ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆರೋಗ್ಯದ ಮೇಲಿನ ಹೇಳಿಕೆ ನಂತರ ಊಹಾಪೋಹಗಳು ತೀವ್ರಗೊಂಡಿದೆ. “ನವೀನ್ ಪಟ್ನಾಯಕ್ ಅವರ ಶೀಘ್ರವಾಗಿ ಹದಗೆಡುತ್ತಿರುವ ಆರೋಗ್ಯದ ಹಿಂದೆ ಏನಾದರೂ ಪಿತೂರಿ ಇದೆಯೇ” ಎಂದು ಅವರು ಶಂಕಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಟ್ನಾಯಕ್, ನನ್ನ ಆರೋಗ್ಯದ ಬಗ್ಗೆ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ. “ನರೇಂದ್ರ ಮೋದಿ ನನ್ನ ಉತ್ತಮ ಸ್ನೇಹಿತ ಎಂದು ಸಾರ್ವಜನಿಕವಾಗಿ ಹೇಳಿದ್ದರು. ಅವರು ಮಾಡಬೇಕಾಗಿರುವುದು ದೂರವಾಣಿ ತೆಗೆದುಕೊಂಡು ನನಗೆ ಕರೆ ಮಾಡುವ ಮೂಲಕ ನನ್ನ ಆರೋಗ್ಯದ ಬಗ್ಗೆ ವಿಚಾರಿಸಬೇಕು” ಎಂದು ಹೇಳಿದ್ದಾರೆ. ಕಳೆದ 10 ವರ್ಷಗಳಿಂದ ನನ್ನ ಆರೋಗ್ಯದ ಬಗ್ಗೆ ಬಿಜೆಪಿ ವದಂತಿಗಳನ್ನು ಹಬ್ಬಿಸುತ್ತಿದೆ ಎಂದಿದ್ದಾರೆ.
“ನಾನು ಪರಿಪೂರ್ಣ ಆರೋಗ್ಯವಾಗಿದ್ದೇನೆ; ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದೇನೆ ಎಂದು ಪ್ರಧಾನಿಗೆ ಭರವಸೆ ನೀಡುತ್ತೇನೆ. ನನ್ನ ಆರೋಗ್ಯವು ಸಂಪೂರ್ಣವಾಗಿ ಉತ್ತಮವಾಗಿದೆ. ಇಲ್ಲದಿದ್ದರೆ, ಈ ಬಿಸಿಲಿನ ನಡುವೆ ನಾನು ಪ್ರಚಾರ ಮಾಡಲು ಸಾಧ್ಯವಿಲ್ಲ” ಎಂದು ಪಟ್ನಾಯಕ್ ತಿರುಗೇಟು ಕೊಟ್ಟಿದ್ದಾರೆ.
ಒಡಿಶಾದಲ್ಲಿ ಮೇ 13 ರಿಂದ ಜೂನ್ 1 ರವರೆಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಮಯೂರ್‌ಭಂಜ್ ಮತ್ತು ಬಾಲಸೋರ್‌ನಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ನವೀನ್ ಪಟ್ನಾಯಕ್ ಅವರ ಆರೋಗ್ಯದ ಬಗ್ಗೆ ಕಳವಳವಿದೆ ಎಂದು ಹೇಳಿದರು. ಇದನ್ನು ನಿಗೂಢ ಎಂದು ಕರೆದಿರುವ ಪ್ರಧಾನಿ ಮೋದಿ, ಪಟ್ನಾಯಕ್ ಅವರ ಆರೋಗ್ಯ ಹದಗೆಟ್ಟಿರುವ ಕಾರಣಗಳನ್ನು ಕಂಡುಹಿಡಿಯಲು ತಮ್ಮ ಸರ್ಕಾರವು ಸಮಿತಿಯನ್ನು ರಚಿಸಲಿದೆ ಎಂದು ಹೇಳಿದರು.
“ಇದರ ಹಿಂದೆ ಷಡ್ಯಂತ್ರವಿದೆಯೇ? ಪ್ರಸ್ತುತ ಪಟ್ನಾಯಕ್ ಸರ್ಕಾರವನ್ನು ಅವರ ಪರವಾಗಿ ನಡೆಸುತ್ತಿರುವ ಲಾಬಿ ಇದಕ್ಕೆ ಕಾರಣವೇ” ಎಂದು ಮೋದಿ ಅನುಮಾನ ವ್ಯಕ್ತಪಡಿಸಿದ್ದರು.
77 ವರ್ಷ ವಯಸ್ಸಿನ ನವೀನ್ ಪಟ್ನಾಯಕ್ ಅವರು ಈ ಬಾರಿ ಚುನಾವಣೆಯಲ್ಲಿ ಗೆದ್ದರೆ ದೇಶದಲ್ಲೇ ಅತಿ ಹೆಚ್ಚು ಅವಧಿಯ ಮುಖ್ಯಮಂತ್ರಿಯಾಗಲಿದ್ದಾರೆ. ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ (24 ವರ್ಷ 165 ದಿನಗಳು) ಅವರನ್ನು ಹಿಂದಿಕ್ಕಿದ್ದಾರೆ.
ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ ನಾಯಕ ವಿಕೆ ಪಾಂಡಿಯನ್ ಅವರು ಪಟ್ನಾಯಕ್ ಅವರ ನಿಕಟತೆಯನ್ನು ಬಿಜೆಪಿ ವಿರೋಧಿಸಿದ್ದರಿಂದ ಕೇಂದ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಕೆ ಪಾಂಡಿಯನ್ ಕಳೆದ ವರ್ಷ ಬಿಜೆಡಿ ಸೇರಿದ್ದ ತಮಿಳು ಮಾಜಿ ಅಧಿಕಾರಿ. ಒಡಿಶಾ ಕೇಡರ್‌ನ 2000 ಬ್ಯಾಚ್‌ನ ಓಎಎಸ್ (ಒಡಿಶಾ ಆಡಳಿತ ಸೇವೆ) ಅಧಿಕಾರಿ ಪಾಂಡಿಯನ್ ಅವರು ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅವರ ಪತ್ನಿ ಒಡಿಶಾದವರು ಮತ್ತು ಮದುವೆಯ ನಂತರ ಅವರು ತಮ್ಮ ಕೇಡರ್ ಅನ್ನು ಒಡಿಶಾಗೆ ಬದಲಾಯಿಸಿದರು. ಮೂಲತಃ ಅವರು ಪಂಜಾಬ್ ಕೇಡರ್ ಅಧಿಕಾರಿ.
ಇದನ್ನೂ ಓದಿ; ಧ್ಯಾನ ಮಾಡುವಾಗ ಕ್ಯಾಮೆರಾ ಹಿಡಿಯುವವರು ಯಾರು..?’; ಮೋದಿ ಕನ್ಯಾಕುಮಾರಿ ಪ್ರವಾಸಕ್ಕೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ


