ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಸರಬರಾಜಿನಲ್ಲಿ ಅಡ್ಡಿ ಉಂಟಾಗಿರುವ ಮಧ್ಯೆ, ಭಾರತೀಯ ಸಂಸ್ಕರಣಾಗಾರರು ಇರಾನ್ ತೈಲವನ್ನು ಖರೀದಿಸಿದ್ದಾರೆ ಎಂದು ತೈಲ ಸಚಿವಾಲಯ ಶನಿವಾರ (ಏ.4) ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ರಾಷ್ಟ್ರವಾದ ಭಾರತವು, ಅಮೆರಿಕ ಹೇರಿದ ಒತ್ತಡದಿಂದಾಗಿ ಮೇ 2019ರಿಂದ ಇರಾನ್‌ನಿಂದ ಯಾವುದೇ ಕಚ್ಚಾ ತೈಲ ಖರೀದಿಸಿರಲಿಲ್ಲ. ಆದರೆ, ಇದೀಗ ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ತೈಲ ಪೂರೈಕೆಯಲ್ಲಿ ಉಂಟಾದ ಅಡಚಣೆಗಳು ಭಾರತವನ್ನು ತೀವ್ರವಾಗಿ ಬಾಧಿಸಿದೆ ಎಂದು ವರದಿ ಹೇಳಿದೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ತೈಲ ಪೂರೈಕೆಯಲ್ಲಿ ಸಮಸ್ಯೆಗಳಿದ್ದರೂ, ಭಾರತದ ತೈಲ ಕಂಪನಿಗಳು ತಮಗೆ ಬೇಕಾದ ಕಚ್ಚಾ ತೈಲವನ್ನು (ಇರಾನ್ ಸೇರಿದಂತೆ ಇತರ ದೇಶಗಳಿಂದ) ಯಶಸ್ವಿಯಾಗಿ ಪಡೆದುಕೊಂಡಿವೆ. ಮುಖ್ಯವಾಗಿ, ಇರಾನ್‌ನಿಂದ ತೈಲ ಖರೀದಿಸಲು ಹಣ ಪಾವತಿಸುವ ವಿಷಯದಲ್ಲಿ ಯಾವುದೇ ತೊಂದರೆಗಳಿಲ್ಲ ಎಂದು ಕೇಂದ್ರ ತೈಲ ಸಚಿವಾಲಯ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ವರದಿಯ ಪ್ರಕಾರ, ಪೂರೈಕೆಯ ಕೊರತೆಯನ್ನು ನೀಗಿಸಲು ಅಮೆರಿಕವು ಕಳೆದ ತಿಂಗಳು (ಮಾರ್ಚ್ 2026) ಇರಾನ್ ತೈಲ ಮತ್ತು ಸಂಸ್ಕರಿಸಿದ ಉತ್ಪನ್ನಗಳ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದೆ. ಮುಂದಿನ ತಿಂಗಳುಗಳಿಗೆ ಬೇಕಾದ ಕಚ್ಚಾ ತೈಲದ ಸಂಪೂರ್ಣ ಅಗತ್ಯತೆಯನ್ನು ಭಾರತ ಈಗಾಗಲೇ ಕಾಯ್ದಿರಿಸಿದೆ.
ಭಾರತವು 40ಕ್ಕೂ ಹೆಚ್ಚು ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ವಾಣಿಜ್ಯ ಲಾಭ ಮತ್ತು ಲಭ್ಯತೆಯ ಆಧಾರದ ಮೇಲೆ ವಿವಿಧ ದೇಶಗಳಿಂದ ತೈಲ ಪಡೆಯುವ ಪೂರ್ಣ ಸ್ವಾತಂತ್ರ್ಯ ಭಾರತೀಯ ಕಂಪನಿಗಳಿಗಿದೆ. ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ಹಣ ಪಾವತಿಸುವ ವಿಷಯದಲ್ಲಿ ಯಾವುದೇ ಅಡೆತಡೆಗಳಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಭಾರತವು ಇರಾನ್‌ನಿಂದ 44,000 ಮೆಟ್ರಿಕ್ ಟನ್ ಅಡುಗೆ ಅನಿಲವನ್ನು (ಎಲ್‌ಪಿಜಿ) ಖರೀದಿಸಿದೆ. ವಿಶೇಷವೆಂದರೆ, ಈ ಅನಿಲವನ್ನು ಹೊತ್ತು ತಂದ ಹಡಗಿನ ಮೇಲೆ ಈ ಹಿಂದೆ ನಿರ್ಬಂಧಗಳಿದ್ದವು. ಕಳೆದ ಬುಧವಾರ ಈ ಹಡಗು ಮಂಗಳೂರು ಬಂದರಿಗೆ ಬಂದು ತಲುಪಿದ್ದು, ಅಲ್ಲಿ ಅನಿಲವನ್ನು ಇಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತೈಲ ಸಚಿವಾಲಯ ತಿಳಿಸಿದೆ.


