ಕ್ರಿಕೆಟ್ ಏಕದಿನ ಪಂದ್ಯಗಳಲ್ಲಿ ಎರಡು ಸಾವಿರ ರನ್ ಗಳಿಸಿದ 2ನೇ ಅತಿ ವೇಗದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಟಾರ್ ಬ್ಯಾಟ್ಸ್ ವುಮೆನ್ ಸ್ಮೃತಿ ಮಂಧಾನಾ ಪಾತ್ರರಾಗಿದ್ದಾರೆ. ಟೀ ಇಂಡಿಯಾ ಮಹಿಳಾ ತಂಡದ ಸ್ಟಾರ್ ಬ್ಯಾಟ್ಸ್ ವುಮೆನ್ ಆಗಿರುವ ಸ್ಮೃತಿ ಮಂಧಾನಾ ದಾಖಲೆ ಬರೆದಿದ್ದಾರೆ.
ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್ ವುಮೆನ್ ಸ್ಮೃತಿ ಮಂಧಾನಾ ಸಾಧನೆ ಮಾಡಿದ್ದಾರೆ. ಸ್ಮೃತಿ ಅವರ ಸಾಧನೆಯ ಗುಚ್ಚಕ್ಕೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಅಲ್ಲದೇ ಆರು ವಿಕೆಟ್ ಗಳಿಂದ ಭಾರತ ತಂಡ, ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು. ವೆಸ್ಟ್ ಇಂಡೀಸ್ ತಂಡ ನೀಡಿದ್ದ 195 ರನ್ ಗಳ ಗುರಿ ಬೆನ್ನತ್ತಿದ್ದ ಭಾರತದ ವನಿತೆಯರ ತಂಡ ಸುಲಭವಾಗಿ ಜಯಗಳಿಸಿತು.
ಮಂದಾನಾ ಅವರೊಂದಿಗೆ ಜೆಮಿಮಾ ರೊಡ್ರಿಗಸ್ ಆರಂಭಿಕ ಜತೆಯಾಟ ಆಡುವ ಮೂಲಕ 141 ರನ್ ಕಲೆ ಹಾಕಿದರು. ಈ ವೇಳೆ ಮಂಧಾನಾ 74 ರನ್ ಕಲೆ ಹಾಕಿದರು. 51 ಏಕದಿನ ಪಂದ್ಯಗಳನ್ನು ಆಡಿರುವ 23 ವರ್ಷದ ಮಂಧಾನಾ 2000 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಬೆಲಿಂದಾ ಕ್ಲಾರ್ಕ್ ಹಾಗೂ ಮೆಗ್ ಲ್ಯಾನಿಂಗ್ ಅವರ ನಂತರದ ಸ್ಥಾನಕ್ಕೇರಿದ್ದಾರೆ. ಮಂದಾನಾ ಇದುವರೆಗೆ ನಾಲ್ಕು ಏಕದಿನ ಶತಕ ಮತ್ತು 17 ಅರ್ಧ ಶತಕ ಗಳಿಸಿದ್ದಾರೆ.
ಇನ್ನು 50 ಓವರ್ ಗಳಲ್ಲಿ ದಾಖಲೆ ರನ್ ಗಳಿಸಿದ ಏಕೈಕ ಭಾರತೀಯ ಕ್ರಿಕೆಟಿಗ ಶಿಖರ್ ಧವನ್. 48 ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಆಸ್ಟ್ರೇಲಿಯಾದ ಬೆಲಿಂದಾ ಕ್ಲಾರ್ಕ್ 41 ಏಕದಿನ ಪಂದ್ಯಗಳಲ್ಲಿ 2000 ರನ್ ದಾಖಲಿಸಿದ್ದರು. ಈಗ ಸ್ಮೃತಿ ಮಂಧಾನಾ 51 ಏಕದಿನ ಪಂದ್ಯಗಳಲ್ಲಿ 43.08 ಸರಾಸರಿಯಲ್ಲಿ 2,025 ರನ್ ಗಳಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿದಿದ್ದಾರೆ.
ಕಾಲಿನ ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಸ್ಮೃತಿ ಮಂಧಾನಾ, ಎರಡನೇ ಪಂದ್ಯದಲ್ಲಿ ಆಡಿದ್ದರು. ಅಂತಿಮ ಪಂದ್ಯದಲ್ಲಿ ಉತ್ತಮ ಆಟ ಆಡಿರುವ ಮಂಧಾನಾ 63 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಬಾರಿಸುವ ಮೂಲಕ 74 ರನ್ ಕಲೆ ಹಾಕಿದರು. ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆಯುವ ಮೂಲಕ ದಾಖಲೆ ಬರೆದರು.


