ತಮಿಳುನಾಡು ವಿಧಾನಸಭಾ ಚುನಾವಣೆಗಾಗಿ ಈಗಾಗಲೇ ಪ್ರಚಾರ ಕಾರ್ಯ ಶುರು ಮಾಡಿರುವ ನಟ, ಮಕ್ಕಳ್ ನೀದಿ ಮಯ್ಯಂ ಮುಖ್ಯಸ್ಥ ಕಮಲ್ ಹಾಸನ್, ರಜನಿಕಾಂತ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಜನರಿಗೆ ಪ್ರಯೋಜನ ಆಗುವುದಾದರೇ ರಜನಿಕಾಂತ್ ಜೊತೆಗೆ ಮೈತ್ರಿಗೆ ಸಿದ್ಧ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ರಜನಿಕಾಂತ್ ಅವರೊಂದಿಗೆ ಕೈಜೋಡಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರುವ ಕಮಲ್ ಹಾಸನ್ “ನಮ್ಮ ಸಿದ್ಧಾಂತವು ಹೋಲುತ್ತಿದ್ದರೆ, ನಮ್ಮ ಮೈತ್ರಿಯಿಂದ ಜನರಿಗೆ ಪ್ರಯೋಜನವಾಗುವಂತಿದ್ದರೇ, ನಮ್ಮ ಅಹಂಕಾರವನ್ನು ಬದಿಗಿಟ್ಟು ಪರಸ್ಪರ ಸಹಕರಿಸಲು ನಾವು ಸಿದ್ಧ ”ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಹಿಂದೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವಾದ ”ಮಕ್ಕಳ್ ನೀದಿ ಮಯ್ಯಂ” ಉತ್ತಮ ಜನರೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ. ಚುನಾವಣೆಯಲ್ಲಿ ನಟ ರಜನಿಕಾಂತ್ ಬೆಂಬಲವನ್ನು ಕೇಳುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ದೇಶದ ಅರ್ಧದಷ್ಟು ಜನ ಹಸಿವಿನಲ್ಲಿರುವಾಗ ಹೊಸ ಸಂಸತ್ತು ಬೇಕೆ? ಮೋದಿಗೆ ಕಮಲ್ ಹಾಸನ್ ಪ್ರಶ್ನೆ
ಇತ್ತ ಶೀಘ್ರದಲ್ಲೇ ತಮ್ಮ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಲು ನಟ ರಜನಿಕಾಂತ್ ಸಜ್ಜಾಗಿದ್ದಾರೆ. ಆದರೂ ಸಹ ರಜನಿಕಾಂತ್ ಅವರೊಂದಿಗೆ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಮಲ್ ಹಾಸನ್ ತಳ್ಳಿಹಾಕಿಲ್ಲ.
He (Rajinikanth) is the one who has to decide about the alliance. After that, we will both sit down and further discuss on it: Makkal Needhi Maiam (MNM) chief Kamal Haasan pic.twitter.com/xmENuOqkPT
— ANI (@ANI) December 15, 2020
ನಟ ರಜನಿಕಾಂತ್ ತಮ್ಮ ಹೊಸ ಪಕ್ಷ ಪ್ರಾರಂಭ ದಿನಾಂಕ ಮತ್ತು ಇತರ ವಿವರಗಳನ್ನು ಈ ತಿಂಗಳ 31 ರಂದು ತಿಳಿಸಲಾಗುವುದು ಎಂದು ಘೋಷಿಸಿದ್ದರು. ಈ ಹಿನ್ನಲೆಯಲ್ಲಿ, ಈಗಾಗಲೇ ಚುನಾವಣಾ ಆಯೋಗದಲ್ಲಿ ನೋಂದಾಯಿಸಿರುವ ರಾಜಕೀಯ ಪಕ್ಷ ‘ಮಕ್ಕಳ್ ಸೇವೈ ಕಚ್ಚಿ’ ಎಂಬ ಹೆಸರನ್ನು ನಟ ರಜನಿಕಾಂತ್ ಬಳಸಲಿದ್ದಾರೆ ತಮಿಳುನಾಡು ಮಾಧ್ಯಮಗಳು ವರದಿ ಮಾಡಿವೆ.
ನಟ ಕಮಲ್ ಹಾಸನ್ ಡಿಸೆಂಬರ್ 13 ರಂದು 2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ತಮ್ಮ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದ್ದು, ಡಿಸೆಂಬರ್ 16 ರಂದು ಮೊದಲ ಹಂತದ ಪ್ರಚಾರ ಕಾರ್ಯ ಕೊನೆಗೊಳ್ಳಲಿದೆ.
ಈ ನಾಲ್ಕು ದಿನಗಳ ವೇಳಾಪಟ್ಟಿಯಲ್ಲಿ ಮಧುರೈ, ಥೇಣಿ, ದಿಂಡಿಗಲ್, ವಿರುಧುನಗರ್, ತಿರುಣಲ್ವೇಲಿ, ಟುಟುಕೊರಿನ್ ಹಾಗೂ ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಪ್ರಚಾರ ನಡೆಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ತಮ್ಮ ಪ್ರಚಾರದಲ್ಲಿ ಮಧುರೈ ಅನ್ನು ಎರಡನೇ ರಾಜಧಾನಿ ಮಾಡುವ ಭರವಸೆ ನೀಡಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಪಕ್ಷವು ಸುಮಾರು 4 ಶೇಕಡಾ ಮತಗಳನ್ನು ಗಳಿಸಿದೆ.
ಈಗಾಗಲೇ ತಮಿಳುನಾಡು ರಾಜಕೀಯದಲ್ಲಿ ನಟಿ, ರಾಜಕಾರಣಿ ಖುಷ್ಬೂ, ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿಗಳಾದ ಸಸಿಕಾಂತ್ ಸೆಂಥಿಲ್, ಅಣ್ಣಾಮಲೈ ಕೂಡ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಬಿಜೆಪಿ ಕೂಡ ವೆಟ್ರಿವೇಲ್ ಯಾತ್ರೆ ನಡೆಸಿ ಜನರಲ್ಲಿ ಧರ್ಮದ ರಾಜಕಾರಣ ಮಾಡಲು ಪ್ರಯತ್ನಿಸುತ್ತಿದೆ.


