Homeಅಂಕಣಗಳುದೇಶದಲ್ಲಿನ ತಲ್ಲಣದ ಕೆಲವು ಚಿತ್ರಗಳು

ದೇಶದಲ್ಲಿನ ತಲ್ಲಣದ ಕೆಲವು ಚಿತ್ರಗಳು

- Advertisement -

ರಾಪ್ತಿ ನದಿ ತೀರದ ಗೋರಖ್‍ಪುರ ಪ್ರಸಿದ್ಧಿಯಾಗಿರುವುದು, ಅದು ನಾಥ ಪಂಥದ ಅನುಭಾವಿಗಳಾದ ಮಚ್ಚೇಂದ್ರನಾಥ ಗೋರಖನಾಥ ನೆಲೆಸಿದ್ದ ಊರು, ಜೊತೆಗೆ ಭಾರತದಾದ್ಯಂತ ಇರುವ ನಾಥ ಪಂಥದ ವಿವಿಧ ಶಾಖೆಗಳಿಗೆ ಗೋರಖ್‍ಪುರ ಕೇಂದ್ರ ಎಂಬ ಕಾರಣಗಳಿಗೆ. ಗೋರಖ್‍ಪುರದಲ್ಲಿರುವ ಗೋರಖನಾಥ ದೇವಾಲಯ ಭಾರತವನ್ನೂ ಒಳಗೊಂಡಂತೆ ನೇಪಾಳ ಮತ್ತು ಬರ್ಮಾ ದೇಶದ ಜನರ ಶ್ರದ್ಧಾ ಕೇಂದ್ರವೂ ಹೌದು. ಸಾಮಾಜಿಕ ಅಸಮಾನತೆ, ಧಾರ್ಮಿಕ ಮೂಲಭೂತವಾದಗಳನ್ನು ವಿರೋಧಿಸುವ ಮತ್ತು ಜನರು ತಮ್ಮ ಒಳಗೇ ಇರುವ ಕೂಡುಬಾಳುವ ವಿಶಿಷ್ಟ ಆಧ್ಯಾತ್ಮದ ಮೂಲಕ ಬದುಕಬೇಕು ಎಂಬ ಅನುಭಾವವನ್ನು ಪ್ರಚುರಪಡಿಸಿದ ನಾಥ ಯತಿಗಳು ಬಾಳಿದ ಊರು ಗೋರಖಪುರ. ಆದರೆ ಗೋರಖಪುರ ಇತ್ತೀಚೆಗೆ ಮುಂಚೂಣಿಗೆ ಬಂದದ್ದು ಯೋಗಿ ಆದಿತ್ಯನಾಥ ಎಂಬ `ಯತಿ’ ಇದ್ದಕ್ಕಿದ್ದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗ. ಗೋರಖಪುರದ ಮಠದ ಈ `ಯತಿ’ 1996ರಿಂದ ಗೋರಖಪುರ ಜಿಲ್ಲೆಯ ಸಂಸದನೂ ಹೌದು. ಈ ಆದಿತ್ಯನಾಥ ದೇಶದ ವಿಶಿಷ್ಟ ಹಾಗು ಜನಪರಂಪರೆಯ ಹಿನ್ನೆಲೆಯ ಮಠದ ಪೀಠಾಧಿಪತಿಯಾಗಿ ಸಂಸತ್ತಿನಲ್ಲಿ ಎರಡು ದಶಕಗಳಿಂದ ಹೇಗೆ ನಡೆದುಕೊಂಡಿದ್ದಾರೆ ಎಂಬುದು ಈ ದೇಶದ ಜನರಿಗೆ ವಿವರಿಸಬೇಕಿಲ್ಲ.
ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷಗಳಿಂದ ಸಾಯುತ್ತಿರುವ ಹಸುಗೂಸುಗಳ ಕಾರಣದಿಂದಾಗಿ ಇತ್ತೀಚೆಗೆ ಗೋರಖಪುರ ಸುದ್ದಿಯಲ್ಲಿದೆ. 2017ರ ಅಗಸ್ಟ್ ತಿಂಗಳಲ್ಲಿ ಇಲ್ಲಿನ ಬಿಆರ್‍ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದÀ 63ಕ್ಕೂ ಹೆಚ್ಚು ಮಕ್ಕಳು ಹಸುನೀಗಿದ್ದವು. ಗೋರಖಪುರ ಮುಖ್ಯಮಂತ್ರಿ ಆದಿತ್ಯನಾಥರ ವಿಧಾನಸಭಾ ಕ್ಷೇತ್ರವೂ ಹೌದು. ಇದಲ್ಲದೆ, ಪ್ರಧಾನಿ ಮೋದಿಯವರು ಉತ್ತರ ಪ್ರದೇಶದ ವಾರಣಾಸಿಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿರುವುದು 73 ಸ್ಥಾನಗಳನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಯೋಗಿ ಆದಿತ್ಯನಾಥ ಎಂದೂ ಕೇಳರಿಯದ ಬಹುಮತದೊಂದಿಗೆ ಗೆದ್ದು ರಾಜ್ಯದ ಮುಖ್ಯಮಂತ್ರಿಯೂ ಆಗಿರುವುದು ಇಂದು ಇತಿಹಾಸ.
ಅಗಸ್ಟ್ 10ರಂದು ಗೋರಖಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಹಸುಮಕ್ಕಳ ಸಾವುಗಳು ಸಂಭವಿಸುವ ಸಂದರ್ಭದಲ್ಲಿ ಚುರುಕಾಗಿ ಕೆಲಸ ಮಾಡಿದಾತ ಮಕ್ಕಳ ತಜ್ಞ ಡಾ. ಕಫೀಲಖಾನ್. ಅಗಸ್ಟ್ 10ರಿಂದಲೇ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್‍ಗಳ ಕೊರತೆ ಇದ್ದುದನ್ನು ಗಮನಿಸಿ, ಜಿಲ್ಲಾ ಆರೋಗ್ಯ ಅಧೀಕ್ಷಕರಿಗೆ ಸಿಲಿಂಡರ್‍ಗಳನ್ನು ಒದಗಿಸಲು ಕೋರಿದ ಕಫೀಲ್‍ಖಾನ್ ಮಕ್ಕಳನ್ನು ಉಳಿಸಲು ಹಗಲು ರಾತ್ರಿ ದುಡಿಯಲು ಮುಂದಾಗುತ್ತಾರೆ. ಕಫೀಲ್‍ಖಾನ್ ತನ್ನದೇ ಕಾರಿನಲ್ಲಿ ಆಕ್ಸಿಜನ್ ಪೂರೈಸುವ ಏಜನ್ಸಿಗಳ ಬಳಿ ಹೋಗಿ, ತನ್ನ ಸ್ವಂತ ಹಣವನ್ನು ಖರ್ಚು ಮಾಡಿ ಸಿಲಿಂಡರ್‍ಗಳನ್ನು ಆಸ್ಪತ್ರೆಗೆ ತಂದು ಮಕ್ಕಳಿಗೆ ಚಿಕಿತ್ಸೆ ಮುಂದುವರೆಸುತ್ತಾರೆ. ಸಿಲಿಂಡರ್‍ಗಳನ್ನು ಆಸ್ಪತ್ರೆಗೆ ತರಲು ಕಫೀಲ್‍ಖಾನ್ ಕೇಂದ್ರ ಸಶಸ್ತ್ರ ಪಡೆಯ ಪೊಲೀಸರ ಸಹಾಯವನ್ನೂ ಪಡೆದಿರುತ್ತಾರೆ. ಆದರೆ ಅಗಸ್ಟ್ 16ರ ಹೊತ್ತಿಗೆ 63 ಮಕ್ಕಳು ಕೇವಲ ಆರು ದಿನಗಳ ಅಂತರದಲ್ಲಿ ಅಸು ನೀಗುತ್ತವೆ. ದೇಶಾದ್ಯಂತ ಭುಗಿಲೇಳುವ ಜನಾಕ್ರೋಶಕ್ಕೆ ಬೆದರಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಸ್ಪತ್ರಗೆ ಭೇಟಿ ನೀಡುತ್ತಾರೆ. ಆಗ ಆದಿತ್ಯನಾಥ್ ಕಫೀಲ್‍ಖಾನರನ್ನು ಕರೆಸಿ `ನೀನಾ ಆಕ್ಸಿಜನ್ ಸಿಲಿಂಡರ್‍ಗಳನ್ನು ಆಸ್ಪತ್ರೆಗೆ ತಂದವನು?’ ಎಂದಾಗ ಆ ಬಡ ವೈದ್ಯ ದಿಙ್ಮೂಢನಾಗುತ್ತಾನೆ. ಆತ ತಾನು ರಾತ್ರೋರಾತ್ರಿ ಮಾಡಿದ ಈ ಸಾಹಸಗಳನ್ನು ಯಾವ ಮೀಡಿಯಾದವರ ಬಳಿ ಹಂಚಿಕೊಂಡಿರಲಿಲ್ಲ. ಆ ಆರೂ ದಿನಗಳ ಕಾಲ ಮೀಡಿಯಾದವರು ಕಫೀಲ್‍ಖಾನರ ಬದ್ಧತೆಯನ್ನು ನೋಡಿ ಕೆಲವೆಡೆ ವರದಿ ಮಾಡಿರುತ್ತಾರೆ. `ನೀನು ಆಕ್ಸಿಜನ್ ಸಿಲಿಂಡರ್‍ಗಳನ್ನು ತಂದು ಹೀರೋ ಆಗಿಬಿಟ್ಟೆ ಅಲ್ಲಾ? ನಿನ್ನನ್ನು ನಾನು ನೋಡಿಕೊಳ್ಳುತ್ತೇನೆ’ ಎಂದು ಸಿಟ್ಟಿನಿಂದ ಕಿರುಚಿದ ಯೋಗಿ ಆದಿತ್ಯನಾಥ ಆಸ್ಪತ್ರೆಯಿಂದ ನಿರ್ಗಮಿಸುತ್ತಾರೆ. ಕಫೀಲ್‍ಖಾನ್ ಯಾವ ಕಾರಣಕ್ಕಾಗಿ ಈ ಯೋಗಿಯ ಸಿಟ್ಟಿಗೆ ತುತ್ತಾದದ್ದು?
ಇದಾದ ಕೆಲವೇ ದಿನಗಳಲ್ಲಿ ಜನಾಂಗ ಹತ್ಯೆ, ಉದ್ದೇಶಪೂರ್ವಕ ಕರ್ತವ್ಯ ಲೋಪ ಇತ್ಯಾದಿ ಸುಳ್ಳು ಆರೋಪದಡಿ, ಬೇಲ್ ಸಿಗದಂತಹ ಅನೇಕ ಕಲಮುಗಳನ್ನು ಆಧರಿಸಿ ಕೇಸು ಹಾಕಿ, ಕಫೀಲ್‍ಖಾನ್‍ರನ್ನು ಜೈಲಿಗೆ ಕಳಿಸಲಾಗುತ್ತದೆ. ಸಕಾಲಕ್ಕೆ ಆಕ್ಸಿಜನ್ ಸಿಲಿಂಡರ್ ಒದಗಿಸದ, ಸಿಲಿಂಡರ್ ಏಜನ್ಸಿಯವನು ಬಾಕಿ ಹಣ ಪಾವತಿಸಲು ಕಳಿಸಿದ 14 ಜ್ಞಾಪನಾ ಪತ್ರಗಳನ್ನು ನಿರ್ಲಕ್ಷಿಸಿದ ಜಿಲ್ಲಾ ಆರೋಗ್ಯಾಧಿಕಾರಿಯನ್ನಾಗಲಿ, ಆರೋಗ್ಯ ಇಲಾಖೆಯ ಕಾರ್ಯದರ್ಶಿಯನ್ನಾಗಲಿ ಪೊಲೀಸರು ಮಾತೂ ಆಡಿಸುವುದಿಲ್ಲ. ಆಕ್ಸಿಜನ್ ಸಿಲಿಂಡರ್ ಒದಗಿಸದ ಏಜನ್ಸಿಯವನು ಕೆಲವೇ ದಿನಗಳಲ್ಲಿ ಬೇಲ್ ಪಡೆದು ಹೊರಗೆ ಬರುತ್ತಾನೆ. ಆದರೆ ಒಂಬತ್ತು ತಿಂಗಳ ಕಾಲ ಜೈಲಲ್ಲಿದ್ದ ಕಫೀಲ್ ಖಾನ್ ಏಪ್ರಿಲ್ 25ರಂದು ಅಲಹಾಬಾದ್ ಹೈಕೋರ್ಟ್‍ನಿಂದ ಬೇಲ್ ಪಡೆದು ಬಿಡುಗಡೆಯಾಗಿದ್ದಾರೆ. ಜೈಲಲ್ಲಿದ್ದಾಗ ಕಫೀಲ್‍ಖಾನ್ ಬರೆದ ಪತ್ರದ ಕೆಲವು ಸಾಲುಗಳು ಹೀಗಿವೆ. `150 ಕೈದಿಗಳಿರುವ ಒಂದು ಕೆಟ್ಟಕೊಳಕು ಬ್ಯಾರಕ್‍ನಲ್ಲಿ ನನ್ನನ್ನು ಇಡಲಾಗಿದೆ. ಮುರಿದ ಬಾಗಿಲಿನ ಕೊಳಕು ಪಾಯಖಾನೆ, ಅಸಂಖ್ಯ ಸೊಳ್ಳೆ ಮತ್ತು ನೊಣಗಳಿರುವ ಈ ಜೈಲಿನಲ್ಲಿ ನನಗೆ ಊಟ ಮಾಡಲಾಗುತ್ತಿಲ್ಲ. ಹಾಸಲು ಹೊದಿಯಲು ಇಲ್ಲದೆ ನಿದ್ರೆ ಬಾರದೆ, ಸೋಮವಾರ…. ಮಂಗಳವಾರ… ಎಂದು ದಿನ ಕಳೆಯುತ್ತಿದ್ದೇನೆ. ಯಾಕಾಗಿ ನನಗೀ ಶಿಕ್ಷೆ? ಆ ಆರೇಳು ರಾತ್ರಿಗಳಲ್ಲಿ ಒಬ್ಬ ಮಕ್ಕಳ ಡಾಕ್ಟರ್ ಆಗಿ ನಾನು ನನ್ನ ಕೈಲಾದದ್ದನ್ನು ಮಾಡಿದೆ. ಹಗಲು ರಾತ್ರಿ ಓಡಾಡಿದೆ, ಮರಣಶಯ್ಯೆಯಲ್ಲಿದ್ದ ಮಕ್ಕಳನ್ನು ಉಳಿಸಲು ಶತಪ್ರಯತ್ನ ಮಾಡಿದೆ. ದಿಕ್ಕೆಟ್ಟು ಹೋಗಿದ್ದ ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿದೆ. ಸತ್ತು ಹೋಗುತ್ತಿದ್ದ ಹಸುಮಕ್ಕಳನ್ನು ನೋಡಿ ಬಿಕ್ಕಿಬಿಕ್ಕೆ ಅತ್ತೆ. ಅಂಗಡಿಗಳಿಗೆ ತಿರುಗಿ ಸಿಲಿಂಡರ್‍ಗಳನ್ನು ತಂದೆ, ಹತಾಶನಾಗಿ ಬೀದಿ ಬೀದಿ ಅಲೆದೆ ಮಕ್ಕಳನ್ನು ಉಳಿಸಲು ಹೆಣಗಾಡಿದೆ. ಒಬ್ಬ ಮನುಷ್ಯನಾಗಿ ನಾನು ನನ್ನ ಕೈಲಾದ ಎಲ್ಲವನ್ನೂ ಮಾಡಿರುವಾಗ ನನ್ನನ್ನು ಯಾಕಾಗಿ ಬಂಧಿಸಲಾಯಿತು? ಜೈಲಿಂದ ಹೊರಬಂದ ಮೇಲೆ ನನ್ನ ಪುಟ್ಟ ಮಗಳಿಗೆ ಮುಖ ತೋರಸುವುದಾದರೂ ಹೇಗೆ?’ ಎಂದು ಕಫೀಲ್ ನೊಂದು ಕೇಳುತ್ತಿರುವಾಗಲೆ, ಜೂನ್ 10ರಂದು ಇವರ ಸಹೋದರ ಕಾಶೀಫ್ ಜಮೀಲ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಯೋಗಿ ಆದಿತ್ಯನಾಥನ ಮನೆಯ 500 ಮೀಟರ್ ದೂರದಲ್ಲಿ ಕಫೀಲ್ ತಮ್ಮನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲ್ಲಲು ಪ್ರಯತ್ನಿಸಿದ್ದಾರೆ. ಯೋಗಿಯ ಮನೆಯ ಸುತ್ತ ಕಿಲೋಮೀಟರ್‍ಗಳ ವರೆಗೆ ಅಬೇಧ್ಯ ಪೊಲೀಸ್ ರಕ್ಷಣೆ ಇದ್ದರೂ ದುಷ್ಕರ್ಮಿಗಳು ಜಮೀಲ್ ಮೇಲೆ ಗುಂಡು ಹಾರಿಸಿದ್ದಾರೆ. ಜಮೀಲ್‍ಗೆ ಚಿಕಿತ್ಸೆ ಕೊಡಿಸಲು ಕಫೀಲ್ ಕುಟುಂಬದವರನ್ನು ಗೋರಖಪುರದ ಪೊಲೀಸರು ತಡೆದಿದ್ದಾರೆ. ನಿಮ್ಮ ಕುಟುಂಬವನ್ನು ಮುಗಿಸಿಬಿಡಲು ಯೋಗಿಯ ಸರ್ಕಾರ ನಿರ್ಧರಿಸಿದೆ, ಹುಷಾರಾಗಿರಿ ಎಂದು ಜನ ಎಚ್ಚರಿಸಿದರೂ ಕಫೀಲ್ ಗೋರಖಪುರದಲ್ಲೇ ಇರಲು ನಿರ್ಧರಿಸಿದ್ದಾರೆ. `ಅಲ್ಲಾಹ್ ಎಲ್ಲವನ್ನೂ ನೋಡಿಕೊಳ್ಳುತ್ತಾನೆ, ನಾನು ಈ ಪ್ರಕರಣದಿಂದ ಕುಗ್ಗುವುದಿಲ್ಲ’ ಎಂದು ಕಫೀಲ್ ಪ್ರತಿಕ್ರಿಯಿಸಿದ್ದಾರೆ. ಇಲ್ಲಿಯವರೆಗೂ ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ.
ಇದೆಲ್ಲ ನಡೆಯುತ್ತಿರುವಾಗಲೆ, ಉತ್ತರ ಪ್ರದೇಶದ `ಭೀಮ್ ಆರ್ಮಿ’ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಕಳೆದೊಂದು ವರ್ಷದಿಂದ ಜೈಲಲ್ಲಿದ್ದಾನೆ. ಸಹರ್ನಪುರದಲ್ಲಿ `ಭೀಮ್ ಆರ್ಮಿ’ ಎಂಬ ಸಂಘಟನೆಯನ್ನು ಕಟ್ಟಿ ದಲಿತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಈ 31 ವರ್ಷದ ಯುವ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತನಾದ ಆಜಾದ್‍ನನ್ನು ಯೋಗಿಯ ಸರ್ಕಾರ ಜೈಲಿಗೆ ಕಳಿಸಿ ಒಂದು ವರ್ಷ ಕಳೆದಿದೆ. ವಿಚಾರಣೆಯೂ ನಡೆಯದೆ, ಬೇಲ್ ಸಹ ಸಿಗದೆ ಚಂದ್ರಶೇಖರ್ ಆಜಾದ್ ಕತ್ತಲೆ ಕೋಣೆಯಲ್ಲಿದ್ದಾನೆ. ಸಹರ್ನಪುರ ಜಿಲ್ಲೆಯ ಶಬ್ಬೀರಪುರದಲ್ಲಿ ನಡೆದ ಗಲಭೆಗೆ ಆಜಾದ್ ಕಾರಣ ಎಂಬ ನೆಪದಲ್ಲಿ ಬಂಧಿಸಿದ ಪೊಲೀಸರು ನಂತರ ಬೇಲ್ ಸಿಗದಂತಹ ಅನೇಕ ಕಾಲಮ್‍ಗಳ ಅಡಿ ಈತನ ಮೇಲೆ ಎಫ್‍ಐಆರ್ ದಾಖಲಿಸಿದ್ದರು. ಆಜಾದ್‍ನ ಮೇಲೆ ಹೊರಿಸಿದ ಆರೋಪಗಳು ರಾಜಕೀಯ ಪ್ರೇರಿತ ಎಂದು ಈ ಹಿಂದೆ ಅಲಹಾಬಾದ್ ಹೈಕೋರ್ಟ ಬೇಲ್ ಕೊಟ್ಟಿತ್ತು. ಆದರೆ ಯೋಗಿಯ ಸರ್ಕಾರ ಈತನ ಮೇಲೆ ಮತ್ತೆ ದೇಶದ್ರೋಹದ ಆಪಾದನೆ ಹೊರಿಸಿ ರಾಷ್ಟ್ರೀಯ ಭದ್ರತಾ ಕಾಯ್ದೆಯ (ಓಚಿಣioಟಿಚಿಟ Seಛಿuಡಿiಣಥಿ ಂಛಿಣ 1980) ಅಡಿ ಕೇಸು ಹಾಕಿ ಜೈಲಿಗೆ ತಳ್ಳಿದೆ. ಅಜಾದ್ ಮಾಡಿದ ತಪ್ಪುಗಳೇನೆಂದರೆ, ಡಾ. ಅಂಬೇಡ್ಕರ್ ಚಿಂತನೆಗಳಿಂದ ಪ್ರೇರೇಪಿತನಾಗಿ ದಲಿತರ ಹಕ್ಕುಗಳಿಗಾಗಿ ಹೋರಾಡಲು `ಭೀಮ್ ಆರ್ಮಿ’ಯನ್ನು ಕಟ್ಟಿದ್ದು, ದಲಿತರ ಮಕ್ಕಳಿಗೆ ಶಾಲೆಗಳನ್ನು ತೆರೆದು ಶಿಕ್ಷಣ ನೀಡಲು ಆರಂಭಿಸಿದ್ದು, ದಲಿತರು ಸ್ವಾಭಿಮಾನದಿಂದ ಬದುಕಲು ಅವರಿಗಿರುವ ಸಂವಿಧಾನನದ್ಧ ಹಕ್ಕುಗಳಿಗಾಗಿ ಹೋರಾಡಲು ಮುಂದಾಗಿದ್ದು. ಜೊತೆಗೆ ಸ್ಥಳೀಯ ಠಾಕೂರ್ ಮತ್ತು ರಜಪೂತರ ಜಮೀನ್ದಾರಿ ನಡವಳಿಕೆಗಳನ್ನು ಪ್ರಶ್ನಿಸಿದ್ದು ಆಜಾದ್ ಮಾಡಿದ ತಪ್ಪುಗಳು. ಯೋಗಿ ಆದಿತ್ಯನಾಥ ಪ್ರಬಲ ಠಾಕೂರ್ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಯೋಗಿಗೆ ದಲಿತರ ಹಕ್ಕುಗಳಿಗಿಂತ ಪ್ರಬಲ ಜಾತಿಗಳ ಹಿತರಕ್ಷಣೆಯೇ ಮುಖ್ಯವಾಗಿದ್ದಂತೆ ಕಾಣುತ್ತಿದೆ. ಉತ್ತರ ಪ್ರದೇಶದ ಶಾಸಕನೊಬ್ಬ ಉನ್ನಾವೋದಲ್ಲಿ ದಲಿತ ಹೆಣ್ಣುಮಗಳನ್ನು ವಾರಗಟ್ಟಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ತಂದೆಯನ್ನೂ ಕೊಂದು ಹಾಕಿದ ಘಟನೆ ಇತ್ತೀಚೆಗೆ ನಡೆದಿದೆ. ಪ್ರಗತಿಪರ ವೈಚಾರಿಕತೆಗೆ ಹೆಸರಾದ ಒಂದು ಪ್ರಸಿದ್ಧ ಮಠದ ಯೋಗಿಯೊಬ್ಬ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರೂ ಆ ರಾಜ್ಯದಲ್ಲಿ ಇಂತಹ ಅಕೃತ್ಯಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ.
ಮಧ್ಯಪ್ರದೇಶದ ವ್ಯಾಪಂ ಹಗರಣದ ತನಿಖಾಧಿಕಾರಿ ರಸ್ತೆ ಅಪಘಾತವೊಂದರಲ್ಲಿ ನಿಗೂಢವಾಗಿ ಮರಣ ಹೋಂದಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳನ್ನೂ ಒಳಗೊಂಡಂತೆ ನಿಗೂಢವಾಗಿ ಸತ್ತವರ ಸಂಖ್ಯೆ 51ಕ್ಕೆ ಏರಿದೆ. ದೇಶದೆಲ್ಲೆಡೆ ನಡೆಯುತ್ತಿರುವ ಚುನಾವಣೆಗಳಲ್ಲಿ ಬಿಜೆಪಿ ಇನ್ನಿಲ್ಲದಂತೆ ಸೋಲುತ್ತಿರುವಾಗ, ಮೋದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ನಕ್ಸಲರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಕೋರೆಗಾಂವ್ ವಿಜಯೋತ್ಸವದ ವೇಳೆ ಬಂಧಿಸಲಾಗಿದ್ದ ದಲಿತ ಚಳವಳಿಗಾರರ ಮೇಲೆ ದುರುದ್ದೇಶಪೂರಿತ ಕೇಸುಗಳನ್ನು ಹಾಕುತ್ತಲೇ ಇವರಿಗೆ ಉಗ್ರಗಾಮಿಗಳ ಜೊತೆ ಸಂಪರ್ಕಗಳಿವೆ ಎಂದು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಮೋದಿಯ ರಾಜಕಾರಣವನ್ನು ಟೀಕಿಸುತ್ತಿರುವ ಜಿಗ್ನೇಶ್ ಮೇವಾನಿ, ಶೆಹ್ಲಾ ರಷೀದ್, ಉಮರ್ ಖಾಲಿದ್‍ರಿಗೆ ಹಿಂದೂ ಧರ್ಮ ರಕ್ಷಕ ಅಂಡರ್ ವಲ್ರ್ಡ್ ಡಾನ್ ರವಿಪೂಜಾರಿ ಫೋನ್ ಮಾಡಿ ಕೊಲ್ಲುವ ಬೆದರಿಕೆ ಹಾಕುತ್ತಿದ್ದಾನೆ.
ನಾಗರಿಕ ಸಮಾಜದಲ್ಲಿ ಸಹಜ ಹಕ್ಕುಗಳಿಗಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಜನರನ್ನು ಸರ್ಕಾರ ಮನುಷ್ಯರೆಂದು ಪರಿಗಣಿಸುತ್ತಿಲ್ಲ. ನಕ್ಸಲರು, ಭಯೋತ್ಪಾದಕರು, ದೇಶದ್ರೋಹಿಗಳು, ತುಕ್ಡೆವಾಲೆಗಳು, ಗಂಜಿಗಿರಾಕಿಗಳು ಎಂದೆಲ್ಲ ಮನುಷ್ಯರನ್ನು ಸಂಬೋಧಿಲಾಗುತ್ತಿದೆ. ಇಂತಹ ಮನಸ್ಥಿತಿಯನ್ನು ಏನೆಂದು ಕರೆಯುವುದು? ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದ ಫ್ಯಾಸಿಸ್ಟ್ ಧೋರಣೆಗಳು ಭಾರತ ದೇಶವನ್ನು ಯಾವ ದಿಕ್ಕಿನ ಕಡೆ ಎಳೆದೊಯ್ಯುತ್ತಿವೆ? ನಾಗರಿಕ ಸಮಾಜದಲ್ಲಿ ಮನುಷ್ಯ ಮನುಷ್ಯನಾಗಿ ಉಳಿಯಲು ಕಷ್ಟಪಡಬೇಕಿದೆ. ಚುನಾವಣೆಗಳಲ್ಲಿ ಆ ಪಕ್ಷವನ್ನು ಬಿಟ್ಟು ಇದನ್ನು, ಇನ್ನೊಂದನ್ನು ನಿರಾಕರಿಸಿ ಮತ್ತೊಂದನ್ನು ಆರಿಸಿಕಳಿಸಿದ ಮಾತ್ರಕ್ಕೆ ಭಾರತ ಬದಲಾಗುವುದಿಲ್ಲ. ವಿಚಾರಗಳ ಮಟ್ಟದಲ್ಲಿ ಭಾರತದ ರಾಜಕಾರಣವನ್ನು ಬದಲಾಯಿಸಬೇಕಿದೆ.

– ಅಲ್ಲಮ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial