ನನಗೆ ಎಪ್ಪತ್ತು ವರ್ಷ ವಯಸ್ಸಾಗಿದೆ, ನಾನು ಮತ್ತು ನನ್ನ ಕುಟುಂಬದ ಸದಸ್ಯರು ಕೊರೋನ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ. ಆದ್ದರಿಂದ 700 ಕಿ.ಮೀ ಸಂಚಾರ ಮಾಡಲು ಆಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಣ್ಣೀರಿಟ್ಟಿದ್ದಾರೆ.
ಉಪಚುನಾವಣಾ ಪ್ರಚಾರಕ್ಕೆ ತೆರಳುವ ನಾಯಕರು ತಮ್ಮ ಕ್ಷೇತ್ರಗಳಲ್ಲಿನ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ತೆರಳುವುದಿಲ್ಲ ಎಂದು ಪ್ರತಿಪಕ್ಷಗಳು ಉತ್ತರ ಕರ್ನಾಟಕದಲ್ಲಿನ ಪ್ರವಾಹದ ಹಿನ್ನಲೆಯಲ್ಲಿ ಆರೋಪಿಸಿದ್ದವು.
ಇದನ್ನೂ ಓದಿ: ಕಾರಜೋಳರಿಗೊಂದು ಕಿವಿಮಾತು : ಬಿ.ಚಂದ್ರೇಗೌಡರ ಬಹಿರಂಗ ಪತ್ರ
ಕಲಬುರಗಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಖಾಸಗಿ ವಾಹಿನಿಯ ಜೊತೆ ಮಾತನಾಡುತ್ತಾ, ”ನನ್ನ ಪರಿಸ್ಥಿತಿಯನ್ನು ತಿಳಿಯದೆ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರವಾಹ ಪರಿಸ್ಥಿತಿಯ ವೀಕ್ಷಣೆಗೆ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕಳುಹಿಸಿದ್ದಾರೆ. ನಾನು ಅತ್ಯಂತ ಸೂಕ್ಷ್ಮವಾಗಿ ಹೇಳುತ್ತಿದ್ದೇನೆ, ಒಂದು ಘಟನೆಯನ್ನು ಇಟ್ಟುಕೊಂಡು ಒಬ್ಬ ವ್ಯಕ್ತಿಯನ್ನು ಅಳೆಯುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.
“ನಾನು ಇಷ್ಟು ವರ್ಷ ಯಾವ ರೀತಿ ಕೆಲಸ ಮಾಡಿದ್ದೇನೆ, ಕೊರೊನಾ ಸಮಯದಲ್ಲಿ ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದು ಎಲ್ಲರಿಗೂ ಗೊತ್ತು. ಇದೀಗ ನಾನು, ನನ್ನ ಕುಟುಂಬ ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದೇವೆ. ಹೀಗಾಗಿ 700 ಕಿ.ಮೀ. ಸಂಚಾರ ಮಾಡಲು ಆಗುವುದಿಲ್ಲ” ಎಂದು ಹೇಳಿದ್ದಾರೆ.
ಶಿರಾ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಬಂದು ಮುಖ ತೋರಿಸಿ ಎಂದು ಕೇಳಿಕೊಂಡಿದ್ದರು. ಹೀಗಾಗಿ ಅಲ್ಲಿಗೆ ತೆರಳಿದ್ದೆ ಎಂದು ತಮ್ಮ ಶಿರಾ ಪ್ರವಾಸದ ಬಗ್ಗೆ ಸ್ಪಷ್ಟಣೆ ನೀಡಿದ ಅವರು, “ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಶ್ರಮಿಸುತ್ತಿದ್ದಾರೆ. ಜನರು ಅಗತ್ಯ ಸಹಕಾರ ನೀಡಬೇಕು. ಸರಕಾರ ಜನರಿಗೆ ಎಲ್ಲ ರೀತಿಯಲ್ಲಿಯೂ ನೆರವಾಗಲಿದೆ” ಎಂದಿದ್ದಾರೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ: ಹೆಸರೇನೋ ಬದಲಾಯಿತು – ಕಲ್ಯಾಣ ಎಂದು?


