ನಾಟಕದಲ್ಲಿ ರಾಮನನ್ನು ಅಪಹಾಸ್ಯ ಮಾಡಲಾಗಿದೆ ಮತ್ತು ರಾಮಾಯಣವನ್ನು ನಕಾರಾತ್ಮಕವಾಗಿ ಚಿತ್ರಿಸಿ ನಾಟಕ ಪ್ರದರ್ಶಿಸಲಾಗಿದೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಬಾಂಬೆಯು 8 ವಿದ್ಯಾರ್ಥಿಗಳಿಗೆ ತಲಾ 1.2 ಲಕ್ಷದವರೆಗೆ ದಂಡ ವಿಧಿಸಿದೆ.
ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್(ಪಿಎಎಫ್) ಅಂಗವಾಗಿ ಮಾರ್ಚ್ 31ರಂದು ‘ರಾಹೋವನ’ ಶೀರ್ಷಿಕೆಯ ನಾಟಕವನ್ನು ಕಲಾ ಉತ್ಸವದಲ್ಲಿ ಪ್ರದರ್ಶಿಸಲಾಗಿತ್ತು. ನಾಟಕದಲ್ಲಿ ಭಗವಾನ್ ರಾಮನನ್ನು ಕೆಟ್ಟದಾಗಿ ಚಿತ್ರಿಸಲಾಗಿತ್ತು ಮತ್ತು ರಾಮಾಯಣವನ್ನು ಅಸಭ್ಯವಾಗಿ ಮತ್ತು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳ ಗುಂಪೊಂದು ಆರೋಪಿಸಿತ್ತು. ನಾಟಕದ ವಿರುದ್ಧ ಆಡಳಿತ ಮಂಡಳಿಗೆ ವಿದ್ಯಾರ್ಥಿಗಳ ಗುಂಪು ದೂರನ್ನು ಕೂಡ ನೀಡಿತ್ತು.
ಐಐಟಿ ಬಾಂಬೆ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (APPSC)ಗೆ ಸಂಯೋಜಿತವಾಗಿರುವ ಮತ್ತೋರ್ವ ವಿದ್ಯಾರ್ಥಿ ಕೂಡ ನಾಟಕವನ್ನು ಪ್ರಸ್ತುತಪಡಿಸಿದ್ದಕ್ಕಾಗಿ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ. ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ ಎಡಪಂಥೀಯ ವಿದ್ಯಾರ್ಥಿಗಳ ಒಕ್ಕೂಟವಾಗಿದೆ.
8 ವಿದ್ಯಾರ್ಥಿಗಳಲ್ಲಿ ತಲಾ 40,000 ರೂ.ನಿಂದ 1,20,000ರೂ.ಗಳವರೆಗೆ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಜೂನ್ 4ರಂದು ಐಐಟಿ ಬಾಂಬೆ ರಿಜಿಸ್ಟ್ರಾರ್ ಕಚೇರಿ ಹೊರಡಿಸಿದ ನೋಟಿಸ್‌ನಲ್ಲಿ ವಿದ್ಯಾರ್ಥಿಗಳು ಜುಲೈ 30ರೊಳಗೆ ದಂಡವನ್ನು ಪಾವತಿಸಬೇಕು ಎಂದು ತಿಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಐಐಟಿ ಬಾಂಬೆ ನಿರಾಕರಿಸಿದೆ.
ಈ ಕುರಿತು ಐಐಟಿ ಬಾಂಬೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ರಾಮಾಯಣವನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ‘ರಾಹೋವನ’ ನಾಟಕದಲ್ಲಿ ಭಾಗಿಯಾಗಿರುವವರ ವಿರುದ್ಧ ಆಡಳಿತವು ಶಿಸ್ತು ಕ್ರಮ ಕೈಗೊಂಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಈ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸ್ವಾತಂತ್ರ್ಯವನ್ನು ಭಗವಾನ್ ರಾಮ, ಮಾತಾ ಸೀತೆ ಮತ್ತು ಭಗವಾನ್ ಲಕ್ಷ್ಮಣರನ್ನು ಅಪಹಾಸ್ಯ ಮಾಡಲು ದುರುಪಯೋಗಪಡಿಸಿಕೊಂಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಜಾಗತಿಕ ಕ್ಯೂಎಸ್ ರ್ಯಾಂಕಿಂಗ್-2025ರಲ್ಲಿ ಭಾರತದಲ್ಲೇ ಅಗ್ರಸ್ಥಾನದಲ್ಲಿರುವ ಮುಂಬೈ ಐಐಟಿ ಜೂನ್ 4ರಂದು ಈ ರೀತಿ ನೋಟಿಸ್ ನೀಡಿದೆ. ಇದಕ್ಕೂ ಮುನ್ನ ಒಂದು ಶಿಸ್ತುಸಮಿತಿ ಸಭೆಯನ್ನು ಮೇ 8ರಂದು ನಡೆಸಲಾಗಿದ್ದು, ಈ ನಾಟಕದ ಬಗೆಗಿನ ದೂರಿನ ಬಗ್ಗೆ ಪರಿಶೀಲಿಸಲಾಗಿತ್ತು ಎನ್ನಲಾಗಿದೆ.
ಇದನ್ನು ಓದಿ: ಬಿಹಾರ: ಎಸ್ಸಿ, ಎಸ್ಟಿ, ಒಬಿಸಿಗಳ ಮೀಸಲಾತಿಯಲ್ಲಿ 65% ಹೆಚ್ಚಳ ರದ್ದುಗೊಳಿಸಿದ ಹೈಕೋರ್ಟ್


