ಸಿಎಎ ಮತ್ತು ಎನ್ಆರ್ಸಿ ನನ್ನ ಮನೆಯನ್ನು ವಿಭಜಿಸುವ ಕಾರಣ ನಾನು ಅದನ್ನು ಬೆಂಬಲಿಸುವುದಿಲ್ಲ ಎಂದು ಬಾಲಿವುಡ್ ನಟಿ ಮತ್ತು ನಿರ್ಮಾಪಕಿ ಪೂಜಾ ಭಟ್ ಹೇಳಿದ್ದಾರೆ.
ಅವರು ಸೋಮವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸಿಎಎ ವಿರೋಧಿ ಪ್ರತಿಭಟನೆಗಳ ಬಗ್ಗೆ ತಮ್ಮ ಕಾಳಜಿಯನ್ನು ತೋರಿಸಿ, “ದೇಶದಲ್ಲಿ ಎದ್ದಿರುವ ಭಿನ್ನಧ್ವನಿಗಳನ್ನು ಕೇಳಲು ನಮ್ಮ ನಾಯಕರನ್ನು ಮುಂದಾಗಬೇಕು” ಎಂದು ಮನವಿ ಮಾಡಿದ್ದಾರೆ.
ಭಾರತದ ಮಹಿಳೆಯರು ಶಾಹೀನ್ ಬಾಗ್ ಮತ್ತು ಲಕ್ನೋದಲ್ಲಿ ಹೋರಾಟನಿರತರಾಗಿದ್ದಾರೆ. ನಾವು ಜೋರಾಗಿ ಮತ್ತು ಸ್ಪಷ್ಟವಾಗಿ ನಮ್ಮ ಮಾತನ್ನು ಸರ್ಕಾರ ಕೇಳುವವರೆಗೂ ನಾವು ನಿಲ್ಲುವುದಿಲ್ಲ. ನಾನು ಹೆಚ್ಚು ಮಾತನಾಡಲು ಜನರನ್ನು ಬೇಡಿಕೊಳ್ಳುತ್ತೇನೆ. ಸಿಎಎ ಮತ್ತು ಎನ್ಆರ್ಸಿ ನನ್ನ ಮನೆಯನ್ನು ವಿಭಜಿಸುವುದರಿಂದ ನಾನು ಅದನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.
ಭಿನ್ನಾಭಿಪ್ರಾಯವು ದೇಶಪ್ರೇಮದ ಶ್ರೇಷ್ಠ ಸ್ವರೂಪವಾಗಿದೆ ಎಂದು ಪೂಜಾ ಭಟ್ ಹೇಳಿದ್ದಾರೆ. ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಪ್ರತಿಭಟಿಸುವ ವಿದ್ಯಾರ್ಥಿಗಳು ಆಡಳಿತ ಪಕ್ಷವು ನಮ್ಮನ್ನು ಒಂದುಗೂಡಿಸಿದೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿಎಎ ಮತ್ತು ಎನ್ಆರ್ಸಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ಮಾತನಾಡಿದ ಖ್ಯಾತ ವ್ಯಕ್ತಿಗಳ ಪೈಕಿ ಪೂಜಾ ಭಟ್ ಕೂಡ ಒಬ್ಬರಾಗಿದ್ದಾರೆ. ದಕ್ಷಿಣ ಮುಂಬೈನ ಕೊಲಾಬಾದಲ್ಲಿ ಈ ಕಾರ್ಯಕ್ರಮವನ್ನು ಪಾರ್ಚಮ್ ಫೌಂಡೇಶನ್ ಮತ್ತು ವಿ ದಿ ಪೀಪಲ್ ಆಫ್ ಮಹಾರಾಷ್ಟ್ರ ಆಯೋಜಿಸಿದೆ.
ನಮ್ಮ ಮೌನವು ನಮ್ಮನ್ನು ಉಳಿಸುವುದಿಲ್ಲ ಮತ್ತು ಸರ್ಕಾರವನ್ನು ಉಳಿಸುವುದಿಲ್ಲ. ಆಡಳಿತ ಪಕ್ಷವು ನಮ್ಮನ್ನು ಒಂದುಗೂಡಿಸಿದೆ. ಸಿಎಎ-ಎನ್ಆರ್ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ನಮ್ಮ ಧ್ವನಿ ಎತ್ತುವ ಸಮಯ ಬಂದಿದೆ ಎಂಬ ಸಂದೇಶವನ್ನು ನೀಡುತ್ತಿದ್ದಾರೆ.
ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಮತ್ತು ರಕ್ಷಿಸುವ ಅಗತ್ಯವನ್ನು ಚರ್ಚಿಸುವುದು ಮತ್ತು ಅವುಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವುದು ಸಮ್ಮೇಳನದ ಉದ್ದೇಶವಾಗಿತ್ತು ಎಂದು ಅದರ ಸಂಘಟಕರು ತಿಳಿಸಿದ್ದಾರೆ.


