬೇಡಿ -ಓವೈಸಿ
ಹೈಡ್ರಾ ತನ್ನ ಕಾಲೇಜು ತೆರವುಗೊಳಿಸುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿರುವ ಅಕ್ಬರುದ್ದೀನ್ ಓವೈಸಿ, “ಬೇಕಾದರೆ ನನಗೆ ಗುಂಡಿಕ್ಕಿ, ಆದರೆ, ನನ್ನ ಕಾಲೇಜು ನೆಲಸಮಗೊಳಿಸಬೇಡಿ” ಎಂದಿದ್ದಾರೆ. ನಟ ನಾಗಾರ್ಜುನ ಅವರ ಕನ್ವೆನ್ಷನ್ ಸೆಂಟರ್ ಧ್ವಂಸಗೊಳಿಸಿರುವ ಸರ್ಕಾರ, ಓವೈಸಿಯ ಕಾಲೇಜು ತೆರವುಗೊಳಿಸಲಿದೆಯಾ? ಎಂಬ ಕುತೂಹಲ ಮೂಡಿದೆ.
“If someone has enmity with me, come and finish me with swords and shoot me with bullets. But don’t destroy my college," says @aimim_national MLA @AkbarOwaisi_MIM.#Owaisi responded forcefully to the possible demolition of Fatima Owaisi College, pic.twitter.com/HlORObkQDc
— DNT News (@Dntnews978) August 26, 2024
ಹೊಸ ಸಚಿವಾಲಯ ಕೆರೆಯ ಮೇಲಿದೆ – ಬಂಡಿ ಸಂಜಯ್
ಈ ಹಿಂದಿನ ಕೆಸಿಆರ್ ಸರ್ಕಾರ ಭವ್ಯವಾಗಿ ನಿರ್ಮಿಸಿರುವ ತೆಲಂಗಾಣದ ಹೊಸ ಸೆಕ್ರೆಟ್ರಿಯೇಟ್ ಅಥವಾ ಸಚಿವಾಲಯದ ಕಟ್ಟಡ ಹುಸೈನ್ ಸಾಗರ್ ಕೆರೆಯ ಮೇಲಿದೆ ಎಂದು ಈ ಹಿಂದೆ ತೆಲಂಗಾಣ ಬಿಜೆಪಿಯ ಮಾಜಿ ಅಧಕ್ಷ ಬಂಡಿ ಸಂಜಯ್ ಆರೋಪಿಸಿದ್ದರು. ಮೇ 1, 2023ರಂದು ಸಚಿವಾಲಯದ ಉದ್ಘಾಟನೆಯಂದು ಅವರು ಹುಸೈನ್ ಸಾಗರ್ ಕೆರೆಯನ್ನು ಆಕ್ರಮಿಸಿಕೊಂಡ ಬಗ್ಗೆ ಮ್ಯಾಪ್ ಹಂಚಿಕೊಂಡಿದ್ದರು.
ಅಸಲಿಗೆ ಸಚಿವಾಲಯದ ಮುಂದಿರುವ ಲುಂಬಿನ ಪಾರ್ಕ್ ಕೆರೆಯನ್ನು ಆಕ್ರಮಿಸಿಕೊಂಡು ನಿರ್ಮಿಸಿದಂತೆ ತೋರುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ.
ಇನ್ನೂ ಇದೇ ಬಂಡಿ ಸಂಜಯ್ ಹೊಸ ಸಚಿವಾಲಯದ ಕಟ್ಟಡವನ್ನು ನೆಲಸಮಗೊಳಿಸುವುದಾಗಿಯೂ ಹೇಳಿಕೆ ಕೊಟ್ಟಿದ್ದರು. ಹೊಸ ಕಟ್ಟಡ ಗುಂಬಝ್‌ಗಳನ್ನು ಹೊಂದಿದ್ದು ನಿಝಾಮರ ಶೈಲಿಯಲ್ಲಿದೆ. ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಆ ಗುಂಬಝ್‌ಗಳನ್ನು ಉರುಳಿಸುತ್ತೇವೆ ಎಂದು ಕೋಮು ದ್ವೇಷದ ಹೇಳಿಕೆಯನ್ನು ಸಂಜಯ್ ನೀಡಿದ್ದರು.

ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ
ಹೈದರಾಬಾದ್ ನಗರ ಮತ್ತು ಸುತ್ತಮುತ್ತಲಿನ 18 ಜಾಗಗಳಲ್ಲಿ ಹೈಡ್ರಾ ತೆರವು ಕಾರ್ಯಾಚರಣೆ ಕೈಗೊಂಡಿದೆ. ಇದರಿಂದ ಮನೆ ಸೇರಿದಂತೆ ಕಟ್ಟಡಗಳನ್ನು ಕಳೆದುಕೊಂಡವರು ಸರ್ಕಾರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರೆ, ಇತರ ಸಾರ್ವಜನಿಕರು ಸರ್ಕಾರ ಒಳ್ಳೆಯ ಕೆಲಸ ಮಾಡಿದೆ ಎನ್ನುತ್ತಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್, ಬಿಜೆಪಿ, ಬಿಆರ್‌ಎಸ್ ಮತ್ತು ಎಐಎಂಐಎಂ ಪ್ರಮುಖ ರಾಜಕೀಯ ಪಕ್ಷಗಳಾಗಿವೆ. ಈ ಪೈಕಿ ಕಾಂಗ್ರೆಸ್ ಪ್ರಸ್ತುತ ಆಧಿಕಾರದಲ್ಲಿದೆ. ಬಿಆರ್‌ಎಸ್ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿದೆ. ಎಐಎಂಐಎಂ ಹಿಂದಿನಿಂದಲೂ ಬಿಆರ್‌ಎಸ್ ಮಿತ್ರ ಪಕ್ಷವಾಗಿರುವುದರಿಂದ ಅದರ ಜೊತೆ ಪ್ರತಿಪಕ್ಷ ಸ್ಥಾನದಲ್ಲಿದೆ. ಬಿಜೆಪಿ ನಾಲ್ಕನೇ ಸ್ಥಾನದಲ್ಲಿದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಜಲಮೂಲಗಳ ರಕ್ಷಣೆಗಿಂತ ರಾಜಕೀಯ ಶೀತಲಸಮರವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ : ರೈತರ ಪ್ರತಿಭಟನೆ ಕುರಿತು ಕಂಗನಾ ವಿವಾದಾತ್ಮಕ ಹೇಳಿಕೆ : ಅಂತರ ಕಾಯ್ದುಕೊಂಡ ಬಿಜೆಪಿ


