ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ”ಬಿಜೆಪಿಯವರಿಗೆ ನಿಜವಾಗಿಯೂ ಬಡವರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅಕ್ಕಿ ಕೊಡಿಸುವ ಕೆಲಸ ಮಾಡಲಿ” ಎಂದು ಹೇಳಿದ್ದಾರೆ.
ಈ ಬಗ್ಗೆ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಸಿದ್ದರಾಮಯ್ಯ, ”ಭಾರತೀಯ ಆಹಾರ ನಿಗಮದ ಡಿಜಿಎಂ ಹರೀಶ್ ಜತೆಗೆ ನಾನೇ ಮಾತನಾಡಿದ್ದೆ. 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ. ಅಕ್ಕಿ ನೀಡುವುದಕ್ಕೇನು ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದರು. 2.28 ಲಕ್ಷ ಟನ್ ಅಕ್ಕಿ ನೀಡುವಂತೆ ನಾವು ಜೂನ್ 9ರಂದು ಆಹಾರ ನಿಗಮಕ್ಕೆ ಪತ್ರ ಬರೆದಿದ್ದೆವು. ಅಕ್ಕಿ ಪೂರೈಕೆ ಮಾಡಲಾಗುವುದು ಎಂದು ಜೂನ್ 12ಕ್ಕೆ ಪತ್ರ ಬರೆದಿದ್ದರು. ಆನಂತರ ಅಕ್ಕಿ ನೀಡಬಾರದು ಎಂದು ಕೇಂದ್ರ ಗ್ರಾಹಕ ಇಲಾಖೆಯು ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಅಕ್ಕಿ ಕೊಡುವುದಿಲ್ಲ ಎಂದು ನಿಗಮವು ನಮಗೆ ಜೂನ್ 14ಕ್ಕೆ ಪತ್ರ ಬರೆದಿದ್ದಾರೆ” ಎಂದು ವಿವರಿಸಿದ್ದಾರೆ.
”5 ಕೆ.ಜಿ. ಅಕ್ಕಿ ನೀಡಿ ಉಳಿದ 5 ಕೆ.ಜಿ. ಅಕ್ಕಿಯ ದರವನ್ನು ಫಲಾನುಭವಿಗಳ ಖಾತೆಗೆ ಹಾಕಿ ಎಂದು ಬಿಜೆಪಿ ನಾಯಕರು ಸಲಹೆ ನೀಡುವ ಬದಲು ಅವರೇ ಕೇಂದ್ರದ ಮೇಲೆ ಒತ್ತಡ ಹಾಕಲಿ. ಬಡವರ ಕಾರ್ಯಕ್ರಮದಲ್ಲಿ ರಾಜಕೀಯ ಬೇಡ. ಅಕ್ಕಿ ಕೊಡಿ ಎಂದು ಹೇಳಬೇಕಿತ್ತು. ಕೇಂದ್ರ ಸರ್ಕಾರವು ಯಾಕೆ ಅಡ್ಡಿಪಡಿಸಬೇಕು. ದ್ವೇಷ ರಾಜಕಾರಣ ಯಾಕೆ ಮಾಡಬೇಕಿತ್ತು?” ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರು ಅದೆಷ್ಟೇ ಷಡ್ಯಂತ್ರ ನಡೆಸಿದರೂ ಅನ್ನಭಾಗ್ಯದ ಅಕ್ಕಿ 10 ಕೆಜಿಗೆ ಏರಿಸುವುದು ನಿಶ್ಚಿತ: ಕಾಂಗ್ರೆಸ್ ವಾಗ್ದಾನ
”ಆಂಧ್ರ, ತೆಲಂಗಾಣ ರಾಜ್ಯಗಳ ಜೊತೆಗೂ ಮಾತನಾಡುತ್ತಿದ್ದೇವೆ. ಛತ್ತೀಸ್‌ಗಡದವರು ಮಾತ್ರ 2.28 ಲಕ್ಷ ಮೆಟ್ರಿಕ್ ಟನ್ ಅಲ್ಲ, 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅದರ ದರವೂ ಹೆಚ್ಚು” ಎಂದು ಮಾಹಿತಿ ನೀಡಿದರು.
”ರಾಯಚೂರಿನಲ್ಲಿ ಸೋನ ಮಸೂರಿ ಅಕ್ಕಿ ಇದೆ. ಅದರ ದರ 55ರೂ.. ಆಹಾರ ನಿಗಮದಿಂದ ಅಕ್ಕಿ ಖರೀದಿಸಿದರೆ ಅಕ್ಕಿ ದರ 34ರೂ., ಸಾಗಾಟ ವೆಚ್ಚ 2.60ರೂ. ಸೇರಿ 36.60ರೂ.ಗೆ ಅಕ್ಕಿ ಸಿಗುತ್ತಿತ್ತು. ಈಗ 5 ಕೆ.ಜಿ. ಅಕ್ಕಿ ನೀಡುತ್ತಿರುವುದೂ ಅದೇ ದರದಲ್ಲಿ. ಈಗ ರಾಯಚೂರಿನಲ್ಲಿ ಸೋನ ಮಸೂರಿ ಅಕ್ಕಿ 55 ರೂ. ಕೊಟ್ಟು ಖರೀದಿ ಮಾಡಲು ಆಗುವುದಿಲ್ಲ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭಾರತೀಯ ಆಹಾರ ನಿಗಮ (ಎಫ್‌ಸಿಐ) ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವ ಕಮಿಟ್‌ಮೆಂಟ್ ಪತ್ರ ತೋರಿಸಲಿ ಎಂದು ಬಿಜೆಪಿ ನಾಯಕ ಸಿಟಿ ರವಿ ಅವರು ಇತ್ತಿಚೆಗೆ ಸವಾಲು ಹಾಕಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಸಿದ್ದರಾಮಯ್ಯ ಅವರು, ”ಇಲ್ಲಿದೆ ಎಫ್.ಸಿ.ಐ ಕಮಿಟ್‌ಮೆಂಟ್ ಪತ್ರ. ಇಂತಹ ಬೇಜವಾಬ್ದಾರಿ ಹೇಳಿಕೆ, ಸುಳ್ಳು ಮತ್ತು ಅಪಪ್ರಚಾರದ ಗೀಳಿಗಾಗಿಯೇ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯ ಇಂತಹ ನಾಯಕರನ್ನು ಸೋಲಿಸಿ ಮನೆಗೆ ಕಳಿಸಿರುವುದು. ಸಿ.ಟಿ.ರವಿ ಮತ್ತಿತರ ಬಿಜೆಪಿ ನಾಯಕರು ಮೊದಲು ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿ ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿ ಪೂರೈಸುವಂತೆ ಮಾಡಬೇಕೇ ಹೊರತು, ಬಡವರ ಹೊಟ್ಟೆಗೆ ಹೊಡೆಯುವ ಕೇಂದ್ರ ಸರ್ಕಾರದ ಜನವಿರೋಧಿ ನಿಲುವನ್ನು ಬೆಂಬಲಿಸುವುದಲ್ಲ” ಎಂದು ಟ್ವೀಟ್ ಮಾಡಿದ್ದರು.
ಭಾರತೀಯ ಆಹಾರ ನಿಗಮ (ಎಫ್‌ಸಿಐ) ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವ ಕಮಿಟ್‌ಮೆಂಟ್ ಪತ್ರ ತೋರಿಸಲಿ ಎಂದು ಬಿಜೆಪಿ ನಾಯಕ @CTRavi_BJP ಸವಾಲು ಹಾಕಿದ್ದರು.
ಇಲ್ಲಿದೆ ಎಫ್.ಸಿ.ಐ ಕಮಿಟ್‌ಮೆಂಟ್ ಪತ್ರ.
ಇಂತಹ ಬೇಜವಾಬ್ದಾರಿ ಹೇಳಿಕೆ, ಸುಳ್ಳು ಮತ್ತು ಅಪಪ್ರಚಾರದ ಗೀಳಿಗಾಗಿಯೇ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯ ಇಂತಹ… pic.twitter.com/y6uT7eLXlw
— Siddaramaiah (@siddaramaiah) June 16, 2023


