Homeಕ್ರೀಡೆಒಲಂಪಿಕ್ಭಾರತದ ಕೀರ್ತಿಪತಾಕೆ ಹಾರಿಸಿದ ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳು; ಇನ್ನಷ್ಟು ನೆರವಿನ ಅಗತ್ಯವಿದೆ

ಭಾರತದ ಕೀರ್ತಿಪತಾಕೆ ಹಾರಿಸಿದ ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳು; ಇನ್ನಷ್ಟು ನೆರವಿನ ಅಗತ್ಯವಿದೆ

- Advertisement -
- Advertisement -

ಟೋಕಿಯೊ ಪ್ಯಾರಾಲಿಂಪಿಕ್ಸ್-2020ರಲ್ಲಿ ಭಾರತ ಅಭೂತಪೂರ್ವ ಸಾಧನೆ ಮಾಡಿದೆ. 1968ರಿಂದ ಇದುವೆರೆಗೂ ಒಟ್ಟು 12 ಪದಕಗಳನ್ನಷ್ಟೆ ಭಾರತ ಗೆದ್ದುಕೊಂಡಿತ್ತು, ಆದರೆ ಈ ಬಾರಿಯ ಕ್ರೀಡಾಕೂಟದಲ್ಲಿಯೇ ಭಾರತ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿದೆ. ಹಾಗಾಗಿ ಟೊಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ 162 ರಾಷ್ಟ್ರಗಳ ಪೈಕಿ ಭಾರತ 24ನೇ ರ್‍ಯಾಂಕ್‌ಅನ್ನು ಅಲಂಕರಿಸಿದೆ. ಈ ಬಾರಿ ಭಾರತ ತಂಡಕ್ಕೆ ಒಟ್ಟು ಐದು ಚಿನ್ನದ ಪದಕ, ಎಂಟು ಬೆಳ್ಳಿ ಪದಕ ಮತ್ತು ಆರು ಕಂಚಿನ ಪದಕ ಸಿಕ್ಕಿದೆ. ಈ ಮೂಲಕ ತಂಡವು ಇತಿಹಾಸ ನಿರ್ಮಿಸಿದೆ.

ನಿರಾಶ್ರಿತರ ಪ್ಯಾರಾಲಿಂಪಿಕ್ಸ್ ತಂಡ ಮತ್ತು ರಶ್ಯಾ ಪ್ಯಾರಾಲಿಂಪಿಕ್ಸ್ ಸಮಿತಿ ಸೇರಿಸಿದಂತೆ ಒಟ್ಟು 162 ದೇಶಗಳ 4,537 ಕ್ರೀಡಾಳುಗಳು ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಈವರೆಗೂ ಭಾಗವಹಿಸಿದ ಅತೀ ಹೆಚ್ಚಿನ ಕ್ರೀಡಾಳುಗಳ ಸಂಖ್ಯೆಯಾಗಿದೆ. ಈ ಕ್ರೀಡಾಕೂಟದಲ್ಲಿ ಒಟ್ಟು 22 ರೀತಿಯ ಕ್ರೀಡೆಗಳನ್ನು ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು.

ಪ್ಯಾರಾಲಿಂಪಿಕ್ಸ್ ಕೂಟದ ಬಗ್ಗೆ

’ಪ್ಯಾರಾಲಿಂಪಿಕ್’ ಎಂಬ ಪದವು ಗ್ರೀಕ್‌ನ ’ಪ್ಯಾರಾ’ ಮತ್ತು ’ಒಲಿಂಪಿಕ್’ ಪದದಿಂದ ಬಂದಿದೆ. ಪ್ಯಾರಾ ಎಂದರೆ ’ಸಮಾನಾಂತರ’ ಎಂಬ ಅರ್ಥ ಬರುತ್ತದೆ. ಒಟ್ಟಿನಲ್ಲಿ ಪ್ಯಾರಾಲಿಂಪಿಕ್ ಎಂದರೆ ಒಲಿಂಪಿಕ್‌ಗೆ ಸಮಾನವಾದದ್ದು ಎಂದರ್ಥ. ವಿಶ್ವದ ಮಾನವೀಯತೆಯ ಬೆಳವಣಿಗೆಯಲ್ಲಿ ಪ್ಯಾರಾಲಿಂಪಿಕ್ಸ್ ಮಹತ್ವದ ಪಾತ್ರ ವಹಿಸುತ್ತದೆ. ವಿಕಲಚೇತನ ವ್ಯಕ್ತಿಗಳು ಕೂಡಾ ಸಾಮರ್ಥ್ಯವಿರುವವರಾಗಿದ್ದು, ಅವರು ಕೂಡಾ ಸಾಧನೆ ಮಾಡಬಲ್ಲರು ಎಂಬುವುದನ್ನು ಈ ಕ್ರೀಡಾಕೂಟ ಎತ್ತಿ ತೋರಿಸುತ್ತದೆ. ದೇಹದಲ್ಲಿನ ಅಂಗಗಳು ಊನವಾಗಿದ್ದರೆ ಅದು ಮನುಷ್ಯ ಏರುವ ಎತ್ತರವನ್ನು ತಡೆಯುವುದಿಲ್ಲ ಎಂಬ ಸ್ಪೂರ್ತಿಯನ್ನು ಪ್ಯಾರಾಲಿಂಪಿಕ್ಸ್ ನೀಡುತ್ತದೆ.

ಡಾ. ಲುಡ್ವಿಕ್ ಗಟ್ಮನ್

ಒಲಿಂಪಿಕ್‌ಗೆ ಪುರಾತನ ಗ್ರೀಸ್ ನಾಗರಿಕತೆಯಷ್ಟು ಇತಿಹಾಸವಿದೆ. ಇದಕ್ಕೆ ಹೋಲಿಸಿದರೆ ಪ್ಯಾರಾಲಿಂಪಿಕ್ಸ್ ತೀರಾ ಇತ್ತೀಚೆಗೆ ಪ್ರಾರಂಭವಾಗಿದ್ದು. 1948ರಲ್ಲಿ ಜರ್ಮನಿಯ ನರವಿಜ್ಞಾನಿಯಾದ ಡಾ. ಲುಡ್ವಿಕ್ ಗಟ್ಮನ್ ತನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸೈನಿಕರ ಮೂಲಕ ಈ ಕ್ರೀಡೆಯನ್ನು ಪ್ರಾರಂಭಿಸಿದರು. ’ಸ್ಟೋಕ್ ಮ್ಯಾಂಡೆವಿಲ್ಲೆ ಗೇಮ್ಸ್’ ಎಂಬ ಹೆಸರಿನಲ್ಲಿ ಪ್ರಾರಂಭವಾದ ಪ್ಯಾರಾಲಿಂಪಿಕ್ಸ್‌ನ ಮೊದಲ ಕ್ರೀಡಾ ಕೂಟದಲ್ಲಿ 14 ಪುರುಷರು ಮತ್ತು ಇಬ್ಬರು ಮಹಿಳೆಯರು ಗಾಲಿ ಕುರ್ಚಿಯಲ್ಲಿ ಕೂತು ಭಾಗವಹಿಸಿದ್ದರು. ಕ್ರೀಡಾಕೂಟದಲ್ಲಿ ಕೇವಲ ಬಿಲ್ಲುಗಾರಿಕೆಯನ್ನು ಮಾತ್ರವೆ ಆಯೋಜಿಸಲಾಗಿತ್ತು. 1952ರಲ್ಲಿ ಡಚ್ ಸೈನಿಕರು ’ಸ್ಟೋಕ್ ಮ್ಯಾಂಡೆವಿಲ್ಲೆ ಗೇಮ್ಸ್’ಗೆ ಪಾದಾರ್ಪಣೆ ಮಾಡುವುದರೊಂದಿಗೆ ಅದು ಅಂತರಾಷ್ಟ್ರೀಯ ಗೇಮ್ಸ್ ಆಗಿ ಹೊರಹೊಮ್ಮಿತು. ಈ ಕ್ರೀಡಾ ಕೂಟವನ್ನು ಡಾ. ಲುಡ್ವಿಕ್ ಗಟ್ಮನ್ ಅವರು ಪ್ರತಿ ವರ್ಷ ಆಯೋಜಿಸುತ್ತಿದ್ದರು.

1960 ಇಟಲಿಯ ರೋಮ್‌ನಲ್ಲಿ ವಿಶ್ವದ 23 ದೇಶಗಳ 400 ಕ್ರೀಡಾಳುಗಳು ಭಾಗವಹಿಸುವುದರೊಂದಿಗೆ ಕ್ರೀಡಾಕೂಟವು ಮತ್ತಷ್ಟು ಪ್ರಸಿದ್ದಿ ಪಡೆಯಿತು. ಅಂದಿನಿಂದ ಕ್ರೀಡಾಕೂಟವನ್ನು ಒಲಿಂಪಿಕ್ಸ್ ರೀತಿಯಲ್ಲಿಯೇ ನಾಲ್ಕು ವರ್ಷಗಳಿಗೊಮ್ಮೆ ನಡೆಸುವ ತೀರ್ಮಾನ ಮಾಡಲಾಯಿತು. ಇದರ ನಂತರ 1976ರಲ್ಲಿ ಒಲಿಂಪಿಕ್ಸ್ ಮಾದರಿಯಲ್ಲಿ ಚಳಿಗಾಲದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಕೂಡ ಪ್ರಾರಂಭವಾಯಿತು. ಅದುವರೆಗೂ ಗಾಲಿ ಕುರ್ಚಿಯಲ್ಲಿರುವ ಕ್ರೀಡಾಳುಗಳಿಗೆ ಮಾತ್ರ ಅವಕಾಶ ಇದ್ದ ಕ್ರೀಡಾಕೂಟವು, ಬೇರೆ ರೀತಿಯ ವಿಕಲಚೇತನರನ್ನೂ ಅದು ಒಳಗೊಂಡಿತು.

1988ರ ನಂತರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಗಳು ಒಂದೇ ದೇಶದಲ್ಲಿ ಆಯೋಜನೆಗೊಳ್ಳಲು ಪ್ರಾರಂಭವಾಯಿತು. ಜೊತೆಗೆ ಕ್ರೀಡಾಕೂಟಕ್ಕೆ ’ಪ್ಯಾರಾಲಿಂಪಿಕ್ಸ್’ ಎಂಬ ಹೆಸರನ್ನು ಅಧಿಕೃತಗೊಳಿಸಲಾಯಿತು.

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ

ಭಾರತವು 1968ರಿಂದ ಈವರೆಗೆ ಒಟ್ಟು ಹನ್ನೆರೆಡು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದೆ. ಆದರೆ ಈ ವರ್ಷದ ಕ್ರೀಡಾಕೂಟದಲ್ಲಿ ಅಭೂತಪೂರ್ವ ಸಾಧನೆ ಮೆರೆದು ಒಟ್ಟು 19 ಪದಕವನ್ನು ಪಡೆದುಕೊಂಡಿದೆ. ಇಲ್ಲಿಯವರೆಗೆ ದೇಶದ ಪಾಲಿಗೆ ಕೇವಲ 12 ಪ್ಯಾರಾಲಿಂಪಿಕ್ಸ್ ಪದಕಗಳಿದ್ದವು. ಅಷ್ಟೆ ಅಲ್ಲದೆ ಈ ವರ್ಷದ ಕ್ರೀಡಾಕೂಟದಲ್ಲಿ ದೇಶದಿಂದ ಒಟ್ಟು 54 ಜನ ಕ್ರೀಡಾಪಟುಗಳು ಭಾಗವಹಿಸಿದ್ದರು. ಇದು ಇದುವೆರೆಗೂ ಪ್ಯಾರಾಲಿಂಪಿಕ್ಸ್‌ಗೆ ತೆರಳಿದ ಭಾರತದ ಅತೀ ದೊಡ್ಡ ತಂಡವಾಗಿದೆ.

ಚಳಿಗಾಲದ ಪ್ಯಾರಾಲಿಂಪಿಕ್ಸ್ 1976ರಿಂದ ಪ್ರಾರಂಭವಾದರೂ ಭಾರತ ಇದುವರೆಗೂ ಯಾವುದೇ ಚಳಿಗಾಲದ ಕ್ರೀಡಾಕೂಟದಲ್ಲಿ ಭಾಗವಹಿಸಿಲ್ಲ. ಮುರಳಿಕಾಂತ್ ಪೆಟ್ಕರ್ ಈಜು ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ 1972ರ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತನ್ನ ಮೊದಲ ಪದಕವನ್ನು ಗೆದ್ದುಕೊಂಡಿತು.

ಮುರಳಿಕಾಂತ್ ಪೆಟ್ಕರ್

1984ರಲ್ಲಿ ಜೋಗಿಂದರ್ ಸಿಂಗ್ ಬೇಡಿ ಪುರುಷರ ಶಾಟ್ ಪುಟ್‌ನಲ್ಲಿ ಬೆಳ್ಳಿ, ಡಿಸ್ಕಸ್ ಮತ್ತು ಜಾವೆಲಿನ್ ಥ್ರೋಗಳಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡು ಪ್ಯಾರಾಲಿಂಪಿಕ್ಸ್‌ನಲ್ಲಿ ಬಹುಪದಕ ಪಡೆದ ಭಾರತದ ಕ್ರೀಡಾಪಟುವಾಗಿ ದಾಖಲೆ ಬರೆದಿದ್ದಾರೆ.

ವಿಶೇಷವಾಗಿ ಈ ವರ್ಷದ ಪದಕ ವಿಜೇತರಲ್ಲಿ ಕನ್ನಡಿಗ, ಪ್ರಸ್ತುತ ಉತ್ತರ ಪ್ರದೇಶದ ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೆಟ್ ಆಗಿರುವ, ಸುಹಾಸ್ ಲಾಳನಕೆರೆ ಯತಿರಾಜ್ ಅವರು ಇರುವುದು ನಾಡಿಗೆ ಹೆಮ್ಮೆಯ ವಿಷಯವಾಗಿದೆ. ಹಾಸನ ಮೂಲದ ಸುಹಾಸ್ ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ, ದೇಶದ ಮೊದಲ ನಾಗರಿಕ ಸೇವೆಯಲ್ಲಿರುವ ಅಧಿಕಾರಿಯಾಗಿದ್ದು, ಅವರು ’ಪುರುಷರ ಸಿಂಗಲ್ಸ್ ಎಸ್‌ಎಲ್4’ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಬೆಳ್ಳಿ ಗೆದ್ದಿದ್ದಾರೆ.

ಈ ಬಗ್ಗೆ ಸುಹಾಸ್ ಅವರ ತಾಯಿ ಜಯಶ್ರೀ ಅವರು ನ್ಯಾಯಪಥದೊಂದಿಗೆ ಮಾತನಾಡಿದ್ದಾರೆ. ತಮ್ಮ ಮಗನ ಬಗ್ಗೆ ಹೆಮ್ಮೆ ಪಟ್ಟ ಅವರು, “ಸುಹಾಸ್ ಛಲವಾದಿಯಾಗಿದ್ದಾನೆ, ಸಾಧನೆ ಮಾಡಬೇಕು ಎಂದು ತುಂಬಾ ಕಷ್ಟಪಟ್ಟಿದ್ದಾನೆ. ಅದಕ್ಕೆ ಈಗ ಫಲ ಸಿಕ್ಕಿದೆ. ಈ ಸಾಧನೆ ಬಗ್ಗೆ ತುಂಬಾ ಖುಷಿಯಾಗುತ್ತಿದೆ, ಇಡೀ ದೇಶ ಮೆಚ್ಚುವಂತಹ ಕೆಲಸವನ್ನು ನನ್ನ ಮಗ ಮಾಡಿದ್ದಾನೆ” ಎಂದು ಹೇಳಿದ್ದಾರೆ.

ಪ್ಯಾರಾಲಿಂಪಿಕ್ಸ್ ಕ್ರೀಡಾಳುಗಳ ಕಷ್ಟಗಳೇನು?

ಮೊದಲೆ ಹೇಳಿದಂತೆ ಪ್ಯಾರಾಲಿಂಪಿಕ್ಸ್ ಅಂದರೆ ಒಲಿಂಪಿಕ್‌ಗೆ ಸಮಾನವಾದುದು ಎಂದರ್ಥ. ಆದರೆ ವಾಸ್ತವದಲ್ಲಿ ಭಾರಿ ಸುದ್ದಿಯಲ್ಲಿರುವ ಒಲಿಂಪಿಕ್ಸ್‌ನಷ್ಟು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಸುದ್ದಿ ಆಗಲೇ ಇಲ್ಲ. ಹಾಗೆ ನೋಡಿದರೆ ಪ್ಯಾರಾಲಿಂಪಿಕ್ಸ್‌ಗೆ ಒಲಿಂಪಿಕ್ಸ್‌ಗೆ ಹಾಕುವ ಶ್ರಮದ ಹಲವು ಪಟ್ಟು ಶ್ರಮವನ್ನು ಕ್ರೀಡಾಳುಗಳು ಹಾಕಬೇಕಾಗುತ್ತದೆ. ಮೊದಲೆ ಅಂಗ ಸಮಸ್ಯೆಯಿರುವ ಕ್ರೀಡಾಪಟುಗಳು ಅದನ್ನು ಮೆಟ್ಟಿ ನಿಲ್ಲಬೇಕು ಮತ್ತು ಪದಕ ಗೆಲ್ಲಲು ಹೆಚ್ಚಿನ ಶ್ರಮವೂ ಬೇಕಾಗುತ್ತದೆ.

ಹೋರಾಟಗಾರ ಜಿಎನ್ ನಾಗರಾಜ್ ಹೇಳುವಂತೆ, “ಸರ್ಕಾರವು ಒಲಿಂಪಿಕ್ಸ್‌ನ ಕ್ರೀಡಾಳುಗಳಿಗೆ ನೀಡುವ ಪ್ರೋತ್ಸಾಹವನ್ನು ಪ್ಯಾರಾಲಿಂಪಿಕ್ಸ್‌ನ ಕ್ರೀಡಾಳುಗಳಿಗೆ ನೀಡುವುದಿಲ್ಲ. ಸ್ಪರ್ಧಿಗಳು ಅಂತಾರಾಷ್ಟ್ರೀಯ ಹಂತಕ್ಕೆ ತಲುಪುವವರೆಗೂ ಅವರ ಎಲ್ಲಾ ಖರ್ಚುಗಳನ್ನು ಸ್ವತಃ ಅವರೇ ನೋಡಿಬೇಕಾಗುತ್ತದೆ. ಅಷ್ಟೇ ಅಲ್ಲದೆ ಒಲಿಂಪಿಕ್ಸ್‌ನ ಕ್ರೀಡಾಳುಗಳಿಗಿಂತಲೂ ಹೆಚ್ಚಿನ ಖರ್ಚು ಪ್ಯಾರಾಲಿಂಪಿಕ್ಸ್ ಕ್ರೀಡಾಳುಗಳಿಗೆ ಬೇಕಾಗುತ್ತದೆ. ಅವರ ಪ್ರತೀ ಕೆಲಸಗಳಿಗೂ ಒಬ್ಬ ಸಹಾಯಕ ಬೇಕಾಗುತ್ತದೆ. ಆದರೆ ಸರ್ಕಾರ ಒಲಿಂಪಿಕ್ಸ್‌ಗೆ ಮಾತ್ರ ಹೆಚ್ಚಿನ ದುಡ್ಡು
ಸುರಿಸುತ್ತದೆಯೆ ಹೊರತು ಪ್ಯಾರಾಲಿಂಪಿಕ್ಸ್‌ಗೆ ಅಲ್ಲ. ಕಾರ್ಪೊರೆಟ್‌ಗಳು ಕೂಡಾ ಒಲಿಂಪಿಕ್ಸ್ ಕ್ರೀಡಾಳುಗಳ ಹಿಂದೆ ಇರುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ತಮ್ಮ ಅಂಗವೈಕಲ್ಯಗಳನ್ನು ಮೆಟ್ಟಿ ವ್ಯಕ್ತಿಗಳು ಹೊರಬರುವುದೇ ಅಪರೂಪವಾಗಿರುವಾಗ, ಅದನ್ನು ಮೀರಿ ಅವರು ಪ್ಯಾರಾಲಿಂಪಿಕ್ಸ್‌ವರೆಗೂ ತಲುಪುವುದು, ಅಲ್ಲಿ ಪದಕ ಪಡೆಯುವುದಕ್ಕಿಂತ ಮೂರು ಪಟ್ಟು ದೊಡ್ಡ ಸಾಧನೆ” ಎಂದು ಅವರು ಹೇಳುತ್ತಾರೆ.

ಒಬ್ಬ ಸಾಮಾನ್ಯ ಕ್ರೀಡಾಳು ಫಿಟ್ ಇರಲು ಸಾಮಾನ್ಯವಾದ ವ್ಯಾಯಾಮದ ಸಲಕರಣೆಗಳು ಸಾಕಾಗುತ್ತದೆ. ಆದರೆ ಪ್ಯಾರಾಲಿಂಪಿಕ್ಸ್ ಕ್ರೀಡಾಳುಗಳಿಗೆ ವಿಶೇಷವಾದ ಸಲಕರಣೆಗಳು, ವಿಶೇಷ ಆರೈಕೆಗಳು ಬೇಕಾಗುತ್ತವೆ.

PC : Kannada News (ಸುಹಾಸ್ ಲಾಳನಕೆರೆ ಯತಿರಾಜ್)

“ಸಾಮಾನ್ಯವಾಗಿ, ಒಲಿಂಪಿಕ್ಸ್‌ನಲ್ಲಿ ಪದಕ ಪಡೆದವರಿಗೆ ಸರ್ಕಾರಿ ಉದ್ಯೋಗ ಸ್ಪೋರ್ಟ್ ಕೋಟಾದಡಿಯಲ್ಲಿ ಸುಲಭವಾಗಿ ಸಿಗುತ್ತದೆ. ಆದರೆ ಈ ಸೌಲಭ್ಯ ಪ್ಯಾರಾಲಿಂಪಿಕ್ಸ್‌ನ ವಿಜೇತರಿಗೆ ಸಿಗುವುದಿಲ್ಲ. ಅಲ್ಲದೆ ಸರ್ಕಾರಿ ಉದ್ಯೋಗಿಯೊಬ್ಬ ಒಲಿಂಪಿಕ್ಸ್‌ನಲ್ಲಿ ಪದಕೆ ಗೆದ್ದರೆ, ಐದು ಇಂಕ್ರಿಮಂಟ್ ಸಿಗುತ್ತದೆ. ಆದರೆ ಈ ಸೌಲಭ್ಯ ಪ್ಯಾರಾಲಿಂಪಿಕ್ಸ್‌ನವರಿಗೆ 2018ವರೆಗೂ ಸಿಗುತ್ತಿರಲಿಲ್ಲ” ಎನ್ನುತ್ತಾರೆ ಜಿಎನ್ ನಾಗರಾಜ್. “ಸಾಧನೆ ಮಾಡಿದ ನಂತರ ಫೋನ್ ಮಾಡಿ ಅವರಿಗೆ ಅಭಿನಂದನೆ ಹೇಳುವ ಪ್ರದರ್ಶನಕ್ಕಿಂತ, ಈ ಕ್ರೀಡಾಪಟುಗಳು ಸಾಧನೆಯ ಹಾದಿಯಲ್ಲಿ ನಡೆಯುತ್ತಾ ಇರಬೇಕಾದರೆ ಅವರಿಗೆ ಬಲನೀಡಬೇಕು” ಎನ್ನತ್ತಾರವರು.

“ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಸಾಮಾನ್ಯ ಆಟಗಾರರಿಗೆ ನೀಡುವ ಹಾಗೆಯೆ ಪ್ಯಾರಾಲಿಂಪಿಕ್ಸ್ ಆಟಗಾರರಿಗೆ ಒಂದಿಷ್ಟು ಪಾಲನ್ನು ತೆಗೆದಿಡುತ್ತದೆ. ಆದರೆ ಇದು ಬದಲಾಗಬೇಕು, ಪ್ಯಾರಾಲಿಂಪಿಕ್ಸ್ ಆಟಗಾರರಿಗೆ ಬೇರೆಯದೇ ಆದ ಅನುದಾನವನ್ನು ಬಿಡುಗಡೆ ಮಾಡಿ, ಅವರ ಸಾಧನೆಗೆ ನೆರವಾಗಬೇಕು” ಎಂದು ಅವರು ಹೇಳುತ್ತಾರೆ.

“ಅಷ್ಟೇ ಅಲ್ಲದೆ ಒಲಿಂಪಿಕ್ಸ್ ಆಟಗಾರ ಟ್ರೇನಿಂಗ್‌ಗೆ ವಿಶ್ವ ಮಟ್ಟದ ತರಬೇತಿಯನ್ನು, ಕೋಚ್‌ಗಳನ್ನೂ ನೀಡಲಾಗುತ್ತದೆ. ಆದರೆ ಪ್ಯಾರಾಲಿಂಪಿಕ್ಸ್‌ಗೆ ಈ ರೀತಿಯ ಯಾವುದೆ ಪ್ರೋತ್ಸಾಹ ಇಲ್ಲ” ಎನ್ನುತ್ತಾರೆ ನಾಗರಾಜ್ ಅವರು.

ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟು, ಅಂತರಾಷ್ಟ್ರೀಯ ಮಟ್ಟಕ್ಕೆ ಕಾಲಿಡಲಿದ್ದಾರೆ ಎಂದಾಗಷ್ಟೇ ಅವರಿಗೆ ಸರ್ಕಾರ ಸಹಾಯ ಮಾಡುತ್ತದೆ. ಅಲ್ಲಿವರೆಗೂ ಪ್ಯಾರಾಲಿಂಪಿಕ್ಸ್ ಸಾಧಕರು ಹೋರಾಡಬೇಕಾಗುತ್ತದೆ. ಆದರೆ ಈ ಎಲ್ಲಾ ಅಡೆತಡೆಗಳನ್ನು ಮೀರಿ ಈ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಬೃಹತ್ ಸಾಧನೆ ಮಾಡಿ ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ.


ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್‌: ಶೂಟರ್‌ ಮನೀಶ್‌ಗೆ ಚಿನ್ನ, ಸಿಂಗ್‌ ರಾಜ್‌ಗೆ ಬೆಳ್ಳಿ ಪದಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...