ನನ್ನ ದೇಶದಲ್ಲಿ…
ನಿದ್ರೆಯ ನೆರಳಿಗೂ ಆಕಾಶದ ಬೆರಳಿಗೂ ಒಲವಾಗಿ
ನೆಲವೆಲ್ಲ ತೇವ ನುಂಗಿದ ಬಟ್ಟೆಯಾಗಿರಲು,
ತಿಳಿ ಗುಲಾಬಿ ಬಣ್ಣದ ತೇರು ಎಳೆಯುವಷ್ಟರಲ್ಲಿ
ನಮ್ಮೂರ ಕೊರ್ಮನ ಕೈ ತುಂಡಾಗುತ್ತದೆ.
ಕೆಂಡ ನುಂಗಿದ ಕಣ್ಣು, ಸೇಂದಿ ಹೀರಿದ ನಾಲಿಗೆ
ಜಪ ತಪಗಳ ಸ್ಖಲಿನಿಗಳ ಸೆರೆಯಾಳು!
ಗಾಳಿಯ ಜೊತೆ ಸೆಣಸಾಡಿ ಗಾಯಾಳು ತಾಯಿಯ ಎದೆಹಾಲಲ್ಲೂ ನೆತ್ತರದ ಬಣ್ಣ,
ಬೆಂಕಿ ಬಿದ್ದವರ ಮನೆಯ ಕಣ್ಣಲ್ಲೂ ನೀರು ಖಾಲಿಯಾಗಿದೆ!
ಸೊರಗಿದ ಸೊಬಗು ಸೋರುವ ಧರ್ಮತ್ವದ ಗಂಡಸುತನ
ಊರ ದೇವರ ಹೆಣ ಹೆರಲು ಅವ್ವ ಮತ್ತೆ ಬಸಿರಾಗುವಳು!
ಬೀದಿ ಗುಡಿಸುವ ಬಿಸಿಲು ನೆರಳಿನ ನೆತ್ತಿಗೆ ಮೊಳೆ ಜಡಿದು
ದವಾಖಾನೆಗೆ ದಾಖಲಾಗುವಷ್ಟರಲ್ಲಿ ಮುಟ್ಟಿಸಿಕೊಂಡವನು
ಮಡಿಯಾಗುವ ಮೊದಲೆ ಮುಟ್ಟಿದವನು ಹೆಣವಾಗುತ್ತಾನೆ!
ಹೂಳುವ ಜಾಗಕ್ಕೂ ಜಾತಿ ಬೇಲಿ, ಮನುಷ್ಯತ್ವ ಪೂರ್ತಿ ಖಾಲಿ!
ಎಲ್ಲರದೂ ಕೊಲ್ಲುವುದೇ ಕಾಯಕ ಆದರೂ ಇಲ್ಲಿ ಅಸಂಖ್ಯಾತರು ನಿರುದ್ಯೋಗಿಗಳೆ,
ಹಕ್ಕಿಗೆ ಗುಂಡಿಡುವ ಸಸ್ಯಹಾರತ್ವದ ಸರಕಿಗೆ ಈ ನೆಲ ತೀರಾ ಸಲೀಸಾದ ಸ್ವರ್ಗ!
ಅದೆಷ್ಟು ಬಾರಿ ಕೊಂದರೂ, ನೊಂದರೂ ಎದೆಸೀಳಿ ದೇಶಾಭಿಮಾನ ತೋರುತ್ತಲೇ ಒಂದು ವರ್ಗ!
ಅರೆನಗ್ನ ಪ್ರತಿಮೆ
ಉಸಿರು ಹಿಡಿದು ಎದೆಗೊದ್ದಾಗದೆಲ್ಲ ಬಿದ್ದದ್ದು
ರಾಮರಾಜ್ಯದ ಕನಸು.
ಚೂರುಗಳ ಆಯುತ್ತಾ ಹೋದಂತೆ ಸಿಕ್ಕಿದ್ದು ಹಸಿಗಾಯಗಳ ಹೆರಿಗೆ ನೋವು
ಹಸಿದ ಕಂಬನಿಗಳು ಅಳುತ್ತಲೇ ಇವೆ
ಕಣ್ಣರೆಪ್ಪೆ ಹೊಲಿದು ಬಿಡಿ,
ಬಟ್ಟೆ ಇಲ್ಲದವರ ಬೇನೆ ಕಂಡು ಚರಕವೂ ಸ್ತಬ್ಧವಾಗಿದೆ.
ರಕ್ತ ಮತ್ತು ಓಕುಳಿ ಒಂದೇ ಎನ್ನುವರ ಮನೆಯ ಹಬ್ಬದೂಟ ತಿನ್ನದೆ,
ಉಪವಾಸ ಕೂತವನ ಕಣ್ಣೊಳಗೂ ಹಸಿವಿತ್ತು.
ದಾರಿಗಳಿಗೆ ಹೆಜ್ಜೆ ಮೂಡುವ ಹೊತ್ತಲ್ಲಿ,
ಚಪ್ಪಲಿಗೆ ಚಲನೆ ಬರುತ್ತದೆ.
ಕಡಲ ಹನಿಗೆ ಉಪ್ಪು ಕರಗುವ ಹಾಗೆ.
ಕರದಲ್ಲೇ ಕರಗಿ ಹೋಗುತ್ತಾನೆ ನೀರಂತ ಮನುಷ್ಯ!
ಗರೀಬಿಯ ಗಾಯಕ್ಕೆ ಉಪ್ಪು ಸವರುವಾಗ
ಮರಿಯಾದ ಹತ್ಯೆಯಲಿ ಮಗಳು ಸತ್ತಾಗ,
ಬಡವನ ಬೆವರು, ಹಣವಂತನ ಹೆಣವ ತೊಳೆಯುವಾಗ,
ಅಲ್ಲೊಂದು ಪುತ್ಥಳಿಯ ಕೈಗೆ ಪೊರಕೆ ಬರುತ್ತದೆ.
ಕನ್ನಡಕ ಇನ್ನಷ್ಟು ಧೂಳಾಗುತ್ತದೆ!
ತಿಂಗಳೊಂದರ ಎರಡನೇ ತಾರೀಖಿಗೆ
ಹುಟ್ಟುವ ಈ ಪುತ್ಥಳಿ,
ಪ್ರತಿನಿತ್ಯವೂ ಸಾಯುತ್ತಿದೆ ಕಂಡವರ ಗುಂಡಿನ ಏಟಿಗೆ
ನೆತ್ತರ ಕಂಡವರು ರೋದಿಸಿದರೆ,
ಉಂಡವರು ಕೊಂದವನ ಕೊಂಡಾಡುತ್ತಾರೆ.
ಕೊಲ್ಲುವ ನಿಮ್ಮನ್ನು ಕೊಲ್ಲಲು ನಮಗೆ ಗುಂಡೆ ಬೇಕಾಗಿಲ್ಲ.
ಲೇಖನಿಯ ತುದಿಯ ಒಂದಿಷ್ಟು ಮಸಿಯು ಮನಸ್ಸು ಮಾಡಿದರೆ ಸಾಕು,
ಹೆಜ್ಜೆಗೊಂದು ಹೆಣ ಬೀಳುತ್ತದೆ.
ಆದರೆ, ನಾವು ಕೊಲ್ಲುವುದಿಲ್ಲ ಏಕೆಂದರೆ..
ನೀವೇ ಕೊಂದ ಗಾಂಧಿಯನ್ನು ನಂಬಿದವರು ನಾವು!
ಉರಿವ ನಕ್ಷತ್ರಗಳು ಉರಿದು ಬಿದ್ದು
ಬಿಸಿಲ ತಿನ್ನುವ ಬೀದಿ ಬಿಕ್ಕಳಿಸಿದರೂ
ಈ ಪುತ್ಥಳಿಗೆ ಮಾತ್ರ ಪುಢಾರಿತನದ ಇನಾಮು.
ಶಾಂತಿಯು ನಿತ್ಯ ಸಾಯುವಾಗ ಗುಂಡಿಗೇನು ಬರಗಾಲ
ಈಗೀಗ ಈ ಅರೆನಗ್ನ ಪ್ರತಿಮೆಗೂ ನಾಚಿಕೆಯಾಗಿರಬೇಕು
“ಮೇರಾ ಭಾರತ್ ಮಹಾನ್….” ಎನ್ನಲು!?

ಚಾಂದ್ ಪಾಷ ಎನ್ ಎಸ್
ಮೂಲತಃ ಕಲಬುರ್ಗಿಯವರಾದ ಚಾಂದ್ ಪಾಷ ಸೂಕ್ಷ್ಮ ಸಂವೇದನೆಯ ಕವಿ. ಬೆಂಗಳೂರು ವಿ. ವಿ. ಯಲ್ಲಿ ಕನ್ನಡ ಎಂ. ಎ. ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ದಿ ಆಕ್ಸ್‌ಪsರ್ಡ್ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಚೊಚ್ಚಲ ಕವನ ಸಂಕಲನ ‘ಮೌನದ ಮಳೆ’ 2015ರಲ್ಲಿ ಪ್ರಕಟವಾಯಿತು. ಚಿತ್ರ ಚಿಗುರುವ ಹೊತ್ತು ಇತ್ತೀಚಿನ ಕವನ ಸಂಕಲನ. ಚಾಂದ್ ಪಾಷ ಅವರ ಎರಡು ಕವಿತೆಗಳು ಇಲ್ಲಿವೆ


