ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಹಾಸ್ಟೆಲ್ ಕೊಠಡಿಯಲ್ಲಿ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಶುಕ್ರವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಯನ್ನು ಪೊಲೀಸರು ದೃಢಪಡಿಸಿದ್ದಾರೆ. ಇದು ದೆಹಲಿ ಐಐಟಿಯಲ್ಲಿ ಕಳೆದ ಎರಡು ತಿಂಗಳಲ್ಲಿ ನಡೆದ ಎರಡನೇ ಆತ್ಮಹತ್ಯೆ ಪ್ರಕರಣವಾಗಿದೆ.
ಅನಿಲ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಇವರು ಬಿಟೆಕ್ ಓದುತ್ತಿದ್ದರು. ಐಐಟಿ ಸಂಸ್ಥೆಯ ವಿಂಧ್ಯಾಚಲ ಹಾಸ್ಟೆಲ್‌ನಲ್ಲಿ ತಂಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನಿಲ್ ಕುಮಾರ್ ಅವರ ಬಿಟೆಕ್ ಕಲಿಕಾ ವರ್ಷಾವಧಿ ಮುಗಿದಿದೆ. ಜೂನ್‌ನಲ್ಲಿ ಅವರು ಹಾಸ್ಟೆಲ್ ನಿಂದ ತೆರಳಬೇಕಿತ್ತು. ಆದರೆ ಅವರು ಕೆಲವು ವಿಷಯಗಳಲ್ಲಿ ಫೈಲ್ ಆದ ಕಾರಣ ಆರು ತಿಂಗಳ ಕಾಲ ಹಾಸ್ಟೆಲ್‌ನಲ್ಲಿ ಹೆಚ್ಚುವರಿಯಾಗಿ ಇರಲು ಅವಕಾಶ ನೀಡಲಾಗಿತ್ತು.
ಸಂಜೆ 6 ಗಂಟೆ ಸುಮಾರಿಗೆ ಕಿಶನ್‌ಗಢ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಅನಿಲ್ ಕುಮಾರ್ ಹಾಸ್ಟೆಲ್ ಕೊಠಡಿಯ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗ್ನಿಶಾಮಕ ದಳದವರು ಬಾಗಿಲು ಒಡೆದು ಮೃತದೇಹವನ್ನು ಹೊರತೆಗೆದಿದ್ದಾರೆ.
ಬಾಗಿಲು ಮುರಿಯುವ ಸಮಯದಲ್ಲಿ ವಿದ್ಯಾರ್ಥಿಗಳ ಡೀನ್, ಐಐಟಿಯ ಮುಖ್ಯ ಭದ್ರತಾ ಅಧಿಕಾರಿ, ಅಪರಾಧ ಮತ್ತು ವಿಧಿವಿಜ್ಞಾನ ತಂಡಗಳು ಉಪಸ್ಥಿತರಿದ್ದರು.
ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಷಷ್ಟವಾಗಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ: ರಾಜಸ್ಥಾನ: ಬುಡಕಟ್ಟು ಮಹಿಳೆಯನ್ನು ವಿವಸ್ತ್ರಗೊಳಿಸಿ, ಮೆರವಣಿಗೆ


