Homeಕರ್ನಾಟಕರಸಗೊಬ್ಬರ ಬೆಲೆ ಏರಿಕೆ ಪ್ರಶ್ನಿಸದ ರಾಜ್ಯ ಸರ್ಕಾರ, ಬಿಜೆಪಿ ಸಂಸದರು ಹೇಡಿಗಳು- ಸಿದ್ದರಾಮಯ್ಯ

ರಸಗೊಬ್ಬರ ಬೆಲೆ ಏರಿಕೆ ಪ್ರಶ್ನಿಸದ ರಾಜ್ಯ ಸರ್ಕಾರ, ಬಿಜೆಪಿ ಸಂಸದರು ಹೇಡಿಗಳು- ಸಿದ್ದರಾಮಯ್ಯ

'ದೇಶದ ಸರ್ಕಾರಿ ಖಜಾನೆ ಖಾಲಿಯಾಗುತ್ತಿದೆ. ಆದರೆ ಅದಾನಿ, ಅಂಬಾನಿ ಮುಂತಾದವರ ಖಜಾನೆಗಳು ತುಂಬಿ ತುಳುಕುತ್ತಿವೆ. ಕೊರೊನಾ ಬಿಕ್ಕಟ್ಟಿನಲ್ಲೂ ಅವರಿಗೆ 12 ಲಕ್ಷ ಕೋಟಿಗೂ ಹೆಚ್ಚು ಸಂಪತ್ತು ವೃದ್ಧಿಯಾಗಿದೆ'

- Advertisement -

ರಸಗೊಬ್ಬರಗಳ ಬೆಲೆ ಏರಿಕೆ ಖಂಡಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಲೆ ಏರಿಕೆಯನ್ನು ಪ್ರಶ್ನಿಸದ ಬಿಜೆಪಿ ಸಂಸದರು ಮತ್ತು ರಾಜ್ಯ ಸರ್ಕಾರವನ್ನು ಹೇಡಿಗಳು, ಗುಲಾಮಿ ಮನಸ್ಥಿತಿಯವರು ಎಂದು ಜರಿದಿದ್ದಾರೆ.

ಮಾಧ್ಯಮ ಪ್ರಕಟಣೆ ಹೊರಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ’ಕೇಂದ್ರದದಲ್ಲಿರುವ ಮೋದಿಯವರ ನೇತೃತ್ವದ ಸರ್ಕಾರವು ಯಾವ ದೃಷ್ಟಿಯಿಂದ ನೋಡಿದರೂ ಬಡವರ, ರೈತರ, ಹಿಂದುಳಿದವರ, ದಲಿತರ, ಮಹಿಳೆಯರ, ಮಕ್ಕಳ ಪರವಾಗಿಲ್ಲ ಎಂಬುದು ಪದೇ ಪದೇ ನಿಜವಾಗುತ್ತಿದೆ’ ಎಂದಿದ್ದಾರೆ.

ಮೋದಿಯವರ ಭಾಷಣಗಳು ಹೂರಣ ಇಲ್ಲದ ಹೋಳಿಗೆಯಂತೆ, ಕಡುಬಿನಂತೆ. ಅವರು ಬರೀ ಸುಳ್ಳು ಹೇಳುತ್ತಿದ್ದಾರೆ. ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್ ಹೂವನ್ನೇ ನಿಜವಾದ ಹೂವು ಅನ್ನುತ್ತಾರೆ. ಮುಗ್ಧ ಜನರೂ ಕೆಲವೊಮ್ಮೆ ನಂಬಿಬಿಡುತ್ತಾರೆ. ಇಂತಹ ಜನದ್ರೋಹಿ ಸರ್ಕಾರಗಳನ್ನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅತ್ಯಾಚಾರಿ ಕುಲದೀಪ್ ಸೆಂಗಾರ್‌ ಪತ್ನಿಗೆ ಜಿಲ್ಲಾ ಪಂಚಾಯತ್ ಟಿಕೆಟ್ ನೀಡಿದ ಬಿಜೆಪಿ

’ದೇಶ ಬಿಕ್ಕಟ್ಟಿನ ಸ್ಥಿತಿಯಲ್ಲಿರುವಾಗ ರೈತರು ಕಷ್ಟ ಪಟ್ಟು ದುಡಿದು ಈ ವರ್ಷ ದೇಶವನ್ನು ಉಳಿಸಿದ್ದಾರೆ. ಕೃಷಿಯು ರಾಜ್ಯದಲ್ಲಿ ಶೇ.6.4 ರಷ್ಟು ಪ್ರಗತಿ ಕಂಡಿದೆ. ದೇಶದಲ್ಲಿ ಶೇ. 3.4 ಕ್ಕೂ ಹೆಚ್ಚು ಬೆಳವಣಿಗೆ ಕಂಡಿದೆ. ದೇಶದ ಜಿಡಿಪಿ ಗೆ ಈ ವರ್ಷ ಶೇ. 20 ರಷ್ಟು ಕೊಡುಗೆಯನ್ನು ಕೃಷಿ ಕೊಟ್ಟಿದೆ. ಇಂಥ ಸಂದರ್ಭದಲ್ಲಿ ಈ ಮನೆಹಾಳೂ ಮೋದಿ ಸರ್ಕಾರ ರಸಗೊಬ್ಬರದ ಬೆಲೆಗಳನ್ನು ಶೇ. 60 ರಷ್ಟು ಹೆಚ್ಚಿಸಿದೆ’ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

“ಡಿಎಪಿ ಗೊಬ್ಬರ ಏಪ್ರಿಲ್ 1 ರಿಂದ ಒಂದು ಕ್ವಿಂಟಾಲಿಗೆ 1400 ಗಳಷ್ಟು ಬೆಲೆ ಜಾಸ್ತಿಯಾಗಿದೆ. ಇದುವರೆಗೆ 2400 ರೂಪಾಯಿಗಳಿದ್ದ ಬೆಲೆ ಈಗ 3800 ರೂ.ಗಳಾಗುತ್ತಿದೆ.  ಎನ್‌ಪಿಕೆ [ಸಾರಜನಕ, ರಂಜಕ ಮತ್ತು ಪೊಟ್ಯಾಷ್]ಗಳ ಮೇಲಿನ ಬೆಲೆ ಒಂದು ಕ್ವಿಂಟಾಲ್ ಗೆ 1250 ರೂಪಾಯಿಗಳಷ್ಟು ಹೆಚ್ಚಿಸಿದ್ದಾರೆ. ಇದುವರೆಗೆ 2350 ರೂಗಳಿಗೆ ಸಿಗುತ್ತಿದ್ದ ಗೊಬ್ಬರ ಈಗ 3600 ಆಗಲಿದೆ. ಕೇಂದ್ರ ಸರ್ಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಜಾಸ್ತಿಯಾಗಿದೆ. ಅದಕ್ಕೆ ಬೆಲೆ ಜಾಸ್ತಿ ಮಾಡಿದ್ದೇವೆ ಎನ್ನುತ್ತಿದ್ದಾರೆ ಇದು ಶುದ್ಧ ಸುಳ್ಳು” ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

’ಸರ್ಕಾರ ರಸಗೊಬ್ಬರಕ್ಕೆ ಈ ಬಾರಿ ಬಜೆಟ್ಟಿನಲ್ಲಿ 54,417 ಕೋಟಿ ರೂಪಾಯಿಗಳಷ್ಟು ಸಬ್ಸಿಡಿಯನ್ನು ಕಡಿಮೆ ಮಾಡಿದೆ. ಕಳೆದ ವರ್ಷ 1,33,947 ಕೋಟಿ ರೂಪಾಯಿಗಳನ್ನು ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲಾಗಿತ್ತು. ಈಗ ಅದು 79,530 ಕೋಟಿ ರೂಪಾಯಿಗಳಿಗೆ ಇಳಿಸಿದ್ದಾರೆ. ಶೇ 40.62 ರಷ್ಟು ಕಡಿಮೆ ಮಾಡಿದ್ದಾರೆ. ಆದ್ದರಿಂದಲೇ ರಸಗೊಬ್ಬರದ ಬೆಲೆ ಹೆಚ್ಚಾಗಿದೆ’ ಎಂದಿದ್ದಾರೆ.

“ರೈತರ ಮೇಲೆ ಹೊರೆಯಾಗಿರುವ ಇದನ್ನು ಪ್ರಶ್ನಿಸದ ರಾಜ್ಯ ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಸಂಸದರು ಹೇಡಿಗಳು, ಗುಲಾಮೀ ಮನಸ್ಥಿತಿಯವರು. ಇವರು ರಾಜ್ಯಕ್ಕೆ ಅಷ್ಟೆ ಅಲ್ಲ. ಭೂಮಿಗೇ ಭಾರ. ಈ ದುಷ್ಟ ಬಿಜೆಪಿ ಸರ್ಕಾರಗಳನ್ನು ಮೊದಲು ಕಿತ್ತೆಸೆಯದಿದ್ದರೆ ದೇಶ ಜಗತ್ತಿನಲ್ಲಿ ತಲೆ ಎತ್ತಿ ನಡೆಯಲಾಗದ ಸ್ಥಿತಿಗೆ ತಲುಪುತ್ತದೆ. ದೇಶದ ಜನ ಎರಡು ಹೊತ್ತಿನ ಅನ್ನಕ್ಕೆ ಪರದಾಡಬೇಕಾದ ಸ್ಥಿತಿಗೆ ಬರುತ್ತಾರೆ” ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

’ಗ್ಯಾಸ್, ಪೆಟ್ರೋಲ್ ,ಡೀಸೆಲ್ ಎಲ್ಲದರ ಬೆಲೆ ಗಗನಕ್ಕೆ ಮುಟ್ಟಿದೆ. ಇಂಥ ಸಂದರ್ಭದಲ್ಲಿ ರಸಗೊಬ್ಬರಗಳ ಬೆಲೆ ಹೆಚ್ಚಿಸಲಾಗಿದೆ. ಇದು ರೈತನ ಹೊಟ್ಟೆಯ ಮೇಲೆ ಹಾಕಿದ ಭೀಕರ ಬರೆ. ರಸಗೊಬ್ಬರಗಳ ಬೆಲೆಯೇರಿಕೆಯಂಥ ಜನದ್ರೋಹಿ ನಿರ್ಧಾರವನ್ನು ಈ ಕೂಡಲೇ ವಾಪಸ್ಸು ಹಿಂತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

’ದೇಶ ಭೀಕರ ಹತಾಶೆಯಲ್ಲಿದೆ. ದೇಶದ ಎಲ್ಲ ರಂಗಗಳೂ ಮಕಾಡೆ ಮಲಗಿವೆ. ದೇಶದ ಸರ್ಕಾರಿ ಖಜಾನೆ ಖಾಲಿಯಾಗುತ್ತಿದೆ. ಆದರೆ ಅದಾನಿ, ಅಂಬಾನಿ ಮುಂತಾದವರ ಖಜಾನೆಗಳು ತುಂಬಿ ತುಳುಕುತ್ತಿವೆ. ಕೊರೊನಾ ಬಿಕ್ಕಟ್ಟಿನಲ್ಲೂ ಅವರಿಗೆ 12 ಲಕ್ಷ ಕೋಟಿಗೂ ಹೆಚ್ಚು ಸಂಪತ್ತು ವೃದ್ಧಿಯಾಗಿದೆ. ಅವರ ಮೇಲೆ ತೆರಿಗೆ ಹಾಕುವ ಬದಲು ಬಡವರ ಅನ್ನದ ತಟ್ಟೆಯ ಮೇಲೆ ಮೋದಿಯವರು ಕಣ್ಣು ಹಾಕಿದ್ದಾರೆ’ ಎಂದಿದ್ದಾರೆ.


ಇದನ್ನೂ ಓದಿ: ರೈತರ ಮೇಲೆ ರಸಗೊಬ್ಬರ ದರ ಹೆಚ್ಚಳದ ಬರೆ: ಸರ್ಕಾರದ ಕ್ರಮ ಖಂಡಿಸಿದ ಎಸ್‌ಕೆಎಂ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial