Homeಅಂಕಣಗಳುಪುಸ್ತಕ ವಿಮರ್ಶೆ; "ಐ ಕಾಂಟ್ ಬ್ರೀದ್" ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

- Advertisement -
- Advertisement -

ಕೊಪ್ಪಳದ ಯುವಕವಿ ಮಹೇಶ ಬಳ್ಳಾರಿ ಅವರ ಕವನ ಸಂಕಲನ “ಐ ಕಾಂಟ್ ಬ್ರೀದ್”. ಅವರಲ್ಲಿನ ಕವಿ ಪ್ರತಿಭೆಯನ್ನು ಮತ್ತಷ್ಟು ಹುರಿಗೊಳಿಸಿ ಹೊಸೆದ ಕಾವ್ಯಮಾಲೆಯಾಗಿದೆ ಇದು. ವರ್ತಮಾನದ ತಲ್ಲಣಗಳನ್ನು ತಣ್ಣನೆಯ ಬಂಡಾಯದೊಂದಿಗೆ ಬೆಸೆದು, ನಮ್ಮೊಳಗಿನ ಜಡತ್ವವನ್ನು ಬಡಿದೆಬ್ಬಿಸುವ ಎಚ್ಚರಿಕೆಯ ಗಂಟೆಯಾಗಿದೆ. ಆವರಿಸಿರುವ ಅಂಧಕಾರಕ್ಕೆ ಬೆಳದಿಂಗಳ ಕಿರಣವಾಗಿ, ಸಮಕಾಲೀನ ಸಂಗತಿಗಳ ಪ್ರತಿಬಿಂಬವಾಗಿ, ಮನಸಿಗಂಟಿದ ಮಾಲಿನ್ಯಕ್ಕೆ ಸ್ಯಾನಿಟೈಸರ್ ಆಗಿ, ಧರ್ಮದ ಅಮಲು ಇಳಿಸುವ ತಂಪು ಪಾನಕವಾಗಿ, ಬೆಂಕಿ ಆರಿಸಿ, ಹಸಿರು ಸೃಜಿಸುವ ಹನಿಗಳ ಸಿಂಚನವಾಗಿ ಅಲ್ಲಿನ ಎಲ್ಲ ಕವಿತೆಗಳು ಸಹೃದಯರ ಅಂತರಂಗವನ್ನು ಆವರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತವೆ.

ತೀರ ಎಳೆಯ ತಾರುಣ್ಯದಲ್ಲಿಯೇ ’ಕಗ್ಗತ್ತಲು’ ಕವನ ಸಂಕಲನದ ಮೂಲಕ ಕಾವ್ಯಕ್ಷೇತ್ರಕ್ಕೆ ಕಾಲಿರಿಸಿದವರು ಮಹೇಶ. ನಿರಂತರವಾಗಿ ಉತ್ತಮ ಸಾಹಿತ್ಯದ ಕೃಷಿ ಮಾಡುತ್ತ, ಕನ್ನಡ ಕಾವ್ಯ, ಕಥೆ, ವೈಚಾರಿಕ ಕ್ಷೇತ್ರಕ್ಕೆ ಭರವಸೆಯ ಬೆಳೆ ನೀಡುತ್ತ, ಕವಿತೆಯಿಂದ ಕವಿತೆಗೆ, ಕೃತಿಯಿಂದ ಕೃತಿಗೆ ತಮ್ಮೊಳಗಿನ ಕವಿಯನ್ನು ಎತ್ತರಕ್ಕೆ ಬೆಳೆಸುತ್ತ, ಮಾಗಿಸುತ್ತ ಸಾಗಿರುವುದು ಈಗ ಅಕ್ಷರದ ರೂಪದಲ್ಲಿ ಮೂಡಿ ಕನ್ನಡದ ಓದುಗರ ಮುಂದೆ ಇದೆ.

ನಮ್ಮ ನಡುವೆ ನಿತ್ಯ ಘಟಿಸಿ ಇಂದು ಸುದ್ದಿಯಾಗಿ, ನಾಳೆ ರದ್ದಿಯಾಗಿ ನಮ್ಮ ಒತ್ತಡ, ಜಂಜಡಗಳ ನಡುವೆ ಮರೆತು ಹೋಗಿಬಿಡುವ ಅನೇಕ ಸಂಗತಿಗಳು ಕಾವ್ಯದ ರೂಪ ಪಡೆದಿವೆ ಇಲ್ಲಿ. ಮನುಷ್ಯನ ಅವಜ್ಞೆಗೆ ಒಳಗಾಗದೆ, ಮನುಕುಲಕ್ಕೆ ಸದಾ ಕಾಲ ಬಿಡದೇ ಕಾಡುವ ಚಿಂತನಾಕ್ರಮಗಳಾಗಬೇಕು ಎನ್ನುವ ರೀತಿಯಲ್ಲಿ, “ಐ ಕಾಂಟ್ ಬ್ರೀದ್ ಕವನ ಸಂಕಲನದ ಎಲ್ಲಾ 38 ಕವಿತೆಗಳು ವರ್ತಮಾನಕ್ಕೆ ಮುಖಾಮುಖಿಯಾಗುತ್ತವೆ. ಪ್ರತಿ ಸಾಲುಗಳಲ್ಲೂ ಮನುಷ್ಯತ್ವವನ್ನು ಸಾರುವ ಚಿಂತನೆಗಳು ಅಡಕವಾಗಿವೆ. ಓದುಗನೊಳಗೆ ಪ್ರೀತಿಯ ತೊರೆಯನ್ನು ತಿಳಿಯಾಗಿ, ಸದ್ದಿಲ್ಲದಂತೆ ಸಲಿಲವಾಗಿ ಹರಿಸಿ, ಮನಸ್ಸುಗಳನ್ನು ತೋಯಿಸುತ್ತವೆ.

ಅಧಿಕಾರದ ಕೇಂದ್ರ ಸ್ಥಾನಗಳ ಸುತ್ತಮುತ್ತಲಿನ ವಾತಾವರಣಕ್ಕಷ್ಟೇ ಸೌಕರ್ಯಗಳು ಸೀಮಿತವಾಗುವ ಪರಿಯನ್ನು ’ಪರುಷಕಟ್ಟೆ’ ಕವನದಲ್ಲಿ ಚಿತ್ರಿಸುತ್ತ, ಗಾಂಧಿಯ ಗ್ರಾಮ ಸ್ವರಾಜ್ಯ ಕಲ್ಪನೆಗೆ ಸಂಪೂರ್ಣ ಇತಿಶ್ರೀ ಹಾಡಿರುವ ಹಳ್ಳಿಗಳ ಸ್ಥಿತಿಯನ್ನು ಯಯಾತಿಗೆ ಹೋಲಿಸಿ, ಸೌಕರ್ಯಗಳ ನಿರೀಕ್ಷೆಯಲ್ಲಿರುವ ಹಳ್ಳಿಗರನ್ನು ಶಬರಿಗೆ ಹೋಲಿಸಿರುವದು ಅರ್ಥಪೂರ್ಣವಾಗಿ ಮೂಡಿಬಂದಿದೆ.

ಕೆಲವು ತಿಂಗಳುಗಳ ಹಿಂದೆ ಉತ್ತರ ಪ್ರದೇಶದ ಹಥರಾಸ್‌ನಲ್ಲಿ ನಡೆದ ಮನೀಷಾ ವಾಲ್ಮೀಕಿ ಎಂಬ ನತದೃಷ್ಟ ಯುವತಿಯ ಬರ್ಬರ ಹತ್ಯೆ ಹಲವರ ಪ್ರಜ್ಞಾಪೂರ್ವಕ ನಿರ್ಲಕ್ಷ್ಯಕ್ಕೆ ಒಳಗಾಯಿತು. ಈ ಹೊತ್ತಿನಲ್ಲಿ, ಕವಿಯಾದವನೊಬ್ಬ ಆ ಘಟನೆಗೆ ಸ್ಪಂದಿಸಬೇಕಾದ ಹೊಣೆಗಾರಿಕೆ ’ನಾನು ಮನೀಷಾ (ಕ್ಷಮಯಾ ಧರಿತ್ರಿ)’ ಕವನದ ಮೂಲಕ ಮಾನವೀಯ ನೆಲೆಗಳ ಸ್ಪಂದನೆ ವ್ಯಕ್ತವಾಗಿದೆ.

“ಬಂದೇ ಬರುತ್ತೇನೆ ಮತ್ತೆ
ಇದೇ ನೆಲದಲ್ಲಿ ನನ್ನ ಸುಟ್ಟವರ
ಮನೆಯಲ್ಲಿಯೇ ಮಗಳಾಗಿ ಹುಟ್ಟಿ
ಅವರ ಮನೆ ಬೆಳಗುವ
ನಂದಾ ದೀಪವಾಗುತ್ತೇನೆ..”

ಈ ಸಾಲುಗಳಲ್ಲಿ, ನ್ಯಾಯ, ಮನುಷ್ಯತ್ವ, ಪ್ರೀತಿಯ ಒರತೆಗಳು ಈಗ ಬತ್ತಿರಬಹುದು ಆದರೆ ಅವುಗಳು ಅಂತರಾಳದಲ್ಲಿ ಸ್ಥಾಯಿಯಾಗಿವೆ, ಮತ್ತೆ ಎಂದಾದರೂ ಅವು ಜೀವಸೆಲೆಯಾಗಿ ಮೈದಳೆಯುತ್ತವೆ ಎಂಬ ಭರವಸೆಯನ್ನು ಕವನದ ಮೂಲಕ ಓದುಗನ ಎದೆಗೆ ಕವಿ ದಾಟಿಸಿದ್ದಾರೆ.

ನಮ್ಮ ದೃಶ್ಯಮಾಧ್ಯಮಗಳ ಅಬ್ಬರ-ಭರಾಟೆಗಳು, ವೈಯಕ್ತಿಕ ಸ್ವಾತಂತ್ರ್ಯಗಳನ್ನೂ ಕೂಡ ಆಪೋಷನ ತೆಗೆದುಕೊಳ್ಳುತ್ತಿರುವ ವಿದ್ಯಮಾನಗಳನ್ನು ’ಆಕಾಶ-ಭೂಮಿ’ ಕವಿತೆಯಲ್ಲಿ ಸೊಗಸಾಗಿ, ತೀಕ್ಷ್ಣವಾಗಿ ದಾಖಲಿಸಿದ್ದಾರೆ. ’ಬಿಂಬ’ ಕವಿತೆಯು ರೂಪಕ, ಪ್ರತಿಮೆಗಳ ಹಂಗಿಲ್ಲದೇ ಮೂಡಿಬಂದಿದೆ. ಮೇಲ್ನೋಟಕ್ಕೆ ವಾಚ್ಯವೆನಿಸಿದರೂ ಕೂಡ, ವಸ್ತುವಿನ ದೃಷ್ಟಿಯಿಂದ ಹಿರಿದಾಗಿದೆ.

ರಾಜ ಬಂದ, ಟ್ರಂಪ್, ಅಹವಾಲುಗಳು, ಅಮಲು ಕವನಗಳು ಸಮಕಾಲೀನ ರಾಜಕಾರಣದ ಹಲವು ಮುಖಗಳನ್ನು ಅರ್ಥಪೂರ್ಣವಾಗಿ ಅನಾವರಣಗೊಳಿಸಿವೆ. ’ಅಲೈನ್‌ಮೆಂಟ್ ಕವಿತೆಯಲ್ಲಿ ಕಂಪ್ಯೂಟರ್ ಪರಿಭಾಷೆಯನ್ನು ಸಮರ್ಥವಾಗಿ ರೂಪಕವಾಗಿ ಬಳಸಿಕೊಂಡಿರುವುದು ಹೊಸಪೀಳಿಗೆಯ ಓದುಗರನ್ನು ಕಾವ್ಯದತ್ತ ಸೆಳೆದು ತರುವ ಸಾಧ್ಯತೆಗಳನ್ನು ತೋರಿದೆ.

“ಮೊದಲೆಲ್ಲ ಲೆಫ್ಟ್ ಅಲೈನ್‌ಮೆಂಟ್ ಸಾಲುಗಳಿರುತ್ತಿದ್ದವು,
ಇದೀಗ ರೈಟ್ ಅಲೈನ್‌ಮೆಂಟ್,
ಇವೆರಡರ ನಡುವೆ ಜಸ್ಟಿಫಿಕೇಷನ್ ಮಾಯವಾಗಿದೆ”

ಎನ್ನುವ ಸಾಲುಗಳು ರಾಜಕಾರಣದ ಸೈದ್ಧಾಂತಿಕ ಒಲವು, ನಿಲುವುಗಳಿಗೆ ಕನ್ನಡಿ ಹಿಡಿದಿವೆ.
ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್ ಅಮೆರಿಕನ್ ಕಪ್ಪುವರ್ಣೀಯ ವ್ಯಕ್ತಿಯೊಬ್ಬನನ್ನು, ಅಮೆರಿಕಾದಲ್ಲಿ, ವರ್ಣಭೇದದ ಪೂರ್ವಾಗ್ರಹದ ಕಾರಣಕ್ಕೆ ಅಲ್ಲಿನ ಪೊಲೀಸರು ಅಮಾನವೀಯವಾಗಿ ಇದೇ 2020ರ ಮೇ 25ರಂದು ಕೊಲ್ಲುವಾಗ, ಆತನ ’ಐ ಕಾಂಟ್ ಬ್ರೀದ್’ ಎಂಬ ಆತ್ರರೋದನವನ್ನೇ, ಈ ಕವನ ಸಂಕಲನದ ಶೀರ್ಷಿಕೆಯಾಗಿಸಿರುವುದು ಮನುಷ್ಯತ್ವವನ್ನೇ ಉಸಿರುಗಟ್ಟಿಸಿರುವ ನಮ್ಮ ಸಮಕಾಲೀನ ವಾತಾವರಣದ ಚಿತ್ರಣ ನೀಡಿದೆ.

ಕನ್ನಡನಾಡಿನ ಹನ್ನೆರಡನೇ ಶತಮಾನದ ಹರಳಯ್ಯನಿಂದ ಹಿಡಿದು ಇಂತಹ ಹತ್ಯೆಗಳು ಇಂದಿಗೂ ಆಗಾಗ ಮರುಕಳಿಸುತ್ತಿರುವುದನ್ನು ಆರ್ದ್ರವಾಗಿ ಹಾಡಿದೆ.

’ತರಕಾರಿ ಹುಡುಗಿ’, ’ಕಳ್ಳ’ ಕವಿತೆಗಳು ನಮ್ಮ ವ್ಯವಸ್ಥೆಯಲ್ಲಿ ಬಡಜೀವಗಳು ತುತ್ತು ಅನ್ನಕ್ಕೆ, ಹಸಿವಿನ ಚೀಲ ತುಂಬಿಸಲಿಕ್ಕೆ ಪಡುವ ಪಡಿಪಾಟಲುಗಳು, ಭ್ರಷ್ಟಾಚಾರದ ಸಾಗರದಲ್ಲಿ ತಿಮಿಂಗಿಲಗಳನ್ನು ಹಿಡಿಯದೇ ಹಸಿವಿಗಾಗಿ ತುಂಡುರೊಟ್ಟಿ ಕದ್ದವನನ್ನು ಹಿಡಿವ ಭ್ರಷ್ಟಾಚಾರ ನಿಗ್ರಹದ ನಾಟಕಗಳನ್ನು ಓದುಗರ ಕಣ್ಣ ಮುಂದೆ ತರುತ್ತವೆ.

ಅಲಾಯಿ (ಮೊಹರಂ) ನಮ್ಮ ಸೌಹಾರ್ದದ ಸಿಹಿ ಚೊಂಗೆಯಂತಿದ್ದರೆ, ದೂರು, ಗಡಿಪಾರು ಶೀರ್ಷಿಕೆಯ ಮೂರುಸಾಲಿನ ಹನಿಗಳು ಕಿರಿದರಲ್ಲಿ ಹಿರಿದರ್ಥ ಹೇಳುವ, ಸಮ ಸಮಾಜ ಸಂದೇಶಗಳನ್ನು ಸಮರ್ಥವಾಗಿ ಸಾರಿವೆ.

ನಮ್ಮ ಕೊಪ್ಪಳದ ನಾಡಕವಿ ಎಂದೇ ಹೆಸರಾದ ಗವಿಸಿದ್ಧ ಎನ್ ಬಳ್ಳಾರಿಯವರ ಮಗನೆಂಬ ವಿಶೇಷ ರಿಯಾಯಿತಿ, ಆದ್ಯತೆ ಬಯಸದೆಯೂ ಕಾವ್ಯಕ್ಷೇತ್ರದಲ್ಲಿ ಸ್ಪಷ್ಟವಾಗಿ ಸ್ವಸಾಮರ್ಥ್ಯದಿಂದಲೇ ಮಹೇಶ ಬಳ್ಳಾರಿ ಮುನ್ನಡೆಯುತ್ತಿದ್ದಾರೆ.

ಮಂಜುನಾಥ ಡೊಳ್ಳಿನ

ಹಿರಿಯ ಸಹಾಯಕ ನಿರ್ದೇಶಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ


ಇದನ್ನೂ ಓದಿ: ಪುಸ್ತಕ ವಿಮರ್ಶೆ: ಬುದ್ಧನೆಡೆಗೆ ಮರಳಿ ಹಾರುವ ಮೂಡ್ನಾಕೂಡು ಚಿನ್ನಸ್ವಾಮಿಯವರ ನೆನಪಿನ ಹಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...