ಮರಾಠ ನಾಯಕರು ಈ ಹಿಂದೆ ಸಮುದಾಯಕ್ಕೆ ಮೀಸಲಾತಿ ಬೇಡಿಕೆಯನ್ನು ಬೆಂಬಲಿಸಲಿಲ್ಲ ಮತ್ತು ಮರಾಠರಿಗೆ ಮೀಸಲಾತಿ ನೀಡದಂತೆ 30-40 ವರ್ಷಗಳಿಂದ ಒಬಿಸಿ ನಾಯಕರಿಂದ ಸರ್ಕಾರದ ಮೇಲೆ ಒತ್ತಡವಿದೆ ಎಂದು ಮರಾಠ ಮೀಸಲಾತಿ ಪರ ಹೋರಾಟಗಾರ ಮನೋಜ್ ಜಾರಂಗೆ ಹೇಳಿದ್ದಾರೆ.
ಡಿಸೆಂಬರ್ 24ರೊಳಗೆ ನಮಗೆ ಮೀಸಲಾತಿ ನೀಡದಿದ್ದರೆ, ನಾವು ಈ ನಾಯಕರ ಹೆಸರನ್ನು ಬಹಿರಂಗಪಡಿಸುತ್ತೇವೆ ಎಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮನೋಜ್ ಜಾರಂಗೆ ಅವರು ಹೇಳಿದ್ದಾರೆ.
ಮರಾಠ ಸಮುದಾಯದ ಸದಸ್ಯರಿಗೆ ಕುಂಬಿ ಪ್ರಮಾಣಪತ್ರ ನೀಡುವ ಕುರಿತು ಅಧ್ಯಯನ ಮಾಡಲು ನಿವೃತ್ತ ನ್ಯಾಯಮೂರ್ತಿ ಸಂದೀಪ್ ಶಿಂಧೆ ಸಮಿತಿಯನ್ನು ಮಹಾರಾಷ್ಟ್ರ ಸರ್ಕಾರ ರಚಿಸಿದೆ. ಮರಾಠರಿಗೆ ಕುಂಬಿ ಪ್ರಮಾಣಪತ್ರ ನೀಡುವುದರಿಂದ ಅವರಿಗೆ ಇತರ ಹಿಂದುಳಿದ ವರ್ಗದಡಿಯಲ್ಲಿ ಮೀಸಲಾತಿ ಸಿಗಬಹುದು ಎಂಬುದು ಜಾರಂಗೆಯ ಲೆಕ್ಕಾಚಾರವಾಗಿದೆ.
ಮಹಾರಾಷ್ಟ್ರದ ಸಚಿವ ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ನಾಯಕ ಛಗನ್ ಭುಜಬಲ್ ಸೋಮವಾರ ಮರಾಠ ಸಮುದಾಯಕ್ಕೆ ಒಬಿಸಿ ವರ್ಗದ ಅಡಿಯಲ್ಲಿ ಮೀಸಲಾತಿ ನೀಡುವುದಕ್ಕೆ ವಿರೋಧಿಸಿದ್ದಾರೆ. ಈ ಕುರಿತ ಹಿಂಬಾಗಿಲ ಪ್ರಯತ್ನಗಳನ್ನು ವಿರೋಧಿಸಲಾಗುವುದು. ಹಿಂಸಾಚಾರ ಮತ್ತು ಒತ್ತಡದ ತಂತ್ರಗಳನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದ್ದರು.
ಮರಾಠ ನಾಯಕರು ನಮಗೆ ಬೆಂಬಲ ನೀಡಿಲ್ಲ, ಮೀಸಲಾತಿಯನ್ನೂ ನೀಡಿಲ್ಲ. ಅಲ್ಲದೆ 30-40 ವರ್ಷಗಳಿಂದ ಒಬಿಸಿ ಮುಖಂಡರಿಂದ ಸರಕಾರದ ಮೇಲೆ ಒತ್ತಡವಿತ್ತು. ಹೀಗಾಗಿ ನಮಗೆ ಮೀಸಲಾತಿ ಸಿಗುತ್ತಿಲ್ಲ. ಡಿ. 24ರೊಳಗೆ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಿಲ್ಲ ಎಂದಾದರೆ ನಂತರ ನಾವು ಅಂತಹ ನಾಯಕರ ಹೆಸರನ್ನು ಬಹಿರಂಗಪಡಿಸುತ್ತೇವೆ ಎಂದು ಮನೋಜ್ ಜಾರಂಗೆ ಹೇಳಿದ್ದಾರೆ.
ಒಬಿಸಿಗಳಿಗೆ ಸಿಗುವ ಸೌಲಭ್ಯಗಳನ್ನು ಮೀಸಲಾತಿ ವರ್ಗಕ್ಕೆ ಸೇರಿಸಿದ ನಂತರ ಮರಾಠ ಸಮುದಾಯಕ್ಕೂ ನೀಡಬೇಕು. ಒಬಿಸಿ ಕೋಟಾದಡಿ ಉದ್ಯೋಗಗಳನ್ನೂ ಕೂಡ ಸರ್ಕಾರ ನೀಡಬೇಕು. ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ಇಂದು ಒಬಿಸಿ ವರ್ಗದವರಿಗೆ ಸಿಗುವ ಎಲ್ಲಾ ಸವಲತ್ತುಗಳು ನಮಗೂ ಸಿಗಬೇಕು ಎಂದು ಹೇಳಿದ್ದಾರೆ.
ಮರಾಠಾ ಮೀಸಲಾತಿಯನ್ನು ಏಕೆ ವಿರೋಧಿಸುತ್ತಾರೆ ಎಂಬುದನ್ನು ಒಬಿಸಿ ಮುಖಂಡರು ಸ್ಪಷ್ಟಪಡಿಸಬೇಕು ಅವರು ವಿರೋಧಿಸಲು ಕಾರಣ ಏನು ಎಂದು ಹೇಳಬೇಕು. ಒಬಿಸಿಗಳು ಏನು ಪಡೆಯುತ್ತಿದ್ದಾರೆ. ಅದು ನಮಗೂ ಸಿಗಬೇಕು. ಮರಾಠಾ ಮೀಸಲಾತಿ ಬೇಡಿಕೆಯನ್ನು ಬೆಂಬಲಿಸಿ ಪ್ರಾಣತ್ಯಾಗ ಮಾಡಿಕೊಂಡವರ ಕುಟುಂಬಗಳಿಗೆ ನೆರವು ನೀಡಬೇಕು. ಅವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ದೊರಕಿಸಿಕೊಡಬೇಕು ಎಂದು ಜಾರಂಗೆ ಮಹಾರಾಷ್ಟ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದನ್ನು ಓದಿ: ಮರಾಠರಿಗೆ OBC ವರ್ಗದಡಿ ಮೀಸಲಾತಿ ನೀಡುವುದಕ್ಕೆ ಒಬಿಸಿ ಸಮುದಾಯ ವಿರೋಧ


