Homeಮುಖಪುಟಭೂ ಹಂಚಿಕೆ ಏಕೆ ಮಾಡಬೇಕೆಂದರೆ?: ದೇವರಾಜ ಅರಸು ಭಾಷಣ

ಭೂ ಹಂಚಿಕೆ ಏಕೆ ಮಾಡಬೇಕೆಂದರೆ?: ದೇವರಾಜ ಅರಸು ಭಾಷಣ

ಭೂಮಿಯ ಒಡೆತನ - ಭೂಸುಧಾರಣೆ ಬಗ್ಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರು ಮಾಡಿದ್ದ ಭಾಷಣದ ತುಣುಕು

- Advertisement -
- Advertisement -

ಭಾರತದಲ್ಲಿ ಕೇವಲ ಕೃಷಿ ವಿಭಾಗವೊಂದೇ ಸಹಸ್ರಾರು ಸಂಖ್ಯೆಯ ನಿರುದ್ಯೋಗಿಗಳಿಗೆ ಅಥವಾ ಅಪೂರ್ಣ ಉದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಬಲ್ಲಂತಹ ಏಕೈಕ ವಿಭಾಗವಾಗಿದೆ. ಅದನ್ನು ಬಿಟ್ಟರೆ ಇಂತಹ ಅವಕಾಶವನ್ನು ಒದಗಿಸಿಕೊಡಬಲ್ಲ ಬೇರೆ ಯಾವುದೇ ವಿಭಾಗವಿಲ್ಲ ಎಂಬುದು ನನಗೆ ಮನದಟ್ಟಾಗಿದೆ. ನಾನೋರ್ವ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ ಅದನ್ನು ಸಾಧಿಸಲಾಗದಿದ್ದರೂ, ನಾನು ಮಣ್ಣಿನ ಮಗನಾಗಿ, ಮಣ್ಣಿನಲ್ಲೇ ಬದುಕುತ್ತಿರುವುದರಿಂದ ಗ್ರಾಮಾಂತರ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ನನ್ನ ಸುತ್ತಮುತ್ತಲ ಪರಿಸ್ಥಿತಿಗಳೇನಾಗಿವೆ ಎಂಬ ಬಗ್ಗೆ ಅಧ್ಯಯನ ಮಾಡುವ ಅವಕಾಶಗಳು ನನಗೆ ದೊರೆತಿವೆೆ. ನಾನು ಅಲ್ಲಿ ಈ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡಿದ್ದೇನೆ; ಈ ಅರ್ಥದಲ್ಲಿ ನೋಡಿದರೆ ನಾನು ಹುಟ್ಟಾ ಅರ್ಥಶಾಸ್ತ್ರಜ್ಞನಾಗಿದ್ದೇನೆ; ಈ ವಿಷಯಗಳೆಲ್ಲ ನನ್ನ ಮನಸ್ಸಿನಲ್ಲೇ ಇದ್ದವು.

ಈ ಕೃಷಿ ವಿಭಾಗದ ಹೊರತಾಗಿ ಬೇರೆ ಕ್ಷೇತ್ರದಲ್ಲಿ ನೀವು ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದಾದರೆ, ಕೇವಲ ಅತ್ಯಲ್ಪ ಶೇಕಡಾ ಪ್ರಮಾಣದ ಜನರಿಗೆ ಮಾತ್ರವೇ ನೀವು ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಬಹುದಾಗಿದೆ. ಐದನೆಯ ಪಂಚವಾರ್ಷಿಕ ಯೋಜನೆಯ ಶೇಕಡಾ 10ರಷ್ಟು ಅಥವಾ ಶೇ.20ರಷ್ಟು ಹೆಚ್ಚು ಜನರಿಗೆ ಉದ್ಯೋಗಾವಕಾಶ ನೀಡಿಕೆಯಲ್ಲಿ ಲಕ್ಷ್ಯವನ್ನೀಯಬಹುದೇ ಹೊರತು ಶೇಕಡಾ 100ರಷ್ಟು ಜನರಿಗೆ ಉದ್ಯೋಗಗಳನ್ನು ಕಲ್ಪಿಸಲಾಗುವುದಿಲ್ಲ. ಅದು ಅಸಾಧ್ಯವೂ ಕೂಡ. ಹಿಂದಿನ ನಾಲ್ಕು ಪಂಚವಾರ್ಷಿಕ ಯೋಜನೆಗಳಲ್ಲೂ ಇದೇನೂ ನಡೆದಿಲ್ಲ. ಎಂದಮೇಲೆ ಕೃಷಿವಿಭಾಗದಲ್ಲಿ ಅದು ಸಾಧ್ಯವಾಗಬಹುದೇ ಎಂಬುದು ಪ್ರಶ್ನೆ.

ನಾವು ಭೂಸುಧಾರಣೆಯನ್ನು ಕುರಿತು ಮಾತನಾಡುತ್ತಿರುವಾಗ ಅದು ವ್ಯಕ್ತಿನಿಷ್ಠವಾದಲ್ಲಿ ನಾವು ಸಂಪೂರ್ಣವಾಗಿ ಆ ಪ್ರವೃತ್ತಿಯನ್ನು ಅಥವಾ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತೇವೆ ಎಂದು ನನಗೆ ತೋರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಈಗಾಗಲೇ ತನ್ನೊಡನಿದ್ದಷ್ಟು ಜಮೀನು ತನಗೆ ಇರಬೇಕೆಂದು ಅಪೇಕ್ಷಿಸುತ್ತಾನೆ. ಒಂದು ಪಕ್ಷ ಒಬ್ಬ ವ್ಯಕ್ತಿಗೆ 100 ಎಕರೆಗಳಷ್ಟು ಜಮೀನು ಇದ್ದಲ್ಲಿ ಅದು ನನಗೆ ಅವಶ್ಯಕವೆಂದು ಅವನು ಹೇಳುತ್ತಾನೆ. ಒಬ್ಬ ವ್ಯಕ್ತಿಗೆ 200 ಎಕರೆಗಳಷ್ಟು ಜಮೀನು ಇದ್ದರೆ ಅವನು ಸಹ ಅದು ತನಗೆ ಅವಶ್ಯಕವೆಂದು ಹೇಳುತ್ತಾನೆ. ಅವನು ಕೇವಲ ತನ್ನ ಪ್ರಸಕ್ತ ಜೀವನದ ಪರಿಸ್ಥಿತಿಗಳ ಸಂಬಂಧದಲ್ಲಿ ಮಾತ್ರವೇ ಚಿಂತಿಸದೆ, ನನ್ನ ಮಗ, ಮೊಮ್ಮಗ ಮತ್ತು ಮರಿಮಕ್ಕಳ ಹಿತದ ಬಗ್ಗೆಯೂ ಆಲೋಚನೆ ಮಾಡುತ್ತಾನೆ.

ಇದು ನಮ್ಮ ದೇಶದಲ್ಲಿನ ಸಾಂಪ್ರದಾಯಿಕ ಚಿಂತನೆಯಾಗಿ ಪರಿಣಮಿಸಿದೆ. ಆಧುನಿಕ ತಾಂತ್ರಿಕವಿಜ್ಞಾನದ ಈ ದಿನಗಳಲ್ಲಿ ನಿಮ್ಮಲ್ಲಿ ಟ್ರ‍್ಯಾಕ್ಟರ್ ಇದೆ, ಬುಲ್‌ಡೋಜರ್‌ಗಳಿವೆ ಮತ್ತು ಇತರ ಎಷ್ಟೋ ವಿಧದ ಯಾಂತ್ರಿಕ ಸಾಧನ ಸಲಕರಣೆಗಳಿವೆ. ಈಗ ನೀವು ಇಂತಹ ಯಂತ್ರಗಳಿಂದ 200 ಎಕರೆಯಷ್ಟು ಜಮೀನನ್ನು ಉಳಬಹುದು; 2000 ಎಕರೆಯಷ್ಟು ಜಮೀನನ್ನೂ ಉಳಬಹುದು. ಆದರೆ ಇಲ್ಲಿ ಸಮಸ್ಯೆಯೇನೆಂದರೆ, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನುಳ್ಳ ನಮ್ಮ ದೇಶದಲ್ಲಿ ನಿಮಗೆ ರಾಜಕೀಯದಲ್ಲಿ ಸಮಾನ ಅವಕಾಶಗಳನ್ನು ನೀಡಿರುವಾಗ, ಆರ್ಥಿಕ ವ್ಯವಸ್ಥೆಯ ಕ್ಷೇತ್ರದಲ್ಲೂ ಸಹ ನಿಮಗೆ ಸಮಾನ ಅವಕಾಶಗಳನ್ನು ಒದಗಿಸಬೇಕಾಗುತ್ತದೆ. ಇವುಗಳೆರಡನ್ನು ಎಂದೂ ಬೇರ್ಪಡಿಸಲಾಗುವುದಿಲ್ಲ ಮತ್ತು ಪ್ರತ್ಯೇಕವಾಗಿರಬೇಕೆಂದು ಭಾವಿಸಲಿಕ್ಕೂ ಆಗುವುದಿಲ್ಲ.

ನೀವು ಪ್ರಜಾಸತ್ತೆಯನ್ನು ಸಂಪೂರ್ಣ ರಾಜಕೀಯ ರಚನೆ ಮತ್ತು ನೀತಿಯೆಂದು ಅಂಗೀಕರಿಸುವುದರಿಂದ ಮತ್ತು ಸಮಾನ ಅವಕಾಶಗಳನ್ನು ನೀಡುವುದನ್ನು ನೀವೊಂದು ಪ್ರಮುಖ ತತ್ವವೆಂದು ಒಪ್ಪಿಕೊಂಡಿರುವುದರಿಂದ ಆರ್ಥಿಕ ಕ್ಷೇತ್ರದಲ್ಲೂ ಸಹ ನೀವು ಅವರಿಗೆ ಸಮಾನ ಅವಕಾಶಗಳನ್ನು ನೀಡಬೇಕು. ನೀವು ಅವರ ಕನಿಷ್ಠತಮ ಅಗತ್ಯಗಳನ್ನಾದರೂ ಪೂರೈಸಬೇಕು ಮತ್ತು ಅವರಿಗೆ ಉದ್ಯೋಗಗಳನ್ನು ಒದಗಿಸಬೇಕು. ಇದು ಕೇವಲ ಸರ್ಕಾರದ ಕರ್ತವ್ಯ ಮಾತ್ರವೇ ಅಲ್ಲ, ನಿಮ್ಮೆಲ್ಲರ ಅನಿವಾರ್ಯ ಕರ್ತವ್ಯವೂ ಆಗಿದೆ. ಇದು ಕೇವಲ ಸರ್ಕಾರದ ಕೆಲಸ ಮಾತ್ರ ಅಲ್ಲ ಎಂಬ ಸಂಗತಿಯನ್ನು ನಾನು ಪುನಃ ಒತ್ತಿಹೇಳುತ್ತೇನೆ. ಇದು ಸಮಗ್ರ ಸಮಾಜವು ನಿರ್ವಹಿಸಬೇಕಾದ ಅನಿವಾರ್ಯ ಕರ್ತವ್ಯವೂ ಆಗಿದೆ. ಅನೇಕ ಜನರು ಈ ಬಗೆಯ ಅನಿವಾರ್ಯ ಕರ್ತವ್ಯಗಳು ಸಂಪೂರ್ಣವಾಗಿ ಸರ್ಕಾರ ಕೆಲಸಗಳಾಗಿವೆ ಎಂದೇ ಭಾವಿಸುತ್ತಾರೆ. ಸರ್ಕಾರವು ಪ್ರತ್ಯೇಕವಾದ ವಲಯವೆ? ಅದು ಜನತೆಯ ಪ್ರತಿನಿಧಿ, ಆದ್ದರಿಂದ ಪ್ರತಿಯೊಬ್ಬರಿಗೂ ಉದ್ಯೋಗ ದೊರೆಯುವಂತೆ ನೋಡಿಕೊಳ್ಳುವುದು ಜನತೆಯ ಮತ್ತು ಸಮಾಜದ ಅಗತ್ಯ ಕರ್ತವ್ಯವಾಗಿದೆ.

ನೀವು ಈ ಜಮೀನನ್ನು ನಮ್ಮಿಂದ ತೆಗೆದುಕೊಂಡರೆ, ಭೂಮಿ ಇಲ್ಲದ ಎಲ್ಲ ಜನರಿಗೂ ಜಮೀನನ್ನು ನೀಡಬಲ್ಲಿರಾ ಎಂದು ಕೆಲವರು ನಮ್ಮೊಡನೆ ವಾದಿಸುತ್ತಿದ್ದಾರೆ. ಅದು ಸಾಧ್ಯವಾಗುವುದಿಲ್ಲ ಎಂದು ಯಾರು ಬೇಕಾದರೂ ನೇರವಾಗಿ ಹೇಳಬಹುದು. ಅದು ಸಾಧ್ಯವಿಲ್ಲವೆಂಬ ಅಂಶವನ್ನು ನಾನು ಸಹ ಒಪ್ಪಿಕೊಳ್ಳುತ್ತೇನೆ. ಏಕೆಂದರೆ ನಮ್ಮಲ್ಲಿ ಲಭ್ಯವಾಗುವ ಜಮೀನಿನ ಪ್ರಮಾಣ ತೀರ ಕಡಿಮೆಯಾಗಿದ್ದು ಭೂರಹಿತರು ಅಧಿಕ ಸಂಖ್ಯೆಯಲ್ಲಿದ್ದಾರೆ. ಒಂದು ಪಕ್ಷ ನೀವು ಪ್ರತಿಯೊಬ್ಬರಿಗೂ ಜಮೀನನ್ನು ನೀಡಬಯಸುವಿರಾದರೆ ನಾನು ಈಗಾಗಲೇ ಹೇಳಿರುವಂತೆ ನೀವು ವ್ಯಕ್ತಿಯೊಬ್ಬನಿಗೆ ತಲಾ ಎರಡು ಎಕರೆಗಳಷ್ಟು ಭೂಮಿಯನ್ನು ಮಾತ್ರ ನೀಡಬಹುದಾಗಿದೆ. ಹಾಗಿದ್ದರೆ ನಮ್ಮ ಉದ್ದೇಶವೇನು? ಕೇವಲ ಜನರಿಂದ ಜಮೀನನ್ನು ತೆಗೆದುಕೊಳ್ಳುವುದು ಮತ್ತು ಅವುಗಳನ್ನು ವಿತರಣೆ ಮಾಡುವುದಷ್ಟೆ ನಮ್ಮ ಗುರಿಯಲ್ಲ, ಅಷ್ಟರಮಟ್ಟಿಗೆ ಭೂರಹಿತರ ಸಮಸ್ಯೆಯು ಪರಿಹರಿಸಲ್ಪಟ್ಟಿರುತ್ತದೆ.

ಉದಾಹರಣೆಗೆ ಮೈಸೂರಿನಲ್ಲಿ ಭೂಸುಧಾರಣೆಯನ್ನು ಅನುಷ್ಠಾನಕ್ಕೆ ತಂದ ಬಳಿಕ ನಾವು ವಿತರಣೆಯ ಸಲುವಾಗಿ 2 ರಿಂದ 4 ಲಕ್ಷ ಎಕರೆಯಷ್ಟು ಜಮೀನನ್ನು ಪಡೆಯಬಹುದೆಂದು ಸ್ಥೂಲವಾಗಿ ಲೆಕ್ಕಾಚಾರ ಮಾಡಲಾಗಿದೆ. ಆದರೆ ನಮ್ಮಲ್ಲಿ ಲಕ್ಷಾಂತರ ಜನರಿಗೆ ಭೂಮಿ ಇಲ್ಲ ಎಂದು ಜನರೇನೋ ಹೇಳಬಹುದು. ಕೇವಲ 2 ರಿಂದ 4 ಎಕರೆಗಳಷ್ಟು ಜಮೀನನ್ನು ಎಷ್ಟು ಜನರಿಗೆ ವಿತರಣೆ ಮಾಡಬಹುದು? ಬಹಳ ಹೆಚ್ಚೆಂದರೆ ನಾವು 3 ಎಕರೆಯಷ್ಟು ಅಥವಾ 4 ಎಕರೆಯಷ್ಟು ಜಮೀನನ್ನು ನೀಡಿದರೆ ಸುಮಾರು ಒಂದು ಲಕ್ಷದಷ್ಟು ಕುಟುಂಬಗಳಿಗೆ ದೊರೆಯಬಹುದು. ಆದರೆ ಉಳಿದ ಲಕ್ಷಾಂತರ ಜನರನ್ನು ಕುರಿತು ನಾವು ಆಲೋಚಿಸಬೇಕಾಗುತ್ತದೆ. “ನನ್ನಲ್ಲಿ 50 ಎಕರೆಯಷ್ಟು ಜಮೀನು ಇದೆ. ನೀವು 10 ಅಥವಾ 15 ಎಕರೆಯಷ್ಟು ಅಥವಾ ಹೆಚ್ಚೆಂದರೆ 18 ಎಕರೆಗಳಷ್ಟು ಭೂಮಿಯನ್ನು ನನಗೆ ಕೊಡುತ್ತಿದ್ದೀರಿ. ಉಳಿದುದನ್ನು ನೀವು ತೆಗೆದುಕೊಳ್ಳುತ್ತೀರಿ ಮತ್ತು ಅಷ್ಟರಮಟ್ಟಿಗೆ ನನ್ನ ಆದಾಯ ಕೈತಪ್ಪಿತು. ಈಗ ನಾನು ನನ್ನ ಮಕ್ಕಳಿಗೆ ನನ್ನ ಕುಟುಂಬದವರ ಭವಿಷ್ಯಕ್ಕಾಗಿ ಏನು ಮಾಡಲಿ”_ ಇದು ಅವರ ವಾದ. ಈ ವಾದಕ್ಕೆ ನನ್ನ ಉತ್ತರ ಇಷ್ಟೆ: ದೇವರು ಸೃಷ್ಟಿಸಿದ ಈ ಜಗತ್ತಿನಲ್ಲಿ ಬದುಕಿ ಉಳಿಯಬೇಕಾದವನು ನೀನೊಬ್ಬನೇ ಏನು? ಅಥವಾ ನಿನ್ನ ಒಂದೇ ಕುಟುಂಬ ಮಾತ್ರವೇ ಪ್ರಪಂಚದಲ್ಲಿ ಬದುಕಿ ಉಳಿಯುವಂತಹದೇನು? ನಾವು ಈ ಜಗತ್ತಿನಲ್ಲಿ ಸಮಾಜವಿಲ್ಲದೆ ಬದುಕಿ ಉಳಿಯಬಲ್ಲೆವೇ?

ನೀವು ಸಮಾಜವಿಲ್ಲದ ಜಗತ್ತಿನಲ್ಲಿ ಬದುಕಬಯಸುವಿರಾದರೆ, ನೀವು ಆಡಂ ಅಥವಾ ಮೊದಲ ಮಾನವನು ಏಕಾಂಗಿಯಾಗಿ ಬದುಕುತ್ತಿದ್ದಂತಹ ಸೃಷ್ಟಿಯ ಮೊದಲಿನ ಕಾಲಕ್ಕೆ ಹೋಗಬೇಕಾಗುತ್ತದೆ. ಆಗ ಇಡೀ ಪ್ರಪಂಚವೇ ನಿಮ್ಮದಾಗುತ್ತದೆ. ಪ್ರತಿಯೊಂದು ವಸ್ತುವೂ ನಿಮ್ಮದಾಗುತ್ತದೆ. ಆದರೆ ಮೊಟ್ಟಮೊದಲನೆಯದಾಗಿ ಮನುಷ್ಯನು ಸಂಘಜೀವಿ ಎಂದು ಹೇಳಲಾಗಿದೆ. ನೀವು ಸಮಾಜದಲ್ಲಿನ ಸಂಘಜೀವಿಯಾಗಿದ್ದರೆ ನಿಮಗೆ ಸಮಾಜ ಬೇಕಾಗುತ್ತದೆ. ನೀವು ಅವರನ್ನು ಅಪೇಕ್ಷಿಸುವುದಾದರೆ ಮತ್ತು ಅವರು ನಿಮ್ಮನ್ನು ಬಯಸಿದರೆ ಒಬ್ಬರು ಮತ್ತೊಬ್ಬರಿಗೆ ಪೂರಕವಾಗಿರುತ್ತಾರೆ. ಆದ್ದರಿಂದ ನೀವು ಸಾಮೂಹಿಕವಾಗಿ ಬದುಕಬೇಕಾಗಿದೆ.

ನಾವು ಸಹಕಾರಯುತವಾಗಿ ಬಾಳಬೇಕಾಗಿದೆ. ದೇವರು ಭೂಮಿಯನ್ನು ಮನುಷ್ಯನ ಬೆನ್ನಿಗೆ ಕಟ್ಟಿಯೇ ಅವನನ್ನು ಸೃಷ್ಟಿಸಿಲ್ಲ. ಭೂಮಿಯು ಮನುಷ್ಯನಿಂದ ಸೃಷ್ಟಿಯಾದುದೇನೂ ಅಲ್ಲ. ನಾವು ಸಮಾಜವನ್ನು ಯಾವ ರೀತಿಯಲ್ಲಿ ಬೆಳೆಸಿದ್ದೇವೆ ಎಂದರೆ ನಾವಾಗಿಯೇ ಭೂಮಿಯನ್ನು ನಮ್ಮದನ್ನಾಗಿ ಮಾಡಿಕೊಂಡಿದ್ದೇವೆ ಹಾಗೂ ಅದನ್ನು ನನ್ನ ಸ್ವಂತ ಜಮೀನು ಎಂದು ಕರೆದುಕೊಂಡಿದ್ದೇವೆ. ನಿಮ್ಮ ಧರ್ಮಶಾಸ್ತ್ರ, ಪುರಾಣಗಳು ಮತ್ತು ಉಪನಿಷತ್ತುಗಳಲ್ಲಿಯೂ ಸಹ ಯಾರೂ ಭೂಮಿಯು ಮನುಷ್ಯರದ್ದೆಂದು ಹೇಳಿಲ್ಲ. ನಾನು ಹೇಳಿದ್ದು ತಪ್ಪಾದರೆ, ಯಾವನಾದರೂ ಭೂಮಿಯು ಮನುಷ್ಯನಿಗೆ ಸೇರಿದ್ದು ಎಂಬುದನ್ನು ಉದಾಹರಿಸಿ ನನಗೆ ಹೇಳಬಲ್ಲನೇ ಎಂಬುದನ್ನು ನಾನು ತಿಳಿಯಬಯಸುತ್ತೇನೆ.

ನಮ್ಮ ಶ್ರೇಷ್ಠ ಚಿಂತಕರಾಗಿರುವ ವಿನೋಬಾಜಿಯವರು ಹಿಂದೊಮ್ಮೆ ಇಲ್ಲಿಗೆ ಬಂದಾಗ ಅವರು ಹೋದೆಡೆಯಲ್ಲೆಲ್ಲ ಪ್ರತಿಯೊಬ್ಬರೊಡನೆ, ಭೂಮಿಯು ಗೋಪಾಲನಿಗೆ ಸೇರಿದ್ದು ಎಂದು ಹೇಳಿದ್ದು ನನಗೆ ಈ ಕ್ಷಣದಲ್ಲಿ ನೆನಪಿಗೆ ಬರುತ್ತಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಗೋಪಾಲನೇ ದೇವರು, ಸೃಷ್ಟಿಕರ್ತ. ಆದ್ದರಿಂದ ಪ್ರಾರಂಭದಿಂದಲೂ ಈ ನೀತಿಯನ್ನು ನಾವೆಲ್ಲರೂ ನಂಬಿಕೊಂಡಿದ್ದೇವೆ. ಸಮಾಜವು ಬೆಳೆದಂತೆ ಮತ್ತು ಮನುಷ್ಯನು ಪ್ರಗತಿ ಹೊಂದಿದಂತೆ ಪ್ರಗತಿಪರ ಪ್ರವೃತ್ತಿಯ ವಿಶಿಷ್ಟ ಲಕ್ಷಣವೂ ಬೆಳೆಯಿತು. ದುರ್ಬಲ ವ್ಯಕ್ತಿಯನ್ನು ದಮನಮಾಡಲಾಯಿತು, ಬಲಿಷ್ಠ ವ್ಯಕ್ತಿಯು ಎಲ್ಲವನ್ನೂ ಪಡೆದುಕೊಂಡನು ಮತ್ತು ಎಲ್ಲವೂ ತನ್ನದೆಂದು ಹೇಳಲಾರಂಭಿಸಿದನು.

ನಿಮ್ಮ ನೆಮ್ಮದಿಯ ಜೀವನಕ್ಕಾಗಿಯೂ, ಮತ್ತು ನಿಮ್ಮ ಸ್ವಂತ ಸಂರಕ್ಷಣೆಗಾಗಿಯೂ ಸಹ ನಿಮ್ಮ ಜೀವನಕ್ಕೆ ನೆಮ್ಮದಿಯನ್ನುಂಟು ಮಾಡುವ ಹಾಗೂ ಸ್ಪರ್ಧಾತ್ಮಕವಾದ ಪರಿಸರವನ್ನು ಹೊಂದಿರಬೇಕಾಗುತ್ತದೆ. ಒಂದು ವೇಳೆ ನನಗೆ ಮನೆ ಇದೆ; ನಾನು ಜಮೀನನ್ನು ಮಾಡಿಕೊಂಡಿದ್ದೇನೆ; ನನ್ನ ಮನೆಯ ಸುತ್ತಮುತ್ತ ಹಸಿವಿನಿಂದ ಕಂಗಾಲಾದ ಜನರು ವಾಸ ಮಾಡುತ್ತಿದ್ದಾರೆ; ಅವರಿಗೆ ಹೊಟ್ಟೆಗಿಲ್ಲ ಎಂದ ಪಕ್ಷದಲ್ಲಿ ಇಂತಹ ಸ್ಥಳದಲ್ಲಿ ನಾನು ಸುರಕ್ಷಿತವಾಗಿ ಬದುಕಬಲ್ಲೆನೆ? ಹಸಿದ ಹೊಟ್ಟೆಯ, ಆಶ್ರಯರಹಿತರಾದ, ಉದ್ಯೋಗವಿಲ್ಲದ, ಉಣ್ಣಲು ಇಲ್ಲದ ಜನರೇ ತುಂಬಿರುವ ಇಂತಹ ವಾತಾವರಣದಲ್ಲಿ ನಿಮ್ಮನ್ನು ನೀವು ಸಂರಕ್ಷಿಸಿಕೊಳ್ಳಬಲ್ಲಿರಾ? ಆಗ ನಿಮಗೆ ರಾಜ್ಯದ ರಕ್ಷಣೆ ಬೇಕಾಗುತ್ತದೆ; ಪೊಲೀಸರ ರಕ್ಷಣೆ ಬೇಕಾಗುತ್ತದೆ; ಪೊಲೀಸರ ರಕ್ಷಣೆಯಿಲ್ಲದಿದ್ದರೆ ನೀವು ಕೊಲೆಯಾಗುತ್ತೀರಿ. ಆಗ ನೀವೂ ಇರುವುದಿಲ್ಲ; ನಿಮ್ಮ ಜಮೀನೂ ಇರುವುದಿಲ್ಲ. ಆದ್ದರಿಂದ ರಾಜ್ಯವು ನಿಮಗೆ ರಕ್ಷಣೆಯನ್ನೀಯಬೇಕೆಂದು ನೀವು ಬಯಸುತ್ತೀರಿ.

ಆದರೆ ಸರ್ಕಾರ ನಿಮಗೆ, ನಿಮ್ಮ ಸ್ವಂತ ಒಳಿತಿಗಾಗಿ, ನಿಮ್ಮ ಸ್ವಂತ ಕ್ಷೇಮಕ್ಕಾಗಿ, ನಿಮ್ಮ ಜಮೀನನ್ನು ಕಡೇ ಪಕ್ಷ ಕೆಲವು ಮಂದಿಗಾದರೂ ವಿತರಣೆಯಾಗುವಂತೆ ನೋಡಿಕೊಳ್ಳಿ ಎಂದು ಸ್ನೇಹದಿಂದ ಆತ್ಮೀಯತೆಯಿಂದ ಕೇಳಿದಾಗ ಸರ್ಕಾರವು ನಿಮ್ಮ ಜಮೀನನ್ನು ಕಿತ್ತುಕೊಳ್ಳುತ್ತದೆ ಎಂದೂ, ಎಲ್ಲ ವಿಧದ ನಿಯಮಗಳನ್ನು, ವಿಧಿವಿಧಾನಗಳನ್ನು, ಕೋರ್ಟಿನ ನಿರ್ಣಯಗಳನ್ನು ಜಾರಿಗೆ ಕೊಡುತ್ತದೆಯೆಂದೂ, ಸರ್ಕಾರವು ಹೀಗೆ ಮಾಡುವುದು ಸಾಧುವಲ್ಲ ಎಂದು ನೀವು ಭಾವಿಸುತ್ತೀರಿ. ಇವೆಲ್ಲ ನಮ್ಮ ಸಮಸ್ಯೆಗಳನ್ನು ಮತ್ತು ನಮ್ಮ ದೇಶದ ಲಕ್ಷಾಂತರ ಜನರ ಮೇಲೆ ಭಯಂಕರ ಪ್ರಭಾವವನ್ನು ಬೀರಿದಂತಹ ನಿರುದ್ಯೋಗ ಮತ್ತು ಅಪೂರ್ಣ ಉದ್ಯೋಗದಂತಹ ಸಮಸ್ಯೆಗಳನ್ನು ಬಗೆಹರಿಸುವಂತಿಲ್ಲ. ಆದ್ದರಿಂದ ಸರ್ಕಾರವು ಈ ರಾಜ್ಯದ ಒಂದು ಲಕ್ಷ ಜನರಿಗಾಗಲಿ ಅಥವಾ ಬೇರಾವುದೇ ರಾಜ್ಯದ ಎರಡು ಲಕ್ಷ ಜನರಿಗಾಗಲಿ ಭೂಮಿಯನ್ನು ವಿತರಣೆ ಮಾಡಬೇಕೆಂಬುದನ್ನೇ ತನ್ನ ಏಕೈಕ ಧ್ಯೇಯವನ್ನಾಗಿ ಇಟ್ಟುಕೊಂಡಿಲ್ಲ; ಆದರೆ ಅದಕ್ಕೂ ಮಿಗಿಲಾಗಿ, ನಿರುದ್ಯೋಗದಂತಹ ಭಯಂಕರ ಸಮಸ್ಯೆಯನ್ನು ಬಗೆಹರಿಸುವುದು ಅಥವಾ ಅದರ ತೀವ್ರತೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುವುದು ನಮ್ಮ ಈ ಸುಧಾರಣೆಯ ಧ್ಯೇಯವಾಗಿದೆ.

(23.01.1973 ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಭೂಸುಧಾರಣೆಗೆ ಸಂಬಂಧಿಸಿದ ವಿಚಾರಗೋಷ್ಠಿಯಲ್ಲಿ ಮಾಡಿದ ಭಾಷಣದ ಭಾಗವನ್ನು ಡಾ. ಹಾ.ಮಾ. ನಾಯಕ ಅವರು ಸಂಗ್ರಹಿಸಿದ್ದ ದೇವರಾಜ ಅರಸು ಅವರ ಭಾಷಣಗಳ ಸಂಗ್ರಹ ‘ಕರ್ನಾಟಕಕ್ಕೆ ಶುಭವಾಗಲಿ’ ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ)


ಇದನ್ನೂ ಓದಿ: ಸರ್ಕಾರಿ ಕಚೇರಿಗಳ ಹಲವು ಸಮಸ್ಯೆಗಳನ್ನು ಬಯಲಿಗೆಳೆಯುತ್ತಿರುವ KRS ಪಕ್ಷ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...