Homeಕ್ರೀಡೆಒಲಂಪಿಕ್ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ: ಮಹಿಳಾ ಹಾಕಿ ತಂಡದ ದಿಟ್ಟ ಆಟಗಾರ್ತಿ ಲಾಲ್‌ರೆಮ್ಸಿಯಾಮಿ..

ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ: ಮಹಿಳಾ ಹಾಕಿ ತಂಡದ ದಿಟ್ಟ ಆಟಗಾರ್ತಿ ಲಾಲ್‌ರೆಮ್ಸಿಯಾಮಿ..

- Advertisement -
- Advertisement -

ಮಿಜೋರಾಂನಿಂದ ಒಲಿಂಪಿಕ್ಸ್‌ಗೆ ಆಯ್ಕೆಯಾದ ಮೊದಲ ಹಾಕಿ ಆಟಗಾರ್ತಿ ಲಾಲ್‌ರೆಮ್ಸಿಯಾಮಿ. ನನಗೆ ಹಾಕಿ ಆಡಬೇಕು ಎಂಬ ‘ಅವಾಸ್ತವಿಕ’ವಾದ ಕನಸೊಂದಿತ್ತು ಎನ್ನುವ ರೆಮ್ಸಿಯಾಮಿ, ಅದು ನನಸಾಗಿದ್ದೇಗೆ? ಎಂದು ಮನಬಿಚ್ಚಿ ವಿವರಿಸಿದ್ದಾರೆ.

ನಮ್ಮದು ಬಡ ರೈತ ಕುಟುಂಬ. ಅಪ್ಪ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ದಿನಕ್ಕೆ 250 ರೂ ಸಿಗುವುದು ಕೂಡ ಕಷ್ಟವಾಗಿತ್ತು. ಅಮ್ಮ ನನ್ನ ಹಾಗೂ ನನ್ನೊಂದಿಗೆ ಒಡಹುಟ್ಟಿದ ಏಳು ಜನರನ್ನು ನೋಡಿಕೊಳ್ಳುತ್ತಾ ಮನೆಯಲ್ಲಿದ್ದರು. ನಾವೆಲ್ಲರೂ ಸರ್ಕಾರಿ ಶಾಲೆಯಲ್ಲಿ ಓದಿದವರು. ನಾನು ಹಿರಿಯ ಮಗಳಾಗಿದ್ದೆ. ಅಪ್ಪ, ಅಮ್ಮನಿಗೆ ಸಹಾಯ ಮಾಡಬೇಕಿದ್ದ ಜವಾಬ್ದಾರಿ ನನಗಿತ್ತು. ಆದರೆ ನನಗೊಂದು ‘ಅವಾಸ್ತವಿಕ’ವಾದ ಕನಸೊಂದಿತ್ತು. ಅದೆಂದರೆ ನಾನು ಹಾಕಿ ಆಡಲು ಬಯಸಿದ್ದೆ.

ನನ್ನಮ್ಮ ಫುಟ್‌ಬಾಲ್‌ ಆಟಗಾರ್ತಿಯಾಗಿದ್ದರು. ನಮ್ಮನ್ನು ಆಟದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಿದ್ದರು. ನನಗೆ ಹಾಕಿ ಕ್ರೀಡೆಯಲ್ಲಿ ಆಸಕ್ತಿಯಿತ್ತು. ನಾವು ಇದ್ದ ಮನೆಯಿಂದ ಸುಮಾರು 84 ಕಿ.ಮೀ ದೂರದಲ್ಲಿ ಹಾಕಿ ಅಕಾಡೆಮಿಯಿತ್ತು. ನಾನು ಹಾಕಿ ಕಲಿಯಲು ಪ್ರತಿದಿನ ಅಲ್ಲಿಗೆ ಹೋಗಿ ಬರುವ ಖರ್ಚನ್ನು ವ್ಯಯಿಸುವಷ್ಟು ಹಣ ನಮ್ಮಲ್ಲಿರಲಿಲ್ಲ. ನನ್ನಪ್ಪ ‘ನಮ್ಮ ಬಳಿ ಹಣವಿಲ್ಲ’ ಎಂದು ಹೇಳಿದ್ದರು.

ಅಕಾಡೆಮಿಯಲ್ಲಿ ಆಟಗಾರರಿಗೆ ತರಬೇತಿ ನೀಡಲು ಹಾಗೂ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂಬುದು ಹೇಗೋ ನನಗೆ ತಿಳಿಯಿತು. ಇದನ್ನು ಖುಷಿಯಿಂದಲೇ ನನ್ನ ಪೋಷಕರಿಗೆ ತಿಳಿಸಿದೆ. ಅಕಾಡೆಮಿಯಲ್ಲಿಯೇ ಉಳಿದು ತರಬೇತಿ ಪಡೆಯಲು ಸಮ್ಮತಿ ನೀಡುವಂತೆ ಅವರನ್ನು ಕೋರಿಕೊಂಡೆ. ಹಾಕಿ ಕ್ರೀಡೆ ಬಗ್ಗೆ ನನಗಿದ್ದ ಆಸಕ್ತಿಯನ್ನು ಅವರಿಗೆ ಮನವರಿಕೆ ಮಾಡಿದೆ. ಪದೇ ಪದೇ ಒತ್ತಾಯ ಮಾಡಿದ ನಂತರ ಅವರು ನಾನು ಅಕಾಡೆಮಿಯಲ್ಲಿ ಉಳಿಯಲು ಒಪ್ಪಿಗೆ ಸೂಚಿಸಿದರು.

ಹಾಕಿ ಟ್ರಯಲ್ಸ್‌ ರೌಂಡ್‌ನಲ್ಲಿ ನಾನು ಉತ್ತಮ ಪ್ರದರ್ಶನ ನೀಡಿ ಅಕಾಡೆಮಿಗೆ ಆಯ್ಕೆಯಾದೆ. ಅಪ್ಪ ನನ್ನನ್ನು ಅಕಾಡೆಮಿಯಲ್ಲಿ ಬಿಟ್ಟು ಮನೆಗೆ ಹೋಗುವಾಗ ‘ನಿನಗೆ ಇಷ್ಟವಾದದ್ದನ್ನೇ ಮಾಡುತ್ತಾ ಸಂತೋಷದಿಂದಿರು’ ಎಂದರು. ನನ್ನ ಕುಟುಂಬದವರನ್ನು ಬಿಟ್ಟಿರುವುದು ನನಗೂ ಕಷ್ಟವಾಗಿತ್ತು. ಪ್ರತಿವರ್ಷ ಕ್ರಿಸ್‌ಮಸ್‌ ರಜಾ ದಿನಗಳಲ್ಲಿ ಮಾತ್ರ ಕುಟುಂಬದವರನ್ನು ಭೇಟಿ ಮಾಡುತ್ತಿದ್ದೆ. ನಾನು ಮನೆಗೆ ಮರಳಿದ್ದಾಗ ಸುತ್ತಮುತ್ತಲಿನ ಜನ, ಸಂಬಂಧಿಕರು ಎಲ್ಲರೂ ‘ನಿಮ್ಮ ಮಗಳು ನಿಮ್ಮೊಟ್ಟಿಗೆ ಇದ್ದು, ಕುಟುಂಬ ನಿರ್ವಹಿಸಬೇಕಿತ್ತು’, ‘ಆಕೆಗೆ ಭವಿಷ್ಯವಿಲ್ಲ’ ಎಂದೆಲ್ಲಾ ನನ್ನ ಕುಟುಂಬದವನ್ನು ಹಂಗಿಸುತ್ತಿದ್ದರು. ಇದೆಲ್ಲವೂ ನನ್ನನ್ನು ಕಾಡದಂತೆ ನನ್ನ ಕುಟುಂಬದವರು ನೋಡಿಕೊಂಡರು. ಆದರೆ, ನನಗೆ ಭಯವಾಯಿತು. ‘ಒಂದಲ್ಲಾ ಒಂದು ದಿನ ನಾನು ಆ ನೀಲಿ ಜರ್ಸಿಯನ್ನು ಧರಿಸುತ್ತೇನೆ ಮತ್ತು ನಿಮಗೆ ಎಲ್ಲವನ್ನೂ ಕೊಡುತ್ತೇನೆ’ ಎಂದು ನಾನು ಅವರಿಗೆ ಭರವಸೆ ನೀಡಿದೆ. ಇದೇ ನನಗೆ ಅಕಾಡೆಮಿಯಲ್ಲಿ ಕಠಿಣ ತರಬೇತಿ ಪಡೆಯಲು ಸಹಕಾರಿಯಾಯಿತು.

ನನ್ನ ಪೋಷಕರು ನನ್ನನ್ನು ಬೆಂಬಲಿಸಿದ್ದು ಮಾತ್ರವಲ್ಲದೇ ಅದಕ್ಕೂ ಮೀರಿ ಜೊತೆಗಿದ್ದರು. ಹೀಗೆ ಒಮ್ಮೆ, ಒಂದು ಪಂದ್ಯಾವಳಿಯಲ್ಲಿ ಆಡಲು ನನ್ನ ಪೋಷಕರ ಸಹಿ ಬೇಕಿತ್ತು. ಅವರು 45 ಕಿ.ಮೀ ದೂರದಲ್ಲಿದ್ದರು. ನಾನು ಇರುವಲ್ಲಿಗೆ ಬಂದು ಸಹಿ ಮಾಡಲು ಬೇಕಾಗುವಷ್ಟು ಹಣ ಅವರ ಹತ್ತಿರವಿರಲಿಲ್ಲ. ಆದರೂ ನನ್ನಪ್ಪ ಬಂದರು; ಅಪ್ಪ ನನ್ನ ಹೀರೋ!

ನಾನು ರಾಷ್ಟ್ರೀಯ ಜೂನಿಯರ್‌ ಹಾಕಿ ತಂಡಕ್ಕೆ ಆಯ್ಕೆಯಾದೆ. ತಂಡದೊಂದಿಗೆ ಆಡಲು ನಾನು ದೆಹಲಿಗೆ ಹೋದೆ. ಹೊಸ ತಂಡ, ಹೊಸ ಪ್ರದೇಶ.. ಎಲ್ಲವೂ ನನಗೆ ಹೊಸದಾಗಿತ್ತು. ನಾನು ಮಾತನಾಡಲು ಸಂಕೋಚಪಡುತ್ತಿದ್ದೆ. ಆದರೆ ನನ್ನ ತಂಡದ ಸಂಗಾತಿಗಳು ತಂಡದ ಸಭೆಗಳಲ್ಲಿ ನಾನು ಮಾತನಾಡುವಂತೆ ಪ್ರೋತ್ಸಾಹಿಸಿದರು. ನನ್ನ ಆತ್ಮವಿಶ್ವಾಸ ಹೆಚ್ಚಾಯಿತು. ಅದನ್ನು ಮೈದಾನದಲ್ಲಿಯೂ ವ್ಯಕ್ತಪಡಿಸಲು ಸಾಧ್ಯವಾಯಿತು. 2016ರಲ್ಲಿ ನಡೆದ ಏಷ್ಯನ್‌ ಕಪ್‌ನಲ್ಲಿ ನಾನು ಭಾರತವನ್ನು ಪ್ರತಿನಿಧಿಸಿದ್ದ ತಂಡದಲ್ಲಿದೆ.

ನನ್ನ ಕಠಿಣ ದಿನಗಳು ಮುಂದಿದ್ದವು. 2019ರಲ್ಲಿ ಜಪಾನ್‌ನಲ್ಲಿ ನಡೆದ ಅಂತರಾಷ್ಟ್ರೀಯ ಹಾಕಿ ಫೇಡರೇಷನ್‌ನ ಸರಣಿಯಲ್ಲಿ ಚಿಲಿ ವಿರುದ್ಧ ಭಾರತದ ಸೆಮಿಫೈನಲ್‌ ಪಂದ್ಯವಿತ್ತು. ಆ ಪಂದ್ಯ ನಡೆಯುವ ಒಂದು ದಿನ ಮೊದಲು ಅಪ್ಪ ನಿಧನರಾದರು. ಅಪ್ಪನ ನಿಧನದಿಂದ ಸಂಪೂರ್ಣವಾಗಿ ಕುಗ್ಗಿಹೋದೆ, ಈ ಕೂಡಲೇ ಮನೆಗೆ ಹೋಗಬೇಕೆಂದು ತುಂಬಾ ಅನ್ನಿಸುತ್ತಿತ್ತು. ಆದರೆ, ಧೈರ್ಯ ಮಾಡಿ ನಾನು ಪಂದ್ಯದಲ್ಲಿ ಆಟವಾಡಲು ನಿರ್ಧರಿಸಿದ್ದೆ. ನನ್ನಪ್ಪ ಕೂಡ ಬಯಸುತ್ತಿದ್ದದ್ದು ಅದನ್ನೆ. ಅಪ್ಪನ ಪ್ರೀತಿ ಎಲ್ಲವನ್ನು ಮರೆತು ನಾನು ಚೆನ್ನಾಗಿ ಆಡುವಂತೆ ಮಾಡುತ್ತಿತ್ತು. ಆ ಟೂರ್ನಿಯಲ್ಲಿ ಭಾರತ ಜಯಗಳಿಸಿತು.

ಆ ದಿನ ಇಂದಿಗೂ ನನಗೆ ನೆನಪಿದೆ. ಆಟ ಮುಗಿಯಿತು ಎಂದು ಸೀಟಿ ಕೂಗುತ್ತಿದ್ದಂತೆ ನಾನು ಭಾವುಕಳಾದೆ. ಅಳಲು ಆರಂಭಿಸಿದೆ. ನನ್ನ ತಂಡದ ಸದಸ್ಯರು ನನ್ನ ಸುತ್ತಲೂ ಒಟ್ಟುಗೂಡಿ, ‘ನಿಮ್ಮ ತಂದೆ ತುಂಬಾ ಸಂತೋಷಪಡುತ್ತಾರೆ’ ಎಂದರು. ನಾನು ಬಯಸಿದ್ದು ಅಪ್ಪನಿಗೆ ನನ್ನ ಬಗ್ಗೆ ಹೆಮ್ಮೆ ಮೂಡಿಸುವುದಾಗಿತ್ತು. ನನ್ನನ್ನು ಬೆಂಬಲಿಸುತ್ತಿದ್ದ, ನನ್ನ ಬಗ್ಗೆ ಹೆಮ್ಮೆ ಪಡುತ್ತಿದ್ದ ನನ್ನ ಅಪ್ಪನಿಗೆ ವಿದಾಯ ಹೇಳಲಾಗಲಿಲ್ಲ ಎಂಬುದು ನನ್ನ ಜೀವನದ ದೊಡ್ಡ ವಿಷಾದದ ಸಂಗತಿ.

ಈಗ ನನ್ನ ಗುರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೋಲು ಗಳಿಸುವುದು, ಗೆಲ್ಲುವುದು ಮಾತ್ರ. ನನ್ನಪ್ಪನಿಗಾಗಿ, ನನ್ನ ತಂಡಕ್ಕಾಗಿ, ನನ್ನ ಭಾರತಕ್ಕಾಗಿ ನಾನು ಆಡುತ್ತೇನೆ ಎನ್ನುವ ಲಾಲ್‌ರೆಮ್ಸಿಯಾಮಿ ಭಾಗವಹಿಸಿರುವ ಭಾರತ ತಂಡ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ ತಲುಪುವತ್ತ ದಾಪುಗಾಲಿಟ್ಟಿದೆ. ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿರುವ ಭಾರತೀಯ ಮಹಿಳಾ ಹಾಕಿ ತಂಡ ಗೆಲುವು ಸಾಧಿಸಲಿ ಎಂಬುದು ನಮ್ಮಲ್ಲೆರ ಆಶಯ.

ಕೃಪೆ: ಹ್ಯೂಮನ್ಸ್‌ ಆಫ್‌ ಬಾಂಬೆ (Humans of Bombay)

ಲಾಲ್‌ರೆಮ್ಸಿಯಾಮಿ ಮಿಜೋರಾಂನಿಂದ ಒಲಿಂಪಿಕ್ಸ್‌ಗೆ ಆಯ್ಕೆಯಾದ ಮೊದಲ ಮಹಿಳೆ, ಹಾಕಿ ಆಟಗಾರ್ತಿ ಲಾಲ್‌ರೆಮ್ಸಿಯಾಮಿ ಜನಿಸಿದ್ದು 2000 ಮಾರ್ಚ್‌ 3ರಂದು. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಮ್ಸಿಯಾಮಿ, 18 ವರ್ಷದೊಳಗಿನ ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಿ 2018ರ ವರ್ಲ್ಡ್‌ ಕಪ್‌ನಲ್ಲಿ ಸ್ಪರ್ಧಿಸಿದ್ದರು. ಏಷ್ಯನ್‌ ಕಪ್‌ನಲ್ಲಿ ಇವರು ಪ್ರತಿನಿಧಿಸಿದ್ದ ಭಾರತ ತಂಡವು ಬೆಳ್ಳಿ ಪದಕ ಗೆದ್ದಿತ್ತು. ಪ್ರಸ್ತುತ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಇವರು ಪ್ರತಿನಿಧಿಸಿರುವ ಹಾಕಿ ತಂಡವು ಸೆಮಿಫೈನಲ್‌ ಪ್ರವೇಶಿಸಿದೆ.


ಇದನ್ನೂ ಓದಿ: ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್‌ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ ಬಿಚ್ಚಿಟ್ಟ ರಾಣಿ ರಾಂಪಾಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -